ವಿಷಯಕ್ಕೆ ಹೋಗು

ಯತಿರಾಜ ವೀರಾಂಬುಧಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ಜನನ ಆಗಸ್ಟ್ 11, 1957 ಮೈಸೂರು[೧]

ಬಾಲ್ಯ ಮತ್ತು ವ್ಯತ್ತಿ ಜೀವನ[ಬದಲಾಯಿಸಿ]

ಮೈಸೂರಿನಲ್ಲಿ ತಮ್ಮ ಬಾಲ್ಯವನ್ನು ಕಳೆದ ಯತಿರಾಜ್ ವೀರಾಂಬುಧಿ ವೃತ್ತಿಯಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರ್. ಅವರು ಬೆಂಗಳೂರು ಮತ್ತು ಒಮಾನ್ ದೇಶದ ಮಸ್ಕತ್ನಲ್ಲಿ ಒಟ್ಟಾರೆ ಸುಮಾರು ಮೂರೂವರೆ ದಶಕಗಳ ಕಾಲ ವೃತ್ತಿ ಜೀವನವನ್ನು ನಡೆಸಿದವರು. ಬದುಕನ್ನು ಕೇವಲ ವೃತ್ತಿ ಮತ್ತು ಗಳಿಕೆಗೆ ಸೀಮಿತಗೊಳಿಸದ ವೀರಾಂಬುಧಿ, ಸಾಹಿತ್ಯಓದು, ಸಂಗೀತದ ಆಲಿಕೆ ಹೀಗೆ ವಿಭಿನ್ನ ಸಾಂಸ್ಕೃತಿಕ ನೆಲೆಗಳಲ್ಲಿ ತಮ್ಮ ಆಸಕ್ತಿ ಮತ್ತು ಅಭಿವ್ಯಕ್ತಿಗಳನ್ನು ಅರಸಿ ಹೊರಟವರು.[೨] ಕೇವಲ ಬದುಕಿನ ಮೇಲ್ಮೆಯ ಹೊರನೋಟಕ್ಕೆ ಸೀಮಿತಗೊಳ್ಳದ ಯತಿರಾಜ್ ವೀರಾಂಬುಧಿ ಅವರ ಸೃಜನಶೀಲ ಮನಸ್ಸು, ಅಂತರಂಗದ ಹುಡುಕಾಟಕ್ಕೆ ಕೂಡ ಹೇಗೆ ಕಾತರಿಸುತ್ತದೆ ಎಂಬುದಕ್ಕೆ ಅವರ ಪ್ರಸಿದ್ಧ ಪುಸ್ತಕದ ಶೀರ್ಷಿಕೆ 'ಗೀತೆ ಬಚ್ಚಿಟ್ಟಿದ್ದ ಪಾಠಗಳು' ಒಂದು ಸೂಚ್ಯವೇನೋ. ಅವರ ಮೊಟ್ಟಮೊದಲ ಕಥೆ 'ವಿಪರ್ಯಾಸ' ಮಂಗಳ ವಾರಪತ್ರಿಕೆಯಲ್ಲಿ ಪ್ರಕಟಗೊಂಡಿತು. ನಂತರ ಮೊದಲ ಕಾದಂಬರಿ 'ಆಪತ್ತಿಗೆ ಆಹ್ವಾನ' ಕನ್ನಡಪ್ರಭದಲ್ಲಿ ಧಾರಾವಾಹಿಯಾಗಿ ಮೂಡಿಬಂತು. ಅವರ ಅನೇಕ ಕಥೆ, ಕಾದಂಬರಿಗಳು ಕನ್ನಡದ ಎಲ್ಲ ಜನಪ್ರಿಯ ನಿಯತಕಾಲಿಕಗಳಲ್ಲಿ ನಿರಂತರವಾಗಿ ಹರಿದಿವೆ. ಅವರ ಹದಿನಾರಕ್ಕೂ ಹೆಚ್ಚು ಕಾದಂಬರಿಗಳು ವಿವಿಧ ದಿನ ಮತ್ತು ವಾರ ಪತ್ರಿಕೆಗಳಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿರುವುದು ವಿಶೇಷವಾಗಿದ್ದು, ಓದುಗ ಬಳಗದಲ್ಲಿ ಗಳಿಸಿಕೊಂಡಿರುವ ಜನಪ್ರಿಯತೆಗೂ ನಿದರ್ಶನವಾಗಿದೆ. ಇದುವರೆಗೆ ಯತಿರಾಜ್ ವೀರಾಂಬುಧಿ ಅವರ ಇಪ್ಪತ್ತಾರು ಕಾದಂಬರಿಗಳು, ಏಳು ಕಥಾ ಸಂಕಲನಗಳು ಪ್ರಕಟಗೊಂಡಿವೆ. ಇದಲ್ಲದೆ ಜನಪ್ರಿಯ ಲೇಖಕರಾದ ಯಂಡಮೂರಿ ವೀರೇಂದ್ರನಾಥ್ ಅವರ ವ್ಯಕ್ತಿತ್ವ ವಿಕಸನದ ಕೃತಿಯ ಕನ್ನಡ ಅನುವಾದವಾದ 'ಕಣಿವೆಯಿಂದ ಶಿಖರಕ್ಕೆ' ಕನ್ನಡಪ್ರಭದ ಬೈಟು ಕಾಫಿಯಲ್ಲಿ ಧಾರಾವಾಹಿ ಪ್ರಕಟಗೊಂಡಿತ್ತಲ್ಲದೆ, ಪುಸ್ತಕವಾಗಿ ಸಹಾ ಬಹು ಜನಪ್ರಿಯಗೊಂಡಿದೆ.[೩] ಅಂಕಣಕಾರರಾಗಿಯೂ ಹೆಸರು ಮಾಡಿರುವ ಯತಿರಾಜ್ ವೀರಾಂಬುಧಿ ಅವರ ವಿವಿಧ ಪ್ರಸಿದ್ಧ ಪತ್ರಿಕೆಗಳಲ್ಲಿ ಮೂಡಿರುವ 'ಮನೆ ಮಾತು','ಮಾಸದ ಮಾತು', 'ಮಾಸದ ಸುಖ', 'ಮಾಸದ ದಾಸವಾಣಿ', 'ಮನೋಲ್ಲಾಸ' ಮುಂತಾದವು ಓದುಗರಿಗೆ ಪರಿಚಿತವಾಗಿವೆ. ಸದಾ ನಗೆಮೊಗದ ಯತಿರಾಜ್ ವೀರಾಂಬುಧಿ ಅವರ ಹಾಸ್ಯ ಬರಹಗಳು 'ವೀರಾಂಬುಧಿ ಜೋಕ್ಸ್' ಕೃತಿಯಲ್ಲಿ ಲಭ್ಯ. ಅಂತರಜಾಲದಲ್ಲಿ 'ಯತಿ ಸ್ವಂತೀ' ಎಂಬ ಶೀರ್ಷಿಕೆಯಲ್ಲಿ ಅವರು ತಮ್ಮ ಬದುಕಿನ ವಿವಿಧ ನೆಲೆಗಳನ್ನು ಸುದೀರ್ಘವಾಗಿ ಪರಿಚಯಿಸಿದ್ದಾರೆ. ಯತಿರಾಜ್ ವೀರಾಂಬುಧಿ ತಮ್ಮ ಸಾಂಸ್ಕೃತಿಕ ಅಭಿರುಚಿ, ಅಭಿವ್ಯಕ್ತಿ ಹಾಗೂ ಸರಳ ಸಜ್ಜನಿಕೆಯ ವ್ಯಕ್ತಿ.

೨೦೨೪ರ ಆರಂಭದ ವೇಳೆಗೆ ಇಪ್ಪತ್ತಾರು ಕಾದಂಬರಿಗಳು, ಏಳು ಕಥಾ ಸಂಕಲನಗಳು, ಹತ್ತೊಂಬತ್ತು ಸ್ವಂತ ಲೇಖನಮಾಲೆಗಳು, ಒಂಬತ್ತು ಅನುವಾದ ಕಾದಂಬರಿಗಳು ಮತ್ತು ಒಂಬತ್ತು ಅನುವಾದ ಲೇಖನಮಾಲೆಗಳನ್ನು ಪ್ರಕಟಿಸಿದ್ದಾರೆ.

ಕೃತಿಗಳು[ಬದಲಾಯಿಸಿ]

ಕಾದಂಬರಿಗಳು

ಆಪತ್ತಿಗೆ ಆಹ್ವಾನ

ವಿಜ್ಞಾನಿಗೆ ಪ್ರಶಸ್ತಿ. ಮಗಳನ್ನು ಬೆಂಗಳೂರಿನಲ್ಲಿ, ಹೆಂಡತಿಯನ್ನು ರೈಲಿನಲ್ಲಿ ಅಪಹರಣ ಮಾಡುತ್ತಾರೆ ಖೂಳರು. ಕೇವಲ ಮೂವತ್ತಾರು ಗಂಟೆಗಳಲ್ಲಿ ನಡೆಯುವ ಸಸ್ಪೆನ್ಸ್‌ ಥ್ರಿಲ್ಲರ್. ಕನ್ನಡಪ್ರಭ ದೈನಿಕ ಧಾರಾವಾಹಿ.

ಪರಿಶೋಧ‌

ಸತ್ತವಳು ಎದ್ದು ಬಂದಾಗ! ತನ್ನ ಅಣ್ಣನ ಮಗ ಒಬ್ಬ ಯುವತಿಗೆ ಡ್ರಾಪ್‌ ಕೊಡುತ್ತಾನೆ. ನಂತರ ನೋಡಿದರೆ ಅವಳು ಸತ್ತಳೆಂಬ ಸುದ್ದಿ ಬರುತ್ತದೆ. ಅದು ಹೇಗೆ ಸಾಧ್ಯ? ಪತ್ತೇದಾರ ಶತಭಿಷನ ಸಾಹಸಮಯ ಪತ್ತೇದಾರಿಕೆ! ಕನ್ನಡಪ್ರಭ ದೈನಿಕ ಧಾರಾವಾಹಿ

ಗಾಥೆ

ಲೇಖಕನನ್ನು ಅವನ ಕಾದಂಬರಿಯ ಪಾತ್ರಗಳು ಅಪಹರಿಸುತ್ತವೆ. ಅವನ ಸಾವಿಗೆ ನಾನಾ ಪ್ರಯತ್ನ ಮಾಡುತ್ತಾರೆ. ಅಸಂಗತ ಕಾದಂಬರಿ. ಓದುಗರನ್ನು ತಬ್ಬಿಬ್ಬು ಮಾಡುವ ನಾಗಾಲೋಟದ ಕಾದಂಬರಿ.

ಮರದಡಿ ಮಳೆ

ಅವಳ ತಂದೆ, ಅವನ ತಾಯಿ ಒಂದು ಕಾಲದಲ್ಲಿ ಮದುವೆ ಆಗಬೇಕೆಂದಿದ್ದವರು. ಅದು ಆಗದಿದ್ದಾಗ ತಮ್ಮ ಮಕ್ಕಳಿಗೆ ಮದುವೆ ಮಾಡಿಸುತ್ತಾರೆ. ಆದರೆ ಅವರು ಮದುವೆಯ ರಾತ್ರಿಯೇ ಬೇರೆಯಾಗುತ್ತಾರೆ. ಬೇರೆಯವರ ಆಕರ್ಷಣೆಗೆ ಸಿಲುಕುತ್ತಾರೆ. ಮ್ಯೂಸಿಕ್‌ ಮತ್ತು ಮ್ಯಾನೇಜ್‌ ಮೆಂಟ್‌ ಮೇಳವಿಸಿದ ಕೌಟುಂಬಿಕ ಕಾದಂಬರಿ. ಕನ್ನಡಪ್ರಭ ದೈನಿಕ ಧಾರಾವಾಹಿ

ಪಂಚಾನನ

ಅವಳು ಥ್ರಿಲ್‌ಗಾಗಿ ದುಷ್ಟರ ಗುಂಪನ್ನು ಸೇರುತ್ತಾಳೆ. ನಂತರ ಅವರನ್ನು ತೊರೆದು ಮದುವೆಯಾಗಿ ಸುಖವಾಗಿದ್ದಾಗ, ಆ ದುಷ್ಟರು ಮತ್ತೆ ಅವಳನ್ನು ಬ್ಲ್ಯಾಕ್‌ ಮೆಯ್ಲ್‌ ಮಾಡುತ್ತಾರೆ. ಆಗೇನಾಬಹುದು? ಚೇತನ ಮಾಸಿಕದಲ್ಲಿ ಪ್ರಕಟ

ಜೀವನ್ಮುಖಿ

ತನ್ನ ಮಗ, ಪತಿ ಇಬ್ಬರನ್ನೂ ಕಳೆದುಕೊಂಡರೂ ಇತರರಿಗಾಗಿ ಜೀವನ ನಡೆಸುತ್ತಾಳೆ ಅವಳು. ಅವಳ ಮಗನನ್ನು ಹುಡುಕಲು ಕಂಪ್ಯೂಟರ್‌ ಬಳಸುತ್ತಾನೆ ಅವಳ ʼಮಗನʼ ಗೆಳೆಯ. ಸಕಾರಾತ್ಮಕ ಭಾವನೆಗಳ ಕಾದಂಬರಿ. ಸುಧಾ ವಾರಪತ್ರಿಕೆ ಧಾರಾವಾಹಿ

ಅವಿನಾಭಾವ

ಅನಾಥೆಯಾದ ಅವಳನ್ನು ಸಾಕುತ್ತಾರೆ. ಅವಳಿಗೆ ಮದುವೆ ಮಾಡಲು ಒಬ್ಬ ಅನಾಥನನ್ನು ಕರೆತರುತ್ತಾರೆ. ಆದರೆ ಅವಳು ಇನ್ನೊಬ್ಬನನ್ನು ಪ್ರೇಮಿಸಿಬಿಡುತ್ತಾಳೆ. ಫಲಿತಾಂಶ? ಚೇತನ ಮಾಸಿಕದಲ್ಲಿ ಪ್ರಕಟ.

ಕುರುಡು ತಿರುವು

ತನ್ನ ತಮ್ಮಂದಿರು ತನ್ನನ್ನು ಕೊಲ್ಲಲು ಸಂಚು ಮಾಡಿದಾಗ ಅವಳು ಮನೆಯಿಂದ ಓಡಿಬಿಡುತ್ತಾಳೆ. ಅವಳು ಹತ್ತಿದ ರೈಲಿನಲ್ಲಿ ನಡೆಯುವ ಅನೇಕ ಘಟನೆಗಳು, ಅವಳ ಹಳೆಯ ಪ್ರೇಮಿ ಎಲ್ಲಿ? ಮಂದಾರ ಮಲ್ಲಿಗೆ ಮಾಸಿಕದಲ್ಲಿ ಪ್ರಕಟ

ಕರೆದರೆ ಬಾರೆ!

ಅವಳಿಗೂ ಅವನಿಗೂ ಛಾಲೆಂಜ್.‌ ಸದಾ ಜಗಳ. ಆದರೆ ಪ್ರೇಮವೂ ಉಂಟು. ಅನೇಕ ಕನ್ನಡ ಸಿನಿಮಾ ಹಾಡುಗಳ ಮೂಲಕ ಕಥೆ ಸಾಗುತ್ತದೆ. ಹಾಸ್ಯ ಮತ್ತು ಥ್ರಿಲ್‌ ಸೇರಿದ ಕಾದಂಬರಿ. ಕನ್ನಡಪ್ರಭ ದೈನಿಕ ಧಾರಾವಾಹಿ

ಒಂದೊಂದಾಗಿ ಜಾರಿದರೆ..!

ತಾನೇ ಎಲ್ಲ. ತನ್ನಿಂದ ಎಲ್ಲ ಎಂದೆನ್ನುವ ಅಹಂಭಾವಿಯು ಜೀವನದ ಸದ್ಗುಣಗಳ ಒಂದೊಂದೇ ಮೆಟ್ಟಿಲನ್ನು ಜಾರುವ ಯುವಕನ ಸಸ್ಪೆನ್ಸ್‌ ಕಥೆ. ಅಮೆರಿಕದ ಒಂದು ದರ್ಶನವೂ ಉಂಟು! ಉದಯವಾಣಿ ದೈನಿಕ ಧಾರಾವಾಹಿ

ರಣವೀಳ್ಯ

ಸಮಾನ ಮನಸ್ಕರ ಗುಂಪೊಂದು ಇಬ್ಬರು ದುರುಳರನ್ನು ವ್ಯವಸ್ಥಿತವಾಗಿ ನಾಶ ಪಡಿಸುವ ಥ್ರಿಲ್‌ ಕಾದಂಬರಿ. ಕನ್ನಡಪ್ರಭ ದೈನಿಕ ಧಾರಾವಾಹಿ

ಹಸ್ತಕ್ಷೇಪ

ಸರ್ಕಾರವೇ ಪತ್ರಕರ್ತರು ಹೇಳಿದ ಸತ್ಯವನ್ನು ಸಹಿಸದೇ ಅವರನ್ನು ಕೊಲೆ ಮಾಡಿ ಅದಕ್ಕೆ ಆತ್ಮಹತ್ಯೆ ಎಂಬ ಹಣೆಪಟ್ಟಿ ಕೊಟ್ಟಾಗ? ಥ್ರಿಲ್‌ ಕಾದಂಬರಿ. ಕನ್ನಡಪ್ರಭ ದೈನಿಕ ಧಾರಾವಾಹಿ

ಸ್ವಪ್ನಸೃಷ್ಟಿ

ಅನ್ಯಾಯ ಮಾಡಿದವರನ್ನು ಕಂಡು "ಇವರಿಗೆ ಏನಾದರೂ ತೊಂದರೆ ಆಗಲಿ" ಎಂದು ಅಸಹಾಯಕ ಸ್ಥಿತಿಯಲ್ಲಿ ಶಪಿಸಿದಾಗ, ಅದು ನಡೆದುಬಿಟ್ಟರೆ? ʼರೆʼ ಪ್ರಪಂಚದ ಥ್ರಿಲ್‌ ಕಾದಂಬರಿ. ಸಾಹಿತ್ಯ ಮೈತ್ರಿ ಧಾರಾವಾಹಿ

ಉದ್ಯೋಗ ಪರ್ವ

ಉದ್ಯೋಗಕ್ಕೆ ಸೇರುವಾಗ ನಾವು ಸಾಮರ್ಥ್ಯ ನೋಡಬೇಕೋ ಅಥವಾ ನೀತಿಯುಕ್ತತೆಯನ್ನೋ? ಈ ಎರಡು ವಿಷಯಗಳ ಬಗ್ಗೆ ಸಸ್ಪೆನ್ಸ್‌ಲೆಸ್‌ ಕಾದಂಬರಿ. ಉದಯವಾಣಿ ದೈನಿಕ ಧಾರಾವಾಹಿ.

ಸುಖಿಯಾಗಿರು ಓ ಸಖೀ!

ಕ್ಯಾನ್ಸರ್‌ ಬಂದ ಇಬ್ಬರು ಮಹಿಳೆಯರ ದುಃಖ, ದುಗುಡಗಳ ಸಸ್ಪೆನ್ಸ್‌ ಥ್ರಿಲ್ಲರ್. ಮಂಗಳ ವಾರಪತ್ರಿಕೆ ಧಾರಾವಾಹಿ

ಹಾಸು ಹೊಕ್ಕು‌

ಅನೈತಿಕ ಲೈಂಗಿಕತೆಯ ಬಗ್ಗೆ ಸಸ್ಪೆನ್ಸ್‌ ಕಾದಂಬರಿ. ಸತ್ಯಘಟನೆ ಆಧಾರಿತ. ಕನ್ನಡಪ್ರಭ ದೈನಿಕ ಧಾರಾವಾಹಿ.

ಕಪ್ಪು ನದಿ

ಕೊಲೆ ಮಾಡಿದ್ದು ಯಾರು? ಅತ್ಯಂತ ಕುತೂಹಲಕಾರಿ ಸೈಕಲಾಜಿಕಲ್‌ ಥ್ರಿಲ್ಲರ್. ಕನ್ನಡಪ್ರಭ ದೈನಿಕ ಧಾರಾವಾಹಿ

ಸಾಬೀತು‌

ಅಣ್ಣನ ಕೊಲೆ ಆಗಿದೆ ಎಂದು ಪತ್ತೇದಾರನ ಬಳಿಗೆ ಬರುತ್ತಾಳೊಬ್ಬ ಯುವತಿ. ಅವಳನ್ನು ಹುಡುಕಿಕೊಂಡು ಅವಳ ಅಣ್ಣನೇ ಬರುತ್ತಾನೆ. ಹೇಗೆ? ಉದಯವಾಣಿ ಸಾಪ್ತಾಹಿಕ ಪುರವಣಿ ಧಾರಾವಾಹಿ.

ಚಿರಸ್ಮಿತ

೧೯೧೭ರಲ್ಲಿ ಹುಟ್ಟಿದ ಸಾಧಾರಣ ಹೆಣ್ಣಿನ ಅಸಾಧಾರಣ ಜೀವನಯಾತ್ರೆ

ಶಬ್ದಬಲೆ

ದುರುಳ ಕಳ್ಳಸಾಗಾಣಿಕೆದಾರನ ಅಂತ್ಯಕ್ಕೆ ಪ್ರಯತ್ನ ಮಾಡುತ್ತಿದ್ದ ಜೆರಿ ಯಾರು? ಸಸ್ಪೆನ್ಸ್‌ ಕಾದಂಬರಿ

ಬೇಹು

ದೇಶವೆಂಬ ಮರದೊಳಗೆ ಸೇರಿಕೊಂಡು ಒಳಗಿನಿಂದಲೇ ಕೊರೆಯುವ ದುಷ್ಟ ಗೆದ್ದಲುಹುಳಗಳೆಂಬ ಸ್ಲೀಪರ್‌ಸೆಲ್‌ಗಳ ಬಗ್ಗೆ ಬೃಹತ್‌ ಕಾದಂಬರಿ. ಮಂಗಳ ವಾರಪತ್ರಿಕೆ ಧಾರಾವಾಹಿ

ಛದ್ಮವೇಷ

ಗೂಢಚಾರಿಣಿಯೊಬ್ಬಳ ಪ್ರೇಮ ಕಥೆ

ಪರಾಭವ ಭಾವನಾ

ಅಮೂಲ್ಯ ವಿಗ್ರಹಗಳ ಕಳ್ಳತನಕ್ಕೆ ದುಷ್ಟರ ಸಂಚು. ಯುವ ಸಂನ್ಯಾಸಿಯೊಬ್ಬನ ಪಯಣ. ವೇದಾಂತ ಪ್ಲಸ್‌ ಸಸ್ಪೆನ್ಸ್‌ ಕಾದಂಬರಿ

ಸ್ವಪ್ನ ವಾಸ್ತವದತ್ತ

ಸದಾ ಕನಸಿನಲ್ಲಿಯೇ ಇರುತ್ತಿದ್ದ ಯುವಕನಿಗೆ ವಾಸ್ತವದ ದರ್ಶನ! ಸಸ್ಪೆನ್ಸ್‌ ಕಾದಂಬರಿ

ಪಥಗಾಮಿ

ದುಷ್ಟನೊಬ್ಬನ ನಾಶಕ್ಕೆ ನಡೆಯವ ವ್ಯವಸ್ಥಿತ ಯೋಜನೆ. ಭಾರತ ದರ್ಶನ ಮಾಡಿಸುವ ಕಾದಂಬರಿ!

ನಿಃಸಂಗ

ಮಕ್ಕಳೊಡನಿರಲಾಗದೇ, ಪತ್ನಿಯಿಲ್ಲದೇ ಒದ್ದಾಡುವ ಒಬ್ಬ ವಯಸ್ಕನ ಮನೋಜ್ಞ ಕಥೆ

ಕಥಾಸಂಕಲನಗಳು

ಬಿಂದು ಬಿಂದು ಸೇರಿ ಸಿಂಧು

ಸಣ್ಣ ಕಥೆ, ಅತಿ ಸಣ್ಣ ಕಥೆ. ಓ ಹೆನ್ರಿಯ ಶೈಲಿಯವು ಅನೇಕ. ವಿವಿಧ ಪತ್ರಿಕೆಗಳಲ್ಲಿ ಪ್ರಕಟ

ತೆನೆ ತೆನೆ ಕೂಡಿದ್ರೆ ಬಳ್ಳ

ಸಣ್ಣ ಕಥೆ, ಅತಿ ಸಣ್ಣ ಕಥೆ, ಓ ಹೆನ್ರಿಯ ಶೈಲಿ ಕೆಲವು ಇವೆ. ವಿವಿಧ ಪತ್ರಿಕೆಗಳಲ್ಲಿ ಪ್ರಕಟ

ಹನನ

ಅಸಹಜ ಸಾವುಗಳ ಕಥೆಗಳು. ವಿವಿಧ ಪತ್ರಿಕೆಗಳಲ್ಲಿ ಪ್ರಕಟ.

ಕೃತಾಕೃತ

ಮೂರು ನೀಳ್ಗತೆಗಳು. ವಿವಿಧ ಪತ್ರಿಕೆಗಳಲ್ಲಿ ಪ್ರಕಟ.

೧೦೦೬

ಒಂದು ನೀಳ್ಗತೆ, ಅನೇಕ ಸಣ್ಣ ಕಥೆಗಳು

ಸಿಬುರು

ಒಂದು ನೀಳ್ಗತೆ, ಕೆಲವು ಸಣ್ಣ ಕಥೆಗಳು

ಕಣ್ಣೊರೆಸುವ ಕರಗಳು

ಮೆಟಾಫಿಜಿಕ್ಸ್‌ ಆಧಾರದ ಕೆಲವು ಕಥೆಗಳು

ಲೇಖನ ಮಾಲೆಗಳು

ಮನೆ ಮಾತು

ಮನೆಯ ಕಟ್ಟುವಿಕೆ, ಮನೆಯ ಜನರ ಬಗ್ಗೆ ಕೆಲವು ಮಾಹಿತಿಗಳು. ವಿಜಯ ಕರ್ನಾಟಕ ಗೃಹವಿಜಯ ಪುರವಣಿ ಧಾರಾವಾಹಿ.

ಮಾಸದ ಮಾತು

ಶಾಂತಿಯ ಬಗ್ಗೆ ಲೇಖನಗಳು. ಟೈಮ್ಸ್‌ ಆಫ್‌ ಕರ್ನಾಟಕ ಧಾರಾವಾಹಿ

ಮಾಸದ ಸುಖ

ಸುಖದ ಬಗ್ಗೆ ಲೇಖನಗಳು. ಉದಯವಾಣಿ ಸಾಪ್ತಾಹಿಕ ಪುರವಣಿ ಧಾರಾವಾಹಿ

ಮಾಸದ ವಿಜಯ

ಯಶಸ್ಸಿನ ಬಗ್ಗೆ ಲೇಖನಗಳು. ಭಾಗಶಃ ಕರ್ಮವೀರದಲ್ಲಿ ಪ್ರಕಟ

ಮಾಸದ ದಾಸವಾಣಿ

ಪುರಂದರ ದಾಸರ ಕೀರ್ತನೆಗಳ ಬಗ್ಗೆ ಲೇಖನಮಾಲೆ. ಮಲ್ಲಾರ ಮಾಸಿಕದಲ್ಲಿ ಧಾರಾವಾಹಿ

ಗೀತೆ ಬಚ್ಚಿಟ್ಟಿದ್ದ ಬದುಕಿನ ಪಾಠಗಳು

ಮನುಷ್ಯನ ಗುಣ, ವರ್ತನೆಗಳ ಬಗ್ಗೆ ಗೀತಾಶ್ಲೋಕಗಳು

ಗುಣ-ಗಣಿ

ಮನುಷ್ಯನಲ್ಲಿ ಇರಬೇಕಾದ ಗುಣಗಳ ಬಗ್ಗೆ. ಹೊಸ ದಿಗಂತ ಪುರವಣಿ ಧಾರಾವಾಹಿ

ಜೀವನ ಮೌಲ್ಯ

ಮಹಾಭಾರತದ ಶ್ರೀ ವಿಷ್ಣು ಸಹಸ್ರನಾಮದ ಕೆಲವು ಗುಣವಿಶೇಷಣಗಳ ಬಗ್ಗೆ. ಮಲ್ಲಾರ ಮಾಸಿಕದ ಧಾರಾವಾಹಿ

ಯುವ-ಕಥೆ

ಯುವಜನರಲ್ಲಿ ಇರುವ ದುಷ್ಟಗುಣಗಳ ಬಗ್ಗೆ. ಹೊಸ ದಿಗಂತ ಪುರವಣಿ ಲೇಖನ ಮಾಲೆ. ಸಾಧನೆಗಳ ಬಗ್ಗೆ ಲೇಖನ ಮಾಲೆ. ವಿಶ್ವವಾಣಿ ಪುರವಣಿ ಧಾರಾವಾಹಿ

ಯಶಸ್ಸೇ ಹಾದಿ..!

ದೈಹಿಕವಾಗಿ, ಮಾನಸಿಕವಾಗಿ ಲೋಪವಿದ್ದರೂ ಯಶಸ್ಸು ಗಳಿಸಿದ ಜನರ ಜೀವನಚಿತ್ರಗಳು. ಭಾಗಶಃ ಸುದಿನ ಸುರಭಿ ಧಾರಾವಾಹಿ

ಲೈಫು ಇಷ್ಟೇನೆ..!

ಜೀವನಕ್ಕೆ ಬೇಕಾದ ಅನೇಕ ಆಶಯಗಳು, ಮಾಧುರ್ಯಗಳ ಬಗ್ಗೆ ಲೇಖನಮಾಲೆ

ಜಯ ನಿಶ್ಚಯ

ಗೆಲ್ಲಲು ನಮ್ಮಿಂದ ತೊಲಗಿಸಬೇಕಾದ ನಕಾರಾತ್ಮಕ ಗುಣಗಳ ಲೇಖನಮಾಲೆ.

ಬರೆಯುವುದು ಹೇಗೆ?

ವಿವಿಧ ಕಥಾಪ್ರಕಾರಗಳು, ವ್ಯಾಕರಣ, ಕಾಗುಣಿತ. ಹೊಸದಾಗಿ ಬರೆಯುವವರಿಗೆ, ಹೊಸದಾಗಿ ಬರೆಯಲು ಆರಂಭಿಸಿದವರಿಗೆ ಕೈಪಿಡಿ. ಪ್ರತಿಲಿಪಿ ಧಾರಾವಾಹಿ

ಬದುಕು ಭಾರ ಗೀತಾ ಪರಿಹಾರ

ಗೀತೆಯಲ್ಲಿ ನಮ್ಮ ಸಮಸ್ಯೆಗಳಿಗಿರುವ ಪರಿಹಾರಗಳ ಬಗ್ಗೆ ಲೇಖನಮಾಲೆ

ಕರ್ಮಸಾಕ್ಷಿ

ಗರುಡ ಪುರಾಣ, ಸ್ಕಾಂದ ಪುರಾಣ, ಪದ್ಮ ಪುರಾಣಗಳಲ್ಲಿನ ಶ್ರೀ ವಿಷ್ಣು ಸಹಸ್ರನಾಮಗಳ ಗುಣವಿಶೇಷಣಗಳ ಲೇಖನಮಾಲೆ. ಮಲ್ಲಾರ ಮಾಸಿಕದ ಧಾರಾವಾಹಿ

ಮಕ್ಕಳ ಕಥೆಗಳು

ಅನ್ಯೋಕ್ತಿ

ಅನೇಕ ಕಥೆಗಳು, ನೀತಿ ಕಥೆಗಳು. ಬೋಧಿವೃಕ್ಷ ಧಾರಾವಾಹಿ

ವಿನೋದ

ವೀರಾಂಬುಧಿ ಜೋಕ್ಸ್‌

ಕೇವಲ ವೆಜ್‌ ಜೋಕ್ಸ್!

ಜೀವನ ಚರಿತ್ರೆ

ನಮ್ಮ ಉಪ್ಪಿ (ಶ್ರೀ ಸುಂದರ ಬಾಬು ಅವರೊಂದಿಗೆ).‌

ಪ್ರವಾಸ ಕಥನ

ವಿದೇಶ (ಪ್ರ)ವಾಸ. ಮೂರು ವರ್ಷಗಳ ಮಸ್ಕತ್‌ ವಾಸ ಮತ್ತು ಮೂರು ವಾರಗಳ ಅಮೆರಿಕಾ ಪ್ರವಾಸದ ಬಗ್ಗೆ

ಅನುವಾದ ಕಾದಂಬರಿಗಳು

ಕೆಂದಾವರೆಯ ಮಾಲೆ

ರಾಕ್ಷಸ

ಪರ್ಣಕುಟೀರ

ನಿಶ್ಶಬ್ದ ನನ್ನ ನಿನ್ನ ನಡುವೆ

ಒಬ್ಬ ರಾಧೆ ಇಬ್ಬರು ಕೃಷ್ಣರು

ಥ್ರಿಲ್ಲರ್‌

ಅಷ್ಟಾವಕ್ರ

ಸ್ವರಬೇತಾಳ

ನಿಶ್ಶಬ್ದ ವಿಸ್ಫೋಟನ‌‌

ಈ ಎಲ್ಲ ಅನುವಾದ ಕಾದಂಬರಿಗಳ ತೆಲುಗು ಭಾಷೆಯಲ್ಲಿ ಮೂಲ ಲೇಖಕರು : ಡಾ. ಯಂಡಮೂರಿ ವೀರೇಂದ್ರನಾಥ್

ಅನುವಾದ ಲೇಖನಮಾಲೆಗಳು

ಕಣಿವೆಯಿಂದ ಶಿಖರಕ್ಕೆ. ಕನ್ನಡ ಪ್ರಭ ಬೈಟು ಕಾಫಿ ಪುರವಣಿ ಧಾರಾವಾಹಿ

ಸಾಧನೆಗೆ ಸಾಧನ

ನನ್ನ ಏಳ್ಗೆಗೆ ನಾನೇ ಏಣಿ

ಪ್ರೇಮ ಒಂದು ಕಲೆ

ಮಕ್ಕಳ ಹೆಸರಿನ ಪ್ರಪಂಚ

ಯಶಸ್ವೀಭವ

ಬೆಳಕು ಬೆಳದಿಂಗಳ ದೀಪಗಳು

ಈ ಮೇಲಿನ ಎಲ್ಲ ಪುಸ್ತಕಗಳ ಮೂಲ ಲೇಖಕರು ಡಾ. ಯಂಡಮೂರಿ ವೀರೇಂದ್ರನಾಥ್

ಭಗವದ್ಗೀತೆ ವ್ಯಕ್ತಿತ್ವ ವಿಕಾಸ - ಇದರ ಮೂಲ ಲೇಖಕರು ಡಾ.ವೆಲುವೋಲು ನಾಗರಾಜ್ಯಲಕ್ಷ್ಮಿ

ಓದುಗರ ಸಂಖ್ಯೆ ಮೂವತ್ತು ಲಕ್ಷಕ್ಕೂ ಹೆಚ್ಚು!

ಪ್ರತಿಲಿಪಿ ಎಂಬ ವೆಬ್‌ ಸೈಟಿನಲ್ಲಿ

‌೯.೬.೨೫ರಂದು ೩೧ ಲಕ್ಷ ೫೯ ಸಾವಿರಕ್ಕೂ ಹೆಚ್ಚು ಓದುಗರಿದ್ದಾರೆ.

ಹದಿನೈದು ಸಾವಿರದ ಆರುನೂರ ಎಪ್ಪತ್ತೊಂದು ಹಿಂಬಾಲಕರಿದ್ದಾರೆ.

ಇವಲ್ಲದೇ...

ಜೂನ್‌ ೨೦೨೪ರಲ್ಲಿ...

ಒಂಬತ್ತು ಕಾದಂಬರಿಗಳು ಪ್ರಕಟಣೆಗೆ ಸಿದ್ಧ.

ಎರಡು ಲೇಖನಮಾಲೆಗಳು ಪ್ರಕಟಣೆಗೆ ಸಿದ್ಧ

ಒಂದು ಅನುವಾದ ಲೇಖನಮಾಲೆ ಪ್ರಕಟಣೆಗೆ ಸಿದ್ಧ

ಏಳು ಥ್ರಿಲ್ಲರ್‌ ಧಾರಾವಾಹಿಗಳು ಪ್ರತಿಲಿಪಿಯಲ್ಲಿ ಪ್ರಕಟ ಆಗುತ್ತಿವೆ.



ಉಲ್ಲೇಖ[ಬದಲಾಯಿಸಿ]

  1. https://www.tripadvisor.in/Attractions-g304553-Activities-Mysuru_Mysore_Mysore_District_Karnataka.html
  2. https://musicinformationretrieval.com/
  3. "ಆರ್ಕೈವ್ ನಕಲು". Archived from the original on 2018-09-14. Retrieved 2019-03-02.