ವಿಷಯಕ್ಕೆ ಹೋಗು

ಸೀಮಿತ ಓವರುಗಳ ಕ್ರಿಕೆಟ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮೆಲ್ಬೋರ್ನ್ ಕ್ರಿಕೆಟ್ ಮೈದಾನವು ಆಸ್ಟ್ರೇಲಿಯ ಮತ್ತು ಭಾರತದ ನಡುವೆ ODIಪಂದ್ಯವೊಂದನ್ನು ಆಯೋಜಿಸಿತ್ತು.ಹಳದಿ ಬಣ್ಣದ ಉಡುಪಿನಲ್ಲಿರುವ ಇಬ್ಬರು ಆಟಗಾರರು ಬ್ಯಾಟ್ಸ್‌ಮನ್‌ಗಳಾಗಿದ್ದು, ನೀಲಿ ಬಣ್ಣದಲ್ಲಿರುವ ಆಟಗಾರರು ಫೀಲ್ಡಿಂಗ್ ತಂಡಕ್ಕೆ ಸೇರಿದವರು.
ಬೆಲ್ಲೆರಿವ್ ಓವಲ್‌ನಲ್ಲಿ ನಡೆದ ದಿನದ ಪಂದ್ಯ

ಸೀಮಿತ ಓವರುಗಳ ಕ್ರಿಕೆಟ್ ಪಂದ್ಯಾವಳಿಯು ಏಕ ದಿನ ಕ್ರಿಕೆಟ್ ಪಂದ್ಯಾವಳಿ ಎಂದು ಕೂಡ ಪರಿಚಿತವಾಗಿದ್ದು, ಸ್ವಲ್ಪ ಭಿನ್ನ ಸಂದರ್ಭದಲ್ಲಿ ಲಿಸ್ಟ್ A ಕ್ರಿಕೆಟ್ ಎಂದು ಹೆಸರಾಗಿದೆ. ಇದು ಕ್ರಿಕೆಟ್ ಕ್ರೀಡೆಯ ರೂಪವಾಗಿದ್ದು, ಇದರಲ್ಲಿ ಪಂದ್ಯವನ್ನು ಸಾಮಾನ್ಯವಾಗಿ ಒಂದು ದಿನದಲ್ಲಿ ಪೂರ್ಣಗೊಳಿಸಲಾಗುತ್ತದೆ. ಆದರೆ ಟೆಸ್ಟ್ ಮತ್ತು ಪ್ರಥಮ ದರ್ಜೆ ಪಂದ್ಯಗಳನ್ನು ಪೂರ್ಣಗೊಳಿಸಲು ಐದು ದಿನಗಳು ಬೇಕಾಗುತ್ತದೆ. ಪಂದ್ಯದಲ್ಲಿ ಪ್ರತಿಯೊಂದು ತಂಡ ಸಾಮಾನ್ಯವಾಗಿ 20ರಿಂದ 50ರ ನಡುವಿನ ಗರಿಷ್ಠ ಸಂಖ್ಯೆಯ ಓವರುಗಳನ್ನು ಬೌಲ್ ಮಾಡುತ್ತದೆ ಎಂಬ ನಿಯಮವನ್ನು ಸೀಮಿತ ಓವರುಗಳ ಕ್ರಿಕೆಟ್‌ ಹೆಸರು ಬಿಂಬಿಸುತ್ತದೆ. ಆದರೂ ಸೀಮಿತ ಓವರುಗಳ ಕ್ರಿಕೆಟ್‌ನ ಸಣ್ಣ ಮತ್ತು ದೀರ್ಘ ರೂಪಗಳ ಪಂದ್ಯಗಳನ್ನು ಆಡಲಾಗಿದೆ. ಅಂತಾರಾಷ್ಟ್ರೀಯ ಮತ್ತು ದೇಶೀಯ(ಸ್ಥಳೀಯ)ವಾಗಿ ಆಡುವ ಪ್ರಮುಖ ಏಕ ದಿನ ಪಂದ್ಯಗಳಿಗೆ ಸಾಮಾನ್ಯವಾಗಿ ಎರಡು ದಿನಗಳನ್ನು ಗೊತ್ತುಮಾಡಲಾಗಿರುತ್ತದೆ. ಎರಡನೇ ದಿನವು "ಕಾದಿರಿಸಿದ"(ಮೀಸಲು) ದಿನವಾಗಿದ್ದು, ಪ್ರಥಮ ದಿನದಲ್ಲಿ ಪಂದ್ಯದ ಫಲಿತಾಂಶ ಸಾಧ್ಯವಾಗದಿದ್ದರೆ, ಪಂದ್ಯ ಮುಗಿಯಲು ಎರಡನೇ ದಿನ ಹೆಚ್ಚಿನ ಅವಕಾಶ ನೀಡಲಾಗುತ್ತದೆ(ಉದಾಹರಣೆಗೆ ಮಳೆಯಿಂದ ಪಂದ್ಯವನ್ನು ಆಡಲಾಗದಿರುವುದು ಅಥವಾ ಅಡ್ಡಿಯಾಗುವುದು).

ಪ್ರತಿಯೊಂದು ತಂಡ ಒಂದು ಬಾರಿ ಮಾತ್ರ ಬ್ಯಾಟಿಂಗ್ ಮಾಡುತ್ತದೆ ಮತ್ತು ಪ್ರತಿಯೊಂದು ಇನ್ನಿಂಗ್ಸ್‌ನ್ನು ಗೊತ್ತಾದ ಓವರುಗಳ ಸಂಖ್ಯೆಗೆ ಸೀಮಿತಗೊಳಿಸಲಾಗುತ್ತದೆ. ಏಕ ದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಸಾಮಾನ್ಯವಾಗಿ 50 ಓವರುಗಳಿರುತ್ತವೆ ಮತ್ತು ಲಿಸ್ಟ್ Aನಲ್ಲಿ ನಲವತ್ತು ಮತ್ತು ಅರವತ್ತು ಓವರುಗಳ ನಡುವೆ ಇರುತ್ತದೆ. ಲಿಸ್ಟ್ A ಸೀಮಿತ ಓವರುಗಳ(ಏಕ ದಿನ)ಕ್ರಿಕೆಟ್ ರೂಪದ ವರ್ಗೀಕರಣವಾಗಿದ್ದು, ತಾಂತ್ರಿಕವಾಗಿ ಸ್ಥಳೀಯ ಮಟ್ಟದಲ್ಲಿ ಆಡುವ ಕ್ರಿಕೆಟ್. ಏಕ ದಿನ ಕ್ರಿಕೆಟ್ ಪಂದ್ಯವು ಆಕ್ರಮಣಕಾರಿ,ಅಪಾಯಕಾರಿ ಮತ್ತು ಮನರಂಜನೆಯ ಬ್ಯಾಟಿಂಗ್‌ಗೆ ಉತ್ತೇಜಿಸುವುದರಿಂದ ಪ್ರೇಕ್ಷಕರಲ್ಲಿ ಜನಪ್ರಿಯವಾಗಿದೆ ಹಾಗು ಆಗಾಗ್ಗೆ ರೋಚಕ ಮುಕ್ತಾಯಗಳಲ್ಲಿ ಫಲಿತಾಂಶ ನೀಡುತ್ತದೆ. ಪ್ರೇಕ್ಷಕ ಐದು ದಿನಗಳವರೆಗೆ ಸತತವಾಗಿ ಹಾಜರಿಯಾಗದೇ ಇಡೀ ಪಂದ್ಯವನ್ನು ಒಂದೇ ದಿನದಲ್ಲಿ ವೀಕ್ಷಿಸುವುದಕ್ಕೆ ಏಕ ದಿನ ಪಂದ್ಯವು ಖಾತರಿ ನೀಡುತ್ತದೆ. ಆದಾಗ್ಯೂ, ಟೆಸ್ಟ್ ಕ್ರಿಕೆಟ್ ಪಂದ್ಯದ ಅನೇಕ ನಿಷ್ಠರು ತಂಡಗಳ ಸಹಜ ಕೌಶಲಗಳನ್ನು ಹುಸಿಗೊಳಿಸಿದ್ದಾರೆ. ಆಧುನಿಕ ಏಕ ದಿನ ಕ್ರಿಕೆಟ್ ತಂತ್ರಗಳಲ್ಲಿ, ಆರಂಭಿಕ ಮತ್ತು ಕೊನೆಯ ಕೆಲವು ಓವರುಗಳನ್ನು ಹೊರತುಪಡಿಸಿ ಬ್ಯಾಟ್ಸ್‌ಮನ್(ಬ್ಯಾಟಿಂಗ್ ಆಡುವ ಆಟಗಾರ) ಕೆಲವೇ ಕೆಲವು ರಿಸ್ಕ್(ಅಪಾಯಕ್ಕೆ ಒಡ್ಡಿಕೊಂಡು ಆಕ್ರಮಣಕಾರಿ ಆಟವಾಡುವುದು)ತೆಗೆದುಕೊಳ್ಳುವುದರಿಂದ, ಪಂದ್ಯದ ರೋಚಕತೆ ಕುಂಠಿತವಾಗುತ್ತಿದೆ.

ಬೌಲಿಂಗ್ ಮಿತಿಗಳು

[ಬದಲಾಯಿಸಿ]

ಮೇಲೆ ಪ್ರಸ್ತಾಪಿಸಿರುವಂತೆ, ಬಹುಮಟ್ಟಿನ ಎಲ್ಲ ಸ್ಪರ್ಧಾತ್ಮಕ ಏಕ ದಿನ ಪಂದ್ಯಗಳಲ್ಲಿ, ಯಾರೇ ಒಬ್ಬ ಬೌಲರ್ ಬೌಲ್ ಮಾಡಬಹುದಾದ ಓವರುಗಳ ಸಂಖ್ಯೆಯನ್ನು ಮಿತಿಗೊಳಪಡಿಸಲಾಗುತ್ತದೆ. ಒಂದು ತಂಡದಲ್ಲಿ ಇಬ್ಬರು ಉನ್ನತ ದರ್ಜೆಯ ಬೌಲರ್‌ಗಳು ಉತ್ತಮ ದಾರ್ಢ್ಯದೊಂದಿಗೆ ಆಡುತ್ತಿದ್ದರೆ, ಅವರು ಎದುರಾಳಿ ತಂಡದ ಇನ್ನಿಂಗ್ಸ್ ಉದ್ದಕ್ಕೂ ಬೌಲ್ ಮಾಡುವುದನ್ನು ತಪ್ಪಿಸುವುದು ಬೌಲಿಂಗ್ ಮಿತಿ ವಿಧಿಸುವುದಕ್ಕೆ ಕಾರಣವಾಗಿದೆ. ಆದ್ದರಿಂದ ಒಂದು ತಂಡದಲ್ಲಿ ಬೌಲ್ ಮಾಡುವುದಕ್ಕೆ ಕನಿಷ್ಠ ಐದು ಮಂದಿ ಆಟಗಾರರು ಒಳಗೊಂಡಿರಬೇಕು ಎಂದು ಸಾಮಾನ್ಯ ಮಿತಿಯನ್ನು ಗೊತ್ತುಮಾಡಲಾಗಿರುತ್ತದೆ. ಉದಾಹರಣೆಗೆ, ಇಪ್ಪತ್ತು ಓವರುಗಳ ಕ್ರಿಕೆಟ್‌ನಲ್ಲಿ ವಿಧಿಸಲಾಗುವ ಓವರುಗಳ ಸಾಮಾನ್ಯ ಮಿತಿಯು ಪ್ರತಿ ಬೌಲರ್‌ಗೆ ನಾಲ್ಕು ಓವರುಗಳಾಗಿವೆ. 40ಓವರುಗಳ ಕ್ರಿಕೆಟ್ ಪಂದ್ಯದಲ್ಲಿ ಪ್ರತಿ ಬೌಲರ್‌ಗೆ ಎಂಟು ಓವರುಗಳು ಮತ್ತು ಐವತ್ತು ಓವರುಗಳ ಕ್ರಿಕೆಟ್‌ನಲ್ಲಿ ಪ್ರತಿ ಬೌಲರ್‌ಗೆ 10ಓವರುಗಳ ಮಿತಿಯನ್ನು ಇರಿಸಲಾಗುತ್ತದೆ. ಇದರಲ್ಲಿ ಕೆಲವು ಅಪವಾದಗಳಿವೆ: ಅಮೆರಿಕದಲ್ಲಿಪ್ರೊ ಕ್ರಿಕೆಟ್ ಬೌಲರ್‌ಗಳಿಗೆ ತಲಾ ಐದು ಓವರುಗಳ ಮಿತಿ ವಿಧಿಸಲಾಗುತ್ತದೆ. ಹೀಗೆ ಒಂದು ತಂಡದ ಕಡೆ ಕೇವಲ ನಾಲ್ಕು ಬೌಲರುಗಳ ಅಗತ್ಯವಿರುತ್ತದೆ.

ಇತಿಹಾಸ

[ಬದಲಾಯಿಸಿ]

ಏಕ ದಿನದ ಕ್ರಿಕೆಟ್ 1962ರ ಮೇ 2ರಂದು ಇಂಗ್ಲೀಷ್ ಕೌಂಟಿ ತಂಡಗಳ ನಡುವೆ ಆರಂಭವಾಯಿತು. 65 ಓವರುಗಳ "ಮಿಡ್‌ಲ್ಯಾಂಡ್ಸ್ ನಾಕ್-ಔಟ್ ಕಪ್‌"ನಲ್ಲಿ ಲೈಸೆಸ್ಟರ್‌ಶೈರ್ ತಂಡವು ಡರ್ಬಿಶೈರ್ ತಂಡವನ್ನು ಸೋಲಿಸಿತು ಮತ್ತು ನಾರ್ಥಾಂಮ್ಟನ್‌ಶೈರ್ ತಂಡವು ನಾಟಿಂಗ್‌ಹ್ಯಾಂಶೈರ್ ತಂಡವನ್ನು ಸೋಲಿಸಿತು. ಒಂದು ವಾರದ ನಂತರ ನಾರ್ಥಾಂಮ್ಟನ್‌ಶೈರ್ ಪಂದ್ಯಾವಳಿಯನ್ನು ಗೆದ್ದುಕೊಂಡಿತು. ನಂತರದ ವರ್ಷದಲ್ಲಿ, ಪ್ರಥಮ ದರ್ಜೆ ತಂಡಗಳ ನಡುವೆ ಪ್ರಪ್ರಥಮ ಪೂರ್ಣ ಪ್ರಮಾಣದ ಏಕದಿನ ಕ್ರಿಕೆಟ್ ನಾಕ್-ಔಟ್(ಪ್ರತಿ ಸುತ್ತಿನಲ್ಲಿ ಸೋತ ತಂಡ ಪಂದ್ಯದಿಂದ ಹೊರಗೆ)ಸ್ಪರ್ಧೆ ಗಿಲ್ಲೆಟ್ ಕಪ್ ಆಡಲಾಯಿತು. ಇದರಲ್ಲಿ ಸಸೆಕ್ಸ್ ತಂಡ ವಿಜಯಿಯಾಯಿತು. 1969ರಲ್ಲಿ ಜಾನ್ ಪ್ಲೇಯರ್ ಸಂಡೇ ಲೀಗ್ ಶುರುವಾಗುವುದರೊಂದಿಗೆ, ಲೀಗ್ ಮಟ್ಟದಲ್ಲಿ ಏಕ ದಿನ ಕ್ರಿಕೆಟ್ ಪಂದ್ಯಾವಳಿ ಇಂಗ್ಲೆಂಡ್‌ನಲ್ಲಿ ಆರಂಭವಾಯಿತು. ಉದ್ಘಾಟನೆಯಾದಾಗಿನಿಂದ ಪ್ರಾಯೋಜಕತ್ವ ಬದಲಾದರೂ ಎರಡೂ ಸ್ಪರ್ಧೆಗಳು ಪ್ರತೀ ಕ್ರೀಡಾಋತುವಿನಲ್ಲಿ ಮುಂದುವರಿಯಿತು. ನಾಕ್‌ಔಟ್ ಕಪ್ ಈಗ ಫ್ರೆಂಡ್ಸ್ ಪ್ರಾವಿಡೆಂಟ್ ಟ್ರೋಫಿ ಎಂದು ಹೆಸರಾಗಿದೆ. ಲೀಗ್ ಭಾನುವಾರಗಳಂದೂ ಹೊರತಾಗಿಲ್ಲ ಮತ್ತು ಸ್ಪರ್ಧೆಯು 40 ಓವರುಗಳಿಗೆ ನಿಗದಿಯಾಗಿದೆ. ಇದನ್ನು ಈಗ ನ್ಯಾಟ್‌ವೆಸ್ಟ್ ಪ್ರೊ40ಎಂದು ಕರೆಯುತ್ತಾರೆ.

ಪ್ರಥಮ ಸೀಮಿತ ಓವರುಗಳ ಅಂತಾರಾಷ್ಟ್ರೀಯ(LOI) ಅಥವಾ ಏಕ ದಿನ ಅಂತಾರಾಷ್ಟ್ರೀಯ(ODI)ಪಂದ್ಯವನ್ನು 1971ರಲ್ಲಿ ಮೆಲ್ಬೋರ್ನ್‌ನಲ್ಲಿ ಆಡಲಾಯಿತು ಮತ್ತು ಚತುರ್ವಾರ್ಷಿಕ(ನಾಲ್ಕುವರ್ಷಗಳಿಗೊಮ್ಮೆ ನಡೆಯುವ) ವಿಶ್ವಕಪ್ ಕ್ರಿಕೆಟ್ 1975ರಲ್ಲಿ ಆರಂಭವಾಯಿತು. ಬಣ್ಣದ ಉಡುಗೆಗಳು ಮುಂತಾದ ಅನೇಕ ಪ್ಯಾಕೇಜಿಂಗ್ ನಾವೀನ್ಯಗಳು ವಿಶ್ವಕಪ್ ಕ್ರಿಕೆಟ್ ಸರಣಿಯ ಫಲವಾಗಿದೆ. ಆಸ್ಟ್ರೇಲಿಯದ ಉದ್ಯಮಿ ಕೆರ್ರಿ ಪ್ಯಾಕರ್ ಕ್ರಿಕೆಟ್ ಸಂಸ್ಥೆಯ ಹೊರಗೆ ಬಂಡಾಯ ಕ್ರಿಕೆಟ್ ಸರಣಿಯನ್ನು ಹುಟ್ಟು ಹಾಕಿದರು. ಹೆಚ್ಚಿನ ವಿವರಗಳಿಗೆ, ನೋಡಿ ಹಿಸ್ಟರಿ ಆಫ್ ಕ್ರಿಕೆಟ್.

ಟ್ವೆಂಟಿ20ಏಕದಿನ ಪಂದ್ಯದ ಮೊಟಕಾದ ರೂಪವಾಗಿದ್ದು, ಪ್ರತಿ ತಂಡಕ್ಕೆ ಬೌಲ್ ಮಾಡಲು 20ಓವರುಗಳನ್ನು ನೀಡಲಾಗುತ್ತದೆ. ಇದನ್ನು ಪ್ರಥಮ ಬಾರಿಗೆ ಇಂಗ್ಲೆಂಡ್‌ನಲ್ಲಿ ಆಡಲಾಯಿತು. ಇದು ಅತ್ಯಂತ ಜನಪ್ರಿಯತೆ ಗಳಿಸಿತು ಮತ್ತು ರಾಷ್ಟ್ರೀಯ ತಂಡಗಳ ನಡುವೆ ಅನೇಕ ಟ್ವೆಂಟಿ20 ಪಂದ್ಯಗಳನ್ನು ಆಡಿಸಲಾಯಿತು. ಇದು ಸಾಮಾನ್ಯ ಕ್ರಿಕೆಟ್‌ ನಿಯಮಗಳಿಗೆ ಅನೇಕ ಬದಲಾಣೆಗಳನ್ನು ಉಂಟುಮಾಡಿತು. ಅದರಲ್ಲಿ ಪಂದ್ಯ ಸಮಗೊಂಡರೆ ಫಲಿತಾಂಶ ನಿರ್ಧರಿಸಲು ಬೌಲ್ ಔಟ್ (ಇದು ಫುಟ್ಬಾಲ್‌ನಲ್ಲಿ ಪೆನಾಲ್ಟಿ ಶೂಟ್‌ಔಟ್‌ಗೆ ಸಮನಾಗಿದೆ)ಸೇರ್ಪಡೆ ಸಹ ಒಳಗೊಂಡಿದೆ. ಇದನ್ನು ತರುವಾಯ ಸೂಪರ್ ಓವರ್ ಪರವಾಗಿ ಸಿದ್ಧಪಡಿಸಲಾಯಿತು.

ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳು

[ಬದಲಾಯಿಸಿ]

ಏಕ ದಿನ ಅಂತಾರಾಷ್ಟ್ರೀಯ ಪಂದ್ಯಗಳನ್ನು ಸಾಮಾನ್ಯವಾಗಿ ಗಾಢ ಬಣ್ಣದ ಉಡುಗೆಗಳನ್ನು ಧರಿಸಿ ಆಡಲಾಗುತ್ತದೆ. ಹಗಲು-ರಾತ್ರಿ ಪಂದ್ಯದ ಶೈಲಿಯಲ್ಲಿ ಸಾಮಾನ್ಯವಾಗಿ ಇರುವ ಇದು ದಿನದ ಪ್ರಥಮ ಇನ್ನಿಂಗ್ಸ್ ಮಧ್ಯಾಹ್ನ ನಡೆದರೆ, ಎರಡನೇ ಇನ್ನಿಂಗ್ಸ್ ಕ್ರೀಡಾಂಗಣದ ಹೊನಲು ಬೆಳಕಿನಲ್ಲಿ ನಡೆಯುತ್ತದೆ.

ಏಕ ದಿನ ಅಂತಾರಾಷ್ಟ್ರೀಯ ಪಂದ್ಯಾವಳಿಗಳು

[ಬದಲಾಯಿಸಿ]

ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಎಲ್ಲ ಟೆಸ್ಟ್ ಆಡುವ ರಾಷ್ಟ್ರಗಳು ಮತ್ತು ಐಸಿಸಿ ವಿಶ್ವ ಕಪ್ ಕ್ವಾಲಿಫೈಯರ್‌(ಅರ್ಹತಾ ಸುತ್ತು) ಮೂಲಕ ಅರ್ಹತೆ ಪಡೆಯುವ ಇತರೆ ರಾಷ್ಟ್ರ ತಂಡಗಳು ಕ್ರಿಕೆಟ್ ವಿಶ್ವ ಕಪ್‌ನಲ್ಲಿ ಒಳಗೊಂಡಿರುತ್ತದೆ. ಇದು ಸಾಮಾನ್ಯವಾಗಿ ರೌಂಡ್-ರಾಬಿನ್ ಹಂತಗಳು(ಪ್ರತಿಯೊಂದು ತಂಡ ಇನ್ನುಳಿದ ಎಲ್ಲ ತಂಡಗಳ ವಿರುದ್ಧ ಆಡುವ ಹಂತ) ಹೊಂದಿರುತ್ತದೆ. ಅದನ್ನು ಅನುಸರಿಸಿ ಸೆಮಿ ಫೈನಲ್‌ ಪಂದ್ಯಗಳು ಮತ್ತು ಫೈನಲ್ ಪಂದ್ಯ ನಡೆಯುತ್ತದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಬಹಳ ಮುಂಚಿತವಾಗಿಯೇ ಆಟವಾಡುವ ಸ್ಥಳವನ್ನು ನಿರ್ಧರಿಸುತ್ತದೆ.

1971-2000ದ ಅವಧಿಯಲ್ಲಿ ನಡೆದ ಸೀಮಿತ ಓವರುಗಳ ಪಂದ್ಯಾವಳಿಯಲ್ಲಿ ಜಾವೇದ್ ಮಿಯಂದಾದ್, ವಿವಿಯನ್ ರಿಚರ್ಡ್ಸ್, ಡೀನ್ ಜೋನ್ಸ್, ವಾಸಿಂ ಅಕ್ರಂ, ಕಪಿಲ್ ದೇವ್, ಇಮ್ರಾನ್ ಖಾನ್, ಸಚಿನ್ ತೆಂಡೂಲ್ಕರ್ ಮತ್ತು ಬ್ರಿಯಾನ್ ಲಾರಾ ಮುಂತಾದ ಆಟಗಾರರು ಅಪ್ರತಿಮ ಆಟದಿಂದ ಹೀರೊಗಳೆನಿಸಿದ್ದಾರೆ.

ಐಸಿಸಿ ಚಾಂಪಿಯನ್ಸ್ ಟ್ರೋಫಿ ಎಲ್ಲ ಟೆಸ್ಟ್ ಆಡುವ ರಾಷ್ಟ್ರಗಳನ್ನು ಒಳಗೊಂಡಿದ್ದು, ವಿಶ್ವ ಕಪ್ ಪಂದ್ಯಾವಳಿಗಳ ನಡುವೆ ನಡೆಯುತ್ತದೆ. ಇದು ಸಾಮಾನ್ಯವಾಗಿ ರೌಂಡ್-ರಾಬಿನ್ ಗ್ರೂಪ್ ಹಂತ, ಸೆಮಿಫೈನಲ್ಸ್ ಮತ್ತು ಫೈನಲ್ಸ್ ಹಂತಗಳನ್ನು ಒಳಗೊಂಡಿರುತ್ತದೆ.

ಪ್ರತಿ ಟೆಸ್ಟ್ ಆಡುವ ರಾಷ್ಟ್ರವು ತ್ರಿಕೋನ ಸರಣಿ ಪಂದ್ಯಾವಳಿಯನ್ನು ಆಗಾಗ್ಗೆ ಆಯೋಜಿಸುತ್ತದೆ. ಆತಿಥೇಯ ರಾಷ್ಟ್ರ ಮತ್ತು ಎರಡು ಪ್ರವಾಸಿ ತಂಡಗಳ ನಡುವೆ ಇದು ನಡೆಯುತ್ತದೆ. ಅಲ್ಲಿ ಸಾಮಾನ್ಯವಾಗಿ ರೌಂಡ್-ರಾಬಿನ್ ಗ್ರೂಪ್ ಹಂತವಿರುತ್ತದೆ. ನಂತರ ಮುನ್ನಡೆ ಗಳಿಸಿದ ಎರಡು ತಂಡಗಳು ಫೈನಲ್‌ನಲ್ಲಿ ಪರಸ್ಪರ ಎದುರಿಸುತ್ತವೆ ಅಥವಾ ಬೆಸ್ಟ್-ಆಫ್-ತ್ರೀ(ಮೂರು ಪಂದ್ಯಗಳಿಂದ ಶ್ರೇಷ್ಟ ತಂಡದ ಆಯ್ಕೆ)ಫೈನಲ್ ಪಂದ್ಯಗಳಿರುತ್ತವೆ. ಕೇವಲ ಒಂದು ಪ್ರವಾಸಿ ತಂಡವಿದ್ದಾಗ, ಆಗಲೂ ಕೂಡ ಸಾಮಾನ್ಯವಾಗಿ ಸೀಮಿತ ಓವರುಗಳ ಪಂದ್ಯಗಳ ಬೆಸ್ಟ್- ಆಫ್-ಫೈ(ಐದು ಪಂದ್ಯಗಳ ಸರಣಿ) ಅಥವಾ ಬೆಸ್ಟ್-ಆಫ್ ಸೆವೆನ್ ಸೀರೀಸ್(ಏಳು ಪಂದ್ಯಗಳ ಸರಣಿ)ಇರುತ್ತದೆ.

ದೇಶೀಯ ಏಕ ದಿನ ಸ್ಪರ್ಧೆಗಳು

[ಬದಲಾಯಿಸಿ]

ದೇಶೀಯ ಏಕ ದಿನ ಸ್ಪರ್ಧೆಗಳು ಕ್ರಿಕೆಟ್ ಆಡುವ ಪ್ರತಿಯೊಂದು ರಾಷ್ಟ್ರದಲ್ಲೂ ಅಸ್ತಿತ್ವದಲ್ಲಿದೆ.

ಲಿಸ್ಟ್ A ಸ್ಥಾನಮಾನ

[ಬದಲಾಯಿಸಿ]

ಲಿಸ್ಟ್ Aಕ್ರಿಕೆಟ್ ಪಂದ್ಯವು ಕ್ರಿಕೆಟ್ ಕ್ರೀಡಾಸ್ಪರ್ಧೆಯಲ್ಲಿ ಸೀಮಿತ ಓವರುಗಳ(ಏಕ ದಿನ) ಶೈಲಿಯ ವರ್ಗೀಕರಣವಾಗಿದೆ. ದೇಶೀಯ ಪ್ರಥಮ ದರ್ಜೆ ಕ್ರಿಕೆಟ್ ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯದ ಕ್ರಿಕೆಟ್‌ಗಿಂತ ಕೆಳಗಿನ ಸ್ಥಾನದ ಆಟವಾಗಿರುವ ರೀತಿಯಲ್ಲೇ, ಲಿಸ್ಟ್ A ಕ್ರಿಕೆಟ್ ಏಕ ದಿನ ಕ್ರಿಕೆಟ್‌ನ ದೇಶೀಯ ಮಟ್ಟವಾಗಿದ್ದು, ಏಕ ದಿನ ಅಂತಾರಾಷ್ಟ್ರೀಯ ಪಂದ್ಯಾವಳಿಗಿಂತ ಕೆಳಗಿನ ಸ್ಥಾನದಲ್ಲಿರುತ್ತದೆ. ಟ್ವೆಂಟಿ20 ಪಂದ್ಯಗಳು ಪ್ರಸಕ್ತ ಆಟಕ್ಕೆ ಅರ್ಹತೆ ಪಡೆಯುವುದಿಲ್ಲ.

ಬಹುಮಟ್ಟಿನ ಕ್ರಿಕೆಟ್ ರಾಷ್ಟ್ರಗಳು ಒಂದು ಶೈಲಿಯ ದೇಶೀಯ ಲಿಸ್ಟ್ A ಸ್ಪರ್ಧೆಯನ್ನು ಹೊಂದಿರುತ್ತದೆ. ಲಿಸ್ಟ್ Aಕ್ರಿಕೆಟ್‌ನಲ್ಲಿ ಓವರುಗಳ ಸಂಖ್ಯೆಯು ಪ್ರತಿ ತಂಡಕ್ಕೆ ನಲ್ವತ್ತು ಓವರುಗಳಿಂದ ಹಿಡಿದು ಅರವತ್ತು ಓವರುಗಳ ತನಕ ಇರುತ್ತದೆ.

ಕ್ರಿಕೆಟ್ ಸಂಖ್ಯಾಶಾಸ್ತ್ರಜ್ಞರು ಮತ್ತು ಇತಿಹಾಸಜ್ಞರ ಸಂಸ್ಥೆಯು ಪ್ರಥಮ -ದರ್ಜೆ ಕ್ರಿಕೆಟ್‌ಗೆ ಸಮಾನ ರೂಪದ ಆಟವನ್ನು ಒದಗಿಸುವ ಉದ್ದೇಶದಿಂದ ಈ ವಿಭಾಗವನ್ನು ಸೃಷ್ಟಿಸಿತು. ಹೋಲಿಕೆ ಮಾಡಬಹುದಾದ ಏಕ ದಿನ ಪಂದ್ಯಗಳಲ್ಲಿ ವೃತ್ತಿಜೀವನದ ದಾಖಲೆಗಳು ಮತ್ತು ಅಂಕಿಅಂಶಗಳ ತಲೆಮಾರಿಗೆ ಅವಕಾಶ ನೀಡುವುದಕ್ಕಾಗಿ ಈ ವಿಭಾಗವನ್ನು ರೂಪಿಸಿತು. ಪ್ರತಿಯೊಂದು ರಾಷ್ಟ್ರದಲ್ಲಿ ಹೆಚ್ಚು ಪ್ರಮುಖವಾದ ಏಕ ದಿನ ಸ್ಪರ್ಧೆಗಳು ಜತೆಗೆ ಪ್ರವಾಸಿ ಟೆಸ್ಟ್ ತಂಡದ ವಿರುದ್ಧ ಪಂದ್ಯಗಳನ್ನು ಇದರಲ್ಲಿ ಸೇರಿಸಲಾಯಿತು. "ಲಿಸ್ಟ್ A" ಎಂದು ಕ್ರಿಕೆಟ್ ಪಂದ್ಯಗಳ ವರ್ಗೀಕರಣಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ 2006ವರೆಗೆ ಅಧಿಕೃತ ಅನುಮೋದನೆ ನೀಡಿರಲಿಲ್ಲ. 2006ರಂದು ಐಸಿಸಿ ಮತ್ತು ಅದರ ಸದಸ್ಯ ಸಂಸ್ಥೆಗಳು ಈ ವರ್ಗೀಕರಣವನ್ನು ಪ್ರಥಮ ದರ್ಜೆ ಪಂದ್ಯಗಳಿಗೆ ಮಾಡಿದ ರೀತಿಯಲ್ಲೇ ನಿರ್ಧರಿಸುತ್ತದೆಂದು ಐಸಿಸಿ ಪ್ರಕಟಿಸಿತು.[]

  • ಲಿಸ್ಟ್ Aನಲ್ಲಿ ಅರ್ಹತೆ ಪಡೆದಿರುವ ಪಂದ್ಯಗಳು :
    • ಏಕ ದಿನ ಅಂತಾರಾಷ್ಟ್ರೀಯಗಳು (ODIs)
    • ಇತರೆ ಅಂತಾರಾಷ್ಟ್ರೀಯ ಪಂದ್ಯಗಳು
    • ಪ್ರತಿಯೊಂದು ರಾಷ್ಟ್ರದಲ್ಲಿ ಪ್ರಧಾನ ಏಕ ದಿನ ಪಂದ್ಯಾವಳಿಗಳು
    • ಮುಖ್ಯ ಪ್ರಥಮ ದರ್ಜೆ ತಂಡಗಳ ವಿರುದ್ಧ ಪ್ರವಾಸಿ ಟೆಸ್ಟ್ ತಂಡದ ಅಧಿಕೃತ ಪಂದ್ಯಗಳು
  • ಲಿಸ್ಟ್ Aನಲ್ಲಿ ಅರ್ಹತೆ ಪಡೆಯದ ಪಂದ್ಯಗಳು:
    • ವಿಶ್ವ ಕಪ್ ಅಭ್ಯಾಸ ಪಂದ್ಯಗಳು
    • ಇತರೆ ಪ್ರವಾಸಿ ಪಂದ್ಯಗಳು (ಉದಾಹರಣೆಗೆ, ಮುಖ್ಯ ದೇಶೀಯ ಪ್ರಥಮ ದರ್ಜೆ ಸ್ಪರ್ಧೆಯ ಭಾಗವಾಗಿರದ ಪ್ರಥಮ ದರ್ಜೆ ತಂಡಗಳ ವಿರುದ್ಧ, ಉದಾಹರಣೆಗೆ ವಿಶ್ವವಿದ್ಯಾನಿಲಯಗಳು)
    • ಉತ್ಸವ ಮತ್ತು ಸೌಹಾರ್ದ ಪಂದ್ಯಗಳು

ಆಸ್ಟ್ರೇಲಿಯಾ

[ಬದಲಾಯಿಸಿ]
ಆಸ್ಟ್ರೇಲಿಯದ ಕ್ವೀನ್ಸ್‌ಲ್ಯಾಂಡ್‌ನ ಬ್ರಿಸ್ಬೇನ್ ಕ್ರಿಕೆಟ್ ಮೈದಾನದಲ್ಲಿನ(ದಿ ಗಬ್ಬಾ)ಏಕದಿನ ಪಂದ್ಯದಲ್ಲಿ ಕ್ವೀನ್ಸ್‌ಲ್ಯಾಂಡ್ ಬುಲ್ಸ್ ವಿರುದ್ಧ ವಿಕ್ಟೋರಿಯನ್ ಬುಷ್‌ರಾಂಗರ್ಸ್‌ನ ಏಕದಿನ ಪಂದ್ಯ.

ರೊಯೊಬಿ ಒನ್ ಡೇ ಕಪ್ . ಇದರಲ್ಲಿ ಸ್ಪರ್ಧಿಸುವ ತಂಡಗಳು ಕೆಳಕಂಡಂತಿವೆ:

  • ನ್ಯೂ ಸೌತ್ ವೇಲ್ಸ್ ಬ್ಲೂಸ್, ನ್ಯೂ ಸೌತ್ ವೇಲ್ಸ್ ಪ್ರತಿನಿಧಿಸುತ್ತದೆ.
  • ವಿಕ್ಟೋರಿಯನ್ ಬುಷ್‌ರೇಂಜರ್ಸ್, ವಿಕ್ಟೋರಿಯವನ್ನು ಪ್ರತಿನಿಧಿಸುತ್ತದೆ.
  • ಸದರನ್ ರೆಡ್‌ಬ್ಯಾಕ್ಸ್, ದಕ್ಷಿಣ ಆಸ್ಟ್ರೇಲಿಯವನ್ನು ಪ್ರತಿನಿಧಿಸುತ್ತದೆ.
  • ಟಾಸ್ಮಾನಿಯನ್ ಟೈಗರ್ಸ್,ಟಾಸ್ಮಾನಿಯವನ್ನು ಪ್ರತಿನಿಧಿಸುತ್ತದೆ.
  • ಕ್ವೀನ್ಸ್‌ಲ್ಯಾಂಡ್ ಬುಲ್ಸ್, ಕ್ವೀನ್ಸ್‌ಲ್ಯಾಂಡ್ ಪ್ರತಿನಿಧಿಸುತ್ತದೆ.
  • ವೆಸ್ಟರ್ನ್ ವಾರಿಯರ್ಸ್,ಪಶ್ಚಿಮ ಆಸ್ಟ್ರೇಲಿಯ ಪ್ರತಿನಿಧಿಸುತ್ತದೆ.

2006ರಲ್ಲಿ ಕ್ರಿಕೆಟ್ ಆಸ್ಟ್ರೇಲಿಯ KFC ಟ್ವೆಂಟಿ20 ಬಿಗ್ ಬ್ಯಾಷ್ ಆರಂಭಿಸಿತು. ಇದು ರಾಜ್ಯ ತಂಡಗಳ ನಡುವೆ ನಡೆಯುವ ಸ್ಪರ್ಧೆಯಾಗಿದ್ದು, (ಮೇಲಿನ ರೀತಿಯಲ್ಲಿ) ಪೂಲ್ A (ಪಶ್ಚಿಮ ಆಸ್ಟ್ರೇಲಿಯ, ದಕ್ಷಿಣ ಆಸ್ಟ್ರೇಲಿಯ ಮತ್ತು ವಿಕ್ಟೋರಿಯ) ಮತ್ತು ಪೂಲ್ B (ತಾಸ್ಮಾನಿಯ, ಕ್ವೀನ್ಸ್‌ಲ್ಯಾಂಡ್ ಮತ್ತು ನ್ಯೂ ಸೌತ್ ವೇಲ್ಸ್) ಮತ್ತು ಹೋಮ್ ಎಂಡ್ ಎವೇ (ಒಂದು ಸ್ಥಳೀಯ ಪಂದ್ಯ, ಹೊರಗೆ ಇನ್ನೊಂದು ಪಂದ್ಯ) ಶೈಲಿಯಲ್ಲಿ ಆಡಲಾಯಿತು. ಪ್ರತಿಯೊಂದು ತಂಡವು ಒಂದು ಪಂದ್ಯವನ್ನು ಸ್ವಸ್ಥಳ(ಸ್ಥಳೀಯ ಮೈದಾನ)ದಲ್ಲಿ ಆಡಿದರೆ ಇನ್ನೊಂದು ಪಂದ್ಯವನ್ನು ಸ್ವಸ್ಥಳದಿಂದ ಹೊರಗೆ ಆಡುತ್ತಿತ್ತು. ಪ್ರತಿಯೊಂದು ಪೂಲ್‌ನ ವಿಜೇತ ಚಾಂಪಿಯನ್ ಸ್ಥಾನ ನಿರ್ಧರಿಸಲು ಪರಸ್ಪರರ ವಿರುದ್ದ ಆಡುತ್ತಾರೆ.

ಬಾಂಗ್ಲಾದೇಶ

[ಬದಲಾಯಿಸಿ]

ರಾಷ್ಟ್ರೀಯ ಏಕದಿನ ಕ್ರಿಕೆಟ್ ಲೀಗ್‌ ನ್ನು ಇಸ್ಪಾಹಾನಿ ಮಿರ್ಜಾಪೊರ್ ಟೀ ಪ್ರಾಯೋಜಿಸುತ್ತದೆ. ಇದು ಪ್ರಸಕ್ತ ನವೆಂಬರ್‌ನಿಂದ ಮಾರ್ಚ್‌ವರೆಗೆ ನಡೆಯುತ್ತದೆ. ಪ್ರತಿಯೊಂದು ತಂಡವು ಇನ್ನೊಂದು ತಂಡದ ಜತೆ ಸ್ಥಳೀಯ ಮೈದಾನದಲ್ಲಿ ಮತ್ತು ದೂರದ ಸ್ಥಳದಲ್ಲಿ ರೌಂಡ್ ರಾಬಿನ್ ಶೈಲಿಯಲ್ಲಿ ಆಡುತ್ತದೆ. ಈ ಆರು ತಂಡಗಳು ಲೀಗ್ ಪ್ರಶಸ್ತಿಗಾಗಿ ಸ್ಪರ್ಧಿಸುತ್ತವೆ:

  • ಬಾರಿಸಲ್ ವಿಭಾಗ
  • ಚಿತ್ತಗಾಂಗ್ ವಿಭಾಗ
  • ಢಾಕಾ ವಿಭಾಗ
  • ಕುಲ್ನಾ ವಿಭಾಗ
  • ರಾಜ್‌ಶಾಹಿ ವಿಭಾಗ
  • ಸೈಲ್ಹೆಟ್ ವಿಭಾಗ

ಇಂಗ್ಲೆಂಡ್

[ಬದಲಾಯಿಸಿ]
  • 2008ರಲ್ಲಿ ಫ್ರೆಂಡ್ಸ್ ಪ್ರಾವಿಡೆಂಟ್ ಟ್ರೋಫಿ ಯ ಹೊಸ ಶೈಲಿಯನ್ನು ಸ್ಪರ್ಧೆಗಾಗಿ ಜಾರಿಗೆ ತರಲಾಯಿತು. 18 ಪ್ರಥಮ ದರ್ಜೆ ಕೌಂಟಿಗಳು ಜತೆಗೆ ಸ್ಕಾಟ್‌ಲ್ಯಾಂಡ್ ಮತ್ತು ಐರ್ಲೆಂಡ್‌ 5 ತಂಡಗಳ ನಾಲ್ಕು ಗುಂಪುಗಳಾಗಿ ವಿಭಜನೆಯಾಯಿತು. ಪ್ರತಿಯೊಂದು ತಂಡವು ಗುಂಪಿನ ಇನ್ನೊಂದು ತಂಡದ ವಿರುದ್ಧ ಸ್ಥಳೀಯ ಮೈದಾನದಲ್ಲಿ ಒಂದು ಬಾರಿ ಮತ್ತು ದೂರದಲ್ಲಿ ಒಂದು ಬಾರಿ ಆಡುತ್ತದೆ. ಗುಂಪಿನ ಅಗ್ರ ಕೌಂಟಿಗಳು ಕ್ವಾರ್ಟರ್ ಫೈನಲ್ ತಲುಪುತ್ತದೆ. ಮುಂಚೆ(2006-2007 )ಸ್ಪರ್ಧೆಯು 10 ತಂಡಗಳ ಎರಡು ವಿಭಾಗಗಳನ್ನು ಹೊಂದಿರುವ ಪ್ರಥಮ ಸುತ್ತನ್ನು ಹೊಂದಿತ್ತು-ಉತ್ತರದಲ್ಲಿ 9 ಕೌಂಟಿಗಳು ಜತೆಗೆ ಸ್ಕಾಟ್‌ಲ್ಯಾಂಡ್ ಮತ್ತು ದಕ್ಷಿಣದಲ್ಲಿ 9 ಕೌಂಟಿಗಳು ಜತೆಗೆ ಐರ್ಲೆಂಡ್. ಪ್ರತಿಯೊಂದು ವಿಭಾಗದ ಅಗ್ರ 2 ತಂಡಗಳು ಸೆಮಿಫೈನಲ್ ತಲುಪುತ್ತವೆ. ಇದಕ್ಕೆ ಮುಂಚಿತವಾಗಿ, 1963ರಲ್ಲಿ ಆರಂಭವಾದಾಗಿನಿಂದ ಪಂದ್ಯಾವಳಿಯು ನೇರ ನಾಕ್‌ಔಟ್ ಸ್ಪರ್ಧೆಯಾಗಿ ಅಸ್ತಿತ್ವದಲ್ಲಿತ್ತು. ಪಂದ್ಯಾವಳಿಯ ಈ ಶೈಲಿಯನ್ನು ಬಿಳಿಯ ಉಡುಪಿನಲ್ಲಿ ಆಡಲಾಗಿದ್ದು, ಪೂರ್ವದ ಹಂತಗಳಲ್ಲಿ ಚಿಕ್ಕ ಕೌಂಟಿಗಳನ್ನು ಸೇರಿಸಿಕೊಳ್ಳಲಾಗಿತ್ತು. ಫ್ರೆಂಡ್ಸ್ ಪ್ರಾವಿಡೆಂಟ್ ಟ್ರೋಫಿ ಪಂದ್ಯಗಳಿಗೆ ಲಿಸ್ಟ್ Aಸ್ಥಾನಮಾನವಿದೆ.
  • ನ್ಯಾಟ್ ವೆಸ್ಟ್ ಪ್ರೊ 40 -ಎರಡು ವಿಭಾಗಗಳಲ್ಲಿ ವಾರ್ಷಿಕವಾಗಿ ಆಡಲಾಗುತ್ತದೆ. ಇದು 18ಪ್ರಥಮ ದರ್ಜೆ ಕೌಂಟಿಗಳನ್ನು ಮತ್ತು ಸ್ಕಾಟ್‌ಲ್ಯಾಂಡ್ ಪ್ರತಿನಿಧಿಸುವ ತಂಡವನ್ನು ಹೊಂದಿದೆ. ಪ್ರಥಮ ವಿಭಾಗವು 9 ತಂಡಗಳನ್ನು ಹೊಂದಿದೆ ಮತ್ತು ಎರಡನೇ ವಿಭಾಗವು 10 ತಂಡಗಳನ್ನು ಹೊಂದಿದೆ. ಪ್ರತಿಯೊಂದು ವಿಭಾಗವನ್ನು ಎರಡು ರೌಂಡ್-ರಾಬಿನ್ ರೀತಿಯಲ್ಲಿ(ಸ್ಥಳೀಯ ಮೈದಾನ ಮತ್ತು ದೂರದಲ್ಲಿ)ಆಡಲಾಗುತ್ತದೆ. ಪ್ರಥಮ ವಿಭಾಗದ 3 ಕೆಳ ಶ್ರೇಯಾಂಕದ ತಂಡಗಳನ್ನು ಎರಡನೇ ಕೆಳ ವಿಭಾಗಕ್ಕೆ ವರ್ಗಾಯಿಸಲಾಗುತ್ತದೆ. ಎರಡನೇ ವಿಭಾಗದ ಅಗ್ರ 3 ತಂಡಗಳು ಅವುಗಳಿಗೆ ಬದಲಿಯಾಗಿ ಬರುತ್ತವೆ. ಆಟಗಳನ್ನು ODI ನಿಯಮಗಳ ಪ್ರಕಾರ 45 ಓವರುಗಳಿಗೆ ಆಡಲಾಗುತ್ತದೆ. ಗೆಲುವಿಗೆ 4 ಪಾಯಿಂಟ್‌ಗಳನ್ನು ನೀಡಲಾಗುತ್ತದೆ, ಟೈ(ಡ್ರಾ ಪಂದ್ಯ)ಗೆ ಅಥವಾ ಯಾವುದೇ ಫಲಿತಾಂಶ ಬರದಿದ್ದರೆ 2 ಮತ್ತು ಸೋಲಿಗೆ ೦ ಪಾಯಿಂಟ್ ನೀಡಲಾಗುತ್ತದೆ. ಬಹುಮಟ್ಟಿನ ಪಂದ್ಯಗಳನ್ನು ಹಗಲಿನ ಪಂದ್ಯಗಳಾಗಿ ಆಡಲಾಗುತ್ತದೆ. ಆದರೂ ಅನೇಕ ಹಗಲು-ರಾತ್ರಿ ಪಂದ್ಯಗಳನ್ನು ಆಡಿಸಲಾಗುತ್ತದೆ. ಲೀಗ್‌ನ್ನು 2006ರಲ್ಲಿ ಪ್ರೊ 40ಲೀಗ್‌ಗೆ ಬದಲಾಯಿಸಲಾಯಿತು. ಪಂದ್ಯಗಳನ್ನು ಪ್ರತಿ ತಂಡಕ್ಕೆ 40ಓವರುಗಳ ಒಂದು ಇನ್ನಿಂಗ್ಸ್‌ಗೆ ಇಳಿಸಲಾಯಿತು. ಪ್ರತಿಯೊಂದು ವಿಭಾಗವು 9 ತಂಡಗಳನ್ನು ಹೊಂದಿತ್ತು(ಸ್ಕಾಟಿಷ್ ಸಾಲ್ಟೈರ್ಸ್ ಭಾಗವಹಿಸಲಿಲ್ಲ) ಪ್ರೊ 40 ಪಂದ್ಯಗಳು ಲಿಸ್ಟ್ A ಸ್ಥಾನಮಾನವನ್ನು ಹೊಂದಿತ್ತು.
  • ಟ್ವೆಂಟಿ20 ಕಪ್ - 2003ರಲ್ಲಿ ಆರಂಭಿಸಲಾಯಿತು ಮತ್ತು ಮೂರು ಸಮಾನ ಪ್ರಾದೇಶಿಕ ವಿಭಾಗಗಳಲ್ಲಿ ವಾರ್ಷಿಕವಾಗಿ ಆಡಲಾಗುತ್ತದೆ. ಪ್ರತಿಯೊಂದು ವಿಭಾಗವನ್ನು ಏಕ ರೌಂಡ್-ರಾಬಿನ್ ಶೈಲಿಯಲ್ಲಿ ಆಡಲಾಗುತ್ತದೆ. (ಪ್ರತಿಯೊಂದು ತಂಡವು ನಾಕ್‌ಔಟ್ ಹಂತಕ್ಕೆ ಮುಂಚೆ 5 ಪಂದ್ಯಗಳನ್ನು ಆಡುತ್ತದೆ).ಗೆಲುವಿಗೆ 2 ಪಾಯಿಂಟ್‌ಗಳನ್ನು ನೀಡಲಾಗುತ್ತದೆ, ಡ್ರಾಗೆ ಅಥವಾ ಯಾವುದೇ ಫಲಿತಾಂಶ ಬಾರದಿದ್ದರೆ ಒಂದು ಪಾಯಿಂಟ್ ಮತ್ತು ಸೋಲಿಗೆ 0 ಪಾಯಿಂಟ್ ನೀಡಲಾಗುತ್ತದೆ. ಆದರೆ ಸಾಮಾನ್ಯ ODIನಿಯಮಗಳನ್ನು ಬಳಸಿಕೊಂಡು 20 ಓವರುಗಳಿಗೆ ಆಡಲಾಯಿತು. ಮುಂಚಿನ ಆಟಗಾರ ಔಟಾದ ನಂತರದ 90 ಸೆಕೆಂಡುಗಳಲ್ಲಿ ಚೆಂಡನ್ನು ಎದುರಿಸಲು ಸಜ್ಜಾಗದಿದ್ದರೆ ಆಟಗಾರರು ಟೈಮ್ಡ್ ಔಟ್(ಔಟ್ ಎಂದು ನಿರ್ಧರಿಸುವುದು) ಆಗುತ್ತಾರೆ ಎನ್ನುವುದು ಏಕೈಕ ತಿದ್ದುಪಡಿಯಾಗಿತ್ತು. 2003ರಲ್ಲಿ, ಪ್ರತಿ ವಿಭಾಗದ ಅಗ್ರ ತಂಡದ ಜತೆಗೆ ಅತ್ಯುತ್ತಮ ಸರಾಸರಿಯ ರನ್ನರ್‌-ಅಪ್ ನಾಕ್‌ಔಟ್ ಹಂತಕ್ಕೆ ಅರ್ಹತೆ ಪಡೆಯುತ್ತಾರೆ.(ಸೆಮಿ ಫೈನಲ್ ಮತ್ತು ಫೈನಲ್). 2004ರಲ್ಲಿ, ಪ್ರತಿ ವಿಭಾಗದ ಎರಡು ಅಗ್ರ ತಂಡಗಳು ಜತೆಗೆ ಎರಡು ಅತ್ಯುತ್ತಮ ಸರಾಸರಿಯ ಮೂರನೇ ಸ್ಥಾನದ ತಂಡಗಳು ನಾಕ್‌ಔಟ್ ಹಂತಕ್ಕೆ ಅರ್ಹತೆ ಪಡೆಯುತ್ತವೆ(ಕ್ವಾರ್ಟರ್ ಫೈನಲ್, ಸೆಮಿ ಫೈನಲ್ ಮತ್ತು ಫೈನಲ್). 20 ಓವರುಗಳ ತಂಡದ ಶೈಲಿಯು ಸಾರ್ವಜನಿಕರಲ್ಲಿ ಅತ್ಯಂತ ಜನಪ್ರಿಯವಾಯಿತು. ಅನೇಕ ಪಂದ್ಯಗಳಲ್ಲಿ ಸಂಪೂರ್ಣ ಟಿಕೆಟ್‌ಗಳು ಮಾರಾಟವಾದವು. ಫೈನಲ್ ಅಲ್ಲದ ಯಾವುದೇ ಇಂಗ್ಲೀಷ್ ಕೌಂಟಿ ಪಂದ್ಯಕ್ಕೆ ಇದು ಅಸಾಮಾನ್ಯ ಸಂಗತಿಯಾಗಿತ್ತು.
  • ರಣಜಿ ಟ್ರೋಫಿ ಏಕದಿನಗಳು - ಐದು ವಲಯಗಳ ತಂಡಗಳು ಪರಸ್ಪರ ಆಡುತ್ತಿದ್ದು, ವಲಯದ ವಿಜೇತರು ರೌಂಡ್-ರಾಬಿನ್ ಶೈಲಿಯಲ್ಲಿ ಆಡುತ್ತಾರೆ.
  • ದಿಯೋಧರ್ ಟ್ರೋಫಿ -ಐದು ವಲಯಗಳ ನಡುವೆ ಆಡಲಾಗುತ್ತದೆ: ಪೂರ್ವ ವಲಯ, ಪಶ್ಚಿಮ ವಲಯ, ಉತ್ತರ ವಲಯ, ದಕ್ಷಿಣ ವಲಯ ಮತ್ತುಕೇಂದ್ರ ವಲಯ
  • NKP ಸಾಳ್ವೆ ಚಾಲೆಂಜರ್ ಟ್ರೋಫಿ - ಮೂರು ತಂಡಗಳು ಒಳಗೊಂಡಿವೆ - ಪ್ರತಿಯೊಂದು ತಂಡವು ದೇಶಾದ್ಯಂತ ಆರಿಸಿಕೊಂಡ ವೈವಿಧ್ಯದ ಆಟಗಾರರನ್ನು ಒಳಗೊಂಡಿದೆ. ಮೂರು ತಂಡಗಳನ್ನು ಇಂಡಿಯ ಸೀನಿಯರ್ಸ್, ಇಂಡಿಯ A ಮತ್ತು ಇಂಡಿಯ Bಅಥವಾ ಇಂಡಿಯ ರೆಡ್ಸ್, ಇಂಡಿಯ ಗ್ರೀನ್ಸ್ ಮತ್ತು ಇಂಡಿಯ ಬ್ಲೂಸ್.
  • ಇಂಡಿಯ ಕ್ರಿಕೆಟ್ ಲೀಗ್ - ಟ್ವೆಂಟಿ20 ಲೀಗ್‌ಗೆ ಶತಕೋಟ್ಯಾಧೀಶ್ವರ ಸುಭಾಶ್ ಚಂದ್ರಧನ ಸಹಾಯ ಮಾಡಿದರು ಮತ್ತು ರಾಷ್ಟ್ರದ ಕ್ರಿಕೆಟ್ ಆಡಳಿತ ಸಂಸ್ಥೆಯಾದ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ(BCCI).ಯಿಂದ ಪ್ರತ್ಯೇಕವಾಗಿ ನಡೆಯುತ್ತದೆ. 2007ರಲ್ಲಿ ಆರಂಭವಾದ ಇದು ಮುಂಬಯಿ, ಚೆನ್ನೈ, ಚಂಡೀಗಢ್, ಹೈದರಾಬಾದ್, ಕೋಲ್ಕತಾ ಮತ್ತು ದೆಹಲಿಯಲ್ಲಿ ತಂಡಗಳನ್ನು ಹೊಂದಿತ್ತು.
  • ಇಂಡಿಯನ್ ಕ್ರಿಕೆಟ್ ಲೀಗ್‌ ಗೆ ಪ್ರತಿಕ್ರಿಯೆಯಾಗಿ BCCI ಇಂಡಿಯನ್ ಪ್ರೀಮಿಯರ್ ಲೀಗ್‌ನ್ನು ಬೆಂಗಳೂರು, ಚೆನ್ನೈ, ದೆಹಲಿ,ಹೈದರಾಬಾದ್,ಜೈಪುರ್, ಕೋಲ್ಕತಾ, ಮೊಹಾಲಿ ಮತ್ತು ಮುಂಬಯಿನ ತಂಡಗಳೊಂದಿಗೆ 2008ರಲ್ಲಿ ಆರಂಭಿಸಿತು. ಅದರ ಪ್ರಥಮ ಕ್ರೀಡಾಋತುವಿನಲ್ಲೇ ವಿಶ್ವದಲ್ಲಿ ಯಾವುದೇ ದೇಶೀಯ ವೃತ್ತಿಪರ ಕ್ರೀಡಾ ಲೀಗ್‌ನಲ್ಲಿ ಪ್ರತೀ ಪಂದ್ಯದಲ್ಲಿ ಎರಡನೇ ಅತ್ಯಧಿಕ ಸರಾಸರಿ ಹಾಜರಾತಿಯನ್ನು ಹೊಂದಿತ್ತು ಮತ್ತು ಪ್ರೇಕ್ಷಕರ ಹಾಜರಾತಿಯಲ್ಲಿ ಅಮೆರಿಕದ ಫುಟ್ಬಾಲ್‌ನ್ಯಾಷನಲ್ ಫುಟ್ಬಾಲ್ ಲೀಗ್‌‌ಗಿಂತ ಮಾತ್ರ ಹಿಂದೆ ಉಳಿದಿತ್ತು. ಖಾಸಗಿ ಮಾಲೀಕತ್ವದ ಫ್ರಾಂಚೈಸಿಗಳ ಉತ್ತರ ಅಮೆರಿಕ ಮಾದರಿಯನ್ವಯ ಕಾರ್ಯನಿರ್ವಹಿಸಲು ಲೀಗ್‌ನ್ನು ಸ್ವಷ್ಟವಾಗಿ ವಿನ್ಯಾಸಗೊಳಿಸಲಾಗಿತ್ತು.

ನ್ಯೂಜಿಲೆಂಡ್‌

[ಬದಲಾಯಿಸಿ]
  • ಪುರುಷರ ಸ್ಟೇಟ್ ಶೀಲ್ಡ್ (ಮುಂಚೆ ಶೆಲ್ ಕಪ್)-ಪ್ರಥಮ ದರ್ಜೆಯ ಕೂಟಗಳ ಆಧಾರದ ಮೇಲೆ 6ತಂಡಗಳ ನಡುವೆ ವಾರ್ಷಿಕವಾಗಿ ಆಡಿಸಲಾಗುತ್ತದೆ: ನಾರ್ದನ್ ನೈಟ್ಸ್, ಆಕ್‌ಲ್ಯಾಂಡ್ ಏಸಸ್, ಸೆಂಟ್ರಲ್ ಸ್ಟಾಗ್ಸ್, ವೆಲ್ಲಿಂಗ್‌ಟನ್ ಫೈರ್‌ಬರ್ಡ್ಸ್, ಕ್ಯಾಂಟರ್‌ಬರಿ ವಿಜರ್ಡ್ಸ್ ಮತ್ತು ಒಟಾಗೊ ವೋಲ್ಟ್ಸ್. ಪ್ರಸಕ್ತ ಡಬಲ್(ಎರಡು) ರೌಂಡ್ ರಾಬಿನ್(ಸ್ಥಳೀಯ ಮೈದಾನ ಮತ್ತು ದೂರದಲ್ಲಿ)ರೀತಿಯಲ್ಲಿ ಆಡುವ ಇದರಲ್ಲಿ ತಂಡ 1 ಫೈನಲ್‌ಗೆ ನೇರ ಪ್ರವೇಶ ಪಡೆಯುತ್ತದೆ ಮತ್ತು ತಂಡಗಳಾದ 2 ಮತ್ತು 3 ಸೆಮಿಫೈನಲ್‌ನಲ್ಲಿ ಸ್ಪರ್ಧಿಸುತ್ತವೆ. ODIನಿಯಮಗಳನ್ವಯ ಆಟಗಳನ್ನು ಅನೇಕ ಹಗಲು-ರಾತ್ರಿ ಪಂದ್ಯಗಳೊಂದಿಗೆ ಆಡಲಾಗುತ್ತದೆ. 2008 -09ರ ಋತುವಿನ ವಿಜೇತರು ನಾರ್ದನ್ ಡಿಸ್ಟ್ರಿಕ್ಟ್ಸ್ ನೈಟ್ಸ್.
  • ಮಹಿಳೆಯರ ಸ್ಟೇಟ್ ಲೀಗ್ - ಪ್ರಥಮ ದರ್ಜೆ ಕೂಟಗಳ ಆಧಾರದ ಮೇಲೆ ವಾರ್ಷಿಕವಾಗಿ ಆರು ತಂಡಗಳ ನಡುವೆ ಆಡಲಾಗುತ್ತದೆ: ನಾರ್ದರ್ನ್ ಸ್ಪಿರಿಟ್, ಆಕ್‌ಲ್ಯಾಂಡ್ ಹಾರ್ಟ್ಸ್, ಸೆಂಟ್ರಲ್ ಹೈಂಡ್ಸ್, ವೆಲ್ಲಿಂ್ಟನ್ ಬ್ಲೇಜ್, ಕ್ಯಾಂಟರ್‌ಬರಿ ಮೆಜಿಶಿಯನ್ಸ್, ಒಟಾಗೊ ಸ್ಪಾರ್ಕ್ಸ್. ಈ ಶೈಲಿಯು ಡಬಲ್-ರೌಂಡ್-ರಾಬಿನ್ ಪಂದ್ಯವಾಗಿದ್ದು, ವಿಜೇತರನ್ನು ಪಾಯಿಂಟ್‌ಗಳ ಮೂಲಕ ನಿರ್ಧರಿಸಲಾಗುತ್ತದೆ. 2003-04ಋತುವಿನಲ್ಲಿ ವಿಜೇತರು ಕ್ಯಾಂಟರ್‌ಬರಿ ಮೆಜಿಶಿಯನ್ಸ್

ಪಾಕಿಸ್ತಾನ

[ಬದಲಾಯಿಸಿ]

ಪಾಕಿಸ್ತಾನಿ ದೇಶೀಯ ಸ್ಪರ್ಧೆಯು ನಿಯಮಿತವಾಗಿ ಬದಲಾಗುತ್ತದೆ. ಆದರೆ 2005 -06ಕ್ಕೆ ಪುರುಷರ ಏಕದಿನ ಪಂದ್ಯಾವಳಿಗಳಿಗೆ ಯೋಜನೆ ಹಾಕಲಾಗಿದೆ:

  • NATIONAL BANK ಕಪ್ :ನಗರ ತಂಡಗಳ ನಡುವೆ ಫೆಬ್ರವರಿ ಮತ್ತು ಮಾರ್ಚ್‌ನಲ್ಲಿ ಎರಡು ವಾರಗಳ ಪಂದ್ಯಾವಳಿ,ಗೋಲ್ಡ್ ಲೀಗ್(7ತಂಡಗಳೊಂದಿಗೆ)ಮತ್ತು ಸಿಲ್ವರ್ ಲೀಗ್(6ತಂಡಗಳೊಂದಿಗೆ)ಎಂದು ವಿಭಾಗವಾಗಿದೆ. ತಂಡಗಳು ಒಮ್ಮೆ ಮಾತ್ರ ಇನ್ನೊಂದು ತಂಡದ ವಿರುದ್ಧ ಪರಸ್ಪರ ಆಡುತ್ತವೆ. ಪ್ರತಿಯೊಂದು ವೈಯಕ್ತಿಕ ಲೀಗ್‌ನಲ್ಲಿ ಎರಡು ಅಗ್ರ ತಂಡಗಳು ಫೈನಲ್‌ಗೆ ಅರ್ಹತೆ ಗಳಿಸುತ್ತದೆ. ಆದ್ದರಿಂದ ಗೋಲ್ಡ್ ಲೀಗ್‌ನ ಯಾವುದೇ ತಂಡ ಸಿಲ್ವರ್ ಲೀಗ್ ತಂಡವನ್ನು ಎದುರಿಸುವುದಿಲ್ಲ.
  • ಗೋಲ್ಡ್ ಲೀಗ್ ತಂಡಗಳು:
  • ಫೈಸಲಾಬಾದ್ ವುಲ್ವ್ಸ್
  • ಕರಾಚಿ ಡಾಲ್ಫಿನ್ಸ್
  • ಲಾಹೋರ್ ಲಯನ್ಸ್
  • ಮುಲ್ತಾನ್ ಟೈಗರ್ಸ್
  • ಪೇಶಾವರ್ ಪ್ಯಾಂಥರ್ಸ್
  • ಸಿಯಾಲ್‌ಕೋಟ್ ಸ್ಟಾಲ್ಲಿಯನ್ಸ್
  • ರಾವಲ್ಪಿಂಡಿ ರಾಮ್ಸ್
  • ಸಿಲ್ವರ್ ಲೀಗ್ ತಂಡಗಳು:
  • ಅಬ್ಬೋಟಾಬಾದ್ ರೈನೋಸ್
  • ಹೈದರಾಬಾದ್ ಹಾಕ್ಸ್
  • ಇಸ್ಲಾಮಾಬಾದ್ ಲೆಪರ್ಡ್ಸ್
  • ಕರಾಚಿ ಜೀಬ್ರಾಸ್
  • ಲಾಹೋರ್ ಈಗಲ್ಸ್
  • ಕ್ವೆಟ್ಟಾ ಬಿಯರ್ಸ್
  • NATIONAL BANK ಪ್ಯಾಟ್ರನ್'ಸ್ ಕಪ್ :NATIONAL BANK ಕಪ್‌ಗೆ ಸ್ವಲ್ಪ ಮುಂಚೆ ಆಡುವ ಎರಡು ವಾರಗಳ ಪಂದ್ಯಾವಳಿ ಐದು ತಂಡಗಳ ಒಂದು ಗುಂಪು ಮತ್ತು 6 ತಂಡಗಳ ಇನ್ನೊಂದು ಗುಂಪನ್ನು ಹೊಂದಿತ್ತು. ಪ್ರತಿಯೊಂದು ತಂಡದ ಅಗ್ರ ಎರಡು ತಂಡಗಳು ಸೆಮಿ ಫೈನಲ್‌ಗೆ ಪ್ರವೇಶಿಸುತ್ತವೆ. ಸ್ಪರ್ಧಿಸುವ ತಂಡಗಳು:
  • ಆಲೀಡ್ ಬ್ಯಾಂಕ್ ಲಿಮಿಟೆಡ್
  • ಪಾಕಿಸ್ತಾನ ಕಸ್ಟಮ್ಸ್
  • ಹಬೀಬ್ ಬ್ಯಾಂಕ್ ಲಿಮಿಟೆಡ್
  • ಖಾನ್ ರೀಸರ್ಚ್ ಲ್ಯಾಬೋರೇಟರೀಸ್
  • ನ್ಯಾಷನಲ್ ಬ್ಯಾಂಕ್ ಆಫ್ ಪಾಕಿಸ್ತಾನ್
  • ಪಾಕಿಸ್ತಾನ್ ಇಂಟರ್‌ನ್ಯಾಷನಲ್ ಏರ್‌ಲೈನ್ಸ್
  • ಪಾಕಿಸ್ತಾನ್ ಟೆಲಿಕಮ್ಯುನಿಕೇಷನ್ಸ್ ಕಂಪೆನಿ ಲಿಮಿಟೆಡ್
  • ಸರ್ವೀಸ್ ಇಂಡಸ್ಟ್ರೀಸ್
  • ಸುಯಿ ನಾರ್ದನ್ ಗ್ಯಾಸ್ ಪೈಪ್‌ಲೈನ್ಸ್ ಲಿಮಿಟೆಡ್
  • ವಾಟರ್ ಎಂಡ್ ಪವರ್ ಡೆವಲಪ್‌ಮೆಂಟ್ ಅಥೋರಿಟಿ
  • ಜರಾಯ್ ಟರಾಕಿಯಾಟಿ ಬ್ಯಾಂಕ್ ಲಿಮಿಟೆಡ್
  • NATIONAL BANK ಟ್ವೆಂಟಿ20 ಕಪ್ : ಮಾರ್ಚ್ ಮಧ್ಯಾವಧಿಯಲ್ಲಿ ಒಂದು ವಾರ ನಡೆಯುವ ಪಂದ್ಯಾವಳಿ. ಇದೇ ಗುಂಪುಗಳು NATIONAL BANK ಕಪ್ ರೀತಿಯಲ್ಲಿ ಅನ್ವಯವಾಗುತ್ತದೆ. ಗುಂಪು(ಗ್ರೂಪ್) ಹಂತಗಳ ಆಟದ ನಂತರ ಎರಡು ಸೆಮಿ-ಫೈನಲ್‌ಗಳು ಮತ್ತು ಒಂದು ಫೈನಲ್ ಪಂದ್ಯವಿರುತ್ತದೆ. ಪಂದ್ಯಾವಳಿಯು ಕರಾಚಿ ಮತ್ತು ಲಾಹೋರ್‌ನಲ್ಲಿ ನಡೆಯುತ್ತದೆ.

ದಕ್ಷಿಣ ಆಫ್ರಿಕಾ

[ಬದಲಾಯಿಸಿ]

ದಕ್ಷಿಣ ಆಫ್ರಿಕಾದಲ್ಲಿ ಸ್ಥಳೀಯ ಸ್ಪರ್ಧೆಯು 6 ತಂಡಗಳ ನಡುವೆ ನಡೆಯುವ ಸ್ಟಾಂಡರ್ಡ್ ಬ್ಯಾಂಕ್ ಕಪ್(ಮುಂಚೆ ಬೆನ್ಸನ್ & ಹೆಜೆಸ್ ಸೀರೀಸ್):

  • ಡಾಲ್ಫಿನ್ಸ್ (ಡರ್ಬನ್, ಕ್ವಾಜುಲು-ನಟಾಲ್),
  • ಈಗಲ್ಸ್ (ಬ್ಲೊಯಿಮ್‌ಫಾಂಟೇನ್, ಫ್ರೀ ಸ್ಟೇಟ್)
  • ಲಯನ್ಸ್ (ಜೋಹಾನ್ಸ್‌ಬರ್ಗ್, ಗೌಟೆಂಗ್)
  • ಟೈಟಾನ್ಸ್ (ಪ್ರಿಟೋರಿಯ, ಗೌಟೆಂಗ್)
  • ವಾರಿಯರ್ಸ್ (ಪೋರ್ಟ್ ಎಲಿಜಬತ್ ಮತ್ತು ಈಸ್ಟ್ ಲಂಡನ್,ಈಸ್ಟರ್ನ್ ಕೇಪ್)
  • ಕೇಪ್ ಕೋಬ್ರಾಸ್ (ಕೋಪ್ ಟೌನ್ ಮತ್ತು ಪಾರ್ಲ್, ವೆಸ್ಟರ್ನ್ ಕೇಪ್)

ಪಂದ್ಯಗಳು 45ಓವರುಗಳಾಗಿದ್ದು, ಹೋಮ್-ಎಂಡ್-ಎವೇ(ಸ್ಥಳೀಯ ಮತ್ತು ಹೊರಗೆ)ರೌಂಡ್-ರಾಬಿನ್ ಪಂದ್ಯ ವ್ಯವಸ್ಥೆಯಾಗಿದ್ದು(ಪ್ರತಿಯೊಂದು ತಂಡ 10ಪಂದ್ಯಗಳನ್ನು ಆಡುತ್ತದೆ) ಸೆಮಿ ಫೈನಲ್ಸ್ ಮತ್ತು ಫೈನಲ್ ಪಂದ್ಯ ಒಳಗೊಂಡಿರುತ್ತದೆ. ಈಗಲ್ಸ್ 2004/2005 ಮತ್ತು 2005/2006 ಸ್ಪರ್ಧೆಗಳ ವಿಜೇತರಾಗಿದ್ದಾರೆ.

ಶ್ರೀಲಂಕಾ

[ಬದಲಾಯಿಸಿ]

20 ತಂಡಗಳು ಪ್ರಮುಖ ಸೀಮಿತ ಓವರುಗಳ ಪಂದ್ಯಾವಳಿಯಲ್ಲಿ ಸ್ಪರ್ಧಿಸುತ್ತವೆ. ಇದು ಕಳೆದ ಕ್ರೀಡಾಋತುವಿನಲ್ಲಿ 16ತಂಡದಿಂದ ವಿಸ್ತರಣೆಯಾಗಿದೆ. ಪ್ರತಿಯೊಂದು ತಂಡವು 50 ಓವರುಗಳನ್ನು ಆಡುತ್ತದೆ. ತಂಡಗಳು ಎರಡು ಗುಂಪುಗಳಾಗಿ ವಿಭಾಗವಾಗಿದೆ. ಪ್ರತಿಯೊಂದು ತಂಡವು ಒಂದು ತಿಂಗಳ ಕಾಲಾವಧಿಯಲ್ಲಿ ಇನ್ನೊಂದು ತಂಡವನ್ನು ಎದುರಿಸುತ್ತದೆ. ಪ್ರತಿಯೊಂದು ಗುಂಪಿನ ನಾಲ್ಕು ಅಗ್ರ ತಂಡಗಳು ಕ್ವಾರ್ಟರ್‌ ಫೈನಲ್ಸ್‌ಗೆ ಅರ್ಹತೆ ಪಡೆಯುತ್ತವೆ. ಮೂರು ನಾಕ್ ಔಟ್ ಹಂತಗಳ ನಂತರ ವಿಜೇತರು ನಿರ್ಧಾರವಾಗುವ ತನಕ ನೇರ ನಾಕ್ ಔಟ್ ವ್ಯವಸ್ಥೆ ಇರುತ್ತದೆ. ಸ್ಪರ್ಧಿಸುವ ತಂಡಗಳು:

  • ಬಾದುರೆಲಿಯಾ ಸ್ಪೋರ್ಟ್ಸ್ ಕ್ಲಬ್
  • ಬ್ಲೂಮ್‌ಫೀಲ್ಡ್ ಕ್ರಿಕೆಟ್ ಮತ್ತು ಅಥ್ಲೆಟಿಕ್ ಕ್ಲಬ್
  • ಬರ್ಗೇರ್ ರಿಕ್ರಿಯೇಷನ್ ಕ್ಲಬ್
  • ಚಿಲಾವ್ ಮ್ಯಾರಿಯನ್ಸ್ ಕ್ರಿಕೆಟ್ ಕ್ಲಬ್
  • ಕೊಲಂಬೊ ಕ್ರಿಕೆಟ್ ಕ್ಲಬ್
  • ಕೋಲ್ಟ್ಸ್ ಕ್ರಿಕೆಟ್ ಕ್ಲಬ್
  • ಗ್ಯಾಲೆ ಕ್ರಿಕೆಟ್ ಕ್ಲಬ್
  • ಕುರುನೆಗಲ ಯುತ್ ಕ್ರಿಕೆಟ್ ಕ್ಲಬ್
  • ಲಂಕನ್ ಕ್ರಿಕೆಟ್ ಕ್ಲಬ್
  • ಮೂರ್ಸ್ ಸ್ಪೋರ್ಟ್ಸ್ ಕ್ಲಬ್
  • ನಾನ್‌ಡಿಸ್ಕ್ರಿಪ್ಟ್ಸ್ ಕ್ರಿಕೆಟ್ ಕ್ಲಬ್
  • ಪನಾಡುರಾ ಸ್ಪೋರ್ಟ್ಸ್ ಕ್ಲಬ್
  • ಪೊಲೀಸ್ ಸ್ಪೋರ್ಟ್ಸ್ ಕ್ಲಬ್
  • ರಾಗಮಾ ಕ್ರಿಕೆಟ್ ಕ್ಲಬ್
  • ಸರಾಸೆನ್ಸ್ ಸ್ಪೋರ್ಟ್ಸ್ ಕ್ಲಬ್
  • ಸೆಬಾಸ್ಟಿಯಾನೈಟ್ಸ್ ಕ್ರಿಕೆಟ್ ಎಂಡ್ ಅಥ್ಲೆಟಿಕ್ ಕ್ಲಬ್
  • ಸಿಂಘಾ ಸ್ಪೋರ್ಟ್ಸ್ ಕ್ಲಬ್
  • ಸಿಂಹಳೀಸ್ ಸ್ಪೋರ್ಟ್ಸ್ ಕ್ಲಬ್
  • ಶ್ರೀಲಂಕಾ ಏರ್ ಫೋರ್ಸ್ ಸ್ಪೋರ್ಟ್ಸ್ ಕ್ಲಬ್
  • ತಮಿಳ್ ಯೂನಿಯನ್ ಕ್ರಿಕೆಟ್ ಎಂಡ್ ಅಥ್ಲೆಟಿಕ್ ಕ್ಲಬ್

ವೆಸ್ಟ್‌ ಇಂಡೀಸ್‌

[ಬದಲಾಯಿಸಿ]

KFC ಕಪ್ ವೆಸ್ಟ್ ಇಂಡೀಸ್‌ನಲ್ಲಿ ಮುಖ್ಯ ಪ್ರಾದೇಶಿಕ ಏಕ ದಿನ ಸ್ಪರ್ಧೆಯಾಗಿದ್ದು, ಅದರ ಮುಖ್ಯ ಪ್ರಾಯೋಜಕ ಕಂಪೆನಿ, ದಿಢೀರ್ ಆಹಾರ(ಫಾಸ್ಟ್ ಫುಡ್)ಸರಣಿ KFCಹೆಸರಿನಲ್ಲಿದೆ. ಇತ್ತೀಚಿನ ವರ್ಷಗಳಲ್ಲಿ ಇದು ಒಂದು ವಾರ ಕಾಲ ಗ್ರೂಪ್(ಗುಂಪು)ಹಂತವಾಗಿ ನಡೆಯಿತು ಮತ್ತು ಅದರ ಹಿಂದೆಯೇ ನಾಕ್ ಔಟ್ ಹಂತಗಳು ನಡೆದವು. ಗಯಾನ ಫೈನಲ್‌ನಲ್ಲಿ ಬಾರ್ಬಡೋಸ್ ವಿರುದ್ಧ ಜಯಗಳಿಸಿದ ನಂತರ ಪ್ರಸಕ್ತ ಪ್ರಶಸ್ತಿ ವಿಜೇತರಾಗಿದ್ದಾರೆ. ಅಲ್ಲದೇ 9 ಪ್ರಶಸ್ತಿಗಳೊಂದಿಗೆ ಅತೀ ಹೆಚ್ಚು ಬಾರಿ ವಿಜೇತವಾದ ತಂಡವೆನಿಸಿದೆ. ಆದರೂ ಅವುಗಳಲ್ಲಿ ಎರಡು ಪ್ರಶಸ್ತಿಗಳನ್ನು ಹಂಚಿಕೊಳ್ಳಲಾಗಿದೆ. ಟ್ರಿನಿಡಾಡ್ ಮತ್ತು ಟೊಬ್ಯಾಗೊ ಆ ಇತಿಹಾಸದಲ್ಲಿ ಎರಡನೆಯದಾಗಿದ್ದು, ಏಳು ಪ್ರಶಸ್ತಿಗಳನ್ನು ಗೆದ್ದುಕೊಂಡಿವೆ.

KFC ಕಪ್‌ನ 2005–06ಆವೃತ್ತಿಯಲ್ಲಿ, ವೆಸ್ಟ್‌ಇಂಡೀಸ್‌ನ ಆರು ಕಾಯಂ ಪ್ರಥಮ ದರ್ಜೆ ಪ್ರದೇಶಗಳು ಪಂದ್ಯಾವಳಿಯಲ್ಲಿ ಸ್ಪರ್ಧಿಸಿದೆ.

  • ಬಾರ್ಬಡೋಸ್ಬಾರ್ಬಡೋಸ್
  • ಗಯಾನಗುಯಾನಾ
  • Jamaicaಜಮೈಕಾ
  • ಲೀವರ್ಡ್ ದ್ವೀಪಗಳು
  • ಟ್ರಿನಿಡಾಡ್ ಮತ್ತು ಟೊಬೆಗೊ ಟ್ರಿನಿಡಾಡ್ ಎಂಡ್ ಟುಬ್ಯಾಗೊ
  • ವಿಂಡ್‌ವಾರ್ಡ್ ಐಲೆಂಡ್ಸ್

ಜಿಂಬಾಬ್ವೆ

[ಬದಲಾಯಿಸಿ]

ಕ್ರೀಡೆಯ ಸಂಘಟನಾ ಸಂಸ್ಥೆಯಾದ ಜಿಂಬಾಬ್ವೆ ಕ್ರಿಕೆಟ್‌ ನಾಯಕತ್ವ ಬಿಕ್ಕಟ್ಟಿನಲ್ಲಿದ್ದು,ಆಗಾಗ್ಗೆ ಆಟಗಾರರ ಮುಷ್ಕರಗಳಿಂದಾಗಿ,2005-06ನೇ ಕ್ರೀಡಾಋತುವಿಗಾಗಿ ಯಾವುದೇ ವೇಳಾಪಟ್ಟಿಯನ್ನು ಪ್ರಕಟಿಸಲಿಲ್ಲ. 2004-05ನೇ ಸಾಲಿನ ಅಂತರ ಪ್ರಾಂತೀಯ ಏಕ ದಿನ ಸ್ಪರ್ಧೆಯಲ್ಲಿ, ಆದಾಗ್ಯೂ, ನಮೀಬಿಯದ ಪ್ರತ್ಯೇಕ ರಾಷ್ಟ್ರದೊಂದಿಗೆ ಐದು ತಂಡಗಳು ಭಾಗವಹಿಸಿದವು. ಐದು ತಂಡಗಳು ಪರಸ್ಪರ ಒಮ್ಮೆ ಮಾತ್ರ ಆಟವಾಡಿದವು ಮತ್ತು ರೌಂಡ್ ರಾಬಿನ್ ಲೀಗ್ ವಿಜೇತರು ಸ್ಪರ್ಧೆಯಲ್ಲಿ ಜಯಗಳಿಸಿದರು. ಸ್ಪರ್ಧಿಸಿದ ತಂಡಗಳು:

  • ಮಾನಿಕಾಲ್ಯಾಂಡ್
  • ಮಶೋನಾಲ್ಯಾಂಡ್
  • ಮಟಾಬೆಲೆಲ್ಯಾಂಡ್ (ಪ್ರಸಕ್ತ ಪ್ರಶಸ್ತಿ)
  • ಮಿಡ್‌ಲ್ಯಾಂಡ್ಸ್
  • ನಮೀಬಿಯಾ

ಏಕ ದಿನದ ದಾಖಲೆಗಳು

[ಬದಲಾಯಿಸಿ]

ಫ್ರೆಂಡ್ಸ್ ಪ್ರಾವಿಡೆಂಟ್ ಟ್ರೋಫಿಯಲ್ಲಿ ಗ್ಲೌಸೆಸ್ಟರ್‌ಶೈರ್ ವಿರುದ್ಧ ಸರ್ರೆ ತಂಡದ 496ಕ್ಕೆ 4ವಿಕೆಟ್ ಗಳಿಕೆಯು ಯಾವುದೇ ಲಿಸ್ಟ್ A ಸೀಮಿತ ಓವರುಗಳ ಪಂದ್ಯದಲ್ಲಿ ಅತ್ಯಧಿಕ ಇನ್ನಿಂಗ್ಸ್ ಮೊತ್ತದ ವಿಶ್ವ ದಾಖಲೆಯಾಗಿದೆ. ಇದು 2007ರ ಏಪ್ರಿಲ್ 29ರಂದು ಲಂಡನ್‌ನ ಓವಲ್‌ನಲ್ಲಿ ನಡೆದ 50 ಓವರುಗಳ ಪಂದ್ಯವಾಗಿದೆ. ಇದು 2006ರ ಜುಲೈ 4ರಂದು ಆಮ್ಸ್‌ಟೆಲ್‌ವೀನ್‌ನಲ್ಲಿ ನಡೆದ ಏಕದಿನ ಅಂತಾರಾಷ್ಟ್ರೀಯ 50 ಓವರುಗಳ ಪಂದ್ಯದಲ್ಲಿ ನೆದೆರ್‌ಲ್ಯಾಂಡ್ಸ್ ವಿರುದ್ಧ ಶ್ರೀಲಂಕಾದ 443ಕ್ಕೆ 9 ವಿಕೆಟ್‌ಗಳ ಸ್ಕೋರನ್ನು ಮೀರಿಸಿತು ಮತ್ತು ಪ್ರಸಕ್ತ ಅತ್ಯಧಿಕ ODIಸ್ಕೋರಾಗಿದೆ. 1974ರಲ್ಲಿ ನಡೆದ 40 -ಓವರುಗಳ ಪಂದ್ಯದಲ್ಲಿ ಹೆಡಿಂಗ್ಲೇಯಲ್ಲಿ ಮಿಡಲ್‌ಸೆಕ್ಸ್ ವಿರುದ್ಧ ಯಾರ್ಕ್‌ಶೈರ್‌ನ 23 ರನ್ ಮೊತ್ತವು ಅತ್ಯಂತ ಕಡಿಮೆ ಸ್ಕೋರಾಗಿದೆ.

ಯಾವುದೇ ಲಿಸ್ಟ್ A ಸೀಮಿತ ಓವರುಗಳ ಪಂದ್ಯದಲ್ಲಿ ಎರಡೂ ತಂಡಗಳು ಗಳಿಸಿದ ಅತ್ಯಧಿಕ ಒಟ್ಟು ಮೊತ್ತವು 872 ರನ್‌ಗಳಾಗಿವೆ. 2006ರ ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಮೊದಲಿಗೆ ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯ 50ಓವರುಗಳಲ್ಲಿ 434ಕ್ಕೆ ನಾಲ್ಕು ವಿಕೆಟ್‌ಗಳ ಸ್ಕೋರು ಗಳಿಸಿತು. ಆದರೂ ಸಹ ಒಂದು ಚೆಂಡು ಬಾಕಿಉಳಿದಿರುವಂತೆ 438ಕ್ಕೆ 9ವಿಕೆಟ್ ಗಳಿಸಿದ ದಕ್ಷಿಣ ಆಫ್ರಿಕಾ ಕೈಯಿಂದ ಸೋಲಪ್ಪಿತು.

ಅತ್ಯಧಿಕ ವೈಯಕ್ತಿಕ ಇನ್ನಿಂಗ್ಸ್ ಸ್ಕೋರು 2002ರ ಓವಲ್‌ನಲ್ಲಿ ನಡೆದ 50ಓವರುಗಳ ಪಂದ್ಯದಲ್ಲಿ ಗ್ಲಾಮೋರ್ಗನ್ ವಿರುದ್ಧ ಸರ್ರೆಯ ಆಲಿ ಬ್ರೌನ್ ಬಾರಿಸಿದ 268 ರನ್‌ಗಳಾಗಿವೆ. 1997ರಲ್ಲಿ ಉನಾದಲ್ಲಿ ನಡೆದ 50ಓವರುಗಳ ಪಂದ್ಯದಲ್ಲಿ ಹಿಮಾಚಲ ಪ್ರದೇಶದ ವಿರುದ್ಧ ದೆಹಲಿಯ ರಾಹುಲ್ ಸಾಂಘ್ವಿ 15ರನ್‌ಗಳನ್ನು ನೀಡಿ 8 ವಿಕೆಟ್ ಗಳಿಸಿರುವುದು ಅತ್ಯುತ್ತಮ ಬೌಲಿಂಗ್ ಅಂಕಿಅಂಶಗಳಾಗಿವೆ.

ಕ್ಯಾಲಿಫೋರ್ನಿಯದ ರಿಚ್ಮಂಡ್‌ನಲ್ಲಿ 2006 ನೇ ಆಗಸ್ಟ್‌ನಲ್ಲಿ 45 ಓವರುಗಳ ಪಂದ್ಯದಲ್ಲಿ ಬೇ ಏರಿಯ ವಿರುದ್ಧ ಯುನೈಟೆಡ್‌ನ 630ಕ್ಕೆ ಐದು ವಿಕೆಟ್ ಯಾವುದೇ ಔಪಚಾರಿಕ ಸೀಮಿತ ಓವರುಗಳ ಪಂದ್ಯದಲ್ಲಿ ಅತ್ಯಧಿಕ ಮೊತ್ತವಾಗಿದೆ.[೧]

ದಕ್ಷಿಣ ಆಫ್ರಿಕಾ ತಂಡದ ಹರ್ಷೆಲ್ ಗಿಬ್ಸ್ ವೆಸ್ಟ್ ಇಂಡೀಸ್‌ನಲ್ಲಿ ನಡೆದ 2007ನೇ ಕ್ರಿಕೆಟ್ ವಿಶ್ವಕಪ್‌ನಲ್ಲಿ ಒಂದು ಓವರಿನಲ್ಲಿ ಅತ್ಯಧಿಕ ರನ್‌ಗಳನ್ನು ಸ್ಕೋರು ಮಾಡಿದ ದಾಖಲೆ ನಿರ್ಮಿಸಿದ್ದಾರೆ. ಅವರು ನೆದರ್‌ಲ್ಯಾಂಡ್‌ನ ಡಾನ್ ವ್ಯಾನ್ ಬಂಗೆಅವರ ಒಂದು ಓವರಿನಲ್ಲಿ 6 ಸಿಕ್ಸರುಗಳನ್ನು ಬಾರಿಸಿದರು.[]

ಈ ದಾಖಲೆಯನ್ನು ಭಾರತದ ಯುವರಾಜ್ ಸಿಂಗ್ ಹಂಚಿಕೊಂಡಿದ್ದಾರೆ. ಯುವರಾಜ್ ದಕ್ಷಿಣ ಆಫ್ರಿಕಾದ 2007 ICC ವಿಶ್ವ ಟ್ವೆಂಟಿ20ಯಲ್ಲಿ ಇಂಗ್ಲೆಂಡ್‌ನ ಸ್ಟಾರ್ಟ್ ಬ್ರಾಡ್ ಬೌಲಿಂಗ್‌ನಲ್ಲಿ ಒಂದು ಓವರಿನಲ್ಲೇ 6 ಸಿಕ್ಸರುಗಳನ್ನು ಬಾರಿಸುವ ಮೂಲಕ ಈ ಸಾಧನೆ ಮಾಡಿದ್ದಾರೆ.

ಸಚಿನ್ ತೆಂಡೂಲ್ಕರ್ ODIಪಂದ್ಯಗಳಲ್ಲಿ ದ್ವಿಶತಕ(ಔಟಾಗದೇ 200)ಸ್ಕೋರು ಮಾಡಿದ ಪ್ರಥಮ ಪುರುಷ ಕ್ರಿಕೆಟ್ ಆಟಗಾರನೆಂಬ ದಾಖಲೆಯನ್ನು ಹೊಂದಿದ್ದಾರೆ. ಅವರು ಭಾರತದ ಗ್ವಾಲಿಯರ್‌ನಲ್ಲಿ 2010ರ ಫೆಬ್ರವರಿ 24ರಂದು ದಕ್ಷಿಣ ಆಫ್ರಿಕಾ ವಿರುದ್ಧ ಈ ಸಾಧನೆ ಮಾಡಿದ್ದಾರೆ.

ಇವನ್ನೂ ಗಮನಿಸಿ

[ಬದಲಾಯಿಸಿ]
  • ಕ್ರಿಕೆಟ್‌ ಪಾರಿಭಾಷಿಕ ಶಬ್ದಗಳು
  • ODI ಕ್ರಿಕೆಟ್ ಆಟಗಾರರ ಪಟ್ಟಿ
  • ವಿಶ್ವ ಸರಣಿ ಕ್ರಿಕೆಟ್

ಉಲ್ಲೇಖಗಳು

[ಬದಲಾಯಿಸಿ]
  1. ICC ಕ್ಲಾರಿಫೈಯ್ಸ್ ವಾಟ್ ಕೌಂಟ್ಸ್ ಎಂಡ್ ವಾಟ್ ಡಸ್‌ನಾಟ್, ಕ್ರಿಕ್‌ಇನ್ಫೋನಿಂದ, 30 ಜುಲೈ 2006
  2. content-usa.cricinfo.com/wc2007/content/current/story/285608.html


  • Gilchrist, Adam (1999). One-Day Cricket: Playing the One-Day Game. Harper Collins Publishers. ISBN 0-7322-6713-7.

ಬಾಹ್ಯ ಕೊಂಡಿಗಳು

[ಬದಲಾಯಿಸಿ]