ವಿಷಯಕ್ಕೆ ಹೋಗು

ಕಸ್ತೂರಿರಂಗನ್ ವರದಿ ಮತ್ತು ಪಶ್ಚಿಮ ಘಟ್ಟ ಸಂರಕ್ಷಣೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪಶ್ಚಿಮಘಟ್ಟ ಸಂರಕ್ಷಣೆಯ ಬಗೆಗೆ 31 ಆಗಸ್ಟ್ 2011ರ ಗಾಡ್ಗಿಲ್ ವರದಿಯ ಮುಖಪುಟ (Gadgil Commission Report)
  • "ನಾವು ಈಗಾಗಲೇ ಭೂಮಿಯ ಸಂಪನ್ಮೂಲಗಳಲ್ಲಿ ಅಗತ್ಯಕ್ಕಿಂತ 2 ರಿಂದ 3 ಪಟ್ಟು ಹೆಚ್ಚಿನ ಸಂಪನ್ಮೂಲಗಳನ್ನು ಬಳಸುತ್ತಿದ್ದೇವೆ. "ಭೂಮಿಯ ಪ್ರತಿ ವ್ಯಕ್ತಿಯ ಅಗತ್ಯಗಳನ್ನು ಪೂರೈಸಲು ಸಾಕಷ್ಟು ಒದಗಿಸುತ್ತದೆ, ಆದರೆ ಪ್ರತಿ ಮಾನವನ ದುರಾಸೆಯನ್ನಲ್ಲ " - ಎಂದು ಹೇಳಲಾಗುತ್ತದೆ (ಗಾಂಧೀಜಿ).
  • ಈಗ ಮಾನವನ ಬದುಕಿಗೆ ಪರಿಸರ ರಕ್ಷಣೆಗೆ ಅತಿ ಸೂಕ್ಷ್ಮ ಪ್ರದೇಶವಾದ ಭಾರತದ ಪಶ್ಚಿಮ ಘಟ್ಟಗಳ ಪರಿಸರ ರಕ್ಷಣೆ ಅತಿ ಅಗತ್ಯ ಎಂಬುದ ಪರಿಸರ ತಜ್ಞರ ಅಭಿಪ್ರಾಯ. ಮತ್ತು ಒತ್ತಾಯ. []
  • ಪಶ್ಚಿಮ ಘಟ್ಟಗಳು ಭಾರತೀಯ ಪರ್ಯಾಯ ದ್ವೀಪದ ಪಶ್ಚಿಮ ಕರಾವಳಿಗೆ ಸಮಾನಾಂತರವಾಗಿ ಹಬ್ಬಿದ ಒಂದು ಪರ್ವತ ಶ್ರೇಣಿಯಾಗಿದೆ. ಪಶ್ಚಿಮಘಟ್ಟದ ಶ್ರೇಣಿ, ಗುಜರಾತ್ ನಿಂದ ಆರಂಭವಾಗಿ ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ ಮತ್ತು ತಮಿಳುನಾಡಿನ ಕನ್ಯಾಕುಮಾರಿಯವರೆಗೂ ಹಬ್ಬಿದೆ. ಇದು ಭಾರತದ ಪಶ್ಚಿಮ ರಾಜ್ಯಗಳನ್ನು ಒಳಗೊಂಡಿದೆ. ಪಶ್ಚಿಮ ಘಟ್ಟಗಳ ಒಟ್ಟು 1,64, 280 ಚ.ಕಿ.ಮೀ. ಪ್ರದೇಶದಲ್ಲಿ ಸುಮಾರು 59.940 ಚ.ಕಿ.ಮೀ ಪರಿಸರ ಸೂಕ್ಷ್ಮ ಪ್ರದೇಶ.(36.49%)[]

ಮಾದವ ಗಾಡ್ಗಿಲ್‍ರ ವರದಿ

[ಬದಲಾಯಿಸಿ]
  • ಪಶ್ಚಿಮ ಘಟ್ಟಗಳ ಪರಿಸರ ರಕ್ಷಣೆಯ ಉದ್ದೇಶದಿಂದ, ಅದರ ಬಗೆಗೆ ಪರಿಸರ ತಜ್ಞ ಮಾದವ ಗಾಡ್ಗಿಲ್‍ರ ಅಧ್ಯಕ್ಷತೆಯಲ್ಲಿ ಕೇಂದ್ರ ಸರ್ಕಾರ ಒಂದು ಸಮಿತಿ ರಚಿಸಿ ಅವರನ್ನು ಈ ವಿಷಯದಲ್ಲಿ ಒಂದು ವರದಿ ಕೊಡಲು ಕೆಂದ್ರ ಸರ್ಕಾರ ನೇಮಿಸಿತು. ಅವರು ದಿ 31 ಆಗಸ್ಟ್ 2011ರಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿದರು.
  • ಈ ವರದಿಯಲ್ಲಿ ಶೇ 94-97% ಪಶ್ಚಿಮ ಘಟ್ಟಗಳ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಪರಿಗಣಿಸಬೇಕೆಂದೂ ಮತ್ತು ಯಾವುದೇ ಅಭಿವೃದ್ಧಿ ಕಾರ್ಯ ಕೈಗೊಳ್ಳವಾಗ ಅದು ಅಲ್ಲಿಯ ಪರಿಸರವನ್ನು ಜೀವ ವೈವಿಧ್ಯತೆಯ ಕ್ರಮವನ್ನು ಕೆಡಿಸದಿರುವ ಷರತ್ತಿನ ಮೇಲೆ ಅನುಮತಿ ನೀಡಬೆಕೆಂದು ಶಿಪಾರಸು ಮಾಡಿತು. ಈ ಭಾಗದಲ್ಲಿ ಬಹಳಷ್ಟು ತೋಟಗಳೂ, ವಸತಿ ಪ್ರದೇಶಗಳೂ, ಕೃಷಿ ಪ್ರದೇಶವೂ ಸೇರಿತ್ತು. ಇದರಲ್ಲಿ ಆಪ್ರದೇಶದ ಮುಕ್ಕಾಲು ಭಾಗವನ್ನು ನಿರ್ಬಂಧಿತ ಪರಿಸರ ಸೂಕ್ಷ್ಮ ಪ್ರದೇಶವೆಂದು ಪರಿಗಣಿಸಲಾಗಿತ್ತು. ಆ ಕಮಿಟಿಯ ಆಪ್ರದೇಶದಲ್ಲಿ ಯಾವುದೇ ದೊಡ್ಡ ಹೊಸ ಅಣೆಕಟ್ಟುಗಳನ್ನು ಕಟ್ಟುಬಾರದು, ಈ ಪ್ರದೇಶ ವಿಶೇಷ ರಕ್ಷಣೆ ಮತ್ತು ಅದರ ಭೂಲಕ್ಷಣ, ವನ್ಯಜೀವಿಗಳ ಕಾಳಜಿ, ಫಲವತ್ತಾದ ಭೂಮಿಯನ್ನು ಉಳಿಸುವ ಅಗತ್ಯವಿದೆ. ಈ ಪ್ರದೇಶದಲ್ಲಿ, ಕೆಲವು ಐತಿಹಾಸಿಕ ಮೌಲ್ಯಗಳು ಸಹ ಇವೆ ಇತ್ಯಾದಿ ಕಾರಣಗಳನ್ನು ಕೊಟ್ಟಿತ್ತು.
  • ಈ ಗಾಡ್ಗೀಳ್ ಸಮಿತಿ ವರದಿಯು ತೀವ್ರ ಟೀಕೆಗೆ ಒಳಗಾಯಿತು. ಅದು ಎದುರಿಸಿದ ಮುಖ್ಯ ಟೀಕೆಯೆಂದರೆ, ಇದು ವಾಸತ್ವಸ್ಥತಿಗಳ ಬಗ್ಗೆ ಗಮನ ಹರಿಸದೆ ಹೆಚ್ಚು ಪರಿಸರಸ್ನೇಹಿ ಮತ್ತು ಕಾಳಜಿ ಹೊಂದಿದೆ. ಈ ವರದಿಯಲ್ಲಿ ಅದರ ಶಿಫಾರಸು ಕಾರಣ ಆಗುವ ಆದಾಯದ ನಷ್ಟ ದ ಬಗೆಗೆ ಯಾವುದೇ ಪರಿಹಾರ ಅಥವಾ ಕ್ರಮಗಳನ್ನು ನೀಡುವುದಿಲ್ಲ, ಎಂಬುದಾಗಿತ್ತು.

ಪಶ್ಚಿಮ ಘಟ್ಟದ ವ್ಯಾಪ್ತಿ

[ಬದಲಾಯಿಸಿ]
  • ಗುಜರಾತಿನ ತಪತಿನದಿ ಮೂಲದಿಂದ ಆರಂಭವಾಗುವ ಪಶ್ಚಿಮ ಘಟ್ಟದ ಶ್ರೇಣಿಮಹಾರಾಷ್ರ, ಗೋವಾ,ಕರ್ನಾಟಕ, ಕೇರಳ, ತಮಿಳುನಾಡಿನ ಕನ್ಯಾಕುಮರಿವರೆಗೆ ಹಬ್ಬಿದೆ. ಇದರವಿಸ್ತೀರ್ಣ 164280 ಚ,ಕಿಮೀ. ಕರ್ನಾಟಕದಲ್ಲಿ ಬೆಳಗಾವಿ, ಉತ್ತರಕನ್ನಡ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಉಡುಪಿ, ಕೊಡಗು ಮತ್ತು ಚಾಮರಾಜ ನಗರದ ಕೆಲವು ಜಿಲ್ಲೆಗಳು ಕಸ್ತೂರಿ ರಂಗನ್ ವರದಿಯ ವ್ಯಾಪ್ತಿಯಲ್ಲಿ ಬರುತ್ತವೆ. ಕರ್ನಾಟಕದಲ್ಲಿ ಪಶ್ಚಿಮಘಟ್ಟ 44,448 ಚ,ಕಿ.ಮೀ. ವಿಸ್ತೀರ್ಣ ಹೊಂದಿದೆ. ಅದರಲ್ಲಿ 20,668 ಚ.ಕಿ.ಮೀ. ಪ್ರದೇಶ ವೆದಿ ಪ್ರಕಾರ ಪರಿಸರ ಸೂಕ್ಷ್ಮ ಪ್ರದೇಶದ (ಇಎಸ್ ಎ) ವ್ಯಾಪ್ತಿಯಲ್ಲಿ ಬರುವುದು. ಇದು 1573 ಗ್ರಾಮಗಳನ್ನು ಒಳಗೊಂಡಿದೆ. ರಾಜ್ಯ ಸರ್ಕಾರ ಇದನ್ನು 850 ಗ್ರಾಮಗಳಿಗೆ ಸೀಮಿತಗೊಳಿಸಬೇಕೆಂದು ಕೇಳಿದೆ.

ಕಸ್ತೂರಿರಂಗನ್ ಸಮಿತಿ ವರದಿ

[ಬದಲಾಯಿಸಿ]
ಡಾ.ಕೃಷ್ಣಸ್ವಾಮಿ ಕಸ್ತೂರಿರಂಗನ್ ಪರಿಚಯ
  • ಡಾ.ಕೃಷ್ಣಸ್ವಾಮಿ ಕಸ್ತೂರಿರಂಗನ್ (ಸ್ಥಳ:ಎರ್ನಾಕುಳಂ ಕೇರಳ; ಜನನ: 24 ಅಕ್ಟೋಬರ್ 1940)
  • 1994 ರಿಂದ 2003 ರ ವರೆಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ದ ನೇತೃತ್ವ; ಭಾರತೀಯ ಬಾಹ್ಯಾಕಾಶ ವಿಜ್ಞಾನಿ.
  • ಭಾರತೀಯ ಸಂಸತ್ತಿನ ಮೇಲ್ಮನೆಯ ಸದಸ್ಯ; (ರಾಜ್ಯ ಸಭೆ, 2003-2009).
  • ಈಗ, ಭಾರತ ಸರ್ಕಾರದ ಯೋಜನಾ ಆಯೋಗದ ಸದಸ್ಯ.
  • ಅಧ್ಯಕ್ಷರು - ಕಸ್ತೂರಿರಂಗನ್ ಸಮಿತಿ.
.
  • ಗಾಡ್ಗೀಳ್ ಸಮಿತಿ ವರದಿಯ ಕುಂದು ಕೊರತೆಯನ್ನು ನೀಗಿಸಲು ಕಸ್ತೂರಿರಂಗನ್ ಸಮಿತಿಯನ್ನು ನೇಮಿಸಲಾಯಿತು. ಕಸ್ತೂರಿರಂಗನ್ ಸಮಿತಿ ತನ್ನ ವರದಿಯನ್ನು , 2013 ರ ಏಪ್ರಿಲ್ 15 ರಂದು ಸಲ್ಲಿಸಿತು. ಇತರ 10 ಸದಸ್ಯರ ಸಮಿತಿಯ ಜೊತೆ, ಕೆ.ಕಸ್ತೂರಿರಂಗನ್ ಸಿದ್ಧಪಡಿಸಿದ ಪಶ್ಚಿಮ ಘಟ್ಟಗಳ ಈ ಕಸ್ತೂರಿರಂಗನ್ ವರದಿಯನ್ನು ಸರ್ಕಾರ ಸ್ವೀಕರಿಸಿದೆ.[]

ವರದಿಯ ಮುಖ್ಯಾಂಶಗಳು

[ಬದಲಾಯಿಸಿ]
  • ಕಸ್ತೂರಿ ರಂಗನ್‍ಸಮಿತಿ ಗುರುತಿಸಿರುವ ಪಶ್ಚಿಮ ಘಟ್ಟ ವ್ಯಾಪ್ತಿಯ 59,949 ಸಾವಿರ ಚ,ಕಿ.ವ್ಯಾಪ್ತಿಯ ಪ್ರದೇಶ (36.49%) ಇಕೋಸೆನ್ಸಿಟಿವ್ ಏರಿಯಾ(ಇಎಸ್ ಎ) ಕ್ಕೆ ಒಳಪಟ್ಟು ನಿರ್ಭಂಧಿತವಾಗಿರುತ್ತದೆ. ಈ ಪ್ರದೇಶದಲ್ಲಿ ಗಣಿಗಾರಿಕೆ, ಕ್ವಾರಿ, ಮರಳುಗಾರಿಕೆ ಪರಿಸರ ವಿರೋಧಿ ಕೈಗಾರಿಕೆ, ಜಲವಿದ್ಯುತ್, ಪವನ ವಿದ್ಯುತ್ ಯೋಜನೆಗಳನ್ನು ಸಂಪೂರ್ಣ ನಿಷೇಧಿಸಲಾಗಿದೆ. ಎಲ್ಲಾರೀತಿಯ ಗಣಿಗಾರಿಕೆ ಮುಂದಿನ 5 ವರ್ಷ ಮುಗಿತ್ತಿದ್ದಂತೆ ಸ್ಥಗಿತಗೊಳಿಸಬೇಕು. 20,000 ಚ,ಮೀ, ದೊಡ್ಡದಾದ ಯಾವುದೇ ಕಟ್ಟಡ ನಿರ್ಮಿಸುವಂತಿಲ್ಲ. ಇಎಸ್ ಎನಿಂದ 10ಕಿ.ಮೀ. ವ್ಯಾಪ್ತಿಯಲ್ಲ ಯಾವುದೇ ಕಾಮಗಾರಿ ಪರಿಸರ ಇಲಾಖೆ, ಸ್ಥಳೀಯ ಗ್ರಾಮಸಭೆ ಅನುಮತಿ ಪಡೆಯಬೇಕು. ಈಪ್ರದೇಶದಲ್ಲಿ ಸಿಮೆಂಟು, ಕಲ್ಲು, ರಸಾಯನಿಕ ಬಳಸಲು, ಜನವಸತಿ ನಿರ್ಮಿಸಲು ಅವಕಾಶವಿಲ್ಲ.[]

ಪರಿಸರ ರಕ್ಷಣೆ

[ಬದಲಾಯಿಸಿ]
  • ಭಾರತದ ಕೇಂದ್ರ ಸರ್ಕಾರದ ಪರಿಸರ, ಅರಣ್ಯ, ಹವಾಮಾನ ಬದಲಾವಣೆ ಸಚಿವಾಲ ಯವು ಫೆ.27 ರಂದು ಈ ಅಧಿಸೂಚನೆ ಪ್ರಕಟಿಸಿದೆ. ಕರ್ನಾಟಕ ರಾಜ್ಯದ 1553ಕ್ಕೂ ಹೆಚ್ಚು ಹಳ್ಳಿಗಳ 20,668 ಚದರ ಕಿ.ಮೀ. ಪ್ರದೇಶ ಪರಿಸರ ಸೂಕ್ಷ್ಮ ಪ್ರದೇಶ(ಇಎಸ್ಎ-Ecologically Sensitive Area (ESA) zones)ದಲ್ಲಿ ಸೇರಿದೆ. ಮೊದಲ ಎರಡು ಕರಡು ಅಧಿಸೂಚನೆಯಲ್ಲಿ ಕೇರಳ ರಾಜ್ಯವೂ ಇಎಸ್ಎ ಪಟ್ಟಿಯಲ್ಲಿತ್ತು. ಆದರೆ ಮೂರನೇ ಬಾರಿ ಹೊರಡಿಸಿರುವ ಅಧಿಸೂಚನೆಯಲ್ಲಿ ಕೇರಳ ಇಲ್ಲ. ಇದಕ್ಕೆ ಕಾರಣ, ಅಲ್ಲಿನ ಸರ್ಕಾರ ಸಲ್ಲಿಸಿರುವ ಮ್ಯಾಪ್ಸಹಿತ ವಿಸೃತ ವರದಿ ಮತ್ತು ಈ ಸಂಬಂಧ ರಾಜಕೀಯ ಒತ್ತಡ ಹೇರಿತ್ತು. ಆದರೆ ಕರ್ನಾಟಕ ಸರ್ಕಾರ ಈ ನಿಟ್ಟಿನಲ್ಲಿ ಗಂಭೀರ ಪ್ರಯತ್ನ ನಡೆಸಿಲ್ಲ ಎಂಬ ಆರೋಪ ಇದೆ...[]
  • ಈ ವರದಿ ಪ್ರಕಾರ ಅರಣ್ಯ ಪ್ರದೇಶ ವ್ಯಾಪ್ತಿಗೆ ಬರುತ್ತದೆ ಯಾವುದೇ ಗ್ರಾಮವನ್ನು ಒಕ್ಕೆಲೆಬ್ಬಿಸುವ ಕೆಲಸ ಮಾಡುವುದಿಲ್ಲ. ಮೂಲಭೂತ ಸೌಕರ್ಯಕ್ಕೆ ಯಾವುದೇ ಸಮಸ್ಯೆ ಆಗಲ್ಲ. ರಸ್ತೆ, ಆಸ್ಪತ್ರೆ, ಶಾಲೆ ನಿರ್ಮಾಣ ಸೇರಿದಂತೆ ಸಾಮುದಾಯಿಕ ಕೆಲಸಗಳಿಗೆ ಯಾವುದೇ ಸಮಸ್ಯೆ ಆಗಲ್ಲ.
  • ವಿದ್ಯುತ್, ನೀರಾವರಿ, ಕೈಗಾರಿಕೆ ಸೇರಿದಂತೆ ಯಾವುದೇ ರೀತಿಯ ಹೊಸ ಯೋಜನೆಗಳನ್ನು ಜಾರಿ ಮಾಡಬೇಕಾದರೆ ಕೇಂದ್ರ ಸರ್ಕಾರದ ಒಪ್ಪಿಗೆ ಪಡೆಯಬೇಕು.

ಪರಿಣಾಮಗಳು

[ಬದಲಾಯಿಸಿ]
  • ಡಾ.ಕಸ್ತೂರಿರಂಗನ್ ವರದಿಯನ್ನು ಅನುಷ್ಠಾನ ಮಾಡಿದರೆ ಪಶ್ಚಿಮ ಘಟ್ಟ ಮತ್ತು ಮಲೆನಾಡು ಪ್ರದೇಶವನ್ನು ಅತೀ ಸೂಕ್ಷ್ಮ ಪರಿಸರ ವಲಯವೆಂದು ಘೋಷಣೆ ಮಾಡಲಾಗುತ್ತದೆ. ಒಂದು ಬಾರಿ ಸೂಕ್ಷ್ಮ ವಲಯವೆಂದು ಘೋಷಣೆ ಮಾಡಿದರೆ ಇಲ್ಲಿ ಯಾವುದೇ ರೀತಿಯ ಚಟುವಟಿಕೆಯನ್ನು ನಡೆಸುವಂತಿಲ್ಲ. ರಾಜ್ಯ ಸರ್ಕಾರ ಸಂಪೂರ್ಣವಾಗಿ ತನ್ನ ಹತೋಟಿಯನ್ನು ಕಳೆದುಕೊಂಡು ಕೇಂದ್ರ ಸರ್ಕಾರದ ಸುಪರ್ದಿಗೆ ನೀಡಬೇಕಾಗುತ್ತದೆ. ಪಶ್ಚಿಮ ಘಟ್ಟದಲ್ಲಿ ಅಪರೂಪದ ಪ್ರಾಣಿಪಕ್ಷಿಗಳು, ಗಿಡಮೂಲಿಕೆಗಳು, ವನ್ಯಜೀವಿಗಳು ಇರುವುದರಿಂದ ಇವುಗಳ ಸಂರಕ್ಷಣೆಗಾಗಿ ಕೇಂದ್ರ ಸರ್ಕಾರ ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತದೆ. ಅಲ್ಲದೆ ದಶಕಗಳಿಂದಲೂ ಅರಣ್ಯ ಪ್ರದೇಶದಲ್ಲಿ ರುವ ಆದಿವಾಸಿಗಳನ್ನು, ಯಾವುದೇ ಗ್ರಾಮವನ್ನು ಒಕ್ಕೆಲೆಬ್ಬಿಸುವ ಕೆಲಸ ಮಾಡುವುದಿಲ್ಲ. ಅಲ್ಲದೆ ವಿದ್ಯುತ್, ನೀರಾವರಿ, ಕೈಗಾರಿಕೆ ಸೇರಿದಂತೆ ಯಾವುದೇ ರೀತಿಯ ಹೊಸ ಯೋಜನೆಗಳನ್ನು ಜಾರಿ ಮಾಡಬೇಕಾದರೆ ಕೇಂದ್ರ ಸರ್ಕಾರದ ಒಪ್ಪಿಗೆ ಪಡೆಯಬೇಕು.
  • ಡಾ.ಕಸ್ತೂರಿರಂಗನ್ ವರದಿಯಿಂದ ಬೆಳಗಾವಿ ಜಿಲ್ಲೆಯ ಖಾನಾಪುರ 62 ಹೆಕ್ಟೇರ್, ಬೆಳಗಾವಿ ಒಂದು ಹೆಕ್ಟೇರ್, ಚಾಮರಾಜನಗರದ ಗುಂಡ್ಲುಪೇಟೆಯ 21, ಚಿಕ್ಕಮಗಳೂರು ಜಿಲ್ಲೆಯ ಚಿಕ್ಕಮಗಳೂರು 27, ಕೊಪ್ಪ 32, ಮೂಡಗೆರೆ 27, ನರಸಿಂಹರಾಜಪುರ 35, ಶೃಂಗೇರಿ 26, ಕೊಡಗು ಜಿಲ್ಲೆಯ ಮಡಿಕೇರಿ 23, ಸೋಮವಾರಪೇಟೆಯ 11, ವಿರಾಜಪೇಟೆಯ 21, ಹಾಸನ ಜಿಲ್ಲೆಯ ಆಲೂರು 1, ಸಕಲೇಶಪುರ 34, ದ.ಕನ್ನಡದ ಬೆಳ್ತಂಗಡಿ 17, ಪುತ್ತೂರು 11, ಸುಳ್ಯ 18, ಉ.ಕನ್ನಡ ಜಿಲ್ಲೆಯ ಆಂಕೋಲಾ 43, ಭಟ್ಕಳ 28, ಹೊನ್ನಾವರ 44, ಜೋಯ್ಡಾ 110, ಕಾರವಾರ 39, ಕುಮ್ಟಾ 43, ಸಿದ್ದಾಪುರ 107, ಸಿರಸಿ 125, ಯಲ್ಲಾಪುರ 87, ಮೈಸೂರಿನ ಎಚ್.ಡಿ.ಕೋಟೆ 62, ಶಿವಮೊಗ್ಗದ ಹೊಸನಗರ 126, ಸಾಗರ 134, ಶಿಕಾರಿಪುರ 12, ಶಿವಮೊಗ್ಗ 66, ತೀರ್ಥಹಳ್ಳಿ 146, ಉಡುಪಿಯ ಕಾರ್ಕಳ 13, ಕುಂದಾಪುರದ 24 ಹೆಕ್ಟೇರ್ ಈ ವ್ಯಾಪ್ತಿಗೆ ಒಳಪಡುತ್ತದೆ.[]

ಸಮಸ್ಯೆ

[ಬದಲಾಯಿಸಿ]
  • ಕೇಂದ್ರ ಸರ್ಕಾರ ಮೊದಲ ಕಸ್ತೂರಿರಂಗನ್ ವರದಿಯ ಕರಡು ಅಧಿಸೂಚನೆ ಹೊರಡಿಸಿದ್ದು 2014ರ ಮಾ.10ರಂದು. ನಂತರ ಎರಡನೇ ಕರಡು ಅಧಿಸೂಚನೆಯನ್ನು 2015ರ ಸೆ.4ರಂದು ಹೊರಡಿಸಿತು. ಮೂರನೇ ಕರಡು ಅಧಿಸೂಚನೆಯನ್ನು 2017ರ ಫೆ.27ರಂದು ಹೊರಡಿಸಿದೆ. ಇಷ್ಟಾದರೂ ಸರ್ಕಾರ ಅಂತಿಮ ಅಧಿಸೂಚನೆ ಹೊರಡಿಸುತ್ತಿಲ್ಲ. ಜನವಿರೋಧ ಕಟ್ಟಿಕೊಳ್ಳುವ ಬದಲು 545 ದಿನಗಳ ಗಡುವು ಸಮೀಪಿಸುತ್ತಿದ್ದಂತೆ ಹೊಸ ಕರಡು ಅಧಿಸೂಚನೆ ಹೊರಡಿಸಲಾಗುತ್ತಿದೆ. ಈ ಅಧಿಸೂಚನೆ ವಿರುದ್ಧ ಕೇಂದ್ರಕ್ಕೆ ಮತ್ತೆ ಆಕ್ಷೇಪಣೆ ಸಲ್ಲಿಸಲಾಗುವುದು, ಜನತೆಗೆ ತೊಂದರೆಯಾಗದಂತೆ ರಾಜ್ಯ ಸರ್ಕಾರ ಎಲ್ಲ ರೀತಿಯ ಕ್ರಮ ಕೈಗೊಳ್ಳಲಿದೆ ಎಂದು ಅರಣ್ಯ ಸಚಿವ ಬಿ.ರಮಾನಾಥ ರೈ ತಿಳಿಸಿದ್ದಾರೆ.
ಕುದುರೆಮುಖ ರಾಷ್ಟ್ರೀಯ ಉದ್ಯಾನ (Shola Grasslands and forests in the Kudremukh National Park, Western Ghats, Karnataka)

ಕಸ್ತೂರಿರಂಗನ್ ವರದಿಗೆ ವಿರೋಧ ಮತ್ತು ಪರ

[ಬದಲಾಯಿಸಿ]
  • ಪರಿಸರ ತಜ್ಞ ಕಲ್ಕುಳಿ ವಿಠಲ ಹೆಗಡೆಯವರೇ ವಿರೋದ ವ್ಯಕ್ತಪಡಿಸಿದ್ದಾರೆ. 'ಮಲೆನಾಡ ರೈತರು ಒಕ್ಕಲೆಬ್ಬಿಸುವ ಭೀತಿಯಲ್ಲಿದ್ದಾರೆ. ಹಿಂದೆ ಕುದುರೆಮುಖ ರಾಷ್ಟ್ರೀಯ ಉದ್ಯಾನದ ಹೆಸರಿನಲ್ಲಿ ಸರ್ಕಾರ ಅಲೆಮಾರಿಗಳು, ಗಿರಿಜನರನ್ನು ಒಕ್ಕಲೆಬ್ಬಿಸಿತ್ತು. ಇದೀಗ ಸರ್ಕಾರ ಕಸ್ತೂರಿ ರಂಗನ್‌ ವರದಿ ಅನುಷ್ಠಾನಗೊಳಿಸಲು ಅಲ್ಲಿರುವ ಜನರನ್ನು ಸರ್ಕಾರ ಒಕ್ಕಲೆಬ್ಬಿಸಲು ಹೊರಟಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.[]
  • ಇಲ್ಲಿನ ಮಲೆನಾಡು ರೈತ ಹಾಗೂ ಕೂಲಿಕಾರ್ಮಿಕರ ಹೋರಾಟ ವೇದಿಕೆ ಕಸ್ತೂರಿರಂಗನ್‌ ವರದಿ ಜಾರಿ ವಿರೋಧಿಸಿ ಹೊಳೆಬಾಗಿಲಿನಿಂದ ಸಾಗರದವರೆಗೆ ಹಮ್ಮಿಕೊಂಡಿರುವ ಪಾದಯಾತ್ರೆಗೆ ೫-೪ ೨೦೧೭ ಬುಧವಾರ ಹಮ್ಮಿಕೊಳ್ಳಲಾಯಿತು. ಪಶ್ಚಿಮಘಟ್ಟವನ್ನು ಉಳಿಸಬೇಕು ಎನ್ನುವ ವಿಷಯಕ್ಕೆ ಮಲೆನಾಡಿನ ಜನರ ಸಹಮತವಿದೆ. ಆದರೆ, ಈ ಉದ್ದೇಶ ಈಡೇರಿಕೆಗಾಗಿ ಮಲೆನಾಡಿನ ಜನರ ಬದುಕಿನ ಮೇಲೆ ನಿರ್ಬಂಧ ಹೇರುವುದು ಸರಿಯಲ್ಲ. ಈಗಾಗಲೇ ಶರಾವತಿ ಜಲ ವಿದ್ಯುತ್‌ ಯೋಜನೆಗಾಗಿ ಇಲ್ಲಿನ ಜನ ಸಾಕಷ್ಟು ತ್ಯಾಗ ಮಾಡಿದ್ದಾರೆ. ಪರಿಸರದ ಹೆಸರಿನಲ್ಲಿ ಜನರಿಗೆ ತೊಂದರೆ ಕೊಡುವುದು ನಿಲ್ಲಬೇಕು',ಧರ್ಮದರ್ಶಿ ರಾಮಪ್ಪ ಹೇಳಿದರು
  • ಮಲೆನಾಡು ರೈತ ಹಾಗೂ ಕೂಲಿಕಾರ್ಮಿಕರ ಹೋರಾಟ ವೇದಿಕೆ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಮಾತನಾಡಿ, ‘ಕಸ್ತೂರಿರಂಗನ್‌ ವರದಿ ಹೆಸರಿನಲ್ಲಿ ಮಲೆನಾಡಿನ ಜನರ ಬದುಕನ್ನು ಅತಂತ್ರಗೊಳಿಸಲು ಸರ್ಕಾರ ಮುಂದಾಗಿದೆ. ಇದಕ್ಕೆ ಪಕ್ಷಭೇದ ಮರೆತು ಪ್ರತಿಯೊಬ್ಬರೂ ವಿರೋಧ ವ್ಯಕ್ತಪಡಿಸಬೇಕಿದೆ’ ಎಂದರು.[]
  • ವರದಿ ಅನುಷ್ಠಾನಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿರುವುದರಿಂದ ಹಾಗೂ ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯುತ್ತಿರುವುದರಿಂದ ವರದಿ ಅನುಷ್ಠಾನ ಮಾಡದೆ ಶೀಘ್ರದಲ್ಲಿ ರಾಜ್ಯ ಸರ್ಕಾರ ತಕರಾರು ಅರ್ಜಿ ಸಲ್ಲಿಸಲಿದೆ.[]

ವರದಿಯ ಅನುಷ್ಠಾನ ಬೇಕು

[ಬದಲಾಯಿಸಿ]
  • ಪತ್ರಿಕಾ ಭವನದಲ್ಲಿ ಶುಕ್ರವಾರ ‘ಶಿವಮೊಗ್ಗ ಪ್ರೆಸ್ ಟ್ರಸ್ಟ್’ ಆಯೋಜಿಸಿದ್ದ ‘ಡಾ.ಕಸ್ತೂರಿರಂಗನ್ ವರದಿ ಏನು? -ಎತ್ತ?’ ವಿಷಯ ಕುರಿತ ಸಂವಾದ ಕಾರ್ಯಕ್ರಮದಲ್ಲಿ ‘ಮಲೆನಾಡಿನ ಭವಿಷ್ಯಕ್ಕೆ ಕಸ್ತೂರಿರಂಗನ್ ವರದಿ ಏಕೆ ಬೇಕು?’ ಪರಿಸರವಾದಿ ಅಖಿಲೇಶ್ ಚಿಪ್ಪಳಿ ಪ್ರತಿಪಾದಿಸಿದರು.
  • ‘ನೆಲ-ಜಲ ಉಳಿಸುವುದು ಪ್ರತಿ ಯೊಬ್ಬರ ಕರ್ತವ್ಯ ಎಂದು ದೇಶದ ಸಂವಿಧಾನದಲ್ಲೇ ಪ್ರಸ್ತಾಪಿಸಲಾಗಿದೆ. ಮೂಲಭೂತ ಹಕ್ಕುಗಳಿಗೆ ಆದ್ಯತೆ ನೀಡುವಂತೆ ಪ್ರತಿಯೊಬ್ಬರೂ ಕರ್ತವ್ಯ ನಿಭಾಯಿಸಬೇಕು’ ಎಂದರು.
  • ‘ಪರಿಸರ ಸಂರಕ್ಷಣೆಯ ವಿಚಾರದಲ್ಲಿ ಸರ್ಕಾರದ ದೂರಾಲೋಚನೆ ಕೊರತೆಯ ಅಡ್ಡ ಪರಿಣಾಮಗಳು ಹೆಚ್ಚು ಕಾಣುತ್ತಿವೆ. ಕಸ್ತೂರಿರಂಗನ್ ವರದಿಯಲ್ಲಿ ಜನರ ಬದುಕಿಗೆ ಮಾರಕವಾಗುವಂತಹ ಅಂಶಗಳು ಇಲ್ಲ. ಜೀವಚರಗಳ ಭವಿಷ್ಯದ ದೃಷ್ಟಿ ಯಿಂದಲೂ ಕೆಲವು ನಿಯಂತ್ರಣ ಸೂಚಿಸಲಾಗಿದೆ. ಹೀಗಾಗಿ, ಇದರ ಅನುಷ್ಠಾನಕ್ಕೆ ಸಂಪೂರ್ಣ ವಿರೋಧ ಸರಿಯಲ್ಲ. ಕಸ್ತೂರಿರಂಗನ್‌ ವರದಿ ಕೈಬಿಟ್ಟರೂ ಗಾಡ್ಗೀಳ್ ವರದಿ ಜಾರಿಗಾದರೂ ಒತ್ತಾಯಿಸಬೇಕು ಎಂದು ಸಲಹೆ ನೀಡಿದರು.

‘ಕಸ್ತೂರಿ ರಂಗನ್ ವರದಿ ಏಕೆ ಬೇಡ?’

[ಬದಲಾಯಿಸಿ]
  • ಈ ವರದಿ ರೂಪಿಸಿರುವುದರಲ್ಲೇ ದೋಷವಿದೆ. ಇದು ಜನ ಸಮುದಾಯದ ಬೇಡಿಕೆಯಲ್ಲ. ವರದಿ ಸಿದ್ಧಪಡಿಸುವಾಗ ಜನರ ಅಭಿಪ್ರಾಯಕ್ಕೆ ಮನ್ನಣೆ ನೀಡಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು. ‘ಕಸ್ತೂರಿರಂಗನ್‌ ವರದಿ ವಿದೇಶಿ ಸಂಸ್ಥೆ ಪ್ರಾಯೋಜಿತ ವರದಿ. ಈ ವರದಿ ಅನುಷ್ಠಾನಗೊಂಡರೆ ಪರಿಸರ ಸಂರಕ್ಷಣೆ ಅಸಾಧ್ಯ. ಹಾಗಾಗಿ, ಕಸ್ತೂರಿರಂಗನ್‌ ಹಾಗೂ ಗಾಡ್ಗೀಳ್ ವರದಿಗಳನ್ನು ಸಂಪೂರ್ಣ ವಿರೋಧಿಸಬೇಕು ಎಂದರು. ಪ್ರಸ್ತುತ ಜಾರಿಯಲ್ಲಿ ಇರುವ ವಿವಿಧ ಕಾನೂನುಗಳ ಮೂಲಕವೇ ಅರಣ್ಯ ಸಂರಕ್ಷಣೆ ಮಾಡಬಹುದು. ಪಶ್ಚಿಮ ಘಟ್ಟ ಉಳಿಸಬೇಕು ಎಂಬ ಕೂಗೆಬ್ಬಿಸಿ, ಅದಕ್ಕಾಗಿ ಹೋರಾಡಿ ದವರೇ ಮಲೆನಾಡಿಗರು. ಇಂದಿಗೂ ಅರಣ್ಯ ಉಳಿದಿರುವುದು ಅರಣ್ಯವಾಸಿಗ ಳಿಂದಲೇ ಹೊರತು ಅಧಿಕಾರಿಗಳು, ಸರ್ಕಾರಗಳಿಂದ ಅಲ್ಲ’ ಎಂದರು ಪತ್ರಕರ್ತ ರಾಮಸ್ವಾಮಿ ಹುಲ್ಕೋಡು,[]

ಅಧಿಸೂಚನೆಯ ಸಾರಾಂಶ

[ಬದಲಾಯಿಸಿ]
  • ಸೂಕ್ಷ್ಮಪ್ರದೇಶವೆಂದು ಗುರುತಿಸಲಾಗಿರುವ ಪಶ್ಚಿಮಘಟ್ಟದಲ್ಲಿ ಗಣಿಗಾರಿಕೆ, ಕಲ್ಲು ಗಣಿಗಾರಿಕೆ, ಮರಳು ಗಣಿಗಾರಿಕೆಗಳಿಗೆ ಪೂರ್ಣ ನಿಷೇಧ. ಇರುವ ಗಣಿಗಾರಿಕೆ ಮುಚ್ಚಲು 5 ವರ್ಷ ಕಾಲಾವಕಾಶ.
  • ಕೆಂಪು ವಲಯದ ಕೈಗಾರಿಕೆಗಳಿಗೆ ಪೂರ್ಣ ನಿಷೇಧ. ಕಿತ್ತಳೆ ವಲಯ ಕೈಗಾರಿಕೆಗಳಲ್ಲಿ ಆಹಾರ, ಹಣ್ಣು ಸಂಸ್ಕರಣಾ ಕೈಗಾರಿಕೆಗಳಿಗೆ ವಿನಾಯಿತಿ.
  • 20 ಸಾವಿರ ಚದರ ಮೀಟರ್ಗಿಂತ ಅಧಿಕ ವಿಸ್ತಾರದ ಬಡಾವಣೆ, ಟೌನ್ಶಿಪ್ ಮತ್ತು ಕಟ್ಟಡಗಳಿಗೆ ನಿಷೇಧ.
  • ಉಷ್ಣ ಸ್ಥಾವರಗಳಿಗೆ ಅವಕಾಶವಿಲ್ಲ, ಕೆಲವು ಷರತ್ತುಗಳ ಮೇಲೆ ಜಲವಿದ್ಯುತ್ ಯೋಜನೆಗಳಿಗೆ ಅವಕಾಶ.
  • ಕಡಿಮೆ ನೀರಿನ ಹರಿವು ಸಮಯದಲ್ಲಿ ಕೂಡ ಶೇ.30 ಜೀವಿ ಪರಿಸರಾತ್ಮಕ ಹರಿವಿರುವಂತೆ ನೋಡಿಕೊಳ್ಳುವುದು.
  • ನದಿಯ ಹರಿವು, ಅರಣ್ಯ, ಜೀವ ವೈವಿಧ್ಯತೆಯ ಮೇಲೆ ಬೀರುವ ಪರಿಣಾಮ, ನಷ್ಟದ ಬಗ್ಗೆ ಅಧ್ಯಯನ ಬಳಿಕವೇ ಯಾವುದೇ ಯೋಜನೆಗೆ ಅವಕಾಶ.

ಅಭಿವೃದ್ಧಿಯ ಸಮಸ್ಯೆ

[ಬದಲಾಯಿಸಿ]
  • ಉತ್ತರಕನ್ನಡ ಜಿಲ್ಲೆಯ 600ಕ್ಕೂ ಅಧಿಕ ಗ್ರಾಮಗಳನ್ನು ಪರಿಸರ ಸೂಕ್ಷ್ಮ ವಲಯ ಎಂದು ಘೊಷಿಸಿ ಕೇಂದ್ರ ಪರಿಸರ ಮಂತ್ರಾಲಯ ಕರಡು ಅಧಿಸೂಚನೆ ಹೊರಡಿಸಿದೆ. ಈ ಅಧಿಸೂಚನೆ ಜಾರಿಯಾದಲ್ಲಿ ಜಿಲ್ಲೆಯಲ್ಲಿ ಯಾವುದೇ ಕೈಗಾರಿಕೆಗಳು ಬರಲು ಸಾಧ್ಯವಿಲ್ಲ. ರಸ್ತೆ, ಕಟ್ಟಡಗಳ ನಿರ್ವಣಕ್ಕೂ ಪರವಾನಗಿ ಪಡೆಯುವ ಅನಿವಾರ್ಯತೆ ಎದುರಾಗಲಿದೆ. ಪರಿಸರ ಪ್ರವಾಸೋದ್ಯಮಕ್ಕೂ ಹಿನ್ನಡೆಯಾಗುವ ಆತಂಕ ಕಾಡಿದೆ. ಕಾರವಾರ ತಾಲೂಕಿನ 43, ಭಟ್ಕಳದ 26, ಅಂಕೋಲಾದ 43, ಹೊನ್ನಾವರದ 44, ಜೊಯಿಡಾದ 96, ಶಿರಸಿಯ 123, ಸಿದ್ದಾಪುರದ 103, ಯಲ್ಲಾಪುರದ 88. ಕುಮಟಾದ 36 ಗ್ರಾಮಗಳು ಸೇರಿವೆ. ಈಗ ಕರ್ನಾಟಕ ರಾಜ್ಯದ 1553 ಹಳ್ಳಿಗಳಲ್ಲಿ ಆತಂಕವುಂಠಾಗಿದೆ
  • ಪ್ರಾಣಿ, ಪಕ್ಷಿ, ಮರಗಳಂತೆ ಮನುಷ್ಯನಿಗೂ ಜೀವನ ನಡೆಸಲು ಅವಕಾಶವಿರಬೇಕು. ಕಸ್ತೂರಿರಂಗನ್ ವರದಿ ಜಾರಿಯಾದರೆ ಕಾಡಿನಲ್ಲೇ ವಾಸಿಸುವ ಮಲೆನಾಡಿಗರ ಬದುಕನ್ನೇ ಕಸಿದುಕೊಂಡಂತಾಗುತ್ತದೆ, ಎಂದು ಕರ್ನಅಟಕದ ಕಂದಅಯ ಮಂತ್ರಿಗಳೇ ಅಭಿಪ್ರಾಯಪಡುತ್ತಾರೆ.

ಈ ವರದಿಯಲ್ಲಿ ಸೇರಿದ ಹಳ್ಳಿಗಳ ವಿವರ

[ಬದಲಾಯಿಸಿ]
  • ಕರ್ನಾಟಕದ ಹಳ್ಳಿಗಳು:ರಾಜ್ಯದ 1553 ಕ್ಕೂ ಹೆಚ್ಚು ಹಳ್ಳಿಗಳು
ಕ್ರ.ಸಂ. ಜಿಲ್ಲೆ ಹಳ್ಳಿಗಳು
1 ಉತ್ತರ ಕನ್ನಡ 607
2 ಶಿವಮೊಗ್ಗ 470
3 ಚಿಕ್ಕಮಗಳೂರು, 143
4 ಬೆಳಗಾವಿ 72
5 ಮೈಸೂರು 56
6 ಕೊಡಗು 55
7 ದಕ್ಷಿಣ ಕನ್ನಡ 48
8 ಉಡುಪಿ 40
9 ಹಾಸನ 38
10 ಚಾಮರಾಜನಗರ 24

[೧೦]

ಹೆಚ್ಚನ ವಿವರ

[ಬದಲಾಯಿಸಿ]

ಪೂರಕ ಮಾಹಿತಿ

[ಬದಲಾಯಿಸಿ]

ಉಲ್ಲೇಖ

[ಬದಲಾಯಿಸಿ]
  1. Kasturirangan Panel Report on Western Ghats,Arushi Agarwa Discuss;
  2. ೨-೫-೨೦೧೪;ವಿರೋಧ ಲೆಕ್ಕಸದೆ ಕಸ್ತೂರಿರಂಗನ್ ವರದಿ ಒಪ್ಪಿದ ಸರ್ಕಾರ
  3. Kasturirangan Panel Report on Western Ghats;Arushi Agarwal
  4. http://vijaykarnataka.indiatimes.com/district/chikkamagaluru/-/articleshow/34491886.cms
  5. "report of the high level working group on western ghats - Ministry of" (PDF). Archived from the original (PDF) on 2016-10-20. Retrieved 2017-04-08.
  6. ೬.೦ ೬.೧ ಡಾ.ಕಸ್ತೂರಿರಂಗನ್ ವರದಿ ಅನುಷ್ಠಾನಗೊಳಿಸದಿರಲು ರಾಜ್ಯ ಸರ್ಕಾರ ನಿರ್ಧಾರ: ಶೀಘ್ರವೇ ತಕರಾರು ಅರ್ಜಿ ಸಲ್ಲಿಸಲು ತೀರ್ಮಾನ
  7. ಕಸ್ತೂರಿರಂಗನ್ ವರದಿ ವಿರುದ್ಧ ಹೋರಾಟ;ಪ್ರಜಾವಾಣಿ ವಾರ್ತೆ;20 Mar, 2017
  8. ಹೊಳೆಬಾಗಿಲು–ಸಾಗರ ಪಾದಯಾತ್ರೆ;‘ಕಸ್ತೂರಿರಂಗನ್‌ ವರದಿ ಮಲೆನಾಡಿಗೆ ಮಾರಕ’;6 Apr, 2017
  9. ಪರಿಸರ ರಕ್ಷಣೆಗೆ ಸಮಗ್ರ ಚರ್ಚೆ ಅಗತ್ಯ;ಪ್ರಜಾವಾಣಿ ವಾರ್ತೆ;8 Apr, 2017
  10. "Friday, 7th April 2017;ಪಶ್ಚಿಮಘಟ್ಟಕ್ಕೆ ಉರುಳು;Saturday, 04.03.2017,;ವಿಜಯವಾಣಿ ಸುದ್ದಿಜಾಲ". Archived from the original on 2017-08-03. Retrieved 2017-04-07.