ವಿಷಯಕ್ಕೆ ಹೋಗು

ವರ್ಗೀಸ್ ಕುರಿಯನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವರ್ಗಿಸ್ ಕುರಿಯನ್
Bornನವೆಂಬರ್ ೨೬, ೧೯೨೧
ಕೇರಳದ ಕೋಯಿಕೋಡ್
Diedಸೆಪ್ಟೆಂಬರ್ ೯, ೨೦೧೨
ಗುಜರಾತಿನ ನಾಡಿಯಾಡ್
Nationalityಭಾರತೀಯ
Other namesಮಿಲ್ಕ್ ಮ್ಯಾನ್ ಆಫ್ ಇಂಡಿಯಾ
Alma materಮದ್ರಾಸ್ ವಿಶ್ವವಿದ್ಯಾಲಯ, ಅಮೆರಿಕದ ಮಿಚಿಗನ್ ವಿಶ್ವವಿದ್ಯಾಲಯ
Occupationಅಮುಲ್ ಸಂಸ್ಥೆಯ ಸಂಸ್ಥಾಪಕರು
Known forಹಾಲು ಉತ್ಪಾದಕರಾ ಸಂಘಟನೆಯ ನೇತಾರರಾಗಿ 'ಕ್ಷೀರ ಪಿತಾಮಹ'ರೆನಿಸಿದವರು

ವರ್ಗೀಸ್ ಕುರಿಯನ್ (ನವೆಂಬರ್ ೨೬, ೧೯೨೧ - ಸೆಪ್ಟೆಂಬರ್ ೯, ೨೦೧೨) ಅಮುಲ್ ಡೈರಿ ಸಂಸ್ಥೆಯ ಸ್ಥಾಪಕರು ಮತ್ತು ಭಾರತದಲ್ಲಿ ಆಪರೇಶನ್ ಫ್ಲಡ್ ಎಂಬ ಹೆಸರಿನ ಕ್ಷೀರಕ್ರಾಂತಿಯ ಪ್ರಮುಖ ಪಾತ್ರಧಾರಿ.

ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟ (GCMMF)ದ ಸಂಸ್ಥಾಪಕ ಅಧ್ಯಕ್ಷರಾಗಿ , ಕುರಿಯನ್ ಅವರು ಅಮುಲ್ ಡೈರಿ ಉತ್ಪನ್ನಗಳ ಬ್ರಾಂಡ್ ನ ಸೃಷ್ಟಿ ಮತ್ತು ಯಶಸ್ಸಿಗೆ ಕಾರಣರಾದವರು. ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟದಲ್ಲಿ ಅವರ ಸಾಧನೆ ಕಂಡು ರಾಷ್ಟ್ರೀಯ ಮಟ್ಟದಲ್ಲಿ ನ ಅಮುಲ್ ಯಶಸ್ಸನ್ನು ಪುನರಾವರ್ತಿಸಲು, ೧೯೬೫ ರಲ್ಲಿ ಅವರನ್ನು ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿ(NDDB) ಯ ಸ್ಥಾಪಕ ಅಧ್ಯಕ್ಷರನ್ನಾಗಿ ನೇಮಿಸಿದರು. ಕೆಲವು ವರ್ಷಗಳ ನಂತರ, ಕುರಿಯನ್ ರ ಮುಂದಾಳುತನದಲ್ಲಿ ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿಯು ಆಪರೇಷನ್ ಫ್ಲಡ್ (ಅಥವಾ ವೈಟ್ ರೆವಲ್ಯೂಷನ್-ಕ್ಷೀರಕ್ರಾಂತಿ ) ಎಂಬ ಜಗತ್ತಿನ ಅತಿ ದೊಡ್ಡ ಡೈರಿ ಅಭಿವೃದ್ಧಿ ಯೋಜನೆಯನ್ನು ಪ್ರಾರಂಭಿಸಿತು. ಆಪರೇಷನ್ ಫ್ಲಡ್ ಯೋಜನೆಯು ಭಾರತವನ್ನು ವಿಶ್ವದ ಅತ್ಯಂತ ದೊಡ್ಡ ಹಾಲು ಉತ್ಪಾದಕ ದೇಶವನ್ನಾಗಿ ಮಾಡಿತು; ೨೦೧೦-೨೦೧೧ ರಲ್ಲಿ, ಜಾಗತಿಕ ಉತ್ಪಾದನೆಯ ಸುಮಾರು ಪ್ರತಿ ನೂರಕ್ಕೆ ೧೭ ರಷ್ಟು ಭಾಗವು ಭಾರತದ್ದಾಗಿತ್ತು .

"ಭಾರತದ ಹಾಲು ವಿತರಕ" ಮತ್ತು "ಕ್ಷೀರ ಕ್ರಾಂತಿಯ ಪಿತಾಮಹ" ಎಂದು ಬಣ್ಣಿಸಲ್ಪಟ್ಟ ಕುರಿಯನ್ ರವರು ಭಾರತದ ಎರಡನೇ ಅತ್ಯುನ್ನತ ನಾಗರಿಕ ಗೌರವವಾದ '"ಪದ್ಮ ವಿಭೂಷಣ" ಪ್ರಶಸ್ತಿ, ವಿಶ್ವ ಆಹಾರ ಪ್ರಶಸ್ತಿ ಮತ್ತು ಮ್ಯಾಗ್ಸೇಸೆ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಪ್ರಾರಂಭಿಕ ಜೀವನ

[ಬದಲಾಯಿಸಿ]

ಅವರು ಹುಟ್ಟಿದ್ದು ಕೇರಳದ ಕೋಝಿಕೋಡ್ (ಅಂದರೆ ಕ್ಯಾಲಿಕಟ್) ನಲ್ಲಿ. ಭೌತಶಾಸ್ತ್ರದಲ್ಲಿ ಪದವಿಯ ನಂತರ ಬಿ.ಇ. ( ಮೆಕ್ಯಾನಿಕಲ್ ಇಂಜಿನಿಯರಿಂಗ್) ಮಾಡಿದರು. ಬಳಿಕ ಜಮ್ ಷೆಡ್ ಪುರದ ಟಾಟಾ ಸ್ಟೀಲ್ ತಾಂತ್ರಿಕ ಸಂಸ್ಥೆಯಲ್ಲಿ ಅಧ್ಯಯನ ಮಾಡಿ ಮೆಟಲರ್ಜಿಕಲ್ ಇಂಜಿನಿಯರಿಂಗ್ ನಲ್ಲಿ ಎಂ.ಎಸ್ಸಿ. ಮಾಡಲು ಸ್ಕಾಲರ್ಶಿಪ್ ಪಡೆದುಕೊಂಡು ಅಮೇರಿಕಕ್ಕೆ ತೆರಳಿದರು.

ವೃತ್ತಿ ಜೀವನ

[ಬದಲಾಯಿಸಿ]

ಅಮೆರಿಕದಿಂದ ೧೯೪೮ರಲ್ಲಿ ಭಾರತಕ್ಕೆ ಹಿಂದಿರುಗಿದ ವರ್ಗಿಸ್ ಕುರಿಯನ್ನರು ಸರ್ಕಾರಿ ಸೇವೆಗೆ ಸೇರಿ ಆನಂದ್ ನಗರದಲ್ಲಿದ್ದ ಹಾಲಿನ ಪೌಡರ್ ಉತ್ಪಾದಿಸುವ ಸಣ್ಣ ಘಟಕವೊಂದರಲ್ಲಿ ತಂತ್ರಜ್ಞರಾಗಿ ಕೆಲಸಕ್ಕೆ ಸೇರಿದರು. ಇದೇ ಸಮಯದಲ್ಲಿ ಕೈರಾ ಜಿಲ್ಲೆಯ ಹಾಲು ಉತ್ಪಾದನಾ ಸಂಘಟನೆಯು ತನ್ನ ಉಳಿಗಾಲಕ್ಕಾಗಿ ಕಷ್ಟಪಡುತ್ತಿದ್ದುದನ್ನು ಗಮನಿಸಿದ ಕುರಿಯನ್ನರು, ಸರ್ಕಾರಿ ಸೇವೆಯನ್ನು ತ್ಯಜಿಸಿ ಆ ಸಂಸ್ಥೆಗೆ ಜೀವ ತುಂಬಲು ಸ್ವಯಂ ಪ್ರೇರಣೆಯಿಂದ ಮುಂದೆ ಬಂದರು. ವರ್ಗಿಸ್ ಕುರಿಯನ್ನರ ಈ ಸಾಹಸ ‘ಅಮುಲ್’ ಎಂಬ ಹೊಸ ಚರಿತ್ರೆಗೆ ನಾಂದಿಹಾಡಿತು. ಹೀಗೆ ಅವರು ಡೈರಿ ಅಭಿವೃದ್ಧಿಯ ಸಹಕಾರಿ ಮಾದರಿಯನ್ನು ಭಾರತದ ಅತಿದೊಡ್ಡ ಮತ್ತು ಅತ್ಯಂತ ಯಶಸ್ವೀ ಉದ್ಯಮವನ್ನಾಗಿ ಮಾಡಿದರು. ಪ್ರಧಾನಿ ಜವಾಹರಲಾಲ್ ನೆಹರು ಅಮುಲ್ "ಫ್ಯಾಕ್ಟರಿ" ಉದ್ಘಾಟಿಸಲು ಆನಂದ್ ಗೆ ಭೇಟಿ ಕೊಟ್ಟಾಗ ಅವರ ಅದ್ಭುತ ಕಾರ್ಯವನ್ನು ಮೆಚ್ಚಿ ಅವರನ್ನು ಆಲಂಗಿಸಿದರು.

ಸಹಕಾರಿತನದ ಅಮುಲ್ ಮಾದರಿಯು ಎಷ್ಟು ಯಶಸ್ವಿಯಾಯಿತೆಂದರೆ ಗುಜರಾತ್ ಹಾಲಿನ ಒಕ್ಕೂಟದ ಯಶಸ್ಸು ಲಾಲ್ ಬಹದ್ದೂರ್ ಶಾಸ್ತ್ರಿ ಅವರನ್ನು ರಾಷ್ಟ್ರೀಯ ಡೈರಿ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಲು ಪ್ರೇರೇಪಿಸಿ ಡಾ. ವರ್ಗಿಸ್ ಕುರಿಯನ್ ಅವರನ್ನು ಅದರ ಅಧ್ಯಕ್ಷರನ್ನಾಗಿ ನೇಮಿಸುವಂತೆ ಮಾಡಿತು. ಹೀಗೆ ೧೯೬೫ರ ವರ್ಷದಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರಿಂದ ರಾಷ್ತ್ರೀಯ ಹಾಲು ಉತ್ಪಾದನಾ ನಿಗಮಕ್ಕೆ ಅಧ್ಯಕ್ಷರೆಂದು ನೇಮಿಸಲ್ಪಟ್ಟ ವರ್ಗಿಸ್ ಕುರಿಯನ್ನರು ಮುಂದೆ ೧೯೭೩ರಲ್ಲಿ ಗುಜರಾತ್ ಕೋ-ಆಪರೇಟಿವ್ ಮಿಲ್ಕ್ ಮಾರ್ಕೆಟಿಂಗ್ ಫೆಡರೇಶನ್ ಸ್ಥಾಪಿಸಿ ಹಾಲಿನ ಉತ್ಪನ್ನಗಳನ್ನು ಮಾರುಕಟ್ಟೆಯಲ್ಲಿ ಸಮರ್ಥವಾಗಿ ವಿತರಣೆಯಾಗುವಂತೆ ವ್ಯವಸ್ಥೆ ಮಾಡಿದರು. ಹೀಗೆ ವರ್ಗಿಸ್ ಕುರಿಯನ್ನರು ಭಾರತವನ್ನು ಅತ್ಯಂತ ಬ್ರಹತ್ ಹಾಲು ಉತ್ಪಾದನಾ ದೇಶವನ್ನಾಗಿ ಮಾಡಿದರು.

ಕುರಿಯನ್ ಮತ್ತು ಅವರ ತಂಡದವರು ಆಕಳ ಹಾಲಿನ ಬದಲಾಗಿ ಎಮ್ಮೆಯ ಹಾಲಿನಿಂದ ಹಾಲಿನ ಪುಡಿ ಮತ್ತು ದಟ್ಟಗೊಳಿಸಿದ ಹಾಲು ಮಾಡುವ ಪ್ರಕ್ರಿಯೆಯನ್ನು ಕಂಡು ಹಿಡಿದರು. ಅಮುಲ್ ಯಶಸ್ವಿಯಾಗಲು ಮತ್ತು ಹಾಲಿನ ಪುಡಿ ಹಾಗೂ ದಟ್ಟಗೊಳಿಸಿದ ಹಾಲನ್ನು ಮಾಡಲು ಹಸುವಿನ ಹಾಲು ಬಳಸುವ ನೆಸ್ಲೆ ವಿರುದ್ಧ ಉತ್ತಮ ಪೈಪೋಟಿ ನೀಡಲು ಇದೇ ಪ್ರಮುಖ ಕಾರಣವಾಯಿತು. ಯುರೋಪ್ ನಲ್ಲಿ ಹಸುವಿನ ಹಾಲು ಹೇರಳವಾಗಿದ್ದರೆ ಭಾರತದಲ್ಲಿ, ಎಮ್ಮೆ ಹಾಲು ಪ್ರಮುಖ ಕಚ್ಚಾ ಪದಾರ್ಥವಾಗಿದೆ.

ಅತ್ಯಂತ ಕುಶಲ ಹಾಗೂ ಶ್ರಮಭರಿತ ದುಡಿಮೆಗೆ ಹೆಸರಾದ ವರ್ಗಿಸ್ ಕುರಿಯನ್ನರು ಯಾವುದೇ ಪ್ರತೀಕೂಲ ಪರಿಸ್ಥಿತಿ ಇದ್ದಾಗ್ಯೂ ಹೇಗೆ ಒಬ್ಬ ವ್ಯಕ್ತಿ ಇಡೀ ಸಮಾಜಕ್ಕೆ ದೇಶಕ್ಕೆ ದಾರಿ ದೀಪವಾಗಬಹುದು ಎಂಬುದನ್ನು ಭಾರತೀಯ ಸಮಾಜದಲ್ಲಿ ಸಮರ್ಥವಾಗಿ ಪ್ರತಿಬಿಂಬಿಸಿದ್ದು, ಭಾರತೀಯ ಗ್ರಾಮೀಣ ಅಭಿವೃದ್ಧಿಯ ಆಸಕ್ತಿಯುಳ್ಳ ಹಲವಾರು ಸಂಘಟನೆಗಳ ನೇತಾರರು ಮಾರ್ಗದರ್ಶಕರು ಕೊಡಾ ಆಗಿದ್ದರು.

ಡೈರಿಗಳ ಉತ್ಪನ್ನವನ್ನು ಮಾರಾಟಮಾಡಲು ೧೯೭೩ರಲ್ಲಿ ಕುರಿಯನ್ ಅವರು ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟವನ್ನು ಸ್ಥಾಪಿಸಿದರು. ಇಂದು ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟ ವು ಭಾರತದಷ್ಟೇ ಅಲ್ಲ ಹೊರದೇಶಗಳಲ್ಲಿ ಕೂಡ ಮಾರಾಟಮಾಡುತ್ತದೆ. ಅವರು ಅಲ್ಲಿನ ಆಡಳಿತದೊಂದಿಗಿನ ಭಿನ್ನಾಭಿಪ್ರಾಯಗಳ ಕಾರಣ ೨೦೦೬ ರಲ್ಲಿ ಅದರ ಅಧ್ಯಕ್ಷ ಹುದ್ದೆಯನ್ನು ತ್ಯಜಿಸಿದರು.

ಪ್ರಶಸ್ತಿ ಗೌರವಗಳು

[ಬದಲಾಯಿಸಿ]

ವಿಶ್ವ ಆಹಾರ ಪ್ರಶಸ್ತಿ1989, ಮ್ಯಾಗ್ಸೇಸೆ ಪ್ರಶಸ್ತಿ1964, ಪದ್ಮಶ್ರೀ1965, ಪದ್ಮಭೂಷಣ1966, ಪದ್ಮವಿಭೂಷಣ1999, ಕೃಷಿರತ್ನ ಪ್ರಶಸ್ತಿಗಳು, ಹಲವು ವಿಶ್ವ ವಿದ್ಯಾಲಯದ ಡಾಕ್ಟರೇಟ್, ಹಲವಾರು ಅಂತರರಾಷ್ಟ್ರೀಯ ಪ್ರಶಸ್ತಿಗಳು ಹಾಗೂ ಇವೆಲ್ಲವನ್ನೂ ಮೀರಿದ ಜನಪ್ರಿಯತೆ, ಜನನಂಬುಗೆ ಕುರಿಯನ್ ಅವರನ್ನು ಅರಸಿ ಬಂದಿದವು. ಶ್ಯಾಮ್ ಬೆನಗಲ್ ಅವರ ‘ಮಂಥನ್’ ಅಂತಹ ಸುಂದರ ಚಿತ್ರಗಳು ಸಹಾ ವರ್ಗಿಸ್ ಕುರಿಯನ್ನರ ಕಾಯಕದ ಪ್ರೇರಣೆ ಹೊಂದಿವೆ.

ಆತ್ಮಚರಿತ್ರೆ

[ಬದಲಾಯಿಸಿ]

ಅನೇಕ ಇತರ ಸಂಸ್ಥೆಗಳಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಕುರಿಯನ್ ಜೀವನದ ಕಥೆಯನ್ನು "ಐ ಟೂ ಹ್ಯಾಡ್ ಎ ಡ್ರೀಮ್" ಎಂಬ ಅವರ ಆತ್ಮಚರಿತ್ರೆಯಲ್ಲಿ ಓದಬಹುದು.

ವಿದಾಯ

[ಬದಲಾಯಿಸಿ]

೯ ಸೆಪ್ಟೆಂಬರ್ 2012 ರಂದು ತೀರಿಕೊಂಡ ಅವರು ನಾಸ್ತಿಕರಾಗಿದ್ದರು.

ಆಕರಗಳು

[ಬದಲಾಯಿಸಿ]
  1. ಕ್ಷೀರ ಕ್ರಾಂತಿಯ ಹರಿಕಾರ ವರ್ಗಿಸ್ ಕುರಿಯನ್ ಇನ್ನಿಲ್ಲ : ಉದಯವಾಣಿ
  2. ಇಂಗ್ಲಿಷ್ ವಿಕಿಪೀಡಿಯ ಲೇಖನ
  3. ಅಮುಲ್ ತಾಣ