ವಿಷಯಕ್ಕೆ ಹೋಗು

ವಿಷ್ಣುಶರ್ಮ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವಿಷ್ಣುಶರ್ಮ ನೀತಿಕಥೆಗಳ ಸಂಗ್ರಹವಾದ ಪಂಚತಂತ್ರವನ್ನು ಬರೆದವನು ಎಂದು ನಂಬಲಾಗಿರುವ ಒಬ್ಬ ಭಾರತೀಯ ವಿದ್ವಾಂಸ ಮತ್ತು ಲೇಖಕನಾಗಿದ್ದನು.[] ಪಂಚತಂತ್ರದ ರಚನೆಯ ನಿಖರ ಕಾಲ ಅನಿಶ್ಚಿತವಾಗಿದೆ ಮತ್ತು ಅಂದಾಜುಗಳು ಕ್ರಿ.ಪೂ. ೧೨೦೦ರಿಂದ ಕ್ರಿ.ಶ. ೩೦೦ರ ವರೆಗೆ ಬದಲಾಗುತ್ತವೆ. ಕೆಲವು ವಿದ್ವಾಂಸರು ಅವನನ್ನು ಕ್ರಿ.ಪೂ ೩ನೇ ಶತಮಾನದವನೆಂದು ಅಂದಾಜು ಮಾಡುತ್ತಾರೆ.

ಪಂಚತಂತ್ರವು ಇತಿಹಾಸದಲ್ಲಿ ಅತ್ಯಂತ ವ್ಯಾಪಕವಾಗಿ ಅನುವಾದಿಸಲಾದ ಧಾರ್ಮಿಕೇತರ ಪುಸ್ತಕಗಳಲ್ಲಿ ಒಂದು. ಪಂಚತಂತ್ರವನ್ನು ಪಹ್ಲವಿ ಭಾಷೆಗೆ ಕ್ರಿ.ಶ. ೫೭೦ರಲ್ಲಿ ಮತ್ತು ಅರಬ್ಬೀ ಭಾಷೆಗೆ ಕ್ರಿ.ಶ. ೭೫೦ರಲ್ಲಿ ಅನುವಾದಿಸಲಾಯಿತು. ಬಗ್ದಾದ್‍ನಲ್ಲಿ, ಇದರ ಅನುವಾದ ಜನಪ್ರಿಯತೆಯಲ್ಲಿ ಕುರಾನ್ ನಂತರದ ಸ್ಥಾನ ಪಡೆದಿತ್ತು ಎಂದು ಸಾಧಿಸಲಾಗಿದೆ. ಹನ್ನೊಂದನೇ ಶತಮಾನದಷ್ಟು ಮುಂಚಿತವಾಗಿ, ಈ ಕೃತಿ ಯೂರೋಪ್ ತಲುಪಿತು ಮತ್ತು ೧೬೦೦ಕ್ಕೆ ಮುಂಚೆ ಇದು ಗ್ರೀಕ್, ಲ್ಯಾಟಿನ್, ಸ್ಪ್ಯಾನಿಶ್, ಇಟ್ಯಾಲಿಯನ್, ಜರ್ಮನ್, ಇಂಗ್ಲಿಷ್, ಮುಂತಾದ ಭಾಷೆಗಳಲ್ಲಿ ಅಸ್ತಿತ್ವದಲ್ಲಿತ್ತು. ಅದರ ವ್ಯಾಪ್ತಿ ಜಾವಾದಿಂದ ಐಸ್‍ಲಂಡ್ ವರೆಗೆ ವಿಸ್ತರಿಸಿದೆ.

ಪಂಚತಂತ್ರದ ಮುನ್ನುಡಿ ವಿಷ್ಣುಶರ್ಮನನ್ನು ಕೃತಿಯ ಲೇಖಕ ಎಂದು ಗುರುತಿಸುತ್ತದೆ. ಅವನ ಬಗ್ಗೆ ಯಾವುದೇ ಬೇರೆ ಸ್ವತಂತ್ರ ಬಾಹ್ಯ ಸಾಕ್ಷ್ಯಾಧಾರವಿಲ್ಲದ ಕಾರಣ, ಅವನು ಐತಿಹಾಸಿಕ ಲೇಖಕನೇ ಅಥವಾ ಸ್ವತಃ ಅವನೇ ಒಬ್ಬ ಸಾಹಿತ್ಯಿಕ ಆವಿಷ್ಕಾರವೇ ಎಂದು ಹೇಳುವುದು ಅಸಾಧ್ಯ. ವಿವಿಧ ಭಾರತೀಯ ಪರಿಷ್ಕರಣೆಗಳ ವಿಶ್ಲೇಷಣೆ ಮತ್ತು ಕಥೆಗಳಲ್ಲಿ ವರ್ಣಿಸಲಾದ ಭೌಗೋಳಿಕ ಲಕ್ಷಣಗಳು ಹಾಗೂ ಪ್ರಾಣಿಗಳನ್ನು ಆಧರಿಸಿ, ವಿವಿಧ ವಿದ್ವಾಂಸರು ಕಾಶ್ಮೀರ ವಿಷ್ಣುಶರ್ಮನ ಹುಟ್ಟುಸ್ಥಳವೆಂದು ಸೂಚಿಸುತ್ತಾರೆ.

ವಿಷ್ಣುಶರ್ಮನು ಪಂಚತಂತ್ರವನ್ನು ಬಹುಶಃ ಹೇಗೆ ಸೃಷ್ಟಿಸಿದನು ಎಂಬ ಕಥೆಯನ್ನು ಮುನ್ನುಡಿಯು ವರ್ಣಿಸುತ್ತದೆ. ಒಂದು ರಾಜ್ಯವನ್ನು ಆಳುತ್ತಿದ್ದ ಸುದರ್ಶನನೆಂಬ ರಾಜನಿದ್ದನು. ರಾಜ್ಯದ ರಾಜಧಾನಿ ಮಹಿಲಾರೋಪ್ಯ ಎಂಬ ನಗರ. ಇದರ ನೆಲೆ ಭಾರತದ ಪ್ರಸ್ತುತ ನಕ್ಷೆಯಲ್ಲಿ ಅಪರಿಚಿತವಾಗಿದೆ. ರಾಜನಿಗೆ ಮೂರು ಪುತ್ರರು. ಬಾಹುಶಕ್ತಿ, ಉಗ್ರಶಕ್ತಿ ಮತ್ತು ಅನಂತಶಕ್ತಿ ಎಂದು ಇವರ ಹೆಸರುಗಳು. ರಾಜನು ಸ್ವತಃ ಒಬ್ಬ ವಿದ್ವಾಂಸ ಮತ್ತು ಬಲಿಷ್ಠ ಆಡಳಿತಗಾರನಾಗಿದ್ದರೂ, ಅವನ ಪುತ್ರರು ಎಲ್ಲರೂ ದಡ್ಡರಾಗಿದ್ದರು. ರಾಜನು ಅವನ ಮೂರು ರಾಜಕುಮಾರರ ಕಲಿಕೆಯ ಅಸಮರ್ಥತೆಗೆ ಹತಾಶಾನಾದನು, ಮತ್ತು ಸಮಾಲೋಚನೆಗಾಗಿ ತನ್ನ ಮಂತ್ರಿಗಳ ಬಳಿ ಹೋದನು. ಅವರು ರಾಜನಿಗೆ ವಿರೋಧಾತ್ಮಕವೆನಿಸಿದ ಸಲಹೆ ನೀಡಿದರು, ಆದರೆ, ಸುಮತಿ ಎಂಬ ಒಬ್ಬನ ಶಬ್ದಗಳು ರಾಜನಿಗೆ ಸರಿಯೆನಿಸಿದವು. ವಿಜ್ಞಾನಗಳು, ರಾಜಕಾರಣ ಮತ್ತು ರಾಜತಂತ್ರಗಳು ಎಲ್ಲೆಯಿಲ್ಲದ ವಿಭಾಗಗಳು ಮತ್ತು ಅವುಗಳಲ್ಲಿ ವಿಧ್ಯುಕ್ತವಾಗಿ ನಿಪುಣರಾಗುವುದಕ್ಕೆ ಜೀವಮಾನ ಹಿಡಿಯುತ್ತದೆ ಎಂದು ಆ ಮಂತ್ರಿ ಹೇಳಿದನು. ರಾಜಕುಮಾರರಿಗೆ ಧರ್ಮಗ್ರಂಥಗಳು ಮತ್ತು ಪಠ್ಯಗಳನ್ನು ಕಲಿಸುವುದರ ಬದಲು, ಹೇಗಾದರೂ ಮಾಡಿ ಅವುಗಳಲ್ಲಿ ಅಂತರ್ಗತವಾಗಿರುವ ಜ್ಞಾನವನ್ನು ಕಲಿಸಬೇಕು, ಮತ್ತು ವಯಸ್ಸಾದ ವಿದ್ವಾಂಸ ವಿಷ್ಣುಶರ್ಮನು ಅದಕ್ಕೆ ಸರಿಯಾದ ವ್ಯಕ್ತಿ ಎಂದು ಹೇಳಿದನು.

ಉಲ್ಲೇಖಗಳು

[ಬದಲಾಯಿಸಿ]
  1. Santhini Govindan, 71 Golden Tales of Panchatantra, Unicorn Books, 2007, ISBN 9788178060866, ... credited to Pandit Vishnu Sharma somewhere between 1200 BC and AD 300. Many stories may have existed long before the, but Vishnu Sharma put them together as a single unit ...