ಷಡಕ್ಷರದೇವ
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
ಈ ಲೇಖನವನ್ನು ಪರಿಷ್ಕರಣೆಗೆ ಹಾಕಲಾಗಿದೆ. ಲೇಖನವನ್ನು ವಿಕಿ ಲೇಖನಗಳಂತೆ ಶುದ್ಧೀಕರಿಸಿದ ನಂತರ ಈ ಸಂದೇಶವನ್ನು ತೆಗೆದುಹಾಕಿ. ಈ ಲೇಖನವನ್ನು ಈ ಕಾರಣಗಳಿಂದಾಗಿ ನಕಲು ಸಂಪಾದನೆಗೆ ಒಳಪಡಿಸಬೇಕಿದೆ {{{ವ್ಯಾಕರಣ, ಶೈಲಿ, ಒಗ್ಗಟ್ಟು, ಸಂಯೋಜನೆ ಧ್ವನಿ ಅಥವಾ ಕಾಗುಣಿತ}}}. |
ಷಡಕ್ಷರದೇವ(ಷಡಕ್ಷರಿ)ನ ಕಾಲ ಸುಮಾರು ಕ್ರಿ.ಶ.೧೬೫೦. ಈತನ ಜನ್ಮಸ್ಥಳ ಮಳವಳ್ಳಿ ತಾಲೂಕಿನ ದನಗೂರು. ಸಂಸ್ಕೃತ ಹಾಗು ಕನ್ನಡದಲ್ಲಿ ಪಾಂಡಿತ್ಯ ಪಡೆದು ರಾಜಗೌರವಕ್ಕೆ ಪಾತ್ರನಾಗಿದ್ದ ಈ ಕವಿ ಯಳಂದೂರು ಮಠದ ಮಠಾದಿಪತಿಯಾಗಿ, ಅಲ್ಲಿಯೆ ಸಮಾಧಿ ಪಡೆದರು.ಷಡಕ್ಷರದೇವನ ಅಲಂಕಾರ ಶೈಲಿ "ಉತ್ಪ್ರೆಕ್ಷೆ "ಗೆ ಪ್ರಸಿದ್ಧಿಯಗಿದ್ದಾನೆ.
ಕರ್ನಾಟಕದ ಸಂಸ್ಕೃತ ಮಹಾಕವಿ ಷಡಕ್ಷರದೇವ
[ಬದಲಾಯಿಸಿ]ಸಂಸ್ಕೃತ ಭಾಷೆಯು ಸದಾ ನವನವೋನ್ಮೇಶಶಾಲಿನಿಯಾಗಿದೆ. ಇದು ಹಲವಾರು ಭಾಷೆಗಳ ಜನನಿಯಾಗಿದೆ. ಈ ಭಾಷೆಯ ಪ್ರತಿಯೊಂದು ಕಾವ್ಯವೂ ಮಧುರವಾಗಿದ್ದು, ಐಹಿಕ ಹಾಗು ಪಾರಲೌಕಿಕ ದೃಷ್ಟಿಯಿಂದ ಕೂಡಿದ್ದು, ಸಹೃದಯರಿಗೆ ಆನಂದವನ್ನುಂಟುಮಾಡುತ್ತದೆ. ಇಂತಹ ಮಹತ್ವಪೂರ್ಣ ಭಾಷೆಯಲ್ಲಿ ತಮ್ಮ ಕೃತಿಗಳನ್ನು ರಚಿಸಿ ಅನೇಕ ಕವಿಗಳು ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆಗಳನ್ನು ನೀಡಿರುತ್ತಾರೆ. ಅಂತಹ ಮಹಾನ್ ಕವಿಗಳಲ್ಲಿ ಉಭಯಭಾಷಾಕೋವಿದ, ಕರ್ನಾಟಕದ ಮಹಾಕವಿ ಷಡಕ್ಷರದೇವನು ಪಾಂಡಿತ್ಯಪೂರ್ಣ ಉತ್ತಮ ಕೃತಿಗಳನ್ನು ರಚಿಸಿ ಸಂಸ್ಕೃತ ಸಾಹಿತ್ಯ ಪ್ರಪಂಚ ಶ್ರೇಷ್ಠಕವಿಗಳ ಸಾಲಿನಲ್ಲಿ ನಿಲ್ಲುತ್ತಾರೆ. ಸಂಸ್ಕೃತ ಮತ್ತು ಕನ್ನಡ ಭಾಷೆಯಲ್ಲಿ ಪ್ರೌಢ ಕವಿಯಾಗಿದ್ದ ಷಡಕ್ಷರದೇವ ಕವಿಯು ಸಂಸ್ಕೃತದಲ್ಲಿ ರಸವತ್ ಮಹಾಕಾವ್ಯವನ್ನು, ಎಂಬ ಎರಡು ಲಘುಕಾವ್ಯಗಳನ್ನು, ಹಲವಾರು ಸ್ತೋತ್ರ ಕಾವ್ಯಗಳನ್ನು ರಚಿಸಿದ್ದಾನೆ. ಷಡಕ್ಷರದೇವನು ಕನ್ನಡದಲ್ಲಿ ಸಂಸ್ಕೃತಭೂಯಿಷ್ಠವಾದ ಮೂರು ಮಹಾಕಾವ್ಯಗಳನ್ನು ರಚಿಸಿದ್ದು, ಇವುಗಳ ಬಗ್ಗೆ ಇವನ ಕನ್ನಡ ಭಾಷೆಯ ಕವಿತಾಚಾತುರ್ಯ, ವಸ್ತುರಚನೆ, ಪಾತ್ರಚಿತ್ರಣ, ರಸನಿರೂಪಣೆ ಇತ್ಯಾದಿ ವಿಷಯಗಳು ಸಹೃದಯರಿಗೆ ಆನಂದವನ್ನುಂಟುಮಾಡುತ್ತವೆ. ಷಡಕ್ಷರದೇವನು ಅಪ್ರತಿಮ ಮೇಧಾವಿ, ಸಂಸ್ಕೃತ ಹಾಗೂ ಕನ್ನಡ ಭಾಷೆಯಲ್ಲಿ ಪ್ರೌಢ ಕವಿಯಾಗಿದ್ದು, ಕನ್ನಡನಾಡಿನ ಸಂಸ್ಕೃತದ ಅಗ್ರಮಾನ್ಯ ಪ್ರತಿಭಾಶಾಲಿಗಳಲ್ಲಿ ಒಬ್ಬನಾಗಿದ್ದಾನೆ. ಈತನು ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಧನುಗೂರಿನಲ್ಲಿ ಜನಿಸಿದನು,ಈತನ ಜನ್ಮದಿನ ಮತ್ತು ತಂದೆತಾಯಿಯರ ವಿಷಯವಾಗಿ ವಿವರಗಳು ನಿಖರವಾಗಿ ಸಿಗುವುದಿಲ್ಲ. ಆದರೆ ಕವಿಯು ಹದಿನೇಳನೇ ಶತಮಾನದ ಉತ್ತರಾರ್ಧದಲ್ಲಿ ಅಂದರೆ ೧೬೫೦ರಲ್ಲಿ ಜೀವಿಸಿದ್ದನೆಂದು ತಿಳಿದುಬರುತ್ತದೆ. ತನ್ನ ಕೃತಿಗಳಲ್ಲಿ ಗುರುಪರಂಪರೆಯನ್ನು ವಿವರಿಸಿರುವ ಷಡಕ್ಷರದೇವನು ಧನುಗೂರು ಮಠದ ಅಧಿಪತಿಗಳಾಗಿದ್ದ ರೇವಣಸಿದ್ಧನ ಶಿಷ್ಯ ಚಿಕ್ಕವೀರದೇಶಿಕರ ಕರಸಂಜಾತನೆಂದು ಹೇಳಿಕೊಂಡಿದ್ದಾನೆ. ಇವನು ಎಳಂದೂರಿನಲ್ಲಿ ವಿದ್ಯಾಭ್ಯಾಸ ಮುಗಿಸಿ ಧನುಗೂರು ಮತ್ತು ಎಳಂದೂರು ಮಠಾಧಿಪತಿಯಾಗಿ ತಾನು ಗಳಿಸಿದ್ದ ಅಪಾರವಾದ ಪಾಂಡಿತ್ಯದಿಂದ ಪ್ರತಿಭಾಶಕ್ತಿ ಮತ್ತು ರಸಿಕತೆಗೆ ಪಾತ್ರವಾದ ಕಾವ್ಯಗಳನ್ನು ರಚಿಸಿ ರಾಜ ಗೌರವ ಪಡೆದಿದ್ದನು. ಕವಿಯು ಮೈಸೂರು ಅರಸ ಚಿಕ್ಕದೇವರಾಜ ಒಡೆಯರ ಮಿತ್ರ, ಸಲಹೆಗಾರನಾಗಿ ಅಲ್ಲದೆ ಹದಿನಾಡು ಶ್ರೀಮದ್ಭೂಪಾಲನ ಕುಲಗುರುವಾಗಿ ಕಂಡುಬರುತ್ತಾನೆ. ಈತನ ಕಾವ್ಯರಚನೆ ಮತ್ತು ವರ್ಣನಾ ಕೌಶಲ್ಯಗಳು ಸಮಕಾಲೀನ ಹಾಗೂ ಮುಂದಿನ ಕವಿಗಳ ಮೇಲೆ ಪ್ರಭಾವ ಬೀರಿವೆ. ಈತನು ’ಉಭಯಕವಿತಾ ವಿಶಾರದ’, ’ಸರಸಜನ ಮಾನಿತ’ ಇತ್ಯಾದಿ ಬಿರುದುಗಳನ್ನು ಪಡೆದಿದ್ದನು. ಹೀಗೆ ಕವಿಯ ಕಾಲ,ಜೀವನ ವೃತ್ತಾಂತ ಹಾಗೂ ಸಾಧನೆಗಳು ಅಪರಿಮಿತವಾದವುಗಳೆಂದು ತಿಳಿಯುತ್ತದೆ. ಸಂಸ್ಕೃತ ಸಾಹಿತ್ಯವು ಬಹು ವಿಶಾಲವಾಗಿದ್ದು, ಹೃದಯಸ್ಪರ್ಶಿತ್ವವನ್ನು ಪಡೆದಿದೆ. ಷಡಕ್ಷರದೇವನು ಸಂಸ್ಕೃತ ಭಾಷೆಯಲ್ಲಿ ಕವಿಕರ್ಣರಸಾಯನಮ್ ಎಂಬ ಮಹಾಕಾವ್ಯವನ್ನು ರಚಿಸಿದ್ದಾನೆ. ಕಾವ್ಯದಲ್ಲಿ ಸೌಂದರಚೋಳ ಮತ್ತು ಅವನ ರಾಣಿ ಕಲಾವತಿ ಇವರ ವಿಚಾರ ನಿರೂಪಿಸಲಾಗಿದೆ. ಇದರಲ್ಲಿ ಸುಕವಿ ಪ್ರತಿಪಾದನೆ, ದುಷ್ಕವಿನಿಂದಾ,ಕವಿಕಾವ್ಯವರ್ಣನೆ, ಕರಿಪುರದ ಚೋಲರಾಜನ ವಿಚಾರ, ಸಮುದ್ರ, ಮೇರುವರ್ಣನೆ, ಗಂಧರ್ವ ಮತ್ತು ಕಿನ್ನರಿಯರ ವಿಹಾರ ಇತ್ಯಾದಿಗಳು ವರ್ಣಿತವಾಗಿ ಇದರಲ್ಲಿ ಮಹಾಕಾವದ ಲಕ್ಷಣಗಳು ಕಲಾತ್ಮಕವಾಗಿ ನಿರೂಪಿಸಲ್ಪಟ್ಟಿದೆ. ಈ ಕಾವ್ಯಕ್ಕೆ ವೆಂಗನಸುಧಿ ಎಂಬ ಪಂಡಿತನು ’ಸಾಹಿತ್ಯಸುಧೋದಯ’ ಎಂಬ ವ್ಯಾಖ್ಯಾನವನ್ನು ರಚಿಸಿದ್ದಾನೆ. ಮೈಸೂರಿನ ಪ್ರಾಚ್ಯವಿದ್ಯಾ ಸಂಶೋಧನಾಲಯದಿಂದ ೧೯೭೫ರಲ್ಲಿ ವಿದ್ವಾನ್ ಎಂ.ಎಸ್.ಬಸವರಾಜಯ್ಯ ಎಂಬ ಪಂಡಿತರು ಉಪಲಭ್ಯವಿರುವ ಹಲವಾರು ಮಾತೃಕೆಗಳನ್ನು ಹಾಗೂ ಹಿಂದೆ ಪ್ರಕಟವಾಗಿದ್ದ ಕೆಲವು ಪ್ರತಿಗಳನ್ನು ಸಂಗ್ರಹಿಸಿ, ಪರಿಷ್ಕರಿಸಿ ಹಾಗೂ ಸಂಶೋಧಿಸಿ ಹನ್ನೆರಡು ಸರ್ಗಗಳ ಈ ಮಹಾಕಾವ್ಯವನ್ನು ಪ್ರಕಟಿಸಿರುತ್ತಾರೆ. ಮೂಲಗ್ರಂಥದಲ್ಲಿ ಹತ್ತೊಂಬತ್ತು ಸರ್ಗಗಳಿದ್ದಿರಬಹುದೆಂದು ಪಂಡಿತರು ಊಹಿಸುತ್ತಾರೆ. ಪ್ರಕಟವಾಗಿರುವ ಈ ಗ್ರಂಥವು ಹನ್ನೆರಡನೇ ಸರ್ಗದಲ್ಲಿ ಅಪೂರ್ಣವಾಗಿ ಸಮಾಪ್ತಿಗೊಳ್ಳುತ್ತದೆ. ಇದರಲ್ಲಿ ಸುಮಾರು ೧೦೦೦ ಶ್ಲೋಕಗಳು ಲಭಿಸಿವೆ. ಇದರಲ್ಲಿ ಛಂದೋಬದ್ದವಾದ ಶ್ಲೋಕಗಳಿದ್ದು, ಲೊಕೋಕ್ತಿಗಳಿಂದ ಮತ್ತು ಹಲವಾರು ಅಪೂರ್ವತೆಯಿಂದ ಕೂಡಿವೆ. ಈ ಕಾವ್ಯದಲ್ಲಿ ವೆಂಗನಸುಧಿಯ ವ್ಯಾಖ್ಯಾನವೂ ಐದನೇ ಸರ್ಗದ ೫೯ನೇ ಶ್ಲೋಕದವರೆಗೂ ದೊರಕಿದ್ದು, ಮುಂದಿನ ವ್ಯಾಖ್ಯಾನವು ಉಪಲಭ್ಯವಾಗಿಲ್ಲ. ಈ ಎಲ್ಲಾ ಅಂಶಗಳನ್ನು ಗಮನಿಸಿದರೆ ಈ ಮಹಾಕಾವ್ಯವು ನಿಜವಾಗಿಯೂ ಮಹತ್ವಪೂರ್ಣದ್ದಾಗಿದೆ. ಷಡಕ್ಷರದೇವನು ಶಿವಾಧಿಕ್ಯರತ್ನಾವಲೀ ಮತ್ತು ಭಕ್ತಾಧಿಕ್ಯರತ್ನಾವಲೀ ಲಘುಕಾವ್ಯಗಳನ್ನು ಸಂಸ್ಕೃತ ಭಾಷೆಯಲ್ಲಿ ಬರೆದಿದ್ದು, ಅವುಗಳು ಸಿದ್ಧಾಂತ ಗ್ರಂಥಗಳೆಂದು ಪ್ರಸಿದ್ಧವಾಗಿವೆ. ಶಿವಾಧಿಕ್ಯರತ್ನಾವಲೀ ಕಾವ್ಯದಲ್ಲಿ ೧೦೮ ಶ್ಲೋಕಗಳಿದ್ದು, ಶಿವನ ಆಧಿಕ್ಯವನ್ನು ಇದರಲ್ಲಿ ಪ್ರತಿಪಾದಿಸಲಾಗಿದೆ. ಕವಿಯು ವೇದ, ಆಗಮ, ಪುರಾಣಗಳ ಆಧಾರದ ಮೇಲೆ ಪೂರ್ವಾಚಾರ್ಯರ ಸಿದ್ಧಾಂತವನ್ನು ಅನುಸರಿಸಿದ್ದಾನೆ. ಈ ಕೃತಿಗೆ ಕನ್ನಡದಲ್ಲಿ ಮಹಾಂತ ಶಿವಯೋಗಿ ಎಂಬ ಪಂಡಿತರು ಪ್ರತಿಪದಟೀಕೆಯನ್ನು ಬರೆದಿದ್ದಾರೆ. ಇದನ್ನು ಪರಿಷ್ಕರಿಸಿ ಮೈಸೂರಿನ ಹೊಸಮಠದ ಶ್ರೀ ಬಸವಲಿಂಗ ಸ್ವಾಮಿಗಳು ಪ್ರಕಟಿಸಿದ್ದಾರೆ. ಈ ಲಘುಕಾವ್ಯವು ಮೇಲ್ನೋಟಕ್ಕೆ ಸುಲಭವಾಗಿ ಕಂಡರೂ ಟೀಕೆಗಳ ಸಹಾಯವಿಲ್ಲದಿದ್ದರೆ ಇದರ ಅಂತರಾರ್ಥವನ್ನು ಗ್ರಹಿಸಲು ಸಾದ್ಯವಾಗುವುದಿಲ್ಲ. ಭಕ್ತಾಧಿಕ್ಯರತ್ನಾವಲೀ ಕೃತಿಯಲ್ಲಿ ೧೦೦ ಶ್ಲೋಕಗಳಿದ್ದು, ಶಿವಭಕ್ತಿಯ ಆಧಿಕ್ಯವನ್ನು ಹಾಗೂ ಶಿವಪಾರಮ್ಯವನ್ನು ಶೃತಿ, ಸ್ಮೃತಿ, ಆಗಮಾದಿ ಪ್ರಾಚೀನ ಗ್ರಂಥಗಳ ಆಧಾರದ ಮೇಲೆ ಕವಿಯು ಪ್ರತಿಪಾದಿಸಿದ್ದಾನೆ. ಈ ಕೃತಿಯನ್ನು ಕನ್ನಡದಲ್ಲಿ ‘ಭಕ್ತಾನಂದದಾಯಿನೀ‘ ಎಂಬ ತಾತ್ಪರ್ಯದೊಂದಿಗೆ ವಿ.ವಿ.ರುದ್ರಪ್ಪನವರು ಮೈಸೂರಿನಿಂದ ಪ್ರಕಟಿಸಿದ್ದಾರೆ. ಸಂಸ್ಕೃತ ಸಾಹಿತ್ಯದಲ್ಲಿ ಲಘುಕಾವ್ಯ ಪ್ರಕಾರವು ವಿಶೇಷ ಸ್ಥಾನವನ್ನು ಪಡೆದಿದೆ. ಪದ್ಯಸಾಹಿತ್ಯದಲ್ಲಿ ಮಹಾಕಾವ್ಯ, ಲಘುಕಾವ್ಯ ಮತ್ತು ಮುಕ್ತಕಗಳೆಂದು ಮೂರು ವಿಧಗಳಿವೆ. ಲಘುಕಾವ್ಯಗಳು ಯಾವುದಾದರೂ ಘಟನೆ, ಸಣ್ಣಕಥೆ ಇತ್ಯಾದಿ ವಿಷಯವನ್ನು ಉಪಯೋಗಿಸಿ ರಚಿತವಾಗಿರುತ್ತವೆ. ಷಡಕ್ಷರದೇವನ ಈ ಲಘುಕಾವ್ಯಗಳು ಶಿವನ ಹಾಗೂ ಶಿವಭಕ್ತಿಯ ಪ್ರಾಮುಖ್ಯತೆಯನ್ನು ವರ್ಣಿಸುತ್ತವೆ. ಸಂಸ್ಕೃತದಲ್ಲಿ ಸ್ತೋತ್ರಕಾವ್ಯಗಳು ಹಲವಾರು ಕಂಡುಬರುತ್ತವೆ. ಸ್ತೋತ್ರಕಾವ್ಯಗಳು ಸಾಮಾನ್ಯವಾಗಿ ದೇವತೆಗಳ ವರ್ಣನೆಯೊಂದಿಗೆ ಪ್ರಾರ್ಥನೆಗಳನ್ನು ಒಳಗೊಂಡಿರುತ್ತವೆ. ಶಿವಕವಿಯೆಂದು ಪ್ರಸಿದ್ಧಿ ಪಡೆದಿದ್ದ ಷಡಕ್ಷರದೇವನು ಶಿವನ ಹಾಗೂ ಶಿವಶರಣರ ಕುರಿತು ಹಲವಾರು ಸ್ತುತಿಗ್ರಂಥಗಳನ್ನು ರಚಿಸಿದ್ದಾನೆ.. ಕವಿಯು ಶಿವಸ್ತವಮಂಜರೀ, ವೀರಭದ್ರದಂಡಕಮ್, ನಮಃಶಿವಾಯಾಷ್ಟಕಮ್, ವೀರಭದ್ರದ್ರೋದಾಹರಣಗದ್ಯಮ್, ಶಿವಸ್ತೋತ್ರಸುಮಂಗಲೀ, ಪಾದಪೂಜಾಸ್ತೋತ್ರಮ್, ಶಿವಮಾನಸಸ್ತೋತ್ರಮ್, ನೀಲಾಂಭಿಕಾಸ್ತೋತ್ರಮ್, ತತ್ವತ್ರಯಸ್ತೋತ್ರಮ್, ಷಡಕ್ಷರಮಂತ್ರಸ್ತೋತ್ರಮ್, ಬಸವಾಷ್ಟಕಮ್, ಇಷ್ಟಲಿಂಗಾಷ್ಟಕಮ್, ಮಂಗಲಾಷ್ಟಕಮ್, ಸಿದ್ದಲಿಂಗಸ್ತವನಮ್, ಇಷ್ಟಲಿಂಗಸ್ತವನಮ್ ಎಂಬ ಅನೇಕ ಸ್ತೋತ್ರಕಾವ್ಯಗಳನ್ನು ಸಂಸ್ಕೃತದಲ್ಲಿ ರಚಿಸಿದ್ದಾನೆ. ಸಂಸ್ಕೃತ ಸಾಹಿತ್ಯದಲ್ಲಿ ಕವಿಗಳು ಇಷ್ಟದೇವತಾ ಸ್ತೋತ್ರಗಳನ್ನು ರಚಿಸಿ ಸ್ತುತಿಸಿದ್ದಾರೆ. ಈ ಸ್ತೋತ್ರಗಳು ಧಾರ್ಮಿಕ ದೃಷ್ಟಿಯಿಂದ ರಚಿಸಲ್ಪಟ್ಟಿದ್ದು, ಇವುಗಳಲ್ಲಿ ಕಾವ್ಯಗುಣಗಳನ್ನು ಅನುಸರಿಸಿರುವುದು ವಿರಳವೆಂದೇ ಹೇಳಬಹುದು. ಈ ಸ್ತೋತ್ರಗಳು ಮಾನವನ ಇಷ್ಟಾರ್ಥಗಳನ್ನು ಈಡೇರಿಸುತ್ತವೆ ಎಂಬ ನಂಬಿಕೆಯಿದೆ. ಕೆಲವು ಸ್ತೋತ್ರಗಳು ಕಾವ್ಯಮಯವಾಗಿದ್ದರೆ, ಕೆಲವು ಭಕ್ತಿ-ಭಾವಗೀತೆಗಳಂತಿದ್ದು, ಹಾಡಲು ಮತ್ತು ಕೇಳಲು ಮಧುರವಾಗಿ ರಚಿಸಲ್ಪಟ್ಟಿವೆ. ಷಡಕ್ಷರದೇವನ ಸ್ತೋತ್ರಗಳಲ್ಲಿ ಶಿವನ ಹಾಗೂ ಶಿವಭಕ್ತರ ವರ್ಣನೆಗಳು ಅಧಿಕವಾಗಿವೆ. ಈ ಸ್ತೊತ್ರಗಳನ್ನು ಓದಿದವರಿಗೆ ಷಡಕ್ಷರದೇವನು ವೀರಶೈವ ಗುರುಪಂಪರೆ, ಶಿವಾಚಾರ, ಶಿವಭಕ್ತ ಹಾಗೂ ಶಿವಶರಣರ ಬಗ್ಗೆ ಚನ್ನಾಗಿ ತಿಳಿದಿದ್ದನೆಂದು ಸುಲಭವಾಗಿ ಅರ್ಥವಾಗುತ್ತದೆ. ಷಡಕ್ಷರದೇವನು ಸಂಸ್ಕೃತ ಹಾಗೂ ಕನ್ನಡ ಭಾಷೆಗಳಲ್ಲಿ ಪಾಂಡಿತ್ಯ ಪಡೆದಿದ್ದನು. ಕವಿಯು ಕನ್ನಡದಲ್ಲಿ ರಚಿಸಿರುವ ರಾಜಶೇಖರವಿಳಾಸ, ವೃಷಭೇಂದ್ರವಿಜಯ ಮತ್ತು ಶಬರಶಂಕರವಿಳಾಸ ಎಂಬ ಕಾವ್ಯಗಳಲ್ಲಿ ಅನೇಕ ಸಂಸ್ಕೃತ ಶಬ್ದಗಳನ್ನು, ರಸಭಾವಗಳನ್ನು, ಪಾತ್ರಪೋಷಣೆಗಳನ್ನು, ಶೈಲಿ ಹಾಗೂ ವರ್ಣನೆಗಳನ್ನು ಸಹೃದಯರು ಮೆಚ್ಚುವಂತೆ ಲಕ್ಷಣಬದ್ದವಾಗಿ ರಚಿಸಿದ್ದಾನೆ. ಇವುಗಳಲ್ಲಿ ಕವಿಯ ಉಭಯಭಾಷಾಪಾಂಡಿತ್ಯ, ಶಿವಕವಿತ್ವ, ಶೃಂಗಾರಾದಿ ರಸಗಳಿಂದ ಕೂಡಿದ ರಾಜಶೇಖರವಿಳಾಸ ಕಾವ್ಯದಲ್ಲಿ ಶಿವಭಕ್ತನೊಬ್ಬನ ಕಥೆಯನ್ನು ಸುಂದರವಾಗಿ ಚಿತ್ರಿಸಲಾಗಿದೆ. ಬಸವ ಪುರಾಣಗಳಿಂದ ಪ್ರೇರಿತನಾಗಿ ಷಡಕ್ಷರದೇವನು ವೃಷಭೇಂದ್ರವಿಜಯವನ್ನು ಭಕ್ತಿರಸದಲ್ಲಿ ರಚಿಸಿದ್ದಾನೆ. ಇದರಲ್ಲಿ ಶ್ರೀ ಬಸವೇಶ್ವರರ ಚರಿತ್ರೆ ಮತ್ತು ಪವಾಡಗಳನ್ನು, ತಮಿಳುನಾಡಿನ ೬೩ ಪುರಾತನರ ಹಾಗೂ ಶಿವಶರಣರ ಕಥೆಗಳನ್ನು, ವೀರಶೈವಧರ್ಮತತ್ತ್ವಗಳನ್ನು ನಿರೂಪಿಸಿದ್ದಾನೆ. ಸಂಸ್ಕೃತದ ಭಾರವಿಯ ಕಿರಾತಾರ್ಜುನೀಯದಂತೆ ಷಡಕ್ಷರದೇವನು ಕನ್ನಡದಲ್ಲಿ ಶಬರಶಂಕರವಿಳಾಸವನ್ನು ಶಿವಲೀಲೆಯ ಕಥೆಯೊಂದಿಗೆ ಬರೆದಿದ್ದಾನೆ. ಈ ಕನ್ನಡ ಕಾವ್ಯಗಳಲ್ಲಿ ಸಂಸ್ಕೃತ ಶಬ್ದಗಳು ಅಧಿಕವಾಗಿವೆ. ಇವುಗಳಲ್ಲಿ ವರ್ಣನೆ ಹೆಚ್ಚಾಗಿದ್ದು ಕಥಾವಸ್ತು ಸ್ವಲ್ಪವೇ ಕಂಡುಬರುತ್ತದೆ. ಷಡಕ್ಷರದೇವನು ವರ್ಣನೆಯಲ್ಲಿ ಕಾಳಿದಾಸ, ಭಾರವಿ, ಬಾಣ,ಮಾಘ, ಶ್ರೀಹರ್ಷ ಮೊದಲಾದ ಕವಿಗಳನ್ನು ಅನುಸರಿಸಿದ್ದಾನೆ. ಈತನ ವಿಳಾಸಗಳೆರಡೂ ನಾರೀಕೇಳಪಾಕದಂತಿದ್ದರೆ, ವೃಷಭೇಂದ್ರವಿಜಯವು ಕದಳಿಪಾಕದಂತೆ ರಚನೆಯಾಗಿದೆ. ಪ್ರಾಚೀನ ಕವಿಗಳಾದ ಕಾಳಿದಾಸ, ಬಾಣ, ಭಾರವಿ,ಮಾಘ,ಶ್ರೀಹರ್ಷ ಇತ್ಯಾದಿ ಸಂಸ್ಕೃತ ಕವಿಗಳ ಹಾಗೂ ಹರಿಹರ, ಕೇಶಿರಾಜ, ಸೋಮನಾಥ, ಪದ್ಮರಸ, ರಾಘವಾಂಕ ಇತ್ಯಾದಿ ಕನ್ನಡ ಕವಿಗಳ ಪ್ರಭಾವಕ್ಕೆ ಒಳಗಾಗಿರುವ ಷಡಕ್ಷರದೇವನು ತನ್ನ ಜೀವನ, ಪ್ರತಿಭೆ, ಪೂರ್ವಜರ ಕೃತಿಗಳ ನಿಕಟ ಸಂಪರ್ಕ ಮತ್ತು ತನ್ನಲ್ಲಿದ್ದ ಕವಿತಾಶಕ್ತಿಚಾತುರ್ಯದಿಂದ ಸಾಹಿತ್ಯ ಕೃತಿಗಳನ್ನು ರಚಿಸಿದ್ದಾನೆ. ಸಂಸ್ಕೃತ, ಪ್ರಾಕೃತ, ಮತ್ತು ಕನ್ನಡ ಭಾಷೆಗಳಲ್ಲಿ ವಿಫುಲವಾದ ಶಬ್ದಸಂಪತ್ತನ್ನು ಪಡೆದ ಕೆಲವೇ ಕವಿಗಳಲ್ಲಿ ಷಡಕ್ಷರದೇವನು ಒಬ್ಬನಾಗಿದ್ದಾನೆ. ಕವಿಯ ವಿಚಾರಧಾರೆಗೆ ಸಂಬಂಧಿಸಿದಂತೆ ಸತ್ಕವಿತ್ವ, ಕಾವ್ಯಪ್ರಯೋಜನ, ಛಂದಸ್ಸು, ಅಲಂಕಾರ, ವರ್ಣನೆಗಳು ಇತ್ಯಾದಿ ಸಾಹಿತ್ಯಕ ಅಂಶಗಳು ಮತ್ತು ಆಧ್ಯಾತ್ಮಿಕ ವಿಚಾರಗಳಾದ ವೀರಶೈವ ಸಿದ್ಧಾಂತದ ಅಷ್ಟಾವರಣ, ಷಟ್ಸ್ಥಲ, ಶಿವಧರ್ಮ, ಶಿವಾಚಾರ, ಶಿವಭಕ್ತಿ, ಶಿವಾಚಾರ್ಯರು, ಶಿವಭಕ್ತರು, ಶರಣರು ಇತ್ಯಾದಿ ಆದರ್ಶ ಚಿಂತನೆಗಳು, ಷಡಕ್ಷರದೇವನು ವಿವಿಧ ರಸ, ಭಾವ, ಮಾಧುರ್ಯಾದಿ ಗುಣಗಳು, ಉಪಮಾ, ಉತ್ಪ್ರೇಕ್ಷೆ ಮೊದಲಾದ ಅಲಂಕಾರಗಳು, ಸ್ರಗ್ಧರಾ, ಅನುಪ್ರಾಸ ಮೊದಲಾದ ಛಂದಸ್ಸುಗಳು ಇತ್ಯಾದಿ ಸಾಹಿತ್ಯಕ ಅಂಶಗಳನ್ನು ಚನ್ನಾಗಿ ತನ್ನ ಕೃತಿಗಳಲ್ಲಿ ಬಳಸಿದ್ದಾನೆ. ಇವನ ಕಾವ್ಯರಚನೆ ಬಗ್ಗೆ ಈತನೇ ಹೇಳುವಂತೆ “ ಕವಿತ್ವರತ್ನ ದೊರಕುವುದು ಸುಲಭಸಾಧ್ಯವಲ್ಲ. ಅಂತೆಯೇ ದೊರಕಿದ ಕಾವ್ಯರತ್ನವನ್ನು ಈಶನಿಗಾಗಿಯೇ ಉಪಯೋಗಿಸಬೇಕು. ಅದು ಬೇರೆ ರೀತಿ ಉಪಯೋಗಿಸಲ್ಪಟ್ಟರೆ ಪಂಡಿತರ ಆ ರತ್ನ ನಿರರ್ಥಕವಾಗುತ್ತದೆ.” ಇದನ್ನು ತಿಳಿದಿದ್ದ ಷಡಕ್ಷರದೇವನು ಉತ್ತಮಕಾವ್ಯಗಳನ್ನು ರಚಿಸಿದ್ದಾನೆ. ಷಡಕ್ಷರದೇವನು ವೀರಶೈವ ಪರಂಪರೆಯಲ್ಲಿ ಸಮನ್ವಯ ಕವಿಯಾಗಿ, ಗುರುವಾಗಿ ಕಂಡುಬರುತ್ತಾನೆ. ಇವನು ತನ್ನ ಗ್ರಂಥಗಳಲ್ಲಿ ಪಂಚಾಚಾರ್ಯರಲ್ಲಿ ಒಬ್ಬರಾದ ರೇಣುಕಾಚಾರ್ಯರ ಬಗ್ಗೆ, ೬೩ ಪುರಾತನರ ಬಗ್ಗೆ ಮತ್ತು ಬಸವಾದಿ ಶರಣರ ಬಗ್ಗೆ, ವೀರಶೈವರ ಆಚಾರ ವಿಚಾರಗಳನ್ನು ವಿವರವಾಗಿ ತಿಳಿಸುತ್ತಾನೆ. ಇತನ ಕನ್ನಡ ಕಾವ್ಯಗಳಲ್ಲಿ ಶಿವನ ಮತ್ತು ಶಿವಭಕ್ತರ ಬಗ್ಗೆ ವರ್ಣಿಸಿದ್ದಾನೆ. ಸಂಸ್ಕೃತ ಕಾವ್ಯಗಳಲ್ಲಿ ಶಿವಭಕ್ತಿಯ ಮಹಿಮೆಯನ್ನು ಚನ್ನಾಗಿ ಚಿತ್ರಿಸಿದ್ದಾನೆ. ಷಡಕ್ಷರದೇವನ ಸಂಸ್ಕೃತ ಮತ್ತು ಕನ್ನಡ ಕೃತಿಗಳು ಜನಪ್ರೀಯವಾಗಿವೆ ಮತ್ತು ಸಾಹಿತ್ಯ ಪ್ರಪಂಚದಲ್ಲಿ ಅಜರಾಮರವಾಗಿವೆ. ಷಡಕ್ಷರದೇವನು ರಸಸಿದ್ಧ ಕವೀಶ್ವರನಾಗಿದ್ದು, ಇಂದಿನ ಸಮಾಜಕ್ಕೆ ಈತನ ಸಂಸ್ಕೃತ ಕೃತಿಗಳು ಹಾಗೂ ಅವುಗಳಲ್ಲಿನ ಜ್ಞಾನ ವಿಚಾರಗಳು ಪ್ರಸ್ತುತವಾಗಲಿವೆ.
ಷಡಕ್ಷರದೇವನ ಚಂಪೂ ಕೃತಿಗಳು
[ಬದಲಾಯಿಸಿ]- ರಾಜಶೇಖರ ವಿಳಾಸ
- ಶಬರಶಂಕರ ವಿಳಾಸ
- ವೃಷಭೇಂದ್ರ ವಿಜಯ