ವಿಷಯಕ್ಕೆ ಹೋಗು

ಸದಸ್ಯ:Avaneeth703/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


                                                         ಮಲೇರಿಯಾ


ಮಲೇರಿಯಾ ರೋಗವಾಹಕ ಪ್ರೋಟೊಸೋವನ್‌ ಪರಾವಲಂಬಿಗಳ ಮೂಲಕ ಹರಡುವ ಒಂದು ಸಾಂಕ್ರಾಮಿಕ ರೋಗ. ಈ ರೋಗವು ಅಮೆರಿಕಾ ಖಂಡಗಳ ಕೆಲವು ವಲಯಗಳು, ಏಷ್ಯಾ ಮತ್ತು ಆಫ್ರಿಕಾ ಸೇರಿದಂತೆ ಉಷ್ಣವಲಯ ಮತ್ತು ಉಪ-ಉಷ್ಣವಲಯಗಳಲ್ಲಿ ಹಬ್ಬಿದೆ. ಪ್ರತಿ ವರ್ಷ, ಸುಮಾರು 350-500 ದಶಲಕ್ಷ ಮಲೇರಿಯಾ ಪ್ರಕರಣಗಳಿದ್ದು,ಒಂದರಿಂದ ಮೂರು ದಶಲಕ್ಷ ಜನರು ಪ್ರಾಣ ಕಳೆದುಕೊಂಡಿದ್ದುಂಟು; ಇವರಲ್ಲಿ ಹೆಚ್ಚಿನವರು ಆಫ್ರಿಕಾ ಖಂಡದ ಉಪ-ಸಹಾರಾ ವಲಯದಲ್ಲಿನ ಸಣ್ಣ ಮಕ್ಕಳು. ಮಲೇರಿಯಾ-ಸಂಬಂಧಿತ ಸಾವುಗಳಲ್ಲಿ ಶೇಕಡಾ 90ರಷ್ಟು ಉಪ-ಸಹಾರಾ ಆಫ್ರಿಕಾದಲ್ಲಿಯೇ ಸಂಭವಿಸುತ್ತವೆ. ಸಾಮಾನ್ಯವಾಗಿ ಮಲೇರಿಯಾ ರೋಗ ಬಡತನದ ಒಡನಾಡಿ ಎಂದೇ ಹೇಳಬಹುದು, ಅಲ್ಲದೆ ಬಡತನಕ್ಕೆ ಇದೂ ಒಂದು ಕಾರಣ ಮತ್ತು ಆರ್ಥಿಕ ವಿಕಸನಕ್ಕೆ ಭಾರೀ ಅಡ್ಡಿಯಾಗುತ್ತದೆ.


ಮಲೇರಿಯಾ ಅತಿ ಸಾಮಾನ್ಯ ಸಾಂಕ್ರಾಮಿಕ ರೋಗಗಳಲ್ಲಿ ಒಂದಾಗಿದ್ದು ಒಂದು ಉಗ್ರ ಸ್ವರೂಪದ ಸಾರ್ವಜನಿಕ ಆರೋಗ್ಯ ಪಿಡುಗೂ ಆಗಿದೆ. ಪ್ಲಾಸ್ಮೋಡಿಯಂ ಜಾತಿಗೆ ಸೇರಿರುವ ಪ್ರೋಟೊಸೋವನ್‌ ಪರಾವಲಂಬಿಯು ಈ ರೋಗಕ್ಕೆ ಕಾರಣ. ಪ್ಲಾಸ್ಮೋಡಿಯಂ ಪರಾವಲಂಬಿಯ ಐದು ಜಾತಿಗಳು ಮನುಷ್ಯರಿಗೆ ಸೋಂಕು ತಗುಲಿಸಬಹುದು; ರೋಗದ ಅತಿ ಗುರುತರವಾದ ಸ್ವರೂಪಕ್ಕೆ ಪ್ಲಾಸ್ಮೋಡಿಯಂ ಫಾಲ್ಸಿಪಾರಮ್‌ ಕಾರಣ. ಪ್ಲಾಸ್ಮೋಡಿಯಂ ವೈವ್ಯಾಕ್ಸ್‌, ಪ್ಲಾಸ್ಮೋಡಿಯಂ ಓವಲೆ, ಮತ್ತು ಪ್ಲಾಸ್ಮೋಡಿಯಂ ಮಲೇರಿಯೆ ಹುಟ್ಟುಹಾಕುವ ಮಲೇರಿಯಾ, ಮನುಷ್ಯರಲ್ಲಿ ತೀಕ್ಷ್ಣವಲ್ಲದ ರೋಗಕ್ಕೆ ಕಾರಣವಾಗುತ್ತದೆ. ಇದು ಸಾಮಾನ್ಯವಾಗಿ ಮಾರಣಾಂತಿಕ ರೋಗವಾಗಿರುವುದಿಲ್ಲ. ಐದನೆಯ ಜಾತಿಯಾಗಿರುವ ಪ್ಲಾಸ್ಮೋಡಿಯಂ ನ್ಯೋಲೆಸಿ ಮಕ್ಯಾಕ್‌ ಕೋತಿಗಳಲ್ಲಿ ಮಲೇರಿಯಾಗೆ ಕಾರಣವಾಗುತ್ತದೆ; ಇದು ಮನುಷ್ಯರಗೂ ಸೋಂಕು ತಗುಲಿಸಬಲ್ಲದು. ಮಾನವ-ರೋಗಕಾರಕ ಪ್ಲಾಸ್ಮೋಡಿಯಂ ಜಾತಿಯ ಈ ಗುಂಪನ್ನು ಸಾಮಾನ್ಯವಾಗಿ ಮಲೇರಿಯಾ ಪರಾವಲಂಬಿ ಗಳೆಂದು ಕರೆಯಲಾಗುತ್ತದೆ.


ಸಾಮಾನ್ಯವಾಗಿ-, ಸೋಂಕಿತ ಹೆಣ್ಣು "ಅನಾಫಿಲಿಸ್‌" ಸೊಳ್ಳೆ ಕಚ್ಚುವುದರಿಂದ ಜನರು ಮಲೇರಿಯಾ ರೋಗಕ್ಕೆ ಈಡಾಗುತ್ತಾರೆ. ಕೇವಲ ಅನಾಫಿಲಿಸ್‌ ಸೊಳ್ಳೆಗಳು ಮಾತ್ರ ಮಲೇರಿಯಾವನ್ನು ಹರಡಬಲ್ಲದು; ಸೋಂಕಿತ ವ್ಯಕ್ತಿಯ ರಕ್ತವನ್ನು ಹೀರಿಕೊಂಡ ಸೊಳ್ಳೆಯು ಸೋಂಕಿತವಾಗುತ್ತದೆ. ಸೊಳ್ಳೆಯೊಂದು ಸೋಂಕಿತ ವ್ಯಕ್ತಿಯನ್ನು ಕಚ್ಚಿದಾಗ, ಸಣ್ಣ ಪ್ರಮಾಣದಲ್ಲಿ ಹೀರಿಕೊಳ್ಳಲಾದ ರಕ್ತದಲ್ಲಿ ಸೂಕ್ಷ್ಮ ಮಲೇರಿಯಾ ಪರಾವಲಂಬಿಗಳಿರುತ್ತವೆ. ಒಂದು ವಾರದ ನಂತರ, ಸೊಳ್ಳೆಯು ಪುನಃ ರಕ್ತ ಹೀರಿಕೊಳ್ಳುವಾಗ, ಈ ಪರಾವಲಂಬಿಗಳು ಸೊಳ್ಳೆಯ ಎಂಜಲಿನೊಂದಿಗೆ ಬೆರೆತು, ಕಡಿತಕ್ಕೊಳಗಾದ ವ್ಯಕ್ತಿಯ ರಕ್ತದಲ್ಲಿ ಸೇರಿಕೊಳ್ಳುತ್ತವೆ. ಈ ಪರಾವಲಂಬಿಗಳು ಕೆಂಪು ರಕ್ತ ಕಣಗಳೊಳಗೆ ವೃದ್ಧಿಯಾಗಿ, ಅನಿಮಿಯಾ (ರಕ್ತ ಹೀನತೆ), ತಲೆಸುತ್ತುವಿಕೆ, ಉಸಿರು ಕಟ್ಟುವಿಕೆ ಮತ್ತು ಟ್ಯಾಕಿಕಾರ್ಡಿಯಾ (ಹೃದಯ ಸ್ಪಂದನಾಧಿಕ್ಯ)ದಂತಹ ವಿಶಿಷ್ಟ ರೋಗಲಕ್ಷಣಗಳ ಜೊತೆಗೆ ಜ್ವರ, ಚಳಿ, ವಾಕರಿಕೆ ಮತ್ತು ಫ್ಲೂ-ತರಹದ ರೋಗದಂತಹ ಸಾಮಾನ್ಯ ರೋಗಲಕ್ಷಣಗಳು ತೋರಿ; ತೀವ್ರ ಪ್ರಕರಣಗಳಲ್ಲಿ ಕೋಮ (ಕೋಮಾನಿದ್ರೆ) ಮತ್ತು ಸಾವು ಸಂಭವಿಸಬಹುದು. ಸೊಳ್ಳೆ ಪರದೆಗಳು ಮತ್ತು ಕೀಟ-ನಿವಾರಕಗಳ ಮೂಲಕ ಸೊಳ್ಳೆ ಕಡಿತವನ್ನು ತಡೆಗಟ್ಟಿ ಮಲೇರಿಯಾದ ಹರಡುವಿಕೆಯನ್ನು ಕಡಿಮೆಗೊಳಿಸಬಹುದು, ಅಥವಾ ಗೃಹಗಳಲ್ಲಿ ಕೀಟನಾಶಕಗಳನ್ನು ಸಿಂಪಡಿಸಿ ಮತ್ತು ಸೊಳ್ಳೆಗಳು ಮೊಟ್ಟೆಗಳನ್ನಿಡಲು ಅನುಕೂಲಕರವಾಗಿರುವ ನಿಂತ ನೀರನ್ನು ಹರಿಯಬಿಟ್ಟು ಸೊಳ್ಳೆಗಳ ನಿಯಂತ್ರಣಾ ಕ್ರಮಗಳನ್ನು ಕೈಗೊಳ್ಳಬಹುದಾಗಿದೆ. ಸೀಮಿತ ಸಾಫಲ್ಯ ಮತ್ತು ಹೆಚ್ಚಿನ ವಿಲಕ್ಷಣ ನಿಯಂತ್ರಣಗಳೊಂದಿಗೆ ಮಲೇರಿಯಾ ಲಸಿಕೆಗಳ ಕುರಿತು ಸಂಶೋಧನೆ-ಪ್ರಯೋಗಗಳನ್ನು ನಡೆಸಲಾಗಿದೆ; ಜೊತೆಗೆ, ಸೊಳ್ಳೆಗಳನ್ನು ತಳಿ ವೈಜ್ಞಾನಿಕವಾಗಿ ಕುಶಲಬಳಕೆ (ಜಿನಿಟಿಕ್‌ ಮ್ಯಾನಿಪುಲೇಷನ್‌) ಮಾಡಿ, ಪರಾವಲಂಬಿಗಳ ವಿರುದ್ಧ ಅವುಗಳ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ತಂತ್ರವನ್ನೂ ಸಹ ಪರ್ಯಾಲೋಚಿಸಲಾಗಿದೆ.

ಕೆಲವು ಲಸಿಕೆಗಳು ವಿಕಸನ ಹಂತದಲ್ಲಿದ್ದರೂ, ಉನ್ನತ ಸ್ತರದ ರಕ್ಷಣೆ ನೀಡುವಂತಹ ಮಲೇರಿಯಾ ಲಸಿಕೆಯು ಎಲ್ಲಿಯೂ ಸದ್ಯಕ್ಕೆ ಲಭ್ಯವಿಲ್ಲ; ಸೋಂಕಿನ ಸಾಧ್ಯತೆಗಳನ್ನು ಕಡಿಮೆಗೊಳಿಸಲು ನಿರೋಧಕ ಔಷಧಿಗಳನ್ನು ನಿರಂತರವಾಗಿ ಸೇವಿಸಬೇಕಾಗುತ್ತದೆ. ಸ್ಥಳೀಯ (ರೋಗ ವ್ಯಾಪಿಸಿದ) ಕ್ಷೇತ್ರಗಳಲ್ಲಿರುವ ಬಹುಪಾಲು ಜನರಿಗೆ ಇಂತಹ ರೋಗನಿರೋಧಕ ಔಷಧಿ ಚಿಕಿತ್ಸೆಗಳು ಆಗಿಂದಾಗ್ಗೆ ಬಹಳ ದುಬಾರಿಯಾಗಿರುತ್ತದೆ. ಸ್ಥಳೀಯ ಪ್ರದೇಶದಲ್ಲಿರುವ ಹೆಚ್ಚಿನ ವಯಸ್ಕರಲ್ಲಿ ಸೋಂಕಿನ ತೀವ್ರತೆ ಬಹಳವಿದ್ದು, ದೀರ್ಘ ಕಾಲದಲ್ಲಿ ಅದು ಮರುಕಳಿಸುವ ಪ್ರವೃತ್ತಿ ಹೊಂದಿರುತ್ತದೆ; ಹಾಗೂ ಭಾಗಶಃ ಪ್ರತಿರಕ್ಷಿತ(ಪ್ರತಿರೋಧ)ವನ್ನು ಹೊಂದಿರುತ್ತಾರೆ; ಈ ಪ್ರತಿರೋಧಕ ಶಕ್ತಿಯು ಕಾಲಾನಂತರದಲ್ಲಿ ಕ್ಷೀಣಿಸುತ್ತದೆ. ಸ್ಥಳೀಯ ಪ್ರದೇಶದಿಂದ ಹೊರಗೆ ಗಮನಾರ್ಹ ಸಮಯವನ್ನು ಕಳೆದಿರುವ ವಯಸ್ಕರು ಕೂಡ ತೀವ್ರ ಮಲೇರಿಯಾಕ್ಕೆ ತುತ್ತಾಗುವ ಸಾಧ್ಯತೆಗಳಿವೆ. ಅವರು ರೋಗ ವ್ಯಾಪಿಸಿದ ಕ್ಷೇತ್ರಕ್ಕೆ ಮರಳುವಂತಿದ್ದರೆ, ಪೂರ್ಣಪ್ರಮಾಣದ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳಲು ಅವರಿಗೆ ಸಲಹೆ ನೀಡಲಾಗುತ್ತದೆ. ಕ್ವಿನೈನ್‌ ಅಥವಾ ಆರ್ಟೆಮಿಸಿನಿನ್‌ ಜನ್ಯಗಳಂತಹ ಮಲೇರಿಯಾ-ನಿರೋಧಕ ಔಷಧಿಗಳನ್ನು ಬಳಸಿ ಮಲೇರಿಯಾ ಸೋಂಕುಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ಆದಾಗ್ಯೂ, ಪರಾವಲಂಬಿಗಳು ಇಂತಹ ಹಲವಾರು ಔಷಧಿಗಳ ವಿರುದ್ಧ ಹೋರಾಡುವಷ್ಟರ ಮಟ್ಟಿಗೆ ವಿಕಸನಗೊಂಡಿವೆ. ಅದಕ್ಕಾಗಿ, ಪ್ರಪಂಚದ ಕೆಲವು ವಲಯಗಳಲ್ಲಿ, ಕೆಲವೇ ಔಷಧಿಗಳು ಮಾತ್ರ ಮಲೇರಿಯಾ ವಿರುದ್ಧದ ಚಿಕಿತ್ಸೆಗಳಲ್ಲಿ ಪರಿಣಾಮಕಾರಿಯಾಗಿವೆ.