ವಿಷಯಕ್ಕೆ ಹೋಗು

ಸದಸ್ಯ:Shashankaithalkadri1/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜ್ವಾಲಾಮುಖಿ[ಬದಲಾಯಿಸಿ]

ಅಲಾಸ್ಕಾದ ಕ್ಲೀವ್‌ಲ್ಯಾಂಡ್ ಜ್ವಾಲಾಮುಖಿಯ ಒಂದು ನೋಟ

ಉರಿಬೆಟ್ಟ (ಜ್ವಾಲಾಮುಖಿ) ಭೂಮಿಯ ಮೇಲ್ಮೈ ಅಥವಾ ಚಿಪ್ಪಿನಲ್ಲಿರುವ ಒಂದು ಬಿರುಕು. ಇಂತಹ ಬಿರುಕಿನ ಮೂಲಕ ಭೂಗರ್ಭದಿಂದ ಕುದಿಯುವ ದ್ರವರೂಪದಲ್ಲಿನ ಕಲ್ಲುಗಳು, ಬೂದಿ ಮತ್ತು ಇತರ ಅನಿಲಗಳು ಹೊರಗೆ ಚಿಮ್ಮುತ್ತವೆ. ಸಾಮಾನ್ಯವಾಗಿ ಘನರೂಪದಲ್ಲಿ ಅಥವಾ ದ್ರವರೂಪದಲ್ಲಿರುವ ಕಲ್ಲುಗಳನ್ನು ಹೊರ ಉಗುಳುವ ಇಂತಹ ಜ್ವಾಲಾಮುಖಿಗಳು ಪರ್ವತದ ಶಿಖರಭಾಗದಲ್ಲಿರುತ್ತವೆ. ಈ ಜ್ವಾಲಾಮುಖಿಗಳ ರೂಪುಗೊಳ್ಳುವಿಕೆ ಬಲು ದೀರ್ಘ ಕಾಲದ ಪ್ರಕ್ರಿಯೆ.

ಜ್ವಾಲಾಮುಖಿಗಳು ನೆಲದಾಳದ ಟೆಕ್ಟಾನಿಕ್ ತಟ್ಟೆಗಳು ಒಂದಿನ್ನೊಂದರ ಬಳಿ ಸಾರಿದಾಗ ಇಲ್ಲವೇ ಪರಸ್ಪರರಿಂದ ದೂರ ಸರಿದಾಗ ಉಂಟಾಗುತ್ತವೆ. ಮಿಡ್-ಅಟ್ಲಾಂಟಿಕ್ ರಿಡ್ಜ್ ನಲ್ಲಿ ಟೆಕ್ಟಾನಿಕ್ ತಟ್ಟೆಗಳು ಪರಸ್ಪರರಿಂದ ದೂರ ಸರಿದಾಗ ರೂಪುಗೊಂಡ ಹಲವು ಜ್ವಾಲಾಮುಖಿಗಳಿವೆ. ಹಾಗೆಯೇ ಪೆಸಿಫಿಕ್ ಅಗ್ನಿ ವರ್ತುಲ (ಪೆಸಿಫಿಕ್ ರಿಂಗ್ ಆಫ್ ಫಯರ್) ನಲ್ಲಿ ತಟ್ಟೆಗಳು ಪರಸ್ಪರರ ಬಳಿ ಸಾರಿದಾಗ ರೂಪುಗೊಂಡ ಹಲವು ಜ್ವಾಲಾಮುಖಿಗಳಿವೆ. ಗಮನಿಸಬೇಕಾದ ಅಂಶವೆಂದರೆ ಟೆಕ್ಟಾನಿಕ್ ತಟ್ಟೆಗಳು ಒಂದರ ಮೇಲೆ ಇನ್ನೊಂದು ಸರಿದಾಗ ಜ್ವಾಲಾಮುಖಿಗಳು ಉಂಟಾಗುವುದಿಲ್ಲ. ಭೂಮಿಯ ಚಿಪ್ಪು ಸೆಳೆಯಲ್ಪಟ್ಟಾಗ ಅಥವಾ ತೆಳುವಾದಾಗ ಸಹ ಜ್ವಾಲಾಮುಖಿಗಳು ರೂಪುಗೊಳ್ಳುವುದುಂಟು. ಇಂತಹ ಜ್ವಾಲಾಮುಖಿಗಳು ಆಫ್ರಿಕದ ಬಿರುಕು ಕಣಿವೆ ಮತ್ತು ಅಮೆರಿಕದ ರಿಯೊ ಗ್ರಾಂಡ್ ಬಿರುಕಿನಲ್ಲಿ ಕಾಣಬರುತ್ತವೆ. ಇನ್ನು ಕೆಲವೇಳೆ ಟೆಕ್ಟಾನಿಕ್ ತಟ್ಟೆಗಳ ಅಂಚಿನಿಂದ ಬಲುದೂರದಲ್ಲಿ ಸಹ ಜ್ವಾಲಾಮುಖಿಗಳು ಇರುತ್ತವೆ. ಹವಾಯ್ ದ್ವೀಪದ ಜ್ವಾಲಾಮುಖಿಗಳು ಇದಕ್ಕೆ ಉದಾಹರಣೆ. ಇಂತಹವನ್ನು ಹಾಟ್ ಸ್ಪಾಟ್ ಎಂದು ಕರೆಯಲಾಗುತ್ತದೆ. ಇಂತಹ ಬಿಸಿ ಸ್ಥಾನಗಳು ಭೂಮಿ ಮಾತ್ರವಲ್ಲದೆ ಸೌರಮಂಡಲದ ಇತರ ಗ್ರಹಗಳಲ್ಲಿ ಮತ್ತು ಉಪಗ್ರಹಗಳಲ್ಲಿ ಸಹ ಇರುವುವು.

ಪ್ಲೇಟ್ ಟೆಕ್ಟಾನಿಕ್ಸ್ ಮತ್ತು ಹಾಟ್ ಸ್ಪಾಟ್ ಗಳು[ಬದಲಾಯಿಸಿ]

ದೂರಸರಿವ ತಟ್ಟೆಗಳು[ಬದಲಾಯಿಸಿ]

ಸಾಗರಮಧ್ಯ ರಿಡ್ಜ್ ಗಳಲ್ಲಿ ತಟ್ಟೆಗಳು ಪರಸ್ಪರರಿಂದ ದೂರ ಸರಿಯುತ್ತವೆ. ಸಾಗರದಾಳದ ನೆಲದ ಅಡಿಯಲ್ಲಿ ಕುದಿಯುವ ಶಿಲೆಗಳು ಕ್ರಮೇಣ ತಣ್ಣಗಾಗಿ ಘನವಾಗುತ್ತಿರುವುದರಿಂದ ಹೊಸದೊಂದು ಚಿಪ್ಪು ನಿರ್ಮಾಣಗೊಳ್ಳುತ್ತಿದೆ. ಇಂತಹ ಚಿಪ್ಪು ಬಲು ತೆಳುವಾಗಿರುತ್ತದೆ. ಭೂಗರ್ಭದ ಒತ್ತಡವು ಅತಿಯಾದಾಗ ಇಂತಹ ಪ್ರದೇಶಗಳಲ್ಲಿ ಚಿಪ್ಪಿನಲ್ಲಿ ಬಿರುಕು ಕಾಣಿಸಿ ಜ್ವಾಲಾಮುಖಿ ಚಟುವಟಿಕೆ ಆರಂಭವಾಗುವುದು. ಇಲ್ಲಿ ಭೂಗರ್ಭದಿಂದ ಚಿಮ್ಮಿದ ಶಿಲಾರಸವು ನೀರಿನೊಳಗೆಯೆ ಹೆಚ್ಚಿನಂಶ ತಣ್ಣಗಾಗಿ ಗಟ್ಟಿಯಾಗಿ ಹೊಸದೊಂದು ಚಿಪ್ಪಿನ ರಚನೆಯಾಗುವುದು. ಬಹಳಷ್ಟು ಟೆಕ್ಟಾನಿಕ್ ತಟ್ಟೆಗಳ ಅಂಚುಗಳು ಸಾಗರದಾಳದಲ್ಲಿಯೆ ಇರುವುದರಿಂದ ಬಹುತೇಕ ಜ್ವಾಲಾಮುಖಿ ಚಟುವಟಿಕೆಗಳು ಸಹ ನೀರಿನಡಿಯಲ್ಲಿಯೇ ನಡೆಯುತ್ತಿರುತ್ತವೆ. ಯಾವ ಪ್ರದೇಶದಲ್ಲಿ ರಿಡ್ಜ್ ಗಳು ನೀರಿನ ಮಟ್ಟಕ್ಕಿಂತ ಮೇಲೆ ಇರುವುವೋ ಅಲ್ಲಿ ಜ್ವಾಲಾಮುಖಿ ಚಟುವಟಿಕೆಗಳು ದ್ವೀಪಗಳನ್ನು ನಿರ್ಮಿಸುತ್ತವೆ. ಐಸ್‍ಲ್ಯಾಂಡ್ ಇದಕ್ಕೊಂದು ಉದಾಹರಣೆ.

ಬಳಿಸಾರುವ ತಟ್ಟೆಗಳು[ಬದಲಾಯಿಸಿ]

ಎರಡು ಟೆಕ್ಟಾನಿಕ್ ತಟ್ಟೆಗಳು ಒಂದಕ್ಕೊಂದು ಡಿಕ್ಕಿ ಹೊಡೆದಾಗ ಸಬ್ಡಕ್ಷನ್ ವಲಯವುಂಟಾಗುತ್ತದೆ. ಸಾಮಾನ್ಯವಾಗಿ ಸಾಗರದಾಳದ ಟೆಕ್ಟಾನಿಕ್ ತಟ್ಟೆಯು ಭೂಖಂಡದ ಟೆಕ್ಟಾನಿಕ್ ತಟ್ಟೆಗೆ ಡಿಕ್ಕಿ ಹೊಡೆದಾಗ ಸಾಗರದ ಟೆಕ್ಟಾನಿಕ್ ತಟ್ಟೆಯು ಭೂಖಂಡದ ಟೆಕ್ಟಾನಿಕ್ ತಟ್ಟೆಯ ಅಡಿಗೆ ಸರಿಯುವುದು. ಹೀಗಾದಾಗ ಸಾಗರತೀರದ ಸಮೀಪದಲ್ಲಿ ತೀವ್ರ ಆಳವಾದ ಕಂದಕವೊಂದು ಸಾಗರದಲ್ಲಿ ಉಂಟಾಗುತ್ತದೆ. ಇದರ ಮೇಲ್ಪರೆಯು ಭೂಗರ್ಭದ ತೀವ್ರ ತಾಪಮಾನದಿಂದಾಗಿ ಕರಗಿ ಮ್ಯಾಗ್ಮಾ ರೂಪ ತಳೆಯುತ್ತದೆ. ಈ ಮ್ಯಾಗ್ಮಾ ಅತಿ ಮಂದ ದ್ರವವಾಗಿದ್ದು ಸಾಗರದಾಳದಿಂದ ಪೂರ್ಣವಾಗಿ ಹೊರಬರದೆ ನೀರಿನೊಳಗೆ ತಣ್ಣಗಾಗಿ ಗಟ್ಟಿಗೂಡುತ್ತದೆ. ಎಲ್ಲಿ ಈ ಮಾಗ್ಮಾ ನೀರಿನಿಂದ ಹೊರಬರಲು ಶಕ್ತವಾಗುವುದೋ ಅಂತಹ ಸ್ಥಳಗಳಲ್ಲಿ ಜ್ವಾಲಾಮುಖಿ ರೂಪುಗೊಳ್ಳುತ್ತದೆ. ಇಂತಹ ಜ್ವಾಲಾಮುಖಿಗೆ ಉದಾಹರಣೆಯೆಂದರೆ ಮೌಂಟ್ ಎಟ್ನಾ ಮತ್ತು ಪೆಸಿಫಿಕ್ ಅಗ್ನಿ ವಲಯದ ಜ್ವಾಲಾಮುಖಿಗಳು.

ಜ್ವಾಲಾಮುಖಿಯ ಲಕ್ಷಣಗಳು[ಬದಲಾಯಿಸಿ]

ಸಾಮಾನ್ಯವಾಗಿ ನಮ್ಮ ಪರಿಕಲ್ಪನೆಯಲ್ಲಿ ಜ್ವಾಲಾಮುಖಿಯೆಂದರೆ ಬೆಂಕಿ, ಲಾವಾ ಮತ್ತು ಹೊಗೆಯುಗುಳುವ ಶಂಕುವಿನಾಕಾರದ ಪರ್ವತ. ಆದರೆ ಇದು ಜ್ವಾಲಾಮುಖಿಯ ಒಂದು ಬಗೆ ಮಾತ್ರ. ಜ್ವಾಲಾಮುಖಿಯ ರೂಪುರೇಷೆಗಳು ಹಲವು ವಿಷಯಗಳನ್ನು ಆಧರಿಸಿರುತ್ತವೆ. ಕೆಲ ಜ್ವಾಲಾಮುಖಿಗಳು ಒರಟಾದ ಶಿಖರವನ್ನು ಹೊಂದಿದ್ದು ಬಾಯಿಯ ಸ್ಥಾನದಲ್ಲಿ ಲಾವಾದ ಗುಮ್ಮಟವನ್ನು ಹೊಂದಿರುತ್ತವೆ. ಇನ್ನು ಕೆಲವು ಜ್ವಾಲಾಮುಖಿಗಳ ಮೇಲ್ಭಾಗದಲ್ಲಿ ಬೃಹತ್ ಪೀಠಭೂಮಿಯನ್ನು ಹೊಂದಿರುತ್ತವೆ. ಬೆಂಕಿ, ಲಾವಾ ಮತ್ತು ಹೊಗೆಯುಗುಳುವ ಬಾಯಿಯು ಜ್ವಾಲಾಮುಖಿಯ ಶಿಖರದಲ್ಲಿಯೇ ಇರಬೇಕೆಂದೇನೂ ಇಲ್ಲ. ಅಗ್ನಿಪರ್ವತದ ಮೈಯ ಯಾವುದೇ ಭಾಗದಲ್ಲಿ ಸಹ ಇದು ಇರಬಹುದಾಗಿದೆ. ಹವಾಯ್ ದ್ವೀಪದ ಹಲವು ಅಗ್ನಿಪರ್ವತಗಳಲ್ಲಿ ಇಂತಹ ರಚನೆ ಕಾಣಬಹುದು.

ಇತರ ಜ್ವಾಲಾಮುಖಿಯ ವಿಧಗಳೆಂದರೆ ಕ್ರಯೊಜ್ವಾಲಾಮುಖಿಗಳು ಮತ್ತು ಕೆಸರು ಜ್ವಾಲಾಮುಖಿಗಳು. ಕ್ರಯೊಜ್ವಾಲಾಮುಖಿಗಳು (ಅಥವಾ ಹಿಮಜ್ವಾಲಾಮುಖಿಗಳು) ಗುರು, ಶನಿ ಮತ್ತು ನೆಪ್ಚೂನ್ ಗ್ರಹಗಳ ಚಂದ್ರರಲ್ಲಿ ಕಾಣಬರುತ್ತವೆ. ಕೆಸರು ಜ್ವಾಲಾಮುಖಿಗಳಲ್ಲಿ ಮ್ಯಾಗ್ಮಾ ಚಟುವಟಿಕೆಗಳು ಸಾಮಾನ್ಯವಾಗಿ ಕಂಡುಬರುವುದಿಲ್ಲ. ಸಕ್ರಿಯವಾಗಿರುವ ಕೆಸರು ಜ್ವಾಲಾಮುಖಿಗಳಲ್ಲಿ ತಾಪಮಾನ ಅಗ್ನಿಮುಖಗಳಲ್ಲಿಯದಕ್ಕಿಂತ ಗಣನೀಯ ಪ್ರಮಾಣದಲ್ಲಿ ಕಡಿಮೆಯಿರುವುದು.