ವಿಷಯಕ್ಕೆ ಹೋಗು

ಉಮ್ಮು ಸಲಮ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಉಮ್ಮುಲ್ ಮೂಮಿನೀನ್

ಉಮ್ಮು ಸಲಮ ಹಿಂದ್ ಬಿಂತ್ ಅಬೂ ಉಮಯ್ಯ
أم سلمة هند بنت أبي أمية
ವೈಯಕ್ತಿಕ
ಜನನಕ್ರಿ.ಶ. 596
ಮರಣಕ್ರಿ.ಶ. 681
ಧರ್ಮಇಸ್ಲಾಂ ಧರ್ಮ
ಸಂಗಾತಿಮುಹಮ್ಮದ್ ಬಿನ್ ಅಬ್ದುಲ್ಲಾ
ಹೆತ್ತವರು
  • ಅಬೂ ಉಮಯ್ಯ ಬಿನ್ ಮುಗೀರ (father)
  • ಆತಿಕ ಬಿಂತ್ ಆಮಿರ್ (mother)
ವಂಶಾವಳಿಬನೂ ಮಖ್ಝೂಮ್ ಗೋತ್ರ

ಉಮ್ಮು ಸಲಮ ಹಿಂದ್ ಬಿಂತ್ ಅಬೂ ಉಮಯ್ಯ (ಅರಬ್ಬಿ: أم سلمة هند بنت أبي أمية) (ಕ್ರಿ.ಶ 596 – 681) — ಮುಹಮ್ಮದ್ ಪೈಗಂಬರರ ಆರನೇಯ ಪತ್ನಿ. ಇವರನ್ನು ಮುಸಲ್ಮಾನರು ಉಮ್ಮುಲ್ ಮೂಮಿನೀನ್ (ಅರಬ್ಬಿ: أم المؤمنين - ಅನುವಾದ. ವಿಶ್ವಾಸಿಗಳ ಮಾತೆ) ಎಂದು ಕರೆಯುತ್ತಾರೆ. ಇವರ ನಿಜವಾದ ಹೆಸರು ಹಿಂದ್ ಬಿಂತ್ ಅಬೂ ಉಮಯ್ಯ. ಉಮ್ಮು ಸಲಮ ಇವರ ಉಪನಾಮ.[]

ವಂಶಾವಳಿ

[ಬದಲಾಯಿಸಿ]

ಹಿಂದ್ ಬಿಂತ್ ಅಬೂ ಉಮಯ್ಯ ಬಿನ್ ಮುಗೀರ ಬಿನ್ ಅಬ್ದುಲ್ಲಾ ಬಿನ್ ಉಮರ್ ಬಿನ್ ಮಖ್ಝೂಮ್ ಬಿನ್ ಯಕ್‌ಝ ಬಿನ್ ಮುರ್‍ರ ಬಿನ್ ಕಅಬ್ ಬಿನ್ ಲುಅಯ್ ಬಿನ್ ಗಾಲಿಬ್ ಬಿನ್ ಫಿಹ್ರ್ ಬಿನ್ ಮಾಲಿಕ್ ಬಿನ್ ನದ್ರ್ (ಕುರೈಷ್) ಬಿನ್ ಕಿನಾನ ಬಿನ್ ಖುಝೈಮ ಬಿನ್ ಮುದ್ರಿಕ ಬಿನ್ ಇಲ್ಯಾಸ್ ಬಿನ್ ಮುದರ್ ಬಿನ್ ನಿಝಾರ್ ಬಿನ್ ಮಅದ್ ಬಿನ್ ಅದ್ನಾನ್.

ಉಮ್ಮು ಸಲಮ ಮಕ್ಕಾದಲ್ಲಿ ಹುಟ್ಟಿದರು ಮತ್ತು ಮಕ್ಕಾದಲ್ಲೇ ಬೆಳೆದರು. ಅವರು ಮಕ್ಕಾದ ಪ್ರತಿಷ್ಠಿತ ಕುರೈಷ್ ಬುಡಕಟ್ಟಿನ ಬನೂ ಮಖ್ಝೂಮ್ ಗೋತ್ರಕ್ಕೆ ಸೇರಿದವರಾಗಿದ್ದರು. ಅವರ ತಂದೆ ಅಬೂ ಉಮಯ್ಯ ಕುರೈಷ್ ಬುಡಕಟ್ಟಿನ ಮುುಖಂಡರಲ್ಲಿ ಒಬ್ಬರಾಗಿದ್ದು ದೊಡ್ಡ ಶ್ರೀಮಂತರಾಗಿದ್ದರು. ಮಕ್ಕಾದ ಜನರು ಅವರನ್ನು ಝಾದು ರ್‍ರಾಕಿಬ್ (ಪ್ರಯಾಣಿಕರಿಗೆ ಬೇಕಾದ ವ್ಯವಸ್ಥೆಗಳನ್ನು ಮಾಡಿಕೊಡುವವ) ಎಂದು ಕರೆಯುತ್ತಿದ್ದರು. ಏಕೆಂದರೆ ಯಾವುದೇ ಪ್ರಯಾಣದಲ್ಲಿ ಅವರು ತಮ್ಮ ಸಂಗಡಿಗರಿಗೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ತಾನೊಬ್ಬನೇ ಮಾಡಿಕೊಡುತ್ತಿದ್ದರು. ಅವರು ಅಷ್ಟೊಂದು ಉದಾರಿಯಾಗಿದ್ದರು. ಉಮ್ಮು ಸಲಮ ಕೂಡ ಈ ಗುಣವನ್ನು ಜನ್ಮತಃ ಪಡೆದಿದ್ದರು. ದಾನ ಮಾಡುವುದರಲ್ಲಿ ಅವರು ಎಲ್ಲರಿಗಿಂತಲೂ ಒಂದು ಹೆಜ್ಜೆ ಮುಂದಿದ್ದರು.[]

ವಿವಾಹ

[ಬದಲಾಯಿಸಿ]

ಉಮ್ಮು ಸಲಮ ಮಕ್ಕಾದ ಅತ್ಯಂತ ಸಜ್ಜನಿಕೆಯ ವ್ಯಕ್ತಿಯಾಗಿದ್ದ ಅಬೂ ಸಲಮ ಬಿನ್ ಅಬ್ದುಲ್ ಅಸದ್ ಮಖ್ಝೂಮಿಯನ್ನು ವಿವಾಹವಾದರು. ಅವರು ಮುಹಮ್ಮದ್ ರ ಅತ್ತೆ ಬರ್‍ರ ಬಿಂತ್ ಅಬ್ದುಲ್ ಮುತ್ತಲಿಬ್‌ರ ಪುತ್ರ. ಸ್ತನಪಾನ ಸಂಬಂಧದಲ್ಲಿ ಮುಹಮ್ಮದ್ ರ ಸಹೋದರ. ಏಕೆಂದರೆ ಇವರಿಬ್ಬರಿಗೆ ಸುವೈಬ ಸ್ತನಪಾನ ಮಾಡಿದ್ದರು.[]

ಇಸ್ಲಾಂ ಸ್ವೀಕಾರ

[ಬದಲಾಯಿಸಿ]

ಉಮ್ಮು ಸಲಮ ಮತ್ತು ಅವರ ಗಂಡ ಅಬೂ ಸಲಮ ಇಬ್ಬರೂ ಆರಂಭಕಾಲದಲ್ಲೇ ಇಸ್ಲಾಂ ಸ್ವೀಕರಿಸಿದ್ದರು. ಇಸ್ಲಾಂ ಸ್ವೀಕರಿಸಿದ ಬಳಿಕ ಇವರ ಸಂಬಂಧಿಕರು ಇವರನ್ನು ದ್ವೇಷಿಸತೊಡಗಿದರು. ಅಷ್ಟೇ ಅಲ್ಲ, ವಲೀದ್ ಬಿನ್ ಮುಗೀರನಂತವರು ಇವರಿಗೆ ಬಹಿರಂಗವಾಗಿ ಹಿಂಸೆ ನೀಡಿದರು. ಮಕ್ಕಾದಲ್ಲಿ ಕುರೈಷರ ಕಾಟ ಮಿತಿಮೀರಿದಾಗ ಮುಹಮ್ಮದ್ ಮುಸ್ಲಿಮರಿಗೆ ಅಬೀಸೀನಿಯಾಗೆ ವಲಸೆ ಹೋಗಲು ಆದೇಶಿಸಿದರು. ಉಮ್ಮು ಸಲಮ ಮತ್ತು ಅಬೂ ಸಲಮ ಜೊತೆಯಾಗಿ ವಲಸೆ ಹೋದರು. ಅಲ್ಲಿ ಅವರು ನೆಮ್ಮದಿಯಿಂದ ಜೀವನ ಸಾಗಿಸಿದರು. ಉಮ್ಮು ಸಲಮ ಅಬೀಸೀನಿಯಾದಲ್ಲಿ ಸಲಮ ಎಂಬ ಹೆಸರಿನ ಮಗುವಿಗೆ ಜನ್ಮ ನೀಡಿದರು. ಈ ಮಗುವಿನ ಕಾರಣದಿಂದಲೇ ತಂದೆ ತಾಯಿಗೆ ಅಬೂ ಸಲಮ ಮತ್ತು ಉಮ್ಮು ಸಲಮ ಎಂಬ ಹೆಸರು ಬಂತು.[]

ಹಿಜ್ರ

[ಬದಲಾಯಿಸಿ]

ಮಕ್ಕಾ ನಿವಾಸಿಗಳೆಲ್ಲರೂ ಇಸ್ಲಾಂ ಸ್ವೀಕರಿಸಿದರು ಎಂಬ ವದಂತಿ ಅಬೀಸೀನಿಯಾದಲ್ಲಿ ಹಬ್ಬಿದಾಗ ಅಲ್ಲಿಗೆ ವಲಸೆ ಹೋದ ಮುಸ್ಲಿಮರು ಸಂತೋಷದಿಂದ ಮಕ್ಕಾಗೆ ಮರಳಲು ನಿರ್ಧರಿಸಿದರು. ಉಮ್ಮು ಸಲಮ ಮತ್ತು ಅಬೂ ಸಲಮ ಕೂಡ ಅವರಲ್ಲಿದ್ದರು. ಆದರೆ ಮಕ್ಕಾದ ಪರಿಸ್ಥಿತಿ ಸ್ವಲ್ಪವೂ ಬದಲಾಗಿರಲಿಲ್ಲ. ಮಕ್ಕಾಗೆ ಹಿಂದಿರುಗಿದ ದಂಪತಿಗೆ ಆಘಾತ ಕಾದಿತ್ತು. ಮಕ್ಕಾ ನಿವಾಸಿಗಳು ತಮ್ಮನ್ನು ಸುಮ್ಮನೆ ಬಿಡಲಾರರು ಎಂದು ಖಾತ್ರಿಯಾದಾಗ ಅಬೂ ಸಲಮ ಮತ್ತು ಉಮ್ಮು ಸಲಮ ನೇರವಾಗಿ ಅಬೂತಾಲಿಬರ ಬಳಿಗೆ ಹೋಗಿ ಆಶ್ರಯ ಕೇಳಿದರು. ಅಬೂ ತಾಲಿಬ್ ಆಶ್ರಯ ನೀಡಿದರು. ಆದರೆ ಅಬೂ ತಾಲಿಬರ ಮರಣಾನಂತರ ಕುರೈಷರ ಕಾಟ ಪ್ರಾರಂಭಯಾಯಿತು. ಹಿಂಸೆ ಮಿತಿಮೀರಿದಾಗ ಕ್ರಿ.ಶ. 622ರಲ್ಲಿ ಮದೀನಕ್ಕೆ ಹಿಜ್ರ ಹೋಗಲು ಮುಹಮ್ಮದ್ ಮುಸಲ್ಮಾನರಿಗೆ ಆದೇಶಿಸಿದರು. ಅಬೂ ಸಲಮ ಮತ್ತು ಉಮ್ಮು ಸಲಮ ಜೊತೆಯಾಗಿ ಮದೀನಕ್ಕೆ ಹಿಜ್ರ ಮಾಡಲು ನಿರ್ಧರಿಸಿದರು. ಆದರೆ ಉಮ್ಮು ಸಲಮ ರ ಕುಟುಂಬಿಕರು ಉಮ್ಮು ಸಲಮ ರಿಗೆ ಹಿಜ್ರ ಮಾಡಲು ಬಿಡಲಿಲ್ಲ. ಪರಿಣಾಮವಾಗಿ ಅಬೂ ಸಲಮ ಒಂಟಿಯಾಗಿ ಹಿಜ್ರ ಮಾಡಿದರು. ಅಬೂ ಸಲಮರ ಕುಟುಂಬದವರು ಬಂದು ಉಮ್ಮು ಸಲಮರ ಕೈಯಲ್ಲಿದ್ದ ಮಗುವನ್ನು ಕಿತ್ತುಕೊಂಡು ಹೋದರು. ಉಮ್ಮು ಸಲಮ ಗಂಡ ಮತ್ತು ಮಗು ಇಬ್ಬರೂ ಇಲ್ಲದೆ ಏಕಾಂಗಿಯಾದರು. ಗಂಡ ಮತ್ತು ಮಗುವನ್ನು ಕಳಕೊಂಡು ತೀವ್ರ ಸಂಕಟ ಅನುಭವಿಸುತ್ತಿದ್ದ ಉಮ್ಮು ಸಲಮರನ್ನು ಕಂಡು ಅವರ ಕುಟುಂಬಿಕರ ಮನ ಕರಗಿತು. ಅವರು ಆಕೆಗೆ ಮದೀನಕ್ಕೆ ಹೋಗಲು ಅನುಮತಿ ನೀಡಿದರು. ಮಗುವನ್ನೂ ಆಕೆಯ ಕೈಗೆ ಒಪ್ಪಿಸಿದರು. ಉಮ್ಮು ಸಲಮ ಒಂಟಿಯಾಗಿ ಮದೀನಕ್ಕೆ ಹೊರಟರು. ಮಗುವಲ್ಲದೆ ಇನ್ನಾರೂ ಜೊತೆಯಲ್ಲಿರಲಿಲ್ಲ. ಆದರೆ ದಾರಿ ಮಧ್ಯೆ ಉಸ್ಮಾನ್ ಬಿನ್ ತಲ್ಹ ಅವರನ್ನು ಮದೀನಕ್ಕೆ ತಲುಪಿಸಿದರು.[]

ವಿಧವೆ

[ಬದಲಾಯಿಸಿ]

ಅಬೂ ಸಲಮ ಬದ್ರ್ ಮತ್ತು ಉಹುದ್ ಯುದ್ಧದಲ್ಲಿ ಪಾಲ್ಗೊಂಡಿದ್ದರು. ಉಹುದ್ ಯುದ್ಧದಲ್ಲಿ ಅವರಿಗೆ ಗಾಯಗಳಾಗಿದ್ದವು. ಇದರ ನಂತರ ಮುಹಮ್ಮದ್ ಅವರನ್ನು ಬನೂ ಅಸದ್ ಗೋತ್ರದವರನ್ನು ಸದೆಬಡಿಯಲು ಸೇನಾಪತಿಯಾಗಿ ನಿಯೋಗಿಸಿದರು. ಈ ಯುದ್ಧದಲ್ಲಿ ಅಬೂ ಸಲಮ ತೀವ್ರವಾಗಿ ಗಾಯಗೊಂಡರು. ಇದರ ನಂತರ ಕೆಲವೇ ಸಮಯದಲ್ಲಿ ಅವರು ಇಹಲೋಕಕ್ಕೆ ವಿದಾಯ ಕೋರಿದರು. ಉಮ್ಮು ಸಲಮ ವಿಧವೆಯಾದರು.[]

ಪ್ರವಾದಿಯೊಂದಿಗೆ ವಿವಾಹ

[ಬದಲಾಯಿಸಿ]

ಅಬೂ ಸಲಮರ ನಿಧನದ ಬಳಿಕ ಒಂಟಿಯಾಗಿ ಬದುಕುತ್ತಿದ್ದ ಉಮ್ಮು ಸಲಮರ ಬಳಿಗೆ ಅಬೂಬಕರ್ ವಿವಾಹ ಪ್ರಸ್ತಾಪ ಕಳುಹಿಸಿದರು. ಆದರೆ ಉಮ್ಮು ಸಲಮ ಅದನ್ನು ನಯವಾಗಿ ತಿರಸ್ಕರಿಸಿದರು. ನಂತರ ಉಮರ್ ವಿವಾಹ ಪ್ರಸ್ತಾಪದೊಂದಿಗೆ ಬಂದರು. ಆದರೆ ಅವರು ಅದನ್ನೂ ಒಪ್ಪಿಕೊಳ್ಳಲಿಲ್ಲ. ನಂತರ ಮುಹಮ್ಮದ್ ಅವರಿಗೆ ವಿವಾಹ ಪ್ರಸ್ತಾಪವನ್ನು ಕಳುಹಿಸಿದರು. ಉಮ್ಮು ಸಲಮ ಹೇಳಿದರು, ನನಗೆ ಮೂರು ಕೊರತೆಗಳಿವೆ. ಒಂದು ನನಗೆ ಬೇಗ ಸಿಟ್ಟು ಬರುತ್ತದೆ, ಇನ್ನೊಂದು ನಾನು ಈಗ ಯೌವನದಲ್ಲಿಲ್ಲ ಮತ್ತು ಮೂರನೆಯದು ನನಗೆ ಅನೇಕ ಮಕ್ಕಳಿದ್ದಾರೆ. ಮುಹಮ್ಮದ್ ಉತ್ತರ ನೀಡಿದರು, ನಿಮ್ಮ ಸಿಟ್ಟನ್ನು ನಿವಾರಿಸಿಕೊಡಲು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ, ನಿಮ್ಮ ವಯಸ್ಸು ನನಗೆ ಅಡ್ಡಿಯಲ್ಲ ಮತ್ತು ನಿಮ್ಮ ಮಕ್ಕಳಿಗೆ ಒಬ್ಬ ಪೋಷಕನಾಗುವ ಉದ್ದೇಶದಿಂದಲೇ ನಾನು ಈ ವಿವಾಹಕ್ಕೆ ಮುಂದಾಗಿದ್ದೇನೆ. ಉಮ್ಮು ಸಲಮ ಸಂತೋಷದಿಂದ ಒಪ್ಪಿಕೊಂಡರು. ಹೀಗೆ ಕ್ರಿ.ಶ. 626 ರಲ್ಲಿ ಅವರಿಬ್ಬರ ವಿವಾಹ ನಡೆಯಿತು.[]

ಉಮ್ಮು ಸಲಮ ಕ್ರಿ.ಶ. 681ರಲ್ಲಿ ತಮ್ಮ 84ನೇ ವಯಸ್ಸಿನಲ್ಲಿ ಇಹಲೋಕ ಯಾತ್ರೆ ಮುಗಿಸಿದರು. ಅವರನ್ನು ಬಕೀ ಕಬರಸ್ಥಾನದಲ್ಲಿ ಮುಹಮ್ಮದ್‌ರ ಇತರ ಪತ್ನಿಯರ ಬಳಿ ದಫನ ಮಾಡಲಾಯಿತು.[]

ಉಲ್ಲೇಖಗಳು

[ಬದಲಾಯಿಸಿ]
  1. ೧.೦ ೧.೧ ೧.೨ Ghadanfar, Mahmood Ahmad. Great Women of Islam (in ಇಂಗ್ಲಿಷ್). Darussalam Publishers. p. 79.
  2. Ghadanfar, Mahmood Ahmad. Great Women of Islam (in ಇಂಗ್ಲಿಷ್). Darussalam Publishers. p. 81.
  3. Ghadanfar, Mahmood Ahmad. Great Women of Islam (in ಇಂಗ್ಲಿಷ್). Darussalam Publishers. p. 86.
  4. Ghadanfar, Mahmood Ahmad. Great Women of Islam (in ಇಂಗ್ಲಿಷ್). Darussalam Publishers. p. 87.
  5. Ghadanfar, Mahmood Ahmad. Great Women of Islam (in ಇಂಗ್ಲಿಷ್). Darussalam Publishers. p. 88.
  6. Ghadanfar, Mahmood Ahmad. Great Women of Islam (in ಇಂಗ್ಲಿಷ್). Darussalam Publishers. p. 91.