ವಿಷಯಕ್ಕೆ ಹೋಗು

ಸದ್ಗುರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸದ್ಗುರು ಜಗ್ಗಿ ವಾಸುದೇವ್‌
ಜನನ(೧೯೫೭-೦೯-೦೩)೩ ಸೆಪ್ಟೆಂಬರ್ ೧೯೫೭
ಮೈಸೂರು, ಕರ್ನಾಟಕ

ಜಗ್ಗಿ ವಾಸುದೇವ್‌ರವರು (ಸದ್ಗುರು) (ಜನನ ೩ ಸೆಪ್ಟೆಂಬರ್ ೧೯೫೭) ಒಬ್ಬ ಭಾರತೀಯ ಯೋಗಿ ಮತ್ತು ಅನುಭವಿ ಅಲ್ಲದೆ ಲೇಖಕರೂ ಆಗಿದ್ದಾರೆ. ಇವರು ಸ್ಥಾಪಿಸಿರುವ ’ಈಶ ಪ್ರತಿಷ್ಠಾನ’ ಸೇವಾಸಂಸ್ಥೆಯು ಲಾಭರಹಿತ ಹಾಗು ಜಾತ್ಯಾತೀತವಾಗಿದ್ದು, ಇದು ಭಾರತ, ಅಮೆರಿಕ, ಇಂಗ್ಲೆಂಡ್, ಲೆಬನಾನ್, ಸಿಂಗಪೂರ್, ಕೆನಡ, ಮಲೇಶಿಯ, ಉಗಾಂಡಾ, ಆಸ್ಟ್ರೇಲಿಯ ಮುಂತಾದ ದೇಶಗಳಲ್ಲಿ ಯೋಗಾಭ್ಯಾಸದ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದೆ. ಈಶ ಪ್ರತಿಷ್ಠಾನವು ಅನೇಕ ಸಮಾಜೋದ್ಧಾರಕ ಕಾರ್ಯಕ್ರಮಗಳನ್ನು ಕೂಡ ಹಮ್ಮಿಕೊಂಡಿದೆ. ಇದರಿಂದಾಗಿ, ವಿಶ್ವಸಂಸ್ಥೆಯು ತನ್ನ ’ಎಕನಾಮಿ ಆಂಡ್ ಸೋಶಿಯಲ್ ಕೌನ್ಸಿಲ್’(ಆರ್ಥಿಕ ಮತ್ತು ಸಾಮಾಜಿಕ ಮಂಡಲಿ)ನಲ್ಲಿ ಈಶ ಪ್ರತಿಷ್ಠಾನಕ್ಕೆ ವಿಶೇಷ ಸಲಹೆಗಾರ ಸ್ಥಾನವನ್ನು ನೀಡಿದೆ.ಅವರು ಬರೆದಿರುವ ಪುಸ್ತಕಗಳು "ಆರೋಗ್ಯ","ಧರ್ಮ, ಆಧ್ಯಾತ್ಮಿಕತೆ ಮತ್ತು ನಂಬಿಕೆ", "ಸಲಹೆ" ಮತ್ತು ಇತರೆ ಮುಂತಾದ ಅನೇಕ ವಿಭಾಗಗಳಲ್ಲಿ ದಿ ನ್ಯೂಯಾರ್ಕ್ ಟೈಮ್ಸ್ ಬೆಸ್ಟ್ ಸೆಲ್ಲರ್ ಪಟ್ಟಿಯಲ್ಲಿ ಕಾಣಿಸಿಕೊಂಡಿವೆ.

ಬಾಲ್ಯಜೀವನ

[ಬದಲಾಯಿಸಿ]

ಮೈಸೂರಿನಲ್ಲಿದ್ದ ಶ್ರೀಮತಿ ಸುಶೀಲ ಮತ್ತು ಡಾ. ವಾಸುದೇವ್ ಎಂಬ ತೆಲುಗು ದಂಪತಿಗೆ ನಾಲ್ವರು ಮಕ್ಕಳು - ಇಬ್ಬರು ಪುತ್ರಿಯರು ಮತ್ತು ಇಬ್ಬರು ಪುತ್ರರು. ಕಿರಿಯ ಮಗ ಜಗದೀಶ್ ಹುಟ್ಟಿದ್ದು 1957 ರ ಸೆಪ್ಟೆಂಬರ್ 3ರಂದು. ಮನೆಗೆ ಬಂದ ಗೊರವನೊಬ್ಬ ಹೇಳಿದಂತೆ, ಮಗುವಿನ ಭವಿಷ್ಯ ಅತ್ಯುತ್ತಮವಾಗಿದೆಯೆಂದು ಕೇಳಿ, ’ಜಗದೀಶ್’- ಅರ್ಥಾತ್ ಜಗತ್ತಿನ ಒಡೆಯ, ಎಂಬ ಹೆಸರಿಟ್ಟರು. ಜಗದೀಶನ ತಂದೆಯವರು ರೈಲ್ವೆ ಆಸ್ಪತ್ರೆಯಲ್ಲಿ ಕಣ್ಣಿನ ವೈದ್ಯರಾಗಿದ್ದುದರಿಂದ ಆಗಾಗ್ಗೆ ವರ್ಗವಾಗಿ ಬೇರೆ ಊರುಗಳಿಗೆ ಸಂಸಾರಸಮೇತ ಹೋಗ ಬೇಕಾಗುತ್ತಿತ್ತು.

’ಜಗ್ಗಿ’ (ಜಗದೀಶನ ಪ್ರೀತಿಯ ಹೆಸರು)ಯು, ಚಿಕ್ಕಂದಿನಿಂದಲೇ ಪ್ರಕೃತಿಪ್ರೇಮಿಯಾಗಿ ಮೈಸೂರಿನ ಸುತ್ತಮುತ್ತಲಿನ ಕಾಡುಮೇಡುಗಳಲ್ಲಿ ಅಲೆದಾಡುತ್ತಿದ್ದರು. ಕೆಲವು ವೇಳೆ ಈ ಅವಧಿ ಹಲವು ದಿನಗಳವರೆಗೂ ಹೋದದ್ದುಂಟು. ೧೧ನೇ ವರ್ಷದಲ್ಲಿ ಮಲ್ಲಾಡಿಹಳ್ಳಿ ರಾಘವೇಂದ್ರ ಸ್ವಾಮಿಗಳ ಪರಿಚಯವಾಗಿ, ಅವರಲ್ಲಿ ಪ್ರಾರಂಭಿಕ ಯೋಗಾಸನಗಳನ್ನು ಕಲಿತು ದಿನವೂ ಅಭ್ಯಾಸ ಮಾಡುತ್ತಿದ್ದರು. ಸದ್ಗುರುಗಳೇ ಹೇಳಿರುವಂತೆ ಒಂದು ದಿನವೂ ಬಿಡದಂತೆ ಮಾಡುತ್ತಿದ್ದ ಸರಳ ಯೋಗವು ಕಾಲಾನಂತರದಲ್ಲಿ ಮತ್ತೂ ಆಳವಾದ ಆಧ್ಯಾತ್ಮಿಕ ಅನುಭವಕ್ಕೆ ದಾರಿ ಮಾಡಿಕೊಟ್ಟಿತು.

ಜಗ್ಗಿಯವರು ಮೈಸೂರು ವಿಶ್ವವಿದ್ಯಾನಿಲಯದಿಂದ ಇಂಗ್ಲೀಷ್ ಸಾಹಿತ್ಯದಲ್ಲಿ ಪದವೀಧರರಾದರು; ತರಗತಿಗೇ ಎರಡನೆ ಸ್ಥಾನ ಪಡೆದರು. ಕಾಲೇಜು ದಿನಗಳಲ್ಲೇ ಇವರಿಗೆ ಪ್ರವಾಸ ಮತ್ತು ಮೋಟರ್‌ಬೈಕ್‌ಗಳೆಂದರೆ ಅತೀವ ಆಸಕ್ತಿಯಿತ್ತು. ಆಗಾಗ್ಗೆ ಸ್ನೇಹಿತರೊಡನೆ ಹೋಗುತ್ತಿದ್ದುದು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ. ಗೆಳೆಯರೊಡನೆ ಸಂತೋಷ ಕೂಟ, ಸರಿರಾತ್ರಿಯಲ್ಲಿ ವಾಹನ ಓಡಿಸುತ್ತಿದ್ದುದು ಎಲ್ಲವೂ ಈ ಬೆಟ್ಟದಲ್ಲಿಯೇ. ಜಗ್ಗಿಯವರು ಭಾರತದ ಅನೇಕ ಸ್ಥಳಗಳಿಗೆ ಮೋಟಾರ್‌ಬೈಕ್‌ನಲ್ಲೇ ಪ್ರವಾಸ ಹೋಗುತ್ತಿದ್ದರು. ನೇಪಾಳಕ್ಕೆ ಹೋಗಲು ಪ್ರಯತ್ನಿಸಿದಾಗ ಪಾಸ್‌ಪೋರ್ಟ್ ಇಲ್ಲದಿದ್ದುದರಿಂದ ನೇಪಾಳದ ಗಡಿಯಲ್ಲಿ ಪ್ರವೇಶ ದೊರೆಯಲಿಲ್ಲ. ಈ ಅನುಭವದ ಪರಿಣಾಮವಾಗಿ ಬಹು ಬೇಗ ಹಣ ಸಂಪಾದಿಸಿ ಯಾರೂ ಅಡ್ಡಿ ಮಾಡದಿರುವಂತಹ ಜಾಗಕ್ಕೆ ಹೋಗಬೇಕೆಂಬ ಛಲ ಇವರಲ್ಲಿ ಹುಟ್ಟಿತು. ಹಾಗಾಗಿ, ಪದವಿ ಪಡೆದನಂತರ ಕೋಳಿ ಸಾಕಣೆ, ಇಟ್ಟಿಗೆ ಕಾರ್ಖಾನೆ, ಕಟ್ಟಡ ನಿರ್ಮಾಣ ಮುಂತಾದ ಹಲವು ಉದ್ಯೋಗಗಳಲ್ಲಿ ತೊಡಗಿಕೊಂಡು ಯಶಸ್ವಿಯಾದರು.

ಆಧ್ಯಾತ್ಮಿಕ ಅನುಭವ

[ಬದಲಾಯಿಸಿ]

೧೯೮೨ರ ಸೆಪ್ಟೆಂಬರ್ ೨೩ರಂದು ತಮ್ಮ ೨೫ನೇ ವಯಸ್ಸಿನಲ್ಲಿ ಚಾಮುಂಡಿ ಬೆಟ್ಟಕ್ಕೆ ಹೋಗಿ ಅಲ್ಲಿನ ಹೆಬ್ಬಂಡೆಯೊಂದರ ಮೇಲೆ ಕುಳಿತಿದ್ದಾಗ ಸದ್ಗುರುವಿಗೆ ಒಂದು ಅವರ್ಣನೀಯ ಅನುಭವವಾಯಿತು. ಅವರೇ ವಿವರಿಸಿದಂತೆ ನನ್ನ ಜೀವನದಲ್ಲಿ ಅಲ್ಲಿಯವರೆಗೆ ನಾನು ಎಂಬುದು ಬೇರೆ, ಅದು, ಅವರು ಎಲ್ಲವೂ ಬೇರೆ ಎಂದೇ ಯೋಚಿಸುತ್ತಿದ್ದೆ. ಅವತ್ತು ಮೊದಲ ಬಾರಿಗೆ ನಾನು ಯಾವುದು ಬೇರೆ ಯಾವುದು ಎಂಬ ಭಾವ ತಿಳಿಯದಂತೆ, ಒಮ್ಮೆಲೇ ನಾನೇ ಎಲ್ಲೆಡೆ, ಎಲ್ಲವೂ ಆದಂತಹ ಅನುಭವ! ನಾನು ಕುಳಿತಿದ್ದ ಬಂಡೆ, ಉಸಿರಾಡುತ್ತಿದ್ದ ಗಾಳಿ, ಸುತ್ತಲಿನ ವಾತಾವರಣ ಎಲ್ಲದರಲ್ಲಿಯೂ ’ನಾನು’ ಎನ್ನುವುದು ಸ್ಫೋಟಗೊಂಡಂತೆ - ಇದು ನಿಜಕ್ಕೂ ಹುಚ್ಚು ಎನಿಸಬಹುದು. ಈ ಅನುಭವವು ನನಗೆ ೧೦-೧೫ ನಿಮಿಷದವರೆಗೆ ಆದಂತೆನಿಸಿತು, ಆದರೆ ಆ ಅವಧಿ ವಾಸ್ತವದಲ್ಲಿ ನಾಲ್ಕು ಗಂಟೆಗಳಿಗೂ ಮೀರಿತ್ತೆಂದು ಅನಂತರ ತಿಳಿಯಿತು. ಕಣ್ತೆರೆದಿದ್ದರೂ, ಮೈಮೇಲಿನ ಅರಿವಿದ್ದರೂ ಕಾಲ ಸರಿದದ್ದೆ ತಿಳಿಯಲಿಲ್ಲ. ಇದಾದ ಆರು ವಾರಗಳ ನಂತರ ಸದ್ಗುರುಗಳು ತಾವು ನಡೆಸುತ್ತಿದ್ದ ಉದ್ದಿಮೆಯನ್ನು ಗೆಳೆಯನಿಗೊಪ್ಪಿಸಿ, ತಮಗೆ ಆದ ಅಪೂರ್ವ ಅನುಭವದ ಬಗ್ಗೆ ಬಲ್ಲವರಿಂದ ತಿಳಿಯಲು ದೀರ್ಘಕಾಲ ಪ್ರವಾಸ ನಡೆಸಿದರು. ಒಂದು ವರ್ಷ ಕಾಲ ನಡೆದ ಧ್ಯಾನ ಮತ್ತು ಪ್ರವಾಸದ ನಂತರ ಸದ್ಗುರುಗಳು ತಮಗಾದ ಆಂತರಂಗಿಕ ಅನುಭವವನ್ನು ಇತರರೊಂದಿಗೆ ಹಂಚಿಕೊಳ್ಳುವುದಕ್ಕಾಗಿ ಯೋಗವನ್ನು ಹೇಳಿಕೊಡುವ ನಿರ್ಧಾರ ಮಾಡಿದರು.

ಸದ್ಗುರುಗಳು ೧೯೮೩ರಲ್ಲಿ, ಮೈಸೂರಿನಲ್ಲಿ ಏಳು ಜನರಿಗಾಗಿ ಯೋಗದ ಮೊದಲ ತರಗತಿಯನ್ನು ನಡೆಸಿದರು. ಕ್ರಮೇಣ, ಕರ್ನಾಟಕದ ವಿವಿಧ ನಗರಗಳಲ್ಲಿ ಮತ್ತು ಹೈದರಾಬಾದ್‌ನಲ್ಲಿ ಯೋಗವನ್ನು ಹೇಳಿಕೊಡುವುದಕ್ಕಾಗಿ ಸದ್ಗುರುಗಳು ಮೋಟಾರ್‌ಬೈಕ್‌ನಲ್ಲಿ ಊರಿಂದೂರಿಗೆ ಪ್ರಯಾಣ ಮಾಡುತ್ತಿದ್ದರು. ತಮ್ಮ ಕೋಳಿ ಫ಼ಾರ್ಮ್‌ನಿಂದ ಬರುತ್ತಿದ್ದ ಹಣದಲ್ಲಿ ಜೀವನ ನಿರ್ವಹಿಸುತ್ತ ಕಲಿಯಲು ಬಂದವರಿಗೆ ಉಚಿತವಾಗಿ ಯೋಗವನ್ನು ಹೇಳಿಕೊಡುತ್ತಿದ್ದರು. ಯೋಗ ಶಿಬಿರದಲ್ಲಿ ಬರುತ್ತಿದ್ದ ಹಣವನ್ನು ಕಡೆಯ ದಿನದಂದು ಆಯಾ ಊರಿನ ಯಾವುದಾದರೂ ಸಂಸ್ಥೆಗೆ ದಾನವಾಗಿ ಕೊಟ್ಟುಬಿಡುವುದು ಅವರ ಪದ್ದತಿಯಾಗಿತ್ತು. ಈ ಆರಂಭಿಕ ತರಗತಿಗಳೇ ಮುಂದೆ ಈಶ ಯೋಗ ಶಿಕ್ಷಣಕ್ಕೆ ತಳಹದಿಯಾದವು.

೧೯೮೯ರಲ್ಲಿ, ಯೋಗ ಶಿಕ್ಷಣದ ಮೊದಲ ತರಗತಿಯು ಕೊಯಮತ್ತೂರಿನಲ್ಲಿ ನಡೆಯಿತು, ಅದೇ ಈಗ ’ಈಶ ಯೋಗ ಕೇಂದ್ರ’ವಾಗಿ ಬೆಳೆದು ನಿಂತಿದೆ. ಆಗ ಈ ತರಗತಿಗಳನ್ನು ’ಸಹಜ ಸ್ಥಿತಿ ಯೋಗ’ ಎಂದು ಕರೆಯುತ್ತಿದ್ದು, ಅದರಲ್ಲಿ ಆಸನಗಳು, ಪ್ರಾಣಾಯಾಮ ಕ್ರಿಯೆಗಳು ಮತ್ತು ಧ್ಯಾನ ಒಳಗೊಂಡಿತ್ತು. ಆಧ್ಯಾತ್ಮಿಕ ಸಾಧಕರ ಸಂಖ್ಯೆ ಬೆಳೆಯುತ್ತಿದ್ದಂತೆ ಅವರ ಅನುಕೂಲಕ್ಕಾಗಿ ಆಶ್ರಮವನ್ನು ಸ್ಥಾಪಿಸಲು ಸದ್ಗುರುಗಳು ೧೯೯೩ರಲ್ಲಿ ನಿರ್ಧರಿಸಿದರು. ಕರ್ನಾಟಕ, ಕೇರಳ, ಗೋವಾ, ತಮಿಳುನಾಡಿನ ಅನೇಕ ಸ್ಥಳಗಳಲ್ಲಿ ಬಹಳ ಹುಡುಕಾಟ ನಡೆಸಿ. ಕಡೆಗೆ ೧೯೯೪ರಲ್ಲಿ ಕೊಯಮತ್ತೂರಿನಿಂದ ೩೦ ಕಿ.ಮೀ. ದೂರದಲ್ಲಿರುವ ವೆಳ್ಳಿಯಂಗಿರಿ ಬೆಟ್ಟದ ತಪ್ಪಲಿನಲ್ಲಿ ೧೩ ಎಕರೆ ಜಮೀನನ್ನು ಖರೀದಿಸಿ, ಅಲ್ಲಿ ’ಈಶ ಯೋಗ ಕೇಂದ್ರ’ವನ್ನು ಸ್ಥಾಪಿಸಲಾಯಿತು.

ಸದ್ಗುರು ಜಗ್ಗಿ ವಾಸುದೇವ್ ವಚನಗಳು:

೧. ನೀವು ತಯಾರಾಗಿದ್ದರೆ , ನಿಮ್ಮ ಜೀವನದ ಪ್ರತಿಕ್ಷಣವೂ ಒಂದು ಅದ್ಭುತ ಅನುಭವವಾಗಬಲ್ಲದು. ಉಚ್ಛಾಸ ನಿಶ್ವಾಸಗಳೇ ತೀವ್ರವಾದ ಪ್ರೇಮಪ್ರಣಯವಾಗಬಲ್ಲದು.

೨. ತಮ್ಮನ್ನು ತಾವು ಕಳೆದುಕೊಳ್ಳುವ ಭಯವನ್ನು ಮೀರಿದವರು ಮಾತ್ರ ಪ್ರೀತಿಯನ್ನು ಅರಿಯಬಲ್ಲರು, ಪ್ರೀತಿಯೇ ಆಗಬಲ್ಲರು.

೩. ಭೂತ ಮತ್ತು ಭವಿಷ್ಯತ್ ಇರುವುದು ನಿಮ್ಮ ನೆನಪು ಮತ್ತು ಕಲ್ಪನೆಗಳಲ್ಲಷ್ಟೆ. ಈ ಕ್ಷಣದಲ್ಲಿರುವುದೇ ನೀವು ನಿಜವಾಗಿ ಅನುಭವಿಸುವ ಏಕೈಕ ವಿಷಯ.

ಧ್ಯಾನಲಿಂಗ:

[ಬದಲಾಯಿಸಿ]

೧೯೯೪ರಲ್ಲಿ, ಆಶ್ರಮದ ಆವರಣದಲ್ಲಿ ನಡೆದ ಮೊದಲ ಯೋಗಾಭ್ಯಾಸ ತರಗತಿಯಲ್ಲಿ ಸದ್ಗುರುಗಳು ಧ್ಯಾನಲಿಂಗದ ಬಗ್ಗೆ ಪ್ರಸ್ತಾಪಿಸಿದರು. ತಮ್ಮ ಗುರುಗಳ ಆಣತಿಯಂತೆ ಧ್ಯಾನಲಿಂಗದ ಪ್ರಾಣಪ್ರತಿಷ್ಠಾಪನೆ ಮಾಡುವುದು ತಮ್ಮ ಜೀವನದ ಏಕೈಕ ಗುರಿಯಾಗಿತ್ತೆಂದು ಸದ್ಗುರುಗಳು ಒಂದೆಡೆ ಹೇಳಿದ್ದಾರೆ. ೧೯೯೬ರಲ್ಲಿ, ಧ್ಯಾನಲಿಂಗದ ಶಿಲಾವಿಗ್ರಹ ಆಶ್ರಮಕ್ಕೆ ಬಂದಿತು. ಸುಮಾರು ಮೂರು ವರ್ಷಗಳ ಸತತ ಕಾರ್ಯ ನಡೆದು, ದಿನಾಂಕ ೨೩.೬.೧೯೯೯ ರಂದು ಅದರ ಕೆಲಸ ಪೂರ್ಣವಾಯಿತು. ದಿನಾಂಕ ೨೩.೧೧.೧೯೯೯ ರಂದು ಧ್ಯಾನಲಿಂಗವನ್ನು ಸಾರ್ವಜನಿಕರಿಗೆ ಮುಕ್ತವಾಗಿ ತೆರೆಯಲಾಯಿತು. ಧ್ಯಾನಲಿಂಗದ ಆವರಣವನ್ನು ಧ್ಯಾನಕ್ಕಾಗಿಯೇ ರಚಿಸಲಾಗಿದೆ. ಧ್ಯಾನಲಿಂಗವು ಯಾವುದೇ ಧರ್ಮ, ಮತ, ಪಂಥಕ್ಕೆ ಒಳಪಡದೆ ಕೇವಲ ಧ್ಯಾನಸ್ಥಾನವಾಗಿರುವುದು. ಸುಮಾರು ೭೬ ಅಡಿ ಎತ್ತರವಿರುವ ದೇವಾಲಯದ ಗುಮ್ಮಟವು ಕಬ್ಬಿಣ, ಸಿಮೆಂಟ್‌ನಿಂದ ನಿರ್ಮಿತವಾಗಿಲ್ಲದೆ ಕೇವಲ ಕೆಮ್ಮಣ್ಣು, ಇಟ್ಟಿಗೆ, ಹಾಗೂ ಸ್ವಲ್ಪ ಪ್ರಮಾಣದ ಗಾರೆಯಿಂದ ಕಟ್ಟಲಾಗಿದ್ದು, ಅದು ಇಡೀ ಗರ್ಭಗೃಹವನ್ನು ಆವರಿಸಿಕೊಂಡಿದೆ. ಸಾಂದ್ರವಾದ ಕಪ್ಪು ಗ್ರಾನೈಟ್‌ನಲ್ಲಿ ಕೆತ್ತಲ್ಪಟ್ಟಿರುವ ಧ್ಯಾನಲಿಂಗವು ೧೩ ಅಡಿ ೯ ಅಂಗುಲ ಎತ್ತರವಿದೆ. ಮುಂಬಾಗಿಲಿನ ಎದುರಿನಲ್ಲಿರುವ ’ಸರ್ವ ಧರ್ಮಸ್ತಂಭ’ ಏಕತೆಯ ದ್ಯೋತಕವಾಗಿದೆ. ಅದರ ಮೇಲೆ ಹಿಂದೂ, ಕ್ರೈಸ್ತ, ಇಸ್ಲಾಮ್, ಸಿಖ್, ಜೈನ, ಬೌದ್ಧ, ತಾವೋ, ಜ಼ರಾತುಷ್ಟ್ರ, ಯಹೂದಿ, ಶಿಂಟೋ ಮತಗಳ ಸಂಕೇತಗಳನ್ನು ಪಡಿಮೂಡಿಸಲಾಗಿದೆ. ಈ ಸ್ತಂಭವು ಇಡೀ ಮಾನವಕುಲವನ್ನು ಧ್ಯಾನಕ್ಕೆ ಸ್ವಾಗತಿಸುತ್ತಿರುವಂತೆ ಭಾಸವಾಗುತ್ತಿದೆ.

ಈಶ ಪ್ರತಿಷ್ಠಾನ:

[ಬದಲಾಯಿಸಿ]

ಸದ್ಗುರುಗಳು ಸ್ಥಾಪಿಸಿದ ಜಾತ್ಯಾತೀತ ಸೇವಾಸಂಸ್ಥೆಯಾದ ಈಶ ಪ್ರತಿಷ್ಠಾನವನ್ನು ಸ್ವಯಂಸೇವಕರುಗಳು ಬೇರೆ ಬೇರೆ ಪ್ರತಿನಿಧಿಗಳ ಸಹಾಯದಿಂದ ನಿರ್ವಹಿಸುತ್ತಿದ್ದಾರೆ. ಕೊಯಮತ್ತೂರಿನ ಸಮೀಪದಲ್ಲಿರುವ ಈಶ ಯೋಗ ಕೇಂದ್ರವು ೧೯೯೨ರಲ್ಲಿ ಆರಂಭವಾಗಿದ್ದು, ಆತ್ಮಜ್ಞಾನವನ್ನು ಕುರಿತಂತಹ ಹಲವಾರು ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಇದಲ್ಲದೆ, ಪ್ರತಿಷ್ಠಿತ ’ಯುನೈಟೆಡ್ ನೇಶನ್ಸ್’ ನ ’ಎಕನಾಮಿಕ್ ಅಂಡ್ ಸೋಶಿಯಲ್ ಕೌನ್ಸಿಲ್’ (ವಿಶ್ವಸಂಸ್ಥೆಯ ಆರ್ಥಿಕ ಹಾಗು ಸಾಮಾಜಿಕ ಮಂಡಲಿ)ನಂತಹ ಮತ್ತಿತರ ವಿಶ್ವಸಂಸ್ಥೆಗಳ ಜೊತೆಗೂಡಿ ಕೆಲಸ ಮಾಡುತ್ತಿದೆ.

ಸಮಾಜಮುಖಿ ಯೋಜನೆಗಳು:

[ಬದಲಾಯಿಸಿ]

ಸದ್ಗುರುಗಳು ಆರಂಭಿಸಿದ ’ಪ್ರಾಜೆಕ್ಟ್ ಗ್ರೀನ್ ಹ್ಯಾಂಡ್ಸ್’ (ಪಿ.ಜಿ.ಎಚ್) Archived 2017-04-17 ವೇಬ್ಯಾಕ್ ಮೆಷಿನ್ ನಲ್ಲಿ. ಪರಿಸರ ಯೋಜನೆಗೆ ಜೂನ್ ೨೦೧೦ರಲ್ಲಿ ಭಾರತ ಸರಕಾರದ ಶ್ರೇಷ್ಠ ಪ್ರಶಸ್ತಿಯಾದ ’ಇಂದಿರಾಗಾಂಧಿ ಪರ್ಯಾವರಣ್ ಪುರಸ್ಕಾರ್’ ದೊರಕಿದೆ. ಪಿ.ಜಿ.ಎಚ್.ನ ಪ್ರಮುಖ ಧ್ಯೇಯವೆಂದರೆ ತಮಿಳುನಾಡಿನ ಭೂಮಿಯ ಹಸಿರನ್ನು ಶೇ೧೦ರಷ್ಟು ಹೆಚ್ಚಿಸುವುದು. ಅದಕ್ಕಾಗಿ, ಎರಡು ಮಿಲಿಯನ್ ಸ್ವಯಂಸೇವಕರು ದೇಶಾದ್ಯಂತ ೮.೨ ಮಿಲಿಯನ್‌ಗೂ ಹೆಚ್ಚು ಗಿಡಗಳನ್ನು ನೆಟ್ಟು ಯೋಜನೆಯನ್ನು ಯಶಸ್ವಿಯಾಗಿಸಿದ್ದಾರೆ. ಈಶ ಪ್ರತಿಷ್ಠಾನದ ’ಆಕ್ಶನ್ ಫ಼ಾರ್ ರೂರಲ್ ರಿಜುವಿನೇಶನ್’ - ಗ್ರಾಮೀಣ ಪುನರುತ್ಥಾನ ಆಂದೋಲನ(ಎ.ಆರ್.ಆರ್) Archived 2017-04-10 ವೇಬ್ಯಾಕ್ ಮೆಷಿನ್ ನಲ್ಲಿ. ಯೋಜನೆಯು ಗ್ರಾಮೀಣ ಬಡವರ ಆರೋಗ್ಯ ಮತ್ತು ಅವರ ಜೀವನಮಟ್ಟವನ್ನು ಉತ್ತಮಪಡಿಸಲು ಉದ್ದೇಶಿಸಿದೆ. ಸದ್ಗುರುಗಳು ೨೦೦೩ರಲ್ಲಿ ಸ್ಥಾಪಿಸಿದ ಎ.ಆರ್.ಆರ್.ನ ಪ್ರಮುಖ ಉದ್ದೇಶ, ದಕ್ಷಿಣ ಭಾರತದ ೫೪,೦೦೦ ಹಳ್ಳಿಗಳಲ್ಲಿನ ೭೦ ಮಿಲಿಯನ್ ಜನರಿಗೆ ಸಹಾಯ ಒದಗಿಸುವುದು. ೨೦೧೦ರ ಹೊತ್ತಿಗೆ ಈ ಯೋಜನೆಯು ೪೨೦೦ ಹಳ್ಳಿಗಳನ್ನು ತಲುಪಿ, ೭ ಮಿಲಿಯನ್ ಜನರಿಗೆ ಸಹಾಯಹಸ್ತ ನೀಡಿದೆ.

’ಈಶ ವಿದ್ಯಾ’ ಎಂಬುದು ವಿದ್ಯಾಭ್ಯಾಸಕ್ಕಾಗಿ ಈಶ ಪ್ರತಿಷ್ಠಾನ ರೂಪಿಸಿರುವ ಮತ್ತೊಂದು ಯೋಜನೆ. ಗ್ರಾಮೀಣ ಮಕ್ಕಳನ್ನು ಅಕ್ಷರಸ್ಥರನ್ನಾಗಿಸಿ, ಅವರನ್ನು ಉನ್ನತ ಶಿಕ್ಷಣಕ್ಕೆ ಸಜ್ಜುಗೊಳಿಸುವುದು ಇದರ ಉದ್ದೇಶ. ಈಗ, ಈ ಯೋಜನೆಯಡಿಯಲ್ಲಿ ಏಳು ಪಾಠಶಾಲೆಗಳು ೩,೦೦೦ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಜವಾಬ್ದಾರಿ ನಿರ್ವಹಿಸುತ್ತಿವೆ.

ಯೋಗ ಕಾರ್ಯಕ್ರಮಗಳು:

[ಬದಲಾಯಿಸಿ]

ಆಶ್ರಮದ ಸ್ಥಾಪನೆಯಾದ ಮೇಲೆ, ಸದ್ಗುರುಗಳು ಈಶ ಯೋಗ ಕೇಂದ್ರದಲ್ಲಿ ನಿಯಮಿತವಾಗಿ ಯೋಗ ಕಾರ್ಯಕ್ರಮಗಳನ್ನು ನಡೆಸಲು ಆರಂಭಿಸಿದರು. ೧೯೯೬ರಲ್ಲಿ ಭಾರತೀಯ ಹಾಕಿ ಆಟಗಾರರಿಗೆ ಯೋಗ ಶಿಕ್ಷಣ ನೀಡಿದರು. ೧೯೯೭ರಲ್ಲಿ ಅಮೇರಿಕ ಸಂಯುಕ್ತ ಸಂಸ್ಥಾನಗಳಲ್ಲಿ ಯೋಗ ಶಿಕ್ಷಣ ಪ್ರಾರಂಭವಾಯಿತು. ೧೯೯೮ರಲ್ಲಿ ತಮಿಳುನಾಡಿನ ಕಾರಾಗೃಹಗಳಲ್ಲಿ ಜೀವಾವಧಿ ಕೈದಿಗಳಿಗೆ ಸದ್ಗುರುಗಳು ಯೋಗ ಶಿಕ್ಷಣ ನೀಡಲು ಮೊದಲಿಟ್ಟರು. ’ಈಶ’ ಎಂದರೆ ನಿರಾಕಾರ ದೈವ ಎಂದರ್ಥ. ’ಈಶ ಯೋಗ’ದ ಪ್ರಮುಖ ಕಾರ್ಯಕ್ರಮವೇ ಇನ್ನರ್ ಎಂಜಿನೀರಿಂಗ್. ಇದರಲ್ಲಿ ಸಾಧಕರಿಗೆ ವೈಯಕ್ತಿಕವಾಗಿ ಧ್ಯಾನ, ಪ್ರಾಣಾಯಾಮ ಮತ್ತು ’ಶಾಂಭವೀ ಮಹಾಮುದ್ರಾ’ ದೀಕ್ಷೆ ನೀಡಲಾಗುವುದು. ಖ್ಯಾತ ಉದ್ಯಮಿಗಳಿಗಾಗಿ ಯೋಗ ಶಿಕ್ಷಣ ಆಯೋಜಿಸಿ ಅವರಿಗೆ ’ಇನ್ಕ್ಲೂಸಿವ್ ಎಕನಾಮಿಕ್ಸ್’ನ್ನು ಪರಿಚಯಿಸುವುದು ಸದ್ಗುರುಗಳ ಉದ್ದೇಶ. ಇದರ ಅಡಿಯಲ್ಲಿ, ಸದ್ಗುರುಗಳು ಮುಂಬೈನಲ್ಲಿಯ ’ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್’ನ ಕಾರ್ಮಿಕರಿಗಾಗಿ ’ಇನ್ನರ್ ಎಂಜಿನೀರಿಂಗ್’ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದಾರೆ. ಪ್ರಸ್ತುತ ಆರ್ಥಿಕ ವ್ಯವಸ್ಥೆಯಲ್ಲಿ ವಿಶ್ವದ ನಾಯಕರು, ಹಿರಿಯ ಅಧಿಕಾರಿಗಳಲ್ಲಿ ಕರುಣಾಭಾವ ಮತ್ತು ಎಲ್ಲರನ್ನೂ ಒಳಗೊಳ್ಳುವಂಥ ಮನಸ್ಸನ್ನು ಬೆಳೆಸುವುದು ಸದ್ಗುರುಗಳ ಆಶಯ.

ಸದ್ಗುರುಗಳು ತಮಿಳುನಾಡು, ಕರ್ನಾಟಕ ದಲ್ಲಿ ’ಮಹಾ ಸತ್ಸಂಗ’ಗಳನ್ನು ನಡೆಸುತ್ತಿರುತ್ತಾರೆ. ಅದರಲ್ಲಿ, ಪ್ರವಚನಗಳು, ಧ್ಯಾನ ಮತ್ತು ಪ್ರೇಕ್ಷಕರೊಂದಿಗೆ ಪ್ರಶ್ನೋತ್ತರಗಳು ಇರುತ್ತವೆ.

ಮಾರ್ಚ್ ೨೦೦೫ರಲ್ಲಿ, ಅಮೇರಿಕದ ಟೆನ್ನೆಸ್ಸಿ ಪ್ರಾಂತ್ಯದ ಮ್ಯಾಕ್‌ಮಿನ್‌ವಿಲ್ಲೆಯಲ್ಲಿ ’ಈಶ ಇನ್ಸ್ಟಿಟ್ಯೂಟ್ ಆಫ಼್ ಇನ್ನರ್ ಸೈನ್ಸಸ್’ [ಐ.ಐ.ಐ.] ಅನ್ನು ಆರೇ ತಿಂಗಳಿನಲ್ಲಿ ಕಟ್ಟಿ ಮುಗಿಸಲಾಯಿತು. ಪಶ್ಚಿಮ ದೇಶಗಳ ಆಧ್ಯಾತ್ಮಿಕ ಬೆಳವಣಿಗೆಗಾಗಿಯೇ ಈ ಸಂಸ್ಥೆಯನ್ನು ನಿರ್ಮಿಸಲು ಸದ್ಗುರು ನಿರ್ಧರಿಸಿದ್ದರು. ದಿನಾಂಕ ೭.೧೧.೨೦೦೮ ರಂದು ಸುಮಾರು ೩೯,೦೦೦ ಚದರಡಿಯಷ್ಟು ವಿಶಾಲವಾದ ಮಹಾಮಂಟಪ ’ಮಹಿಮಾ’ ವನ್ನು ಸದ್ಗುರುಗಳು ಐ.ಐ.ಐ.ನಲ್ಲಿ ಪ್ರತಿಷ್ಠಾಪಿಸಿದರು.

ಜಾಗತಿಕ ವೇದಿಕೆಗಳಲ್ಲಿ ಪಾಲ್ಗೊಳ್ಳುವಿಕೆ:

[ಬದಲಾಯಿಸಿ]

೨೦೦೧ರಲ್ಲಿ ’ಯುನೈಟೆಡ್ ನೇಶನ್ಸ್ ಮಿಲೆನಿಯಮ್ ವರ್ಲ್ಡ್ ಪೀಸ್ ಸಮ್ಮಿಟ್’ನಲ್ಲಿ ಸದ್ಗುರು ಭಾಗವಹಿಸಿ ಮಾತನಾಡಿದರು. ೨೦೦೬ರಿಂದ ೨೦೦೯ರವರೆಗೆ ’ವರ್ಲ್ಡ್ ಎಕನಾಮಿಕ್ ಫೋರಮ್’ಗಳಲ್ಲಿಯೂ ಭಾಗವಹಿಸಿದ್ದರು. ೨೦೧೦ರಲ್ಲಿ ಪರಿಸರ ಸುರಕ್ಷೆ ಮತ್ತು ಪರ್ಯಾವರಣದ ಸಮಸ್ಯೆಗಳ ಪರಿಹಾರದಲ್ಲಿ ಪಾಲ್ಗೊಳ್ಳಲು ಭಾರತೀಯರನ್ನು ಪ್ರೋತ್ಸಾಹಿಸಿದ್ದಕ್ಕಾಗಿ, ಶ್ರೇಷ್ಠ ೧೦೦ ಭಾರತೀಯರ ಸಾಲಿನಲ್ಲಿ ಸದ್ಗುರು ಆಯ್ಕೆಗೊಂಡರು. ೨೦೦೬ರಲ್ಲಿ ತಯಾರಾದ ’ಒನ್’-ದಿ ಮೂವಿ’ ಸಾಕ್ಷ್ಯಚಿತ್ರದಲ್ಲಿಯೂ ಸದ್ಗುರುಗಳು ಭಾಗವಹಿಸಿದ್ದಾರೆ.

ಪ್ರಶಸ್ತಿಗಳು

[ಬದಲಾಯಿಸಿ]

ಬಾಹ್ಯ ಸಂಪರ್ಕ

[ಬದಲಾಯಿಸಿ]


ಉಲ್ಲೇಖಗಳು

[ಬದಲಾಯಿಸಿ]
  1. "Padma Awards 2017 announced".

ಸದ್ಗುರು ವಚನಗಳು

"https://kn.wikipedia.org/w/index.php?title=ಸದ್ಗುರು&oldid=1189373" ಇಂದ ಪಡೆಯಲ್ಪಟ್ಟಿದೆ