ವಿಷಯಕ್ಕೆ ಹೋಗು

ಸೆಸ್ (ಮೇಲ್ತೆರಿಗೆ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸೆಸ್ ಎನ್ನುವುದು ಒಂದು ರೀತಿಯ ತೆರಿಗೆಯಾಗಿದ್ದು ಸಾಮಾನ್ಯ ತೆರಿಗೆಯ ಮೇಲೆ ವಿಧಿಸಲಾಗುವ ಹೆಚ್ಚುವರಿ ತೆರಿಗೆಯಾಗಿರುತ್ತದೆ. ಹಾಗಾಗಿ ಇದನ್ನು ಮೇಲ್ತೆರಿಗೆ ಅಥವಾ ಉಪಕರ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ರಾಜ್ಯ ಅಥವಾ ಕೇಂದ್ರ ಸರ್ಕಾರಗಳು ನಿರ್ದಿಷ್ಟ ಉದ್ದೇಶಗಳಿಗಾಗಿ ನಿಧಿಯನ್ನು ಸಂಗ್ರಹಿಸಬೇಕಾದಾಗ ಈ ರೀತಿಯ ಹೆಚ್ಚುವರಿ ತೆರಿಗೆಯನ್ನು ವಿಧಿಸುತ್ತವೆ.[] ಈ ಸೆಸ್ ಎನ್ನುವುದು ಮೂಲ ತೆರಿಗೆಯ ಆಧಾರದಲ್ಲಿ ಅದರ ಮೇಲೆ ವಿಧಿಸಲಾಗಿ ಸಂಗ್ರಹ ಮಾಡಲ್ಪಡುತ್ತದೆ. ಸೆಸ್ ಅನ್ನು ನೇರ ಆದಾಯ ತೆರಿಗೆ ಅಥವಾ ಪರೋಕ್ಷ ತೆರಿಗೆ ಎರಡರ ಮೇಲೂ ವಿಧಿಸಲು ಅವಕಾಶವಿರುತ್ತದೆ. ಜಗತ್ತಿನ ಬೇರೆ ಬೇರೆ ದೇಶಗಳಲ್ಲಿ ಈ ಸೆಸ್ ಎಂಬುದು ವಿವಿಧ ರೂಪಗಳಲ್ಲಿ, ವಿವಿಧ ಉದ್ದೇಶಗಳಿಗೋಸ್ಕರ ಆಯಾ ಸರ್ಕಾರಗಳು ವಿಧಿಸುತ್ತವೆ.

ಉದ್ದೇಶಗಳು

[ಬದಲಾಯಿಸಿ]

ಸಾಮಾನ್ಯವಾಗಿ ನಿರ್ದಿಷ್ಟವಾದ ಉದ್ದೇಶಗಳಿಗೆ ಹೆಚ್ಚುವರಿ ಹಣ ಸಂಗ್ರಹ ಮಾಡಬೇಕಾದಾಗ ಸರ್ಕಾರಗಳು ಈ ಮೇಲ್ತೆರಿಗೆಯನ್ನು ವಿಧಿಸುತ್ತವೆ. ಉದಾಹರಣೆಗೆ, ಶಿಕ್ಷಣ ಕ್ಷೇತ್ರದ ಯಾವುದೋ ಯೋಜನೆಗೆ ಬಳಸಿಕೊಳ್ಳಲು ಬೇಕಾದಾಗ ಶಿಕ್ಷಣ ಸೆಸ್ ವಿಧಿಸಬಹುದು. ವಿಪತ್ತು ನಿರ್ವಹಣೆಗಳಿಗೆ, ನದಿ ಸ್ವಚ್ಛತೆಗೆ, ಕೃಷಿ ಯೋಜನೆ, ಆರೋಗ್ಯ ಮುಂತಾದ ಉದ್ದೇಶಗಳಿಗೆ ಸೆಸ್ ವಿಧಿಸಲಾಗುತ್ತದೆ. ಇಂತಹ ಸೆಸ್'ಗಳು ಶಾಶ್ವತವಲ್ಲದಾಗಿದ್ದು ಉದ್ದೇಶಿತ ಮೊತ್ತವು ಸಂಗ್ರಹವಾದ ನಂತರ ಆ ನಿರ್ದಿಷ್ಟ ಸೆಸ್ ಸಂಗ್ರಹಣೆಯನ್ನು ನಿಲ್ಲಿಸಲಾಗುತ್ತದೆ. ಈ ತರಹದ ಎಲ್ಲಾ ಸೆಸ್ ಗಳು ಸಾಮಾನ್ಯವಾಗಿ ಆದಾಯ ತೆರಿಗೆಯ, ಸರಕು ಮತ್ತು ಸೇವಾ ತೆರಿಗೆಯ ಒಂದಿಷ್ಟು ಶೇಕಡಾ ಎಂದು ವಿಧಿಸಲಾಗುತ್ತದೆ. ಆದಾಯ ತೆರಿಗೆಯಲ್ಲಿ ತೆರಿಗೆದಾತನು ಪಾವತಿಸಬೇಕಾದ ತೆರಿಗೆಯ ಮೇಲೆ ಸೆಸ್ ಹಾಕಲಾಗುತ್ತದೆ. ಸರಕು ಸೇವಾ ತೆರಿಗೆಯಲ್ಲಿ ಇದನ್ನು ಮೂಲತೆರಿಗೆಯ ಮೇಲೆ ಹಾಕಲಾಗುತ್ತದೆ ಮತ್ತು ಅದು ಕ್ರಮವಾಗಿ ಆ ವಸ್ತು ಅಥವಾ ಸೇವೆಯ ಬೆಲೆಯನ್ನು ಹೆಚ್ಚು ಮಾಡಿ ಗ್ರಾಹಕನಿಗೆ ಪರಿಣಾಮ ಬೀರುತ್ತದೆ.[]

ತೆರಿಗೆ ಮತ್ತು ಮೇಲ್ತೆರಿಗೆ (ಸೆಸ್) ವ್ಯತ್ಯಾಸಗಳು[]

[ಬದಲಾಯಿಸಿ]

ಸೆಸ್ ಎಂಬುದು ಆದಾಯ ತೆರಿಗೆ, ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ), ಅಬಕಾರಿ ಸುಂಕ ಮುಂತಾದವುಗಳಿಗಿಂತ ಬೇರೆಯಾಗಿದ್ದು ಪ್ರಸ್ತುತ ಚಾಲ್ತಿಯಲ್ಲಿರುವ ತೆರಿಗೆಗಳ ಮೇಲೆ ಹೆಚ್ಚುವರಿಯಾಗಿ ವಿಧಿಸಲಾಗುತ್ತದೆ. ಈ ತೆರಿಗೆಗಳಂತೆ ಸೆಸ್ ಕೂಡ Consolidated Fund of India (CFI)ಗೆ ಹೋಗುತ್ತಾದರೂ ಸೆಸ್ ಅನ್ನು ನಿರ್ದಿಷ್ಟ ಉದ್ದೇಶಕ್ಕೆ ಮಾತ್ರ ಬಳಸಬಹುದಾಗಿರುತ್ತದೆ. ಒಂದು ವರ್ಷದಲ್ಲಿ ಸಂಗ್ರಹವಾದ ಮೇಲ್ತೆರಿಗೆಯು ಉದ್ದೇಶಿತ ಕಾರಣಕ್ಕೆ ಬಳಕೆಯಾಗದಿದ್ದಲ್ಲಿ ಮುಂದಿನ ವರ್ಷಕ್ಕೆ ಆ ಮೊತ್ತವು ಹೋಗುತ್ತದೆ. ಕೇಂದ್ರ ಸರ್ಕಾರವು ಸೆಸ್ ತೆರಿಗೆಯನ್ನು ರಾಜ್ಯಸರ್ಕಾರಗಳ ಜೊತೆ ಹಂಚಿಕೊಳ್ಳಬೇಕಾದ ಭಾದ್ಯತೆ ಇರುವುದಿಲ್ಲ. ತೆರಿಗೆಗಳನ್ನು ರೂಪಿಸಲು, ಬದಲಾಯಿಸಲು ಕಾನೂನು ತಿದ್ದುಪಡಿ ಬೇಕಾಗುತ್ತದೆ, ಆದರೆ ಈ ಸೆಸ್ ಗಳನ್ನು ಹಾಕುವುದು ಮತ್ತು ಹಿಂದೆಗೆದುಕೊಳ್ಳುವುದು ಸರ್ಕಾರಗಳಿಗೆ ಸರಳವಾದ ಪ್ರಕ್ರಿಯೆಯಾಗಿರುತ್ತದೆ.

ಭಾರತದಲ್ಲಿ ವಿವಿಧ ಸೆಸ್'ಗಳು

[ಬದಲಾಯಿಸಿ]
  • ಶಿಕ್ಷಣ ಸೆಸ್: ಬಡವರಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುವ ಸಲುವಾಗಿ ನಿಧಿ ಸಂಗ್ರಹಕ್ಕೆ ವಿಧಿಸಲಾಗಿತ್ತು.
  • ಆರೋಗ್ಯ ಮತ್ತು ಶಿಕ್ಷಣ ಸೆಸ್: ೨೦೧೮ ರ ಬಜೆಟ್ಟಿನಲ್ಲಿ ಗ್ರಾಮೀಣ ಭಾಗದ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ಆರೋಗ್ಯ ಮತ್ತು ಶಿಕ್ಷಣದ ಉದ್ದೇಶ.
  • ಸ್ವಚ್ಚಭಾರತ ಸೆಸ್[]: ೨೦೧೫ರಲ್ಲಿ ೦.೫% ಸೆಸ್ ಅನ್ನು ವಿಧಿಸಲಾಯಿತು. ಇದರ ಉದ್ದೇಶ ಭಾರತದ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಚಮಾಡುವ ಬಗ್ಗೆ ಜಾಗೃತಿ ಮೂಡಿಸುವುದು.
  • ಕೃಷಿಕಲ್ಯಾಣ ಸೆಸ್[]: ಕೃಷಿ ಆರ್ಥಿಕತೆ ಅಭಿವೃದ್ಧಿಯ ಉದ್ದೇಶಕ್ಕೆ ಹಾಕಲಾದ ೦.೫% ಸೆಸ್.
  • ಇನ್ಫ್ರಾಸ್ಟ್ರಕ್ಚರ್ ಸೆಸ್: ವಾಹನಗಳ ಉತ್ಪಾದನೆಗೆ ೨೦೧೬ರ ಬಜೆಟ್ಟಲ್ಲಿ ಹಾಕಲಾದ ಸೆಸ್.

ಉಲ್ಲೇಖಗಳು

[ಬದಲಾಯಿಸಿ]


ಹೊರಸಂಪರ್ಕಕೊಂಡಿಗಳು

[ಬದಲಾಯಿಸಿ]