ಏಷ್ಯಾ ಅರ್ಥ ವ್ಯವಸ್ಥೆ
ಏಷ್ಯದ ಅರ್ಥವ್ಯವಸ್ಥೆ: ಪ್ರಪಂಚದ ಶೇ.55ರಷ್ಟು ಜನ ಏಷ್ಯದಲ್ಲಿದ್ದಾರೆ. ಆದರೆ ಇವರು ಪ್ರಪಂಚದ ಒಟ್ಟು ಸಂಪತ್ತು ಮತ್ತು ಉತ್ಪನ್ನದ ಕೇವಲ 1/10 ಅಂಶವನ್ನು ಮಾತ್ರ ಅನುಭೋಗಿಸುತ್ತಿದ್ದಾರೆ. ಇದು ಈ ಖಂಡದ ಆರ್ಥಿಕ ಸ್ಥಿತಿಯ ಸ್ಥೂಲ ಚಿತ್ರ. ಈ ಖಂಡವೆಂದೊಡನೆ ಆರ್ಥಿಕ ಬೆಳೆವಣಿಗೆಯ ಸಿದ್ಧಾಂತಗಳಿಗೆ ತೊಡಕಾಗಿ, ವಿವಿಧ ಹಾಗೂ ಜಟಿಲ ಆರ್ಥಿಕ ಪ್ರಯೋಗದಲ್ಲಿ ತೊಡಗಿರುವ ರಾಷ್ಟ್ರಗಳ ಚಿತ್ರ ಮೂಡುತ್ತದೆ. ಆರ್ಥಿಕ ಪ್ರಗತಿಗೆ ಇರುವ ಸಮಸ್ಯೆಗಳು ಅನೇಕ ಹಾಗೂ ಜಟಿಲ. ಕೃಷಿಯೇ ಪ್ರಧಾನವಾದ ಈ ಖಂಡದಲ್ಲೆ ಶೇ. 70-80ರಷ್ಟು ಜನ ಪ್ರಾಚೀನ ನಂಬಿಕೆಗಳಿಗೆ ಅಂಟಿಕೊಂಡಿರುವಂಥವರು.ಎರಡನೆಯ ಮಹಾಯುದ್ಧದ ಅನಂತರದಲ್ಲಿ ಮಾತ್ರ ಇಲ್ಲಿನ ಅನೇಕ ರಾಷ್ಟ್ರಗಳು ಪ್ರಗತಿಯ ಪ್ರಯತ್ನದಲ್ಲಿ ತೊಡಗಿವೆ.
ಏಷ್ಯದ ಅರ್ಥವ್ಯವಸ್ಥೆಯಲ್ಲಿ ಒಂದು ರಾಷ್ಟ್ರ ಪ್ರತ್ಯೇಕವಾಗಿ ಎದ್ದು ನಿಲ್ಲುತ್ತದೆ. ಅದು ಜಪಾನ್, ಅದೊಂದು ಪೌರಸ್ತ್ಯ ಪವಾಡ. ಏಷ್ಯದ ಪ್ರಗತಿ ಪಥದಲ್ಲಿ ಅದು ಉಳಿದ ರಾಷ್ಟ್ರಗಳಿಗಿಂತ ಬಲು ಮುಂದಿದೆ. ವಿಶ್ವದಲ್ಲಿ ಒಟ್ಟು ರಾಷ್ಟ್ರೀಯ ಉತ್ಪನ್ನ ದೃಷ್ಟಿಯಿಂದ ಅದಕ್ಕೆ ಹಿರಿಯ ಸ್ಥಾನ.
ಏಷ್ಯನ್ ರಾಷ್ಟ್ರಗಳು ಜಪಾನಿನಂತೆಯೇ ಮುಂದುವರಿಯುವ ಆರ್ಥಿಕ ಪ್ರಯತ್ನದಲ್ಲಿ ತೊಡಗಿವೆ. ಆದುದರಿಂದ ಏಷ್ಯದ ಅರ್ಥವ್ಯವಸ್ಥೆಯನ್ನು ಒಟ್ಟಾಗಿ ವಿವೇಚಿಸುವಾಗ, ಪಾಶ್ಚಾತ್ಯ ರಾಷ್ಟ್ರಗಳ ಹೆಗಲಿಗೆ ಸಮನಾಗಿ ನಿಂತಿರುವ ಜಪಾನು ಅನೇಕ ವಿಚಾರಗಳಲ್ಲಿ ಅಪವಾದ.
ಕೃಷಿ
[ಬದಲಾಯಿಸಿ]ಕೃಷಿಯೇ ಏಷ್ಯದ ಅರ್ಥವ್ಯವಸ್ಥೆಯ ಬೆನ್ನೆಲುಬು. ಇದು ಇಲ್ಲಿನ ಹೆಚ್ಚು ಜನರಿಗೆ ಜೀವನಾಧಾರ ಮತ್ತು ಸಂಪನ್ಮೂಲ. ಆದರೆ ಇಂದೂ ಇಲ್ಲಿನ ಕೃಷಿ ವಿಧಾನ ತೀರ ಹಳೆಯ ರೀತಿಯದು. ಆಧುನಿಕ ಬೇಸಾಯದ ಕ್ರಮಗಳಾದ ಜಲಾಶಯದ ಉಪಯೋಗ, ರಾಸಾಯನಿಕ ಗೊಬ್ಬರಗಳ ಪ್ರಯೋಗ, ಬೇಸಾಯದಲ್ಲಿ ಯಾಂತ್ರೀಕರಣ- ಇವು ಏಷ್ಯದ ರಾಷ್ಟ್ರಗಳಲ್ಲಿ ಪ್ರಾರಂಭವಾಗಿವೆ.
20ನೆಯ ಶತಮಾನದ ಪ್ರಥಮಾರ್ಧದಲ್ಲಿ ಭಾರತದ ಆಹಾರಧಾನ್ಯ ಉತ್ಪನ್ನ ಸರಾಸರಿ ಶೇ. 0.5ರಷ್ಟು ಹೆಚ್ಚಿತು. ಏಷ್ಯದ ಉಳಿದ ರಾಷ್ಟ್ರಗಳಲ್ಲೂ ಹೆಚ್ಚು ಕಡಿಮೆ ಇದೇ ಪ್ರಮಾಣದ ಬೆಳೆವಣಿಗೆಯನ್ನು ಕಾಣಬಹುದು. 1950ರಿಂದೀಚೆಗೆ ಕೃಷಿರಂಗದಲ್ಲಿ ವೇಗವಾದ ಸುಧಾರಣೆಗಳು ಪ್ರಾರಂಭವಾಗಿವೆ. ಏಷ್ಯದ ರಾಷ್ಟ್ರಗಳ ಸರ್ಕಾರಗಳು ಕೃಷಿರಂಗದಲ್ಲಿ ಪ್ರಗತಿ ಸಾಧಿಸಲು ಮನಃಪುರ್ವಕವಾಗಿ ಪ್ರಯತ್ನ ನಡೆಸುತ್ತಿವೆ. 1960ನೆಯ ದಶಕದ ಪ್ರಥಮ ಆರು ವರ್ಷಗಳಲ್ಲಿ ಏಷ್ಯದ ರಾಷ್ಟ್ರಗಳ ಆಹಾರ ಧಾನ್ಯಗಳ ಉತ್ಪನ್ನ ಸರಾಸರಿ ಶೇ. 1ರಷ್ಟು ವೃದ್ಧಿಯಾಗಿದೆ ಎಂದು ಆಹಾರ ಮತ್ತು ಕೃಷಿ ಸಂಸ್ಥೆ ಅಂದಾಜು ಮಾಡಿದೆ.
ಏಷ್ಯನ್ ರಾಷ್ಟ್ರಗಳು ಎದುರಿಸುತ್ತಿರುವ ಕೃಷಿ ಸಮಸ್ಯೆಗಳು ಅಪಾರ. ಕೃಷಿ ಇಲ್ಲಿ ವರುಣನ ಕೃಪೆ. ಒಂದೇ ರಾಷ್ಟ್ರದಲ್ಲಿ ಕೆಟ್ಟ ಹವಾಮಾನ ಪರಿಸ್ಥಿತಿಗಳಿಂದ ಕೋಟಿ ಕೋಟಿ ಟನ್ ಆಹಾರ ಬೆಳೆ ನಷ್ಟವಾಗುತ್ತಿರುವ ಉದಾಹರಣೆಗಳುಂಟು. ನಿರೀಕ್ಷಿತ ಸಮಯಕ್ಕಿಂತ ಮುಂಚೆಯೋ ಸ್ವಲ್ಪ ತಡೆದೋ ಮಳೆ ಬಂದರೆ ಬೆಳೆಯಲ್ಲಿ ಅಪಾರವಾದ ನಷ್ಟ ಸಂಭವಿಸುತ್ತದೆ. ಕ್ಷಾಮ ಮತ್ತು ನೆರೆ ಏಷ್ಯನ್ ರೈತರ ಎರಡು ಶತ್ರುಗಳು. ಇವುಗಳಿಂದ ಆತನನ್ನು ರಕ್ಷಿಸಲು ಜಲಾಶಯ ನಿರ್ಮಾಣ, ಅಣೆಕಟ್ಟು, ಭೂಸಾರ ರಕ್ಷಣೆ ಮುಂತಾದವು ಈ ರಾಷ್ಟ್ರಗಳಲ್ಲಿ ಇನ್ನೂ ಬಹಳ ಬಾಲ್ಯಾವಸ್ಥೆಯಲ್ಲಿವೆ. ಹಿಂದುಳಿದ ಕೃಷಿ ವ್ಯವಸ್ಥೆಯಿಂದಾಗಿ ಅನೇಕ ರಾಷ್ಟ್ರಗಳು ಆಹಾರ ಸಮಸ್ಯೆಯನ್ನೆದುರಿಸುತ್ತಿವೆ.
ಏಷ್ಯದ ಎಲ್ಲ ರಾಷ್ಟ್ರಗಳೂ ಭೂಸುಧಾರಣಾಕ್ರಮಕ್ಕೆ ಪಣ ತೊಟ್ಟಿವೆ. ಜಪಾನಿನ ಯುದ್ಧೋತ್ತರ ಪವಾಡದ ಹಿನ್ನೆಲೆಯೆಂದರೆ ಅಲ್ಲಿ ನಡೆದ ಭೂಸುಧಾರಣೆ, ಟೈವಾನ್ನಲ್ಲಿ ಉಳುವವನಿಗೇ ಭೂಮಿ ಯೋಜನೆ ಫಲಗೊಂಡು ಮುಕ್ತಾಯ ಘಟ್ಟಕ್ಕೆ ಬಂದಿದೆ. ಭಾರತದಲ್ಲಿ ಹಂತಹಂತವಾಗಿ ಭೂಸುಧಾರಣೆ ಪ್ರಗತಿ ಹೊಂದುತ್ತಿದೆ. ಫಿಲಿಪೀನ್ಸ್ ಮತ್ತು ಇತರ ಕಡೆ ಇದು ಇನ್ನೂ ಬಹಳ ಹಿಂದುಳಿದಿದೆ. ಚೀನ, ಸೋವಿಯತ್ ಏಷ್ಯ, ಉತ್ತರ ವಿಯಟ್ನಾಂ, ಉತ್ತರ ಕೊರಿಯ ಮತ್ತು ಮಂಗೋಲಿಯಗಳಲ್ಲಿ ಭೂಸುಧಾರಣೆಯನ್ನು ಸಹಕಾರ ಮತ್ತು ಸಾಮೂಹಿಕ ಬೇಸಾಯದ ಮೂಲಕ ಪ್ರಯತ್ನಿಸಲಾಗಿದೆ. ಏಷ್ಯದ ಕಮ್ಯೂನಿಸ್ಟೇತರ ರಾಷ್ಟ್ರಗಳಲ್ಲಿ ಭೂಸುಧಾರಣೆ ಅನೇಕ ಆರ್ಥಿಕ ಹಾಗೂ ಸಾಮಾಜಿಕ ಅಡೆತಡೆಗಳನ್ನು ದಾಟಬೇಕಾಗಿದೆ.
ಭೂಸುಧಾರಣೆಯ ಜೊತೆಗೆ ಯಾಂತ್ರಿಕ ಸುಧಾರಣೆಗಳನ್ನು ಸಾಧಿಸುವುದು ಈ ರಾಷ್ಟ್ರಗಳ ಧ್ಯೇಯ. ಏಷ್ಯದ ಕೇವಲ 1/3 ಭಾಗ ಮಾತ್ರ ವ್ಯವಸಾಯ ಯೋಗ್ಯವಾಗಿದ್ದು, ಅನೇಕ ರಾಷ್ಟ್ರಗಳು ವ್ಯವಸಾಯದ ಭೂಮಿಯನ್ನು ವಿಸ್ತರಿಸುವ ಕಾರ್ಯಕ್ರಮವನ್ನು ಕೈಗೊಂಡಿವೆ. ಈ ಎಲ್ಲ ರಾಷ್ಟ್ರಗಳಲ್ಲೂ ಭೂಮಿಯ ಇಳುವರಿಯನ್ನು ವೃದ್ಧಿಸಲು ಕೈಗೊಂಡಿರುವ ಮುಖ್ಯ ಕ್ರಮಗಳೆಂದರೆ, ಉತ್ತಮ ರೀತಿಯ ಬೀಜದ ಉಪಯೋಗ, ರಾಸಾಯನಿಕ ಗೊಬ್ಬರಗಳ ಪ್ರಯೋಗ ಮತ್ತು ವ್ಯವಸಾಯಕ್ಕೆ ವಿದ್ಯುಚ್ಛಕ್ತಿ ಮತ್ತು ಯಂತ್ರಸಾಧನೆಗಳ ಅನ್ವಯ, ಆದರೆ ಈ ಕ್ರಮಗಳನ್ನು ಸತತವಾಗಿ ನಡೆಸಿಕೊಂಡು ಹೋಗಲು ಸಹ ಈ ರಾಷ್ಟ್ರಗಳು ತೊಂದರೆಯನ್ನೆದುರಿಸಬೇಕಾಗಿದೆ. ಮುಖ್ಯವಾದ ಸಮಸ್ಯೆಯೆಂದರೆ ಈ ಕ್ರಮಗಳು ದುಬಾರಿ. 1960ರ ಮಧ್ಯಭಾಗದಿಂದ ಮಾತ್ರ ಭಾರತದಲ್ಲಿ ಮತ್ತು ಚೀನದಲ್ಲಿ ರಾಸಾಯನಿಕ ಗೊಬ್ಬರದ ಬಳಕೆಯ ಪ್ರಾಮುಖ್ಯವನ್ನು ಕಾಣಬಹುದು. ಆದರೂ ಈ ಎರಡು ರಾಷ್ಟ್ರಗಳು ಒಂದು ಎಕರೆಗೆ ಬಳಸುತ್ತಿರುವ ರಾಸಾಯನಿಕ ಗೊಬ್ಬರ. ಜಪಾನ್ ಎಕರೆಯೊಂದಕ್ಕೆ ಬಳಸುವುದರ ಕೇವಲ 1/8ರಷ್ಟು; ನೀರಾವರಿಯನ್ನೊದಗಿಸುವುದೂ ಸಮಸ್ಯೆಯೇ ಆಗಿದೆ. ಏಷ್ಯದ ವ್ಯವಸಾಯ ಜಮೀನಿನಲ್ಲಿ 1/3 ಭಾಗಕ್ಕಿಂತಲೂ ಕಡಿಮೆ ಪ್ರದೇಶಕ್ಕೆ ನೀರಾವರಿ ಸೌಕರ್ಯ ಸೀಮಿತವಾಗಿದೆ. ಏಷ್ಯದ ಎಲ್ಲ ರಾಷ್ಟ್ರಗಳಿಗೂ ಇರುವ ಸಂಪತ್ತೆಂದರೆ ಶ್ರಮ. ಬಂಡವಾಳ ಕೊರತೆಯಿದ್ದು, ಯಾಂತ್ರಿಕ ಬೇಸಾಯ ದುಬಾರಿಯಾಗಿರುವುದರಿಂದ ಬೇಸಾಯ ಅವಲಂಬಿಸಿರುವುದು ಶ್ರಮಸಂಪತ್ತನ್ನೆ. ಅಧಿಕ ಇಳುವರಿ ನೀಡುವ ಉತ್ತಮ ಬೀಜಗಳ ಬಿತ್ತನೆಗೆ ಅತ್ಯಂತ ಹೆಚ್ಚಿನ ಗಮನ ಕೊಡಲಾಗುತ್ತಿದೆ.
ಇಷ್ಟಾಗಿಯೂ ಏಷ್ಯ ತನಗೆ ಅಗತ್ಯವಾದಷ್ಟು ಆಹಾರ ಸಾಮಗ್ರಿಗಳನ್ನು ಉತ್ಪಾದಿಸಿಕೊಳ್ಳುತ್ತಿಲ್ಲ. ಪ್ರತಿವರ್ಷ ಭಾರತ ಸು. 0.9 ಕೋಟಿ ಟನ್ ಆಹಾರ ವಸ್ತುಗಳನ್ನೂ ಚೀನ ಸು. 0.5 ಕೋಟಿ ಟನ್ನನ್ನೂ ಹೊರಗಿನಿಂದ ಆಮದು ಮಾಡಿಕೊಳ್ಳುತ್ತಿವೆ. ಏಷ್ಯ ವರ್ಷಕ್ಕೆ 1.5 ಕೋಟಿ ಟನ್ ಗೋಧಿಯನ್ನು ಆಮದು ಮಾಡಿಕೊಳ್ಳುತ್ತಿದೆ. ಪ್ರಪಂಚದ ಒಟ್ಟು ಉತ್ಪಾದನೆಯ ಶೇ. 70ರಷ್ಟು ಅಕ್ಕಿ ಉತ್ಪಾದಿಸುವ ಈ ಖಂಡ 1964 ರಿಂದೀಚೆಗೆ ಅದನ್ನೂ ಆಮದು ಮಾಡಿಕೊಳ್ಳುತ್ತಿದೆ. ಗೋಧಿ ಮತ್ತು ಅಕ್ಕಿ ಆಮದಿನ ಹೆಚ್ಚಿನ ಅಂಶ ಬರುವುದು ಉತ್ತರ ಅಮೆರಿಕದಿಂದ, ಕೃಷಿಯಲ್ಲಿನ ಪ್ರಗತಿ ವೇಗವಾಗಿ ನಡೆಯುತ್ತಿಲ್ಲದಿರುವುದೇ ಇದರ ಕಾರಣಗಳಲ್ಲೊಂದು. ತಲಾ ಆದಾಯ ಹೆಚ್ಚಿದಂತೆ ಜನಸಂಖ್ಯೆ ಹೆಚ್ಚಿ ಆಹಾರದ ಬೇಡಿಕೆಯೂ ಹೆಚ್ಚುತ್ತಿರುವುದು ಈ ರಾಷ್ಟ್ರಗಳ ಸಾಮಾನ್ಯ ಅನುಭವ. ಉದಾಹರಣೆಗೆ, ಅಭಿವೃದ್ಧಿ ಹೊಂದುತ್ತಿರುವ ಏಷ್ಯನ್ ರಾಷ್ಟ್ರಗಳಾದ ಶ್ರೀಲಂಕ. ಚೀನ (ಟೈವಾನ್), ಭಾರತ, ಇಂಡೊನೇಷ್ಯ, ಪಾಕಿಸ್ತಾನ, ಫಿಲಿಪೀನ್ಸ್ ಮತ್ತು ಥೈಲೆಂಡ್ ಇವೆಲ್ಲ ರಾಷ್ಟ್ರಗಳನ್ನೂ ಒಟ್ಟಾಗಿಸಿ, ಲೆಕ್ಕ ಹಾಕಿದಾಗ, ಇಲ್ಲಿ ತಲಾ ಆದಾಯ ಶೇ. 1ರಷ್ಟು ವೃದ್ಧಿಯಾದಾಗ ಆಹಾರ ಉತ್ಪನ್ನದ ಬೇಡಿಕೆಯ ಹೆಚ್ಚಳ 0.89 ರಷ್ಟಾಗುತ್ತದೆ. ಅಮೆರಿಕ ಮತ್ತು ಆಸ್ಟ್ರೇಲಿಯಗಳಲ್ಲಿ ಈ ಬೇಡಿಕೆಯ ಹೆಚ್ಚಳ ಕೇವಲ 0.15 ಮತ್ತು 0.11 ಏಷ್ಯದ ಪ್ರತಿ ವ್ಯಕ್ತಿಯ ಸರಾಸರಿ ಅನುಭೋಗ ದಿನಕ್ಕೆ 2,050 ಕೆಲೊರಿ. ಇದು ಅಗತ್ಯಕ್ಕಿಂತ ಬಹಳ ಕಡಿಮೆ. ವಾಣಿಜ್ಯ ಬೆಳೆಗಳಾದ ಚಹ, ಕಬ್ಬು, ರಬ್ಬರ್ ಮತ್ತು ತೈಲೋತ್ಪಾದಕ ಸಸ್ಯಗಳೂ ಏಷ್ಯದ ಅರ್ಥವ್ಯವಸ್ಥೆಯಲ್ಲಿ ಪ್ರಮುಖ ಸ್ಥಾನ ಪಡೆದಿವೆ. ಏಷ್ಯನ್ ರಾಷ್ಟ್ರಗಳ ನಿರ್ಯಾತ ಅವಲಂಬಿಸಿರುವುದು ಈ ಮೂಲವಸ್ತುಗಳನ್ನೆ.
ಆದರೆ ಈ ವಸ್ತುಗಳ ಬೆಲೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಯಾವಾಗಲೂ ಕುಸಿಯುತ್ತಿದ್ದು, ಯಾಂತ್ರಿಕ ವಸ್ತುಗಳ ಬೆಲೆ ಏರುತ್ತಿದ್ದು, ಏಷ್ಯನ್ ರಾಷ್ಟ್ರಗಳ ಅಂತಾರಾಷ್ಟ್ರೀಯ ವ್ಯಾಪಾರವನ್ನು ಕುಂಠಿತಗೊಳಿಸುತ್ತಿವೆ. ಈ ರಾಷ್ಟ್ರಗಳ ತಮ್ಮ ಪ್ರಗತಿಗೆ ಬೇಕಾದ ಯಂತ್ರಸಾಮಗ್ರಿಗಳನ್ನು ಅನಿವಾರ್ಯವಾಗಿ ಕೊಳ್ಳಬೇಕಾಗಿರುವುದರಿಂದ ಈ ಸಮಸ್ಯೆ ಇನ್ನೂ ಜಟಿಲ. ಇಷ್ಟೇ ಅಲ್ಲದೆ ಅತ್ಯಂತ ಹಳೆಯ ಕಾಲದ ಬೇಸಾಯಕ್ಕೇ ಆತುಕೊಂಡಿರುವ ಈ ರಾಷ್ಟ್ರಗಳು ಕೃಷಿರಂಗದಲ್ಲಿ ಸಹ ಪಾಶ್ಚಾತ್ಯ ರಾಷ್ಟ್ರಗಳ ಪೈಪೋಟಿಯನ್ನೆದುರಿಸುತ್ತಿವೆ.
ಏಷ್ಯದ ಕೆಲವು ರಾಷ್ಟ್ರಗಳ ಕೃಷಿ ಉತ್ಪನ್ನವನ್ನೂ ಅದರ ಸರಾಸರಿ ಹೆಚ್ಚಳವನ್ನೂ ಕೆಳಗಿನ ಯಾದಿಯಲ್ಲಿ ಕೊಡಲಾಗಿದೆ.
ವಿದೇಶೀ ವ್ಯಾಪಾರಕ್ಕೆ ಕೃಷಿಯ ಮೇಲೆ ಮುಖ್ಯವಾಗಿ ಅವಲಂಬಿತವಾಗಿರುವ ಏಷ್ಯನ್ ರಾಷ್ಟ್ರಗಳು ಆಂತರಿಕವಾಗಿ ಕೃಷಿ ವಸ್ತುಗಳ ಉತ್ಪನ್ನದ ಡೋಲಾಯಮಾನ ಸ್ಥಿತಿಗೂ ಬಾಹ್ಯವಾಗಿ ಅವುಗಳ ಬೆಲೆಯ ಕುಸಿತದ ಸಮಸ್ಯೆಗೂ ಹೊಂದಿಕೊಳ್ಳಬೇಕಾಗಿದ್ದು, ವಿದೇಶೀ ವ್ಯಾಪಾರದಿಂದ ಪಡೆಯುವ ಲಾಭ ಯಾವಾಗಲೂ ವ್ಯತ್ಯಾಸ ಹೊಂದುವ ಪರಿಸ್ಥಿತಿಯನ್ನೆದುರಿಸಬೇಕಾಗಿದೆ.
ಕೈಗಾರಿಕೆ
[ಬದಲಾಯಿಸಿ]ಇದೂ ಏಷ್ಯದ ರಾಷ್ಟ್ರಗಳ ಒಂದು ಪ್ರಮುಖ ಸಮಸ್ಯೆ. ದೊಡ್ಡ ಉತ್ಪಾದನೋದ್ಯಮಗಳ ಜೊತೆಗೆ ಈ ರಾಷ್ಟ್ರಗಳು ಸಾರಿಗೆ, ಬ್ಯಾಂಕಿಂಗ್ ಸಂಪರ್ಕ, ವಿದ್ಯುತ್, ಜಲಾಶಯ-ಇವೆಲ್ಲವನ್ನೂ ವ್ಯವಸ್ಥಿತವಾಗಿ ನಿರ್ಮಾಣ ಮಾಡಿಕೊಳ್ಳಬೇಕಾಗಿದೆ. ತಮ್ಮ ರಾಷ್ಟ್ರಗಳಲ್ಲಿನ ವರಮಾನ ಹೆಚ್ಚಬೇಕಾದರೆ ತಾವೂ ಕೈಗಾರಿಕೆ ಬೆಳೆಸಬೇಕು ಎಂಬುದನ್ನು ಈ ರಾಷ್ಟ್ರಗಳು ಈಗ ಮನಗಂಡಿವೆ. ಅಷ್ಟೇ ಅಲ್ಲ, ಪಾಶ್ಚಾತ್ಯಾವಲಂಬನದಿಂದ ವಿಮೋಚನೆ ಹೊಂದಲೂ ಇದೇ ಮಾರ್ಗ.ಏಷ್ಯದ ಹೆಚ್ಚಿನ ರಾಷ್ಟ್ರಗಳು ಕೈಗಾರಿಕಾ ರಂಗದಲ್ಲಿ ಹೆಚ್ಚು ಮುನ್ನಡೆಯುವುದಕ್ಕೆ ಸಾಧ್ಯವಾಗಿಲ್ಲ. ಅವಕ್ಕೆ ಈ ರಂಗದಲ್ಲಿನ ಸಮಸ್ಯೆಗಳು ಅಪಾರ. ಆದರೂ ಈ ರಾಷ್ಟ್ರಗಳು 20ನೆಯ ಶತಮಾನದ ಐದು-ಆರನೆಯ ದಶಕಗಳಲ್ಲಿ ಪ್ರಗತಿಯ ಬಗ್ಗೆ ಹೆಚ್ಚು ಆಸಕ್ತಿ ವಹಿಸಿವೆ.
ವಿಶ್ವಸಂಸ್ಥೆಯ ಅಂಕಿ-ಅಂಶಗಳ ಪ್ರಕಾರ ಕಳೆದು 20 ವರ್ಷಗಳಲ್ಲಿ ಏಷ್ಯದ ಕೈಗಾರಿಕಾ ಉತ್ಪನ್ನ ಹತ್ತು ಪಟ್ಟು ಹೆಚ್ಚಿದೆ. ಬೃಹತ್ ಕೈಗಾರಿಕೆಗಳನ್ನೂ ಸೇರಿಸಿದರೆ ಈ ಸಂಖ್ಯೆ ಇನ್ನೂ ಹೆಚ್ಚು. ಏಷ್ಯದ ಪ್ರಗತಿ ಹೊಂದುತ್ತಿರುವ ರಾಷ್ಟ್ರಗಳ ಕೈಗಾರಿಕಾ ಉತ್ಪನ್ನ 1960ರ ದಶಕದಲ್ಲಿ ವರ್ಷಕ್ಕೆ ಸರಾಸರಿ ಶೇ. 8ರಂತೆ ಏರಿತು. ಅಂದರೆ, ಈ ರಂಗದ ಉತ್ಪನ್ನದ ಬೆಳೆವಣಿಗೆ ಉಳಿದ ರಂಗಗಳದಕ್ಕಿಂತ ಎರಡರಷ್ಟು ಹೆಚ್ಚು. ಯಾಂತ್ರಿಕ ಸಾಧನಗಳ ತಯಾರಿಕೆಯಲ್ಲಿ ನಿರ್ಯಾತ ಮಾಡುವಷ್ಟರಮಟ್ಟಿಗಿನ ಸಿದ್ಧಿಯನ್ನು ಭಾರತ, ಚೀನ ಸಾಧಿಸಿವೆ. ಇವೆರಡೂ ಸಾಕಷ್ಟು ಪ್ರಗತಿ ಹೊಂದಿದ ಅಣುಶಕ್ತಿ ಕೇಂದ್ರಗಳನ್ನು ಸಹ ಹೊಂದಿವೆ.
ಏಷ್ಯದ ಕೈಗಾರಿಕಾ ರಂಗ ಎದುರಿಸುತ್ತಿರುವ ಸಮಸ್ಯೆಗಳಲ್ಲಿ ಬಂಡವಾಳದ, ತಜ್ಞರ, ಉದ್ಯಮಿಗಳ ಮತ್ತು ವ್ಯವಸ್ಥಾಪಕರ ಕೊರತೆ ಬಹಳ ಮುಖ್ಯ. ಜಪಾನನ್ನುಳಿದು ಇತರ ಎಲ್ಲ ರಾಷ್ಟ್ರಗಳೂ ತಮ್ಮ ಕೈಗಾರಿಕಾ ಪ್ರಗತಿಗೆ ಒಂದಲ್ಲ ಒಂದು ದೃಷ್ಟಿಯಿಂದ ಪಾಶ್ಚಾತ್ಯ ದೇಶಗಳನ್ನು ಅವಲಂಬಿಸಬೇಕಾಗಿದೆ.ಸತತವಾಗಿ ಬಂಡವಾಳಕ್ಕಾಗಿ ಪರಾವಲಂಬಿಗಳಾಗಿರುವುದು ಆರ್ಥಿಕ ಪ್ರಗತಿಯ ದೃಷ್ಟಿಯಿಂದ ಬಹಳ ಅಪಾಯಕಾರಿ ಎಂಬುದನ್ನು ಏಷ್ಯನ್ ರಾಷ್ಟ್ರಗಳು ಮನಗಂಡಿವೆ. ಹೀಗಾಗಿ ತಮ್ಮಲ್ಲಿಯೇ ಸಾಧ್ಯವಾದಷ್ಟು ಬಂಡವಾಳವನ್ನು ಒದಗಿಸಿಕೊಳ್ಳುವ ಪ್ರಯತ್ನ ನಡೆದಿದೆ. 1960ರಲ್ಲಿ ಅಸ್ತಿತ್ವಕ್ಕೆ ಬಂದ ಏಷ್ಯದ ಅಭಿವೃದ್ಧಿ ಬ್ಯಾಂಕು ಈ ದಿಶೆಯಲ್ಲೊಂದು ಮೈಲಿಗಲ್ಲು. ಆದರೂ ಸದ್ಯದಲ್ಲಿ ಈ ರಾಷ್ಟ್ರಗಳು ಬಂಡವಾಳದ ದೃಷ್ಟಿಯಿಂದ ಸ್ವಾವಲಂಬಿಗಳಾಗುವುದು ಕಠಿಣ.
ಏಷ್ಯದ ರಾಷ್ಟ್ರಗಳು ಕೈಗಾರಿಕಾಭಿವೃದ್ಧಿಗೆ ಸತತವಾಗಿ ಪ್ರಯತ್ನ ಪಡುತ್ತಿವೆ. ಅನೇಕ ರಾಷ್ಟ್ರಗಳು ಪ್ರಗತಿ ಸಾಧಿಸಿವೆ. ಇದಕ್ಕೆ ಒಂದು ನಿದರ್ಶನವೆಂದರೆ, ಅನೇಕ ಏಷ್ಯನ್ ರಾಷ್ಟ್ರಗಳಲ್ಲಿ ಕೈಗಾರಿಕೆ ಹಾಗೂ ಯಂತ್ರಗಳ ಉತ್ಪನ್ನದ ಬೆಳೆವಣಿಗೆಯ ವೇಗ, ಮುಖ್ಯವಾದ ಕೃಷಿರಂಗದ ಉತ್ಪನ್ನದ ವೇಗಕ್ಕಿಂತ ಹೆಚ್ಚಾಗಿದೆ. ಕೆಲವು ರಾಷ್ಟ್ರಗಳ ಕೈಗಾರಿಕೆ ಮತ್ತು ಯಂತ್ರೋತ್ಪಾದನೆಯ ಬೆಳೆವಣಿಗೆಯನ್ನು ಮುಂದಿನ ಯಾದಿಯಲ್ಲಿ ಕೊಟ್ಟಿದೆ.
ಯುದ್ಧಾನಂತರದಲ್ಲಿ ಕೈಗಾರಿಕೆಗೆ ತೀವ್ರವಾಗಿ ಗಮನ ಕೊಟ್ಟ ಏಷ್ಯನ್ ರಾಷ್ಟ್ರಗಳು ಪ್ರಾರಂಭಕ್ಕೆ ಬೃಹದ್ಕೈಗಾರಿಕೆಗಳ ನಿರ್ಮಾಣದ ಆಸೆಯನ್ನಿರಿಸಿಕೊಂಡಿದ್ದುವು. ಭಾರತ ಮತ್ತು ಚೀನಗಳು ರಷ್ಯವನ್ನು ಆದರ್ಶವಾಗಿಟ್ಟುಕೊಂಡು ಮುಂದುವರಿದುವು. ಅವು ಉಕ್ಕು ಕಾರ್ಖಾನೆ,ವಿದ್ಯುತ್ ಆಗಾರ, ಎಂಜಿನಿಯರಿಂಗ್ ಕೈಗಾರಿಕೆ, ರಾಸಾಯನಿಕ ಕಾರ್ಖಾನೆ ಇವಕ್ಕೆ ಹೆಚ್ಚು ಹಣ ಹೂಡಿದವು. ಬೇಸಾಯವಿಲ್ಲದೆ ಬದುಕಿಲ್ಲ ಎಂಬುದನ್ನು ಅರಿತು, ಆಹಾರದಲ್ಲಿ ಸ್ವಾವಲಂಬನೆ ಸಾಧಿಸುವ ದೃಷ್ಟಿಯಿಂದ ಈ ರಂಗದಲ್ಲಿ ಈಚೆಗೆ ಹೆಚ್ಚಿನ ನಿಯೋಜನೆ ಪ್ರಾರಂಭವಾಗಿದೆ. ಸಣ್ಣ ಕೈಗಾರಿಕೆ ಹಾಗೂ ಕೃಷಿವಸ್ತುಗಳ ನಿರ್ಯಾತದಲ್ಲಿ ಸಹ ಪ್ರಮುಖ ಪಾತ್ರ ವಹಿಸುತ್ತಿರುವುದರಿಂದ ಇದಕ್ಕೆ ಭದ್ರವಾದ ತಳಹದಿ ಹಾಕುವ ಯತ್ನ ಏಷ್ಯನ್ ರಾಷ್ಟ್ರಗಳಲ್ಲಿ ಇಂದು ನಡೆಯುತ್ತಿದೆ.
ಕಮ್ಯೂನಿಸ್ಟ್ ರಾಷ್ಟ್ರಗಳನ್ನು ಬಿಟ್ಟರೆ ಏಷ್ಯದಲ್ಲಿ ಉಳಿದೆಲ್ಲೆಡೆ ಕೈಗಾರಿಕಾ ರಂಗದ ಮಾಲೀಕತ್ವ ಸರ್ಕಾರ ಹಾಗೂ ಖಾಸಗಿಯವರಲ್ಲಿ ನೆಲೆಸಿದೆ. ಇದು ಬಂಡವಾಳ ನಿಯೋಜನೆಯ ದೃಷ್ಟಿಯಿಂದ ವಿಹಿತವೆಂದು ಈ ರಾಷ್ಟ್ರಗಳ ನಂಬಿಕೆ; ಕೈಗಾರಿಕೆಯ ಪ್ರಗತಿಯಿಲ್ಲದೆ ತಾವು ಪಾಶ್ಚಾತ್ಯ ರಾಷ್ಟ್ರಗಳು ಭುಜಕೊಟ್ಟು ನಿಲ್ಲುವುದು ಸಾಧ್ಯವಿಲ್ಲವೆಂದು ಅರಿತಿರುವ ಏಷ್ಯನ್ ರಾಷ್ಟ್ರಗಳು ಈ ಹಾದಿಯಲ್ಲಿ ಪ್ರಗತಿ ಸಾಧಿಸಲು ಮನಃಪುರ್ವಕವಾಗಿ ಶ್ರಮಿಸುತ್ತಿವೆ.
ಹಣಕಾಸು
[ಬದಲಾಯಿಸಿ]ಏಷ್ಯನ್ ರಾಷ್ಟ್ರಗಳ ಕೃಷಿರಂಗದ ಪ್ರಗತಿಯಾಗಲಿ, ಕೈಗಾರಿಕಾರಂಗದ ಪ್ರಗತಿಯಾಗಲಿ, ಹಣಕಾಸು ಎಷ್ಟು ದೊರೆಯುತ್ತದೆ ಎಂಬುದರ ಮೇಲೆ ಅವಲಂಬಿತವಾಗಿವೆ. ತಮ್ಮ ಬಡತನದಿಂದಾಗಿ ಕಡಿಮೆ ಆದಾಯ, ಕಡಿಮೆ ಜೀವನಮಟ್ಟ, ಕಡಿಮೆ ಉಳಿತಾಯ ಮತ್ತು ಕಡಿಮೆ ಬಂಡವಾಳ ಶೇಖರಣೆ-ಇವುಗಳ ವಿಷವೃತ್ತದಲ್ಲಿ ಸಿಕ್ಕಿರುವ ಏಷ್ಯನ್ ರಾಷ್ಟ್ರಗಳು ಹಣಕಾಸಿನ ಕ್ಷೇತ್ರದಲ್ಲಿ ಎದುರಿಸಬೇಕಾದ ಸಮಸ್ಯೆಗಳು ಅಪಾರ. ಈ ರಾಷ್ಟ್ರಗಳ ಉಳಿತಾಯ, ಬಂಡವಾಳ ಶೇಖರಣೆ ತೀರ ಅಲ್ಪ.
ಏಷ್ಯದ ಹೆಚ್ಚಿನ ರಾಷ್ಟ್ರಗಳು ತಮ್ಮ ಆದಾಯಕ್ಕೆ ನೇರವಾಗಿ ವರಮಾನ ತೆರಿಗೆಯನ್ನೆ ಅವಲಂಬಿಸಿವೆ. ಈ ರಾಷ್ಟ್ರಗಳು ತಮ್ಮ ಆದಾಯದ 1/5 ಭಾಗವನ್ನು ವರಮಾನ ತೆರಿಗೆಗಳ ಮೂಲದಿಂದ ಪಡೆದುಕೊಳ್ಳುತ್ತವೆ. ಆಯಾತ ಕರ ಮತ್ತು ಇತರ ಪರೋಕ್ಷ ತೆರಿಗೆಗಳೂ ಮುಖ್ಯವೇ. ಈ ರಾಷ್ಟ್ರಗಳಿಗೆ ಪಾಶ್ಚಾತ್ಯ ರಾಷ್ಟ್ರಗಳಂತೆ ಕಡ್ಡಾಯ ಉಳಿತಾಯವನ್ನು ಪ್ರೇರೇಪಿಸುವ ತೆರಿಗೆಗಳನ್ನು ವಿಧಿಸುವುದು ಕಠಿಣವಾದ ವಿಷಯ. ಇವು ಸತತವಾಗಿ ಎದುರಿಸುತ್ತಿರುವ ಸಮಸ್ಯೆಯೆಂದರೆ ಹಣದ ಉಬ್ಬರ; ಇದರಿಂದ ಜೀವನಮಟ್ಟ ಕಡಿಮೆಯಾಗುವುದು ಅನಿವಾರ್ಯ. ಉದಾಹರಣೆಗೆ, 1961-66ರಲ್ಲಿ ಇಂಡೋನೇಷ್ಯದಲ್ಲಿ ಅನುಭೋಗ ವಸ್ತುಗಳ ಬೆಲೆ ಶೇ. 600 ರಷ್ಟು ಹೆಚ್ಚಿತು. ಹಣಕಾಸಿನ ಸ್ಥಿತಿ ತೀರ ಅಸಮರ್ಪಕವಾಗಿರುವುದರಿಂದ ಈ ರಾಷ್ಟ್ರಗಳು ವಿದೇಶೀ ಬಂಡವಾಳದ ಕಡೆ ನೋಡುವುದು ಸಹಜ. 1965ರಲ್ಲಿ ಪಾಶ್ಚಾತ್ಯ ರಾಷ್ಟ್ರಗಳಿಂದ ಪುರ್ವ ಮತ್ತು ದಕ್ಷಿಣ ಏಷ್ಯಕ್ಕೆ ಹರಿದು ಬಂದ ಬಂಡವಾಳ 280 ಕೋಟಿ ಡಾಲರ್ (ವಿಶ್ವಬ್ಯಾಂಕ್ ಮತ್ತು ಇತರ ಹಣಕಾಸು ಸಂಸ್ಥೆಗಳ ಮೂಲದಿಂದ). ಇದು ಅಲ್ಲಿಂದೀಚೆಗೆ ಪ್ರತಿ ವರ್ಷ ಅದೇ ಪ್ರಮಾಣದಲ್ಲಿ ಮುಂದುವರಿದಿದೆ. ಸೋವಿಯತ್ ವಲಯದಿಂದ ಬಂದ ಸಹಾಯಧನ 1965ರ ವರೆಗೆ ತಲಾ 300 ಕೋಟಿ ಡಾಲರ್. ಬಂಡವಾಳಕ್ಕಾಗಿ ಈ ರೀತಿಯ ಪರಾವಲಂಬನೆ ಏಷ್ಯದ ರಾಷ್ಟ್ರಗಳಿಗೆ ಪ್ರಗತಿಯ ದೃಷ್ಟಿಯಿಂದ ಅನಿವಾರ್ಯ.
ಕರೆನ್ಸಿ
[ಬದಲಾಯಿಸಿ]ಕೆಳಗಿನ ತಖ್ತೆಯು ಈ ಪ್ರದೇಶದ ದೇಶಗಳ ಕರೆನ್ಸಿಗಳಾಗಿವೆ.ಇದರೊಂದಿಗೆ ರಷ್ಯಾವನ್ನೂ ಸೇರಿಸಲಾಗಿದೆ ಮತ್ತು ಕರೆನ್ಸಿಗಳ ವಿನಿಮಯ ದರವನ್ನು ಯೂರೋ ಮತ್ತು ಅಮೆರಿಕದ ಡಾಲರ್‍ನೊಂದಿಗೆ ಹೋಲಿಸಲಾಗಿದೆ. As of 16 ನವೆಂಬರ್ 2014[update][[ವರ್ಗ:Articles containing potentially dated statements from Expression error: Unexpected < operator.]].[೧]
ಜನಸಂಖ್ಯೆ
[ಬದಲಾಯಿಸಿ]ಏಷ್ಯದ ಪ್ರಗತಿಯನ್ನೆಲ್ಲ ಕಬಳಿಸುತ್ತಿರುವುದು ಇಲ್ಲಿನ ಜನಸಂಖ್ಯೆಯ ಬೆಳೆವಣಿಗೆ. ಅನೇಕ ಏಷ್ಯನ್ ರಾಷ್ಟ್ರಗಳಲ್ಲಿ ನಡೆದ ಜನಗಣತಿಯಂತೆ ಇಲ್ಲಿ ಜನಸಂಖ್ಯೆ ವರ್ಷಕ್ಕೆ ಶೇ. 2.5ರಂತೆ ಬೆಳೆಯುತ್ತಿದೆ. ಈ ರೀತಿಯ ಜನಸಂಖ್ಯಾ ಸ್ಫೋಟ ಏಷ್ಯವನ್ನು ಭವಿಷ್ಯದಲ್ಲಿ ದೊಡ್ಡ ವಿಪತ್ತಿಗೆ ಈಡು ಮಾಡುತ್ತದೆಂಬುದು ತಜ್ಞರ ಅಭಿಮತ.
ಹೀಗೆ ಅತ್ಯಧಿಕ ವೇಗದಲ್ಲಿ ಬೆಳೆಯುತ್ತಿರುವ ಜನಸಂಖ್ಯೆಗೆ ಕಾರಣಗಳು ಹಲವಾರು. 1950ರಿಂದ ಏಷ್ಯದ ಅನೇಕ ರಾಷ್ಟ್ರಗಳಲ್ಲಿ ಮರಣಸಂಖ್ಯೆ ಬಹಳ ಮಟ್ಟಿಗೆ ಕಡಿಮೆಯಾಗಿದೆ. ವೈದ್ಯಕೀಯ ಸೌಲಭ್ಯ ಮತ್ತು ಆರೋಗ್ಯ ಮುನ್ನಡೆ ಇವೇ ಅದಕ್ಕೆ ಕಾರಣ. ಆದರೆ ಜನಸಂಖ್ಯೆಯ ಏರುಗತಿಯನ್ನು ಕಡಿಮೆ ಮಾಡುವುದಕ್ಕೆ ಹೆಚ್ಚು ಪ್ರಾಧಾನ್ಯ ದೊರೆಯಲಿಲ್ಲ. ದೊಡ್ಡ ಕುಟುಂಬವೇ ಭಾಗ್ಯ ಮತ್ತು ಭದ್ರತೆ ಎಂದು ನಂಬಿರುವ ಹೆಚ್ಚಿನ ಜನಕ್ಕೆ ಅದರ ಆರ್ಥಿಕ ತೊಂದರೆಗಳನ್ನು ಮುಂಗಾಣುವ ವಿದ್ಯಾಭ್ಯಾಸವಾಗಲಿ, ದೂರದೃಷ್ಟಿಯಾಗಲಿ ಇಲ್ಲ. ಕುಟುಂಬ ಯೋಜನೆಗೆ ಇರುವ ಸಾಮಾಜಿಕ ಹಾಗೂ ಆರ್ಥಿಕ ಅಡೆತಡೆಗಳು ಹಲವು. ಅನೇಕ ದೇಶಗಳ ಜನ ಇಂದು ಸಹ ವಿಸ್ತಾರ ಕುಟುಂಬಗಳ ಕಡೆಗೇ ತಮ್ಮ ಒಲವನ್ನು ತೋರಿಸುತ್ತಿದ್ದಾರೆ. ಆದರೆ ಜಪಾನ್ ಮಾತ್ರ ಕಾಯಿದೆ ತಂದು ತನ್ನ ಜನಸಂಖ್ಯೆ ಬೆಳೆವಣಿಗೆಯ ವೇಗವನ್ನು . 2.0 ರಿಂದ ಶೇ. 1.0ಕ್ಕೆ ಕಳೆದ ಎರಡು ಶತಕಗಳಲ್ಲಿ ಇಳಿಸಿಕೊಂಡಿದೆ. ಭಾರತದ ಯೋಜನೆಗಳಲ್ಲಿ ಕುಟುಂಬಂiೆÆೕಜನೆ ಹೆಚ್ಚಿನ ಮಹತ್ತ್ವ ನೀಡಲಾಗಿದ್ದರೂ ಪ್ರಗತಿ ಗಮನಾರ್ಹವಾಗಿ ಆಗಿಲ್ಲ. ಈ ರಾಷ್ಟ್ರಗಳಲ್ಲಿ ಸಾಮಾಜಿಕ ಬದಲಾವಣೆಯಾದ ಹೊರತು ಈ ದಿಕ್ಕಿನಲ್ಲಿ ಯಾವ ಪ್ರಗತಿಯನ್ನೂ ಆಶಿಸುವಂತಿಲ್ಲ. ವಿದ್ಯಾಭ್ಯಾಸ ಮುನ್ನಡೆದಂತೆ ಕುಟುಂಬಂiೆÆೕಜನೆ ಸಿದ್ಧಿಸುವ ಆಸೆ ಈ ರಾಷ್ಟ್ರಗಳಿಗಿದೆ. ಆದರೆ ಅಲ್ಲಿಯವರೆಗೆ ಜನಸಂಖ್ಯೆಯಲ್ಲಾಗುವ ಬೆಳೆವಣಿಗೆಯಿಂದ ಈ ರಾಷ್ಟ್ರಗಳ ಪ್ರಗತಿಯ ಮೇಲೆ ಆಗುವ ಪರಿಣಾಮ ತೀವ್ರ. ಇದನ್ನು ಹೇಗೆ ತಡೆಗಟ್ಟಬಹುದು ಎನ್ನುವುದೇ ಬೃಹದ್ ಸಮಸ್ಯೆ. ಈ ರಾಷ್ಟ್ರಗಳ ಸರ್ಕಾರಗಳು ಇದರ ಪರಿಣಾಮವನ್ನು ಮನಗಂಡು ಅನೇಕ ರೀತಿಯ ಯೋಜನೆಗಳನ್ನು ಕೈಗೊಂಡಿವೆ. ಏಷ್ಯನ್ ರಾಷ್ಟ್ರಗಳು ಶಕ್ತಿಮೀರಿ ದುಡಿದರೆ ಆರ್ಥಿಕ ಪ್ರಗತಿ ವರ್ಷಕ್ಕೆ ಶೇ. 5ರಂತೆ ಮುಂದುವರಿಯುತ್ತದೆ. ಆದರೆ ಜನಸಂಖ್ಯೆ ಶೇ. 2.5ರಂತೆ ಹೆಚ್ಚಿದರೆ ಜೀವನಮಟ್ಟದ ಮೇಲೆ ಆರ್ಥಿಕ ಪ್ರಗತಿಯಿಂದ ಯಾವ ಪರಿಣಾಮವೂ ಆಗದು. ಕಮ್ಯೂನಿಸ್ಟ್ ರಾಷ್ಟ್ರವಾದ ಚೀನಾ ಸಹ ಜನಸಂಖ್ಯೆಯ ಈ ಮಟ್ಟದ ಬೆಳೆವಣಿಗೆಯಿಂದ ಆರ್ಥಿಕ ಪ್ರಗತಿ ಕುಂಠಿತವಾಗುವುದೆಂಬುದನ್ನು ಮನಗಂಡಿದೆ.
ಬರುವ ದಶಕಗಳಲ್ಲಿ ಜನಸಂಖ್ಯಾ ಸಮಸ್ಯೆಯನ್ನೆದುರಿಸುವುದೇ ಏಷ್ಯನ್ ರಾಷ್ಟ್ರಗಳ ಪ್ರಮುಖ ಆರ್ಥಿಕ ಸಮಸ್ಯೆಯಾಗಬಹದು.
ಆರ್ಥಿಕ ಯೋಜನೆಗಳು
[ಬದಲಾಯಿಸಿ]ಏಷ್ಯದ ರಾಷ್ಟ್ರಗಳೆಲ್ಲವೂ ತಮ್ಮ ಆರ್ಥಿಕ ಅಭಿವೃದ್ಧಿಗಾಗಿ ಯೋಜನೆಗಳನ್ನು ರೂಪಿಸಿಕೊಂಡಿವೆ. ಏಷ್ಯದಲ್ಲಿ ಹಾಂಗ್ಕಾಂಗ್ ಮಾತ್ರ ಇದಕ್ಕೆ ಅಪವಾದ. ಅದು ತಟಸ್ಥ್ಯ ನೀತಿಗೆ (ಲೇಸೇ ಫೇರ್) ಗಟ್ಟಿಯಾಗಿ ಅಂಟಿಕೊಂಡಿದೆ. ಆ ಮಾರ್ಗದಿಂದಲೇ ಪ್ರಗತಿ ಸಾಧಿಸುವ ಹಂಬಲ ಆ ದೇಶದ್ದು. ಭಾರತ, ಚೀನ ಮತ್ತು ಪಾಕಿಸ್ತಾನ ಕ್ರಮವಾಗಿ 1951, 1953 ಮತ್ತು 1955ರಲ್ಲಿ ತಮ್ಮ ಪ್ರಥಮ ಪಂಚವಾರ್ಷಿಕ ಯೋಜನೆಗಳನ್ನು ಆರಂಭಿಸಿದುವು.ಇತ್ತೀಚಿಗಿನ ತಲಾ ಆದಾಯದ ತಖ್ತೆಯನ್ನು ಇಲ್ಲಿ ಕೊಟ್ಟಿದೆ. 2016ರ ಏಷಿಯನ್ ದೇಶಗಳ ಜಿಡಿಪಿ ಮತ್ತು ತಲಾದಾಯ ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ[೨] (sortable; in billions of $US)
ದೇಶ or ಪ್ರಾಂತ್ಯ |
GDP nominal billions of USD |
GDP (PPP) billions of USD |
GDP (PPP) per capita USD |
Location |
---|---|---|---|---|
ಅಫ್ಘಾನಿಸ್ತಾನ | 20.444 | 64.198 | 1,944 | ದಕ್ಷಿಣ ಏಷ್ಯಾ |
ಅರ್ಮೇನಿಯ | 11.644 | 26.053 | 8,164 | ಪಶ್ಚಿಮ ಏಷ್ಯಾ |
ಅಜೆರ್ಬೈಜಾನ್ | 74.145 | 165.988 | 17,761 | ಪಶ್ಚಿಮ ಏಷ್ಯಾ |
ಬಹ್ರೇನ್ | 33.862 | 66.851 | 49,020 | ಪಶ್ಚಿಮ ಏಷ್ಯಾ |
ಬಾಂಗ್ಲಾದೇಶ | 226.760 | 628.376 | 3,940 | ದಕ್ಷಿಣ ಏಷ್ಯಾ |
ಭೂತಾನ್ | 1.983 | 5.871 | 7,662 | ದಕ್ಷಿಣ ಏಷ್ಯಾ |
ಬ್ರುನೈ | 17.104 | 32.866 | 79,890 | ಆಗ್ನೇಯ ಏಷ್ಯಾ |
ಟೆಂಪ್ಲೇಟು:BIR | 68.277 | 244.365 | 4,752 | ಆಗ್ನೇಯ ಏಷ್ಯಾ |
ಕಾಂಬೋಡಿಯ | 16.551 | 50.161 | 3,276 | ಆಗ್ನೇಯ ಏಷ್ಯಾ |
ಚೀನಾ | 11,383.033 | 20,853.331 | 13,224 | ಪೂರ್ವ ಏಷ್ಯಾ |
Cyprus | 23.263 | 27.516 | 30,882 | ಪಶ್ಚಿಮ ಏಷ್ಯಾ |
ಟೆಂಪ್ಲೇಟು:ETM | 4.970 | 6.745 | 5,479 | ಆಗ್ನೇಯ ಏಷ್ಯಾ |
ಜಾರ್ಜಿಯ (ದೇಶ) | 16.536 | 34.345 | 9,209 | ಪಶ್ಚಿಮ ಏಷ್ಯಾ |
ಹಾಂಗ್ ಕಾಂಗ್ | 322.429 | 427.632 | 55,097 | ಪೂರ್ವ ಏಷ್ಯಾ |
ಭಾರತ | 2,288.715 | 8,642.758 | 5,808 | ದಕ್ಷಿಣ ಏಷ್ಯಾ |
ಇಂಡೋನೇಷ್ಯಾ | 936.955 | 3,010.746 | 10,651 | ಆಗ್ನೇಯ ಏಷ್ಯಾ |
ಇರಾನ್ | 386.120 | 1,439.295 | 17,443 | ಪಶ್ಚಿಮ ಏಷ್ಯಾ |
ಇರಾಕ್ | 148.411 | 588.737 | 15,348 | ಪಶ್ಚಿಮ ಏಷ್ಯಾ |
Israel | 311.739 | 292.809 | 33,136 | ಪಶ್ಚಿಮ ಏಷ್ಯಾ |
ಜಪಾನ್ | 4,412.603 | 4,901.102 | 37,519 | ಪೂರ್ವ ಏಷ್ಯಾ |
ಜಾರ್ಡನ್ | 35.878 | 79.907 | 11,971 | ಪಶ್ಚಿಮ ಏಷ್ಯಾ |
ಕಜಾಕಸ್ಥಾನ್ | 128.109 | 433.909 | 24,108 | ಮಧ್ಯ ಏಷ್ಯಾ |
ಟೆಂಪ್ಲೇಟು:PRK | 28.000 | 40.000 | 1,900 | ಪೂರ್ವ ಏಷ್ಯಾ |
ದಕ್ಷಿಣ ಕೊರಿಯಾ | 1,321.196 | 1,916.439 | 35,379 | ಪೂರ್ವ ಏಷ್ಯಾ |
ಟೆಂಪ್ಲೇಟು:KUW | 110.455 | 298.198 | 70,686 | ಪಶ್ಚಿಮ ಏಷ್ಯಾ |
Kyrgyzstan | 7.402 | 19.229 | 3,262 | ಮಧ್ಯ ಏಷ್ಯಾ |
ಲಾವೋಸ್ | 11.681 | 34.532 | 5,006 | ಆಗ್ನೇಯ ಏಷ್ಯಾ |
ಲೆಬನನ್ | 50.028 | 81.419 | 18,052 | ಪಶ್ಚಿಮ ಏಷ್ಯಾ |
Macau | 22.100 | 18.470 | 59,451 | ಪೂರ್ವ ಏಷ್ಯಾ |
ಟೆಂಪ್ಲೇಟು:MAS | 309.262 | 859.881 | 25,145 | ಆಗ್ನೇಯ ಏಷ್ಯಾ |
ಮಾಲ್ಡೀವ್ಸ್ | 2.885 | 4.554 | 13,312 | ದಕ್ಷಿಣ ಏಷ್ಯಾ |
ಟೆಂಪ್ಲೇಟು:MGL | 12.037 | 34.869 | 11,919 | ಪೂರ್ವ ಏಷ್ಯಾ |
ನೇಪಾಲ | 19.761 | 67.137 | 2,388 | ದಕ್ಷಿಣ ಏಷ್ಯಾ |
ಒಮಾನ್ | 77.779 | 176.211 | 43,847 | ಪಶ್ಚಿಮ ಏಷ್ಯಾ |
ಪಾಕಿಸ್ತಾನ | 270.961 | 982.380 | 4,749 | ದಕ್ಷಿಣ ಏಷ್ಯಾ |
ಪಪುವಾ ನ್ಯೂಗಿನಿ | 16.809 | 18.595 | 2,470 | ಆಗ್ನೇಯ ಏಷ್ಯಾ |
ಫಿಲಿಪ್ಪೀನ್ಸ್ | 310.312 | 793.193 | 6,974 | ಆಗ್ನೇಯ ಏಷ್ಯಾ |
ಕತಾರ್ | 170.860 | 333.936 | 137,162 | ಪಶ್ಚಿಮ ಏಷ್ಯಾ |
Russia | 1,132.739 | 3,684.643 | 24,449 | ಉತ್ತರ ಏಷ್ಯಾ |
ಸೌದಿ ಅರೇಬಿಯಾ | 618.274 | 1,720.027 | 52,311 | ಪಶ್ಚಿಮ ಏಷ್ಯಾ |
ಸಿಂಗಾಪುರ | 294.560 | 484.951 | 83,066 | ಆಗ್ನೇಯ ಏಷ್ಯಾ |
ಟೆಂಪ್ಲೇಟು:SRI | 74.924 | 236.471 | 10,410 | ದಕ್ಷಿಣ ಏಷ್ಯಾ |
ಸಿರಿಯಾ | 77.460 | n/a | 5,551 | ಪಶ್ಚಿಮ ಏಷ್ಯಾ |
ತೈವಾನ್ (ROC) | 529.597 | 1,125.988 | 46,036 | ಪೂರ್ವ ಏಷ್ಯಾ |
ತಾಜಿಕಿಸ್ತಾನ್ | 9.242 | 22.402 | 2,698 | ಮಧ್ಯ ಏಷ್ಯಾ |
ಥೈಲ್ಯಾಂಡ್ | 404.824 | 1,152.421 | 15,579 | ಆಗ್ನೇಯ ಏಷ್ಯಾ |
ಟರ್ಕಿ | 798.332 | 1,665.332 | 19,698 | ಪಶ್ಚಿಮ ಏಷ್ಯಾ |
ತುರ್ಕ್ಮೇನಿಸ್ಥಾನ್ | 47.932 | 82.395 | 14,217 | ಮಧ್ಯ ಏಷ್ಯಾ |
ಸಂಯುಕ್ತ ಅರಬ್ ಸಂಸ್ಥಾನ | 399.451 | 669.679 | 66,347 | ಪಶ್ಚಿಮ ಏಷ್ಯಾ |
ಉಜ್ಬೇಕಿಸ್ಥಾನ್ | 62.613 | 199.335 | 5,630 | ಮಧ್ಯ ಏಷ್ಯಾ |
ವಿಯೆಟ್ನಾಮ್ | 185.897 | 592.848 | 5,656 | ಆಗ್ನೇಯ ಏಷ್ಯಾ |
ಯೆಮೆನ್ | 43.229 | 104.008 | 3,788 | ಪಶ್ಚಿಮ ಏಷ್ಯಾ |
ಏಷ್ಯದಲ್ಲಿ ಯೋಜನೆಗಳ ಹಾದಿ ಬಲು ಕಠಿಣ. ಚೀನ ತನ್ನ ಎರಡನೆ ಯೋಜನೆ ಪ್ರಾರಂಭವಾಗುವುದಕ್ಕೆ ಮುಂಚೆಯೇ ಮುನ್ನೆಗೆತ ಕಾರ್ಯಕ್ರಮವನ್ನು ಆರಿಸಿಕೊಂಡು ಎರಡನೆಯ ಯೋಜನೆಯನ್ನು ಹಿಂತಳ್ಳಿತು. ಆರ್ಥಿಕ ಹೊಡೆತಗಳಿಂದಾಗಿ ಮೂರನೆಯ ಯೋಜನೆಯನ್ನು ಸಹ 3 ವರ್ಷ ಕಾಲ ಮುಂದಕ್ಕೆ ಹಾಕಬೇಕಾಯಿತು. ಭಾರತ ಮೂರು ಯೋಜನೆಗಳನ್ನು ಕ್ರಮವಾಗಿ ಮುಗಿಸಿದರೂ ನಾಲ್ಕನೆಯ ಯೋಜನೆಯನ್ನು ಮೂರು ವರ್ಷ ಕಾಲ ಮುಂದಕ್ಕೆ ಹಾಕಬೇಕಾಯಿತು. ಆರ್ಥಿಕ ಅಡಚಣೆ, ಪಾಕಿಸ್ತಾನದೊಡನೆ ಯುದ್ಧ, ಅನಾವೃಷ್ಟಿಯ ಫಲವಾಗಿ ಬೆಳೆಯಲ್ಲಿನ ನಷ್ಟ-ಇವು ನಾಲ್ಕನೆಯ ಯೋಜನೆಗೆ ಒದಗಿದ ವಿಘ್ನಗಳು. ಆದರೂ ಭಾರತದ ಯೋಜನೆ ಇಡೀ ಏಷ್ಯಕ್ಕೆ ಆದರ್ಶಪ್ರಾಯವಾಗಿದೆ. ವ್ಯವಸ್ಥಿತ ನಿರೂಪಣೆ, ಯೋಜನಾ ಆಯೋಗ, ಸರ್ಕಾರಿ ಹಾಗೂ ಖಾಸಗಿ ವಲಯಗಳ ಕಾರ್ಯಕ್ಷೇತ್ರ ನಿಷ್ಕರ್ಷೆ-ಇವು ಅದರ ವೈಶಿಷ್ಟ್ಯಗಳು. ಇಂಡೋನೇಷ್ಯ, ಚೀನ (ಟೈವಾನ್), ಮಯನ್ಮಾರ್, ಆಘ್ಘಾನಿಸ್ತಾನ, ನೇಪಾಲ, ದಕ್ಷಿಣ ವಿಯೆಟ್ನಾಂ, ಲಾವೋಸ್, ಕಾಂಬೋಡಿಯ, ದಕ್ಷಿಣ ಕೊರಿಯ, ಮಂಗೋಲಿಯ, ಫಿಲಿಪೀನ್ಸ್, ಶ್ರೀಲಂಕ, ಮಲಯ ಈ ರಾಷ್ಟ್ರಗಳು ಯೋಜನೆ ಗಳನ್ನು ರೂಪಿಸಿಕೊಂಡು ಶ್ರದ್ಧಾಪುರ್ವಕವಾಗಿ ಆರ್ಥಿಕ ಪ್ರಗತಿಗಾಗಿ ಶ್ರಮಿಸುತ್ತಿವೆ. ಜಪಾನ್ 1961-71ರಷ್ಟು ದೀರ್ಘಾವಧಿಯ ಯೋಜನೆಯನ್ನು ರೂಪಿಸಿಕೊಂಡಿದೆ. ಜಪಾನಿನ ಯೋಜನೆಯಲ್ಲಿ ಸರ್ಕಾರಿ ರಂಗಕ್ಕೆ ಕಡಿಮೆ ಪ್ರಾಧಾನ್ಯ. ಖಾಸಗಿ ವಲಯದ ಮೇಲೆ ಕಡಿಮೆ ಹಿಡಿತವಿರುವ ಯೋಜನೆ ಇದರದು.
ತಮ್ಮ ಯೋಜನೆಗಳಲ್ಲಿ ರೂಪಿಸಿಕೊಂಡಿರುವ ಪ್ರಮಾಣದ ಆರ್ಥಿಕ ಬೆಳೆವಣಿಗೆ ಯನ್ನು ಮುಟ್ಟುವುದು ಈ ರಾಷ್ಟ್ರಗಳಿಗೆ ಕಠಿಣವಾಗಿದ್ದರೂ ಇವು ಯೋಜನೆಯಿಂದ ತಕ್ಕಮಟ್ಟಿನ ಬೆಳೆವಣಿಗೆ ಸಾಧಿಸಿವೆ. 1950ರ ದಶಕ ಹಾಗೂ 60ರ ಪ್ರಾರಂಭದಲ್ಲಿ ಏಷ್ಯನ್ ರಾಷ್ಟ್ರಗಳಲ್ಲಿ (ಜಪಾನನ್ನು ಬಿಟ್ಟು) ವರ್ಷಕ್ಕೆ ಶೇ. 4ರಂತೆ ಆರ್ಥಿಕ ಬೆಳೆವಣಿಗೆಯಾಗಿದೆ. ಮತ್ತೊಂದು ಕುತೂಹಲಕರವಾದ ಅಂಶವೆಂದರೆ, ಭಾರತ ಚೀನಗಳಿಗಿಂತ ತಡವಾಗಿ ಯೋಜನೆಯನ್ನು ಪ್ರಾರಂಭಿಸಿದ ಕೆಲವು ಸಣ್ಣ ರಾಷ್ಟ್ರಗಳು ಹೆಚ್ಚಿನ ಆರ್ಥಿಕ ಬೆಳೆವಣಿಗೆಯನ್ನು ತಮ್ಮ ಯೋಜನೆಗಳ ಮೂಲಕ ಸಾಧಿಸಿವೆ. 1960ರ ದಶಕದಲ್ಲಿ ವರ್ಷಕ್ಕೆ ಶೇ. 5ಕ್ಕಿಂತಲೂ ಹೆಚ್ಚಾಗಿ ಬೆಳೆವಣಿಗೆಯನ್ನು ಸಾಧಿಸಿರುವ ಏಷ್ಯನ್ ರಾಷ್ಟ್ರಗಳುಂಟು.
ಏಷ್ಯದ ಆರ್ಥಿಕ ವ್ಯವಸ್ಥೆಯನ್ನು ಒಟ್ಟಾಗಿ ವಿವೇಚಿಸಿದಾಗ ಕಂಡುಬರುವ ಅಂಶವೆಂದರೆ, ಈ ರಾಷ್ಟ್ರಗಳು ತಮ್ಮ ಆರ್ಥಿಕ ಪ್ರಗತಿಗಾಗಿ ಬಡತನವನ್ನು ನೀಗಿಸಿಕೊಳ್ಳುವುದಕ್ಕಾಗಿ ಅಪಾರ ಶ್ರದ್ಧೆ ಮತ್ತು ಶ್ರಮ ವಹಿಸುತ್ತಿವೆ. ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಕೈಗಾರಿಕಾ ಕ್ರಾಂತಿ ನಡೆದಾಗ ಅವರಿಗಿದ್ದ ಸಾಮಾಜಿಕ, ರಾಜಕೀಯ ಸಮಸ್ಯೆಗಳು ಕಡಿಮೆ. ಏಷ್ಯದ ರಾಷ್ಟ್ರಗಳು ತಮ್ಮ ಸಾಮಾಜಿಕ ಸಮಸ್ಯೆಗಳನ್ನು ಗೆದ್ದು ಅನಂತರ ಆರ್ಥಿಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕಾದ ಸಂದಿಗ್ಧ ಸಮಯ ಒದಗಿದೆ. ಅವುಗಳ ಆರ್ಥಿಕ ಮುನ್ನಡೆಯ ಪ್ರಯೋಗಗಳು ಸಿದ್ಧಿಯ ಹಂತದಲ್ಲಿವೆ.
ಉಲ್ಲೇಖಗಳು
[ಬದಲಾಯಿಸಿ]- ↑ "XE Currency Exchange". XE. Retrieved 16 November 2014.
- ↑ "International Monetary Fund, World Economic Outlook Database, April 2014: Nominal GDP list of countries".