ವಿಷಯಕ್ಕೆ ಹೋಗು

ಅಮರಸಿಂಹ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಆಧುನಿಕ ಮುದ್ರಣದ ಅಮರಕೋಶ ಕೃತಿಯ ಮುಖಪುಟ

ಅಮರಸಿಂಹನು ಕ್ರಿ.ಶ. ೪೦೦ ರ ಸುಮಾರಿಗೆ ಇದ್ದ ಗುಪ್ತವಂಶದ ಎರಡನೆಯ ಚಂದ್ರಗುಪ್ತ ಅರಸನ ಆಸ್ಥಾನದಲ್ಲಿದ್ದ ನವರತ್ನಗಳಲ್ಲಿ ಒಬ್ಬನು. ಅವನು ಕ್ರಿ.ಶ. ಏಳನೇ ಶತಮಾನದಲ್ಲಿದ್ದ ವಿಕ್ರಮಾದಿತ್ಯನ ಕಾಲಕ್ಕೆ ಸೇರಿದವನು ಎಂದೂ ಕೆಲವು ಮೂಲಗಳು ತಿಳಿಸುತ್ತವೆ. ಅಮರಸಿಂಹನು ಬೌದ್ಧ ಅಥವಾ ಜೈನ ಪಂಡಿತನು. ಉಪಲಬ್ಧವಿರುವ ಸಂಸ್ಕತ ಶಬ್ದಕೋಶಗಳಲ್ಲೆಲ್ಲ ಅತಿಪ್ರಸಿದ್ಧವೂ ಜನಪ್ರಿಯವೂ ಆದ ನಾಮಲಿಂಗಾನುಶಾಸನ ಅಥವಾ ಅಮರಕೋಶದ ಕರ್ತೃ.

ಗ್ರಂಥ

[ಬದಲಾಯಿಸಿ]

ಗ್ರಂಥಾರಂಭದಲ್ಲಿ ಜ್ಞಾನಸಿಂಧುವೂ ದಯಾಸಿಂಧುವೂ ಆದ ಭಗವಾನ್ ಬುದ್ಧನನ್ನು ಸ್ತುತಿಸಿರುವುದರಿಂದ ಕರ್ತೃ ಬೌದ್ಧನಾಗಿದ್ದಿರಬಹುದು. ಬೌದ್ಧನಾದರೂ ತನ್ನ ಕೋಶದಲ್ಲಿ ವೈದಿಕಯಜ್ಞಗಳ, ಚಾತುರ್ವಣ್ರ್ಯವ್ಯವಸ್ಥೆಯ, ಆಚಾರವ್ಯವಹಾರಗಳ, ದೇವತಾಸ್ವರೂಪದ, ಪುರಾಣೇತಿಹಾಸಾದಿಗಳ ಗಾಢ ಪರಿಚಯವನ್ನು ತೋರಿಸುತ್ತಾನೆ. ಇವನ ಗ್ರಂಥ ಮೂರು ಕಾಂಡಗಳಲ್ಲಿ ವಿಂಗಡಿಸಲ್ಪಟ್ಟಿದ್ದು ಒಂದೊಂದರಲ್ಲೂ ಸ್ವರ್ಗ, ಭೂಮಿ, ಪಾತಾಳ, ಬ್ರಹ್ಮ, ಕ್ಷತ್ರಿಯ, ವೈಶ್ಯ, ಇತ್ಯಾದಿ ಉಚಿತ ಶೀರ್ಷಿಕೆಗಳ ಕೆಳಗೆ ಉಪಯುಕ್ತ ಶಬ್ಧಗಳು ಸಮಾನಾರ್ಥಕ ಶಬ್ದಾಂತರಗಳೊಂದಿಗೆ ಪ್ರಸ್ತಾಪಿಸಲ್ಪಟ್ಟಿವೆ. ಭಾರತದ ಮೃಗಜಾತಿಗಳ ವೈವಿಧ್ಯವನ್ನೂ ಪಕ್ಷಿಗಳ ನಾಮಾಂತರಗಳನ್ನೂ ಅನಂತವನಸ್ಪತಿಗಳ ಸೂಕ್ಷ್ಮ ಉಲ್ಲೇಖಗಳನ್ನೂ ಒದಗಿಸುವುದರೊಂದಿಗೆ ನಾಟ್ಯ, ಸಂಗೀತ, ಚಿತ್ರ, ಇತ್ಯಾದಿ ಲಲಿತಕಲೆಗಳ ಹಾಗೂ ವೈದ್ಯ, ಜ್ಯೋತಿಷ್ಯ, ಧರ್ಮಶಾಸ್ತ್ರ, ಅರ್ಥಶಾಸ್ತ್ರ ಇತ್ಯಾದಿ ಲೌಕಿಕಶಾಸ್ತ್ರಗಳ ಪಾರಿಭಾಷಿಕ ಶಬ್ಧಗಳನ್ನೂ ಖಚಿತವಾದ ಅರ್ಥ ವಿವರಣೆಯ ಸಮೇತ ಕೊಡುವುದರಿಂದ ಅಮರಕೋಶವನ್ನು ಭಾರತೀಯ ಸಂಸ್ಕತಿಯ ಸಾರಸಂಗ್ರಹವೆಂದರೂ ಸಲ್ಲುತ್ತದೆ. ಗ್ರಂಥಾಂತ್ಯದಲ್ಲಿ ನಾನಾರ್ಥಕ ಶಬ್ದಗಳು, ವಿಶೇಷಣಗಳು, ಅವ್ಯಯ ಮತ್ತು ಲಿಂಗಾದಿಸಂಗ್ರಹ ಮುಂತಾದವು ಪರಿಶಿಷ್ಟರೂಪವಾಗಿ ಬಂದಿರುವುದರಿಂದ ವ್ಯಾಕರಣಾಂಶಗಳೂ ಸೇರಿದಂತಾಗಿದೆ. ಇದು ಕೋಶವಾದರೂ ಶ್ಲೋಕರೂಪದಲ್ಲಿರುವ ಕಾರಣ ಕಂಠಸ್ಥಮಾಡಿಕೊಳ್ಳಲು ಅನುಕೂಲವಾಗಿದೆ. ಸಾಂಪ್ರದಾಯಿಕ ಸಂಸ್ಕøತ ಶಿಕ್ಷಣಕ್ರಮದಲ್ಲಿ ಅಮರಕೋಶದ ಅಭ್ಯಾಸಕ್ಕೆ ಪ್ರಥಮ ಸ್ಥಾನವಿದೆ.

ಕ್ರಿ.ಶ. 6ನೆಯ ಶತಮಾನದಲ್ಲಿ ಅದುರಕೋಶ ಚೀನಿಭಾಷೆಗೆ ಅನುವಾದವಾಗಿರುವುದರಿಂದ ಅದಕ್ಕೂ ಪೂರ್ವದಲ್ಲಿ ರಚಿತವಾಗಿರಬೇಕು. ಪ್ರಾಯಶಃ ಅಮರಸಿಂಹನ ಕಾಲ 400 ಇದ್ದಿರಬಹುದು; ಏಕೆಂದರೆ ಇವನು ವಿಕ್ರಮಾಧಿತ್ಯನ ಆಸ್ಥಾನದ ನವರತ್ನಗಳಲ್ಲೊಬ್ಬನೆಂಬ ಪ್ರತೀತಿಯುಂಟು.[] ಅಮರಕೋಶದ ಮೇಲೆ ಸುಮಾರು ಐವತ್ತು ಟೀಕೆಗಳು ರಚಿತವಾಗಿವೆ. ಟೀಕಾಕಾರರಲ್ಲಿ ಕ್ಷೀರಸ್ವಾಮಿ (11ನೆಯ ಶತಮಾನ), ಸರ್ವಾನಂದ (12ನೆಯ ಶತಮಾನ), ರಾಯಮುಕುಟ (15ನೆಯ ಶತಮಾನ)-ಇವರು ನಿರ್ದೇಶಯೋಗ್ಯರು. ಭಾರತದಲ್ಲಿ ಶಬ್ದಕೋಶಗಳ ರಚನೆಯ ಬಗೆಗೆ ಒಂದು ಇತಿಹಾಸವೇ ಇದೆ. ವೇದ ಶಬ್ದಗಳನ್ನು ಸಮಾನಾರ್ಥಗಳಾಗಿರುವ ಪಟ್ಟಿಗಳಲ್ಲಿ ಅಡಕಮಾಡಿದ ರಚನೆಗಳಿಗೆ ನಿಘಂಟುಗಳೆಂದು ಹೆಸರು; ಅದರಂತೆ ವೇದಮಂತ್ರಗಳಿಗೆ 'ಅನುಕ್ರಮಾಣಿಗಳೂ ಉಂಟು. ಆದರೆ ಲೌಕಿಕ ಸಂಸ್ಕತ ಸಾಹಿತ್ಯ ಹಾಗೂ ಶಾಸ್ತ್ರಗಳಲ್ಲಿ ಬರುವ ಮುಖ್ಯ ಶಬ್ಧಗಳನ್ನೆಲ್ಲ ಸಮಾನಾರ್ಥಕ ಹಾಗೂ ನಾನಾರ್ಥಕ ಎಂಬೆರಡು ಶೀರ್ಷಿಕೆಗಳಲ್ಲಿ ಅಳವಡಿಸಿ ನಾಮಪದಗಳಿಗೆ ಲಿಂಗ ಯಾವುದೆಂಬುದನ್ನು ಕೂಡ ನಿರ್ದೇಶಿಸಲು ಹೊರಟ ರಚನೆಗಳೇ ಕೋಶಗಳು. ಸಂಸ್ಕತ ಕೋಶಕಾರರಲ್ಲಿ ಕಾತ್ಯಾಯನ, ವಾಚಸ್ಪತಿ, ವಿಕ್ರಮಾದಿತ್ಯ, ವ್ಯಾಡಿ (ಇವರ ಗ್ರಂಥಗಳು: ನಾಮಮಾಲಾ, ಶಬ್ದಾರ್ಣವ, ಸಂಸಾರಾವರ್ತ, ಉತ್ಪಲಿನೀ) ಮುಂತಾದ ಪ್ರಾವೀನ ವಿದ್ವಾಂಸರ ಉಲ್ಲೇಖಗಳಿದ್ದರೂ ಅವರ ಗ್ರಂಥಗಳು ಉಪಲಬ್ಧವಾಗಿಲ್ಲವೆಂಬ ಅಂಶವನ್ನು ಗಮನಿಸಿದಾಗ ಅಮರಕೋಶದ ಪ್ರಾಶಸ್ತ್ಯ ಇನ್ನೂ ಹೆಚ್ಚುತ್ತದೆ.

ಅಮರಕೋಶವನ್ನುಳಿದು ಅಮರಸಿಂಹ ರಚಿಸಿದ ಹೆಚ್ಚಿನ ಕೃತಿಗಳು ಈಗ ಉಪಲಬ್ಧವಿಲ್ಲ.ಅಮರಕೋಶದ ಪ್ರಥಮ ಉಲ್ಲೇಖ ಶಾಕತ್ಯಾಯನ ರಚಿಸಿದ ಅಮೋಗವೃತ್ತಿ ಎಂಬ ಕೃತಿಯಲ್ಲಿದೆ. ಇದು ಅಮೋಘವರ್ಷನ ಕಾಲ ಸುಮಾರು ೮೧೪-೮೬೭. [] ಅದ್ವೈತ ಮತಪ್ರಚಾರಕ್ಕೆಂದು ಭಾರತದಾದ್ಯಂತ ಪ್ರವಾಸದಲ್ಲಿದ್ದ ಶಂಕರಾಚಾರ್ಯರು ಅಮರಸಿಂಹನನ್ನು ಭೆಟ್ಟಿಯಾಗಬಯಸಿದಾಗ ಶಂಕರಾಚಾರ್ಯರೊಡನೆ ವಾದಕ್ಕಿಳಿಯಬಯಸದ ಅಮರಸಿಂಹನು ತನ್ನ ಎಲ್ಲ ಕೃತಿಗಳನ್ನು ಸುಟ್ಟು ಹಾಕಲು ಪ್ರಯತ್ನಿಸಿದನು. ಆಗ ಇದನ್ನು ತಿಳಿದ ಶಂಕರಾಚಾರ್ಯರು ಅವನ ಮನೆಗೆ ಧಾವಿಸಿದರು. ಅಷ್ಟು ಹೊತ್ತಿಗಾಗಲೇ ಅಮರಕೋಶವೊಂದನ್ನು ಬಿಟ್ಟು ಎಲ್ಲ ಕೃತಿಗಳು ಸುಟ್ಟು ಹೋಗಿದ್ದವು. ಈ ಸಂಗತಿಯನ್ನು ಶಂಕರದಿಗ್ವಿಜಯ ದಲ್ಲಿ ಹೇಳಲಾಗಿದೆ. ಅಮರಕೋಶವು ಸಂಸ್ಕೃತ ಭಾಶೆಯಲ್ಲಿ ರಚಿಸಿದ ನಾಮಲಿಂಗಾನುಶಾಸನ ಎಂಬ ಸಮಾನಾರ್ಥಕ ಪದಕೋಶ. ನಾಮಲಿಂಗಾನುಶಾಸನ ಕೃತಿಯನ್ನು ಅವನ ಗೌರವಾರ್ಥ ಅಮರಕೋಶ ಎಂದು ಕರೆಯುತ್ತಾರೆ. ಈ ಕೃತಿಯು ಅಮರಾನಿರ್ಜರಾದೇವಾಃ ಎಂದು ಅರಂಭವಾಗುವುದರಿಂದ ಅಮರಕೋಶ ಎಂಬ ಹೆಸರು ಬಂದಿದೆ ಎಂದೂ ಹೇಳುತ್ತಾರೆ. ನಾಮಲಿಂಗಾನುಶಾಸನ ಎಂದರೆ ನಾಮ ಮತ್ತು ಲಿಂಗಗಳನ್ನು ಕುರಿತಾದ ವ್ಯವಸ್ಥೆ ಎಂದರ್ಥ.

ಉಲ್ಲೇಖಗಳು

[ಬದಲಾಯಿಸಿ]
  1. "Amara-Simha" in Chambers's Encyclopædia. London: George Newnes, 1961, Vol. 1, p. 311.
  2. Mirashi, Vasudev Vishnu (1975). Literary and Historical Studies in Indology (in ಇಂಗ್ಲಿಷ್). Motilal Banarsidass. pp. 50–51. ISBN 9788120804173.


"https://kn.wikipedia.org/w/index.php?title=ಅಮರಸಿಂಹ&oldid=1249263" ಇಂದ ಪಡೆಯಲ್ಪಟ್ಟಿದೆ