ವಿಷಯಕ್ಕೆ ಹೋಗು

ರಜಾದಿನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ರಜಾದಿನ ಎಂದರೆ ವಾಡಿಕೆ ಅಥವಾ ಕಾನೂನಿನಿಂದ ಮೀಸಲಿಡಲಾದ ದಿನ. ಆ ದಿನದಂದು ಮಾಮೂಲಿನ ಚಟುವಟಿಕೆಗಳನ್ನು, ವಿಶೇಷವಾಗಿ ಶಾಲೆ ಸೇರಿದಂತೆ ವ್ಯಾಪಾರ ಅಥವಾ ಕೆಲಸವನ್ನು, ನಿಲ್ಲಿಸಲಾಗುತ್ತದೆ ಅಥವಾ ಕಡಿಮೆಮಾಡಲಾಗುತ್ತದೆ. ವ್ಯಕ್ತಿಗಳಿಗೆ ಸಾಂಸ್ಕೃತಿಕ ಅಥವಾ ಧಾರ್ಮಿಕ ಮಹತ್ವದ ಒಂದು ಘಟನೆ ಅಥವಾ ಸಂಪ್ರದಾಯವನ್ನು ಆಚರಿಸಲು ಅಥವಾ ಸ್ಮರಿಸಲು ಅವಕಾಶ ನೀಡುವುದು ಸಾಮಾನ್ಯವಾಗಿ ರಜಾದಿನಗಳ ಉದ್ದೇಶವಾಗಿರುತ್ತದೆ. ಸರ್ಕಾರಗಳು, ಧಾರ್ಮಿಕ ಸಂಸ್ಥೆಗಳು, ಅಥವಾ ಇತರ ಗುಂಪುಗಳು ಅಥವಾ ಸಂಸ್ಥೆಗಳು ರಜಾದಿನಗಳನ್ನು ಗೊತ್ತುಮಾಡಬಹುದು. ಒಂದು ರಜಾದಿನದಂದು ಮಾಮೂಲಿನ ಚಟುವಟಿಕೆಗಳು ಕಡಿಮೆಯಾಗುವ ಪ್ರಮಾಣ ಸ್ಥಳೀಯ ಕಾನೂನುಗಳು, ವಾಡಿಕೆಗಳು, ನಿರ್ವಹಿಸಲಾಗುತ್ತಿರುವ ವೃತ್ತಿಯ ಪ್ರಕಾರ ಅಥವಾ ವೈಯಕ್ತಿಕ ಆಯ್ಕೆಗಳನ್ನೂ ಅವಲಂಬಿಸಿರಬಹುದು.

ರಜಾದಿನಗಳ ಪರಿಕಲ್ಪನೆಯು ಹಲವುವೇಳೆ ಧಾರ್ಮಿಕ ಆಚರಣೆಗಳಿಗೆ ಸಂಬಂಧಿಸಿದಂತೆ ಹುಟ್ಟಿಕೊಂಡಿತು. ಕ್ಯಾಲೆಂಡರ್ ಮೇಲಿನ ಪ್ರಮುಖ ದಿನಾಂಕಗಳಿಗೆ ಸಂಬಂಧಿಸಿದ ಧಾರ್ಮಿಕ ಕರ್ತವ್ಯಗಳನ್ನು ನಿರ್ವಹಿಸಲು ವ್ಯಕ್ತಿಗಳಿಗೆ ಅವಕಾಶ ನೀಡುವುದು ಸಾಮಾನ್ಯವಾಗಿ ಒಂದು ರಜಾದಿನದ ಉದ್ದೇಶವಾಗಿತ್ತು. ಆದರೆ ಬಹುತೇಕ ಆಧುನಿಕ ಸಮಾಜಗಳಲ್ಲಿ, ರಜಾದಿನಗಳು ಇತರ ಯಾವುದೇ ವಾರಾಂತ್ಯದ ದಿನಗಳು ಅಥವಾ ಚಟುವಟಿಕೆಗಳಷ್ಟೇ ಮನೋರಂಜನಾ ಕ್ರಿಯೆಯ ಕಾರ್ಯನಿರ್ವಹಿಸುತ್ತವೆ.

ಅನೇಕ ಸಮಾಜಗಳಲ್ಲಿ ಸರ್ಕಾರಗಳು ಗೊತ್ತುಮಾಡಿದ ರಜಾದಿನಗಳು ಮತ್ತು ಧಾರ್ಮಿಕ ಸಂಸ್ಥೆಗಳು ಗೊತ್ತುಮಾಡಿದ ರಜಾದಿನಗಳ ನಡುವೆ ಪ್ರಮುಖ ವ್ಯತ್ಯಾಸಗಳಿರುತ್ತವೆ. ಉದಾಹರಣೆಗೆ, ಪ್ರಧಾನವಾಗಿ ಹಿಂದೂ ರಾಷ್ಟ್ರಗಳಲ್ಲಿ, ಸರ್ಕಾರ ಗೊತ್ತುಮಾಡಿದ ರಜಾದಿನಗಳು ಹಿಂದೂ ರಜಾದಿನಗಳ ಮೇಲೆ ಕೇಂದ್ರೀಕರಿಸಬಹುದು, ಆದರೆ ಹಿಂದೂಯೇತರರು ಇದರ ಬದಲಾಗಿ ತಮ್ಮ ಧರ್ಮಕ್ಕೆ ಸಂಬಂಧಿಸಿದ ರಜಾದಿನಗಳನ್ನು ಆಚರಿಸಬಹುದು. ಕೆಲವು ಸಂದರ್ಭಗಳಲ್ಲಿ, ಒಂದು ರಜಾದಿನವನ್ನು ಕೇವಲ ನಾಮಮಾತ್ರವಾಗಿ ಆಚರಿಸಬಹುದು. ಉದಾಹರಣೆಗೆ, ಅಮೇರಿಕಾ ಮತ್ತು ಯೂರೋಪ್‍ನಲ್ಲಿನ ಅನೇಕ ಯಹೂದಿಯರು ತುಲನಾತ್ಮಕವಾಗಿ ಅಪ್ರಧಾನ ಯಹೂದಿ ರಜಾದಿನವಾದ ಹನುಕಾವನ್ನು ಕಾರ್ಯನಿರತ ರಜಾದಿನವೆಂದು ಕಾಣುತ್ತಾರೆ, ಮತ್ತು ಈ ದಿನದಂದು ತಮ್ಮ ದಿನಚರಿಗಳಲ್ಲಿ ಬಹಳ ಕಡಿಮೆ ಬದಲಾವಣೆಗಳನ್ನು ಮಾಡುತ್ತಾರೆ.

ರಜಾದಿನ ಶಬ್ದವು ಭಿನ್ನ ಪ್ರದೇಶಗಳಲ್ಲಿ ಭಿನ್ನ ಅರ್ಥಗಳನ್ನು ಹೊಂದಿದೆ. ಅಮೇರಿಕದಲ್ಲಿ ಈ ಶಬ್ದವನ್ನು ಕೇವಲ ರಾಷ್ಟ್ರೀಯ, ಧಾರ್ಮಿಕ ಅಥವಾ ಸಾಂಸ್ಕೃತಿಕ ಆಚರಣೆಯ ದಿನಗಳಿಗೆ ಬಳಸಲಾಗುತ್ತದೆ. ಯುನೈಟಡ್ ಕಿಂಗ್ಡಮ್‍ ಮತ್ತು ಇತರ ಕಾಮನ್‍ವೆಲ್ತ್ ರಾಷ್ಟ್ರಗಳಲ್ಲಿ, ಈ ಶಬ್ದವು ಒಬ್ಬರ ಕರ್ತವ್ಯದಿಂದ ಬಿಡುವನ್ನು ಸಮ್ಮತಿಸಲಾದ ಸಮಯಾವಧಿಯನ್ನು ಸೂಚಿಸಬಹುದು. ಸಾಮಾನ್ಯವಾಗಿ ಈ ಸಮಯವನ್ನು ವಿಶ್ರಾಂತಿ, ಪ್ರಯಾಣ ಅಥವಾ ಮನೊರಂಜನಾ ಚಟುವಟಿಕೆಗಳಲ್ಲಿ ಭಾಗವಹಿಕೆಗೆ ಮೀಸಲಿಡಲಾಗುತ್ತದೆ. ಹಿಂದೂಗಳು ನವರಾತ್ರಿ, ದೀಪಾವಳಿಗಳನ್ನು ಮುಖ್ಯ ರಜಾದಿನಗಳಾಗಿ ಆಚರಿಸುತ್ತಾರೆ.

"https://kn.wikipedia.org/w/index.php?title=ರಜಾದಿನ&oldid=815321" ಇಂದ ಪಡೆಯಲ್ಪಟ್ಟಿದೆ