ಮಿಹಿರ್ ಸೆನ್
ಮಿಹಿರ್ ಸೆನ್ | |
---|---|
Born | ನವೆಂಬರ್ ೧೬, ೧೯೩೦ ಪುರುಲಿಯ, ಮನಭುಮ್, ಬ್ರಿಟಿಷ್ ಸಾಮ್ರಾಜ್ಯದ ಬಿಹಾರ್ ಮತ್ತು ಒಡಿಶಾ ಪ್ರಾಂತ್ಯ |
Died | ಜೂನ್ ೧೧, ೧೯೯೭ ಕಲ್ಕತ್ತಾ |
Occupation(s) | ಈಜುಪಟು, ಬ್ಯಾರಿಸ್ಟರ್ |
Known for | ಸಪ್ತಸಾಗರಗಳನ್ನು ಈಜಿದವರು |
Spouse | ಬೆಲ್ಲಾ ವೀನ್ ಗಾರ್ಟೆನ್ ಸೆನ್ |
ಮಿಹಿರ್ ಸೆನ್ (ನವೆಂಬರ್ ೧೬, ೧೯೩೦ - ಜೂನ್ ೧೧, ೧೯೯೭) ವಿಶ್ವಪ್ರಸಿದ್ಧ ಈಜುಪಟು. ಮಿಹಿರ್ ಸೆನ್ ಇಂಗ್ಲೆಂಡಿಗೆ ಬ್ಯಾರಿಸ್ಟರ್ ಓದಲು ಹೋಗಿದ್ದರು. ಓದಿನ ಜೊತೆಗೆ ಅವರಲ್ಲಿ ಈಜುವುದರಲ್ಲಿ ಆಸಕ್ತಿ ಹುಟ್ಟಿಕೊಂಡಿತ್ತು. ಆ ಆಸಕ್ತಿ ಬೆಳೆದ ಪರಿಯಾದರೂ ಎಂಥದ್ದು!. ಸಪ್ತಸಾಗರಗಳನ್ನೂ ದಾಟುವಷ್ಟು..
ಜೀವನ
[ಬದಲಾಯಿಸಿ]ವಿಶ್ವದ ಬಹುತೇಕ ಎಲ್ಲಾ ಸಾಗರಗಳನ್ನೂ ಈಜಿದ ಈ ಮಹಾನ್ ಮಿಹಿರ್ ಸೇನರು ಹುಟ್ಟಿದ್ದು ನವೆಂಬರ್ ೧೬, ೧೯೩೦ರ ವರ್ಷದಲ್ಲಿ. ಮಿಹಿರ್ ಸೆನ್ ಅವರ ತಂದೆ ಕಟಕ್ ನಗರದಲ್ಲಿ ವೈದ್ಯರಾಗಿದ್ದರು.
ಇಂಗ್ಲಿಷ್ ಕಡಲ್ಗಾಲುವೆಯಲ್ಲಿ
[ಬದಲಾಯಿಸಿ]ಇಂಗ್ಲೆಂಡಿಗೆ ಬಾರ್ ಪರೀಕ್ಷೆಗಳಲ್ಲಿ ಸಿದ್ಧತೆ ನಡೆಸುತ್ತಿದ್ದ ಮಿಹಿರ್ ಸೆನ್ನರಿಗೆ ಇಂಗ್ಲಿಷ್ ಕಡಲ್ಗಾಲುವೆಯಲ್ಲಿ ಈಜಬೇಕೆಂಬ ವಾಂಛೆ ಹುಟ್ಟಿತು. ಹಲವಾರು ಬಾರಿ ಪ್ರಯತ್ನಿಸಿ ಸೋತರೂ ಕಡೆಗೆ ಸೆಪ್ಟೆಂಬರ್ ೨೭, ೧೯೫೮ರಂದು ಇಂಗ್ಲಿಷ್ ಕಡಲ್ಗಾಲುವೆಯನ್ನು ಯಶಸ್ವಿಯಾಗಿ ಈಜಿ ಆ ಸಾಧನೆಗೈದ ಪ್ರಪ್ರಥಮ ಭಾರತೀಯರಾದರು.
ಹಿಂದೂ ಮಹಾಸಾಗರದಲ್ಲಿ
[ಬದಲಾಯಿಸಿ]ಮಿಹಿರ್ ಸೆನ್ನರ ಎರಡನೆಯ ಈಜು ಸಾಹಸ, ಶ್ರೀಲಂಕೆಯ ತಲೈಮನ್ನಾರ್ ಪ್ರದೇಶದಿಂದ ಭಾರತದ ದಕ್ಷಿಣಭಾಗದ ಧನುಷ್ಕೋಟಿಯವರೆಗೆ. ಇದಕ್ಕೆ ಅವರು ತೆಗೆದುಕೊಂಡ ಅವಧಿ ೨೫ ಗಂಟೆ ೪೪ ನಿಮಿಷಗಳು. ಈ ಹಾದಿ ತಲುಪಲು ಅವರು ‘ಪಾಲ್ಕ್ ಸ್ಟ್ರೈಟ್’ ಎಂಬ ವಿಷಪೂರಿತ ಹಾವು ಮತ್ತು ಭಯಾನಕ ತಿಮಿಂಗಿಲಗಳ ಪ್ರದೇಶಗಳನ್ನು ಕೂಡಾ ಹಾಯ್ದು ಬರಬೇಕಿತ್ತೆಂಬುದು ಗಮನಾರ್ಹವೆನಿಸಿತ್ತು. ಅವರ ಈ ಸಾಹಸಕ್ಕೆ ಭಾರತೀಯ ನೌಕಾದಳ ಸೇನೆಯು ಸಹಕಾರ ನೀಡಿತ್ತು.
ಸ್ಟ್ರೈಟ್ ಆಫ್ ಗಿಬ್ರಾಲ್ಟರ್, ಡಾರ್ಡನೆಲ್ಲೆಸ್ ಮತ್ತು ’ಬೋಸ್ಫೋರಸ್
[ಬದಲಾಯಿಸಿ]೧೯೬೬ರ ವರ್ಷದ ಆಗಸ್ಟ್ ಮಾಸದಲ್ಲಿ ಮಿಹಿರ್ ಸೆನ್ ಅವರು ‘ಸ್ಟ್ರೈಟ್ ಆಫ್ ಗಿಬ್ರಾಲ್ಟರ್’ ಅನ್ನು ೮ ಗಂಟೆ ೧ ನಿಮಿಷದ ಅವಧಿಯಲ್ಲಿ ಕ್ರಮಿಸಿ ಆ ಸಾಧನೆಯನ್ನು ಗೈದ ಪ್ರಪ್ರಥಮ ಏಷಿಯಾ ನಿವಾಸಿಯೆನಿಸಿದರು. ಅದೇ ವರ್ಷದ ಸೆಪ್ಟಂಬರ್ ಮಾಸದ ೧೨ನೆಯ ತಾರೀಖಿನಂದು ಅವರು ‘ಡಾರ್ಡನೆಲ್ಲೆಸ್’ ಮತ್ತು ಅದಾದ ಒಂಭತ್ತು ದಿನಗಳ ಅಂತರದಲ್ಲೇ ‘ಬೋಸ್ಫೋರಸ್’ಗಳನ್ನು ಈಜುತ್ತಾ ಕ್ರಮಿಸಿದರು.
ಪನಾಮ ಕಡಲ್ಗಾಲುವೆ
[ಬದಲಾಯಿಸಿ]ಮಿಹಿರ್ ಸೆನ್ನರು ಪನಾಮ ಕಡಲ್ಗಾಲುವೆಯ ಈಜುವಿಕೆಯನ್ನು ಎರಡು ಹಂತಗಳಲ್ಲಿ ಕೈಗೊಂಡು ಅಕ್ಟೋಬರ್ 26, 1966ರಂದು ತಮ್ಮ ಯಾತ್ರೆಯನ್ನು ಪ್ರಾರಂಭಿಸಿ, ಅದೇ ತಿಂಗಳ ಅಕ್ಟೋಬರ್ 31ರಂದು ಒಟ್ಟು 34ಗಂಟೆ 15 ನಿಮಿಷಗಳ ಆ ಯಾತ್ರೆಯನ್ನು ರ್ಣಗೊಳಿಸಿದರು.
ಹೀಗೆ ಮಿಹಿರ್ ಸೆನ್ನರು ಐದು ಖಂಡಗಳ ಸಪ್ತ ಸಮುದ್ರಗಳ ಮೇಲೆ ಈಜಿದವರೆನಿಸಿದರು. ಇಡೀ ವಿಶ್ವದಲ್ಲೇ ಇಂಥಹ ಅಮೋಘ ಸಾಧನೆ ಮಾಡಿದ ಪ್ರಥಮರವರು. ಈ ಏಳು ಯಾತ್ರೆಗಳಲ್ಲಿ ಆರು ಯಾತ್ರೆಗಳನ್ನು ೧೯೬೬ರ ಒಂದೇ ವರ್ಷದಲ್ಲಿ ಪೂರೈಸಿದ್ದು ಅವರ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಅವರು ಸಮುದ್ರ ಸಾಗರಗಳ ಮೇಲೆ ಕ್ರಮಿಸಿದ ಒಟ್ಟಾರೆ ದೂರ 600 ಕಿಲೋ ಮೀಟರುಗಳಿಗೂ ಅಧಿಕವಾದದ್ದು.
ಪ್ರಶಸ್ತಿ ಗೌರವಗಳು
[ಬದಲಾಯಿಸಿ]ಭಾರತ ದೇಶವು ಮಿಹಿರ್ ಸೆನ್ನರನ್ನು ೧೯೫೯ರ ವರ್ಷದಲ್ಲಿ ‘ಪದ್ಮಶ್ರೀ’ ಮತ್ತು ೧೯೬೭ರ ವರ್ಷದಲ್ಲಿ ‘ಪದ್ಮಭೂಷಣ’ ಪ್ರಶಸ್ತಿಗಳಿಂದ ಗೌರವಿಸಿತು.
ಬ್ಯಾರಿಸ್ಟರ್
[ಬದಲಾಯಿಸಿ]ಮಿಹಿರ್ ಸೆನ್ನರು ವೃತ್ತಿಯಲ್ಲಿ ಬ್ಯಾರಿಸ್ಟರ್ ಆಗಿ, ಇಂಗ್ಲೆಂಡಿನ ಕೋರ್ಟ್ ವ್ಯವಹಾರಗಳಲ್ಲಿ ಅಲ್ಲಿಯ ಬಾರ್ ಅನ್ನು ಪ್ರತಿನಿಧಿಸಿದ್ದರು. ಅವರು ಭಾರತದ ‘ಎಕ್ಸ್ ಪ್ಲೋರರ್ ಕ್ಲಬ್’ ಸಂಸ್ಥೆಯ ಅಧ್ಯಕ್ಷರಾಗಿದ್ದರು.
ಕಡೆಯ ದಿನಗಳು
[ಬದಲಾಯಿಸಿ]೧೯೯೭ರ ವರ್ಷದ ಜೂನ್ ೧೧ ರಂದು ಈ ಲೋಕವನ್ನಗಲಿದ ಮಿಹಿರ್ ಸೆನ್ನರು ತಮ್ಮ ಅಂತಿಮ ಅವಧಿಯಲ್ಲಿ ಸ್ಮೃತಿ ಸಾಮರ್ಥ್ಯವನ್ನು ಕಳೆದುಕೊಂಡು ನೋವಿನಿಂದ ಕೂಡಿದ ಬಾಳನ್ನು ಬಾಳಿದರು.