ವಿಷಯಕ್ಕೆ ಹೋಗು

ಶ್ರೀ ರಾಘವೇಶ್ವರ ಭಾರತೀ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶ್ರೀ ರಾಘವೇಶ್ವರ ಭಾರತಿ
ಗುರುಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ, ೩೫ನೇ ಪೀತಠಾಧಿಪತಿಗಳು ಶ್ರೀ ರಾಮಚಂದ್ರಾಪುರ ಮಠ
ತತ್ವಶಾಸ್ತ್ರಅದ್ವೈತ ವೇದಾಂತ


ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಅವಿಚ್ಛಿನ್ನ ಪರಂಪರೆಯ ಶ್ರೀ ರಾಮಚಂದ್ರಾಪುರ ಮಠದ ಗೋಕರ್ಣ ಸಂಸ್ಥಾನದ ಈಗಿನ ಪೀಠಾಧಿಪತಿಗಳು. ಇವರು ಶ್ರೀ ಶ್ರೀ ರಾಘವೇಂದ್ರ ಭಾರತೀ ಮಹಾಸ್ವಾಮಿಗಳವರಿಂದ ೧೯೯೪ರ ಏಪ್ರಿಲ್‌ನಲ್ಲಿ,(೧೫-೪-೧೯೯೪) ಸಂನ್ಯಾಸ ದೀಕ್ಷೆ ಪಡೆದರು. ದಿ. ೧೭-೪-೧೯೯೬ ರಲ್ಲಿ ಯೋಗ ಪಟ್ಟಾಭಿಷೇಕವಾಗಿ ಶ್ರೀ ರಾಘವೇಶ್ವರ ಭಾರತೀ ಎಂಬ ಅಭಿಧಾನ ಪಡೆದರು. ೧೯೯೯ರ ಏಪ್ರಿಲ್ ನಲ್ಲಿ ಪೀಠಾರೋಹಣ ಮಾಡಿದರು.

ಜನನ ಮತ್ತು ಬಾಲ್ಯ

ತಮ್ಮ ಪೂರ್ವಾಶ್ರಮದಲ್ಲಿ ಸ್ವಾಮೀಜಿ ಅವರು ಹರೀಶ ಶರ್ಮಾ ಎಂಬ ಹೆಸರನ್ನು ಹೊಂದಿದ್ದರು. ಅವರು ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಚದರವಳ್ಳಿ ಎಂಬ ಹಳ್ಳಿಯಲ್ಲಿ ಹವ್ಯಕ ಕುಟುಂಬದಲ್ಲಿ ಜನಿಸಿದರು. ಅವರು ಶ್ರೀಮತಿ ವಿಜಯಲಕ್ಷ್ಮಿ ಮತ್ತು ಶೀನಿವಾಸ ಭಟ್ಟರ ಪ್ರಥಮ ಸುಪುತ್ರರು. ಇವರು ಪ್ರೌಢಶಾಲೆಯವರೆಗೆ ಸಾಂಪ್ರದಾಯಿಕ ಶಿಕ್ಷಣವನ್ನು ಪಡೆದರು. ಗೋಕರ್ಣ ಮತ್ತು ವಾರಣಾಸಿಯಲ್ಲಿ ವೈದಿಕ ಶಿಕ್ಷಣವನ್ನು ಪಡೆದು ತಮ್ಮ ೧೮ನೇ ವಯಸ್ಸಿನಲ್ಲಿ ಬ್ರಹ್ಮೈಕ್ಯ ಶ್ರೀ ಶ್ರೀ ರಾಘವೇಂದ್ರ ಭಾರತೀ ಸ್ವಾಮಿಗಳಿಂದ ಸಂನ್ಯಾಸ ಸ್ವೀಕರಿಸಿ ಮೈಸೂರಿನಲ್ಲಿ ತಮ್ಮ ವೈದಿಕ ಶಿಕ್ಷಣವನ್ನು ಮುಂದುವರೆಸಿದರು.

ಸನ್ಯಾಸ ಮತ್ತು ಪೀಠಾರೋಹಣ

ಶ್ರೀ ರಾಘವೇಂದ್ರ ಭಾರತೀ ಸ್ವಾಮಿಗಳು ದಿನಾಂಕ ೨೬ ನವೆಂಬರ್ ೧೯೯೮ ರಂದು ಬ್ರಹ್ಮೈಕ್ಯರಾದ ನಂತರ ರಾಘವೇಶ್ವರ ಭಾರತೀ ಸ್ವಾಮಿಗಳು ೧೯೯೯ರ ಏಪ್ರಿಲ್‍ನಲ್ಲಿ ( ದಿನಾಂಕ ೨೮ ಬುಧವಾರ) ತಮ್ಮ ೨೩ನೇ ವಯಸ್ಸಿನಲ್ಲಿ ರಾಮಚಂದ್ರಾಪುರ ಮಠದ ಪೀಠಾಧಿಪತಿಯಾಗಿ ಅಭಿಷಿಕ್ತರಾದರು. ಇವರು ಶ್ರೀರಾಮಚಂದ್ರಾಪುರಮಠ ಪರಂಪರೆಯ ೩೬ನೆಯ ಯತಿಗಳು.

ಧಾರ್ಮಿಕ ಚಿಂತನೆ ಮತ್ತು ಚಟುವಟಿಕೆಗಳು

ಇತರ ಸಾಮಾಜಿಕ ಚಟುವಟಿಕೆಗಳ ಜೊತೆಗೆ, ವೈದಿಕ ಸಂಸ್ಕೃತಿಯನ್ನು ಉಳಿಸುವ ಕಡೆ ಮೊದಲು ಪ್ರಾಧಾನ್ಯತೆ ನೀಡಿದರು. ಅನೇಕ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದರು. ಬೆಂಗಳೂರಿನ ಗಿರಿನಗರದ ಬಳಿಯಿರುವ ರಾಮಾಶ್ರಮ, ಸಿರ್ಸಿ ಅಂಬಾಗಿರಿಯ ರಾಮಕೃಷ್ಣ ಕಲಿಕಾ ಮಠ, ಚೋಕಡಿ-ಬೆಳ್ಳಾರೆ-ಸುಳ್ಯದ ಶ್ರೀ ರಾಮ ದೇವಸ್ಥಾನ ಸೇರಿದಂತೆ ಅನೇಕ ದೇವಸ್ಥಾನ ಮತ್ತು ಮಠಗಳು ಸ್ವಾಮೀಜಿಯವರ ಕೆಲಸ ಮತ್ತು ಸಾಮರ್ಥ್ಯಗಳನ್ನು ಮೆಚ್ಚಿ ರಾಮಚಂದ್ರಾಪುರ ಮಠದೊಂದಿಗೆ ವಿಲೀನಗೊಂಡವು.

ಗ್ರಾಮೀಣ ಪ್ರದೇಶದ ಜನರ ಕಣ್ಣಿನ ಆರೋಗ್ಯಕ್ಕಾಗಿ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಕುಂಬ್ಳೆ ತಾಲೂಕಿನ ಮುಜಂಗಾವು ಎಂಬಲ್ಲಿ ಭಾರತೀ ನೇತ್ರ ಚಿಕಿತ್ಸಾಲಯ ಪ್ರಾರಂಭಿಸಿದರು.

ಉಲ್ಲೇಖಗಳು