ರಾಜ್ಯ ನೌಕರರ ವಿಮೆ ಕಾಯಿದೆ ೧೯೪೮
ಇ.ಎಸ್.ಐ. ಎಂದರೆ ದಿ ಎಂಪ್ಲಾಯೀಸ್ ಸ್ಟೇಟ್ ಇನಶ್ಶೂರೆನ್ಸ್ ಆಕ್ಟ್. ಈ ಕಾಯಿದೆಯನ್ನು 1948 ರಲ್ಲಿ ಭಾರತ ಸರ್ಕಾರವು ಜಾರಿ ಮಾಡಿತು. ಇದಕ್ಕೆ 1975, 1984 ಮತ್ತು 1989 ರಲ್ಲಿ ಸೂಕ್ತ ತಿದ್ದುಪಡಿಗಳನ್ನು ತರಲಾಯಿತು. ಈ ಕಾಯಿದೆಯ ಮೂಲ ಉದ್ದೇಶ ಕಾರ್ಮಿಕರಿಗೆ/ ನೌಕರರಿಗೆ ವಿಶೇಷ ಸಂದರ್ಭದಲ್ಲಿ ನೆರವು ನೀಡುವುದೇ ಆಗಿದೆ.
ಕಾಯಿದೆಯ ವ್ಯಾಪ್ತಿ
[ಬದಲಾಯಿಸಿ]ಕಾಯಿದೆಯು ಭಾರತದ ಎಲ್ಲಾ ಭಾಗಗಳಿಗೂ ಅನ್ವಯಿಸುತ್ತದೆ. ವಿದ್ಯುಚ್ಛಕ್ತಿಯನ್ನು ಉಪಯೋಗಿಸುವ, 20 ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುವ ಎಲ್ಲಾ ಕಾರ್ಖಾನೆಗಳ ಕಾರ್ಮಿಕರು/ನೌಕರರು ಈ ಕಾಯಿದೆಯ ಉಪಯೋಗವನ್ನು ಹೊಂದಬಹುದು. (ಗಣಿ, ರೈಲ್ವೆ, ಹಾಗೂ ರಕ್ಷಣಾ ಇಲಾಖೆಯಡಿಯಲ್ಲಿರುವ ಕಾರ್ಖಾನೆಗಳನ್ನು ಹೊರತುಪಡಿಸಿ.) ಕಾಯಿದೆಗೆ 1975ರಲ್ಲಿ ಅಗತ್ಯ ತಿದ್ದುಪಡಿಯನ್ನು ತಂದ ನಂತರ ಈ ಕೆಳಕಂಡವರು ಕೂಡ ಕಾಯಿದೆಯ ಅನುಕೂಲವನ್ನು ಪಡೆಯಬಹುದಾಗಿದೆ:
- 10 ರಿಂದ 19 ಮಂದಿ ಕೆಲಸ ಮಾಡುವ, ವಿದ್ಯುಚ್ಛಕ್ತಿಯನ್ನು ಬಳಸುವ ಸಣ್ಣ ಕೈಗಾರಿಕೆಯ ಕಾರ್ಮಿಕರು/ನೌಕರರು.
- 20 ಕ್ಕೂ ಹೆಚ್ಚು ಮಂದಿ ಕಾರ್ಮಿಕರು ದುಡಿಯುವ, ಆದರೆ ವಿದ್ಯುಚ್ಛಕ್ತಿಯನ್ನು ಉಪಯೋಗಿಸದ ಕೈಗಾರಿಕೆಯ ಕಾರ್ಮಿಕರು/ ನೌಕರರು.
- ಅಂಗಡಿಯಲ್ಲಿ ಕೆಲಸ ಮಾಡುವ ಕೆಲಸಗಾರರು/ನೌಕರರು.
- ಉಪಾಹಾರ ಮಂದಿರ (ಹೋಟೆಲ್) ಹಾಗೂ ರೆಸ್ಟೋರೆಂಟ್‍ಗಳಲ್ಲಿ ಕೆಲಸ ಮಾಡುವ ಕೆಲಸಗಾರರು.
- ಚಲನಚಿತ್ರ ಮಂದಿರಗಳಲ್ಲಿ ಕೆಲಸ ಮಾಡುವ ನೌಕರರು.
- ರಸ್ತೆ ಸಾರಿಗೆ ಸಂಸ್ಥೆಗಳಲ್ಲಿ ದುಡಿಯುವ ನೌಕರರು.
- ದಿನಪತ್ರಿಕೆ ಮುದ್ರಣಾಲಯಗಳಲ್ಲಿ ಕೆಲಸ ಮಾಡುವ ನೌಕರರೂ
ಕೂಡ ಈ ಕಾಯಿದೆಯ ಅನುಕೂಲವನ್ನು ಪಡೆಯಬಹುದಾಗಿದೆ.
ಆಡಳಿತ ವ್ಯವಸ್ಥೆ
[ಬದಲಾಯಿಸಿ]ರಾಜ್ಯ ಕಾರ್ಮಿಕ ವಿಮೆಯ ಯೋಜನೆಯನ್ನು ರಾಜ್ಯ ಕಾರ್ಮಿಕ ವಿಮೆ ನಿಗಮ (ಇ.ಎಸ್.ಐ. ಕಾರ್ಪೊರೇಷನ್) ಎಂಬ ಸ್ವಾಯತ್ತ ಸಂಸ್ಥೆಯು ಅನುಷ್ಠಾನಗೊಳಿಸುತ್ತದೆ. ಭಾರತ ಸರ್ಕಾರದ ಕಾರ್ಮಿಕ ಮಂತ್ರಿಗಳು ಈ ನಿಗಮದ ಅಧ್ಯಕ್ಷರಾಗಿದ್ದು, ಕಾರ್ಮಿಕ ಇಲಾಖೆಯ ಕಾರ್ಯದರ್ಶಿಯು ಉಪಾಧ್ಯಕ್ಷರಾಗಿರುತ್ತಾರೆ. ನಿಗಮದಲ್ಲಿ ಕೇಂದ್ರ ಸರ್ಕಾರದ ಹಾಗೂ ಎಲ್ಲಾ ರಾಜ್ಯ ಸರ್ಕಾರಗಳ ಪ್ರತಿನಿಧಿಗಳು, ಕೈಗಾರಿಕೆಗಳ ಹಾಗೂ ಕಾರ್ಮಿಕ ಸಂಘಟನೆಗಳ ಪ್ರತಿನಿಧಿಗಳು, ಇರುತ್ತಾರೆ. ನಿಗಮವು ಆಡಳಿತ ಸಮಿತಿಯನ್ನು ನೇಮಕ ಮಾಡುತ್ತದೆ. ಇ.ಎಸ್.ಐ. ನ ಮಹಾ ನಿರ್ದೇಶಕರು, ಆಡಳಿತ ಸಮಿತಿಯ ಮುಖ್ಯಸ್ಥರಾಗಿದ್ದು, ಇವರೇ ಇ.ಎಸ್.ಐ. ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾಗಿರುತ್ತಾರೆ. ಇವರೇ ಇಲ್ಲಿಯ ವಿಮೆ ಆಯುಕ್ತರು (ಇನ್‌ಶ್ಶೂರೆನ್ಸ್ ಕಮೀಶನರ್), ಆರೋಗ್ಯ ಆಯುಕ್ತರು (ಹೆಲ್ತ್ ಕಮೀಶನರ್), ಹಣಕಾಸು ಆಯುಕ್ತರು (ಫೈನಾನ್ಸ್ ಕಮೀಶನರ್), ವಿಮೆ ದರಗಳನ್ನು ನಿರ್ಧರಿಸುವ ತಜ್ಞರು (ಆಕ್ಟುಅರಿ) ಸೂಕ್ತ ಸಲಹೆಗಳನ್ನು ನೀಡುತ್ತಾ, ಮಹಾ ನಿರ್ದೇಶಕರಿಗೆ ಸಹಾಯಕರಾಗಿ ಕಾರ್ಯ ನಿರ್ವಹಿಸುತ್ತಾರೆ.
ಹಣಕಾಸು
[ಬದಲಾಯಿಸಿ]ಯೋಜನೆಯ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಅನುದಾನ ಹಣ (ಗ್ರಾಂಟ್ಸ್), ಕಾರ್ಖಾನೆ ಮಾಲೀಕರ ದೇಣಿಗೆ (ಶೇ.4.75 ಖರ್ಚು), ಕಾರ್ಮಿಕರ ವರಮಾನದ ಶೇ.1.75 ರಷ್ಟು ಹಣ ಸಂಗ್ರಹ ಮಾಡುತ್ತದೆ. ನಿಗಮದ 1/8 ರಷ್ಟು ಖರ್ಚನ್ನು ಆಯಾ ರಾಜ್ಯ ಸರ್ಕಾರಗಳು ಭರಿಸಿದರೆ, 7/8 ರಷ್ಟು ಖರ್ಚನ್ನು ಕೇಂದ್ರ ಸರ್ಕಾರವು ಭರಿಸುತ್ತದೆ.
ಯೋಜನೆಯಡಿಯಲ್ಲಿ ಕಾರ್ಮಿಕರಿಗೆ/ನೌಕರರಿಗೆ ಸವಲತ್ತುಗಳು:[೧]
- ವೈದ್ಯಕೀಯ ಸಹಾಯ (ಮೆಡಿಕಲ್ ಬೆನಿಫಿಟ್)
- ರೋಗಿಗಳಿಗೆ ಸಹಾಯ (ಸಿಕ್‍ನೆಸ್ ಬೆನಿಫಿಟ್)
- ತಾಯ್ತನದ ಸಹಾಯ (ಮೆಟರ್ನಿಟಿ ಬೆನಿಫಿಟ್)
- ಅಂಗವಿಕಲತೆಯ ಸಹಾಯ (ಡಿಸೇಬಲ್ಡ್ ಬೆನಿಫಿಟ್)
- ಅವಲಂಬಿತರ ಸಹಾಯ (ಡಿಪೆಂಡೆಂಟ್ಸ್ ಬೆನಿಫಿಟ್)
- ಅಂತಿಮ ಸಂಸ್ಕಾರದ ಸಹಾಯ (ಫ್ಯೂನರಲ್ ಬೆನಿಫಿಟ್)
- ಪುನರ್ವಸತಿ ಸಹಾಯ (ರಿಹ್ಯಾಬಿಲಿಟೇಶನ್ ಬೆನಿಫಿಟ್)
ವೈದ್ಯಕೀಯ ಸಹಾಯ (ಸೌಲಭ್ಯಗಳು)
[ಬದಲಾಯಿಸಿ]ಈ ಕೆಳಕಂಡ ಸೇವೆಗಳನ್ನು ಉಚಿತವಾಗಿ ನೀಡಲಾಗುತ್ತದೆ:
- ಹೊರರೋಗಿಯ ಚಿಕಿತ್ಸಾ ವಿಭಾಗ (ಔಟ್ ಪೇಷೆಂಟ್ ಕೇರ್)
- ಅಗತ್ಯ ಔಷಧಿಗಳ ಪೂರೈಕೆ
- ಪ್ರಯೋಗಾಲಯ ಹಾಗೂ ಕ್ಷ-ಕಿರಣ ವಿಭಾಗದ ಸೇವೆಗಳು.
- ಗರ್ಭಿಣಿ ಬಾಣಂತನದ ವಿಶೇಷ ಸೇವೆಗಳು.
- ಅಗತ್ಯ ಚುಚ್ಚುಮದ್ದುಗಳನ್ನು ಉಚಿತವಾಗಿ ನೀಡುವುದು.
- ಕುಟುಂಬ ಯೋಜನೆಗಳು.
- ತುರ್ತು ವೈದ್ಯಕೀಯ ಸೇವೆಗಳು (ಆಂಬುಲೆನ್ಸ್ ಸರ್ವೀಸ್)
- ಒಳ ರೋಗಿಗಳ ಸೇವೆ.
ಅಗತ್ಯವಿದ್ದಲ್ಲಿ ರೋಗಿಗಳನ್ನು ಹೊರ ರಾಜ್ಯಗಳಿಗೆ ಚಿಕಿತ್ಸೆ ಪಡೆಯಲು ಕಳುಹಿಸಲಾಗುತ್ತದೆ. ಖರ್ಚನ್ನು ನಿಗಮವು ಭರಿಸುತ್ತದೆ.
ವೈದ್ಯಕೀಯ ಸೌಲಭ್ಯಗಳನ್ನು ಕಾರ್ಮಿಕರು/ನೌಕರರು ನೇರವಾಗಿ ಭಾರತದಾದ್ಯಂತ ಪ್ರಮುಖ ನಗರಗಳಲ್ಲಿರುವ ಇ.ಎಸ್.ಐ. ಆಸ್ಪತ್ರೆಗಳಲ್ಲಿ ಅಥವಾ ನಿಗಮವು ಗುರುತಿಸಿರುವ ಖಾಸಗಿ ವೈದ್ಯರಿಂದ (ಇನಶ್ಶೂರೆನ್ಸ್ ಮೆಡಿಕಲ್ ಪ್ರಾಕ್ಟೀಷನರ್ಸ್) ಉಚಿತ ವೈದ್ಯಕೀಯ ಸೇವೆಯನ್ನು ಪಡೆಯಬಹುದಾಗಿದೆ. ಭಾರತದ ಇ.ಎಸ್.ಐ. ಆಸ್ಪತ್ರೆಗಳಲ್ಲಿ ಪ್ರತಿದಿನ ಒಬ್ಬ ವೈದ್ಯ ಸುಮಾರು 80 ಮಂದಿ ಹೊರರೋಗಿಗಳಿಗೆ ಚಿಕಿತ್ಸೆಯನ್ನು ನೀಡುತ್ತಾರೆ.
ವಿಶೇಷ ಸೌಲಭ್ಯಗಳು
[ಬದಲಾಯಿಸಿ]ರೋಗಿಗಳಿಗೆ ಉಚಿತವಾಗಿ ಕೃತಕ ದಂತಪಂಕ್ತಿ, ಕನ್ನಡಕಗಳು, ಶ್ರವಣ ಸಾಧನಗಳು ಹಾಗೂ ಕೃತಕ ಕಾಲುಗಳನ್ನು ನೀಡುತ್ತಾರೆ. ಅದರ ತತ್ಸಂಬಂಧದ ತೊಂದರೆಗಳು ಕಾರ್ಖಾನೆಗಳಲ್ಲಿ ಕೆಲಸ ಮಾಡುವಾಗ ಉಂಟಾಗಿರಬೇಕು.
ಇ.ಎಸ್.ಐ. ಯೋಜನೆಯಡಿಯ ವೆಚ್ಚವು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿರುವುದು ಕಂಡು ಬಂದಿದೆ. 1961-1962 ರಲ್ಲಿ ಒಬ್ಬರಿಗೆ 23.79 ರೂ ಗಳಷ್ಟು ಇತ್ತು. 1969-1970 ರಲ್ಲಿ 58.91 ರೂಗಳಷ್ಟು ಆಯಿತು. 1973-74 ರಲ್ಲಿ 67.53 ರೂ ಗಳಷ್ಟು ಹೆಚ್ಚಾಯಿತು. 1992-1993 ರಲ್ಲಿ ಒಬ್ಬ ವ್ಯಕ್ತಿಯ ಖರ್ಚು 406.78 ರಷ್ಟಾಯಿತು.
ರೋಗಿಗಳಿಗೆ ಸಹಾಯ (ಸೌಲಭ್ಯಗಳು)
[ಬದಲಾಯಿಸಿ]ಈ ಯೋಜನೆಯಡಿಯಲ್ಲಿ ಒಬ್ಬ ಕಾರ್ಮಿಕ/ವ್ಯಕ್ತಿಯ ಯಾವುದೇ ರೋಗದಿಂದ ಬಳಲುತ್ತಿದ್ದರೆ, ವರ್ಷದ 365 ದಿನಗಳಲ್ಲಿ, ಸತತ 91 ದಿನಗಳ ಗರಿಷ್ಠ ವೈದ್ಯಕೀಯ ರಜೆಯನ್ನು 7/12 ರಷ್ಟು ವೇತನದೊಂದಿಗೆ ಪಡೆಯಬಹುದು. ಕೆಲವು ದೀರ್ಘಾವಧಿ ಕಾಯಿಲೆಗಳಿಂದ ವ್ಯಕ್ತಿಯು ಬಳಲುತ್ತಿದ್ದರೆ, ರಜೆಯನ್ನು 309 ದಿನಗಳಿಗೆ ಹೆಚ್ಚಿಸಿಕೊಳ್ಳಬಹುದು. ರೋಗ ಸೌಲಭ್ಯವನ್ನು ಪಡೆಯುವ ವ್ಯಕ್ತಿಯು ಕಡ್ಡಾಯವಾಗಿ ಚಿಕಿತ್ಸೆಗೆ ಒಳಪಟ್ಟಿರಬೇಕು.
ಆ ವಿಧದ ಕೆಲವು ಖಾಯಿಲೆಗಳು ಈ ಕೆಳಕಂಡಂತಿವೆ:
- ಕ್ಷಯರೋಗ
- ಕುಷ್ಠ ರೋಗ
- ಮನೋ ರೋಗಗಳು
- ಅರ್ಬುದ ರೋಗ
- ಲಕ್ವ ಹೊಡೆಯುವುದು
- ಹೃದಯ ವೈಫಲ್ಯ
- ಕಣ್ಣಿನಲ್ಲಿ ಪೊರೆ ಬೆಳೆಯುವುದು.
- ಹೃದಯಾಘಾತ
- ಪಾರ್ಕಿನ್‌ಸನ್ಸ್ ರೋಗ (ಪಾರ್ಕಿನ್‌ಸನ್ಸ್ ಡಿಸೀಸ್)
- ಯಕೃತ್ ನಾರುಗಟ್ಟುವಿಕೆ (ಲಿವರ್ ಸಿರ್‌ಹೋಸಿಸ್)
- ಅಕ್ಷಿಪಟಲ ಬೇರ್ಪಡುವಿಕೆ (ಡಿಟಾಚ್ಮೆಂಟ್ ಆಫ್ ರೆಟಿನ)
- ತಡವಾಗಿ ಕೂಡುವ ಅಥವಾ ಕೂಡದ ಮೂಳೆಯ ಮುರಿತ (ಡಿಲೇಡ್ ಆರ್ ನಾನ್ ಯೂನಿಯನ್ ಆಫ್ ಫ್ರಾಕ್ಚರ್)
- ಮೆದುಳು ಒಳಗಿನ ಗಾಯಗಳು (ಇನ್ಟ್ರಾ ಕ್ರೇನಿಯಲ್ ಲೀಶನ್ಸ್)
- ಹೃದಯ ಸಂಬಂಧಿ ಖಾಯಿಲೆಗಳು
- ದೀರ್ಘಕಾಲದ ಮೂತ್ರಪಿಂಡ ವೈಫಲ್ಯ.
- ದೇಹದ, ಶೇ.50 ಕ್ಕಿಂತ ಹೆಚ್ಚಿರುವ ಸುಟ್ಟಗಾಯಗಳು.
- ದೀರ್ಘಾವಧಿ ಮೂಳೆಯ ಉರಿಯೂತಗಳು ಇತ್ಯಾದಿ.
ತಾಯ್ತನದ ಸೌಲಭ್ಯಗಳು
[ಬದಲಾಯಿಸಿ]ಹೆಂಗಸರಿಗೆ ಗರ್ಭಸ್ರಾವ (ಮಿಸ್‍ಕ್ಯಾರೇಜ್), ಅಕಾಲ ಪ್ರಸವ ಗರ್ಭಧಾರಣೆಯಿಂದ ತೊಂದರೆಗಳು ಉಂಟಾದರೆ (ಕಾಂಪ್ಲಿಕೇಶನ್ ಆಫ್ ಪ್ರೆಗ್ನೆನ್ಸಿ) ಅಪ್ರಾಪ್ತ ಶಿಶುವಿಗೆ ಜನ್ಮ ನೀಡಿದಲ್ಲಿ ಈ ಸೌಲಭ್ಯವನ್ನು ಉಪಯೋಗಿಸಬಹುದು. ಈ ರೋಗಕ್ಕೆ ತಕ್ಕಂತೆ 4 ರಿಂದ 12 ವಾರಗಳ ಪೂರ್ಣ ವೇತನದ ರಜೆಯನ್ನು ಪಡೆಯಬಹುದು.
ಅಂಗವಿಕಲತೆಯ ಸೌಲಭ್ಯಗಳು
[ಬದಲಾಯಿಸಿ]ತಾತ್ಕಾಲಿಕ ಅಂಗವಿಕಲತೆಗೆ, ಅಂಗವಿಕಲತೆಯು ಗುಣವಾಗುವವರೆಗೆ, ವ್ಯಕ್ತಿಯು ಶೇ 72 ರಷ್ಟು ವರಮಾನವನ್ನು ಪಡೆಯಬಹುದು. ಶಾಶ್ವತ ಅಂಗವಿಕಲತೆಗೆ ವ್ಯಕ್ತಿಯು ಆಜೀವನ ಪರ್ಯಂತ ತನ್ನ ವೇತನದ ಶೇ.72 ರಷ್ಟನ್ನು ಪಡೆಯಬಹುದು. ಅಂಗವಿಕಲತೆಯು ಕಾರ್ಖಾನೆಯಲ್ಲಿ ಕೆಲಸ ಮಾಡುವಾಗ ಸಂಭವಿಸಿರಬೇಕು.
ಅವಲಂಬಿತರ ಸೌಲಭ್ಯಗಳು
[ಬದಲಾಯಿಸಿ]ಕಾರ್ಮಿಕನು ಮರಣಕ್ಕೆ ತುತ್ತಾದರೆ ಅವನನ್ನು ಅವಲಂಬಿಸಿರುವ ಪತ್ನಿ (ವಿಧವೆ), ಶೇ.40 ರಷ್ಟು ವೇತನವನ್ನು ಪಡೆಯುತ್ತಾಳೆ. ಕಾರ್ಮಿಕನಿಗೆ ಮಕ್ಕಳಿದ್ದರೆ, ಅವರೂ ಸಹ 18 ವರ್ಷ ತುಂಬುವವರೆಗೆ ಈ ಸೌಲಭ್ಯಕ್ಕೆ ಒಳಪಡುತ್ತಾರೆ. ಆದರೆ 18 ವರ್ಷದ ನಂತರ ಮಕ್ಕಳು ಈ ಸೌಲಭ್ಯದಿಂದ ವಂಚಿತರಾಗುತ್ತಾರೆ. (ಹೆಣ್ಣು ಮಕ್ಕಳು ಈ ಅವಧಿಗೆ ಮುಂಚೆ ವಿವಾಹವಾದರೆ ಈ ಸೌಲಭ್ಯದಿಂದ ವಂಚಿತರಾಗುತ್ತಾರೆ).
ಅಂತಿಮ ಸಂಸ್ಕಾರ ನಿಧಿ ಸೌಲಭ್ಯ
[ಬದಲಾಯಿಸಿ]ಕಾರ್ಮಿಕನು/ನೌಕರರು ಕೆಲಸದ ಅವಧಿಯಲ್ಲಿ ಮೃತನಾದರೆ, ಅಂತಿಮ ಸಂಸ್ಕಾರಕ್ಕೆ ಖರ್ಚು ವೆಚ್ಚಕ್ಕೆ ಗರಿಷ್ಠ 1000.00 ರೂಗಳನ್ನು ಪಡೆಯಬಹುದು.
ಪುನರ್ವಸತಿ ಸೌಲಭ್ಯ
[ಬದಲಾಯಿಸಿ]ಕಾರ್ಮಿಕ /ನೌಕರನು ಶಾಶ್ವತ ಅಂಗವಿಕಲನಾದರೆ ಆತನ ಕುಟುಂಬದ ಸದಸ್ಯರು ಪ್ರತಿ ತಿಂಗಳು 10 ರೂ. ಪಡೆಯುತ್ತಾರೆ ಹಾಗೂ ಅಂಗವಿಕಲನು ಚಿಕಿತ್ಸೆ ಹಾಗೂ ಪುನರ್ವಸತಿಯನ್ನು ಪಡೆಯುತ್ತಾನೆ.
ಇ.ಎಸ್.ಐ. ಯೋಜನೆಯು ಅತ್ಯಂತ ಮಹತ್ವದ ಯೋಜನೆಯಾಗಿದ್ದು 1993 ರಲ್ಲಿ, ಭಾರತದಾದ್ಯಂತ ಸುಮಾರು 74.44 ಲಕ್ಷ ಮಂದಿ ಈ ಯೋಜನೆಯ ಲಾಭ ಪಡೆದಿದ್ದರು.
ಉಲ್ಲೇಖಗಳು
[ಬದಲಾಯಿಸಿ]