ವಿಷಯಕ್ಕೆ ಹೋಗು

ಏಷ್ಯದ ಮಾನವ ಬುಡಕಟ್ಟುಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

[ಸೂಕ್ತ ಉಲ್ಲೇಖನ ಬೇಕು] ಏಷ್ಯದಲ್ಲಿ ಮುಖ್ಯವಾಗಿ ಕಾಕೇಶಿಯನ್, ಮಂಗೋಲ್ ಮತ್ತು ನೀಗ್ರೊ[] ಎಂಬ ಮೂರು ಬುಡಕಟ್ಟುಗಳಿವೆ. ಪ್ರತಿಯೊಂದು ಬುಡಕಟ್ಟಿನಲ್ಲೂ ಬೇರೆ ಬೇರೆ ವಿಭಾಗಗಳೂ ಉಪವಿಭಾಗಗಳೂ ಇವೆ. ಕಾಕೇಶಿಯನ್ ಬುಡಕಟ್ಟಿನಲ್ಲಿ ನಾರ್ಡಿಕ್, ಆಲ್ಪೈನ್ ಮತ್ತು ಮೆಡಿಟರೇನಿಯನ್; ಮಂಗೋಲಿಯನ್ ಬುಡಕಟ್ಟಿನಲ್ಲಿ ಮಂಗೋಲಿಯನ್, ಮಲೆಸಿಯನ್ ಮತ್ತು ಅಮೆರಿಕನ್ ಇಂಡಿಯನ್; ನೀಗ್ರೊ ಬುಡಕಟ್ಟಿನಲ್ಲಿ ಆಫ್ರಿಕದ ನೀಗ್ರೊ, ಮಲನೇಸಿಯ ಕಾಂಗೋದ ಪಿಗ್ಮಿ, ಏಷ್ಯದ ಪಿಗ್ಮಿ ಮತ್ತು ಹೋಟೆಂಟಾಟ್-ಇವು ವಿಭಾಗಗಳು. ಜನರ ಬಾಹ್ಯ ಲಕ್ಷಣಗಳೂ ಸಂಸ್ಕೃತಿಯೂ ಒಂದೊಂದರಲ್ಲಿಯೂ ಬೇರೆಬೇರೆಯಾಗಿವೆ.

ಜನರ ವರ್ಣನೆ

[ಬದಲಾಯಿಸಿ]

ಮೇಲ್ಕಂಡ ಎಲ್ಲ ಬುಡಕಟ್ಟುಗಳ ವಿಭಾಗಗಳೂ ಏಷ್ಯದಲ್ಲಿ ಕಂಡುಬರುತ್ತಿಲ್ಲ ಎಂದು ತಜ್ಞರು ವಾದಿಸುತ್ತಾರೆ. ಮೆಡಿಟರೇನಿಯನ್, ಮಂಗೋಲಿಯನ್ ಮತ್ತು ನೀಗ್ರೊಗಳ ಕೆಲವು ವಿಭಾಗಗಳವರು ಏಷ್ಯದಲ್ಲಿ ಅತಿಯಾಗಿ ನೆಲೆಸಿದ್ದಾರೆಂದು ಭಾವನೆಯಿದೆ. ಕಪಾಲ ಸೂಚ್ಯಂಕ, ಕಣ್ಣುಗಳ ಲಕ್ಷಣಗಳು, ಮೂಗಿನ ಸೂಚಿ, ದವಡೆ ಮುಂದಕ್ಕೆ ಚಾಚಿಕೊಂಡಿರುವ ಚಿಹ್ನೆ, ಕೂದಲಿನ ಲಕ್ಷಣ, ಚರ್ಮದ ಬಣ್ಣ, ಎತ್ತರ ಇವೇ ಮೊದಲಾದ ಆಧಾರಗಳನ್ನು ಇಟ್ಟುಕೊಂಡು, ಈ ಬುಡಕಟ್ಟುಗಳ ಹಲವು ವಿಭಾಗಗಳ ಜನ ಏಷ್ಯದಲ್ಲಿ ನೆಲೆಸಿದ್ದಾರೆಂದು ನಿರ್ಧರಿಸಲಾಗಿದೆ.

ಏಷ್ಯದಲ್ಲಿ ಮಾನವ ಬುಡಕಟ್ಟುಗಳನ್ನು ಪೂರ್ವ ಏಷ್ಯದ ಬುಡಕಟ್ಟುಗಳು, ಪಶ್ಚಿಮ ಏಷ್ಯದ ಬುಡಕಟ್ಟುಗಳು, ಏಷ್ಯದ ಆಗ್ನೇಯ ಭಾಗದ ಬುಡಕಟ್ಟುಗಳು ಮತ್ತು ಭಾರತದ ಬುಡಕಟ್ಟುಗಳು ಎಂದು ವಿಭಾಗಿಸಿದ್ದಾರೆ. ಪೂರ್ವ ಏಷ್ಯದ ಉಪವಿಭಾಗಗಳಲ್ಲಿ ಚೀನಿಯರೂ ಜಪಾನೀಯರೂ ಬಹು ಮುಖ್ಯವಾದವರು. ಚೀನಿಯರು ಮಂಗೋಲಿಯನ್ ಬುಡಕಟ್ಟಿಗೆ ಸೇರಿದವರು. ಹಾಗೆಯೇ ಜಪಾನಿನವರೂ ಮಂಗೋಲಿಯನ್ನರ ಬುಡಕಟ್ಟಿಗೆ ಸೇರಿದವರೆಂದು ಖಚಿತಪಟ್ಟಿದೆ. ಆದ್ದರಿಂದ ಈ ಎರಡು ಉಪವಿಭಾಗಗಳ ಜನರ ಬಾಹ್ಯ ರಚನೆಗಳಲ್ಲಿ ಅಷ್ಟೊಂದು ವ್ಯತ್ಯಾಸ ಕಂಡುಬರುವುದಿಲ್ಲ. ಇವೆರಡು ಉಪವಿಭಾಗಗಳ ಒಳಪಂಗಡಗಳಾದ ಉತ್ತರ ಚೀನಿಯರೂ ದಕ್ಷಿಣ ಚೀನಿಯರೂ ಟಿಬೆಟಿನವರೂ ದಕ್ಷಿಣ ಚೀನದ ಆದಿವಾಸಿಗಳೂ ಮಂಗೋಲರೂ ತುರ್ಕಿಯವರ ಕೆಲವು ಗುಂಪು ಗಳವರೂ ತುಂಗುಸರೂ ಕೊರಿಯನರೂ ಏಷ್ಯದ ಆದಿವಾಸಿಗಳೂ ಮಂಗೋಲಿಯನ್ ಬುಡಕಟ್ಟಿಗೆ ಸೇರಿದವರೆಂದು ಹೇಳಬಹುದು.

ಪೂರ್ವ ಏಷ್ಯದ ಜನರು

[ಬದಲಾಯಿಸಿ]

ಒಟ್ಟಿನಲ್ಲಿ ಪೂರ್ವ ಏಷ್ಯದ ಜನ ಎತ್ತರದಲ್ಲಿ 5’2" ದಿಂದ 5’6". ಅವರ ಮುಂಡ ಉದ್ದ. ಭುಜಗಳು ಚಾಚಿಕೊಂಡಂತೆ ಇವೆ. ಮೊಣಕೈಗಳು ತೋಳುಗಳಿಗಿಂತ ಚಿಕ್ಕವು. ಕೈಗಳೂ ಪಾದಗಳೂ ಚಿಕ್ಕವೇ. ಉಗುರುಗಳು ಬುಷ್ ಜನರ ಉಗುರುಗಳಂತಿವೆ. ಬೆನ್ನು ನೇರ, ಎದೆ ಅಗಲ, ತೊಡೆಯ ಹಿಂದಿನ ಮೇಲ್ಭಾಗ ಚಿಕ್ಕದು, ಚರ್ಮ ನುಣುಪು, ಕೇಶರಹಿತ. ತಲೆಯ ಮೇಲೆ ಮಾತ್ರ ಬಹಳ ಉದ್ದನೆಯ ಕೂದಲುಂಟು. ಕೂದಲು ಉದುರಿ ಬೋಳು ತಲೆಯಾಗುವವರೇ ವಿರಳ. ಬಹಳ ವಯಸ್ಸಾದ ಮೇಲೆ ಮಾತ್ರವೇ ತಲೆ ನರೆಯುತ್ತದೆ.

ತಲೆಯ ಆಕಾರದಲ್ಲಿ ಒಂದೊಂದು ಒಳಪಂಗಡಕ್ಕೂ ವ್ಯತ್ಯಾಸಗಳು ಕಂಡುಬರುತ್ತವೆ. ಉತ್ತರ ಚೀನೀಯರ ತಲೆಯ ಆಕಾರ ಮಧ್ಯಮವರ್ಗದ್ದು, ದಕ್ಷಿಣ ಚೀನಿಯರದು ಮೋಟು ತಲೆ. ಕೊರಿಯನ್ ಮತ್ತು ಜಪಾನೀಯರದು ಚಾಚಿಕೊಂಡಂತಿರುವ ಮೋಟು ತಲೆ. ಮಂಗೋಲಿಯನ್ನರದು ಉದ್ದ ತಲೆ. ಸಾಮಾನ್ಯವಾಗಿ ಈ ಎಲ್ಲ ಒಳಗುಂಪಿನವರ ಕಣ್ಣುಗಳು ಬೇರೆ ಬುಡಕಟ್ಟುಗಳ ಜನರ ಕಣ್ಣುಗಳಿಗಿಂತ ಸಣ್ಣವಾಗಿರುತ್ತವೆ.

ಪಶ್ಚಿಮ ಏಷ್ಯದ ಜನರು

[ಬದಲಾಯಿಸಿ]

ಪಶ್ಚಿಮ ಏಷ್ಯದ ಜನರಲ್ಲಿ ಮಂಗೋಲಿಯನ್ ಬುಡಕಟ್ಟಿನ ಲಕ್ಷಣಗಳನ್ನು ಕಾಣಬಹುದು. ಇವರ ಜೊತೆಗೆ ಫ್ರೆಂಚರು ಮತ್ತು ಗ್ರೀಕರಿಗೆ ಹೋಲುವಂಥವರ ಪಂಗಡಗಳೂ ಸೇರಿಕೊಂಡಿವೆ. ಇರಾನ್ ದೇಶದ ವಾಯವ್ಯ ಪ್ರದೇಶದಲ್ಲೂ ಆಫ್ಘಾನಿಸ್ತಾನದ ಪಶ್ಚಿಮ ಪ್ರದೇಶದಲ್ಲೂ ಮಂಗೋಲಿಯನ್ ಸಂಬಂಧ ಯಥೇಚ್ಛ. ಅರೇಬಿಯದ ಸುತ್ತಮುತ್ತ ಮೆಡಿಟರೇನಿಯನ್ನರ ಗುಂಪಿಗೆ ಸೇರಿದ ಜನರಿದ್ದಾರೆ. ದಕ್ಷಿಣ ಅರೇಬಿಯದಲ್ಲಿ ಇವರ ಜೊತೆಗೆ ನೀಗ್ರೊ ಬುಡಕಟ್ಟಿನ ಜನಗಳನ್ನೂ ಕಾಣಬಹುದು.

ಏಷ್ಯದ ಎತ್ತರ ಪ್ರದೇಶವಾಸಿಗಳು

[ಬದಲಾಯಿಸಿ]

ಮೇಲ್ಕಂಡ ಬುಡಕಟ್ಟಿನ ಜನಗಳಲ್ಲಿ ನೀಗ್ರೊಗಳನ್ನು ಬಿಟ್ಟರೆ ಉಳಿದವರ ಬಾಹ್ಯ ಲಕ್ಷಣಗಳು ಸಾಮಾನ್ಯವಾಗಿ ಒಂದೇ. ಇವರಲ್ಲಿ ಬಹು ಮಂದಿಯನ್ನು ಏಷ್ಯದ ಎತ್ತರ ಪ್ರದೇಶವಾಸಿಗಳೆಂದು (ಹೈಲ್ಯಾಂಡರ್ಸ್‌) ಕರೆಯುವವು ವಾಡಿಕೆ ಇದೆ. ಇವರ ಮೈಬಣ್ಣ ಸ್ವಲ್ಪ ಹಳದಿ. ಕೂದಲು ಕಪ್ಪು, ಮೈ ಮತ್ತು ಹುಬ್ಬುಗಳ ಮೇಲೆ ದಟ್ಟ; ತಲೆಯ ಮೇಲಿನ ಕೂದಲು ನೇರ, ಗಡ್ಡದ ಮೇಲಿನ ಕೂದಲು ಕೆಲವು ಸಾರಿ ಗುಂಗುರು. ಇವರ ದೇಹ ಗುಂಡಗಿರುತ್ತದೆ. ಎತ್ತರ 180-200 ಸೆಂಮೀ ಹಣೆ ಮುಂದಕ್ಕೆ ಚಾಚಿಕೊಂಡಂತಿರುತ್ತದೆ. ಹಣೆಗೆ ತಕ್ಕಂತೆ ದವಡೆಗಳು; ಮೂಗು ಬುಡದಲ್ಲಿ ಎತ್ತರ, ಆಮೇಲೆ ಉದ್ದ. ತುರ್ಕಿ, ಸಿರಿಯ, ಲೆಬನನ್, ಕುರ್ಡಿಸ್ತಾನಗಳಲ್ಲಿನ ಜನರಲ್ಲಿ ಈ ಲಕ್ಷಣಗಳನ್ನು ಕಾಣಬಹುದು. ಮರಳುಗಾಡಿನಲ್ಲಿ ಮತ್ತು ಗುಡ್ಡ ಗಾಡಿನಲ್ಲಿ ವಾಸವಾಗಿರುವ ಅರಬ್ಬರಲ್ಲಿ ಈ ಲಕ್ಷಣಗಳು ಮಾರ್ಪಾಡುಗೊಂಡಿರುತ್ತವೆ. ಅರಬ್ಬರಲ್ಲಿ ಅವರು ವಾಸವಾಗಿರುವ ಸನ್ನಿವೇಶಕ್ಕನು ಗುಣವಾಗಿ ಸಮಾಜ ಧೋರಣೆಗಳು ಕಂಡುಬರುತ್ತವೆ.

ರವಲ ಮತ್ತು ಷಮ್ಮಾರರು

[ಬದಲಾಯಿಸಿ]

ರವಲ ಮತ್ತು ಷಮ್ಮಾರರು ಒಂಟೆಗಳನ್ನು ಸಾಕಿ ಕೊಂಡು ತಾವು ಸಮಾಜ ಧುರೀಣರು ಎಂದು ಮೇಲ್ಮಟ್ಟದ ಜೀವನ ನಡೆಸಿಕೊಂಡು ಸಮಾಜ ದಲ್ಲಿ ಅಗ್ರಸ್ಥಾನ ಹೊಂದಿರುತ್ತಾರೆ. ಇವರಿಗಿಂತ ಕಡಿಮೆ ದರ್ಜೆಯವರು ಎಂದರೆ ಓಯಸಿಸುಗಳ ಹತ್ತಿರ ಇರುವ ಹಳ್ಳಿಗಾಡಿನವರು. ಇವರು ಆಡಂಬರವಿಲ್ಲದ ಜೀವನವನ್ನು ನಡೆಸಿಕೊಂಡು ತಮ್ಮ ತಮ್ಮ ಕಾರ್ಯಗಳಲ್ಲಿ ನಿರತರಾಗಿರುತ್ತಾರೆ. ಇವರು ಮಧ್ಯಮವರ್ಗಕ್ಕೆ ಸೇರಿದವರು. ಗುಲಾಮರೆನಿಸಿಕೊಂಡು ಸತತವೂ ಇತರರಿಗಾಗಿ ದುಡಿಯತ್ತಿರುವವರು ಕೊನೆಯ ದರ್ಜೆಗೆ ಸೇರಿದವರು.

ಬೆಡವಿನ್‌ರು

[ಬದಲಾಯಿಸಿ]

ಬೆಡವಿನ್ ಎಂಬ ಈ ಗುಂಪಿನಲ್ಲಿ ಅನೇಕ ಜನ ಒಂದೇ ರೀತಿಯಲ್ಲಿ ಕಾಣುತ್ತಾರೆ. ಇವರಿಗೂ ಎತ್ತರ ಪ್ರದೇಶವಾಸಿಗಳಿಗೂ ಅಲ್ಪಸ್ವಲ್ಪ ವ್ಯತ್ಯಾಸಗಳು ಮಾತ್ರ ಉಂಟು. ಬೆಡವಿನರ ಮೈ ಸ್ವಲ್ಪ ಸಣ್ಣ. ಕಾಲುಗಳು ಉದ್ದ. ಅವರ ಎದೆ ಸಣ್ಣ, ತಲೆ ಉದ್ದ, ಉಳಿದೆಲ್ಲ ಬಾಹ್ಯಲಕ್ಷಣಗಳಲ್ಲಿ ಬೆಡವಿನರಿಗೂ ಎತ್ತರ ನೆಲವಾಸಿಗಳಿಗೂ ಅಷ್ಟು ಹೆಚ್ಚಾದ ವ್ಯತ್ಯಾಸಗಳು ಕಂಡುಬರುವುದಿಲ್ಲ. ಸಮಾಜದಲ್ಲಿ ಅಗ್ರಸ್ಥಾನವನ್ನು ಪಡೆದ ಮೊದಲನೆಯ ದರ್ಜೆಯವರು ದಾಯಾದಿಗಳಲ್ಲೇ ಮದುವೆಯ ಸಂಬಂಧ ಬೆಳೆಸುತ್ತಾರೆ. ತಮ್ಮ ಚಿಕ್ಕಪ್ಪನ ಮಕ್ಕಳನ್ನೇ ಅವರು ಮದುವೆಯಾಗುವುದರಿಂದ ಬಾಹ್ಯರೂಪಗಳಲ್ಲಿ ಹೆಚ್ಚು ವ್ಯತ್ಯಾಸಗಳಿಲ್ಲ.

ಸಲುಬ್ಬರು

[ಬದಲಾಯಿಸಿ]

ಸಲುಬ್ಬರು ಬೆಡವಿನರ ಹತ್ತಿರ ಕೂಲಿ ಕೆಲಸ ಮಾಡಿಕೊಂಡಿರುತ್ತಾರೆ. ಇವರ ಮೈ ನುಣುಪು, ದವಡೆಗಳು ಸಣ್ಣ, ಕೋಲುಮುಖ. ಹೆಚ್ಚು ಕೂದಲಿಲ್ಲ. ಇವರು ಇಲ್ಲಿಯ ಆದಿವಾಸಿಗಳ ಗುಂಪಿಗೆ ಸೇರಿದವರು. ಈ ಭಾಗದಲ್ಲಿರುವ ಜಿಪ್ಸಿಗಳು ಕೂಲಿ ಕೆಲಸವನ್ನು ಸಣ್ಣ ಪುಟ್ಟ ವ್ಯಾಪಾರಗಳನ್ನೂ ಮಾಡಿಕೊಂಡಿರುತ್ತಾರೆ. ಆದರೆ ಇವರ ಸಂಖ್ಯೆ ಅತಿ ಕಡಿಮೆ. ಅರೇಬಿಯದ ದಕ್ಷಿಣದ ಕಡೆಗೆ ಬೇಸಿಗೆಯಲ್ಲಿ ಮಳೆ ಬೀಳುವುದರಿಂದ ವ್ಯವಸಾಯದ ಕೆಲಸವನ್ನು ಮಾಡಲು ಅಲ್ಲಿನ ಜನಾಂಗಕ್ಕೆ ಬಹಳ ಅನುಕೂಲವಾಗಿದೆ. ಇಲ್ಲಿ ವಾಸವಾಗಿರುವ ಜನಾಂಗ ಬೆಡವಿನರಿಗಿಂತ ಕುಳ್ಳು, ಹೆಚ್ಚು ಹಳದಿ. ಈ ಭಾಗದಲ್ಲಿರುವ ತಿಹಮ ಎಂಬ ಸ್ಥಳದಲ್ಲಿ ಅವರು ನೀಗ್ರೊಗಳನ್ನು ದುಡಿಸಿಕೊಂಡು ಜೀವನ ಮಾಡುತ್ತಾರೆ. ಇಲ್ಲಿನ ಸುತ್ತಮುತ್ತಲಿನ ರೇವುಪಟ್ಟಣಗಳಲ್ಲಿ ಇತರರೂ ಉಂಟು. ಇವರು ಅಲ್ಲಿನ ಆದಿವಾಸಿಗಳೊಂದಿಗೆ ಹೊಂದಿಕೊಂಡು ಕೂಲಿ ಕೆಲಸ ಮಾಡಿ ಜೀವನ ನಡೆಸುತ್ತಾರೆ.

ಏಷ್ಯದ ಆಗ್ನೇಯ ಭಾಗದ ಬುಡಕಟ್ಟಿನ ಜನರು

[ಬದಲಾಯಿಸಿ]

ಏಷ್ಯದ ಆಗ್ನೇಯ ಭಾಗದ ಬುಡಕಟ್ಟಿನ ಜನ ಟಿಬೆಟಿನ ಮತ್ತು ಚೀನದ ದಕ್ಷಿಣಕ್ಕೂ ಹೆಚ್ಚಾಗಿ ವಾಸವಾಗಿದ್ದಾರೆ. ಇವರಲ್ಲಿ ಬರ್ಮೀಯರು, ಮಿಯಾವೊ, ಯಾವೊ, ಲ್ಯಾವೋಟ್ ಮತ್ತು ಮೊಂಟಗ್ನಾರ್ಡರು ಸೇರಿದ್ದಾರೆ. ಥಿಯಾಸರೂ, ಲ್ಯಾವೋಟರೂ, ವಿಯೆಟ್ನಾಮರೂ, ಕಾಂಬೋಡಿಯದ ಖ್ಮೇರರೂ, ಮಯನ್ಮಾರ್, ಮಾನ್ಸರೂ, ಮಲಯದವರೂ, ಇಂಡೋನೇಷ್ಯದವರೂ ಈ ಗುಂಪಿಗೆ ಸೇರಿದವರು. ಯುಂಬ್ರಿ, ಶಕೈ, ಪುನನ್ಯ, ಕುಬು ಮತ್ತು ಲುಬು ಷಾಮ್ಪೆನ್ ಜನರೂ ಇವರ ಲಕ್ಷಣಗಳನ್ನೇ ಹೊಂದಿದ್ದಾರೆ. ಲುಜನ್, ಮಿಂಡನ್ಪೊ ಮತ್ತು ಪಲವನ್ ಪ್ರದೇಶಗಳಲ್ಲಿ ವಾಸಿಸುವರು. ಕಾಡುಜನರಂತೆಯೇ ಇದ್ದಾರೆ. ನೀರಿನ ಹಳ್ಳಗಳನ್ನು ತೋಡುವುದರಲ್ಲೂ ತರಕಾರಿ ಸಂಗ್ರಹಿಸಿ ಮಾರುವುದರಲ್ಲೂ ಸಣ್ಣಪುಟ್ಟ ಮೃಗಗಳನ್ನು ಬೇಟೆಯಾಡುವುದರಲ್ಲೂ ಅವರು ನಿಪುಣರು. ಮೈಬಣ್ಣ ಹಳದಿ ಮಿಶ್ರಿತ ಕಂದು. ಕೆಲವರ ಮೈಬಣ್ಣ ಕಪ್ಪು. ತಲೆಕೂದಲು ಗುಂಗುರು. ಮುಖ ಆಸ್ಟ್ರೇಲಿಯದ ಆದಿವಾಸಿಗಳದಿದ್ದಂತೆ. ಮಲೆಯದ ಮಾಂಗರು ಇವರಿಗಿಂತ ಎತ್ತರ. ಅವರ ಮೈಬಣ್ಣ ಕಪ್ಪು. ಅವರ ಹೆಂಗಸರ ಮುಖ ಮಕ್ಕಳ ಮುಖದಂತೆ ಕಾಣಿಸುತ್ತದೆ.

ಜರವರು

[ಬದಲಾಯಿಸಿ]

ಅಂಡಮಾನದ ಬುಡಕಟ್ಟಿನವರಲ್ಲಿ ಜರವರೂ ಬಂಗೆ ಎಂಬ ಪಂಗಡಗಳೂ ಮುಖ್ಯ. ಇವರಲ್ಲಿ ಜರವರು ಜಗಳಗಂಟಿಗಳು, ಶುದ್ದ ಒರಟರು. ಇವರು ಸಾಮಾನ್ಯವಾಗಿ 140 ಸೆಂಮೀ ಎತ್ತರ. ಇವರ ಮೈ ಕಪ್ಪು. ಕೂದಲು ಗುಂಗುರು. ಇಲ್ಲಿರುವ ಯುಂಬ್ರಿ ಎಂಬ ಬೇಟೆಯಾಡುವ ಜನರ ಸಂಖ್ಯೆ ಕಡಿಮೆಯಾಗಿದೆ. ಉಳಿದಿರುವ ಅಲ್ಪಸ್ವಲ್ಪ ಜನಸಂಖ್ಯೆಯೂ ರೋಗಕ್ಕೆ ಬಲಿಯಾಗುತ್ತಿದೆ. ಬೋರ್ನಿಯೊದ ಪುನನರು ಯುಂಬ್ರಿಯರಿಗಿಂತ ಹೆಚ್ಚು ಆರೋಗ್ಯವಂತರು. ಬೇಟೆಯೂ ವ್ಯವಸಾಯವೂ ಶಕೈಯರ ಕಸುಬು. ಕುಬು ಮತ್ತು ಬುಲು ಜನ ಕಾಡಿನಲ್ಲಿ ಸಿಕ್ಕುವ ಗೋಂದು, ಮೇಣ ಮುಂತಾದವನ್ನು ಮಾರಿ ಬಟ್ಟೆ, ಚಾಕು ಮುಂತಾದವನ್ನು ಕೊಂಡು ಜೀವನ ಸಾಗಿಸುತ್ತಾರೆ. ಷಾಂಪೆನರು ನಿಕೋಬಾರ್ ದ್ವೀಪವಾಸಿಗಳು. ಕಾಡು ಜನರಂತೆಯೇ ಇವರ ವರ್ತನೆ.

ಮಯನ್ಮಾರ್ ಮಾನ್ಯರು ಮತ್ತು ಇಂಡೋನೇಷ್ಯರು

[ಬದಲಾಯಿಸಿ]

ಕಾಂಬೋಡಿಯನರು, ಥೈಗಳು, ಮಯನ್ಮಾರ್ ಮಾನ್ಯರು ಮತ್ತು ಇಂಡೋನೇಷ್ಯರು ಸಾಮಾನ್ಯವಾಗಿ ಕುಳ್ಳರು. 155-158ಸೆಂಮೀ ಎತ್ತರ. ಇವರು ಅಷ್ಟೇನೂ ಸ್ಥೂಲಕಾಯರಲ್ಲ. ಮೈ ಹಳದಿ ಅಥವಾ ಕಂದು ಬಣ್ಣ. ಕೂದಲು ನೇರ. ಇವರ ಮುಖ ಮಂಗೋಲಿಯನರ ಮುಖದಂತೆ. ಅಗಲವಾಗಿರುವುದಿಲ್ಲ.

ಕಾಂಬೋಡಿಯನರು

[ಬದಲಾಯಿಸಿ]

ಕಾಂಬೋಡಿಯನರ ಮೈಬಣ್ಣ ಬಹಳ ಕಂದು, ಮೂಗು ಅಗಲ. ಅವರದು ಗುಂಗುರು ಕೂದಲು. ಬರ್ಮೀಯರು ಮಂಗೋಲಿಯನರ ಬಾಹ್ಯಲಕ್ಷಣ ಗಳನ್ನೇ ಹೊಂದಿದ್ದಾರೆ. ಇಂಡೊನೇಷ್ಯರು ಮಂಗೋಲ್ ಮತ್ತು ಆಸ್ಟ್ರಲಾಯ್ಡರ ಬೆರಕೆಯ ಗುಣ ಹೊಂದಿದ್ದಾರೆ. ಇವರ ಜೊತೆಗೆ ಇಂಡೊನೇಷ್ಯದಲ್ಲಿ ನೀಗ್ರೊ ಬುಡಕಟ್ಟಿಗೆ ಸೇರಿದವರೂ ಉಂಟು.

ಮಂಗೋಲಾಯಿಡ್ ಜನರು

[ಬದಲಾಯಿಸಿ]

ಟಿಬೆಟಿಗೆ ಸೇರಿದ ಮಂಗೋಲಾಯಿಡ್ ಜನ ಬಹು ಹಿಂದಿನ ಕಾಲದಿಂದ ಹಿಮಾಲಯ ಪರ್ವತದ ಸುತ್ತ ಮುತ್ತಲೂ ವಾಸವಾಗಿದ್ದಾರೆ. ಅವರು ಭಾರತದಲ್ಲಿ ನೆಲೆಸಿದ್ದು ಯಾವಾಗ ಎಂಬುದನ್ನು ಖಚಿತ ಪಡಿಸುವುದು ಕಷ್ಟವಾಗಿದೆ. ಹರಪ್ಪ ಸಂಸ್ಕೃತಿಯ ಕಾಲದಿಂದಲೂ ಅವರು ಇಲ್ಲಿ ನೆಲೆಸಿದ್ದಾರೆಂದು ಹೇಳಿದರೆ ತಪ್ಪಾಗಲಾರದು. ಮುಂಡ ಮಾತನಾಡುವವರು ಛೋಟಾನಾಗಪುರದ ಬೆಟ್ಟ ಗಳಲ್ಲಿಯೂ ಇತರ ಗುಡ್ಡಗಾಡು ಗಳಲ್ಲಿಯೂ ವಾಸವಾಗಿದ್ದಾರೆ. ಇವರು ಆಗ್ನೇಯ ಏಷ್ಯದ ಬುಡಕಟ್ಟಿಗೆ ಸೇರಿದವರಾಗಿ, ಆರ್ಯರು ಭಾರತಕ್ಕೆ ಬರುವುದಕ್ಕೆ ಮೊದಲೇ ಬಂದು ನೆಲೆಸಿದ್ದರೆಂದು ಹೇಳಲಾಗಿದೆ. ಅಸ್ಸಾಮಿನ ಖಾಸಿ ಜನರೂ ಈ ಗುಂಪಿಗೆ ಸೇರಿದವರು. ಈ ಗುಂಪುಗಳಲ್ಲದೆ ನಿಜವಾದ ಆದಿವಾಸಿಗಳೆಂದು ಪರಿಗಣಿಸಲಾಗಿರುವ ಬೇಟೆಗಾರರು ಮತ್ತು ಕಾಡುಜನರ ಗುಂಪುಗಳು ಇಲ್ಲಿ ವಾಸವಾಗಿವೆ. ಇವರ ಮೇಲೆ ದಂಡೆತ್ತಿಬಂದ ಹಲವಾರು ಗುಂಪು ಗಳು ಇವರನ್ನು ಗುಡ್ಡಗಾಡುಗಳಿಗೂ ಅರಣ್ಯಗಳಿಗೂ ಓಡಿಸಿದುವು. ಇವರ ಬಾಹ್ಯರೂಪಗಳನ್ನು ನೋಡಿದರೆ ಇವರು ಬೇರೆ ಬುಡಕಟ್ಟಿನ ಜನಗಳೊಂದಿಗೆ ಅತಿಯಾಗಿ ಮಿಶ್ರ ವಾಗಿಲ್ಲವೆಂದು ತಿಳಿದುಬರುತ್ತದೆ.

ಒಡ್ಡರು

[ಬದಲಾಯಿಸಿ]

ಗುಡ್ಡಗಾಡಿನ ಮತ್ತು ಕಾಡುಗಳ ಜನರಾದ ಒಡ್ಡರು (ವೆಡ್ಡರು) ಈಗಲೂ ಶ್ರೀಲಂಕ ದ್ವೀಪದಲ್ಲಿದ್ದಾರೆ. ಇವರು ಹೆಚ್ಚಾಗಿ ಇತರ ಗುಂಪಗಳೊಂದಿಗೆ ಸಮ್ಮಿಳನವಾಗಿಲ್ಲ. ಸುಮಾರು 400 ವರ್ಷಗಳ ಹಿಂದೆ ಒಡ್ಡರು ಶ್ರೀಲಂಕದ ಬಹುಭಾಗದ ಕಾಡುಗಳಲ್ಲಿ ವಾಸವಾಗಿದ್ದರು. ಇವರೇ ಶ್ರೀಲಂಕದ ಆದಿವಾಸಿಗಳೆಂದು ಖಚಿತಪಟ್ಟಿದೆ. ಇವರು ಕುಳ್ಳರು; ಸುಮಾರು 154 ಸೆಂಮೀ ಎತ್ತರ. ಕಾಡಿನಲ್ಲಿ ಸಂಚರಿಸುವುದೆಂದರೆ ಇವರಿಗೆ ಹೆಚ್ಚು ಪ್ರೀತಿ. ಇವರು ಬಹುಕಾಲದ ಹಿಂದೆ, ಕಾಕಸಾಯಿಡರ ಮತ್ತು ಆಸ್ಟ್ರಲಾಯಿಡರ ಮಿಶ್ರತೆಯಿಂದ ಉದ್ಭವಿಸಿದ್ದಾರೆಂದು ತಜ್ಞರು ವಾದಿಸುತ್ತಾರೆ.

ಕೇರಳದ ಉರುಲಿಸರು

[ಬದಲಾಯಿಸಿ]

ಕೇರಳದ ಉರುಲಿಸರು ಆಸ್ಟ್ರಲಾಯಿಡರ ಗುಂಪಿಗೂ ಛೋಟಾನಾಗಪುರದ ಬಿರ್ಹೋರರು ಕಾಕಸಾಯಿಡರ ಗುಂಪಿಗೂ ಸೇರಿದವರು. ಕೇರಳದ ಅಣ್ಣಾಮಲೆಯಲ್ಲಿರುವ ಕಾಡರರು ಕೆಲವು ಮಿಶ್ರಿತ ಬುಡಕಟ್ಟುಗಳಿಗೆ ಸೇರಿದವರು. 1941ರಲ್ಲಿ ಇವರ ಸಂಖ್ಯೆ 566. ಇವರು ಗೆಡ್ಡೆಗೆಣಸುಗಳನ್ನು ತಿಂದು, ಜೇನುತುಪ್ಪವನ್ನು ಮಾರಿ ಜೀವನ ನಡೆಸುತ್ತಾರೆ. ಇವರಲ್ಲಿ ತಮ್ಮ ಚಿಕ್ಕಪ್ಪನ ಮಗಳನ್ನು ಮದುವೆಯಾಗುವುದು ರೂಢಿ. ಬಹುಪತೀತ್ವ ಇವರಲ್ಲಿರುವ ಪದ್ಧತಿ. ಇವರು ಕುಳ್ಳರು; ಚಾಕಲೇಟ್ ಬಣ್ಣದವರು. ಇವರದು ಗುಂಗುರ ಕೂದಲು, ಇವರನ್ನು ಆಸ್ಟ್ರಲಾಯಿಡ್ ಗುಂಪಿಗೆ ಸೇರಿದವರೆಂದು ಹೇಳಬಹುದು. ಬಿಹಾರದ ದಕ್ಷಿಣ ಭಾಗದ ಛೋಟಾನಾಗಪುರದ ಬೆಟ್ಟಗಳಲ್ಲೂ ಈ ಬೆಟ್ಟಗಳ ಸುತ್ತಮುತ್ತಲಿನ ಹಳ್ಳಿಗಳಲ್ಲೂ ವಾಸವಾಗಿರುವ ಜನ ಮುಂಡ, ಸಂತಾಲ ಮುಂತಾದ ಭಾಷೆಗಳನ್ನಾಡುತ್ತಾರೆ. ಅವರು ಭೂವ್ಯವಸಾಯದಲ್ಲಿ ತೊಡಗಿದ್ದಾರೆ. ಎತ್ತರ ಸರಾಸರಿ 157 ಸೆಂಮೀ ಸಣ್ಣ ಮತ್ತು ಉದ್ದ ತಲೆ. ಕಂದುಬಣ್ಣದ ಮೈ. ಮೂಗಿನ ಬುಡ ಅಗಲ. ಮೈಮೇಲೆ ಹೆಚ್ಚು ಕೂದಲಿಲ್ಲ. ಅನೇಕರಿಗೆ ತುಟಿಗಳು ದಪ್ಪವಾಗಿವೆ. ಇವರು ಮಲೆನೇಸಿಯನರಂತೆ ಬಾಹ್ಯರೂಪರೇಖೆ ಪಡೆದಿದ್ದಾರೆ.

ಸಂತಾಲರು

[ಬದಲಾಯಿಸಿ]

ಖಾಸಿಬೆಟ್ಟಗಳಲ್ಲಿ ವಾಸವಾಗಿರುವವರು ಹೆಚ್ಚುಕಡಿಮೆ, ಸಂತಾಲರ ಗುಂಪಿಗೆ ಸೇರಿದವರು. ಇವರು ಆಗ್ನೇಯ ಏಷ್ಯದಿಂದ ಭಾರತಕ್ಕೆ ವಲಸೆ ಬಂದು ವ್ಯವಸಾಯ ಉದ್ಯಮಗಳಲ್ಲಿ ನಿರತರಾಗಿದ್ದಾರೆ. ಇವರು ಸು. 1520ಸೆಂಮೀ ಎತ್ತರದಲ್ಲಿರುವ ಬೆಟ್ಟಗಳಲ್ಲಿ ಚಳಿ, ಮಳೆ ಮತ್ತು ಮೋಡಗಳನ್ನೊಳ ಗೊಂಡ ಸನ್ನಿವೇಶದಲ್ಲಿ ತಮ್ಮ ದಿನಚರಿಯ ಕೆಲಸಗಳನ್ನು ಸಾಗಿಸಿ ಕೊಂಡು ಹೋಗುತ್ತಿದ್ದಾರೆ. ಇವರ ಮುಂಡ ಉದ್ದ, ಕಾಲುಗಳು ಮೋಟು, ಮುಖ ಮತ್ತು ಮೂಗು ದೊಡ್ಡವು. ಇವರದು ಹಳದಿ ಅಥವಾ ಕೆಂಪು ಮಿಶ್ರಿತ. ಕಂದು ಬಣ್ಣ ಮೈ. ಕೂದಲು ನೇರ, ಸು. ಶೇ. 60ರಷ್ಟು ಜನರ ಕಣ್ಣರೆಪ್ಪೆಗಳು ಮುಚ್ಚಿಕೊಂಡಂತೆ ಇರುತ್ತವೆ. ಒಟ್ಟಿನಲ್ಲಿ ಮಂಗೊಲಾಯಿಡರ ಬಾಹ್ಯ ಲಕ್ಷಣಗಳು ಅವರಲ್ಲಿ ಅತಿಯಾಗಿಯೂ, ಆಸ್ಟ್ರಲಾಯಿಡರ ಲಕ್ಷಣ ಸ್ವಲ್ಪ ಕಡಿಮೆಯಾಗಿಯೂ ಇರುವುದೆಂದು ಹೇಳಬಹುದು. ಗೇರೋ ಬೆಟ್ಟಗಳಲ್ಲಿ ವಾಸಿಸುವ ಗೇರೋ ಜನರೂ ಮಂಗೊಲಾಯಿಡರ ಮತ್ತು ಆಸ್ಟ್ರಲಾಯಿಡರ ಮಿಶ್ರವೆಂದು ಖಚಿತವಾಗಿ ಹೇಳಬಹುದು. ಇವರಿಬ್ಬರಿಗೂ ಹೆಚ್ಚು ವ್ಯತ್ಯಾಸಗಳು ಕಂಡುಬಂದಿಲ್ಲ.

ದ್ರಾವಿಡರು

[ಬದಲಾಯಿಸಿ]

ದಕ್ಷಿಣ ಭಾರತದಲ್ಲಿ ದ್ರಾವಿಡ ಭಾಷೆಗಳಾದ ತಮಿಳು, ತೆಲುಗು, ಕನ್ನಡ, ಮಲೆಯಾಳಂ ಮತ್ತು ತುಳು ಬಳಕೆಯಲ್ಲಿವೆ, ದ್ರಾವಿಡರು 160-166 ಸೆಂಮೀ ಬೆಳೆಯುತ್ತಾರೆಂದೂ ಕಪ್ಪು ಮೈಬಣ್ಣದಿಂದ ಮೊದಲ್ಗೊಂಡು ಕಪ್ಪು ಮಿಶ್ರಿತ ಕಂದು ಬಣ್ಣದವರಾಗಿ ಇರುತ್ತಾರೆಂದೂ ಹೇಳಲಾಗಿದೆ. ಇವರು ಕಣ್ಣುಗಳು ಸಾಮಾನ್ಯವಾಗಿ ಕಪ್ಪುಗುಡ್ಡೆಗಳುಳ್ಳವವಾಗಿ ಚರ್ಮದ ಬಣ್ಣಕ್ಕೆ ಹೋಲಿಕೆಯಾಗುತ್ತವೆ. ತಲೆ ಕೂದಲು ಕಪ್ಪಾಗಿಯೂ ಅಂದವಾಗಿಯೂ ಹೆಚ್ಚಾಗಿಯೂ ಇರುತ್ತದೆ. ಒಟ್ಟಿನಲ್ಲಿ ದ್ರಾವಿಡ ಪಂಗಡದವರು ಕಾಕಸಾಯಿಡರ ಬಾಹ್ಯಗುಣಗಳುಳ್ಳವರಾಗಿದ್ದಾರೆಂದೂ ಅವರ ಬುಡಕಟ್ಟಿಗೆ ಸೇರಿದ್ದಾರೆಂದೂ ಹೇಳಬಹುದು.

ಮಂಗೊಲಾಯಿಡರು

[ಬದಲಾಯಿಸಿ]

ಹಿಮಾಲಯದ ತಪ್ಪಲಲ್ಲಿ ವಾಸವಾಗಿರುವ ಮಂಗೊಲಾಯಿಡರ ವಿಭಾಗಕ್ಕೆ ಸೇರಿದವರು ಆರ್ಯರಿಗಿಂತ ಹಿಂದೆಯೇ ಪಾಕಿಸ್ತಾನ, ನೇಪಾಳ, ಸಿಕ್ಕಿಂ, ಭೂತಾನಗಳಲ್ಲಿ ನೆಲೆಸಿದ್ದರು. ಇವರೆಲ್ಲರನ್ನೂ ಭೂಟಿಯರು ಮತ್ತು ಬೆಟ್ಟದಲ್ಲಿ ವಾಸವಾಗಿರುವ ಜನರೆಂದು ವಿಭಾಗಿಸಬಹುದು. ಭೂಟಿಯರನ್ನು ಷೆರ್ವಾಸರೆಂದೂ ಭೂತಾನಿಗಳೆಂದೂ ಕರೆಯುವುದು ವಾಡಿಕೆ. ಮಂಗೋಲಾಯಿಡ್ ವಿಭಾಗಕ್ಕೆ ಸೇರಿದ ಇವರು ಅತಿ ಎತ್ತರವಾದ ಸ್ಥಳದಲ್ಲಿ, ಅಂದರೆ ಸು. 250 ಸೆಂಮೀಗಳ ಮೇಲೆ, ವಾಸವಾಗಿದ್ದಾರೆ, ಉದ್ದ ಮುಂಡ, ಉದ್ದ ಮತ್ತು ಅಗಲ ತಲೆ, ಮಂಗೋಲಾಯಿಡರ ಕಣ್ಣುಗಳಂತೆ ಕಣ್ಣು, ಅಗಲ ಮುಖ - ಇವು ಇವರ ಬಾಹ್ಯಲಕ್ಷಣಗಳು. ಇವರಲ್ಲಿ ಕೆಲವರ ಕೈಗಳು ಮತ್ತು ಕಾಲುಗಳು ಉದ್ದವಾಗಿ ಇರುವುದೂ ಉಂಟು. ಕಾಫಿರ್, ಲಹುಲಿ, ಮಂಚಾಟಿಸ್, ಕನವಾರ್, ದತ್ತಿಯಲ್, ಮಾಗ, ಗುರುಂಗ, ತಮಂಗ, ತರುವ, ರಿಯಾಸ, ಲುಂಬುಸ ಮತ್ತು ಲೆಪ್ಪಸರು ಹಿಮಾಲಯದ ಗುಡ್ಡಗಾಡುಗಳಲ್ಲಿ ವಾಸಿಸುತ್ತಾರೆ. ಇವರೂ ಮಂಗೋಲಾಯಿಡ್ ಮತ್ತು ಕಾಕಸಾಯಿಡ್ ಮಿಶ್ರಿತರು.

ನ್ಯೂಯರು

[ಬದಲಾಯಿಸಿ]

ನ್ಯೂಯರು ಖಟ್ಮಂಡುವಿನ ಕಣಿವೆಯ ಹಲವು ಭಾಗಗಳಲ್ಲಿ ವಾಸವಾಗಿದ್ದಾರೆ. ಅವರ ಮೈಬಣ್ಣ ಸುಮಾರು ಹಳದಿ; ಚೀನೀಯರಂತೆ ಕಾಣಿಸುತ್ತಾರೆ. ಅವರ ಸಮೀಪದಲ್ಲೇ ವಾಸವಾಗಿರುವ ಖಾಸರ ಭಾಷೆ ನೇಪಾಲ, ಮೊಗಲರ ಕಾಲದಲ್ಲಿ ಕೆಲವು ರಜಪುತರು ಉತ್ತರ ದಿಕ್ಕಿಗೆ ಹೋಗಿ ಅಲ್ಲಿ ನೆಲೆಸಿ ರಾಜ್ಯ ಕಟ್ಟಿ ಆಮೇಲೆ ಅಲ್ಲಿನ ಜನಗಳಲ್ಲಿ ಮಿಶ್ರಿತರಾಗಿ ಹೋದರು. ಅವರು ಈಗಿನ ಖಾಸರು.

ನಾಗರು

[ಬದಲಾಯಿಸಿ]

ಮಯನ್ಮಾರ್ ಉತ್ತರಭಾಗದ ಪರ್ವತ ಶ್ರೇಣಿಯ ತಪ್ಪಲಲ್ಲಿ ವಾಸವಾಗಿರುವ ನಾಗರು ಕೆಂಪು ಮಿಶ್ರಿತ ಕಂದುಬಣ್ಣದವರು. ಅವರು ಏಷ್ಯದ ಮಂಗೊಲಾಯಿಡ್ ಗುಂಪಿಗೆ ಸೇರಿದವರು; ಅಮೆರಿಕದ ರೆಡ್ ಇಂಡಿಯನರಂತೆ ಕಾಣಿಸುತ್ತಾರೆ. ಈ ಪಂಗಡಗಳನ್ನು ಬಿಟ್ಟರೆ ಉಳಿದೆಲ್ಲ ಜನರೂ ಅಖಂಡ ಭಾರತದಲ್ಲಿ ಕಾಕಸಾಯಿಡರ ಗುಂಪಿಗೆ ಸೇರಿದವರು. ಇವರೆಲ್ಲರೂ ಪಶ್ಚಿಮ ಏಷ್ಯದಿಂದ ವಲಸೆ ಬಂದವರ ವಂಶಕ್ಕೆ ಸೇರಿದವರು. ಅವರು ಇಲ್ಲಿನ ಮೂಲವಾಸಿಗಳೊಂದಿಗೆ ಮಿಶ್ರಗೊಂಡು, ಭಾರತದ ವಾಯುಗುಣ ಭೂಲಕ್ಷಣಗಳಿಗೆ ತಕ್ಕಂತೆ ಪರಿವರ್ತನೆಗೊಂಡರು.

ಉಲ್ಲೇಖಗಳು

[ಬದಲಾಯಿಸಿ]
  1. "ಆರ್ಕೈವ್ ನಕಲು". Archived from the original on 2016-12-10. Retrieved 2016-11-19.