ಸದಸ್ಯ:Madhuvamshi/sandbox1
ಈ ಲೇಖನ ಅಥವಾ ವಿಭಾಗ ವಿಸ್ತರಣೆಯ ಅಥವಾ ಮಹತ್ವದ ಬದಲಾವಣೆಗಳ ಮಧ್ಯಂತರದಲ್ಲಿದೆ. ನೀವೂ ಲೇಖನದ ಅಭಿವೃದ್ಧಿಯಲ್ಲಿ ಸಂಪಾದನೆಗೆ ತೊಡಗಲು ಇಚ್ಛಿಸಿದಲ್ಲಿ, ಸ್ವಾಗತ. ಈ ಲೇಖನ ಅಥವಾ ವಿಭಾಗವನ್ನು ಬಹಳ ದಿನಗಳವರೆಗೆ ಸಂಪಾದಿಸದಿದ್ದಲ್ಲಿ, ದಯವಿಟ್ಟು ಈ ಟೆಂಪ್ಲೇಟನ್ನು ಅಳಿಸಿಹಾಕಿ. ಈ page ಕಡೆಯ ಬಾರಿ ಸಂಪಾದಿಸಿದ್ದು ಇವರು 14.139.155.135 (ಚರ್ಚೆ | ಕೊಡುಗೆಗಳು) 283353536 ಸೆಕೆಂಡು ಗಳ ಹಿಂದೆ. (ಅಪ್ಡೇಟ್) |
ಕೆರೆಯ ಪದ್ಮರಸ
ಕನ್ನಡ ಸಾಹಿತ್ಯವನ್ನು ಕಾಲದ ದೃಷ್ಠಿಯಿಂದ ಮೂರು ಪ್ರಮುಖ ವಿಭಾಗಗಳನ್ನಾಗಿ ಮಾಡಿಕೊಂಡು ಅಧ್ಯಯನ ಮಾಡಲಾಗುತ್ತಿದೆ. ಆ ಹಿನ್ನೆಲೆಯಲ್ಲಿ ಹಳಗನ್ನಡ, ನಡುಗನ್ನಡ ಅಥವಾ ಮಧ್ಯಕಾಲೀನ ಕನ್ನಡ ಮತ್ತು ಆಧುನಿಕ ಅಥವಾ ಹೊಸಗನ್ನಡ ಸಾಹಿತ್ಯ ಎಂದು ವಿಭಾಗಿಸಿಕೊಂಡು ಧರ್ಮಾಧರಿತ, ಕಾ¯ ಆಧಾರಿತ ಕ್ರಮಗಳಲ್ಲಿ ಅಧ್ಯಯನ ಮಾಡಲಾಗುವುದು. ಚಂಪೂ ಪ್ರಕಾರದ ಮುಖ್ಯಭೂಮಿಕೆಯಲ್ಲಿ ಸ್ಥಾಪಿತವಾದ 10ನೇ ಶತಮಾನದ ಸಂಸ್ಕøತ ಭೂಯಿಷ್ಠವಾದ ಹಳಗನ್ನಡದ ಪಂಪನಾದಿಯಾಗಿ 12ನೇ ಶತಮಾನದ ಉತ್ತರಾರ್ಧದವರೆಗೂ ಇದ್ದ ಸಾಹಿತ್ಯ ಪ್ರಕಾರವು ವಚನಕ್ರಾಂತಿಯ ಪ್ರಾರಂಭ ಮತ್ತು ಪ್ರೇರಣೆಯಿಂದ ಸಾಹಿತ್ಯ ರಚನೆಯ ಪ್ರಕಾರಗಳು ಹಲವು ರೀತಿಯ ಸ್ವರೂಪದಲ್ಲಿ ಬದಲಾವಣೆಗಳ ಮೂಲಕ ಸ್ಥಾಪಿತಗೊಂಡವು. ಈ ದೇಸಿ ಕಾವ್ಯ ಪ್ರಕಾರಗಳು ಸ್ಥಾಪಿತಗೊಂಡ ಫಲವಾಗಿ ಸಾಮಾನ್ಯರೂ ಕೂಡ ಸಾಹಿತ್ಯ ಓದುವ ಮತ್ತು ಬರೆಯುವ ಅವಕಾಶ ಪಡೆದುಕೊಂಡು ರಾಜಾಶ್ರಯವನ್ನು ನಿರಾಕರಿಸಿ ಸಾಮಾಜಿಕ ಮತ್ತು ಧಾರ್ಮಿಕ ಹಿನ್ನೆಲೆಯಲ್ಲಿ ಕಾವ್ಯಗಳು ರಚನೆಗೊಂಡವು. ವಚನಕ್ರಾಂತಿಯ ಧಾರ್ಮಿಕ ಪ್ರೇರಣೆಯಿಂದ ಪ್ರಭಾವಿತರಾದ 13ನೇ ಶತಮಾನದ ಕನ್ನಡ ಸಾಹಿತ್ಯದ ಪ್ರಮುಖ ಕವಿಗಳಲ್ಲಿ ಕೆರೆಯ ಪದ್ಮರಸ ಒಬ್ಬ. ಕೆರೆಯ ಪದ್ಮರಸನ ಕಾಲವು ನಿರ್ದಿಷ್ಟವಾಗಿ ತಿಳಿಯದೇ ಇರುವುದರಿಂದ ಮತ್ತು ಅವನ ಕಾಲದ ಬಗ್ಗೆ ವಿದ್ವಾಂಸರಲ್ಲಿ ಮತ್ತು ಸಾಹಿತ್ಯವಲಯದಲ್ಲಿ ಚರ್ಚೆ ನಡೆಯುತ್ತಿರುವುದರಿಂದ ಅವನ ಕಾಲವನ್ನು ಅಧ್ಯಯನದ ದೃಷ್ಟಿಯಿಂದ ಕವಿ ಚರಿತೆಕಾರರು ತಿಳಿಸಿರುವ ಕಾಲವಾದ ಕ್ರಿ.ಶ.1200 ಎಂದು ಇಟ್ಟುಕೊಳ್ಳಬಹುದು.
ಇತಿವೃತ್ತ
[ಬದಲಾಯಿಸಿ]- ಹರಿಹರ-ರಾಘವಾಂಕರಂತಹ ಮಹಾಕವಿಗಳು ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ನವಸಾಹಿತ್ಯ ಪ್ರಕಾರಗಳನ್ನು ಸೃಷ್ಟಿಸಿ, ವಿಶಿಷ್ಟ ಸ್ಥಾನವನ್ನು ಗಳಿಸಿ ಸಾಹಿತ್ಯದ ಮೈಲುಗಲ್ಲನ್ನು ಸ್ಥಾಪಿಸಲು ನೆರವಾದ ಕೆರೆಯ ಪದ್ಮರಸನ ಕಾಲವು ಕ್ರಿ.ಶ.1200. ಈತನ ತಂದೆ ಮಾಯಿದೇವ, ತಾಯಿ ಮಂಗಳದೇವಿ. ಈತನ ಕೃತಿ ‘ದೀಕ್ಷಾಬೋಧೆ.’ ದೀಕ್ಷಾಬೋಧೆಯು ವೀರಶೈವ ದೀಕ್ಷೆಯನ್ನು ತಿಳಿಸುವ ಕನ್ನಡದ ಮೊದಲ ಸ್ವತಂತ್ರ ಕೃತಿ. ಇದರ ಪ್ರಮುಖ ಗುರಿ ವೀರಶೈವ ಮತತತ್ವವನ್ನು ಪ್ರತಿಪಾದಿಸುವುದು. ರಗಳೆ ಕಾವ್ಯ ಪ್ರಕಾರದಲ್ಲಿರುವ ದೀಕ್ಷಾಬೋಧೆ ಕೃತಿಯು ಮುಖ್ಯವಾಗಿ ಮೂರು ಪ್ರಮುಖ ಸ್ಥಲಗಳಿಂದ ಕೂಡಿದೆ. ಈ ಮೂರು ಸ್ಥಲಗಳೂ ಕೂಡ ವಿಭಿನ್ನ ಮತ್ತು ವೈಶಿಷ್ಟ್ಯತೆಯಿಂದ ಕೂಡಿವೆ. ಯಾವುದೇ ಕೃತಿ ರಚನೆಗೆ ಮೂಲಕಾರಣವಿರುವಂತೆ; ಪ್ರಭಾವ, ಪ್ರೇರಣೆ ಇರುವಂತೆ ಪದ್ಮರಸನ ದೀಕ್ಷಾಬೋಧೆ ಕೃತಿಗೆ ಆಂಧ್ರದ ವೈಧಿಕ ಸಂಪ್ರದಾಯದ ತ್ರಿಭುವನತಾತನು ಪದ್ಮರಸನ ಜೊತೆ ಧರ್ಮತತ್ವಗಳ (ವೀರಶೈವ ಮತ್ತು ವೈಧಿಕ) ನಡುವೆ ನಡೆಸಿದ ವಾದ-ವಿವಾದಗಳೇ ಪ್ರಮುಖ ಪ್ರೇರಣೆಯಾಗಿದೆ.[೧]
- ಹೊಯ್ಸಳ ನರಸಿಂಹ ಬಲ್ಲಾಳನಲ್ಲಿ ಮಂತ್ರಿಯಾಗಿದ್ದ ಪದ್ಮರಸನಿಗೆ ಅವನ ಸಾಮಾಜಿಕ ಕಾರ್ಯಗಳಿಗೆ ಜನ ಮೆಚ್ಚಿ ನೀಡಿದ್ದು ‘ಕೆರೆಯ ಪದ್ಮರಸ’ ಎಂಬ ತಲೆಬರಹ. ಸಂಸ್ಕøತ ಮತ್ತು ಕನ್ನಡ ಭಾಷೆಯಲ್ಲಿ ಪರಿಣತನಾಗಿದ್ದ ಪದ್ಮರಸ ತೆಲುಗಿನ ತ್ರಿಭುವನತಾತನನ್ನು ವಾದದಲ್ಲಿ ಸೋಲಿಸಿದ ಮೇಲೆ ವಾದದ ನಿರ್ಣಯದಂತೆ ಸೋತವರು ದೀಕ್ಷೆ ಪಡೆಯಬೇಕಾದ್ದರಿಂದ ತ್ರಿಭುವನತಾತನು ಕೆರೆಯ ಪದ್ಮರಸನಿಂದ ‘ಶಿವಶರಣರ’ ದೀಕ್ಷಾ ವಿಧಾನಗಳನ್ನು ತತ್ವಸಿದ್ಧಾಂತಗಳನ್ನು ಕಾಲಕ್ರಮೇಣ ಆಚರಣೆಯ ಮೂಲಕ ದೀಕ್ಷೆ ಪಡೆದು, ತನ್ನವರಿಗೂ ಶಿವದೀಕ್ಷೆ ಪಡೆದುಕೊಂಡ ಪ್ರಸಂಗವನ್ನು ಪದ್ಮರಸನು ತನ್ನ ಕೃತಿ ದೀಕ್ಷಾಬೋಧೆಯ ಮೂಲಕ ನಿವೇದಿಸಿದ್ದಾನೆ.
- ಹರಿಹರ-ರಾಘವಾಂಕ ಮತ್ತು ಕೆರೆಯ ಪದ್ಮರಸ ಈ ಮೂವರು ಕವಿಗಳ ಕಾಲ ವಿಚಾರವು ಬಹಳ ಚರ್ಚೆಗೆ ಗ್ರಾಸವಾಗಿವೆ. ಮೂವರ ಕಾಲವು ಒಂದೇ ಕಾಲಾವಧಿಯ ಪರಿಧಿಯಲ್ಲೇ ತೋಯ್ದಾಡುವುದರಿಂದ ಇವರು ಮೂರು ಜನರು ಸಮಕಾಲೀನರೆಂದು ಇದುವರೆಗೂ ಚರ್ಚಿಸಿರುವ ಸಾಹಿತ್ಯ ಚರಿತ್ರೆಕಾರರ ಮತ್ತು ವಿದ್ವಾಂಸರ ಮಾತುಗಳು ಮತ್ತು ಅಭಿಪ್ರಾಯಗಳಲ್ಲಿ ಕಾಣಬಹುದಾಗಿದೆ. ಕಾಲ ವಿಚಾರದ ಚರ್ಚೆ ಈ ಲೇಖನದಲ್ಲಿ ಅಪ್ರಸ್ತುತವೆಂದು ಹೇಳುತ್ತ, ಎಲ್ಲಾ ಸಂಶೋಧಿತ, ಚರ್ಚಿತ ಅಂಶಗಳನ್ನು ಆಧಾರವಾಗಿಟ್ಟುಕೊಂಡು ಪದ್ಮರಸ ಮತ್ತು ಹರಿಹರ-ರಾಘವಾಂಕ ಕಾಲವನ್ನು ಹನ್ನೆರಡನೆಯ ಶತಮಾನದ ಕೊನೆಯ ಹಾಗೂ ಹದಿಮೂರನೆಯ ಶತಮಾನದ ಪೂರ್ವಾರ್ಧವೆಂದು ಗ್ರಹಿಸಬಹುದು.
- ಮಂತ್ರಿಯಾಗಿ ಸಮಾಜಕಾರ್ಯಗಳಲ್ಲಿ ತೊಡಗಿ ಜನನಾಯಕನಾಗಿ ಬಿಂಬಿತನಾಗಿದ್ದ, ಆಧ್ಯಾತ್ಮ ಮತ್ತು ಶಿವಭಕ್ತನಾಗಿದ್ದ ಪದ್ಮರಸನು ವೀರಶೈವ ಮತಪ್ರಚಾರಕ್ಕಾಗಿ ‘ದೀಕ್ಷಾಬೋಧೆ’ ಕೃತಿ ರಚನೆ ಮಾಡಿದನು. ತನ್ನ ಗ್ರಂಥಾರಂಭದಲ್ಲಿ ವೀಶ್ವನಾಥ(ಶಿವ)ನನ್ನು ಪ್ರಭುವೆಂದು ಪರಿಗಣಿಸಿರುವುದು ರಾಜಪ್ರಭುತ್ವಕ್ಕೆ ವಿರೋಧವನ್ನು, ವಚನ ಸಾಹಿತ್ಯದಿಂದ ಉಂಟಾದ ಪ್ರಭಾವ ಮತ್ತು ಕ್ರಾಂತಿಯಿಂದ ಪ್ರಜಾಪ್ರಭುತ್ವವನ್ನು ಮೇಲುಸ್ತರಕ್ಕೆ ಒಯ್ಯುವುದರ ಸಂಕೇತವಾಗಿದೆ.
- ಶ್ರೀಮದ ಗಜೇಶ ಕರುಣಿ ಸು
- ಧಾಮಯ ನತಜನಚಕೋರಚಯ ಹಿಮಕರ ಸು
- ತ್ರಾಮಕ ಹರಿಸೇವಿತ ಗುಣ
- ನಾಮನೆ ಸಲಹೆನ್ನ ವಿಶ್ವನಾಥ ಪ್ರಭುವೇ – (1. ಪ್ರಥಮ ಸ್ಥಲ) [೨]
- ವೀರಶೈವ ದೀಕ್ಷೆಯನ್ನು ಪಡೆಯಲು ಬೇಕಾದ ವಿಷಯಗಳನ್ನು ಗುರುಶಿಷ್ಯ ಸಂವಾದ ರೂಪದಲ್ಲಿ ವಿವರಿಸಲಾಗಿದೆ. ದೀಕ್ಷಾಬೋಧೆಯ ಒಂದು ಮತ್ತು ಮೂರನೆಯ ಸ್ಥಲಗಳು ಲಲಿತರಗಳೆಗಳಲ್ಲಿಯೂ ಎರಡನೆಯ ಸ್ಥಲ ಮಂದಾನಿಲರಗಳೆಯಲ್ಲಿಯೂ ಇದ್ದು, ಮಧ್ಯೆ ವೇದಾಗಮ ಪುರಾಣಗಳಿಂದ ಉದ್ಧರಿಸಿದ ಸಂಸ್ಕøತ ಶ್ಲೋಕಗಳು ಸಾಕ್ಷಿಯ ರೂಪವಾಗಿ ಬಂದಿವೆ. ಹಲವಾರು ಧರ್ಮಗಳ ನೆಲೆವೀಡಾದ ಭರತ ಭೂಖಂಡದಲ್ಲಿ ಕಾಲಕ್ರಮೇಣ ಧರ್ಮಗಳ ಸಂಘರ್ಷ ಮತ್ತು ಮೇಲಾಟಗಳು ನಡೆದಿರುವುದು ಮತ್ತು ಸ್ವಧರ್ಮ ಪ್ರತಿಷ್ಠಾಪನೆಗಾಗಿ ರಾಜಾಸ್ಥಾನಗಳಲ್ಲಿ ಪಂಡಿತವರ್ಯರ ಪಾಂಡಿತ್ಯ ಪ್ರದರ್ಶನ ನಡೆದಿರುವುದನ್ನು ನಾವು ಗಮನಿಸಬಹುದು. 12ನೆಯ ಶತಮಾನದಲ್ಲಿ ಧಾರ್ಮಿಕ ವಿಡಂಬನಾ ಕಾವ್ಯಗಳು ಹುಟ್ಟಿದವು. ಅನಂತರದಲ್ಲಿ 13ನೇ ಶತಮಾನದಲ್ಲಿ ಕೆರೆಯ ಪದ್ಮರಸನ ದೀಕ್ಷಾಬೋಧೆಯು ಪ್ರಮುಖವಾಗಿ ಧರ್ಮಪ್ರೇರಿತ ವಿಡಂಬನ ಕಾವ್ಯವಾಗಿ ಕಂಡುಬರುತ್ತದೆ.
ಕೆರೆಯ ಪದ್ಮರಸ ಮತ್ತು ಆಂಧ್ರದ ಬ್ರಾಹ್ಮಣ ಕವಿ ತ್ರಿಭುವನತಾತನಿಗೂ ನಡೆದ ವಾದ ಪ್ರಕರಣವೇ ದೀಕ್ಷಾಬೋಧೆ ಕೃತಿ ರೂಪುಗೊಳ್ಳಲು ಕಾರಣ. ಅಂದರೆ ಬೇಲೂರಿನಲ್ಲಿ ತನ್ನ ತಪಶ್ಚಕ್ತಿಯಿಂದ ಕೆರೆಯನ್ನು ನಿರ್ಮಾಣ ಮಾಡಿದ ಶಿವಶರಣ ಪದ್ಮರಸನ ಪ್ರಖ್ಯಾತಿ, ಪ್ರಸಿದ್ಧಿ ಆಂಧ್ರದವರೆಗೂ ತಲುಪಿ ಅಲ್ಲಿಯ ತ್ರಿಭುವನತಾತನು ‘ವಿಷ್ಣುವೇ ಪರಮದೈವ’ನೆಂದು ಸ್ಥಾಪಿಸಲು ದ್ವಾರಸಮುದ್ರದ ನರಸಿಂಹಬಲ್ಲಾಳನ ಆಸ್ಥಾನಕ್ಕೆ ಬರುತ್ತಾನೆ. ಆಗ ಇದನ್ನರಿತ ಪದ್ಮರಸನು ಬೇಲೂರಿನಿಂದ ಹೊರಟು ದೋರಾಂಬುಧಿಯ ರಾಮಣ್ಣ, ಉಭಯ ಕವಿ ಶರಭಬೇರುಂಡ ರಾಘವ, (ರಾಘವಾಂಕ), ಹುಲಿಗೆರೆಯ ಮಾಯಿದೇವ, ಪುರಾಣಭಟ್ಟ, ಗುರುಭಕ್ತ ಕಾಮಣ್ಣ, ವಿಶ್ವಣ್ಣನಂತಹ ವಿದ್ವಾಂಸರ, ಪಂಡಿತರ ಜೊತೆಯಲ್ಲಿ ನರಸಿಂಹ ಬಲ್ಲಾಳನ ಆಸ್ಥಾನಕ್ಕೆ ಆಗಮಿಸಿದನು.
- ನರಸಿಂಹಬಲ್ಲಾಳನ ಸಭೆಯಲ್ಲಿ ಪದ್ಮರಸನು ಶಿವಾದ್ವೈತ ಸಾಕಾರ ಸಿದ್ಧಾಂತ ‘ಸಾನಂದ ಚರಿತ್ರ’ ಎಂಬ ಸಂಸ್ಕøತ ಗ್ರಂಥವನ್ನು ರಚಿಸಿ ತ್ರಿಭುವನತಾತನನ್ನು ವಾದದಲ್ಲಿ ಜಯಿಸಿದನು; ಒಪ್ಪಂದದ ಪ್ರಕಾರ ತ್ರಿಭುವನತಾತನು ಕೆರೆಯ ಪದ್ಮರಸನಿಂದ ವೀರಶೈವ ದೀಕ್ಷೆಯನ್ನು ಪಡೆದು ಪದ್ಮರಸನ ಶಿಷ್ಯನಾದನು. ಸಂಸ್ಕøತದ ‘ಸಾನಂದ ಚರಿತೆ’ಯನ್ನು ರಚಿಸಿ ತ್ರಿಭುವನತಾತನನ್ನು ಸೋಲಿಸಿದಂತೆ ಅನೇಕ ವೀರಶೈವ ಕವಿಗಳು ಮತ್ತು ವಚನಕಾರರು ತಮ್ಮ ಸ್ವಧರ್ಮಪ್ರತಿಷ್ಠಾಪನೆಗಾಗಿ ಜೈನ ಧರ್ಮವನ್ನು ವಿಡಂಬಿಸಿ ಕಾವ್ಯ ರಚಿಸಿದ್ದಾರೆ. ಪುಲಿಗೆರೆಯ ಆದಯ್ಯನ ಸೋಮನಾಥ ಪ್ರತಿಷ್ಠಾಪನೆ ಪ್ರಕರಣವೂ ಒಂದು. ‘ದೀಕ್ಷಾಬೋಧೆ’ ಕೃತಿಯಲ್ಲಿ ಹೆಸರೇ ಸೂಚಿಸುವಂತೆ ದೀಕ್ಷೆಯ ಕಾಲ(ಇಂದು ಲಿಂಗಧಾರಣೆಯನ್ನು ಪ್ರಾಪ್ತವಯಸ್ಕ ಅಥವಾ 12ನೇ ವಯಸ್ಸಿನ, ಅದಕ್ಕಿಂತ ಕಿರಿಯನಾಗಿರುವ ಹುಡುಗನಿಗೆ ಸಂಪ್ರದಾಯದ ಪ್ರಕಾರ ಕುಟುಂಬದ ಹಿರಿಯ ಮಗನೊಬ್ಬನಿಗೆ ‘ಗುಡ್ಡ’ (ದೇವರಗುಡ್ಡ)ನನ್ನಾಗಿ ಬಿಡುವುದರಿಂದ ಮಾಡಲಾಗುತ್ತದೆ. ಇಂತಹ ಸಂದರ್ಭದಲ್ಲಿ ಅವನು ಮದುವೆ ಆಗಿರಬಾರದು. ಮದುವೆಗೂ ಮುಂಚೆಯೇ ದೀಕ್ಷೆ ಪಡೆಯಬೇಕಾಗಿರುತ್ತದೆ ಮತ್ತು ಅದರ ಕಟ್ಟಳೆಗಳನ್ನು ಪಾಲಿಸಬೇಕಾಗುತ್ತದೆ)ದಲ್ಲಿ ಗುರುವು ಶಿಷ್ಯನಿಗೆ ಮಾಡುವ ಉಪದೇಶವನ್ನು ನೀತಿ, ನಿಯಮಗಳನ್ನು ನಿರೂಪಿಸಲಾಗಿದೆ.ವೀರಶೈವ ಧರ್ಮದಲ್ಲಿ ಶಿವದೀಕ್ಷಾ ಸಂಸ್ಕಾರಕ್ಕೆ ಬಹಳ ಮಹತ್ವವಿರುವುದನ್ನು ದೀಕ್ಷಾಬೋಧೆ ಕೃತಿಯು ಪ್ರಸ್ತುತಪಡಿಸುತ್ತದೆ. ವೇದಾಗಮಗಳ ಕಾಲದಿಂದಲೂ ದೀಕ್ಷಾಪದ್ಧತಿ ಆಚರಣೆಯಲ್ಲಿದೆ. ಅಂಗದ ಮೇಲೆ ಲಿಂಗ ಸಂಬಂಧವನ್ನುಂಟು ಮಾಡುವುದರ ಮೂಲಕ ತನುತ್ರಯ, ಮಲತ್ರಯ ಮತ್ತು ದೀಕ್ಷಾತ್ರಯಗಳನ್ನು (ಮೂರು ಸ್ಥಲಗಳಲ್ಲಿ ವಿವರಿಸಿದೆ) ನಾಶಪಡಿಸುವುದೇ ದೀಕ್ಷೆಯಾಗಿದೆ. ದೀಕ್ಷಾಬೋಧೆ ಶಾಸ್ತ್ರಗ್ರಂಥವಾದರೂ ಕಾವ್ಯಗುಣಗಳೂ ಅಲ್ಲಲ್ಲಿ ಮಿಂಚಿ ಮರೆಯಾಗಿವೆ.
ಸಾಮಾಜಿಕ ವಿಡಂಬನೆ
[ಬದಲಾಯಿಸಿ]- ಕೆರೆಯ ಪದ್ಮರಸನ ದೀಕ್ಷಾಬೋಧೆ 13ನೇ ಶತಮಾನದ ಲಿಂಗಾಯತ ಮತ-ಸಮಾಜಗಳ ಸ್ವರೂಪವನ್ನು ತಿಳಿಯುವವರಿಗೆ ಒಂದು ಒಳ್ಳೆಯ ಆಕರಗ್ರಂಥವಾಗಿದೆ. ಶಿವಭಕ್ತರಾದವರೂ, ವೀರಶೈವ ಮತಾವಲಂಬಿಗಳಾದವರೂ ಹಾಗೂ ಲಿಂಗವಂತ ದಲಿತರಾದವರೂ ಅನುಸರಿಬೇಕಾದ ಧರ್ಮಾಚರಣೆ, ಲಿಂಗಾಚರಣೆ ಮತ್ತು ವೀರಶೈವ ತತ್ವಸಿದ್ಧಾಂತವನ್ನು ನೇರವಾಗಿ ಪ್ರತಿಪಾದಿಸಿರುವ ಕವಿ, ಸ್ವಮತ (ವೀರಶೈವ)ವನ್ನು ಉತ್ತಮವೆಂದು ಪ್ರತಿಪಾದಿಸಿದ್ದಾನೆ. ಜಗತ್ತಿನ ಸಕಲ ಚರಾಚರಗಳಿಗೆ ‘ಪ್ರಕೃತಿ ನಿಯಮ’ ಇರುವಂತೆ ಮಾನವ ಕುಲದ ಶಿವಶರಣರಿಗೂ, ವೀರಶೈವ ಮತಾಚರಣೆಯವರಿಗೂ ಒಂದು ನಿಯಮವನ್ನು ಬೋಧಿಸುವ ಉತ್ತಮ ಕೃತಿ ಈ ದೀಕ್ಷಾಬೋಧೆ.
- ಕೆರೆಯ ಪದ್ಮರಸ ಮತ್ತು ಆಂಧ್ರದ ತ್ರಿಭುವನತಾತ ಇವರ ನಡುವಿನ ವಾದಸರಣಿಯ ಭಾಗವಾಗಿರುವ ಈ ಕೃತಿಯ ಮೂಲವಸ್ತು ಸ್ವಧರ್ಮ ಪ್ರತಿಪಾದನೆ. ಇದರಲ್ಲಿ ವೀರಶೈವ ಧರ್ಮವೇ ಶ್ರೇಷ್ಟವಾದ ಮಾನವಧರ್ಮವೆಂಬುದು ಪ್ರಮುಖ ಆಶಯವಾಗಿದೆ. ಇಲ್ಲಿ ಯಾವುದೇ ಕುಲ, ಧರ್ಮ ಜಾತಿಯ ಸೋಪಾನವಿಲ್ಲದೆ ಪ್ರತಿಯೊಬ್ಬ ಶಿವಶರಣನಾದವನು ಸರ್ವರೊಳು ಸಮಾನ ಎಂಬುದು ವಿಧಿತವಾಗಿದೆ. ಕ್ರಾಂತಿಕಾರಿ ಬಸವಣ್ಣನಂತೆ ಕೆರೆಯ ಪದ್ಮರಸನು ಮಹಾಶಿವಭಕ್ತನಾದರೂ ಕೂಡ “ಶಿವಭಕ್ತರಲ್ಲದವರೇ ಅವನ ಪ್ರಕಾರ ಅಂತ್ಯಜರು, (ಕಳೆವುದಂತ್ಯಜರೆಂದು ಶಿವಭಕ್ತರಲ್ಲದವರ...) ಮತ್ತು ವೀರಶೈವರಿಗೆ ‘ಸೂತಕಗಳಿಲ್ಲಾಗಿ ಜಾತಿದೋಷಗಳಿಲ್ಲ” ಎಂಬ ವಾದವನ್ನು ಒಪ್ಪಲಾಗುವುದಿಲ್ಲ. ಸಾವಿಲ್ಲದ ಮನೆಯ ಸಾಸಿವೆ ಇಲ್ಲದಿರುವಂತೆಯೇ ಸೂತಕಗಳಿಲ್ಲದ ಮನೆಯೂ ಇರುವುದಿಲ್ಲ. ಒಂದು ವೇಳೆ ಸೂತಕಗಳೇ ಇಲ್ಲವೆನ್ನುವುದಾದರೆ ಜಾತಿಗಳೇ ಇಲ್ಲವೆಂದಾಗುತ್ತದೆಯಲ್ಲವೇ! ಆದರೆ ತಾತ್ವಿಕವಾಗಿ ಗ್ರಹಿಸುವುದಾದರೆ ಇದಕ್ಕೊಂದು ಮೌಲ್ಯವೊದಗುತ್ತದೆಂದು ಅನಿಸುತ್ತದೆ.
- ಮತ್ತೊಂದು ಪ್ರಕರಣ ಈ ಕೃತಿಯಲ್ಲಿರುವಂತೆ ಈಶ್ವರ=ಬ್ರಾಹ್ಮಣ, ವಿಷ್ಣು=ಕ್ಷತ್ರಿಯ, ಬ್ರಹ್ಮ=ವೈಶ್ಯ, ಇಂದ್ರ=ಶೂದ್ರನೆಂಬುದು ಅವನ ಕಾಲದ ನಂಬುಗೆಯೆಂಬುದನ್ನು ಪದ್ಮರಸನ ಮಗ ಕುಮಾರ ಪದ್ಮರಸನು ಪ್ರತಿಪಾದಿಸಿರುವುದರಿಂದ ಅದು ಸಮಾನತೆಗೆ ವಿರುದ್ಧವಾದ ಮತ್ತು ಸಾಮಾಜಿಕ ಅಸಮಾನತೆಯನ್ನು ಎತ್ತಿಹಿಡಿದಿರುವುದರಿಂದ ಇಂತಹ ಮಾತುಗಳನ್ನು ಒಪ್ಪಲು ಅಸಾಧ್ಯ ಮತ್ತು ಅಸಿಂಧುವಾಗಿದೆ ಎಂದು ಭಾವಿಸಬಹುದು. ಹಿಂದೂ ಧರ್ಮದ ಪ್ರಾತಿನಿಧಿಕ ಭಾಗವೇ ಆಗಿರುವ ವೀರಶೈವ ಧರ್ಮವು ಇಂದ್ರನನ್ನು ಶೂದ್ರನೆಂದು ಸೂತ್ರೀಕರಿಸಿದರೆ, ಅದನ್ನೇ ಹಿಂದೂ ಧರ್ಮವು ಇಂದ್ರನನ್ನು ದೇವತೆಗಳ ಅಧಿಪತಿಯೆಂದು ಸ್ವೀಕರಿಸಿದೆ. ಈ ಸಿದ್ಧಾಂತವು ವೈರುಧ್ಯದಿಂದಲೇ ಕೂಡಿರುವುದರಿಂದ ತಾತ್ವಿಕ ಮತ್ತು ಸಾಂಸ್ಕøತಿಕ ಅಪಮೌಲ್ಯವೆಂದು ಪರಿಗಣಿಬಹುದಾಗಿದೆ.ಈ ಮೇಲಿನ ಎರಡು ಅಂಶಗಳನ್ನು ಗಮನಿಸಿದರೆ ವೀರಶೈವ ಮತ್ತು ಹಿಂದೂ, ಈ ಎರಡು ಧರ್ಮಗಳು ಪ್ರತ್ಯೇಕವಾದವುಗಳೆಂದು ಭಾಸವಾಗುತ್ತದೆ. ಹಾಗಾಗಿಯೇ ಇಂದು ವೀರಶೈವ ಧರ್ಮವು ಹಿಂದೂ ಧರ್ಮದಿಂದ ಬಿಡಿಸಿಕೊಳ್ಳಲು ಪ್ರತ್ಯೇಕ ಅಸ್ತಿತ್ವವನ್ನು ಸ್ಥಾಪಿಸಿಕೊಳ್ಳಲು ಪ್ರಯತ್ನ ನಡೆಸುತ್ತಿದೆ. ವೀರಶೈವ ಧರ್ಮವು ಸನಾತನ ಹಿಂದೂ ಧರ್ಮಕ್ಕಿಂತ ಈಚೀನದು; ಅಂದರೆ ಬಸವಾದಿ ಶರಣರು ಕಟ್ಟಿಕೊಂಡ ಧರ್ಮವದು. ಹಾಗಾಗಿ ದಕ್ಷಿಣ ಭಾರತದ ಸ್ಥಳೀಯ ಮತ್ತು ಸ್ವತಂತ್ರ ಧರ್ಮವೆಂದು ವೀರಶೈವ ಧರ್ಮವು ಗುರುತಿಸಿಕೊಂಡಿದೆ ಎಂಬುದನ್ನು ಎಂ.ಎಂ.ಕಲಬುರ್ಗಿ ಅವರ ಮಾತುಗಳು ಸಮರ್ಥಿಸುತ್ತವೆ. ಇಲ್ಲಿ ವೀರಶೈವ ಧರ್ಮವು ಇಂದ್ರನನ್ನು ಶೂದ್ರನೆಂದು ಕರೆದರೆಂದರೆ ಸಮಾನತೆಯನ್ನು ಈ ಧರ್ಮದಲ್ಲಿ ಕಾಣಲು ಸಾಧ್ಯವಿಲ್ಲವೆಂದಾಗುತ್ತದೆಯಲ್ಲವೇ? ವರ್ಣಾಶ್ರಮ ಪದ್ಧತಿಯ ಆಚರಣೆಯು ವೀರಶೈವ ಧರ್ಮದಲ್ಲಿ ಇದ್ದಂತೆ ಕಾಣುತ್ತದೆ. ಸಾಮಾನ್ಯನಿಗೂ ಸಮಾಜದಲ್ಲಿ ಅಸ್ತಿತ್ವವನ್ನು ತಂದುಕೊಟ್ಟ ವಚನ ಸಾಹಿತ್ಯವು ವೀರಶೈವ ಧರ್ಮದ ಒಡಲಲ್ಲಿ ಕಲೆತು ಪ್ರದರ್ಶನವಾಗಿದ್ದರೂ ಕೂಡ ನಂತರದಲ್ಲಿ ಬಂದಂತಹ ಕವಿಗಳ ಕಾವ್ಯಗಳಲ್ಲಿ ಈ ರೀತಿಯ ಜಾತಿ, ಧರ್ಮದ ವೈರುಧ್ಯ ಕಂಡುಬಂದಿರುವುದು ವಿಷಾದದ ಸಂಗತಿ ಮತ್ತು ಕಲ್ಯಾಣ ಕ್ರಾಂತಿಯು ಉಂಟಾಗಿ ವೀರಶೈವ ಧರ್ಮವು ತನ್ನ ಅಸ್ತಿತ್ವಕ್ಕೆ ತಂದುಕೊಂಡ ಧಕ್ಕೆ ಎಂಬುದಕ್ಕೆ ಈ ರೀತಿಯ ಸಂಗತಿಗಳು ಕಾರಣೀಭೂತವಾಗುತ್ತವೆ.
- ಪದ್ಮರಸನು ‘ಕುಷ್ಠರೋಗಿಯನ್ನು ಉದ್ಧರಿಸಿದುದು ಮೇಲಿನ ವಾದಕ್ಕೆ ಅಪವಾದವಾಗುತ್ತದೆ. ಪದ್ಮರಸ ಶಿವಭಕ್ತರ ಕಾಲ್ಗೆರಗಿ ಒಳಗೆ ಕರೆದುಕೊಂಡು ಹೋಗಿ ಸತ್ಕರಿಸುತ್ತಾನೆ. ಇದನ್ನು ಸಹಿಸದ ಆಸ್ಥಾನದ ಇತರರು ಮಂತ್ರಿಯಾದ ಕೆರೆಯ ಪದ್ಮರಸನ ಮೇಲೆ ಚಾಡಿ ಹೇಳುತ್ತಾ “ಕುಲಹೀನನೋರ್ವನಂ ಮೆಯ್ಕಟ್ಟು ಕೂಳ್ಪುಟ್ಟದೆ ಬಗುತಿಕೆಯನಾಂತಿರ್ಪನಾತನಂ ನಿಲಯಕ್ಕೆ ತಂದು ಕಾಲ್ದೊಳೆದು ತಜ್ಜಲ ಮೀಂಟಿಯುಣಲಿಕ್ಕಿ ಮಿಕ್ಕಿದುಂಡು ಪೊಲಗಲಸಿದಂ ಬ್ರಹ್ಮವಿನ್ನೆಲ್ಲಿ” ಎಂದು ನುಡಿದಾಗ ಅರಸ ವಿವರಣೆ ತಿಳಿಯಲು ಪದ್ಮರಸನನ್ನು ಕರೆಯಿಸಿ, ‘ನೀವಿಂತಿಂತ್ಯಜನುಮಾದ ಮೆಯ್ಕಟ್ಟವನೋಳ್ ಬೆರೆಯುವುದುಚಿತವೇ’ ಎಂದು ಕೇಳುತ್ತಾನೆ. ಅಲ್ಲಿಗೆ ಅರಸನಿಗೂ ಕೂಡ ಶ್ರೀಸಾಮಾನ್ಯನಲ್ಲಿ ಗೌರವವಿಲ್ಲವೆಂಬುದು ಖಚಿತವಾಗಿಯೇ ಇದೆ. ಇದಕ್ಕೆ ಪ್ರತ್ಯುತ್ತರವಾಗಿ ಪದ್ಮರಸನು
- ಶಿವಶಿವಾಯೆನುತೆರಡು ಕೈಗಳಂ ನಿಜಕರ್ಣ
- ವಿವರಕೊಂದಿಸುತೀ......ವೇದಾಂತ್ಯಜಂ
- ಸುವಿವೇಕಿಗಳ ನಿಶ್ಚಲಮನೋತ್ಯಜಂ ಸಂವಿದಂತ್ಯಜಂ ತಾನಲ್ಲದೆ.
- ಶಿವಭಕ್ತರಾದವರು ಯಾರೇ ಆದರೂ ಅವರಿಗೆ ಯಾವುದೇ ಕುಲ, ಮೇಲು-ಕೀಳು, ಸ್ಪøಶ್ಯ-ಅಸ್ಪøಶ್ಯ ಎಂಬ ಭಿನ್ನ ಬೇಧಗಳಿರುವುದಿಲ್ಲೆಂಬುದನ್ನು ತಿಳಿಸಿ ಹೇಳುತ್ತಾನೆ. ಜೊತೆಗೆ ಕವಿಯೇ ಹೇಳುವಂತೆ ತನ್ನ ಕೃತಿಯ ವೈಶಿಷ್ಟ್ಯ ವಿವರಿಸುತ್ತಾ ಇದು ಮತೀಯ ಚಮತ್ಕøತಿಯಲ್ಲ. ಶ್ರುತಿ ಶಾಸ್ತ್ರ ಆಗಮ ಪುರಾಣರಹಸ್ಯಾದಿಗಳೊಂದಿಗೆ ಅತಿಶಯವಾದ ಯುಕ್ತಾರ್ಥವನ್ನು ಹೇಳುತ್ತಿರುವುದರಿಂದ ಭಕ್ತ ಜನರು ಚಿತ್ತೈಸಿ ಕೇಳಬೇಕು ಎಂದಿರುವುದು ಪ್ರಮುಖ ಅಂಶವಾಗಿ ಕಂಡುಬರುತ್ತದೆ.
ಕೆರೆಯ ಪದ್ಮರಸ ವಿವರಿಸುವಂತೆ ಮಾಯಾಮಲವು ಜಾತಿಧರ್ಮಗಳ ಸಂಪ್ರೀತಿಯೇ ಆಗಿರುತ್ತದೆ. ಇದನ್ನು ತ್ಯಜಿಸಬೇಕಾದರೆ ‘ಕುಲ’ವೆಂಬ ಕಾಳ್ಮರುಳತನವನ್ನು ಬಿಡಬೇಕು. ಕುಲದ ನೆಲೆಯನ್ನು ತಿಳಿಯಬೇಕಾದರೆ ಹೊಲೆಯೆಂಬುದೇ ಉಚಿತಲ್ಲದೆ ಶುದ್ಧಕುಲವಿಲ್ಲ. ಕಾಯಕ್ಕೆ ಕುಲವೋ ಜೀವಕ್ಕೆ ಕುಲವೋ ಪೇಳು ಈ ಎರಡರೊಳಗೆಯನ್ನವುದಕ್ಕೆ ಕುಲಪೇಳು’ ಎಂದು ಶಿಷ್ಯ(ತ್ರಿಭುವನತಾತ)ನು ಕೇಳಿದಾಗ ಕಾಯವಾದರೂ ಸಹಿತ ಅದು ಹೊಲೆಯಲ್ಲಿ ಹುಟ್ಟಿದುದು. ಜೀವವೂ ನಿರವಯವಾದುದು. ಇವೆರಡಕ್ಕೂ ಸತ್ಕುಲವಿಲ್ಲ.
- ಹೊಟ್ಟೆಯಲ್ಲಿ ಹೊಲೆ ಹುಟ್ಟುವಲ್ಲಿ ಹೊಂದುವಲ್ಲಿ ಹೊಲೆ
- ನಟ್ಟನಡುವೆ ಹಗೆ ಬಂದುದು ಸತ್ಕುಲದ ಹರಲೆ
ಎಂದು ಸತ್ಕುಲದವರಿಗೆ ಹೊಲೆಯೆಂಬುದೇ ಇಲ್ಲ ಎಂದು ಪದ್ಮರಸನು ಹೇಳಿದಾಗ, ತ್ರಿಭುವನತಾತನು “ದೇಹವಿಡಿದ ಮೇಲೆ ಕುಲವಿಲ್ಲವೆಂದು ಹೇಗೆ ಹೇಳುವುದು? ಪ್ರಾಣಿಗಳಿಗೂ, ವಸ್ತುಗಳಿಗೂ ಕುಲವನ್ನು ಹೇಳಲಾಗುವುದಿಲ್ಲವೇ? ಎಂದು ಪ್ರಶ್ನಿಸುತ್ತಾನೆ. ಅದಕ್ಕೆ ಗುರುವು ಆ ಪ್ರಾಣಿವಸ್ತುಗಳಿಗೆ ಕುಲಗಳನ್ನು ಹೇಳುವವರು ಮನುಷ್ಯರು. ಅವುಗಳಿಗೆ ಜಾತಿಸೂತಕವಿಲ್ಲವಾಗಿ ಜಾತಿದೋಷಗಳಿಲ್ಲ. ರತಿಸಂಕರಗಳಿಲ್ಲದ ಪ್ರಾಣಿಗಳಿಗೆ ಕುಲವಿಲ್ಲವೆಂದಾಗ ರತಿ ಸಂಕರವುಳ್ಳ ಮಾನವರಿಗೆ ಸತ್ಕುಲವೆಲ್ಲಿಂದ ಬಂತು? ಸೂತಕ ಜನನದವರಿಗೆ ಕೀಳುಕುಲ, ಸೂತಕ ರಹಿತವಾದ ಶಿವಭಕ್ತರಿಗೆ ಇರುವುದು ಸತ್ಕುಲವೊಂದೇ. ಆದ್ದರಿಂದ ಶಿವಲಿಂಗಕ್ಕೆ ವರ್ಣವಿಲ್ಲ. ಆಶ್ರಮಗಳಿಲ್ಲ, ಯಾವ ಕುಲವೂ ಇಲ್ಲ, ಇಂತಹ ಶಿವಲಿಂಗರಿಂದ ಜನಿಸಿದ ಶಿವಜಾತರಿಗೂ ಕುಲವಿಲ್ಲ ಎನ್ನುತ್ತಾರೆ. ಶಿವಭಕ್ತರಾದವರಿಗೆ ಸೂತಕವಾಗಲಿ ಜಾತೀಯತೆಯಾಗಲಿ ಇರುವುದಿಲ್ಲ. ಅವರು ಲಿಂಗದ ನಿಜದಲ್ಲಿ ಯುಕ್ತರಾದವರು, ಕುಲದ ಬೀಜವನ್ನು ಸುಟ್ಟಂಥವರು, ಕುಲದ ಮದವನ್ನು ಕಳಚಿ ಹಾಕಿ ನಾಶಪಡಿಸಿದಂಥವರು; ನಾರಿಯರು, ಪುರುಷರು, ಷಂಡ ಶಬರಾದಿಗಳು, ದ್ವಿಪಚರು, ದ್ವಿಜಾಧಿಪರು ಮುಂತಾದ ಯಾರೇ ಆಗಲಿ ಶುದ್ಧಲಿಂಗದ ಅರ್ಚನೆಯನ್ನು ಮಾಡಿದಲ್ಲಿ ಅವರಿಗೆ ಶಿವಪ್ರಾಪ್ತಿಯುಂಟಾಗುವುದು. ಈ ಶ್ರದ್ಧೆ ನಿಶ್ಚಲಗೊಂಡಾಗ ಮಾಯಾಮಲ ನಾಶವಾಗುವುದು ಎಂದು ಪದ್ಮರಸ ಕುಲದ ಬಗ್ಗೆ ವಿವರಿಸುತ್ತಾ ತಿಳಿಸಿದ್ದಾನೆ.
ಇನ್ನು ಕಾರ್ಮಿಕಮಲದ ಬಗ್ಗೆ ವಿವರಿಸುತ್ತಾ ‘ಮನುಜಜನ್ಮದಲ್ಲಿ ಬಂದ ಮೇಲೆ ಪ್ರತಿಯೊಬ್ಬರೂ ಅನುಭವಿಸಬೇಕೆಂದು ಶಿವನು ಹಲವಾರು ರೀತಿಯಲ್ಲಿ ದ್ರವ್ಯವನ್ನು ನಿರ್ಮಿಸಿದ್ದಾನೆ. ಧರೆ, ಶಿಲೆ, ತರು, ಗುಲ್ಮ, ಲತೆಗಳಲ್ಲಿ ಉದ್ಯೋಗಾದಿಗಳಲ್ಲಿ, ಕನಕ ಮೊದಲಾದ ಅಖಿಲಾದಿ ವಸ್ತುಗಳಲ್ಲಿ ಇರಿಸಿದ್ದಾನೆ. ಇಲ್ಲಿ ಸಂಗ್ರಹಿಸಿದ ಹಣವನ್ನು ಸಹಿತ ಶಿವಭಕ್ತರಿಗೆ ಅಂದರೆ ತನುವನ್ನು ಗುರುವಿಗೂ, ಮನವನ್ನು ಲಿಂಗಕ್ಕೂ, ಧನವನ್ನು ಜಂಗಮಕ್ಕೂ ಅರ್ಪಿಸಬೇಕೆಂಬ ನಿಲುವನ್ನು ಪದ್ಮರಸನೂ ಒಪ್ಪಿರುವುದು ಸಮಯೋಚಿತವಾಗಿದೆ. ಹೀಗೆಯೇ ಹಲವು ರೀತಿಯಲ್ಲಿ ಮಾನವ ಸಮಾಜದ ನೈತಿಕ ಜೀವನಕ್ಕೆ ಸಂಬಂಧಿಸಿದ ಕೆಲವು ವಿಚಾರಗಳು ಹೇಳಲ್ಪಟ್ಟಿವೆ. ಸಮಾಜದಲ್ಲಿರುವ ಅನಿಷ್ಟ, ಆಚಾರ-ವಿಚಾರಗಳನ್ನು ಕುರಿತು ತೋರಿದ ಪದ್ಮರಸನ ಪ್ರತಿಭಟನಾ ಮನೋಧರ್ಮವನ್ನು ಇಲ್ಲಿ ಗುರುತಿಸಬಹುದಾಗಿದೆ. ದೀಕ್ಷೆಯು ವೀರಶೈವ ಮತದ ಪ್ರಮುಖವಾದ ಸಂಸ್ಕಾರವಾಗಿದೆ. ದೀಕ್ಷಾಬೋಧೆಯಲ್ಲಿ ತ್ರೈಮಲವನ್ನು ತೊಡೆವ, ಸುಜ್ಞಾನವನ್ನು ನೀಡುವ ಮೃಡನೊಳೇಕಾರ್ಥವಹ ಬೆಡಗಿನ ಉಪಾಯವಿದೆಂದು ಸಮುಚಿತವಾಗಿ ವರ್ಣಿಸಲಾಗಿದೆ.
ದೀಯತೇ ಜ್ಞಾನಸಂಬಧಃ ಕ್ಷೀಯತೇ ಚ ಮಲತ್ರಯಂ ದೀಯತೆ ಕ್ಷೀಯತೇ ಯೇನ ಸಾದೀಕ್ಷೇತಿ ನಿಗದ್ಯತೇ
ಹಾಗಾಗಿ ಕೆರೆಯ ಪದ್ಮರಸನು ತ್ರಿಭುವನತಾತನಿಗೆ ನೀಡಿದ ದೀಕ್ಷಾಬೋಧೆಯು ವೀರಶೈವ ತತ್ವ, ಮತನಿಷ್ಠೆ, ಏಕಮೇವ ಧರ್ಮಪ್ರತಿಪಾದನೆಯ ಸಂಕೇತವಾಗಿದೆ. ಇಲ್ಲಿ ದೀಕ್ಷೆ ಪಡೆದ ತ್ರಿಭುವನತಾತನಿಗೆ ಕೆರೆಯ ಪದ್ಮರಸನು ವೀರಶೈವ ಧರ್ಮದ ಅತ್ಯಂತ ಕಠಿಣವಾದ ಆಚರಣೆಯ ಮೂಲಕ ಪಡೆಯಬಹುದಾದ ಆತ್ಮ ಮತ್ತು ಜೀವಾತ್ಮಗಳ ಮುಕ್ತಿ ಮತ್ತು ತೃಪ್ತಿಯ ಬಗೆಗಿನ ನಿಲುವನ್ನು ಹೇಳುತ್ತಾನೆ. ಆ ಆಚರಣೆಗಳು ಇಂದಿಗೂ ಕಂಡರೂ ಅವುಗಳ ಸ್ವರೂಪ ಮತ್ತು ವಿಧಾನಗಳು ವಿಭಿನ್ನವಾಗಿದ್ದು ಜಾತ್ಯಾತೀತವಾಗಿವೆ. ಆದರೆ ಆತ್ಮ ಮತ್ತು ಜೀವಾತ್ಮ ಎಂದು ವಿಂಗಡಿಸುವ ಪದ್ಮರಸನ ವಾದವು ವೀರಶೈವ ಮತಕ್ಕೆ ವಿರುದ್ಧವಾಗಿದೆ. ಬ್ರಾಹ್ಮಣನಾಗಿದ್ದ ತ್ರಿಭುವನತಾತ ವಾದದಲ್ಲಿ ಸೋತ ಕಾರಣ ತನ್ನ ಬ್ರಾಹ್ಮಣ್ಯವನ್ನು ತ್ಯಜಿಸಿ ಶಿವತ್ವಕ್ಕೆ ಶರಣಾಗುವುದು ದೈವಾಂತರದ ಕುರುಹಾಗಿದ್ದು; ಇಲ್ಲಿ ಮತಾಂತರದ ಪ್ರಭಾವವಿರುವುದನ್ನು ಗಮನಿಸಬಹುದು. 12 ಮತ್ತು 13ನೇ ಶತಮಾನದ ವಚನಸಾಹಿತ್ಯ ಅನಂತರದಲ್ಲಿ ಕಾಣಿಸಿಕೊಂಡ ವೀರಶೈವ ಸಾಹಿತ್ಯವು ಜೈನಧರ್ಮದೊಂದಿಗೆ ಸಂಘರ್ಷಕ್ಕೊಳಗಾಗಿ ಬೆಳೆದು ಜನಪದೀಯವಾಗಿ ಸಾಮಾನ್ಯನಿಗೂ ನಿಲುಕವಂತ ಸಾಹಿತ್ಯವಾಗಿದೆ. ವೈಧಿಕ ಬ್ರಾಹ್ಮಣರು ಕೃಷ್ಣಪಾರಮ್ಯವನ್ನು ಎತ್ತಿ ಹಿಡಿಯುವ ಸಂದರ್ಭದಲ್ಲಿ ಶಿವಾಧಿಕ್ಯವನ್ನೇ ಮೊದಲು ಮಾಡಿ ಸೃಷ್ಠಿಯ ಮೂಲ ಶಿವನೇ ಎಂದು ಸ್ವಧರ್ಮ ಪರಿಪಾಲನೆ ಮತ್ತು ಪ್ರತಿಷ್ಠಾಪನೆಗೈದ ವೀರಶೈವ ಸಾಹಿತ್ಯವು ಶಿವನನ್ನು ಶಿವತ್ವವನ್ನೂ ಎತ್ತಿ ಹಿಡಿದಿದೆ. ಪದ್ಮರಸನು ಶಿವಶರಣರು ಮತ್ತು ಅವರ ಗುರುತರವಾದ ಲಾಂಛನವನ್ನು ಕಂಡರೆ ಭವಿಯು (ಅರಸ, ರಾಜ, ದೊರೆ ಸೇರಿದಂತೆ ಇತ್ಯಾದಿ) ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ಹೇಳುತ್ತ ಮತ್ತು ಅದಕ್ಕೆ ವಿರುದ್ಧವಾದರೆ ಅದರಿಂದಾಗುವ ಅನಾಹುತದ ಬಗ್ಗೆ ಬಹಳ ಸ್ವಾರಸ್ಯಕರವಾಗಿ ತಿಳಿಸಿದ್ದಾನೆ.
ಈಶಲಾಂಛನವ ಕಂಡಾಸನವಿಳಿಯಬೇಕು. ........................... ಇಳಿಯದಾಸನದೊಳಿರೆ ಪಿತನ ಸದ್ಧರ್ಮಮಂ ಕಳೆದು ತಾನುಂಬ ಕೌರವಮಪ್ಪನರಕಮಂ (1-72)
ಇಲ್ಲಿ ಗಮನಿಸಬೇಕಾದದ್ದು ರಾಜಪ್ರಭುತ್ವವನ್ನು ಕೆರೆಯ ಪದ್ಮರಸ ವಿರೋಧಿಸಿರುವುದು ಮತ್ತು ಪ್ರತಿಭಟಿಸಿರುವುದನ್ನು. ಶಿವನಿಂದೇ ಜನ್ಮ ಪ್ರಾಪ್ತಿ ಆದರೂ ಕೂಡ ಸಾವಿರ ಜನ್ಮದ ತಪಸ್ಸಾಚರಣೆಯಿಂದ ಮಾತ್ರವೇ ಶಿವಶರಣ ಜನ್ಮಬರುವುದು. ಹಾಗಾಗಿಯೇ ಸ್ವಧರ್ಮ, ಸ್ವಜಾತಿಯ ಅಭಿಮಾನದಿಂದ ಕೆರೆಯ ಪದ್ಮರಸನು
....ಸುರೆಮಾಂಸಭಕ್ಷಣೆಯು ಕಾಮಮೇಳಂಗಳಂ ಪರದೈವ ಭಜನೆ ಪರವಧುಪರಧನಂಗಳಂ ಬಿಡಬೇಕು ಬಿಡದಿರಲು ಬಿಡುಗವನ ಗುರುಲಿಂಗ ತೊಡರುಗು ಮಹಾದ್ರೋಹ ಭವಿ ಪಾತಕರ ಸಂಗ (1-49)
ಎನ್ನುತ್ತಾ ಸನ್ಮಾರ್ಗದಿಂದ ಸಚ್ಚಾರಿತ್ರದಿಂದ ಇರಬೇಕೆಂದು ದೀಕ್ಷಾಬೋಧೆಯಲ್ಲಿ ನೇರವಾಗಿ ಬೋಧಿಸುತ್ತಾ, ಅಂತಹ ಆಚರಣೆಯನ್ನು ಪಾಲಿಸದಿದ್ದರೆ ಆಗುವಂತಹ ಅನಾಹುತಗಳನ್ನು ಸಾಂಕೇತಿಕವಾಗಿ ನಿರ್ದೇಶಿಸಿದ್ದಾನೆ. ಪರದೈವ ಭಜನೆ ಬಿಡಬೇಕೆಂಬ ಮಾತಿನಲ್ಲಿ ‘ಏಕದೇವೋಪಾಸನೆ’ಯನ್ನು ಪಾಲಿಸುವ ಕ್ರಮ ‘ಅದ್ವೈತ’ ಸಿದ್ಧಾಂತವನ್ನು ಕಾಣಬಹುದಾಗಿದೆ. ಸಮಾಜದಲ್ಲಿ ನಾನಾವರ್ಗದ, ನಾನಾವೃತ್ತಿಯ ಜನವರ್ಗವಿರುವಾಗ ‘ಏಕದೇವೋಪಾಸನೆ’ಯ ಪರಿಕಲ್ಪನೆ ಮತಾಂತರ ಮತ್ತು ಸ್ವಧರ್ಮವೇ ಶ್ರೇಷ್ಠವೆಂಬದು ಪುನರುಕ್ತಿಯಾಗಿದೆ.
ಭವಿಯ ಮನೆಯನ್ನಪಾನವನುಣ್ಣದಿರಬೇಕು ಭವಿಯಾದ ಮಾತಪಿತರಂ ವಿವರಿಸಲು ಬೇಕು ವಿವರಿಸದೆಯವರಿಡಲು ಉಂಡುದುಂ ಮನಸಂದು ಶಿವರಹಸ್ಯದೊಳೆಂದ ಗೋಮಾಂಸ ಸರಿಯೆಂದು (1-58)
ಇಲ್ಲಿ ಗಮನಿಸಬೇಕಾದದ್ದು ಮುಖ್ಯವಾಗಿ ಆಹಾರ ಪದ್ಧತಿಯ ವಿಡಂಬನೆ. ಜಗತ್ತಿನಲ್ಲಿ ಸರ್ವರಿಗೂ ಒಂದೇ ರೀತಿಯ ಆಹಾರವು ರುಚಿಸುವುದಿಲ್ಲ. ಅದು ಅವರವರ ಬಾಯಿ ರುಚಿಗೆ ಸೇರಿದ್ದಾಗಿರುತ್ತದೆ. ಆಹಾರಕ್ಕೆ ಯಾವುದೇ ರೀತಿಯ ಜಾತಿಯ ಲೇಪನ ಸಲ್ಲುವುದಿಲ್ಲ. ಗೋಮಾಂಸ ‘ದಲಿತರ’ ಶ್ರೇಷ್ಟವಾದ ಆಹಾರ ಕ್ರಮವಾಗಿದೆ. ತನ್ನ ತಾನು ಬಣ್ಣಿಸಿಕೊಳ್ಳಲು ಅಥವಾ ತನ್ನ ಅಸ್ತಿತ್ವವನ್ನು ನಿರೂಪಿಸಲು ಇನ್ನೊಂದು ವರ್ಗದ ಜನರ ಬಗ್ಗೆ ಹೀಯಾಳಿಸುವುದು ಅನರ್ಥವಾಗುತ್ತದೆ. ಬೇಡರ ಕಣ್ಣಪ್ಪನು ಶಿವನಿಗೆ ಮಾಂಸವನ್ನೇ ನೈವೇಧ್ಯ ಮಾಡುತ್ತಿದ್ದನು. ಅವನಂತೆ ಅನೇಕ ಶರಣರು ಕೂಡ ಇದೇ ಪದ್ಧತಿಯನ್ನು ಅನುಸರಿಸುತ್ತಿದ್ದರು ಎಂಬುದನ್ನು ವಚನಕಾರರ ವಚನಗಳಲ್ಲಿ ನಾವು ಕಾಣಬಹುದು.
ಜಾತಿಯೊಂದೇ ಜನನವೊಬ್ಬರಿಂದಾದರಿಗೆ ವರ್ಣವಿಲ್ಲಾ ಶ್ರಮಗಳಿಲ್ಲ ಶಿವಲಿಂಗಕ್ಕೆ ನಿರ್ಣಯವ ತಿಳಿ ಯಾವ ಕುಲವಿಲ್ಲ ಲಿಂಗಕ್ಕೆ ಇಂತಾತನಿಂದಾದವರ್ಗಾವ ಕುಲವಿಲ್ಲ ಸಂತತಂ ಶಿವಜಾತರಿಗೆ ಮುನ್ನ ಕುಲವಿಲ್ಲ... (1-116)
ಎಂದು ದೀರ್ಘವಾಗಿ ಸತ್ಕುಲದ ಬಗ್ಗೆ ಮತ್ತು ಶಿವನಿಂದಾದವರಿಗೆ ಕುಲವಿಲ್ಲವೆಂದು ತಿಳಿಸುವಾಗ ಲಿಂಗವಂತರೆಲ್ಲ ಸತ್ಕುಲದವರೆಂದು ಹೇಳಿದ್ದಾನೆ. ಆದ್ದರಿಂದ ಇಂದಿನ ದಲಿತ ಲಿಂಗವಂತರು ಸತ್ಕುಲದವರು ಅವರುಗಳು ಕೀಳಲ್ಲ ಮತ್ತು ಸಮಾಜದಲ್ಲಿ ಅವರು ಸಮಾನರೆಂಬುದನ್ನು ಈ ಮೂಲಕ ಇಂದಿನ ಮತಾಂಧರು, ಜಾತಿವಾದಿಗಳು ಸ್ಮøತಿಪಟಲದಲ್ಲಿ ಅರಿಯಬೇಕಾಗಿದೆ.
ಶಿವ ಭಕ್ತರುಗಳ ಕುಲ ವಿವರಿಸದೆ ಇರಬೇಕು ಅವರ ಗೃಹದೊಳು ಪದಾರ್ಥವನ್ನು ಭುಂಜಿಸಬೇಕು ಉಳಿದವರ ಕುಲವು ಸತ್ಕುಲವಾದೊಡಂತವರ ಕಳೆವುದಂತ್ಯಜರೆಂದು ಶಿವಭಕ್ತರಲ್ಲದವರ...1-(59)
ಯಾವುದೇ ವರ್ಗ, ವರ್ಣ, ಜಾತಿಯವರು ಶರಣರಾಗಿದ್ದರೆ ಅಥವಾ ಶಿವಭಕ್ತರಾಗಿದ್ದರೆ ಅವರ ಕುಲವನ್ನು ವಿಚಾರಿಸದೆ ಅವರ ಗೃಹ (ನಿವಾಸ)ದೊಳಗೆ ಕೊಡುವ ಆಹಾರವನ್ನು ಸೇವಿಸಬಹುದು. ಅಂದರೆ ದಲಿತನೊರ್ವ ಶರಣ/ಶಿವಭಕ್ತನಾಗಿದ್ದರೂ ಕೂಡ ಅವರ ಮನೆಯಲ್ಲಿ ಆಹಾರ ಸೇವಿಸುವುದು ಉಚಿತ ಮತ್ತು ಅವನ ಕುಲವನ್ನು ಕೇಳುವಂತಿಲ್ಲ. ಆದರೆ ಉತ್ತಮ ಜಾತಿಯಲ್ಲಿಯೇ ಹುಟ್ಟಿ ಸತ್ಕುಲನಾಗಿಲ್ಲದಿದ್ದರೆ ಅವನ ಮನೆಯಲ್ಲಿ ಆಹಾರ ಸೇವನೆ ನಿಷಿದ್ಧವಾಗಿರುತ್ತದೆ. ಇದನ್ನು ದಲಿತ ಸಂವೇದನೆಯ ಹಿನ್ನೆಲೆಯಲ್ಲಿಯೇ ಗ್ರಹಿಸಬಹುದಾಗಿದೆ.
ಹೀಗೆ ಒಟ್ಟಾರೆ ಕೃತಿಯ ಹಿನ್ನೆಲೆಯಲ್ಲಿ ಗಮನಿಸಿದಾಗ ಕೆರೆಯ ಪದ್ಮರಸನು ವೀರಶೈವನಾಗಿದ್ದು ಧರ್ಮವಾದದಲ್ಲಿ ಸೋತ ತ್ರಿಭುವನತಾತನು ವೈಷ್ಣವನಾಗಿದ್ದು ಅಂದಿನ (13ನೇ ಶತಮಾನ) ಕಾಲದ ಸಂದರ್ಭದಲ್ಲಿ ಉತ್ಕøಷ್ಟ ಸ್ಥಿತಿಯಲ್ಲಿದ್ದ ಎರಡು ಪ್ರಮುಖ ಧರ್ಮಗಳ ಪ್ರತಿನಿಧಿಗಳಾಗಿದ್ದರು. ಆದರೆ ಸೋತ ತ್ರಿಭುವನತಾತನು ವೀರಶೈವ ಧರ್ಮವನ್ನು ಒಪ್ಪಿಕೊಂಡು ತನ್ನವರಿಗೆಲ್ಲಾ ವೀರಶೈವ ದೀಕ್ಷೆಯನ್ನು ಪಡೆಯುವ ಮೂಲಕ ಮತಾಂತರಗೊಂಡಿರುವುದು ಕಣ್ಣಿಗೆ ಕಾಣಿಸುವ ಸತ್ಯವಾಗಿದೆ.
ದೀಕ್ಷೆಯ ಸಂದರ್ಭದಲ್ಲಿ ದೀಕ್ಷೆಯ ಸ್ವರೂಪವನ್ನು ತಿಳಿಯ ಹೇಳಿದ ಪದ್ಮರಸನು ಕುಲ, ಧರ್ಮ, ವರ್ಗ, ವರ್ಣ, ಜಾತಿ, ಸಂಕರ, ಆಹಾರ ಪದ್ಧತಿಗಳಂತಹ ಅನೇಕ ಸಾಮಾಜಿಕ ವಿಷಯಗಳನ್ನು ಹಲವಾರು ಘಟನೆಗಳ ಮೂಲಕ ಸಾಂದರ್ಭಿಕ ಮತ್ತು ಸಾಂಕೇತಿಕವಾಗಿ ವಿವರಿಸಿದ್ದಾನೆ. ಇದು ವೀರಶೈವ ಧರ್ಮ ಮತಪ್ರಚಾರದ ಮತ್ತು ತತ್ವ ಸಿದ್ಧಾಂತಗಳನ್ನೊಳಗೊಂಡ ಏಕೈಕ ಸ್ವತಂತ್ರ ಪ್ರಥಮ ಕೃತಿಯಾಗಿದೆ ಮತ್ತು ಇಡೀ ವೀರಶೈವ ಧರ್ಮಸಾರವನ್ನು ಈ ಕೃತಿಯು ಒಳಗೊಂಡಿದೆ.
ಹೀಗೆ ದೀಕ್ಷೆ ಎಂದರೆ ಗುರುವಿನಿಂದ ಲಿಂಗಸಂಗವ ಮಾಡಿ ಮೋಕ್ಷಗೊಳ್ಳುವುದು. ಅಂದರೆ ಭಾವದಲ್ಲಿ ನೆಲೆಗೊಳ್ಳುವಿಕೆ ವೀರಶೈವ ಮತಸ್ಥರಲ್ಲಿ ಸಾಂಪ್ರದಾಯಿಕವಾಗಿ 1. ಸಮಯ ದೀಕ್ಷೆ 2. ಸಾಧಕ ದೀಕ್ಷೆ 3. ಆಚಾರ್ಯ ದೀಕ್ಷೆ 4. ಅನುಗ್ರಹ ದೀಕ್ಷೆ – ಈ ನಾಲ್ಕು ಬಗೆಯ ದೀಕ್ಷೆಗಳು ಕಂಡುಬರುತ್ತವೆ. ಈ ಎಲ್ಲಾ ಅಂಶಗಳನ್ನು ಆಧಾರವಾಗಿಟ್ಟುಕೊಂಡು ಕೆರೆಯ ಪದ್ಮರಸನು ವೀರಶೈವ ಧರ್ಮದ ಪ್ರಚಾರಕ್ಕಾಗಿ ಕೃತಿ ರಚನೆ ಮಾಡಿರುವುದು ವಿಧಿತವಾಗುತ್ತದೆ. ಈ ಕೃತಿಯಲ್ಲಿ ಕುಲ, ಜಾತಿ ವರ್ಣಗಳೆಂಬ ದಲಿತ ಸಂವೇದನೆಯುಳ್ಳ ಸಾಮಾಜಿಕ ವಿಡಂಬನಾ ಅಂಶಗಳು ಕಂಡುಬರುವುದನ್ನು ಚರ್ಚಿಸಲಾಗಿದೆ. ಆದರೆ ಈ ಕಾವ್ಯವು ವೀರಶೈವ ಧರ್ಮಸಾರವನ್ನು ಹೆಚ್ಚು ವಿಜೃಂಬಿಸಿರುವುದರಿಂದ ಈ ಕೃತಿಯು ವೀರಶೈವ ಧರ್ಮ ತತ್ವಸಾರದ ಕೃತಿಯಾಗಿ ಪರಿಣಮಿಸಿದೆ.
ಬಾಹ್ಯಕೊಂಡಿ
[ಬದಲಾಯಿಸಿ]ಆಕರ ಗ್ರಂಥಗಳು
[ಬದಲಾಯಿಸಿ]- ಕೆರೆಯ ಪದ್ಮರಸ == - ಎಫ್.ಟಿ.ಹಳ್ಳಿಕೇರಿ, ಜಗದ್ಗುರು ಶ್ರೀ ಶಿವರಾತ್ರೀಶ್ವರ ಗ್ರಂಥಮಾಲೆ, ಮೈಸೂರು, 2003
- ಕೆರೆಯ ಪದ್ಮರಸ ಮತ್ತು ಆತನ ವಂಶಜರು ಒಂದು ಅಧ್ಯಯನ == - ಡಾ.ಎಫ್.ಟಿ.ಹಳ್ಳಿಕೇರಿ, ವಿಕಾಶ ಪ್ರಕಾಶನ, ಕಮಲಾಪುರ, ಹೊಸಪೇಟೆ ತಾ. ಬಳ್ಳಾರಿ ಜಿಲ್ಲೆ, 1996
- ದೀಕ್ಷಾಬೋಧೆ ==– ಸಂ. ಎಸ್.ಬಸಪ್ಪ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿವಿ, ಮೈಸೂರು-1972
- ದೀಕ್ಷಾಬೋಧೆ == - ಸಂ. ಬಿ.ಬಿ. ಹೆಂಡಿ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ-1973.
ಉಲ್ಲೇಖ
[ಬದಲಾಯಿಸಿ]- ↑ https://kanaja.in/archives/102459
- ↑ ಮೈಸೂರು ವಿವಿ, ಮೈಸೂರು-1972 4.ದೀಕ್ಷಾಬೋಧೆ - ಸಂ. ಬಿ.ಬಿ. ಹೆಂಡಿ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ-1973