ವಿಷಯಕ್ಕೆ ಹೋಗು

ಇಂದಿರಾ ಶಿವಣ್ಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ದೇವನಹಳ್ಳಿ ತಾಲೂಕು ವಿಜಯಪುರದಲ್ಲಿ ಜನಿಸಿದ ಇಂದಿರಾ ಶಿವಣ್ಣ ಕನ್ನಡ ಎಂ.ಎ. ಹಾಗೂ ಮಾರುಕಟ್ಟೆ ವ್ಯವಸ್ಥಾಪನೆಯಲ್ಲಿ ಪದವಿ ಪಡೆದವರು. ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದಲ್ಲಿ ಕಾರ್ಯನಿರ್ವಹಿಸಿ ಸ್ವಯಂ ನಿವೃತ್ತಿ ಪಡೆದ ಇಂದಿರಾ ಸಾಹಿತ್ಯ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ, ಕನ್ನಡ ಪುಸ್ತಕ ಪ್ರಾಧಿಕಾರ, ಗ್ರಂಥಾಲಯ ಇಲಾಖೆ, ಕರ್ನಾಟಕ ಲೇಖಕಿಯರ ಸಂಘ ಈ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿದ ಅನುಭವ ಇವರದು. ನಗರ್ತ ಮಹಿಳಾ ಸಂಘ, ಮಾರ್ಗದರ್ಶಿ, ಬಿ.ಡಾ.ಮ. ಮಹಿಳಾ ಸಂಘಟನೆಗಳ ಸ್ಥಾಪಕರೂ ಆದ ಇಂದಿರಾ ಅವರು ಹೊರತಂದಿರುವ ಕೃತಿಗಳು ೫ ಕಾದಂಬರಿಗಳು, ೩ ಕವನ ಸಂಕಲನಗಳು, ೨ ಕಥಾಸಂಕಲನಗಳು, ೨ ಪ್ರವಾಸ ಕಥನ ಹಾಗೂ ೩ ಸಂಶೋಧನ ಕೄತಿಗಳು. ಕರ್ನಾಟಕದ ಸಾಧಕಿಯರ ಜೀವನವನ್ನು ದಾಖಲಿಸುವ ಅವರ ಮಹತ್ವದ ಕಾರ್ಯದಲ್ಲಿ ಸುಮಾರ ೭೫ ಜನ ಸಾಧಕಿಯರ ಕೃತಿಗಳನ್ನು ಸಂಪಾದಿಸಿರುತ್ತಾರೆ. ಸ್ಮರಣ ಸಂಚಿಕೆ ಹಾಗೂ ಅಭಿನಂದನಾ ಗ್ರಂಥಗಳ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ಧಾರೆ. ಇವರನ್ನು ನಗರ ಪಾಲಿಕೆ ಕೆಂಪೇಗೌಡ ಪ್ರಶಸ್ತಿಯನ್ನು ಪುರಸ್ಕರಿಸಿದೆ. ಕನ್ನಡ ಸಾಹಿತ್ಯ ಪರಿಷತ್ತು, ಗೊರೂರು ಪ್ರತಿಷ್ಠಾನ ಹಾಗೂ ಕರ್ನಾಟಕ ಲೇಖಕಿಯರ ಸಂಘ ಇವರ ಕೃತಿಗಳಿಗೆ ಬಹುಮಾನ ನೀಡಿ ಪುರಸ್ಕರಿಸಿವೆ. ದೇವನಹಳ್ಳಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಗೌರವ ಪಡೆದಿದ್ದಾರೆ. ಮಹಿಳೆ ಕನ್ನಡ ಮಾಸಿಕ "ಮಂತಣಿ" ಪತ್ರಿಕೆಯನ್ನು ಹೊರತರುತ್ತಿದ್ದಾರೆ. ಬಿ.ಟಿ.ಎಂ. ಬಡಾವಣೆ ವಿಧಾನಸಭಾ ಕ್ಷೇತ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು, ಇಂಟರ್ ನ್ಯಾಷನಲ್ ಲಯನ್ಸ್ ಕ್ಲಬ್ಸ್ ಆಫ್ ಬಿ.ಟಿ.ಎಂ. ನೈಟೆಂಗೇಲ್ ಸಂಸ್ಥೆಯ ಸಕ್ರಿಯ ಸದಸ್ಯರು ಆಗಿರುತ್ತಾರೆ.