ವಿಷಯಕ್ಕೆ ಹೋಗು

ಶಿಶುನಾಳ ಶರೀಫರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಶಿಶುನಾಳ ಶರೀಫ ಇಂದ ಪುನರ್ನಿರ್ದೇಶಿತ)

ಶಿಶುನಾಳ ಶರೀಫರು ಕನ್ನಡ ಸಾಹಿತ್ಯ ತತ್ವಪದಗಳ ರೂವಾರಿ.

ಶಿಶುನಾಳ ಶರೀಫರು ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಶಿಶುವಿನ ಹಾಳ ಗ್ರಾಮದಲ್ಲಿ ಕ್ರಿ.ಶ. ೧೮೧೯ ಜುಲೈ ೩ರಂದು ಜನಿಸಿದರು. ಇವರ ತಂದೆ ದೇವಕಾರ ಮನೆತನದ ಇಮಾಮ ಹಜರತ ಸಾಹೇಬರು ಹಾಗು ತಾಯಿ ಹಜ್ಜೂಮಾ. ಇವರ ಪೂರ್ಣ ಹೆಸರು ಮಹಮ್ಮದ ಶರೀಫ. ಮುಲ್ಕಿ ಪರೀಕ್ಷೆ ಪಾಸು ಮಾಡಿದ ಬಳಿಕ ಶರೀಫರು ಕೆಲ ಕಾಲ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರಾಗಿ ಕೆಲಸ ಮಾಡಿದರು

ವಿದ್ಯಾಭ್ಯಾಸ

[ಬದಲಾಯಿಸಿ]

ಆದರೆ ಮುಂದೆ ಈ ಕೆಲಸವನ್ನು ಬಿಟ್ಟು ಬಿಟ್ಟರು. ಈ ಸಮಯದಲ್ಲಿ ಶರೀಫರಿಗೆ ಕಳಸದ ಗುರು ಗೋವಿಂದಭಟ್ಟರಿಂದ ಅನುಗ್ರಹವಾಯಿತು. ಮಗನು ಕೆಲಸವನ್ನು ಬಿಟ್ಟು ಆಧ್ಯ್ಶಾತ್ಮಚಿಂತನೆಯಲ್ಲಿ ತೊಡಗಿಸಿಕೊಂಡದ್ದರಿಂದ ಶರೀಫರ ತಂದೆ ತಾಯಿ ಅವರಿಗೆ ಕುಂದಗೋಳ ನಾಯಕ ಮನೆತನದ ಫಾತಿಮಾ ಎಂಬ ಕನ್ಯೆಯೊಂದಿಗೆ ಮದುವೆ ಮಾಡಿದರು.

ಕೆಲವು ಸಮಯದ ನಂತರ ಇವರಿಗೆ ಒಂದು ಹೆಣ್ಣು ಮಗು ಜನಿಸಿತು. ದುರ್ದೈವದಿಂದ ಕೆಲವು ತಿಂಗಳುಗಳಲ್ಲಿ ಹೆಂಡತಿ ತೀರಿಕೊಂಡರು. ಶರೀಫರಿಗೆ ಜೀವನದಲ್ಲಿ ಬೇಸರವಾದರೂ, ದೇವರಲ್ಲಿ ನಂಬಿಕೆ ಉಳಿದಿತ್ತು. ಶರೀಫರು ಆ ಬಳಿಕ ತಮ್ಮ ಜೀವನವನ್ನು ಆಧ್ಯಾತ್ಮಸಾಧನೆಗೆ ಮುಡಿಪಿಟ್ಟರು. ತಾಳ್ಮೆಯಿಂದ ಸಜ್ಜನರ ಹಾಗೂ ವಿದ್ಯಾವಂತರ ಸಹವಾಸದಲ್ಲಿಯೇ ಕಾಲ ಕಳೆಯುತ್ತಾ ಬಂದರು. ತಮಗೆ ಸರಿಯಾಗಿ ಮಾರ್ಗದರ್ಶನ ನೀಡುವಂತಹ ಗುರುವಿಗಾಗಿ ಅವರು ಊರೂರು ಅಲೆದರು.

ಕೊನೆಗೆ ಗೋವಿಂದಭಟ್ಟ ಎಂಬ ಗುರುವಿನಲ್ಲಿ ಸರಿಯಾದ ಮಾರ್ಗದರ್ಶನ ದೊರೆಯಿತು. ಯಾವುದೇ ಮತತ ಬಗ್ಗೆ ಮೂಡನಂಬಿಕೆ ಇಲ್ಲದ ಈ ಗುರುಗಳು ಶರೀಫರಿಗೆ ತುಂಬಾ ಮೆಚ್ಚುಗೆಯಾದರು. ಗುರುಶಿಷ್ಯರಿಬ್ಬರೂ ಮಸೀದಿಗಳಿಗೆ, ದೇವಾಲಯಗಳಿಗೆ ಸಂದರ್ಶನಕ್ಕಾಗಿ ಹೊರಟರು. ಶರೀಫರು ಅನೇಕ ಹಾಡುಗಳನ್ನು ರಚಿಸಿ ಹಾಡಿದರು. ಈ ಗುರುಗಳ ಜೊತೆಗೆ ನವಲಗುಂದದ ನಾಗಲಿಂಗಮತಿ ಮತ್ತು ಗಂಗೆಯ ಮಡಿವಾಳಪ್ಪ ಎಂಬುವರು ಸಹ ಶರೀಫರ ಮೇಲೆ ಹೆಚ್ಚಿನ ಪರಿಣಾಮ ಬೀರಿದರು.

ಶರೀಫರು ಹಾಡಿದ ಪದಗಳು ಧಾರವಾಡ ಜಿಲ್ಲೆಯ ಆಡುಭಾಷೆಯ ಶೈಲಿಯಲ್ಲಿವೆ. ಈ ಪದಗಳಲ್ಲಿ ಕೆಲವು ದೇವತಾಸ್ತುತಿಯ ಪದಗಳಾದರೆ, ಇನ್ನು ಕೆಲವು ಪದಗಳು ತತ್ವಬೋಧನೆಯ ಪದಗಳಾಗಿವೆ.ಹೆಚ್ಚಿನ ಪದಗಳು ಕನ್ನಡದಲ್ಲಿ ಇದ್ದರೂ ಸಹ ಕೆಲವು ಪದಗಳು ಉರ್ದು ಭಾಷೆಯಲ್ಲಿವೆ.

ಹೊಸಗನ್ನಡ ಅರುಣೋದಯ ಸಾಹಿತ್ಯದ ಮುಂಬೆಳಗಿನ ಕಾಲದಲ್ಲಿ ತಮ್ಮ ಅನುಭಾವಕಾವ್ಯದ ಹೊಂಗಿರಣವೊಂದನ್ನು ಹಾಯಿಸಿದ ಪ್ರಸಿದ್ಧ ಅನುಭಾವಿ ಕವಿ. ಇವರ ಮೊದಲಿನ ಹೆಸರು ಮಹಮ್ಮದ್ ಶರೀಫ್. ಶಿಗ್ಗಾವಿ ತಾಲ್ಲೂಕಿನ ಶಿಶುವಿನಾಳ ಇವರ ಜನ್ಮಸ್ಥಳ. 1819 ಮಾರ್ಚ್ 7 ರಂದು ಜನಿಸಿದರು. ಕನ್ನಡ ಮುಲ್ಕೀ ಪರೀಕ್ಷೆಯವರೆಗೆ ಓದಿದ ಇವರು, ಆರಂಭದಲ್ಲಿ ಕೆಲಕಾಲ ಹಳ್ಳಿಯ ಶಾಲೆಯೊಂದರಲ್ಲಿ ಶಿಕ್ಷಕರಾಗಿದ್ದರಾದರೂ ಬೇಗನೆ ಅದರ ಹಂಗು ಹರಿದುಕೊಂಡು ಆಧ್ಯಾತ್ಮಸಾಧನೆಗೆ ತಮ್ಮನ್ನು ಸಮರ್ಪಿಸಿ ಕೊಂಡರು.

ಅಭಿಜಾತ ಕಲಾವಿದರಾಗಿದ್ದ ಶಿಶುನಾಳರು ಚಿಕ್ಕಂದಿನಲ್ಲಿಯೇ ಹಳ್ಳಿಯ ಜಾತ್ರೆ ಉತ್ಸವಗಳಲ್ಲಿ ಶರಣರ ವಚನಗಳನ್ನೂ ಅನುಭಾವ ಪದಗಳನ್ನೂ ಹಾಡುತ್ತ, ಬಹುರೂಪಿಗಳ ಹಾಗೆ ವಿವಿಧ ವೇಷ ಹಾಕುತ್ತ, ಬಗೆಬಗೆಯ ಬಯಲಾಟಗಳಲ್ಲಿ ಪಾತ್ರವಹಿಸುತ್ತ ತಮ್ಮ ಕಲೆಗಾರಿಕೆಯನ್ನು ಜನಮನದ ವಿಲಾಸ-ವಿಕಾಸಗಳಿಗೆ ಮುಡಿಪಿಡಲು ಮೊದಲುಮಾಡಿದರು. ಮೊಹರಂ ಪರ್ವ ಸಮಯದಲ್ಲಿ ತಲೆ ಎತ್ತುವ ಕರ್ಬಲಾ ಮೇಳಗಳಿಗಾಗಿ ರಿವಾಯತ್ ಪದ ರಚಿಸಿಕೊಟ್ಟರು, ಲಾವಣಿಗಳನ್ನೂ ಬರೆದರು. ಹೀಗೆ ನಿಧಾನವಾಗಿ ಸಾಹಿತ್ಯಪಥದಲ್ಲಿ ತಮ್ಮ ಹೆಜ್ಜೆ ಮೂಡಿಸಿ, ಮುಂದಿನ ಸೃಷ್ಟಿಗೆ ಅಗತ್ಯ ವಾದ ಪೂರ್ವಸಿದ್ಧತೆ ಮಾಡಿಕೊಂಡರು. ಕಳಸದ ಗುರುಗೋವಿಂದ ಭಟ್ಟರು, ಅಂಕಲಗಿಯ ಅಡವಿ ಸ್ವಾಮಿಗಳು, ಗರಗದ ಮಡಿವಾಳಪ್ಪ ನವರು, ನವಿಲುಗುಂದದ ನಾಗಲಿಂಗಪ್ಪನವರು, ಹುಬ್ಬಳ್ಳಿಯ ಸಿದ್ಧಾರೂಢ ಸ್ವಾಮಿಗಳು ಮುಂತಾದ ಸಮಕಾಲೀನ ಸಾಧುಸತ್ಪುರುಷರ ಸಾನ್ನಿಧ್ಯ, ಸಂಸರ್ಗಗಳಿಂದ ಅನುಭಾವಿಯಾಗಿ ಮಾಗಿದರು.

ಕನ್ನಡ ಸಂಸ್ಕಂತಿಯ ಸರ್ವಧರ್ಮಸಹಿಷ್ಣುಭಾವ ಮತ್ತು ಆಧ್ಯಾತ್ಮಿಕ ಪರಂಪರೆಯ ಸರ್ವಸಮನ್ವಯ ಅನುಭಾವ ಸಂಪತ್ತನ್ನು ಅರಗಿಸಿಕೊಂಡು ಇವರು ರಚಿಸಿದ ಅನುಭವ ಪದಗಳು ಆಪ್ತವಾದ ಕಳಕಳಿಗೆ ನೆಲೆ ಯಾಗಿವೆ. ಹಳ್ಳಿಯ ಬಾಳಿನ ದಿನದಿನದ ಬದುಕಿನಲ್ಲಿ ತಮ್ಮ ಕಣ್ಮನಗಳನ್ನು ಸೆಳೆದ ಒಂದೊಂದು ಸನ್ನಿವೇಶ-ಸಂಗತಿ, ವಸ್ತು-ವ್ಯಕ್ತಿ, ಪಶು-ಪಕ್ಷಿ ಮೊದಲಾದವುಗಳನ್ನೇ ಒಂದು ರೂಪಕವನ್ನಾಗಿಯೋ ದೃಷ್ಟಾಂತವ ನ್ನಾಗಿಯೋ ಪ್ರತಿಮೆಯನ್ನಾಗಿಯೋ ಮಾಡಿಕೊಂಡು ಅವುಗಳಲ್ಲಿ ತಮ್ಮ ಅನುಭವದ ಬೆಳಕು ಮತ್ತು ಅನುಭಾವದ ಬೆಳಗನ್ನು ವರ್ಣಮಯವಾಗಿ ಹೇಳಿದ್ದಾರೆ. ತಮ್ಮ ಜೀವಮಾನದುದ್ದಕ್ಕೂ ಇವರು ಬರೆದ ಹಾಡು, ಒರೆದ ಪಾಡು ಒಂದೇ ಆಗಿದೆ. ಬೋಧ ಒಂದೇ, ಬ್ರಹ್ಮನಾದ ಒಂದೇ ಎಂಬುದು ಅವರ ಬೀಜಮಂತ್ರವಾಗಿದ್ದು ನಡಿಯೊ ದೇವರ ಚಾಕರಿಗೆ, ಮುಕ್ತಿಗೊಡೆಯ ಖಾದರ ಲಿಂಗ ನೆಲಸಿರ್ಪ ಗಿರಿಗೆ ಎಂಬುದು ಇವರು ತಮ್ಮ ಮನಕ್ಕೂ ಜನಕ್ಕೂ ಕೊಟ್ಟ ಜೀವಾಳದ ಕರೆಯಾಗಿದೆ. ಇವರ ದೃಷ್ಟಿಯಲ್ಲಿ ಸನಾತನ ವೈದಿಕ ಮತ ಎತ್ತಿಹಿಡಿಯುವ ಬ್ರಹ್ಮತತ್ತ್ವ, ತಮ್ಮ ಪರಿಸರದಲ್ಲಿ ಪ್ರಭಾವಕಾರಿಯಾಗಿದ್ದ ವೀರಶೈವ ಮತದ ಲಿಂಗತತ್ತ್ವ ಹಾಗೂ ತಮ್ಮ ಮನೆತನಕ್ಕೆ ಪೂಜ್ಯವಾಗಿದ್ದ ಹುಲಗೂರ ಖಾದರಶಾ ಸಾಧುವಿನ ಸಮಾಧಿತತ್ತ್ವ-ಇವೆಲ್ಲವೂ ಮೂಲತಃ ಒಂದೇ. ಇದರಿಂದಾಗಿ ಇವರು ಸರ್ವಧರ್ಮಸಮನ್ವಯದ ಉಜ್ಜ್ವಲ ಮೂರ್ತಿಯಾಗಿ ಹಿಂದು-ಮುಸ್ಲಿಮ್ ಬಾಂಧವ್ಯದ ಧವಲಕೀರ್ತಿಯಾಗಿ ಉತ್ತರ ಭಾರತದ ಮಹಾತ್ಮ ಕಬೀರರಂತೆ ಉತ್ತರ ಕರ್ನಾಟಕದ ಭಾಗದಲ್ಲಿ ಜನಮನದ ಗದ್ದುಗೆ ಏರಿದರು. ಇದಲ್ಲದೆ ತಮ್ಮ ಅಭಿವ್ಯಕ್ತಿಯಲ್ಲಿ ಅಳವಡಿಸಿಕೊಂಡ ಜನಪದ ಭಾಷೆಯ ಸೊಗಡು-ಗತ್ತು, ಗ್ರಾಮೀಣ ಸಂಗೀತದ ಲಯ-ಲಾಸ್ಯಗಳಿಂದಾಗಿಯೂ ಇವರು ಜನಮನವನ್ನು ಸೂರೆಗೊಂಡರು. ಹೀಗೆ ಆಧ್ಯಾತ್ಮಿಕ ಸಾಧನೆಯ ಸಿದ್ಧಿಯನ್ನು ಮುಟ್ಟಿದಮೇಲೆ ತಮ್ಮಲ್ಲಿ ಬಂದವರಿಗೆ ಧರ್ಮನೀತಿ ಬೋಧೆ ಮಾಡಲೆಂದು ಇವರು ತಮ್ಮ ಮನೆ ಹತ್ತಿರದಲ್ಲಿ ಕುಳಿತುಕೊಳ್ಳುತ್ತಿದ್ದ ಕಟ್ಟೆಯೊಂದು ಇಂದಿಗೂ ಇದ್ದು ಬೋಧಪೀಠ ಎಂಬುದಾಗಿ ಪೂಜಿಸಲ್ಪಡುತ್ತದೆ.

ಉತ್ತರಕರ್ನಾಟಕವು ಅನೇಕ ಸಂತರನ್ನು ಪಡೆದ ಪುಣ್ಯಕ್ಷೇತ್ರ. ಹುಬ್ಬಳ್ಳಿಯ ಸಿದ್ಧಾರೂಢರು, ನವಲಗುಂದದ ನಾಗಲಿಂಗಜ್ಜ, ಅಥಣಿಯ ಮುರುಘೇಂದ್ರರು, ಅಗಡಿ ಶೇಷಾಚಲಸ್ವಾಮಿಗಳು, ತಿಂಥಿಣಿ ಮೋನೇಶ್ವರರು, ಕಡಕೋಳ ಮಡಿವಾಳಪ್ಪ ಮುಂತಾದವರು ಜನಮಾನಸದಲ್ಲಿ ಬೆರೆತು ಹೋಗಿದ್ದಾರೆ. ಜಾತಿ, ಧರ್ಮಗಳನ್ನು ಬದಿಗೊತ್ತಿ ‘ಸೋಹಂತತ್ತ್ವ’ವನ್ನು ಹಿಡಿದು ಕೆಲವರು ನಡೆದರೆ; ಇನ್ನೂ ಕೆಲವರು ‘ದಾಸೋಹಂ’ ಭಾವದಲ್ಲಿ ನಡೆದಿದ್ದಾರೆ. ಇವರೆಲ್ಲರು ‘ಆತ್ಮತತ್ತ್ವ’ವನ್ನು ಹಿಡಿದು ನಡೆದವರೇ. ಅಲ್ಲಮಪ್ರಭು ಹೇಳಿದ ‘ತನ್ನ ತಾನರಿದಡೆ ತನ್ನರಿವೆ ಗುರು’ ಎಂಬ ಮಹಾಸೂತ್ರವನ್ನು ಇಲ್ಲಿಯ ನೂರಾರು ಸಂತರು ಬಿಡದೆ ಧ್ಯಾನಿಸಿದ್ದಾರೆ.

ಜನನ-ವಿದ್ಯಾಭ್ಯಾಸ: ಈಗಿನ ಹಾವೇರಿ ಜಿಲ್ಲೆಗೆ ಸೇರಿದ ಶಿಗ್ಗಾವಿ ತಾಲ್ಲೂಕಿನಲ್ಲಿ ಶಿಶುನಾಳ ಗ್ರಾಮವಿದೆ. ಈಗ ಇದನ್ನು ಶಿಶುವಿನಹಾಳ, ಶಿಶುವಿನಾಳ ಎಂದು ಕರೆಯುತ್ತಾರೆ. ಈ ಗ್ರಾಮದಲ್ಲಿ ದೇವಕಾರ ಮನೆತನದ ಇಮಾಮ್ ಹಜರತ್ ಸಾಹೇಬ ಮತ್ತು ಆತನ ಹೆಂಡತಿ ಹಜ್ಜೂಮಾ ಇವರಿಗೆ ಬಹುಕಾಲ ಸಂತಾನ ಇರಲಿಲ್ಲ. ಅವರು ಹುಲಗೂರಿನ ಸಂತ ಖಾದರ ಷಾವಲಿ ಸಮಾಧಿಗೆ ಭಕ್ತಿಯಿಂದ ನಡೆದುಕೊಂಡ ಮೇಲೆ, ಕ್ರಿ.ಶ.1819 ಮಾರ್ಚ್ 7 ರಂದು ಶರೀಫರು ಜನ್ಮಿಸಿದರು. ಖಾದರ್ ಷಾವಲಿಯವರ ವರಪ್ರಸಾದದಿಂದ ಜನ್ಮಿಸಿದ ಶರೀಫರು ತಮ್ಮ ಕೊನೆಗಾಲದ ವರೆಗೂ ಮೇಲಿಂದ ಮೇಲೆ ಹುಲಗೂರಿನ ಸಮಾಧಿಗೆ ಭೇಟಿ ಕೊಡುತ್ತಿದ್ದರು. ಶರೀಫರು ಯಾವುದೇ ಕೆಲಸ ಮಾಡಿದರೂ ‘ಯಾ ಖಾದರ್’ ಎಂದು ಹೇಳುತ್ತಿದ್ದರೆಂದು ಅವರ ಶಿಷ್ಯರು ದಾಖಲಿಸಿದ್ದಾರೆ. ಶರೀಫರು ತಮ್ಮೊಂದು ತತ್ತ್ವಪದದಲ್ಲಿ ‘ನಡೆಯೋ ದೇವರ ಚಾಕರಿಗೆ ಮುಕ್ತಿ | ಗೊಡೆಯ ಖಾದರಲಿಂಗ ನೆಲಸಿರ್ಪ ಗಿರಿಗೆ’ ಎಂದು ಅನನ್ಯತೆಯಿಂದ ಹಾಡಿದ್ದಾರೆ. ಇವರ ಹುಟ್ಟು ಹೆಸರು ಮಹಮ್ಮದ್ ಶರೀಫ್. ಪ್ರಾಥಮಿಕ ವಿದ್ಯಾಭ್ಯಾಸ ಆ ಕಾಲದ ಕೂಲಿಮಠದಲ್ಲಿ ನಡೆಯಿತು. ಶರೀಫರು ಬಾಲ್ಯದಲ್ಲೂ ತುಂಬಾ ಚುರುಕಾದ ಹುಡುಗ, ಆಟ-ಪಾಠಗಳೆರಡರಲ್ಲೂ ಮುಂದು. ಅಲ್ಲಿ ಮುಲ್ಕಿಪರೀಕ್ಷೆ ಪಾಸು ಮಾಡಿದರು. ನಂತರ ಶರೀಫರು ಮೋಡಿಲಿಪಿಯನ್ನು ಚೆನ್ನಾಗಿ ಓದುವ ಅಭ್ಯಾಸವನ್ನು ರೂಢಿಸಿಕೊಂಡರು. ಮನೆತನದಲ್ಲಿ ಉರ್ದುಬಳಕೆ ಮಾಡುತ್ತಿದ್ದುದರಿಂದ ಅದನ್ನು ಚೆನ್ನಾಗಿ ಕಲಿತುಕೊಂಡರು.

ಶರೀಫರು ಮುಲ್ಕಿ ಪರೀಕ್ಷೆ ಮಾಡುವ ವೇಳೆಗೆ ರಾಮಾಯಣ, ಮಹಾಭಾರತಗಳನ್ನು ಓದಿ ಕರಗತ ಮಾಡಿಕೊಂಡಿದ್ದರು. ಚಾಮರಸನ ‘ಪ್ರಭುಲಿಂಗಲೀಲೆ’ ಅವರ ಮೇಲೆ ಬಹಳ ಪ್ರಭಾವವನ್ನು ಉಂಟು ಮಾಡಿತ್ತು. ‘ಪ್ರಭುಲಿಂಗಲೀಲೆ’ಯ ಕೈಪ್ರತಿಯನ್ನು ಮಾಡಿಕೊಂಡು ಅದನ್ನು ಸದಾ ತಮ್ಮ ಬಳಿ ಇಟ್ಟುಕೊಂಡಿರುತ್ತಿದ್ದರು. ಅವರು ದೇವಿಪುರಾಣವನ್ನು ಮನನ ಮಾಡಿದ್ದರು. ಊರಿನ ಜನರೊಡನೆ ಸೇರಿ ಹಗಲುವೇಷ ಹಾಕಿ ಕುಣಿದದ್ದುಂಟು. ಬಯಲಾಟಗಳಲ್ಲಿ ಬಣ್ಣ ಬಳಿದುಕೊಂಡು ಪಾತ್ರವಹಿಸಿದ್ದರಂತೆ. ಸರ್ವಜ್ಞ ಹಾಗೂ ಸರ್ಪಭೂಷಣ ಶಿವಯೋಗಿಗಳ ಕಾವ್ಯವಾಚನ ಮಾಡುವುದರಲ್ಲಿ ಶರೀಫರಿಗೆ ಎಲ್ಲಿಲ್ಲದ ಹಿಗ್ಗು, ಗ್ರಾಮದ ಸುತ್ತಮುತ್ತ ಎಲ್ಲೆ ಶಾಸ್ತ್ರ-ಪುರಾಣ ನಡೆಯಲಿ ಅಲ್ಲಿ ಶರೀಫರು ಹಾಜರಾಗುತ್ತಿದ್ದರು. ಅವರು ಮೊಹರಮ್ ಹಬ್ಬ ನಡೆಯುವಾಗ ರಿವಾಯತ್​ಪದಗಳನ್ನು ರಚಿಸುತ್ತಿದ್ದರು. ಶರೀಫರು ಕನ್ನಡ ಮಾತ್ರವಲ್ಲದೆ ಉರ್ದು, ಮರಾಠಿ ಭಾಷೆಗಳನ್ನು ಬಲ್ಲವರಾಗಿದ್ದರು. ಆ ಮೂರು ಭಾಷೆಗಳಲ್ಲಿ ನೂರಾರು ಪದಗಳನ್ನು ರಚಿಸಿದ್ದಾರೆ. ಶರೀಫರು ಸಮಾಜದಲ್ಲಿ ನಡೆಯುತ್ತಿದ್ದ ಪ್ರತಿಯೊಂದು ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಭಾಗವಹಿಸುತ್ತಿದ್ದರು. ಅವರು ಜಾತಿ, ಮತ, ಪಂಥಗಳನ್ನು ಎಂದೂ ಲೆಕ್ಕಿಸುತ್ತಿರಲಿಲ್ಲ. ಅವರು ‘ಬೆಲ್ಲದ ಹೇರಾಗಿ’ ಜನಮನದಲ್ಲಿ ಚಿರಸ್ಥಾಯಿಯಾದರು.

ಶರೀಫರು ಮುಲ್ಕಿ ಪರೀಕ್ಷೆ ಪಾಸುಮಾಡಿದ್ದರಿಂದ ಪ್ರಾಥಮಿಕಶಾಲೆಯ ಶಿಕ್ಷಕರಾದರು. ಆದರೆ, ನಾಲ್ಕು ಗೋಡೆಗಳ ನಡುವೆ ಶಿಕ್ಷಕರಾಗಿ ಉಳಿಯಲು ಅವರ ಮನಸ್ಸು ಯಾಕೊ ಒಪ್ಪಲಿಲ್ಲ. ಅವರು ಲೋಕಶಿಕ್ಷಕರಾಗಲು ದೈವ ಬಯಸಿತ್ತೆಂದು ತೋರುತ್ತದೆ. ಅವರು ಶಾಲಾಶಿಕ್ಷಕವೃತ್ತಿಗೆ ಕೈಮುಗಿದು ತಮ್ಮ ಮನೆಯ ಮುಂದಿದ್ದ ಕಟ್ಟೆಯ ಮೇಲೆ ಅಧ್ಯಾತ್ಮ ವಿಷಯ ಕುರಿತು ಚಿಂತಿಸುವ ಪರಿಪಾಠವನ್ನು ಬೆಳೆಸಿಕೊಂಡರು. ಆದರೆ, ಒಳಗಿನ ಅಧ್ಯಾತ್ಮದಾಹ ಆರಲಿಲ್ಲ. ನಿಜಗುರುವಿಗಾಗಿ ಹುಡುಕತೊಡಗಿದರು. ಅವರಿಗೆ ಧಾರವಾಡ ಜಿಲ್ಲೆಯ ಕುಂದಗೋಳ ತಾಲ್ಲೂಕಿನ ಕಳಸ ಎಂಬ ಗ್ರಾಮದಲ್ಲಿದ್ದ ಗೋವಿಂದಭಟ್ಟರ ಸಂಪರ್ಕ ಹೇಗೊ ಬೆಳೆಯಿತು. ಗೋವಿಂದಭಟ್ಟರು ಸ್ಮಾರ್ತ ಬ್ರಾಹ್ಮಣರು. ಶುದ್ಧ ಅಧ್ಯಾತ್ಮಜೀವಿ. ಅವರು ಒಬ್ಬ ನಿಜಶಿಷ್ಯನ ಹುಡುಕಾಟದಲ್ಲಿ ತೊಡಗಿದ್ದರು. ಶರೀಫರನ್ನು ಕಂಡ ಗುರುಗೋವಿಂದ ಭಟ್ಟರು ತಮ್ಮ ನಿಜಶಿಷ್ಯನನ್ನು ಅವರಲ್ಲಿ ಕಂಡು, ಶಿಷ್ಯನನ್ನಾಗಿ ಮಾಡಿಕೊಂಡು ಗುರೂಪದೇಶ ನೀಡಿದರು. ಇಬ್ಬರೂ ತುಂಬಾ ಅನ್ಯೋನ್ಯರಾದರು. ಆ ಕಾಲದಲ್ಲಿ ಬ್ರಾಹ್ಮಣ-ಮುಸ್ಲಿಮ ಎಂಬ ಭೇದ ಸಮಾಜದಲ್ಲಿತ್ತು. ಬ್ರಾಹ್ಮಣರು ಗೋವಿಂದಭಟ್ಟರಿಗೆ ಸಮಾಜದಿಂದ ಬಹಿಷ್ಕಾರ ಹಾಕುವ ಬೆದರಿಕೆಯನ್ನು ಒಡ್ಡಿದರು. ಶರೀಫ ಗೋವಿಂದಭಟ್ಟರೊಡನೆ ಗುರೂಪದೇಶ ಪಡೆದು ಕೊಂಡದ್ದು ಖತೀಬಾ, ಮುಲ್ಲಾ, ಮೌಲ್ವಿಗಳಿಗೆ ಸರಿಕಾಣಬರಲಿಲ್ಲ. ಆದರೆ, ಇವರಿಬ್ಬರೂ ಇದಕ್ಕೆ ಸೊಪ್ಪು ಹಾಕದೆ; ತಮ್ಮ ಹಾದಿಯನ್ನು ಹಿಡಿದು ನಡೆದೇ ನಡೆದರು. ‘ನನ್ನೊಳಗೆ ನಾ ತಿಳಕೊಂಡೆ ಎನಗೆ ಬೇಕಾದ ಗಂಡನ್ನ ಮಾಡಿಕೊಂಡೆ’ ಎಂದು ಶರೀಫರು ತಮ್ಮೊಂದು ತತ್ತ್ವಪದದಲ್ಲಿ ಹೇಳಿಕೊಂಡು ಕೊನೆಗೆ ‘ಗುರುಗೋವಿಂದನ ಪಾದ ಹಿಡಕೊಂಡೆ’ ಎಂದು ಸ್ಮರಿಸಿದ್ದಾರೆ.

ಗುರುಗೋವಿಂದರು ಉಪನಿಷತ್ತುಗಳ ಸಾರವನ್ನು ಶರೀಫರಿಗೆ ತಿಳಿಸಿಕೊಟ್ಟರು. ‘ಬ್ರಹ್ಮ ಒಂದೇ ಬ್ರಹ್ಮನಾದ ಒಂದೇ’, ‘ಬ್ರಹ್ಮಾನಂದದಿ ಮುಣಗ್ಯಾಡ್ವುದು ನೋಡು’, ‘ಬಾಯಿಲೆ ಬ್ರಹ್ಮವ’ ಇವೇ ಮುಂತಾದ ತತ್ತ್ವಪದಗಳಲ್ಲಿ ಉಪನಿಷತ್ತು ಸಾರುವ ‘ಅಯಮಾತ್ಮಾ ಬ್ರಹ್ಮ’, ‘ಅಹಂ ಬ್ರಹ್ಮಾಸ್ಮಿ’, ಎಂಬ ಸೂತ್ರರೂಪಿ ಮಾತುಗಳ ವಿಸ್ತರಣೆಗಳನ್ನು ನಾವು ಕಾಣಬಹುದು. ಶರೀಫರು ಆತ್ಮಧಾನ್ಯದಲ್ಲಿ ತೊಡಗಿದರು; ಬ್ರಹ್ಮಧ್ಯಾನದಲ್ಲಿ ಲೀನರಾಗತೊಡಗಿದರು. ಶರೀಫರ ತಂದೆ-ತಾಯಿಗಳು ಮಗ ಹೀಗೆ ಅಲೆದಾಡುತ್ತಿರುವುದಕ್ಕೆ ಮದುವೆಯೇ ಸರಿಯಾದ ಮದ್ದೆಂದು ತಿಳಿದು ಕುಂದಗೋಳದ ನಾಯಕ ಮನೆತನಕ್ಕೆ ಸೇರಿದ ಫಾತಿಮಾ ಎಂಬಾಕೆಯೊಡನೆ ನಿಕಾ ನೆರವೇರಿಸಿದರು. ಶರೀಫರ ಮದುವೆಗೆ ಗೋವಿಂದ ಭಟ್ಟರು ಹಸಿರು ನಿಶಾನೆ ತೋರಿಸಿದರು. ಸ್ವತಃ ತಾಯಿ-ತಂದೆಯರನ್ನು ಮಕ್ಕಾ-ಮದೀನ ಸ್ವರೂಪರೆಂದು ತಿಳಿದಿದ್ದರಿಂದ ಮದುವೆ ಯಾವ ಅಡ್ಡಿಆತಂಕಗಳೂ ಇಲ್ಲದೆ ನಡೆಯಿತು. ಶರೀಫರ ಬಾಳಿನಲ್ಲಿ ಫಾತಿಮಾ ‘ಚಂದ್ರಮಾ’ ಆಗಿ ಬಂದಳು. ಶರೀಫರೂ ಕೂಡ ಜಾಣ ಸಂಸಾರಿಗನಾಗಿ ಬಾಳಿದರು; ಹೆಂಡತಿಯನ್ನು ಬಲು ಗೌರವಯುತವಾಗಿ ನಡೆಸಿಕೊಂಡರು. ಅವರೊಂದು ತತ್ತ್ವಪದದಲ್ಲಿ ‘ತಕ್ಕವಳೆನಿಸಿದಿ ನನ್ನ ಹೆಣ್ತೆ’ ಎಂದು ಹೇಳಿಕೊಂಡಿದ್ದಾರೆ. ಅವರ ದಾಂಪತ್ಯದ ಬಾಳಿನಲ್ಲಿ ಹೆಣ್ಣುಕೂಸು ಬೆಳ್ದಿಂಗಳಂತೆ ಜನ್ಮಿಸಿತು. ಅದರ ಹೆಸರು ಲತೀಮಾ. ಶರೀಫರು ಮಡದಿ-ಮಕ್ಕಳ ವ್ಯಾಮೋಹಕ್ಕೊಳಗಾಗದೆ, ಪ್ರಾಪಂಚಿಕ ವಿಷಯಗಳಲ್ಲಿ ಕುಂಬಾರಹುಳುವಿನಂತೆ ವ್ಯವಹರಿಸುತ್ತಿದ್ದರು. ಈ ನಡುವೆ ಹುಟ್ಟಿದ ಹೆಣ್ಣುಮಗು ಕೆಲದಿನಗಳಲ್ಲಿ ತೀರಿಕೊಂಡಿತು. ತವರುಮನೆಗೆ ಹೋಗಿದ್ದ ಫಾತಿಮಾ ಕೂಡ ಅಲ್ಲಿಯೇ ತೀರಿಕೊಂಡಳು. ಮಾವ ಅಂತ್ಯಕ್ರಿಯೆಗೆ ಬರಬೇಕೆಂದಾಗ ‘ಮೋಹದ ಹೆಂಡತಿ ತೀರಿದ ಬಳಿಕ | ಮಾವನ ಮನೆಯ ಹಂಗಿನ್ಯಾಕೋ’ ಎಂದು ಹೇಳಿ ಪ್ರಪಂಚದ ಹಂಗನ್ನು ತೊರೆದು ಸ್ವತಂತ್ರರಾದರು.

ಶರೀಫರು ಮಗಳು, ಮಡದಿ, ತಾಯಿ-ತಂದೆ ಕೊನೆಗೆ ಗುರುಗೋವಿಂದ ಭಟ್ಟರನ್ನು ಕಳೆದುಕೊಂಡ ಮೇಲೆ ಸಹಜವಾಗಿ ಅವರ ಚಿತ್ತ ಕದಡಿತು. ಅವರು ಮನಶ್ಶಾಂತಿಗಾಗಿ ಕ್ಷೇತ್ರದರ್ಶನ ಪಡೆಯಲು ಹೊರಟರು. ಅವರು ಶಿರಹಟ್ಟಿ ಫಕೀರಸ್ವಾಮಿಗಳನ್ನು ಕಂಡು ಮಂಗಳ ಹಾಡಿದರು. ಅಲ್ಲಿಂದ ಮೈಲಾರ ಮಹದೇವನಲ್ಲಿ ಬಂದು ಶರಣಾದರು. ಅನಂತರ ಸವದತ್ತಿಗೆ ಬಂದು ಏಳುಕೊಳ್ಳದ ಎಲ್ಲಮ್ಮನ ದರ್ಶನ ಪಡೆದು; ಚೆನ್ನಬಸವಣ್ಣನ ತಾಣವಾದ ಉಳವಿಗೆ ಬಂದರು. ಅವರ ಹಾಡುಗಳಲ್ಲಿ ನಲವತ್ತಾರಕ್ಕೂ ಹೆಚ್ಚು ಊರುಗಳ ಪ್ರಸ್ತಾಪವುಂಟು.ಶರೀಫರು ಸಂಚಾರಕಾಲದಲ್ಲಿ ಚಿದಂಬರ ದೀಕ್ಷಿತರು, ಬಾಲಲೀಲಾ ಮಹಾಂತ ಶಿವಯೋಗಿ, ಗುಡಗೇರಿಯ ಸಂಗಮೇಶ್ವರರು, ಅಂಕಲಗಿ ಅಡವಿಸ್ವಾಮಿಗಳು, ಗದುಗಿನ ಶಿವಾನಂದರು, ಅವರಾದಿ ಫಲಾಹಾರ ಸ್ವಾಮಿಗಳು, ಇನ್ನೂ ಹಲವು ಸಾಧು-ಸಂತರನ್ನು ಕಂಡರು. ಇವರೆಲ್ಲರು ಒಂದಲ್ಲ ಒಂದು ರೀತಿ ಶರೀಫರ ಮೇಲೆ ಪ್ರಭಾವವನ್ನು ಬೀರಿದವರೇ.

ಶರೀಫರು ನವಲಗುಂದದ ನಾಗಲಿಂಗಯತಿಗಳೊಡನೆ ಬಲು ಮೋಜಿನಿಂದ ವ್ಯವಹರಿಸುತ್ತಿದ್ದರು. ಅವರಿಬ್ಬರಲ್ಲಿ ಆತ್ಮೀಯ ಸಖ್ಯವಿತ್ತು. ಒಮ್ಮೆ ನಾಗಲಿಂಗಾವಧೂತರು ಶರೀಫರನ್ನು ಕಾಣಲು ಶಿಶುನಾಳಕ್ಕೆ ಹೋದರು. ‘ಸರೀಪನಿರುವದೆಲ್ಲಿ?’ ಎಂದಾಗ ಅವರ ಎದುರಿಗೆ ಶರೀಫರೇ ಬಂದರು. ಪಲ್ಲಕ್ಕಿ ಏರಿ ಬರುತ್ತಿರುವ ನಾಗಲಿಂಗಯತಿಗಳನ್ನು ಶರೀಫರು ಛೇಡಿಸಿದರು. ಇಬ್ಬರಿಗೂ ವಾಗ್ವಾದ ಆಯಿತು. ನಂತರ ‘ಬಗಳಮುಖಿಯ ಮಗನ ಕೂಡಾ ರಗಳೆಯಾತಕೆ’ ಎಂದು ನಾಗಲಿಂಗಯತಿಗಳನ್ನು ಕೊಂಡಾಡಿದರು. ಸಿದ್ಧಾರೂಢರು ಶರೀಫರಿಗಿಂತ ಚಿಕ್ಕವರಷ್ಟೆ? ಒಮ್ಮೆ ಹುಬ್ಬಳ್ಳಿಗೆ ಬಂದು ಸಿದ್ಧಾರೂಢರನ್ನು ಕಂಡು, ‘ಆ ರೂಢಾ ಈ ರೂಢಾ ಪ್ರಭು ಆಡೋ ನಿರಂಜನ… ಭಂಗರಹಿತ ಪರತತ್ತ್ವದ ಇಂಗಿತ ತಿಳಿದವನೇ ಆರೂಢಾ’ ಎಂದು ಹೇಳಿ ಆರೂಢದ ದಾರಿ ಮತ್ತು ಏರುವ ಕ್ರಮ ಕಠಿಣವೆಂದು ತಿಳಿಸಿ-ಅಧ್ಯಾತ್ಮತತ್ತ್ವದ ಗಹನತೆಯನ್ನು ಸಿದ್ಧಾರೂಢರಿಗೆ ಮನವರಿಕೆ ಮಾಡಿಕೊಟ್ಟರು.

ಶರೀಫರು ವರಕವಿ. ಆದರೆ, ಲೋಕದ ಬಾಳುವೆ ಬಂಗಾರವೇನೂ ಆಗಿರಲಿಲ್ಲ. ಬಡತನ ಬೆನ್ನನ್ನು ಹತ್ತುತ್ತಲೇ ಇತ್ತು. ಒಂದು ಘಟ್ಟದಲ್ಲಿ ಅವರಿಗೆ ತುತ್ತು ಅನ್ನ ಸಿಗದೆ ಹೋಯಿತು. ಶರೀಫರು ಸಾಲಗಾರರಿಂದ ಮುಕ್ತರಾಗಲು ತಮ್ಮ ಹೊಲ, ಮನೆ ಹಾಗೂ ಶಿಶುವಿನಾಳ ಗ್ರಾಮದಲ್ಲಿದ್ದ 2-20ಎಕರೆ ಹೊಲವನ್ನು 1888ರ ಆಗಸ್ಟ್ ತಿಂಗಳಿನಲ್ಲಿ 200 ರೂಪಾಯಿಗಳಿಗೆ ಮಾರಿ ಎಲ್ಲದರಿಂದ ಋಣಮುಕ್ತರಾದರು. ಶರೀಫರು ಹಲವು ಪ್ರಕಾರಗಳಲ್ಲಿ ಪದ್ಯಗಳನ್ನು ರಚಿಸಿದರು. ಅವರ ಕಾವ್ಯ ವೈವಿಧ್ಯಮಯವಾದುದು. ಅವರು ತತ್ತ್ವಪದಗಳನ್ನು ಹಾಡಿದರು. ದಂಡಕಗಳನ್ನು ಹೇಳಿ ದೇವ-ದೇವಿಯರನ್ನು ನುತಿಸಿದರು. ಕಾಲಜ್ಞಾನವನ್ನು ಹೇಳಿ ಜನರನ್ನು ಎಚ್ಚರಿಸಿದರು. ಲಾವಣಿಗಳನ್ನು ಹಾಡಿ ನೀತಿಬೋಧೆಯನ್ನು ಹೇಳಿದರು. ಹೋಳೀ ಹಾಡುಗಳ ಮೂಲಕ ಚರಿತ್ರೆಯನ್ನು ವಿವರಿಸಿದರು. ಅವರು ರಚಿಸಿದ ದಿವಾಯತ್ ಹೆಜ್ಜೆಮೇಳಕ್ಕೆ ಸೊಬಗನ್ನು ನೀಡಿದುವು. ಮಂಗಳಾರತಿ ಪದಗಳನ್ನು ರಚಿಸಿ-ಜನತೆಗೂ ದೈವಕ್ಕೂ ಮಂಗಳವನ್ನು ಹೇಳಿದರು. ಶರೀಫರು ಜೀವನದ ನಿತ್ಯಘಟನೆಗಳನ್ನೆ ವಸ್ತುವಾಗಿ ಆರಿಸಿಕೊಂಡು ಅಧ್ಯಾತ್ಮ ನಡೆಯ ಮಾರ್ಗಗಳನ್ನು ನಿರೂಪಿಸಿದರು. ಶರೀಫರು ಚಿಕ್ಕಂದಿನಲ್ಲಿ ಆ ಊರಿನ ಹಿರೇಮಠದ ಸಿದ್ಧರಾಮಯ್ಯ ಎಂಬ ವೀರಶೈವ ಪಂಡಿತರಿಂದ ವೀರಶೈವಧರ್ಮದ ಮರ್ಮವನ್ನು ತಿಳಿದರು. ಅವರು ಬಸವಣ್ಣ ಮತ್ತು ಅಲ್ಲಮಪ್ರಭುಗಳ ವಚನಗಳಿಗೆ ಮಾರುಹೋಗಿದ್ದರು. ಅವರೊಂದು ಕಡೆ ‘ಬಸವಣ್ಣನಂಥ ಭಕ್ತನಿಲ್ಲ; ಪ್ರಭುದೇವರಂಥ ಪರಮಾತ್ಮನಿಲ್ಲ’ ಎಂದು ಮನದುಂಬಿ ಹಾಡಿದ್ದಾರೆ. ‘ಮಣ್ಣುಬಿಟ್ಟು ಮಡಕೆಯಿಲ್ಲ; ತನ್ನ ಬಿಟ್ಟು ದೇವರಿಲ್ಲ’ ಎಂದು ಬಲು ಸೂಚ್ಯವಾಗಿ ಅದ್ವೈತದ ಪ್ರಮೇಯವನ್ನು ತಿಳಿಸಿದ್ದಾರೆ. ಭಕ್ತಿಯಿಂದ ಜ್ಞಾನ, ಜ್ಞಾನದಿಂದ ವಿರಕ್ತಿ, ವಿರಕ್ತಿಯಿಂದ ಮುಕ್ತಿ- ಎಂದು ಸಾರಿದ್ದಾರೆ. ಅವರು ತಮ್ಮ ಹಾಡುಗಳಿಗೆ ‘ಶಿಶುನಾಳಧೀಶ’ ಎಂಬ ಅಂಕಿತವನ್ನು ನೀಡಿದ್ದಾರೆ. ಇದು ಶಿಶುವಿನಾಳಗ್ರಾಮದ ಬಯಲುಗುಡಿಯ ಸ್ತಂಭಮೂರ್ತಿ-ಬಸವಣ್ಣ. ಇದು ಊರಿನ ಜಾಗ್ರತ ದೇವತೆ.

ಶರೀಫರ ದೈವಭಕ್ತ, ಸಂತ, ಜ್ಞಾನಿ, ಕವಿ, ಸಮಾಜಸುಧಾರಕ, ವಿಚಾರವಾದಿ ಇವೆಲ್ಲ ಮುಖವೂ ಅವರು ರಚಿಸಿದ ಕೃತಿಗಳಿಂದ ನಮಗೆ ಕಾಣಬರುತ್ತದೆ. ಅವರು ಭಕ್ತಿಸಾಧನೆಯೇ ಜೀವನದ ಏಕಮಾತ್ರ ಉದ್ದೇಶವೆಂದು ತಿಳಿದಿದ್ದರು. ಎಲ್ಲಾ ಪಂಥಗಳು ಹೇಳುವುದು ‘ಬ್ರಹ್ಮತತ್ತ್ವ’ವೆಂದು ಅನುಭವದಿಂದಲೇ ಮನಗಂಡಿದ್ದರು. ಆ ಮೂಲಕ ಪರಮಾರ್ಥಸಾಧನೆಯ ಹಾದಿಯನ್ನು ಎಲ್ಲರಿಗೂ ತೋರಿಸಿದರು. ಲೋಕದಲ್ಲಿ ನಡೆಯುತ್ತಿದ್ದ ಅನೀತಿ, ಮೋಸ, ವಂಚನೆ, ಕಪಟತನ, ಬಾಹ್ಯಾಡಂಬರ, ಅಂಧಶ್ರದ್ಧೆ, ಶೋಷಣೆ, ಇವುಗಳನ್ನು ಕಂಡು ಕಟುವಾಗಿ ವಿರೋಧಿಸಿದರು. ಉಚ್ಚ-ನೀಚ, ಕುಲ-ಗೋತ್ರ ಇತ್ಯಾದಿ ಎಲ್ಲಾ ಬಗೆಯ ಭೇದಗಳನ್ನು ತ್ಯಜಿಸಬೇಕೆಂದು ಸಾರಿದರು. ಸರಳತೆಯೇ ದೈವೀಭಾವಗಳನ್ನು ತಂದುಕೊಡುತ್ತದೆಂದೂ ಬ್ರಹ್ಮಾನಂದಕ್ಕೆ ಇದು ಮೆಟ್ಟಿಲೆಂದೂ ಹೇಳುತ್ತಿದ್ದರು.

ಶರೀಫರು ತಮಗೆ ಸರಿಕಂಡದ್ದನ್ನು ಮುಚ್ಚುಮರೆಯಿಲ್ಲದೆ ಹೇಳುತ್ತಿದ್ದರು. ಆದರೆ, ಅವರದು ಮಾತೃಹೃದಯ. ಕರುಣೆ, ಮೈತ್ರಿ, ಪ್ರೇಮಲ ಸ್ವಭಾವ ಅವರ ಅಂತರಂಗದಲ್ಲಿ ಸದಾ ನೆಲೆಯಾಗಿರುತ್ತಿತ್ತು. ಶರೀಫರು ಲೋಕಹಿತಕ್ಕಾಗಿ ಬದುಕಿದರು. ಅವರ ಅಂತರಂಗ-ಬಹಿರಂಗಗಳೆರಡು ಬ್ರಹ್ಮಧ್ಯಾನದಲ್ಲೇ ಇರುತ್ತಿದ್ದುವು. ಶರೀಫರು ತಮ್ಮ ಅವಸಾನಕಾಲವನ್ನು ತಿಳಿದುಕೊಂಡರು. ಅವರು ತಮ್ಮೆಲ್ಲ ಶಿಷ್ಯರನ್ನು ಕರೆದು ಯಾರೂ ದುಃಖಪಡಕೂಡದೆಂದೂ ಎಲ್ಲರೂ ಆತ್ಮಜ್ಞಾನದಲ್ಲಿ ಅನುಷ್ಠಾನಪರರಾಗಿಬೇಕೆಂದೂ ಹೇಳಿದರು. ಅವರು ‘ಬಿಡತೇನಿ ದೇಹ ಬಿಡತೇನಿ | ಕೊಡತೇನಿ ಭೂಮಿಗೆ | ಇಡತೇನಿ ಮಹಿಮರ ನಡತೆಯ ಹಿಡಿದು | ಅವನಿಯೊಳು ಶಿಶುನಾಳಧೀಶನೇ ಗತಿಯೆಂದು | ಜವನ ಬಾಧೆಗೆದ್ದು ಶಿವಲೋಕದೊಳಗೆ ನಾ ||’ ಎಂದು ಹಾಡುತ್ತ ದೇಹವನ್ನು ತ್ಯಜಿಸಲು ಅನುವಾದರು. ಆಗ ಅವರಿಗೆ ಎಪ್ಪತ್ತುವರ್ಷ. ಶರೀಫರು ಶರಣತತ್ತ್ವವನ್ನು ಒಪ್ಪಿಕೊಂಡಿದ್ದರಷ್ಟೆ. ಆ ಸಂಪ್ರದಾಯದಂತೆ ‘ವಿಭೂತಿವೀಳ್ಯೆ’ ಮಾಡಿಸಿಕೊಂಡು ದೇಹತ್ಯಾಗ ಮಾಡಬೇಕೆಂಬ ಅಪೇಕ್ಷೆ ಅವರಿಗಿತ್ತು. ಈ ವಿಧಾನ ಅನುಸರಿಸುವುದಕ್ಕೆ ಜಂಗಮಪಾದಪೂಜೆ ಹಾಗೂ ಜಂಗಮಪಾದವನ್ನು ಮಸ್ತಕದ ಮೇಲೆ ಇಟ್ಟು ಶಿವಸಾಯುಜ್ಯ ಮಂತ್ರಗಳ ಪಠಣ ಅಗತ್ಯವಾಗಿತ್ತು. ಆದರೆ, ಶರೀಫರ ಮಸ್ತಕದ ಮೇಲೆ ಪಾದವನ್ನು ಇಡಲು ಯಾವ ಜಂಗಮನೂ ಮನಸ್ಸು ಮಾಡಲಿಲ್ಲ. ಕೊನೆಗೆ ಹಿರೇಮಠದ ಕರಿಬಸವಯ್ಯ ಎಂಬುವರು ಶರೀಫರ ಅಂತಿಮ ಬಯಕೆಯನ್ನು ಈಡೇರಿಸಿದರು. ಆಕ್ಷಣವೇ ಅನಿಮಿಷ ದೃಷ್ಟಿಯಿಂದ ಶಿವಯೋಗದಲ್ಲಿ ತಮ್ಮ ನಿಲುವನ್ನು ಇರಿಸಿ; ಓಂಕಾರದ ಪ್ರಭೆಯಲ್ಲಿ ಅವರು ಬಯಲಾದರು.

ಶರೀಫರ ಅಂತ್ಯಕ್ರಿಯೆಯನ್ನು ಹಿಂದೂ ಪದ್ಧತಿಯಂತೆ ನಡೆಸಬೇಕೊ ಮುಸ್ಲಿಂ ಸಂಪ್ರದಾಯದಂತೆಯೋ ಎಂಬ ಚರ್ಚೆ ಶಿಷ್ಯರಲ್ಲಿ ಗೊಂದಲವನ್ನು ಉಂಟುಮಾಡಿತು. ಅಂತಿಮವಾಗಿ ಎರಡೂ ಕಡೆಯ ಶಿಷ್ಯರು ಒಪ್ಪಂದ ಮಾಡಿಕೊಂಡು ಅಪೂರ್ವರೀತಿಯಲ್ಲಿಯೇ ಶರೀಫರ ಸಂಸ್ಕಾರವನ್ನು ನಡೆಸಿದರು. ಒಂದು ಕಡೆ ಮುಸ್ಲಿಮರು ಕುರಾನ್ ಪಠಣ ಮಾಡಿದರೆ; ಮತ್ತೊಂದು ಕಡೆ ಹಿಂದೂಗಳು ಉಪನಿಷತ್ತು ಮಂತ್ರಗಳ ಪಠಣ ಮಾಡಿದರು. ‘ಇವ ನಮ್ಮವ’ ಎಂದು ಎಲ್ಲರೂ ಅಂತಿಮಯಾತ್ರೆಯಲ್ಲಿ ಭಾಗವಹಿಸಿದರು. ಮುಸ್ಲಿಂ ಬಂಧುಗಳು ‘ಶರೀಫಾ ನಾನಾಕಿ ದೋಸ್ತಾರಾ’ ಎಂದರೆ ಹಿಂದೂಗಳು ‘ಶರೀಫ ಶಿವಯೋಗಿ ಮಹಾರಾಜ್ ಕೀ ಜೈ’ ಎಂದರು. ಅವರ ಇಚ್ಛೆಯ ಮೇರೆಗೆ ತಾಯಿ-ತಂದೆಗಳ ಸಮಾಧಿ ಮಗ್ಗುಲಲ್ಲಿ ಅಂತ್ಯಕ್ರಿಯೆ ನೆರವೇರಿಸಿದರು. ಶರೀಫರ ಗದ್ದುಗೆ ವಿಶಿಷ್ಟವಾದುದು. ಅದು ಯಾವ ಧರ್ಮದ ಮಾದರಿಯಲ್ಲೂ ಇಲ್ಲ. ಅವರ ಗದ್ದುಗೆಯ ಎಡಭಾಗದಲ್ಲಿ ಮಹಮ್ಮದೀಯರು ಸಕ್ಕರೆಯನ್ನು ಓದಿಸುತ್ತಿದ್ದರೆ; ಬಲ ಭಾಗದಲ್ಲಿ ಹಿಂದೂಗಳು ಕಾಯಿ-ಕರ್ಪರ ಅರ್ಪಿಸುತ್ತಾರೆ. ಶರೀಫರ ಗದ್ದುಗೆಯಲ್ಲಿ ಮತೀಯ ಭಾವನೆಗೆ ಅವಕಾಶವಿಲ್ಲ. ಎಲ್ಲರೂ ಶರೀಫಜ್ಜನ ಮಕ್ಕಳೆಂಬಂತೆ ಏಕೋಭಾವ ನಮಗಿಂದು ಅಲ್ಲಿ ಕಾಣಸಿಗುತ್ತದೆ.

ಮಹಮ್ಮದ್ ಶರೀಫರು ಶಿವಯೋಗಿ ಶರೀಫರಾಗಿ ಹತ್ತೊಂಭತ್ತನೆಯ ಶತಮಾನದಲ್ಲಿ ಹಿಂದೂ-ಮುಸ್ಲಿಂ ಸಾಮರಸ್ಯದ ತಾತ್ತಿ್ವಕ ಭೂಮಿಕೆಯನ್ನು ಪಸರಿಸಿದ ಮಹಾಸಂತ. ವ್ಯಷ್ಟಿಯಿಂದ ಸಮಷ್ಟಿ ಬಾಳುವೆಯ ಮಹಾತತ್ತ್ವವನ್ನು ಸಾರುತ್ತ ‘ಬೋಧ ಒಂದೇ ಬ್ರಹ್ಮಭಾವ ಒಂದೇ’ ಎಂಬ ಸಾರ್ವತ್ರಿಕ ಹಾಗೂ ತಾತ್ತಿ್ವಕ ಮೌಲ್ಯವನ್ನು ಸಾರಿ ಜನಮಾನಸದಲ್ಲಿ ನೆಲೆನಿಂತಿದ್ದಾರೆ.

ಪ್ರಖ್ಯಾತ ಗೀತೆಗಳು

[ಬದಲಾಯಿಸಿ]
  1. ಲೋಕದ ಕಾಳಜಿ
  2. ಸ್ನೇಹ ಮಾಡಬೇಕಿಂತವಳ
  3. ಗುಡಿಯ ನೋಡಿರಣ್ಣ ದೇಹದ
  4. ಅಳಬೇಡ ತಂಗಿ ಅಳಬೇಡ
  5. ಕೋಡಗನ ಕೋಳಿ ನುಂಗಿತ್ತಾ ತಂಗಿ, ಕೋಡಗನ ಕೋಳಿ ನುಂಗಿತ್ತಾ! (ಪದ:ಕೆಳಗೆ ಕೊಟ್ಟಿದೆ)
  6. ಬಿದ್ದಿಯಬ್ಬೇ ಮುದುಕಿ ಬಿದ್ದಿಯಬ್ಬೇ
  7. ತರವಲ್ಲ ತಗಿ ನಿನ್ನ ತಂಬೂರಿ ಸ್ವರ, ಬರಿದೆ ಬಾರಿಸದಿರು ತಂಬೂರಿ
  8. ಮೋಹದ ಹೆಂಡತಿ ತೀರಿದ ಬಳಿಕ, ಮಾವನ ಮನೆಯ ಹಂಗಿನ್ಯಾಕೋ?
  9. ಹಾವು ತುಳಿದೇನೆ ಮಾನಿನಿ, ಹಾವು ತುಳಿದೇನೆ
  10. ಸೋರುತಿಹುದು ಮನೆಯ ಮಾಳಿಗಿ, ಅಜ್ಙಾನದಿಂದ
  11. ಎಲ್ಲರಂಥವನಲ್ಲ ನನ್ನ ಗಂಡ, ಬಲ್ಲಿದನು ಪುಂಡ, ಎಲ್ಲರಂಥವನಲ್ಲ ನನ್ನ ಗಂಡ
  12. ಎಂಥಾ ಮೋಜಿನ ಕುದುರಿ, ಹತ್ತಿದಮ್ಯಾಗ ತಿರುಗುವುದು ಹನ್ನೊಂದು

ವಿಶೇಷತೆ

[ಬದಲಾಯಿಸಿ]

ಅವರು ತತ್ವಪದಗಳ ರೂವಾರೀ, ತತ್ವಪದ ಎಂದರೆ ಜೀವನದಲ್ಲಿ ಮನುಷ್ಯ ಜೀವ ಮಾಡುವ ತಪ್ಪುಗಳನ್ನು, ಯೋಚಿಸುವ ರೀತಿಯನ್ನು ಯಾವುದೋ ಒಂದು ಸನ್ನಿವೇಶಕ್ಕೆ ಹೋಲಿಸಿ ಹಾಡಿನಿಂದ ವಿವರಿಸುವುದು. ಆ ಹಾಡನ್ನು ನೇರ ಅರ್ಥದಲ್ಲಿ ಕೇಳಿದರೆ ವಿಚಿತ್ರವೆನಿಸುವುದು ಆದರೆ ಅದರ ತಿರುಳು ಅರಿತು ಜೀವನಕ್ಕೆ ಹೊಲಿಸಿದರೆ ಅದರ ಅರ್ಥ ಹೊರ ಹೊಮ್ಮುವುದು. ಅವರು ಮುಸ್ಲಿಮರಾಗಿದ್ದರೂ ಅವರ ಗುರುಗಳು ಬ್ರಾಹ್ಮಣ ಗೊವಿಂದ ಭಟ್ಟರು.

ಅವರ ಗುರು-ಶಿಷ್ಯ ಸಂಬಂಧ ಉತ್ತರ ಕರ್ನಾಟಕದ ಮನೆಮಾತಾಗಿದೆ. ಇವರ ತತ್ವಪದಗಳ ಕೊನೆಯಲ್ಲಿ ಸಾಮಾನ್ಯವಾಗಿ ಶಿಶುನಾಳಧೀಶ ಹಾಗೂ ಗುರು ಗೊವಿಂದರ ಉಲ್ಲೇಖವಿರುತ್ತದೆ. ನವಲಗುಂದದ ನಾಗಲಿಂಗ ಸ್ವಾಮಿಗಳು ಇವರ ಪರಮ ಸ್ನೇಹಿತರು. ಹುಬ್ಬಳ್ಳಿಯ ಸಿದ್ಧಾರೂಢರೂ ಇವರ ಸಮಕಾಲೀನರು.

ಉದಾಹರಣೆಗೆ ಶರೀಫರ ಒಂದು ಒಗಟಿನ ಪದ, ಒಡಪಿನ ಅಥವಾ ಬೆಡಗಿನ ಹಾಡು:

‘ಕೋಡಗನ್ನ ಕೋಳಿ ನುಂಗಿತ್ತಾ’ ಎನ್ನುವ ಪದದಲ್ಲಿ; ಕೋಡಗ ಎಂದರೆ ಮಂಗ-ಮರ್ಕಟ; ಚಂಚಲ ಮನಸ್ಸು. ಕೋಳಿ ಬೆಳಗಿನ ಸೂಚನೆ. ಕೋಳಿ ಕೂಗಿದರೆ ಸೂರ್ಯೋದಯ; ಬೆಳಗಾಗುವುದು ಎಂದರೆ ಜ್ಞಾನೋದಯ. ಅದು ಆದಾಗ ಚಂಚಲ ಮನಸ್ಸು ಅದರಲ್ಲಿ ಕರಗಿಹೋಗುವುದು- ಇದು ಕೋಳಿ ಕೋಡಗನನ್ನು ನುಂಗುವುದು. ವೇದಾಂತದಲ್ಲಿ ಮನಸ್ಸನ್ನು ಮರ್ಕಟಕ್ಕೆ ಹಾಗು ಜ್ಞಾನೋದಯವನ್ನು ಸೂರ್ಯೋದಯಕ್ಕೆ ಹೋಲಿಸುವರು- ಇಲ್ಲಿ ಸೂರ್ಯೋದಯ ಸೂಚಿಸುವ ಕೋಳಿಗೆ ಹೋಲಿಸಿದೆ ; ಜ್ಞಾನೋದಯವಾದಾಗ ಮನಸ್ಸು ಲಯವಾಗಿ ಹೋಗುವುದು. ಅದು ಕೋಳಿ ಕೋಡಗನನ್ನು ನುಂಗಿದಂತೆ. ಇಲ್ಲಿ ಆ ಪ್ರತಿಮೆ ಉಪಯೋಗಿಸಿ ಹಾಡಿದ್ದಾರೆ. (ಸಂಸಾರವೆಂಬ ವೃಕ್ಷಕ್ಕೆ ವಿಷಯಗಳು ಟೊಂಗೆಗಳಿದ್ದಂತೆ. ಮನಸ್ಸೆಂಬ ಮಂಗವು ಸಂಸಾರದಲ್ಲಿ ವಿಷಯದಿಂದ ವಿಷಯಕ್ಕೆ ಹಾರುತ್ತ ಸುಖಪಡುತ್ತದೆ.)

  • ಮುಂದಿನ ಪದ್ಯಗಳೆಲ್ಲಾ ಹೀಗೆ ಚಂಚಲತೆಯನ್ನು ಅಚಲ-ಅವ್ಯಯ ಪರಬ್ರಹ್ಮ ತತ್ವವು ಅರಿವಾದಾಗ ಚಂಚಲತೆ ನಿಲ್ಲುವುದೆಂದು ಅನೇಕ ರೂಪಕದೊಡನೆ ಹಾಡಿದ್ದಾರೆ. ಕೊನೆಯ ಸಾಲು ಗುರು ಗೋವಿಂದರ ಕರುಣೆ ಶರೀಫರ ಅತ್ಮವನ್ನು - ನಾನೆಂಬ ಭಾವವನ್ನು ನುಂಗಿ -ಇಲ್ಲದಂತೆ ಮಾಡಿ ಜ್ಞಾನವನ್ನು ದೊರಕಿಸಿತು- ಎಂಬುದು ತಾತ್ಪರ್ಯ.

ಕೋಡಗನ ಕೋಳಿ ನುಂಗಿತ್ತಾ| ನೋಡವ್ವ ತಂಗಿ ಕೋಡಗನ ಕೋಳಿ ನುಂಗಿತ್ತಾ||ಪಲ್ಲ||

ಆಡು ಆನೆಯ ನುಂಗಿ ಗೋಡೆ ಸುಣ್ಣವ ನುಂಗಿ ಆಡಲು ಬಂದ ಪಾತರದವಳ ಮದ್ದಲಿ ನುಂಗಿತ್ತಾ ತಂಗಿ||೧|| ಕೋಡಗನ ಕೋಳಿ ನುಂಗಿತ್ತಾ||

ಒಳ್ಳು ಒನಕಿಯ ನುಂಗಿ ಕಲ್ಲು ಗೂಟವ ನುಂಗಿ (ಬೀಸುವ) ಮೆಲ್ಲಲು ಬಂದ ಮುದುಕಿಯ ನೆಲ್ಲು ನುಂಗಿತ್ತಾ ತಂಗಿ||೨||(ಕುಟ್ಟಲಿಕೆ ಬಂದ ಮುದುಕಿಯ ನೊಣವು) ಕೋಡಗನ ಕೋಳಿ ನುಂಗಿತ್ತಾ||

ಹಗ್ಗ ಮಗ್ಗವ ನುಂಗಿ ಮಗ್ಗವ ಲಾಳಿ ನುಂಗಿ ಮಗ್ಗದಲಿರುವ ಅಣ್ಣನನ್ನ ಮಣಿಯು ನುಂಗಿತ್ತಾ ತಂಗಿ||೩|| ಕೋಡಗನ ಕೋಳಿ ನುಂಗಿತ್ತಾ||

ಎತ್ತು ಜತ್ತಗಿ ನುಂಗಿ ಬತ್ತ ಬಾನವ ನುಂಗಿ ಮುಕ್ಕಟ ತಿರುವೊ ಅಣ್ಣನ ಮೇಳಿ ನುಂಗಿತ್ತಾ ತಂಗಿ||೪|| ಕೋಡಗನ ಕೋಳಿ ನುಂಗಿತ್ತಾ||

ಗುಡ್ಡ ಗಂವ್ಹರ ನುಂಗಿ (ಗವಿಯನು) ಗಂವ್ಹರ ಇರಿವೆಯ ನುಂಗಿ ಗುರುಗೋವಿಂದನ ಪಾದ ನನ್ನನೆ ನುಂಗಿತ್ತಾ ತಂಗಿ||೫|| (ಗೋವಿಂದಗುರುವಿನ ಪಾದ ಆತ್ಮವ ನುಂಗಿತ್ತಾ||೫||) ಕೋಡಗನ ಕೋಳಿ ನುಂಗಿತ್ತಾ||

ಪರಮಾತ್ಮರೂಪ ಪರತತ್ತ್ವವಾಗಲೀ, ಪರಮಾತ್ಮನ ಸಾಕ್ಷಾತ್ಕಾರದ ಯಾವುದೇ ಸಾಧನಗಳಾಗಲೀ ಮತ್ತು ಪರಮಾತ್ಮನ ದಿವ್ಯವಾಣಿರೂಪ ಸಂದೇಶವಾಗಲೀ ಇವು ಯಾವುದೇ ಒಂದು ಜನಾಂಗದ ಅಥವಾ ಯಾವುದೇ ಒಂದು ಸಂಪ್ರದಾಯದ ಸ್ವತ್ತು ಅಲ್ಲವೆಂದು ದಿಟ್ಟತನದಿಂದ ಬೋಧಿಸಿದವರು ಶಿಶುನಾಳದ ಶರೀಫ ಸಾಹೇಬರು. ಇವರು ಸರ್ವಧರ್ಮ ಸಮನ್ವಯದ ಸಾಕಾರಮೂರ್ತಿಗಳಾಗಿ ಮೂಡಿಬಂದವರು. ಏಕೆಂದರೆ ಎಲ್ಲರಿಗೂ ಸರ್ವಜ್ಞನಾದ ಪರಮಾತ್ಮನೊಬ್ಬನೇ ಮೂಲ ಜಗದ್ಗುರು ಎಂಬುದನ್ನು ತಿಳಿದಿದ್ದರು. ಈಶ್ವರನೇ ಪ್ರಾಚೀನ ಸೃಷ್ಟಿಯ ಆದಿಕಾಲದ ಋಷಿಗಳಿಗೂ ಗುರುವಾಗಿದ್ದಾನೆ. ಏಕೆಂದರೆ ಇವನು ಕಾಲಕ್ಕೆ ಅತೀತ. ಕಾಲಕ್ಕೆ ಒಳಪಟ್ಟವನಲ್ಲ. ಅಂದರೆ ಈ ಸೃಷ್ಟಿಯ ಉತ್ಪತ್ತಿ, ಸ್ಥಿತಿ, ಲಯಗಳಿಗೆ ಒಳಪಟ್ಟವನಲ್ಲ. ಪುರಾತನಕಾಲದ ಗುರುಗಳು ಕೂಡ ಕಾಲಕ್ಕೆ ಒಳಪಟ್ಟವರೇ. ಈ ಸೃಷ್ಟಿಯ ಆದಿಯಲ್ಲಿಯೂ, ಕಳೆದುಹೋದ ಸೃಷ್ಟಿಯಲ್ಲಿಯೂ ಮುಂದೆಯೂ ಸರ್ವಜ್ಞನಾಗಿ ಇರುವವನು ಪರಮಾತ್ಮನೊಬ್ಬನೇ. ಆದ್ದರಿಂದ ಎಲ್ಲರಿಗೂ ಮೂಲ ಗುರುವು ಪರಮಾತ್ಮನೇ. ಹೀಗಿರುವಾಗ ಪರಮಾತ್ಮನು ದೇಶಕ್ಕೆ ಕಾಲಕ್ಕೆ ತಕ್ಕಂತೆ ಅನೇಕ ಋಷಿಮುನಿಗಳನ್ನು, ಪೀರಪೈಗಂಬರರನ್ನು, ಶರಣ ಸಂತರನ್ನು ಸಾಧನವನ್ನಾಗಿ ಮಾಡಿಕೊಂಡು ತನ್ನ ಸಂದೇಶ ಬೀರಿದಾಗ ಜನರು ಆ ಮೂಲ ಪರಮಾತ್ಮನನ್ನು ಮತ್ತು ಪರಮಾತ್ಮನ ಸಂದೇಶವನ್ನು ಮರೆತು ಈ ಮಹಾತ್ಮರನ್ನೇ ಮುಖ್ಯವಾಗಿಟ್ಟುಕೊಂಡಾಗ ಜಗತ್ತಿನಲ್ಲಿ ವ್ಯಕ್ತಿ ಪೂಜೆ ಪ್ರಾರಂಭವಾಗಿ ಅನೇಕ ಧರ್ಮಗಳು, ಪಂಥಗಳು, ಮತಗಳು, ಸಂಪ್ರದಾಯಗಳು ಹುಟ್ಟಿಕೊಂಡವು. ಈ ರಹಸ್ಯವನ್ನು ಗಮನಿಸಿದ ಶಿಶುನಾಳ ಶರೀಫ ಸಾಹೇಬರು, ಸಮನ್ವಯದ ಸಂದೇಶ ಸಾರಿದರು.

ಬೋಧ ಒಂದೇ

ಬ್ರಹ್ಮನಾದ ಒಂದೇ

ಸಾಧನ ಮಾಡುವ ಹಾದಿ ಒಂದೇ

ಆದಿಪದ ಒಂದೇ

ಶಿಶುನಾಳಧೀಶನ ಭಾಷೆ ಒಂದೇ

ಭವನಾಶ ಒಂದೇ

ಎಂದು ಹಾಡಿದರು. ಹಾಗಾಗಿ ಶರೀಫ ಸಾಹೇಬರು ಸೂಫಿ ತತ್ತ್ವದ, ಶರಣತತ್ತ್ವದ ಹಾಗೂ ಉಪನಿಷತ್ತುಗಳು ಸಾರುವ ಅದ್ವೈತ ತತ್ತ್ವದ ತ್ರಿವೇಣಿ ಸಂಗಮವಾಗಿ ಬೆಳೆದು ಬಂದರು.

ತಂದೆಯ ಪಾತ್ರ

ಸಮನ್ವಯದ ಸಾಕಾರಮೂರ್ತಿಗಳಾಗಿ ಶರೀಫ ಸಾಹೇಬರನ್ನು ಬೆಳೆಸುವಲ್ಲಿ ಅವರ ತಂದೆ ಇಮಾಮ ಸಾಹೇಬರು, ತಾಯಿಯಾದ ಹಜ್ಜುಮಾರವರ ಪಾತ್ರ ಪ್ರಮುಖವಾದುದೆಂಬುದನ್ನು ನಾವು ಯಾರೂ ಮರೆಯುವಂತಿಲ್ಲ. ಹುಲಗೂರಿನ ಸೂಫಿ ಸಂತರಾದ ಹಜರೇಶಾ ಕಾದ್ರಿಯವರ ವರ ಪ್ರಸಾದದಿಂದ 1819ರ ಜುಲೈ 3ರಂದು ಈಗಿನ ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲ್ಲೂಕಿನ ಶಿಶುವಿನಹಾಳ ಗ್ರಾಮದಲ್ಲಿ ಜನಿಸಿದ ಶರೀಫ ಸಾಹೇಬರಿಗೆ ಇಮಾಮ ಸಾಹೇಬರು ಉತ್ತಮ ಸಂಸ್ಕಾರ ಕೊಡಿಸಿದರು.

ಶಿಶುನಾಳದಲ್ಲಿಯೇ ವಾಸಿಸುತ್ತಿದ್ದ ಹಿರೇಮಠದ ಶ್ರೀ ಸಿದ್ಧರಾಮಯ್ಯನವರು ಶರಣ ಸಾಹಿತ್ಯದಲ್ಲಿ ಅಪಾರ ಪಾಂಡಿತ್ಯವನ್ನು ಪಡೆದವರಾಗಿದ್ದರು. ಅಷ್ಟೇ ಅಲ್ಲ, ಶೂನ್ಯ ಸಂಪಾದನೆ, ಚಾಮರಸ ಕವಿ ವಿರಚಿತ ಪ್ರಭುಲಿಂಗಲೀಲೆ ಮೊದಲಾದ ಗ್ರಂಥಗಳನ್ನು ಸಾಮಾನ್ಯ ಜನರಿಗೂ ಮನಮುಟ್ಟುವಂತೆ ಪ್ರತಿಪಾದಿಸುತ್ತಿದ್ದರು. ತಮ್ಮ ಮಠದಲ್ಲಿಯೇ ಮಕ್ಕಳಿಗೆ ಗೌಂಟಿ ಶಾಲೆ ಆರಂಭಿಸಿ ಕನ್ನಡ ಓದು ಬರಹ ಕಲಿಸುತ್ತಿದ್ದರು. ಇದನ್ನು ಗಮನಿಸಿದ ಇಮಾಮ ಸಾಹೇಬರು ಶರೀಫರಿಗೆ ಶರಣ ಸಾಹಿತ್ಯದ ರಹಸ್ಯವನ್ನು ಕಲಿಸಿಕೊಡಬೇಕೆಂಬ ಉದ್ದೇಶದಿಂದ ಶರೀಫರನ್ನು ಕರೆದುಕೊಂಡು ಶ್ರೀ ಸಿದ್ಧರಾಮಯ್ಯ ಸ್ವಾಮಿಗಳ ಬಳಿ ಬರುತ್ತಾರೆ. ಅತ್ಯಂತ ವಿನಯದಿಂದ, ಮಹಾಸ್ವಾಮಿಗಳೇ, ನಮ್ಮ ಶರೀಫನಿಗೆ ತಮ್ಮಲ್ಲಿರುವಂಥ ಶರಣ ಸಾಹಿತ್ಯದ ರಹಸ್ಯ ವಿದ್ಯೆಯನ್ನು ಧಾರೆ ಎರೆದು ಪೋಷಿಸಬೇಕು ಎಂದು ಪ್ರಾರ್ಥಿಸುತ್ತಾರೆ. ಇವರ ಪ್ರಾರ್ಥನೆಗೆ ಮಹಾಸ್ವಾಮೀಜಿಯವರು ಮನ್ನಿಸಿ ಶರೀಫರಿಗೆ ಕನ್ನಡ ಕಲಿಸುವುದರ ಜತೆಗೆ ಶರಣರ ವಚನಾಮೃತವನ್ನು ಮನದಣಿಯುವಂತೆ ಉಣಿಸುತ್ತಾರೆ. ಶರೀಫರು ಕನ್ನಡ ಕಲಿತು ವಚನ ಸಾಹಿತ್ಯವನ್ನು ಚೆನ್ನಾಗಿ ಅಭ್ಯಾಸ ಮಾಡಿದ ಬಳಿಕ ಶಿಶುನಾಳದ ಸಮೀಪದಲ್ಲಿಯೇ ಇರುವ ಕಳಸ ಗ್ರಾಮದಲ್ಲಿ ಶ್ರೇಷ್ಠ ತತ್ತ್ವಜ್ಞಾನಿಗಳಾದ, ಯೋಗ ಬಲ್ಲವರಾದ, ದಾರ್ಶನಿಕರಾದ, ಸ್ಥಿತಪ್ರಜ್ಞರಾದ, ಸದಾ ಸಂಚಾರಿಯಾದ, ಅದ್ವೈತಿಗಳಾದ ಗೋವಿಂದಭಟ್ಟರು ನೆಲೆಸಿದ್ದರು. ಅವರ ಅಗಾಧ ಮಹಿಮೆ, ಪ್ರಭಾವ ಸುತ್ತೆಲ್ಲ ಹರಡಿತ್ತು. ಇವರ ಪ್ರಭಾವಕ್ಕೊಳಗಾದ ಇಮಾಮ ಸಾಹೇಬರು ಶರೀಫರನ್ನು ಕರೆದುಕೊಂಡು ಗೋವಿಂದಭಟ್ಟರ ಬಳಿ ಬಂದು ‘ಪೂಜ್ಯ ಗೋವಿಂದಭಟ್ಟರೇ, ನಮ್ಮ ಮಗನಾದ ಶರೀಫನನ್ನು ತಮ್ಮ ಉಡಿಯಲ್ಲಿ ಹಾಕುತ್ತಿದ್ದೇನೆ, ನಿಮ್ಮ ಶಿಷ್ಯನನ್ನಾಗಿ ಸ್ವೀಕರಿಸಿ ತಮ್ಮಲಿರುವಂಥ ಅಗಾಧವಾದ ಯೋಗ ವಿದ್ಯೆಯನ್ನು ಹಾಗೂ ಅದ್ವೈತ ತತ್ತ್ವದ ರಹಸ್ಯ ವಿದ್ಯೆಯನ್ನು ಕರುಣಿಸಿ ಮುಕ್ತನನ್ನಾಗಿ ಮಾಡಿ’ ಪ್ರಾರ್ಥಿಸುತ್ತಾರೆ. ಯೋಗ್ಯ ಶಿಷ್ಯನನ್ನು ಹುಡುಕುತ್ತಿದ್ದ ಗೋವಿಂದ ಭಟ್ಟರೂ ಶರೀಫರ ಸ್ಥಿತಿ ಗತಿಗಳನ್ನು ಗಮನಿಸಿ ಇಮಾಮ ಸಾಹೇಬರ ಮಾತಿಗೆ ಸಮ್ಮತಿಸಿ ಶಿಷ್ಯನನ್ನಾಗಿ ಸ್ವೀಕರಿಸಿ ತಮ್ಮಲ್ಲಿರುವ ಸಕಲ ವಿದ್ಯೆಯನ್ನು ಶರೀಫರಿಗೆ ಧಾರೆ ಎರೆಯುತ್ತಾರೆ.

ಇಂದಿನ ಪರಿಸ್ಥಿತಿಯಲ್ಲಿ ನಿತ್ಯ ಮಸೀದಿಗೆ ಹೋಗುವ ನಮ್ಮ ಮಗು ಆಕಸ್ಮಾತ್ ಸ್ನೇಹಿತರ ಜತೆಗೆ ಸೇರಿಕೊಂಡು ಮಠ ಮಂದಿರಗಳಿಗೆ ಹೋದರೆ, ತಂದೆಯಾದವನು ವಿರೋಧಿಸುತ್ತಾನೆ. ಅಥವಾ ಪ್ರತಿನಿತ್ಯ ಮಠ ಮಂದಿರಕ್ಕೆ ಹೋಗುವ ಮಗು ಆಕಸ್ಮಾತ್ ಸ್ನೇಹಿತರ ಜತೆಗೆ ಕೂಡಿಕೊಂಡು ಮಸೀದಿ, ದರ್ಗಾಗಳಿಗೆ ಹೋದರೆ ತಂದೆಯಾದವನು ಆ ಮಗುವನ್ನೂ ವಿರೋಧಿಸುತ್ತಾನೆ. ಹೀಗೆ ಸಂಕುಚಿತ ಭಾವನೆ ಉಳ್ಳವರಾಗಿ, ಸಂಪ್ರದಾಯವಾದಿಗಳಾಗಿ, ಕೋಮುವಾದಿಗಳಾಗಿ, ನಾವೆಲ್ಲ ಬೆಳೆಯುತ್ತಿರುವ ಇಂದಿನ ದಿನಮಾನಗಳಲ್ಲಿ ನಮ್ಮ ಸ್ಥಿತಿಗತಿಗಳನ್ನು ಗಮನಿಸಿದಾಗ, ಸ್ವತಃ ತಂದೆಯಾದ ಇಮಾಮ ಸಾಹೇಬರು ಕುರ್​ಆನ್ ಅಭ್ಯಾಸ ಮಾಡಿ ನಿತ್ಯವೂ ನಮಾಜ್ ಮಾಡುವ ಮಗನನ್ನು ಕರೆದುಕೊಂಡು ಧರ್ಮ, ಸಂಪ್ರದಾಯಗಳ ಚೌಕಟ್ಟನ್ನು ಮೀರಿ ಮಠಕ್ಕೆ ಕರೆದುಕೊಂಡು ಹೋಗಿ ಶರಣ ಸಾಹಿತ್ಯದ ಅಭ್ಯಾಸ ಮಾಡಿಸುತ್ತಾರೆಂದರೆ ಹಾಗೂ ಗೋವಿಂದ ಭಟ್ಟರ ಬಳಿ ಕರೆದುಕೊಂಡು ಹೋಗಿ ಉಪನಿಷತ್ತುಗಳ ಸಾರವಾದ ಅದ್ವೈತತತ್ತ್ವದ ರಹಸ್ಯವನ್ನು ಅಭ್ಯಾಸ ಮಾಡಿಸುತ್ತಾರೆಂದರೆ ಅವರ ವಿಶಾಲ ಭಾವನೆ ಎಂಥದ್ದಿತ್ತೆಂದು ನಾವು ಗಮನಿಸಬೇಕು. ಇಂದು ಪ್ರತಿ ತಂದೆಯೂ ಕೂಡ ತಮ್ಮ ಮಗು ವಿಶಾಲ ಭಾವನೆಯಿಂದ ಬೆಳೆಯಬೇಕಾಗಿತ್ತೆಂದರೆ ತಮ್ಮ ಧರ್ಮದ ಅಧ್ಯಯನದ ಜತೆಗೆ ಅನ್ಯಧರ್ಮದ ಅಧ್ಯಯನವನ್ನೂ ಮಾಡಲು ಅವಕಾಶ ಮಾಡಿಕೊಡಬೇಕು. ಹೀಗಾದಾಗಲೇ ಕೋಮು ಸಾಮರಸ್ಯ ಸಾಧ್ಯವಾಗಿ ಶಾಂತಿ ನೆಲೆಸುತ್ತದೆ.

ಅನ್ಯಧರ್ಮಕ್ಕೆ ಸೇರಿದ ಶರೀಫನಿಗೆ ಪೂಜ್ಯ ಸಿದ್ಧರಾಮಯ್ಯನವರು ಶರಣ ಸಾಹಿತ್ಯವನ್ನು ತಿಳಿಸಿಕೊಡುತ್ತಾರೆಂದರೆ ಗುರು ಗೋವಿಂದ ಭಟ್ಟರು ಅದ್ವೈತ ತತ್ತ್ವವನ್ನು ತಿಳಿಸಿಕೊಡುತ್ತಾರೆಂದರೆ ಅವರ ಭಾವನೆಯೂ ಎಷ್ಟೊಂದು ವಿಶಾಲವಾಗಿತ್ತೆಂಬುದನ್ನು ನಾವೆಲ್ಲರೂ ಪ್ರಾಮಾಣಿಕವಾಗಿ ಚಿಂತನೆ ಮಾಡುವ ವಿಷಯ.

ಶರೀಫಸಾಹೇಬರು ಗುರು ಗೋವಿಂದಭಟ್ಟರ ಉಪದೇಶಾಮೃತವನ್ನು ಪಾನಮಾಡಿ ಆನಂದದಿಂದ ಉದ್ಗಾರ ತೆಗೆದು, ಹೀಗೆ ಹಾಡಿದರು.

ದೊರಕಿದಾ ಗುರು ದೊರಕಿದಾ

ಪರಮಾನಂದ ಬೋಧ

ಅರಿವಿನೊಳಗೆ ಬಂದು

ದೊರಕಿದಾ ಗುರು ದೊರಕಿದಾ

ಶಿಶುನಾಳಧೀಶ ಪ್ರ

ಕಾಶ ಗೋವಿಂದನ

ಅಸಮ ತೇಜೋರೂಪ

ಕಿರಣದಿಂದಲೆ ಬಂದು

ವ್ಯರ್ಥಕಾಲ ಕಳೆಯದೇ ಮನುಷ್ಯ ಜನ್ಮದ ಸಫಲತೆ ಕುರಿತು ಸಂದೇಶ ನೀಡುತ್ತಾ, ಹೀಗೆ ಹಾಡಿದರು.

ಹೋಗುತಿಹುದು ಕಾಯ ವ್ಯರ್ಥ ಇದರ

ಲಾಘವ ತಿಳಿದವ ಯೋಗಿ ಸಮರ್ಥ

ಯೋಗಾಭ್ಯಾಸ ಮಾಡುವಾಗ ಸಾಧಕನಿಗೆ ಅವನ ಪೂರ್ವದ ಹೀನ ಸಂಸ್ಕಾರಗಳು ಹೇಗೆ ವಿಘ್ನ ಮಾಡುತ್ತವೆ ಎಂಬುದನ್ನು ಒಂದು ರೂಪಕ ಮಾಡಿ ತೋರಿಸುತ್ತಾರೆ.

ಸೋರುತಿಹುದು ಮನೆಯ ಮಾಳಿಗಿ

ಅಜ್ಞಾನದಿಂದ

ಸೋರುತಿಹುದು ಮನೆಯ ಮಾಳಿಗಿ

ದಾರು ಗಟ್ಟಿ ಮಾಳ್ಪರಿಲ್ಲ

ಕಾಳ ಕತ್ತಲೆಯೊಳಗೆ ನಾನು

ಮೇಲಕೇರಿ ಯೋಗಲಾರೆ

ಅಜ್ಞಾನಿಯಾದ ಜೀವನು ಸಂಸಾರದ ವ್ಯಾಮೋಹದಲ್ಲಿ ಮುಳುಗಿ ಅಮೂಲ್ಯವಾದ ಆಯುಷ್ಯ ಕಳೆದು, ಮುಪ್ಪಿನಾವಸ್ಥೆಯಲ್ಲಿಯೂ ಕೂಡ ಆಧ್ಯಾತ್ಮದ ಕಡೆ ಮುಖ ಮಾಡದವನನ್ನು ನೋಡಿ ಹೀಗೆ ಹಾಡುತ್ತಾರೆ.

ಬಿದ್ದಿಯಬೇ ಮುದುಕಿ ಬಿದ್ದಿಯಬೇ ||

ಸದ್ಯಕ್ಕಿದು ಹುಲುಗೂರು ಸಂತಿ

ಗದ್ದಲದೊಳಗ್ಯಾಕ ನಿಂತಿ?

ಬಿದ್ದು ಇಲ್ಲಿ ಒದ್ದಾಡಿದರ

ಎದ್ದು ಹ್ಯಾಂಗ ಹಿಂದಕ ಬರತಿ?

ಬಿದ್ದಿಯಬೇ ಮುದುಕಿ ಬಿದ್ದಿಯಬೇ ||

ಪರಮಾತ್ಮನ ಸಾಕ್ಷಾತ್ಕಾರ ಹೊರಗೆ ಎಲ್ಲಿಯೂ ಸಾಧ್ಯವಿಲ್ಲ. ಅಂತಮುಖಿಗಳಾಗಿ ದೇಹವೆಂಬ ದೇವಾಲಯದಲ್ಲಿಯೇ ಅವನನ್ನು ಕಾಣಬೇಕೆಂಬ ಸಂದೇಶ ನೀಡುತ್ತ ಹೀಗೆ ಹಾಡಿದರು.

ಗುಡಿಯ ನೋಡಿರಣ್ಣ ದೇಹದ

ಗುಡಿಯ ನೋಡಿರಣ್ಣ |

ಗುಡಿಯ ನೋಡಿರಿದು

ಪೊಡವಿಗೊಡೆಯ

ಕಡುಬೆಡಗಿನೋಳ್ ಒಳಗಡಗಿಕೊಂಡಿಹ

ಗುಡಿಯ ನೋಡಿರಣ್ಣ, ದೇಹದ ಗುಡಿಯ ನೋಡಿರಣ್ಣ

ಜೀವನ್ಮುಕ್ತರು ದೇಹ

ಧರಿಸಿದರೂ ಕೂಡ ಅದಕ್ಕೆ ಸಾಕ್ಷಿಯಾಗಿದ್ದುಕೊಂಡು ಹೇಗೆ ಸಂಚರಿಸುತ್ತಾರೆಂದು ಬಹಳ ಸೊಗಸಾಗಿ ಹಾಡಿದ್ದಾರೆ.

ಸಾಧುಗಳ ಸಹಜ ಪಥವಿದು

ಆನಂದದಿಂದಿರುವುದು ||

ಬೇಕು ಬ್ಯಾಡಾ ಎಂಬುದನೆಲ್ಲಾ

ಸಾಕು ಮಾಡಿ ವಿಷಯ ನೂಕಿ

ಲೋಕದೊಳು ಏಕವಾಗಿ

ಮೂಕರಂತೆ ಚರಿಸುತಿಹರು || 1 ||

ಎಲ್ಲೆ ಕುಳಿತರಲ್ಲೆ ದೃಷ್ಟಿ

ಎಲ್ಲೆ ನಿಂತರಲ್ಲೆ ಲಕ್ಷ

ಅಲ್ಲೆ ಇಲ್ಲೆಯೆಂಬುದಳಿದು

ಎಲ್ಲ ತಾವಾಗಿ ಚರಿಸುತಿಹರು || 2 ||

ದೇಹಧರಿಸಿ ಮೋಹ ಸರಿಸಿ

ದೇಹಭೋಗ ನಿತ್ಯ ನೀಗಿ

ನಿರ್ಮಲಾತ್ಮ ಶಿಶುನಾಳೇಶನ

ಬೆಳಕಿನೊಳು ಬೆಳಗುತಿಹರು || 3 ||

ವಿಷಮತೆಯಲ್ಲಿ ಸಮತೆ

ಶರೀಫ ಸಾಹೇಬರು ಆಧ್ಯಾತ್ಮ ಸಾಧನೆಯ ಜೊತೆಗೆ ಆಗಿನ ಕಾಲದಲ್ಲಿ ಕನ್ನಡದಲ್ಲಿ ಮುಲ್ಕಿ ಪರೀಕ್ಷೆ ಮುಗಿಸಿಕೊಂಡು ತಮ್ಮ ಸುತ್ತಮುತ್ತಲಿನ ಕೆಲವು ಗ್ರಾಮಗಳಲ್ಲಿ ಶಿಕ್ಷಕರಾಗಿಯೂ ಸೇವೆ ಮಾಡಿದರು. ಇದೇ ಸಂದರ್ಭದಲ್ಲಿ ಕುಂದಗೋಳದ ಫಾತೀಮಾ ಅವರ ಜೊತೆಗೆ ಲಗ್ನವಾಗಿ ಗ್ರಹಸ್ಥ ಜೀವನವನ್ನು ಸ್ವೀಕಾರ ಮಾಡಿದರು. ಅವರ ದಾಂಪತ್ಯ ಜೀವನದ ಫಲವಾಗಿ ಒಂದು ಹೆಣ್ಣು ಮಗು ಹುಟ್ಟಿತು. ಆ ಹೆಣ್ಣು ಮಗು ಬಹಳ ಕಾಲ ಬದುಕಲಿಲ್ಲ. ಆ ಮಗುವಿನ ಚಿಂತೆಯಲ್ಲಿ ಫಾತೀಮಾ ಅವರೂ ಕೂಡ ಅನಾರೋಗ್ಯದಿಂದ ತೀರಿಕೊಂಡರು. ಅಂಥ ದುಃಖದ ಪ್ರಸಂಗದಲ್ಲಿಯೂ ಕೂಡ,

ಮೋಹದ ಹೆಂಡತಿ ತೀರಿದ ಬಳಿಕ

ಮಾವನ ಮನೆಯ ಹಂಗಿನ್ಯಾಕೋ

ಎಂದು ಬದುಕಿನ ಸ್ಥಿತಿ ವಿವರಿಸಿದರು.

ಬಿಡತೇನಿ ದೇಹ ಬಿಡತೇನಿ

ಜೀವನದುದ್ದಕ್ಕೂ ಈ ನಾಡಿನ ತುಂಬೆಲ್ಲ ಸಂಚರಿಸಿ, ಜನಜಾಗೃತಿಯನ್ನು ಉಂಟು ಮಾಡುತ್ತ ಭಾವೈಕ್ಯದ ಸಂದೇಶ ಬೀರುತ್ತ, ನಡೆಯೋ ದೇವರ ಚಾಕರಿಗೆ ಮುಕ್ತಿಗೊಡೆಯ ಖಾದರಲಿಂಗ ನೆಲೆಸಿರ್ಪ ಗಿರಿಗೆ ಎಂದು ಹಾಡುತ್ತ ಜ್ಞಾನದ ಶಿಖರವನ್ನೇರಿ ತುತ್ತ ತುದಿಯ ಮೇಲೆ ನಿಂತು,

ನಾ ನಾ ಎಂಬುದು ನಾನಲ್ಲ ಈ ಮಾನುಷ ಜನ್ಮವು ನಾನಲ್ಲ,

ಜಾತಿಗೋತ್ರಗಳು ನಾನಲ್ಲ, ಬಹು ಪ್ರೀತಿಯ ಸತಿ ಸುತ ನಾನಲ್ಲ,

ವೇದ ಓದುಗಳು ನಾನಲ್ಲ, ಒಣ ವಾದ ಮಾಡಿದವ ನಾನಲ್ಲ,

ನಾನಾ ರೂಪವು ನಾನಲ್ಲ, ನಾ ಶಿಶುನಾಳಧೀಶನ ಬಿಡಲಿಲ್ಲ

ಶರೀಫರು ಜೀವನದುದ್ದಕ್ಕೂ ಸದಾ ಸಂಚಾರಿಯಾಗಿಯೇ ಬದುಕುತ್ತ ತಮ್ಮ ಪದ್ಯಗಳಿಂದ ಬದುಕಿನಲ್ಲಿ ಬರುವ ಅನಂತ ಸಮಸ್ಯೆಗಳಿಗೆ ಪರಿಹಾರ ನೀಡುತ್ತ ಸಾಧಕರಿಗೆ ಎಚ್ಚರಿಸುತ್ತ, ದುರ್ಜನರನ್ನು ತಿದ್ದಿ ತೀಡುತ್ತ, ಯೋಗದ ಮಹತ್ವವವನ್ನು ಸಾರುತ್ತ, ಅದ್ವೈತ ಸಿದ್ಧಾಂತದ ತತ್ತ್ವವನ್ನು ಎತ್ತಿ ಹಿಡಿಯುತ್ತ, ಜಾತಿ ಮತಗಳೆಲ್ಲ ಮನುಜ ಕಲ್ಪಿತದ ಸಂಕೋಲೆ ಎಂದು ಸಾರಿ ಧಿಕ್ಕರಿಸುತ್ತ ಸರ್ವಧರ್ಮ ಸಮನ್ವಯದ ಸಂದೇಶ ಬೀರುತ್ತ ಜೀವನದುದ್ದಕ್ಕೂ ಸಂಚರಿಸಿದವರು ಶಿಶುನಾಳ ಶರೀಫ ಸಾಹೇಬರು. ಇವರ ಜೀವಿತಾವಧಿಯಲ್ಲಿ ಇವರ ಒಡನಾಡಿಗಳಾಗಿ ಇದ್ದವರಲ್ಲಿ ನವಲಗುಂದದ ನಾಗಲಿಂಗಪ್ಪನವರು, ಗರಗದ ಮಡಿವಾಳಪ್ಪನವರು, ಹುಬ್ಬಳ್ಳಿಯ ಸಿದ್ಧಾರೂಢರು, ಉಣಕಲ್ಲದ ಸಿದ್ಧಪ್ಪಜ್ಜ ಮೊದಲಾದವರು ಪ್ರಮುಖರು. ಇಂಥ ಶರೀಫರಿಗೂ ಕೂಡ ಅಂದಿನ ಕಾಲದಲ್ಲಿ ಸಂಕೋಚಿತ ಮನೋಭಾವನೆ ಉಳ್ಳವರು ಪೀಡಿಸದೇ, ತೊಂದರೆ ಕೊಡದೇ ಇರಲಿಲ್ಲ. ಶರೀಫರು ಆವಾಗಲೂ ಕೂಡ ಅವರಿಗೆ ದಿಟ್ಟತನದಿಂದ ಉತ್ತರ ಕೊಟ್ಟರು.

ನನ್ನೊಳಗೆ ನಾ ತಿಳಕೊಂಡೆ

ಎನಗೆ ಬೇಕಾದ ಗಂಡನ ಮಾಡಿಕೊಂಡೆ

ಆಜ್ಞಾಪ್ರಕಾರ ನಡಕೊಂಡೆ

ನಾ ಎಲ್ಲರ ಹಂಗೊಂದು ಹರಕೊಂಡೆ

ಮತ್ತೆ ಕೂಡ ನಿಂದಿಸಿದ ಪೀಡಿಸಿದ ಜನರಿಗೆ ಹೀಗೆ ಉತ್ತ್ತಸಿದರು.

ಸದ್ಗುರು ಸಾಕಿದ ಮದ್ದಾನೆ ಬರುತಿದೆ

ಎದ್ದು ಹೋಗಿರಿ ಇದ್ದ ನಿಂದಕರೆಲ್ಲ

ಬಿದ್ದು ಈ ಭವದೊಳು ಹೊರಳ್ಯಾಡೋ ಜನರನ್ನು

ಉದ್ಧಾರ ಮಾಡುತ ಬರುತಲಿದೆ.

ಶಿಶುನಾಳ ಶರೀಫರು ಕನ್ನಡದ ಅನುಭಾವಿ ಕವಿ. ಲೌಕಿಕದ ಎಲ್ಲ ಬೆಡಗು ಬಿನ್ನಾಣಗಳನ್ನು ಬಲ್ಲ ಕವಿ. ಲೌಕಿಕ ಅನುಭವಗಳ ತಾತ್ವಿಕ ದರ್ಶನಕ್ಕಿಳಿದು ಮಾತಾಡಿದರು. ಹೀಗಾಗಿಯೆ ಅನುಭಾವಿ ಕವಿ ಎನಿಸಿಕೊಂಡರು. ಕನ್ನಡ ತತ್ವಪದಕಾರರಲ್ಲಿ ಅವರದೇ ಒಂದು ತೂಕ. 18-19ನೇ ಶತಮಾನದಲ್ಲಿ ಕನ್ನಡ ಕಾವ್ಯದ ಭಿನ್ನ ಸಾಧ್ಯತೆಯೊಂದನ್ನು ರೂಪಿಸಿಕೊಟ್ಟರು. ತನ್ನ ಕಾಲದ ಸಾಮಾಜಿಕ ಸಂಘರ್ಷ, ಆಧುನಿಕತೆಯ ಪ್ರವೇಶ, ರಾಜಕಾರಣ, ಧರ್ಮಗಳ ಕೊಳುಕೊಡೆ, ಅಂಚಿನ ಸಮುದಾಯಗಳ ದನಿ ಎಲ್ಲವನ್ನು ಹಿಡಿದಿಟ್ಟು ಹುರಿಗೊಳಿಸಿ ಕಾವ್ಯವಾಗಿಸಿದರು. ಅವರ ಕಾವ್ಯದಲ್ಲಿ ಹೊಸ ಆಶಯ, ಹೊಸ ಆಕೃತಿ ಮೈದಳೆದ ಬಗೆಯನ್ನು ಕನ್ನಡ ಕಾವ್ಯಲೋಕ ಈಗಾಗಲೆ ಗುರುತಿಸಿದೆೆ.

ಕ್ರಾಂತಿಕಾರಿ ಕವಿಯೊಬ್ಬ ಕೇವಲ ಸಂವೇದನೆಯಲ್ಲಿ ಮಾತ್ರವಲ್ಲ ಅದರ ಆಕೃತಿ, ಭಾಷೆ, ಶೈಲಿ, ನುಡಿಗಟ್ಟಿನಲ್ಲೂ ಹೊಸತನಕ್ಕಾಗಿ ಹಂಬಲಿಸುತ್ತಾನೆ. ಶರೀಫರು ಹಾಗೆ ಹಂಬಲಿಸಿ ಎದೆಯ ಹಾಲನ್ನೂ, ಹಾಲಾಹಲವನ್ನೂ ಒಟ್ಟಿಗೇ ಕಾಣಿಸಿದರು. ಜಾತಿ, ಹಣ, ಅಧಿಕಾರವನ್ನು ಮೀರಿ ಬದುಕನ್ನು ಅರ್ಥೈಸಿಕೊಂಡ ಬಗೆಯೇ ಅವರ ಕಾವ್ಯದ ಒಟ್ಟು ಭಿತ್ತಿಯನ್ನು ಸೃಜಿಸಿದೆ. ಶರೀಫರಂಥ ಫಕೀರರಿಗೆ ಇದು ಸಹಜ ಆಯ್ಕೆಯೇ ಆಗಿತ್ತು. ಕಳಸದ ಗುರು ಗೋವಿಂದಭಟ್ಟರ ಒಡನಾಟ ಇದನ್ನು ಇನ್ನೊಂದು ಎತ್ತರಕ್ಕೆ ಒಯ್ದಿತು. ಈ ಕವಿಗಳ ಸಂಬಂಧ ಎರಡು ಧರ್ಮಗಳ ಬೆಸುಗೆಯಲ್ಲಿ ಧರ್ಮದ ವಿಕಾರಗಳನ್ನು ಕಳೆದು ಒಳಿತನ್ನಷ್ಟೆ ಅನ್ವೇಷಿಸಿತು. ಸಹಜ, ಸರಳ ಬದುಕಿನ ನೆಮ್ಮದಿ, ಘನತೆಯನ್ನೇ ಹುಡುಕಿತು. ವಚನಕಾರರು ಛಲ ಬೇಕು ಶರಣಂಗೆ ಎಂದರೆ, ಶರೀಫರು ಎಚ್ಚರವಿರಲಿ ತಮ್ಮಾ ಎಂದರು. ಜಾತಿ, ಹಣ, ಅಧಿಕಾರ ಕುರಿತ ಎಚ್ಚರ. ಸ್ವಲ್ಪ ತಿಳಿದು ಸಂಸಾರ ಮಾಡಿದರೆ, ಎಚ್ಚರದಿಂದ ಜೀವನದ ವ್ಯಾಪರದಲ್ಲಿ ತೊಡಗಿದರೆ ನಾಲ್ಕು ದಿನ ನೆಮ್ಮದಿಯಾಗಿ ಬಾಳಬಹುದೆಂದರು. ದೇಹವೇ ಮಸೀದಿ, ದೇಗುಲವೆಂದು ನಂಬಿದರು. ತಮ್ಮ ಸಾಮಾನ್ಯ ತಿಳಿವಳಿಕೆಯ ದಾರಿಗಳನ್ನೆ ಘನವಾಗಿ ತೆರೆದು ತೋರಿಸಿದರು. ಜನ ಇಂಥ ತಿಳಿವಳಿಕೆಯ ದಾರಿಗಳಿಗೆ ಬೆರಗಾಯಿತು. ಗುಡ್ಡ, ಕಾಡು, ಮೇಡು ಅಲೆಯುತಿದ್ದ ಶರೀಫರು ತಮ್ಮ ಕವಿ ಎನಿಸಿತು. ಅವರ ಹುಚ್ಚಾಟಗಳು, ಮೌನಗಳ, ಜಗಳಗಳು ಒಳಗಣ್ಣು ತೆರೆಸುವ ಸಾಧನಗಳಾದವು. ದಂತಕತೆಗಳಾಗಿ ಸಮುದಾಯದ ಹಲವು ಅರ್ಥಗಳಿಗೆ ಕಾರಣವಾದವು. ಸ್ಥಳೀಯ ಅನುಭವಗಳು ಪ್ರಜ್ಞೆಗಳಾಗಿ ವಿಕಾಸಗೊಂಡವು. ವಿಚಾರಗಳಾಗಿ ತತ್ವಗಳಾಗಿ ಜನಮಾನಸದಲ್ಲಿ ಬೆರೆತುಹೋದವು. ಒಬ್ಬ ಕವಿಯ ನಿಜವಾದ ಅದೃಷ್ಟವೆಂದರೆ ಇದೇ ಇರಬೇಕು.

ಶರೀಫರ ತತ್ವಪದಗಳು ಯಾವುದಾದರೊಂದು ಸ್ಥಾಪಿತ ಮತಕ್ಕೆ ಗಂಟುಬಿದ್ದವುಗಳಲ್ಲ. ಶರೀಫರದೇ ಒಂದು ಮತವಿದೆ. ಅದು ರಾಮಾಯಣ, ಮಹಾಭಾರತ, ವಚನ, ಕೀರ್ತನೆ, ಪ್ರಭುಲಿಂಗಲೀಲೆ, ಸೂಫೀತತ್ವ ಎಲ್ಲವುಗಳಿಂದ ಕಲಿತಿದೆ. ತಮ್ಮ ಪರಿಸರದಲ್ಲಿ ಹಲವು ಪಂಥಗಳ ತೆಕ್ಕೆಗೂ ಬಂದರು. ಹುಬ್ಬಳ್ಳಿಯ ಸಿದ್ದಾರೂಢರು, ಗರಗದ ಮಡಿವಾಳಪ್ಪನವರು, ನವಲಗುಂದದ ನಾಗಲಿಂಗಜ್ಜ ಇವರ ಒಡನಾಟ ಮತ್ತು ಇವರ ಕುರಿತ ಜನಕಥನಗಳು ಶರೀಫರ ಚಿಂತನೆಯ ದಾರಿಯನ್ನು ಭಿನ್ನವಾಗಿಸಿದವು. ಹಾಗೆಯೇ ಹೊಸಕಾಲದ ಮುನ್ಸೂಚನೆಗಳು ಕೂಡ ಇವೆ. ಗಿರಣಿಯ ವಿಸ್ತಾರ, ಬದುಕಿನ ಹಾಗೂ ಸಮಾಜದ ವಿಸ್ತಾರದ ಸಂಕೇತವೂ ಆಯಿತು. ಆ ಕಾಲದ ಪಲ್ಲಟಗಳ ಸೂಚನೆಯೂ ಆಯಿತು. ಎಲ್ಲ ಧರ್ಮ, ಸಂಪ್ರದಾಯಗಳ ಕರ್ಮಠತನವನ್ನು ಮೀರಿನಿಂತಿದ್ದೆ ದೊಡ್ಡ ಸಾಧನೆ. ಇಂಥ ಕರ್ಮಠತನವನ್ನು ಮೀರುವ ಹಲವು ಹೊಸ ಕಾವ್ಯದಾರಿಗಳು ಕನ್ನಡದಲ್ಲಿ ಮೊದಲ ಬಾರಿಗೆ ಎಂಬಂತೆ ಹೊಸ ಭಾಷೆಯಲ್ಲಿ ತೆರೆದುಕೊಂಡವು. ಕಾವ್ಯದ ಈ ಹೊಸದಾರಿಗಳು ಹೊಸ ಮೌಲ್ಯಗಳ ಸೂಚನೆಗಳು ಕೂಡ ಹೌದು.

ಗಂಧ ವಿಭೂತಿ ತೊಗಲಿಗೆ ಧರಿಸಿ, ಜಾತಿ ಜಾತಿ ಬ್ಯಾರೆಯೆನಿಸಿ

ಶೀಲದ ಮಾತಾಡತಿರಿ ನಾಡೆಲ್ಲ

ನಟನೆ ಇರದ ಹಾದಿ ತೋರುವವನು

ಬಣ್ಣ ಬಣ್ಣದ ಮಂದಿ ಮಧ್ಯ ಇದ್ದೂ ತಣ್ಣಗಿರುವವನು

ಕಟಕಿ ನುಡಿಗೆ ಜಗ್ಗದಿರುವವನು

ತನ್ನ ನಿಜದ ಧ್ಯಾನ ನಡೆಸುವವನು

ಇವೆಲ್ಲ ಶರೀಫರು ಒಂದು ಮೌಲ್ಯವಾಗಿ ಕಂಡ ಬಗೆ. ಇಂಥ ಮೌಲ್ಯಗಳ ಸ್ವೀಕಾರವೆ ನಿಜ ಬದುಕಿನ ಸ್ವೀಕಾರ ಕೂಡ ಆಗಿದೆ.

ಚಲನಚಿತ್ರ

[ಬದಲಾಯಿಸಿ]

೧೯೯೦ ರಲ್ಲಿ ಟಿ.ಎಸ್.ನಾಗಾಭರಣ ಅವರ ನಿರ್ದೇಶನದಲ್ಲಿ ಸಂತ ಶಿಶುನಾಳ ಶರೀಫ ಚಿತ್ರವು ತೆರೆಕಂಡಿತು. ಕನ್ನಡ ನಟರಾದ ಶ್ರೀಧರ್, ಸಾಹಿತಿಗಳಾದ ಗಿರೀಶ್ ಕಾರ್ನಾಡ್ ಹಾಗೂ ನಟಿ ಸುಮನ್ ರಂಗನಾಥ್ ಅವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರವು ರಾಷ್ಟ್ರೀಯ ಚಿತ್ರ ಪ್ರಶಸ್ತಿಗಳಲ್ಲಿ ಶ್ರೇಷ್ಠ ರಾಷ್ಟ್ರೀಯ ಏಕತಾ ಚಿತ್ರವೆಂಬ ಪ್ರಶಸ್ತಿ ಪಡೆಯಿತು.

ಹಾಡುಗಳು

[ಬದಲಾಯಿಸಿ]

ಕನ್ನಡದ ಖ್ಯಾತ ಹಾಡುಗಾರ ಶ್ರೀ ಅಶ್ವಥ್ಥರು ಇವರ ಅನೇಕ ರಚನೆಗಳನ್ನು ಹಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಖ್ಯಾತ ಕಲಾವಿದ ರಘು ದೀಕ್ಷಿತ್ ಅವರು ಶಿಶುನಾಳ ಶರೀಫರ ಕೆಲ ಗೀತೆಗಳಿಗೆ ವಿಶೇಷ ಶೈಲಿಯ ಸಂಗೀತ ಸಂಯೋಜನೆ ನೀಡಿ ದೇಶದಾದ್ಯಂತ ಪ್ರಖ್ಯಾತಿ ಪಡೆದಿದ್ದಾರೆ.[]

ಇಂಥ ದಿವ್ಯ ಸಂದೇಶ ನೀಡುತ್ತ 70 ವರ್ಷಗಳ ಕಾಲ ಬದುಕಿ ಹುಟ್ಟಿದ ದಿನದಂದೇ (1889 March 7) ಎಲ್ಲರಿಗೂ ಹೇಳಿ ಕೇಳಿ, ಬಿಡತೇನಿ ದೇಹ ಬಿಡತೇನಿ ಎಂದು ಹಾಡುತ್ತ ವಿದೇಹ ಕೈವಲ್ಯವನ್ನು ಪಡೆದು ಶಿಶುನಾಳಧೀಶನಲ್ಲಿ ಒಂದಾದರು. ಅವರ ದಿವ್ಯ ಸಂದೇಶ ನಮ್ಮೆಲ್ಲರಿಗೆ ದಾರಿದೀಪವಾಗಲಿ. ತುಂಬು ಜೀವನವನ್ನು ನಡೆಸಿದ ಶರೀಫರ ಮರಣದ ತರುವಾಯ ಅವರ ಅಂತ್ಯಕ್ರಿಯೆಯು ಹಿಂದು ಹಾಗು ಮುಸಲ್ಮಾನ ಭಕ್ತರ ಸಮ್ಮುಖದಲ್ಲಿ ನೆರವೇರಿತು.

ಹೊರಗಿನ ಕೊಂಡಿಗಳು

[ಬದಲಾಯಿಸಿ]
  • ಶಿಶುನಾಳ ಷರೀಫರ ತತ್ವಪದಗಳ ಸಾಹಿತ್ಯ- ವಿಕಿ ಸೋರ್ಸ್:->[೧]
  • ವಿಕಿಸೋರ್ಸ್ನಲ್ಲಿ ದಾಸ ಸಾಹಿತ್ಯ:[೨]
  • ಗೋವಿಂದಭಟ್ಟರು ಮತ್ತು ಶರೀಫ:[೩][ಶಾಶ್ವತವಾಗಿ ಮಡಿದ ಕೊಂಡಿ]
  • ಯು ಟ್ಯೂಬ್:[೪]
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
  • ಶಿಶುನಾಳ ಷರೀಫರ ಪದಗಳು - ಚಿಲುಮೆ ತಾಣದಲ್ಲಿ:->[೫]

ಉಲ್ಲೇಖಗಳು

[ಬದಲಾಯಿಸಿ]