ವಿಷಯಕ್ಕೆ ಹೋಗು

ಮುಖವೀಣೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹೆಸರು : ಮುಖವೀಣೆ
ಪ್ರಕಾರ : ಜನಪದ ವಾದ್ಯ
ಇತರೆ ಹೆಸರುಗಳು : ಮುಖವೇಣು, ಮುಖವೀಣೆ, ಮುಕಾವಿನೈ(), ಸುಂದರಿ, ಸುಂದ್ರಿ, ಸುಂದ್ರಿ ಕೊಳವಿ,ಸಣ್ಣ ಕೊಳವಿ, ಚಿಕ್ಕ ಶಹನಾಯಿ, ಸಣ್ಣ ಸೋನಾಯಿ
ಸಂಬಂಧಿಸಿದ ವಾದ್ಯಗಳು :
* ಶಹನಾಯಿ
* ನಾದಸ್ವರ
* ಕೊಳಲು
* ಮೌರಿ
* ಪುಂಗಿ
ವರ್ಗೀಕರಣ :
* ಜೋಡು ನಾಲಿಗೆ (Double reed)
* ಗಾಳಿ ವಾದ್ಯ


ಮುಖವೀಣೆ ಒಂದು ಗಾಳಿವಾದ್ಯ. ಮೂಲದಲ್ಲಿ ಇದೊಂದು ಜನಪದ ವಾದ್ಯ. ಜನಪದ ಸಂಗಿತದಲ್ಲಿ ಹತ್ತಾರು ಬಗೆಯ ಸಂಗೀತವಾದ್ಯಗಳ ಬಳಕೆಯಿದ್ದು ಆಯಾ ಆಟ, ಕುಣಿತಗಳಲ್ಲಿ ಇಂಥವೇ ನಿರ್ದಿಷ್ಟ ವಾದ್ಯಗಳಿರಬೇಕೆಂಬ ವಾಡಿಕೆಯೂ ಕಂಡುಬರುತ್ತದೆ. ಬಡಿಯುವ ವಾದ್ಯಗಳಲ್ಲಿ ಡೊಳ್ಳು, ನಗಾರಿ, ಹಲಗೆ, ಕರಡಿ, ಚಂಡೆ, ಮದ್ದಳೆ, ಕೋಲು ಇತ್ಯಾದಿ ಇದ್ದರೆ ಊದುವ ವಾದ್ಯಗಳಾಗಿ ಕೊಂಬು, ಕಹಳೆ, ತುತ್ತೂರಿ, ಕೊಳಲು, ಪಿಳ್ಳಂಗೋವಿ,[] ಓಲಗ, ಮುಖವೀಣೆ, ಶಂಖ ಮುಂತಾದವುಗಳನ್ನು ಕಾಣಬಹುದು.

ಜನಪದ ವಾದ್ಯಗಳ ವೈವಿಧ್ಯವೇ ಅಚ್ಚರಿ ಮೂಡಿಸುವಂಥದ್ದು. ಪ್ರಕೃತಿಯಲ್ಲಿ ಲಭ್ಯವಾಗುವ ವಿಶಿಷ್ಟ ಸಸ್ಯ ಸಂಪನ್ಮೂಲ(ಎಲೆ, ತೆಂಗಿನ ಗರಿ, ಬೇರು, ಕಾಂಡ, ಬಿದಿರು, ಮರ)ಗಳು ಹಾಗೂ ಬಾಚಣಿಗೆಯಂತಹ ಸಾಮಾನ್ಯ ವಸ್ತುಗಳಿಂದ ತೊಡಗಿ, ಚರ್ಮ, ಲೋಹ, ಮಣ್ಣು ಮುಂತಾದ ವಸ್ತುಗಳಿಂದ ವಾದ್ಯಗಳನ್ನು ತಯಾರಿಸಿಕೊಳ್ಳುವರು. ಇವುಗಳನ್ನು ಅವರೇ ಮನೆಯಲ್ಲಿ ಕುಳಿತುಕೊಂಡು ಅಥವಾ ಹಿರಿಯರ ನೇತೃತ್ವದಲ್ಲಿ ಸುಸಂಬದ್ಧವಾಗಿ ತಯಾರಿಸುವ ಮತ್ತು ನುಡಿಸುವ ಕಲೆಗಾರಿಕೆಯನ್ನು ಮನನ ಮಾಡಿಕೊಳ್ಳುವರು. ಜನಪದ ಕಲಾ ಪ್ರಕಾರಗಳಲ್ಲಿ ಯಥೇಚ್ಛವಾಗಿ ಬಳಕೆಯಾಗುತ್ತಿದ್ದ ಈ ವಾದ್ಯವು ಕರ್ನಾಟಕ ಸಂಗೀತದ ಪಕ್ಕವಾದ್ಯಗಳಲ್ಲಿ ಒಂದಾಗಿ ಬಳಕೆಯಾಗುತ್ತದೆ.

ಮುಖವೀಣೆಯೆಂದರೆ

[ಬದಲಾಯಿಸಿ]

ತಮಿಳುನಾಡಿನಲ್ಲಿ `ಮುಕಾವಿನೈ', ಮಹಾರಾಷ್ಟ್ರದಲ್ಲಿ `ಸುಂದರಿ'ಯಾಗಿ, ಕರ್ನಾಟಕದಲ್ಲಿ `ಮುಖವೀಣೆ' ಹಾಗೂ ಗಡಿಭಾಗಗಳಲ್ಲಿ `ಸುಂದರಿ' ಅಥವಾ `ಸುಂದ್ರಿ' ಎಂತಲೂ ಕರೆಸಿಕೊಳ್ಳುವ ಒಂದು ಚಿಕ್ಕ ಊದುವ(ಸುಷಿರ) ವಾದ್ಯವಾಗಿದೆ. ಕನ್ನಡ ರತ್ನಕೋಶದಲ್ಲಿ `ಒಂದು ಬಗೆಯ ಊದುವ ವಾದ್ಯ',[] ಭಾರತವಾಣಿ ಶಬ್ದಕೋಶದಲ್ಲಿ 'ಮುಖವೀಣೆ ಒಂದು ಊದುವ ವಾದ್ಯ'[] ಎಂದು ಅರ್ಥೈಸಲಾಗಿದೆ. ಮುಖವೀಣೆ ಎಂಬುದು ಮೂಲದಲ್ಲಿ `ಮುಖವೇಣು' ಎಂದಿದ್ದು `ವೇಣು' (ಬಿದಿರು, ಕೊಳಲು) ಎಂಬುದು ಅಪಭ್ರಂಶವಾಗಿ `ವೀಣೆ' (ಮುಖವೇಣು>ಮುಖವೀಣೆ) ಆಗಿರುವ ಸಾಧ್ಯತೆ ಇದೆ. ಮುಖವೀಣೆಯು ಮಧುರವಾದ ನಾದವನ್ನು ಹೊಮ್ಮಿಸುವ ಓಲಗದ ಆಕಾರದ ಕೊಳವೆಯಂತಹ ವಾದ್ಯ ಎಂದು ಮಂಡ್ಯ ಜಿಲ್ಲೆಯ ಗ್ಯಾಸೆಟಿಯರ್'ನಲ್ಲಿ ಹೇಳಲಾಗಿದೆ.[]

'ಜೀಯಾಳದ ಕಡ್ಡಿಯನ್ನು ಅಳವಡಿಸಿ ಊದುವ ವಾದ್ಯ' ಎಂದರೆ ಅದು 'ಸುಂದರಿ' ವಾದ್ಯವೇ. ಸುಂದರಿ ಹಾಗೂ ಶಹನಾಯಿಯು ನೋಡಲು ಒಂದೇ ತೆರನಾಗಿದ್ದು ಗಾತ್ರದಲ್ಲಿ ಸುಂದರಿ ತೀರ ಚಿಕ್ಕದಾಗಿದ್ದು, ಇದೇ ಪರಿಷ್ಕರಣೆಗೊಂಡು ಶಹನಾಯಿ ಆಗಿರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

ಶಹನಾಯಿ ವಾದ್ಯದಂತೆಯೇ ಇದರಲ್ಲಿಯೂ ೭ ರಿಂದ ೯ ರವರೆಗೆ ರಂಧ್ರಗಳಿರುತ್ತವೆ. ಇದನ್ನು ಸೀಸಮ್ ಎಂಬ ಮರದಿಂದ ತಯಾರಿಸುತ್ತಾರೆ. ಸುಂದರಿ ವಾದ್ಯವನ್ನು ಶಹನಾಯಿಯಂತೆಯೇ ನುಡಿಸುತ್ತಾರೆ. ಇದನ್ನು ಮಧ್ಯಮ ಮತ್ತು ವೇಗದ ಗತಿಯಲ್ಲಿ ನುಡಿಸಬಹುದೇ ಹೊರತು ನಿಧಾನಗತಿಯ ತಾಳದಲ್ಲಿ ನುಡಿಸಲಿಕ್ಕೆ ಸಾಧ್ಯವಿಲ್ಲ.

ಮುಖವೀಣೆಯ ನಾದವು `ತಂತಿವಾದ್ಯ'ದಂತೆ ಕೇಳಿಸುವುದರಿಂದ ಇದಕ್ಕೆ `ಮುಖವೀಣೆ' ಎಂದು ಕರೆಯುವ ರೂಢಿ ಬಂದಿರಬೇಕು. ಯಾಕೆಂದರೆ ಇದು ಶಹನಾಯಿ ನಾದಕ್ಕಿಂತ ಮಧ್ಯಮ ಗತಿಯ ಧ್ವನಿ ಹೊರಡಿಸುವುದು. ಇದನ್ನೇ `ಸುಂದ್ರಿ' ವಾದ್ಯ ಎನ್ನುತ್ತಾರೆ. ಶಹನಾಯಿಗಿಂತ ಚಿಕ್ಕದೆನಿಸಿದರೂ ಇವುಗಳ ನುಡಿಸಾಣಿಕೆಯಲ್ಲಿ ಸಾಮ್ಯತೆ ಇದೆ ಎಂದು ಖ್ಯಾತ ಶಹನಾಯಿ ವಾದಕರಾದ ಪಂಡಿತ ಬಸವರಾಜ ಭಜಂತ್ರಿ (ಹೆಡಿಗ್ಗೊಂಡ)[] [] ಅವರು ವಿವರಿಸುತ್ತಾರೆ.

ಮುಖವೀಣೆ ತಂತಿವಾದ್ಯದ ವೀಣೆಯಲ್ಲ ಅಥವಾ ಶಹನಾಯಿಯು ಅಲ್ಲ. ಕೊಳಲು ಕೂಡ ಅಲ್ಲ. ಅಂದರೆ ಇಲ್ಲಿ ಶಹನಾಯಿಯನ್ನು ಹೋಲುವ ಚಿಕ್ಕ ವಾದ್ಯದ ಜೊತೆಗೆ ಕೊಳಲು ಮತ್ತು ಶ್ರುತಿಗಾಗಿ ಪುಂಗಿ (ಹಾವಾಡಿಗರು ಬಳಸುವ ಸೋರೆಬುರುಡಿಯಿಂದ ತಯಾರಿಸಿದ ವಾದ್ಯ) ಈ ಮೂರೂ ವಾದ್ಯಗಳನ್ನು ಕೇವಲ ಒಬ್ಬನೇ ವ್ಯಕ್ತಿ ಏಕ ಕಾಲಕ್ಕೆ ಬಾಯಿಯ ಮೂಲಕ ನುಡಿಸುತ್ತಾನೆ. ಇದರಿಂದ ಹೊರಹೊಮ್ಮುವ ನಾದವು ವೀಣೆಯ ನಾದದಂತೆ ಕೇಳಿಬರುತ್ತದೆ ಹಾಗೂ ಈ ಮೂರೂ ವಾದ್ಯಗಳು ಬಾಯಿಯ ಮುಖಾಂತರವೇ ನುಡಿಸಲ್ಪಡುವುದರಿಂದ ಇದಕ್ಕೆ 'ಮುಖವೀಣೆ' ಎಂದು ಕರೆದಿರಬಹುದು ಎಂಬುದು ಪ್ರಚಲಿತ ಅಭಿಪ್ರಾಯ.

ಮುಖವೀಣೆಯ ಬಳಕೆ

[ಬದಲಾಯಿಸಿ]

"..ನಯವಾಗಿ ನಾಟ್ಯವಂ ವಿರಚಿಸಬೇಕೆಂದು ತೊರೆಯಿಂದೊಡಗೂಡಿ ವೀಣಾವೇಣು ಮುಖವೀಣೆ ಮೊದಲಾದ ವಾದ್ಯಗಳಂ ಸ್ವರಂಗೆಯ್ದು ನಾಟ್ಯವಂ ಮಾಡಲುಜ್ಜುಗಿಸುತ್ತಿರಲು"; ಎಂಬಲ್ಲಿ ಆ ಕಾಲದ ನಾಟ್ಯಗಳಲ್ಲಿಯೂ ಮುಖವೀಣೆ ವಾದ್ಯವನ್ನು ಬಳಸಲಾಗುತ್ತಿತ್ತು ಎಂಬ ಉಲ್ಲೇಖ ಮುಮ್ಮಡಿ ಕೃಷ್ಣರಾಜ ಒಡೆಯರವರಿಂದ ವಿರಚಿತ 'ವತ್ಸರಾಜನ ಕಥೆ'[]ಯಲ್ಲಿ ಬರುತ್ತದೆ.

ಗುಜರಾತ್'ನ ಕಛ್ ಸಮುದಾಯದ ಜನರು ಸುಂದರಿ ವಾದ್ಯದ ಗುಂಗು ಹಿಡಿಸಿಕೊಂಡಿದ್ದು ಇದನ್ನು ಜನಪದ ಸಂಗೀತಕ್ಕೆ ಬಳಸುವರು.

ತಮಿಳುನಾಡಿನ ಪ್ರಮುಖ ಊದುವ ಮಂಗಳವಾದ್ಯ `ನಾಗಸ್ವರಂ'. ಇದರಲ್ಲಿ `ಪಾರಿನಾಯನಂ' ಮತ್ತು `ತಿಮಿರಿನಾಯನಂ' ಎಂಬ ಎರಡು ವಿಧಗಳಿದ್ದು `ತಿಮಿರಿನಾಯನಂ'ನ್ನು ಮುಖವೀಣೆ ಎಂದು ಕರೆಯುವರು. `ಸ್ಕಂದಮ್' ಮತ್ತು 9ನೇ ಶತಮಾನದ ಭಾವಗೀತೆ `ನಂದಿಕೇಶಂ' ಎಂಬುದರಲ್ಲಿ ನಾದಸ್ವರ(ನಾಗಸ್ವರಂ) ವಾದ್ಯವನ್ನು ಕುರಿತು ಉಲ್ಲೇಖಿಸಲಾಗಿದೆ ಎಂದು ಡಾ.ಬಿ.ಎಂ.ಎಸ್[] ರವರು ಚರ್ಚಿಸಿದ್ದಾರೆ.

ಸೂತ್ರದಗೊಂಬೆಯಾಟದಲ್ಲಿಯೂ ಸಹ ಮೃದಂಗ, ತಾಳ, ಹಾರ್ಮೋನಿಯಂ ಜೊತೆಗೆ ಮುಖವೀಣೆಯನ್ನು ಹಿಮ್ಮೇಳವಾಗಿ ಬಳಸುವರು.

ಪಾರಿಜಾತದ ಮೇಳದ ಸಂಗೀತದಲ್ಲಿ ಏಳು ರಂಧ್ರಗಳಿರುವ `ಸುಂದ್ರಿ ಕೊಳವಿ'ಯನ್ನು ಬಳಸುವರು. ಇದಕ್ಕೆ `ಸುಂದ್ರಿ ಸನಾಯ್' ಎಂತಲೂ ಕರೆಯುವರು.

ಮೂಡಲಪಾಯ ಯಕ್ಷಗಾನದಲ್ಲಿ ಮೃದಂಗ, ತಾಳ, ಮುಖವೀಣೆ ಮತ್ತು ಹಾರ್ಮೋನಿಯಂ ವಾದ್ಯಗಳನ್ನು ಬಳಸುತ್ತಾರೆ. ಮುಖವೀಣೆಯು ಪ್ರದರ್ಶನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಪಡುವಲಪಾಯ ಯಕ್ಷಗಾನದಲ್ಲಿ ಚಂಡೆ ವಾದ್ಯವು ಉಂಟುಮಾಡುವ ಪರಿಣಾಮವನ್ನು ಗೇಣುದ್ದದ ಗಾಳಿ ವಾದ್ಯವಾದ ಮುಖವೀಣೆಯು ತಂದುಕೊಡುತ್ತದೆ. ಭಾಗವತನ ಆಲಾಪನೆಯೊಂದಿಗೆ ಕೂಡಿಕೊಳ್ಳುವ ಮತ್ತು ಹಾಡಿನ ಅಂತ್ಯಕ್ಕೆ ತಂದುಕೊಡುವ ಸೊಗಸು ಅದ್ಭುತವಾದುದು.[] ಅಲ್ಲದೆ ಯಕ್ಷಗಾನ ಸಂಗೀತದಲ್ಲಿ ಬರುವ ೩೨ ರಾಗಗಳು ಮುಖ್ಯವಾಗಿ ಮುಖವೀಣೆಯನ್ನೇ ಅವಲಂಭಿಸಿವೆ. ಈ ಉಸಿರುವಾದ್ಯವು ಹಾಡುಗಾರಿಕೆಗೆ ಅಧಿಕವಾದ ಮೆರುಗು ತಂದುಕೊಡುವುದಲ್ಲದೆ ರಂಗದಲ್ಲಿ ಉತ್ತಮ ಸಂಗೀತದ ವಾತಾವರಣವನ್ನು ನಿರ್ಮಿಸುತ್ತದೆ. ಬಸವರಾಜ ಮಲಶೆಟ್ಟಿಯವರು ಹೇಳುವಂತೆ ....ಜೊತವಾದ್ಯವಾಗಿ ದಕ್ಷಿಣ ಕರ್ನಾಟಕದಲ್ಲಿ ಮುಖವೀಣೆ (ಒಂದು ಅಡಿ ಉದ್ದದ ಶಹನಾಯಿ) ಬಳಸಿದರೆ, ಉತ್ತರ ಕರ್ನಾಟಕದಲ್ಲಿ ಮಾಮೂಲಿ ಶಹನಾಯಿ ಬಳಸುವರು[೧೦] ಎಂಬ ಮಾತಿನಲ್ಲಿ ಮುಖವೀಣೆಗೆ `ಚಿಕ್ಕ ಶಹನಾಯಿ', `ಸಣ್ಣ ಶಹನಾಯಿ' ಎಂತಲೂ ಕರೆಯುತ್ತಿದ್ದರೆಂಬುದು ತಿಳಿದುಬರುತ್ತದೆ. ಮುಖವೀಣೆಯಿಂದ ಹೊಮ್ಮುವ ನಾದವು ಬಹುದೂರದವರೆಗೆ ಪ್ರವಹಿಸುತ್ತದೆ. ಪಡುವಲಪಾಯದಲ್ಲಿ ಬಳಸುವ `ಚಂಡೆ' ಎಂಬ ವಾದ್ಯದ ಸತ್ತ್ವವನ್ನು ಮೂಡಲಪಾಯದಲ್ಲಿ `ಮುಖವೀಣೆ' ತುಂಬಿಕೊಡುತ್ತದೆ. ಮುಂದೆ ಇದರ ಪರಿಷ್ಕೃತ ರೂಪದ ಶಹನಾಯಿ ವಾದ್ಯದ ಬಳಕೆ ಬಂದಿತು. ಅಲ್ಲದೆ ದೊಡ್ಡಾಟದಲ್ಲಿ ಮೃದಂಗ, ತಮಟೆ, ತಾಳ, ಮುಖವೀಣೆ, ಶ್ರುತಿಗಾಗಿ ಪುಂಗಿ ಇಲ್ಲವೆ ಹಾರ್ಮೋನಿಯಂ ಬಳಸುತ್ತಾರೆ. ಇಲ್ಲಿ ಬಳಸುವ ವಾದ್ಯಗಳೆಲ್ಲವೂ ಅಬ್ಬರದಿಂದ ಕೂಡಿದವುಗಳು. ಹಾಡುಗಾರಿಕೆಯಲ್ಲಿ ರಾಗಮಾಧುರ್ಯವನ್ನು, ತಾಳಗಳ ಬಂಧುರತೆಯನ್ನು ಕಾಣಬಹುದು.[೧೧] ಹೀಗಾಗಿ ಹಿಮ್ಮೇಳವು ವೈವಿಧ್ಯಪೂರ್ಣವಾಗಿರಬೇಕಾದರೆ ಈ ಎಲ್ಲ ವಾದ್ಯಗಳು ಬೇಕೇ ಬೇಕು.

ಉತ್ತರಕರ್ನಾಟಕದ ಭಾಗಗಳಲ್ಲಿ ಸೂರ್ಯವಾದ್ಯ ನುಡಿಸುವ ವಾದ್ಯಪ್ರಕಾರಗಳಲ್ಲಿ ಅಥವಾ ಮೇಳದಲ್ಲಿ ಒಟ್ಟಾಗಿ ಆರು ಜನ ಕಲಾವಿದರು ಒಂದುಗೂಡಿ ನುಡಿಸುತ್ತಿರುವುದನ್ನು ಗಮನಿಸಲಾಗಿದೆ. ಸಾಮಾನ್ಯ ಹೇಳಿಕೆಯಲ್ಲಿ ಇದನ್ನು 'ಪಂಚವಾದ್ಯಗಳ ಮೇಳ' ಎಂಬುದಾಗಿ ಕರೆಯುವರು. ಮೇಳದಲ್ಲಿ ಬಳಸುವ ವಾದ್ಯಗಳು ಮುಖ್ಯವಾಗಿ 'ಡಮರು', 'ಸೂರ್ಯವಾದ್ಯ', 'ಚಂದ್ರವಾದ್ಯ', 'ಮುಖವೀಣೆ' (ಎರಡು ಜನ ಕಲಾವಿದರು) ಮತ್ತು ಕೈತಾಳ ಈ ಸಮಾಗಮದ ನಾದ ಪಂಚವಾದ್ಯ ಸಂಗೀತವಾಗಿ ಹೊಮ್ಮುತ್ತಿತ್ತು.[೧೨] ದಕ್ಷಿಣ ಕರ್ನಾಟಕದಲ್ಲಿ `ಮುಖವೀಣೆ'ಯನ್ನು ಬಳಸಿದರೆ, ಉತ್ತರ ಕರ್ನಾಟಕದಲ್ಲಿ ಮಾಮೂಲಿ `ಶಹನಾಯಿ'ಯನ್ನೇ ಬಳಸುವರು.

ಜಾನಪದ ವಿದ್ವಾಂಸರಾದ ಜೀಶಂಪ ಅವರು ಮುಖವೀಣೆ ಮೂಡಲಪಾಯ ಯಕ್ಷಗಾನದಲ್ಲಿ ಬಳಸುವ ವಾದ್ಯ. ಮದ್ದಲೆಯ ಜೊತೆಗೆ ಒಬ್ಬ ಮುಖವೀಣೆಯ ತಜ್ಞ ಈ ವಾದ್ಯವನ್ನು ಊದುತ್ತಾನೆ. ಮುಖವೀಣೆಯೆಂದರೆ ಒಂದು ಊದುವ ವಾದ್ಯ, ಒಂದು ಚಿಕ್ಕ ಓಲಗ ಎನ್ನಬಹುದು. ವಿವಿಧ ರಾಗಗಳಿಗೆ ಇದನ್ನು ಊದು ಹಿಮ್ಮೇಳ ಒದಗಿಸುವರು. ಒಂದು ಅಡಿ ಉದ್ದದ ಈ ವಾದ್ಯದಲ್ಲಿ ಒಂದು ಕಡೆ ಎರಡು ರಂಧ್ರಗಳಿರುತ್ತವೆ. ಇನ್ನೊಂದು ಕಡೆ ಎರಡು ರಂಧ್ರಗಳಿರುತ್ತವೆ. ಕಾಡುಮರದಲ್ಲಿ ಇದನ್ನು ಮಾಡಿಕೊಳ್ಳಲಾಗುತ್ತದೆ. ತಾಮ್ರದ ಲಳಿ, ದಂತದ ಮುಳ್ಳು ಇಲ್ಲಿ ಗಮನಾರ್ಹ. ಉತ್ತರ ಕರ್ನಾಟಕದಲ್ಲಿ ಸ್ವಲ್ಪ ದೊಡ್ಡ ವಾದ್ಯವನ್ನು ಬಳಸುತ್ತಾರೆ, ಅದನ್ನು 'ಸೋನಾಯಿ' ಎನ್ನುತ್ತಾರೆ. ಬಿಸ್ಮಿಲ್ಲಾಖಾನರ `ಶಹನಾಯಿ' ಈ ಮೂಲದ ವಾದ್ಯವೇ.[೧೩] ಎಂಬ ಅವರ ಮಾತುಗಳನ್ನು ಗಮನಿಸಿದರೆ ಮುಖವೀಣೆಗೆ ಕೇವಲ ನಾಲ್ಕೇ ರಂಧ್ರಗಳಿರುತ್ತವೆ ಎಂದು ಹೇಳುತ್ತಾರೆ. ಹಾಗೆಯೆ ಆರು ರಂಧ್ರಗಳು, ಏಳು ರಂಧ್ರಗಳು ಕೂಡ ಇರುವುದನ್ನು ಕಾಣಬಹುದು. ಇದರಿಂದ ನಮ್ಮ ಜನಪದರು ವಾದ್ಯ ನಿರ್ಮಿಸುವಾಗ ತಮ್ಮ ಅನುಕೂಲಕ್ಕೆ ತಕ್ಕಂತೆ, ಸಂಗೀತದ ಆಲಾಪನೆಗಳಿಗೆ ತಕ್ಕಂತೆ ಹಾಗೂ ಪ್ರಾದೇಶಿಕತೆಗನುಗುಣವಾಗಿ ವಾದ್ಯಗಳಲ್ಲಿಯೂ ಬದಲಾವಣೆಯನ್ನು ಕಂಡುಕೊಂಡಿರಬಹುದು ಎನಿಸುತ್ತದೆ. ಮುಂದುವರೆದು ಸೋರೆಬುರುಡೆಗೆ ಜೀಯಾಳದ ಕಡ್ಡಿಯನ್ನು ಅಳವಡಿಸಿ ತಯಾರಿಸಿಕೊಂಡಿರುವ ಊದುವ ವಾದ್ಯವೇ `ಪುಂಗಿ'. ಹಿಂದೆಯೂ ಕೂಡ ಬಯಲಾಟಗಳಲ್ಲಿ ಇಂಥದೇ ವಾದ್ಯವನ್ನು ಶ್ರುತಿಗಾಗಿ ಬಳಸುತ್ತಿದ್ದರು ಎನ್ನುತ್ತಾರೆ.

ಜನಪದ ವಾದ್ಯಗಳ ಕಮ್ಮಟದಲ್ಲಿ ಹಿರಿಯ ನೃತ್ಯ ವಿದ್ವಾಂಸರಾದ ಕುದ್ಕಾಡಿ ವಿಶ್ವನಾಥ ರೈ ಅವರು 'ಕಲಾರಾಧನೆ'ಯ ಕುರಿತು ಹೇಳುತ್ತಾ `ಆರಾಧನೆ' ಎಂಬುದು ವೈಯಕ್ತಿಕವಾದುದು. 'ಕಲಾರಾಧನೆ' ಸಾಮೂಹಿಕವಾದುದು. ಈ ಸಾಮೂಹಿಕ ಕಲಾರಾಧನೆಗೆ ಒಂದು ವೇದಿಕೆ ಬೇಕಾಗುತ್ತದೆ[೧೪] ಎನ್ನುತ್ತ ನಾಗಸ್ವರ (ದಕ್ಷಿಣದ ಪ್ರಮುಖ ವಾದ್ಯ ನಾಗಸುರ>ನಾಗಸ್ವರ, ನಾದಸ್ವರವೆಂತಲೂ ಬಳಕೆಯಲ್ಲಿದೆ), ಮುಖವೀಣೆ- ಇತ್ಯಾದಿಗಳನ್ನು ಯಕ್ಷಗಾನದಂಥ ಕಲೆಗಳಲ್ಲಿ ಉಪಯೋಗಿಸಿಕೊಳ್ಳಬಹುದು. ಜನಪದ ವಾದ್ಯ ಪ್ರಕಾರಗಳನ್ನು `ಭರತ ನಾಟ್ಯ'ದಂತಹ ಶಾಸ್ತ್ರೀಯ ನೃತ್ಯ ಕಲಾಪ್ರಕಾರಗಳಲ್ಲಿಯೂ ಬಳಸಿಕೊಳ್ಳುವ ಸಾಧ್ಯತೆಗಳನ್ನು ಚರ್ಚಿಸುತ್ತಾರೆ. ಮುಂದುವರೆದು ಯಕ್ಷಗಾನದಲ್ಲಿ ಇನ್ನಷ್ಟು ಜನಪದ ವಾದ್ಯಗಳನ್ನು ಬಳಸಿಕೊಳ್ಳಲು ಅವಕಾಶವಿದೆ ಎಂದು ಹೇಳುತ್ತ ಮುಖ್ಯವಾಗಿ ಶ್ರುತಿಗೆ ಸಂಬಂಧಿಸಿ ಹಾರ್ಮೋನಿಯಂ ಶ್ರುತಿಯ ಬದಲಿಗೆ ನಾಗಸ್ವರ ಅಥವಾ ಮುಖವೀಣೆಯ ಶ್ರುತಿಯನ್ನು ಬಳಸಬಹುದು. ಸ್ಯಾಕ್ಸಾಫೋನ್, ವಾಯೋಲಿನ್ನನ್ನು ಯಕ್ಷಗಾನಕ್ಕೆ ಬಳಸುತ್ತಿದ್ದರೂ, ಅದಕ್ಕಿಂತ ಪರಿಣಾಮಕಾರಿಯಾಗಿ ನಮ್ಮ ಮುಖವೀಣೆಯನ್ನು ಬಳಸುವುದರಿಂದ ಯಕ್ಷಗಾನದ ಏರುಸ್ವರಗಳಿಗೆಲ್ಲ ಆ ಭಾವ ತುಂಬುವುದಕ್ಕೆ ಅನುಕೂಲವಾಗುತ್ತದೆ[೧೪] ಎನ್ನುತ್ತಾರೆ. ಅಂದರೆ ಮುಖವೀಣೆ ಮತ್ತು ನಾಗಸ್ವರ ವಾದ್ಯಗಳು ಮೇಳಗಳಲ್ಲಿ ಶ್ರುತಿಯಾಗಿ ಕಾರ್ಯನಿರ್ವಹಿಸುತ್ತಿದ್ದವು. ಹೀಗಾಗಿಯೇ ಮುಖವೀಣೆಯನ್ನು ಬಯಲಾಟಗಳ `ಜೀವವಾಣಿ' ಎಂದರೂ ತಪ್ಪಾಗಲಿಕ್ಕಿಲ್ಲ.

ಒಂದೇ ತೆರನಾಗಿರುವ ಜೋಡಿ ವಾದ್ಯಗಳ ಕುರಿತು ಹಿ. ಶಿ. ರಾಮಚಂದ್ರಗೌಡರು ....ಮೌರಿ(ಮಾವೊರಿ) ಎನ್ನುವುದು ಗಂಡಸುಧ್ವನಿ, ಪಕ್ಕದಲ್ಲಿರುವಂಥದ್ದು ಅದು ಹೆಣ್ಣು- ಯಾಕಂದ್ರೆ ಜಾಸ್ತಿ ಗಲಾಟೆ ಮಾಡುತ್ತದೆ ಅನ್ನುವ ಕಾರಣಕ್ಕೆ[೧೪] ಎಂದು ಪರಿಚಯಿಸುತ್ತಾರೆ. ಇಲ್ಲಿ `ಮೌರಿ' ಎನ್ನುವುದು ಒಂದು (ಉಪಾಂಗ) ವಾದ್ಯ ವಿಶೇಷ. ಅದರ ಜೊತೆಗಿರುವುದು ಶ್ರುತಿ ನೀಡುವ ಪುಂಗಿ ಅಥವಾ ನಾದಸ್ವರ ವಾದ್ಯವಾಗಿರಬಹುದು. ಇವೆರಡೂ ಮರದ ಕೊಳವೆ(ನಳಿಕೆ)ಗಳಿಂದ ಕಡೆಯಲ್ಪಟ್ಟ ವಾದ್ಯಗಳಾಗಿದ್ದು ಇವುಗಳ ಮೇಲ್ತುದಿಯಲ್ಲಿ ತಾಳೆಗರಿಯಿಂದ ಮಾಡಿದ `ಜೀವಾಳ'ವನ್ನು ಧ್ವನಿಯಂತ್ರವಾಗಿ ಉಪಯೋಗಿಸುತ್ತಾರೆ. ಈ ವಾದ್ಯಗಳನ್ನು ಉಡುಪಿ ಭಾಗದ ದೇವಸ್ಥಾನದ ಉತ್ಸವಗಳಲ್ಲಿ ಸೂರ್ಯವಾದ್ಯ, ಸಮ್ಮಾಳಗಳ ಜೊತೆಗೂಡಿ ನುಡಿಸುತ್ತಾರೆ. ಇಲ್ಲಿ ಮೌರಿ ಮತ್ತು ಶ್ರುತಿಗಳಿಗೆ `ಮುಖವೀಣೆ' ಎಂದು ಕರೆಯುವುದು ವಾಡಿಕೆ.

`ಭಾರತೀಯ ಮಂಗಲವಾದ್ಯ' ಎಂದೇ ಹೆಸರಾಗಿರುವ ಮೋವರಿ ಅಥವಾ ಮೌರಿಯು ಒರಿಸ್ಸಾದ ಸಾಂಪ್ರದಾಯಿಕ ವಾದ್ಯ. ಇದನ್ನು ಮದುವೆ ಸಮಾರಂಭಗಳಲ್ಲಿ ಹೆಚ್ಚು ಬಳಸಲಾಗುತ್ತದೆ. ಜನಪದ ರಂಗಭೂಮಿಯ `ರಾಮಾ ನಾಟಕ' ಹಾಗೂ ಒರಿಸ್ಸಾದ `ಚೌ' (Chhau) ನೃತ್ಯಗಳಲ್ಲಿ ಇದರ ಬಳಕೆ ಕಂಡುಬರುತ್ತದೆ. ಇದು ಶಹನಾಯಿಯ ರೂಪ ಪಡೆದುಕೊಂಡು ಹಿಂದೂಸ್ತಾನಿ ಸಂಗೀತ ಶೈಲಿಯನ್ನು ಅನುಸರಿಸುತ್ತಿರುವ ವಾದ್ಯವಾಗಿ ಹೊರಹೊಮ್ಮಿದೆ. ತಾಡೋಲೆ (ತಾಳೆಗರಿ) ಎಲೆಗಳಿಂದ ಮಾಡಿದ ವಿಶಿಷ್ಟ ಜೋಡುನಾಲಿಗೆ(Reed)ಯ ಧ್ವನಿಯಂತ್ರದಲ್ಲಿ ಊದುವ ತಂತ್ರವನ್ನು ಸುಧಾರಿಸಿಕೊಂಡು ಈ ವಾದ್ಯದಲ್ಲಿಯೂ ತಂತುವಾದ್ಯದಂತೆ ಮಂಜುಳವಾದ, ಮೃದುಮಧುರವಾದ ಧ್ವನಿಯನ್ನು ಹೊರಹೊಮ್ಮಿಸಲಾಗುತ್ತಿದೆ. ಈ ಪರಿವರ್ತನೆಯಿಂದಲೇ ಶಹನಾಯಿಯು ಇತ್ತೀಚೆಗೆ ಲೋಕಪ್ರಿಯವಾಗಿದೆ.

ಭಾಗವತರ ಲಯಬದ್ಧವಾದ ಹಾಡುಗಳಿಗೆ ಮದ್ದಳೆ ಮತ್ತು ಮುಖವೀಣೆಗಳು ಅತ್ಯುತ್ತಮವಾದ ಸಾಥ್ ನೀಡುತ್ತಿದ್ದವು ; ಪಾತ್ರಧಾರಿಗಳಲ್ಲಿ ಹುರುಪು ತುಂಬಿ, ಪ್ರೇಕ್ಷಕರನ್ನು ಆಕ‌ರ್ಷಿಸುತ್ತಿತದ್ದವು. ಮದ್ದಳೆ-ಮುಖವೀಣೆಗಳಿಂದ ಹೊಮ್ಮುವ ಸಮಧುರ ಮೋಹಕ ನಿನಾದ ಭಾಗವತರ ಎತ್ತರದ ಹಾಡುಗಾರಿಕೆ ಈ ಕಲಾಭಿಮಾನಿಗಳನ್ನು ಬಡಿದೆಬ್ಬಿಸುತ್ತಿದ್ದವು. ಮೂಡಲಪಾಯ ಯಕ್ಷಗಾನದ ಪ್ರಸಂಗಗಳಿಗೆ ಮುಖವೀಣೆ ಕಳೆದುಂಬಿಸುವ ವಾದ್ಯವಾಗಿ ಹೆಸರು ಪಡೆದಿತ್ತು. ಇದಿಲ್ಲದೇ ಪ್ರಸಂಗಕ್ಕೆ ಕಳೆಯೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಅನಿವಾರ್ಯವಾಗಿತ್ತು.

ವೀರಗಾಸೆ ಕಲಾಪ್ರದರ್ಶನದಲ್ಲಿ ಸಮಾಳ, ಮುಖವೀಣೆ, ಕಂಚಿನ ತಾಳಗಳು ಮುಖ್ಯವಾದ್ಯ ಪರಿಕರಗಳೆನಿಸಿವೆ. ಜತೆಗೆ ತಾಳ, ಶ್ರುತಿ, ಓಲಗ ಅಥವಾ ಮೌರಿ, ಕರಡೆ ವಾದ್ಯ- ಈ ಪಂಚವಾದ್ಯಗಳೂ ವೀರಗಾಸೆಯಲ್ಲಿ ಬಳಕೆಯಾಗುತ್ತವೆ.

`ಕಟ್ಟೈ ಕುಟ್ಟು'(Kattaikkuttu) ಎಂಬುದು ತಮಿಳುನಾಡಿನ ರಂಗಭೂಮಿಯ ಕಲಾಪ್ರಕಾರ. ಈ ಕಲಾಪ್ರದರ್ಶನದ ಹಿಮ್ಮೇಳದಲ್ಲಿ ಹಾರ್ಮೋನಿಯಂ, ಮೃದಂಗ ಮತ್ತು ಮುಖವೀಣೆಯನ್ನು ಬಳಸುವರು. ವಿಶೇಷವೆಂದರೆ ಇತ್ತೀಚೆಗೆ ಇಲ್ಲಿಯ `ಕಟ್ಟೈ ಕುಟ್ಟು ಗುರುಕುಲಂ' ವಸತಿಶಾಲೆಯ ವಿದ್ಯಾರ್ಥಿಗಳೇ ಈ ವಾದ್ಯಗಳನ್ನು ನುಡಿಸುತ್ತಿದ್ದಾರೆ.[೧೫]

ಮುಖವೀಣೆಯ ಕಲಾವಿದರು

[ಬದಲಾಯಿಸಿ]

ಇಂದಿನವರೆಗೂ ಕೇವಲ ಮುಖವೀಣೆ (ಸುಂದರಿ ವಾದ್ಯ)ಯನ್ನು ನುಡಿಸುತ್ತ ತಮ್ಮ ಕಲಾಸೇವೆಯನ್ನು ಗೈಯ್ಯುತ್ತಿರುವ ಈ ಕಲಾವಿದರು ಮೂಲದಲ್ಲಿ ಬುಡಕಟ್ಟು ಸಮುದಾಯದವರೇ ಆಗಿದ್ದು, ಶಹನಾಯಿ ನುಡಿಸುವವರನ್ನು ಭಜಂತ್ರಿ, ವಾಜಂತ್ರಿ, ವಾಲಗ ಊದುವವರನ್ನು ವಾಲಗದ ಕೊರಮರು ಎಂದು ಗುರುತಿಸುತ್ತಾರೆ. ಅಲ್ಲದೆ ಬೇರೆ ಸಮುದಾಯದವರೂ ಕೂಡ ಈ ವಾದ್ಯವನ್ನು ವೃತ್ತಿಯಾಗಿ, ಹವ್ಯಾಸಕ್ಕಾಗಿ ನುಡಿಸುತ್ತ ಬಂದಿರುವುದೂ ಇದೆ. ಇವರೆಲ್ಲರೂ ಜನಪದ ಕಲಾಪ್ರಕಾರಗಳಲ್ಲಿ ಸಾಮಾನ್ಯವಾಗಿದ್ದ ಮುಖವೀಣೆಯನ್ನು ಶಾಸ್ತ್ರೀಯ ಸಂಗೀತ ವೇದಿಕೆಯಲ್ಲಿ ಇಡೀ ಸಂಗೀತಲೋಕಕ್ಕೆ ಪರಿಚಯಿಸುವ ಕೆಲಸ ಮಾಡುತ್ತಿದ್ದಾರೆ.

ಮುಖವೀಣೆಯ ಜೊತೆಯಲ್ಲಿ ಪುಂಗಿ ಮತ್ತು ಕೊಳಲನ್ನು ಏಕಕಾಲದಲ್ಲಿ ಊದುವ ಸಂಪ್ರದಾಯದವರನ್ನೂ ಮುಖವೀಣೆ ಕಲಾವಿದರೆಂದೇ ಗುರುತಿಸುವುದುಂಟು. ಈ ತಲೆಮಾರಿನ ಬೆರಳೆಣಿಕೆಯ ಅಭಿಜಾತ ಕಲಾವಿದರನ್ನಿಲ್ಲಿ ಹೆಸರಿಸಬಹುದು.

1.ನಾಗಮಂಗಲ ತಾಲೂಕಿನ ನರಗನಹಳ್ಳಿಯ ಮುಖವಿಣೆಯ 'ಮಾಸ್ಟರ್ ಪ್ಲೇಯರ್' ಮಾಯಣ್ಣ[೧೬] ನವರು 2.`ಯಕ್ಷಸಿರಿ-ವಾರ್ಷಿಕ ಪ್ರಶಸ್ತಿ' ವಿಜೇತ ದಿ.ಶ್ರೀಯುತ ಎ.ವಿ.ನಾರಾಯಣಪ್ಪ[೧೭] ನವರು. 3.ಮಹಾರಾಷ್ಟ್ರದ ಸೋಲಾಪುರದ-ಸಿದ್ರಾಮ್ ಜಾಧವ, ಭೀಮಣ್ಣ ಜಾಧವ ಮತ್ತು ಕಪಿಲ್ ಜಾಧವ ಅವರು. 4.ಕೋಲಾರ ಜಿಲ್ಲೆ ಗುಡಿಬಂಡೆ ತಾಲೂಕಿನ ಗವಿಗುಂಟಹಳ್ಳಿಯ ಶ್ರೀಯುತ ಆಂಜಿನಪ್ಪ ಅವರು. `ಮುಖವೀಣೆ ಆಂಜಿನಪ್ಪ'[೧೮]ಎಂದೇ ಚಿರಪರಿಚಿತರಾದ ಇವರು ಮುಖವೀಣೆಯ ಜತೆಗೆ ಶ್ರುತಿ ಮತ್ತು ಒತ್ತುಸ್ವರ ಸೇರಿ ಒಮ್ಮೆಲೇ ಮೂರು ವಾದ್ಯಗಳನ್ನು ಬಾಯಿಯಲ್ಲಿಟ್ಟುಕೊಂಡು ನುಡಿಸುತ್ತಾರೆ. 5.ಬಳ್ಳಾರಿ ಜಿಲ್ಲೆ ಹೂವಿನಹಡಗಲಿಯ ಹಿಂದೂಪುರ ಗ್ರಾಮದ ಶ್ರೀಯುತ ಹನುಮಂತಪ್ಪ ನವರು. 6.ತುರುವೆಕೆರೆ ತಾಲೂಕಿನ ದುಂಡ ಗ್ರಾಮದ ದಿ.ಶ್ರೀಯುತ ಲಿಂಗಪ್ಪ ದಂಡಿನಶಿವರ ನವರು. ಇವರು ಹಲವಾರು ಯಕ್ಷಗಾನ ಪ್ರಸಂಗಗಳಿಗೆ ಮಖವೀಣೆಯ ಸಾಥ್ ಕೊಟ್ಟಿದ್ದಾರೆ.[೧೯] 7.ಅಬ್ಲೂಡು ಶ್ರೀಯುತ ಮುಳಬಾಗಿಲಪ್ಪ ನವರು.

ಈ ಮೇಲಿನ ಅಪರೂಪದ ಮುಖವೀಣೆ ಕಲಾವಿದರಷ್ಟೇ ಅಲ್ಲದೇ ಎಲೆಮರೆಯ ಕಾಯಿಯಂತಿದ್ದು ತಮ್ಮ ಇಡೀ ಜೀವನವನ್ನೇ ಈ ಕಲೆಗೆ ಮುಡಿಪಾಗಿಟ್ಟಿರುವ ಅನೇಕ ಕಲಾವಿದರು ಸಾಕಷ್ಟಿದ್ದಾರೆ. ಯುವಪೀಳಿಗೆ ಈ ಕಲೆಯನ್ನು ಕಲಿಯುವಲ್ಲಿ ಆಸಕ್ತಿ ವಹಿಸದಿದ್ದುದರಿಂದ ಮುಂದಿನ ತಲೆಮಾರಿಗೆ ಕಲೆಯನ್ನು ಉಳಿಸಿಕೊಡುವಲ್ಲಿ ಶ್ರಮಿಸುತ್ತಿದ್ದಾರೆ.

ಯುವಪೀಳಿಗೆ ಈ ಕಲೆಯನ್ನು ಕಲಿಯುತ್ತಿಲ್ಲ ಎಂಬ ಮಾತಿಗೆ ಅಪವಾದವೆಂಬಂತೆ ತಮಿಳುನಾಡಿನ ಕಂಚೀಪುರಂ ಜಿಲ್ಲೆಯ ಪುಂಜಾರ ಸಂತಕಲ್ ಎಂಬ ಗ್ರಾಮದಲ್ಲಿ ಶಾಲೆಯೊಂದಿದೆ. ಇದು ಶಿಕ್ಷಣ ಮತ್ತು ರಂಗಭೂಮಿ ಎರಡನ್ನೂ ಸಾಮಾಜಿಕವಾಗಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಹಿನ್ನೆಲೆಯಿಂದ ಬಂದ ಮಕ್ಕಳಿಗಾಗಿಯೇ ನೀಡುತ್ತಿರುವ ಒಂದು ವಿಶಿಷ್ಟ ವಸತಿ ನಾಟಕಶಾಲೆ. ಇದರ ಹೆಸರು 'ಕಟ್ಟೈ ಕುಟ್ಟು ಗುರುಕುಲಂ'.[೨೦] ಇಲ್ಲಿ ವಿದ್ಯಾಭ್ಯಾಸದ ಜೊತೆಗೆ ಹಾಡುಗಾರಿಕೆ, ನೃತ್ಯ, ನಟನೆಯಷ್ಟೇ ಅಲ್ಲದೆ ವಾದ್ಯಗಳನ್ನು ನುಡಿಸುವ ಕಲೆಯ ತರಬೇತಿಯನ್ನೂ ಸಹ ನೀಡಲಾಗುತ್ತಿದೆ. ಶಾಲೆಯಲ್ಲಿ ನಡೆಯುವ ಕಲಾಪ್ರದರ್ಶನಗಳಲ್ಲಿ ಹಾರ್ಮೋನಿಯಂ, ಮೃದಂಗ, ಮುಖವೀಣೆಯಂತಹ ಹಿಮ್ಮೇಳದ ವಾದ್ಯಗಳನ್ನು ಇಲ್ಲಿಯ ವಿದ್ಯಾರ್ಥಿಗಳೇ ನುಡಿಸುತ್ತಾರೆ. 'ಮುಖವೀಣೆ' ಎನ್ನುವುದು ಪುಂಗಿ ಮತ್ತು ಕೊಳಲುಗಳಿಂದ ಕೂಡಿದ `ತ್ರಿವೇಣಿ ಸಂಗಮ' ಎಂಬುದು ತಪ್ಪು ಗ್ರಹಿಕೆ. ಮುಖವೀಣೆ ಎಂಬುದು ಒಂದು ಸ್ವತಂತ್ರ ವಾದ್ಯ.

ನೃತ್ಯ, ಸಂಗೀತ, ನಾಟಕಗಳಿಗೆ ನಮ್ಮ ಚರ್ಮವಾದ್ಯ, ಗಾಳಿವಾದ್ಯಗಳು ಹೆಚ್ಚು ಉಪಯುಕ್ತವೆನಿಸುತ್ತವೆ. ತರಬೇತಿ ಕಮ್ಮಟಗಳಲ್ಲಿ ವೃತ್ತಿಪರ ಕಲಾವಿದರನ್ನು ಮಾತ್ರ ಕರೆಯಿಸಿ, ಅವರಿಗೇ ಮತ್ತೆ ತರಬೇತಿ ನೀಡುವುದನ್ನು ಬಿಡಬೇಕು. ಬದಲಾಗಿ ವೃತ್ತಿಪರ ಕಲಾವಿದರಿಂದ ಆಸಕ್ತಿ ಇರುವ ಪ್ರತಿಭಾವಂತ ತರುಣ ಕಲಾವಿದರನ್ನು ಆಯ್ಕೆ ಮಾಡಿಕೊಂಡು ಅವರಿಗೆ ಪರಿಪೂರ್ಣ ತರಬೇತಿಯನ್ನು ಕೊಡಬೇಕು. ಆ ಕಲಾವಿದರನ್ನೇ ಈ ನೃತ್ಯ, ಸಂಗೀತಗಳಿಗೆ ಉಪಯೋಗಿಸಿಕೊಂಡು ಅದರ ಉಪಯೋಗವನ್ನು ಪಡೆಯಬಹುದು ಹಾಗೂ ಅವರಿಗೆ ಅವಕಾಶವನ್ನು ಕಲ್ಪಿಸಿಕೊಡಬಹುದು. ಇದರಿಂದ ಕಲೆಯೂ ಉಳಿದು ಬೆಳೆಯುತ್ತದೆ.

ಇವನ್ನೂ ನೋಡಿ

[ಬದಲಾಯಿಸಿ]

ಕೋಲಾರ ಜಿಲ್ಲೆ ಗುಡಿಬಂಡೆ ತಾಲೂಕಿನ ಗವಿಗುಂಟಹಳ್ಳಿಯ ಶ್ರೀಯುತ ಆಂಜಿನಪ್ಪ ಅವರು 'ಮುಖವೀಣೆ ಆಂಜಿನಪ್ಪ' ಎಂದೇ ಹೆಸರಾದವರು. ಅವರು ಮುಖವೀಣೆ ನುಡಿಸುವ ಒಂದು ವೀಡಿಯೋ ಇಲ್ಲಿದೆ.

ಉಲ್ಲೇಖನಗಳು

[ಬದಲಾಯಿಸಿ]
  1. https://kn.wikipedia.org/wiki/%E0%B2%B8%E0%B2%A6%E0%B2%B8%E0%B3%8D%E0%B2%AF:%E0%B2%B0%E0%B2%BE%E0%B2%9C%E0%B2%B6%E0%B3%87%E0%B2%96%E0%B2%B0.%E0%B2%9A%E0%B2%82.%E0%B2%A1%E0%B3%8A%E0%B2%82%E0%B2%AC%E0%B2%B0%E0%B2%AE%E0%B2%A4%E0%B3%8D%E0%B2%A4%E0%B3%82%E0%B2%B0
  2. ನಾಯಕ ಹಾ. ಮಾ : ಕನ್ನಡ ರತ್ನಕೋಶ (ಪರಿಷ್ಕೃತ) : ಕನ್ನಡ ಸಾಹಿತ್ಯ ಪರಿಷತ್ತು, ಪಂಪಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು-18 : 2017
  3. https://bharatavani.in/dictionary-surf/?did=46&letter=%E0%B2%AE&language=Kannada&page=93
  4. Mandya District Gazeteer : Pg-790
  5. ವಕ್ತೃ : ಪಂ. ಶ್ರೀ ಬಸವರಾಜ ಭಜಂತ್ರಿ (ಹೆಡಿಗ್ಗೊಂಡ) : ಹಾವೇರಿ ಜಿಲ್ಲೆ, ಬ್ಯಾಡಗಿ ತಾಲೂಕು ಹೆಡಿಗ್ಗೊಂಡ ಗ್ರಾಮ : ವಯಸ್ಸು-68
  6. https://kn.wikipedia.org/wiki/%E0%B2%AA%E0%B2%82.%E0%B2%AC%E0%B2%B8%E0%B2%B5%E0%B2%B0%E0%B2%BE%E0%B2%9C_%E0%B2%AD%E0%B2%9C%E0%B2%82%E0%B2%A4%E0%B3%8D%E0%B2%B0%E0%B2%BF_(%E0%B2%B9%E0%B3%86%E0%B2%A1%E0%B2%BF%E0%B2%97%E0%B3%8D%E0%B2%97%E0%B3%8A%E0%B2%82%E0%B2%A1)
  7. https://archive.org/details/dli.osmania.4076/mode/1up
  8. 10. Rasikas.org : Music Academy Lec dems : https://www.rasikas.org/forums/viewtopic.php?t=7680
  9. ಚೆಕ್ಕೆರೆ ಶಿವಶಂಕರ : ಕರ್ನಾಟಕ ಜನಪದ ರಂಗಭೂಮಿ-ಜಾ.ಪು ಮಾಲೆ-18 (ಪಿಡಿಎಫ್) : ಕರ್ನಾಟಕ ಜಾನಪದ ಪರಿಷತ್ತು, ಎಂ.ಎಸ್.ರಾಮಯ್ಯ ಆಸ್ಪತ್ರೆ ಮಹಾದ್ವಾರದ ಹತ್ತಿರ, ನ್ಯೂ ಬಿ.ಇ.ಎಲ್ ರಸ್ತೆ, ಬೆಂಗಳೂರು-54 : 2008
  10. ಮಲಶೆಟ್ಟಿ ಬಸವರಾಜ : ಕರ್ನಾಟಕ ಜನಪದ ರಂಗಭೂಮಿ : ಸ್ನೇಹ ಪ್ರಿಂಟರ್ಸ್, ನಂ.೧೧೪, ೪ನೇ ಅಡ್ಡ ರಸ್ತೆ, ಬಿಸಿಸಿ ಬಡಾವಣೆ, ಅತ್ತಿಗುಪ್ಪೆ, ವಿಜಯನಗರ, ೨ನೇ ಹಂತ, ಬೆಂಗಳೂರು-೧೦೪ : ಇಸ್ವಿ-೨೦೦೮
  11. ಚೆಕ್ಕೆರೆ ಶಿವಶಂಕರ : ಕರ್ನಾಟಕ ಜನಪದ ರಂಗಭೂಮಿ-ಜಾ.ಪು ಮಾಲೆ-18 ಠಿಜಜಿ : ಕರ್ನಾಟಕ ಜಾನಪದ ಪರಿಷತ್ತು, ಎಂ.ಎಸ್.ರಾಮಯ್ಯ ಆಸ್ಪತ್ರೆ ಮಹಾದ್ವಾರದ ಹತ್ತಿರ, ನ್ಯೂ ಬಿ.ಇ.ಎಲ್ ರಸ್ತೆ, ಬೆಂಗಳೂರು-54 : 2008
  12. ಸೂರ್ಯ ವಾದ್ಯ-ಚಂದ್ರ ವಾದ್ಯ/kn.m.wikipedia.org : https://kn.wikipedia.org/wiki/%E0%B2%B8%E0%B3%82%E0%B2%B0%E0%B3%8D%E0%B2%AF_%E0%B2%B5%E0%B2%BE%E0%B2%A6%E0%B3%8D%E0%B2%AF-%E0%B2%9A%E0%B2%82%E0%B2%A6%E0%B3%8D%E0%B2%B0_%E0%B2%B5%E0%B2%BE%E0%B2%A6%E0%B3%8D%E0%B2%AF
  13. ಪರಮಶಿವಯ್ಯ ಜೀ.ಶಂ : ಜಾನಪದ : ಕೆಲವು ಮುಖಗಳು
  14. ೧೪.೦ ೧೪.೧ ೧೪.೨ ಭಟ್ ತಿರುಮಲೇಶ್ವರ., ಕೃಷ್ಣಭಟ್ ಎಚ್., ಆಳ್ವ ಅಶೋಕ : ಪಂಚವಾದ್ಯ : ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರ, ಎಂ.ಜಿ.ಎಂ ಕಾಲೇಜು, ಉಡುಪಿ : 2005
  15. `ಕಟ್ಟೈ ಕುಟ್ಟುವಿನಲ್ಲಿ ಕಥಾಗಾರಿಕೆ' : https://ruralindiaonline.org/hi/articles/%E0%B2%95%E0%B2%9F%E0%B3%8D%E0%B2%9F%E0%B3%88%E0%B2%95%E0%B3%81%E0%B2%9F%E0%B3%8D%E0%B2%9F%E0%B3%81%E0%B2%B5%E0%B2%BF%E0%B2%A8%E0%B2%B2%E0%B3%8D%E0%B2%B2%E0%B2%BF-%E0%B2%95%E0%B2%A5%E0%B2%BE%E0%B2%97%E0%B2%BE%E0%B2%B0%E0%B2%BF%E0%B2%95%E0%B3%86/
  16. Mandya District Gazeteer : Pg.790
  17. ಕಣಜ-ಎ.ವಿ.ನಾರಾಯಣಪ್ಪ : https://kanaja.karnataka.gov.in/%E0%B2%8E-%E0%B2%B5%E0%B2%BF-%E0%B2%A8%E0%B2%BE%E0%B2%B0%E0%B2%BE%E0%B2%AF%E0%B2%A3%E0%B2%AA%E0%B3%8D%E0%B2%AA/
  18. ನಲ್ಲೂರು ಪ್ರಸಾದ್ ಆರ್.ಕೆ(ಪ್ರ.ಸಂ) : ಜಾನಪದ ಸಿರಿ : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಚಿಕ್ಕಬಳ್ಳಾಪುರ ಜಿಲ್ಲೆ, ಚಿಕ್ಕಬಳ್ಳಾಪುರ : 2011
  19. ಮೌನವಾದ ಮುಖವೀಣೆ : Prajavani Online Paper : Updated 11.oct.2013 : https://www.prajavani.net/article/%E0%B2%AE%E0%B3%8C%E0%B2%A8%E0%B2%B5%E0%B2%BE%E0%B2%A6-%E2%80%98%E0%B2%AE%E0%B3%81%E0%B2%96%E0%B2%B5%E0%B3%80%E0%B2%A3%E0%B3%86%E2%80%99
  20. https://ruralindiaonline.org/hi/articles/%E0%B2%95%E0%B2%9F%E0%B3%8D%E0%B2%9F%E0%B3%88%E0%B2%95%E0%B3%81%E0%B2%9F%E0%B3%8D%E0%B2%9F%E0%B3%81%E0%B2%B5%E0%B2%BF%E0%B2%A8%E0%B2%B2%E0%B3%8D%E0%B2%B2%E0%B2%BF-%E0%B2%95%E0%B2%A5%E0%B2%BE%E0%B2%97%E0%B2%BE%E0%B2%B0%E0%B2%BF%E0%B2%95%E0%B3%86/

[]

  1. ಉಲ್ಲೇಖ ದೋಷ: Invalid <ref> tag; no text was provided for refs named :0
"https://kn.wikipedia.org/w/index.php?title=ಮುಖವೀಣೆ&oldid=1260707" ಇಂದ ಪಡೆಯಲ್ಪಟ್ಟಿದೆ