ಕುದುರೆ ತಳಿ ಅಭಿವೃದ್ಧಿ
ನಾಗರಿಕತೆಯ ಪ್ರಗತಿಯೊಡನೆ ಕುದುರೆಯಿಂದ ಮನುಷ್ಯ ಪಡೆಯುವ ಸೇವೆಗಳ ವ್ಯಾಪ್ತಿ ಬಹುವಾಗಿ ವಿಸ್ತರಿಸಿತು. ತನ್ನ ಸ್ವಚ್ಛಂದ ಸ್ಥಿತಿಯಲ್ಲಿ ಕುದುರೆ ತಳಿ ವಿಕಸಿಸುವ ಪರಿಸ್ಥಿತಿ ಬಲುಮಟ್ಟಿಗೆ ಉಳಿಯಲಿಲ್ಲ. ಆಗ ಭಿನ್ನ ಉದ್ದೇಶಗಳಿಗೆ ಅನುಸಾರವಾಗಿ ಪ್ರಾದೇಶಿಕ ಸೌಕರ್ಯಗಳನ್ನು ಲಕ್ಷ್ಯದಲ್ಲಿಟ್ಟುಕೊಂಡು ತಳಿಸಂಕರ ಮಾಡಿ ಹೊಸತಳಿಯ ಕುದುರೆಗಳನ್ನು ಪಡೆಯುವ ಕಲೆಯನ್ನು ಮನುಷ್ಯ ಕರಗತಮಾಡಿಕೊಂಡ. ಆಫ್ರಿಕ, ಏಷ್ಯ ಮತ್ತು ಯೂರೋಪ್ ಭಾಗಗಳಲ್ಲಿ ಅಶ್ವಸಂಖ್ಯೆಯ ಕ್ರಮಬದ್ಧ ವಿಸ್ತರಣೆ ಬಹಳ ಹಿಂದಿನ ಕಾಲದಲ್ಲೇ ಆರಂಭವಾಯಿತು.
ಇತಿಹಾಸ
[ಬದಲಾಯಿಸಿ]ಗ್ರೀಸ್ ದೇಶದಲ್ಲಿ ಕೆಲವು ತರಹೆಯ ಕ್ರೀಡಾ ಚಟುವಟಿಕೆಗಳಿಗಾಗಿ ವಿಶ್ವದ ನಾನಾ ಭಾಗಗಳಿಂದ ಹೇರಳವಾಗಿ ಕುದುರೆಗಳು ಆಮದಾಗುತ್ತಿದ್ದುವು. ಅಲ್ಲಿ ಕುದುರೆ ಅಭಿವೃದ್ಧಿ ಕೇಂದ್ರಗಳು ಸ್ಥಾಪಿತವಾದುವು; ತರಬೇತಿ ಲಾಯಗಳು ಕಟ್ಟಲ್ಪಟ್ಟುವು. ಹೀಗಾಗಿ ಆ ದೇಶ ಕುದುರೆ ಅಭಿವೃದ್ಧಿಗೆ ಅತಿ ಪುರಾತನ ಕಾಲದಲ್ಲೇ ಹೆಸರುವಾಸಿಯಾಯಿತು. ಅಂತೆಯೇ ಕುದುರೆ ಮತ್ತು ಅಶ್ವರಥಗಳ ಜೂಜು. ಆಗಿನ ರೋಮ್ ದೇಶದಲ್ಲಿ ಆಧುನಿಕ ಕುದುರೆ ಜೂಜಿನಂತೆಯೇ ನಡೆಯುತ್ತಿತ್ತು. ಬರ್ಬರ ಮತ್ತು ಅರಬ್ಬಿವಂಶಸ್ಥ ತಳಿಗಳಿಂದ ಉತ್ಪನ್ನವಾದ ಬ್ರಿಟಿಷ್ ಶುದ್ಧ ಅಥವಾ ಥರೋಬ್ರೆಡ್ ತಳಿ ಅಶ್ವಜಾತಿಯ ಸಾಮ್ರಾಟ ಸ್ಥಾನವನ್ನು ಗಳಿಸುವವರೆಗೂ ಆಫ್ರಿಕ ದೇಶದ ಕುದುರೆಗಳೇ ಅತಿಮುಖ್ಯ ತಳಿಗಳಾಗಿದ್ದುವು. ಹಿಂದೆ ಇದ್ದುದಕ್ಕಿಂತಲೂ ಉತ್ತಮವಾದ ಕುದುರೆ ತಳಿಯನ್ನು ಪಡೆಯುವ ಪ್ರಯತ್ನಕ್ಕೆ ಗಮನ ಕೊಟ್ಟವರಲ್ಲಿ ಮೊದಲಿಗರು ಇಂಗ್ಲಿಷರು; ಇದು 1550ರ ಅನಂತರವೇ ಆದರೂ ಈ ದಿಶೆಯಲ್ಲಿ ಪರಿಷ್ಕರಣ ಕ್ರಮೇಣ ಆಯಿತಷ್ಟೆ. ಒಂದನೇ ಜೇಮ್ಸ್ ಇಂಗ್ಲೆಂಡಿಗೆ ಶುದ್ಧ ಅರಬ್ಬಿಜಾತಿಯ ವೈಟ್ ಟರ್ಕ್ ಎಂಬ ಕುದುರೆಯನ್ನು ಆಮದುಮಾಡಿಕೊಂಡ. ಇದಾದ ಅನಂತರ ಥರೋಬ್ರೆಡ್ ಎಂಬ ಹೆಸರುವಾಸಿಯಾದ ತೆಳ್ಳನೆ ಮೈಕಟ್ಟಿನ ಜೂಜು ಕುದುರೆ ತಳಿಯ ಅಭಿವೃದ್ಧಿಕಾರ್ಯ ಪ್ರಾರಂಭವಾಯಿತು. ಇಂಗ್ಲೆಂಡ್ ವಿಶ್ವದ ಅತ್ಯುತ್ತಮ ಕುದುರೆ ತಳಿಗಳ ತವರೂರು. ಅಲ್ಲಿ ಮೊದಲಿದ್ದ ಕುದುರೆ ಜಾತಿಗಳು ಎರಡು. ಒಂದು ಓಡುವ ಜಾತಿ ಕುದುರೆ, ಮತ್ತೊಂದು ಯುದ್ಧ ಅಥವಾ ಪಂದ್ಯದ ಕುದುರೆ. ಓಡುವ ಜಾತಿ ಕುದುರೆಗಳನ್ನು ಗಾಡಿ ಎಳೆಯುವುದು ಬೇಸಾಯ ಮುಂತಾದ ಕಾರ್ಯಗಳಿಗೂ ಪಂದ್ಯದ ಕುದುರೆಗಳನ್ನು ಯುದ್ಧ, ಜೂಜು ಕ್ರೀಡೆ ಮುಂತಾದ ಚಟುವಟಿಕೆಗಳಿಗೂ ಉಪಯೋಗಿಸುತ್ತಿದ್ದರು. ಮೂರನೆಯ ವಿಲಿಯಂ ದೊರೆ ಕುದುರೆ ಮತ್ತು ಕ್ರೀಡೆಗಳ ಅಭಿಮಾನಿ. ಈತ ಅರಬ್ಬಿ ಜಾತಿಯಲ್ಲಿ ಅತ್ಯುತ್ತಮ ತಳಿಯೊಂದಾದ ಬೈರ್ಲಿಟರ್ಕ್ ಎಂಬ ಜಾತಿಯ ಕುದುರೆಯನ್ನು ಇಂಗ್ಲೆಂಡಿಗೆ ತರಿಸಿಕೊಂಡ. ಪ್ರಖ್ಯಾತವಾದ ಗೆಡಾಲ್ಫಿನ್ ಅರೇಬಿಯನ್ ಬೀಜದ ಕುದುರೆ 1725ರಲ್ಲಿ ಇಂಗ್ಲೆಂಡಿಗೆ ಬಂತು. ಈಗಿನ ಬಹುಭಾಗ ಶುದ್ಧ ತಳಿಗಳೆಲ್ಲ ಇದರ ವಂಶದವು.[೧]
ಸಂತತಿ ಕಡಿಮೆಯಾಗುವಿಕೆ
[ಬದಲಾಯಿಸಿ]ವೇಗವಾಗಿಯೂ ಸುಲಭವಾಗಿಯೂ ಸಂಚರಿಸಲು ಉಪಯೋಗವಾದ ಮೋಟಾರು, ಟ್ರಾಕ್ಟರು ಮುಂತಾದ ಯಾಂತ್ರಿಕ ಸಾಧನಗಳು ಬಳಕೆಗೆ ಬಂದ ಮೇಲೆ ಗಾಡಿಗಳಿಗೆ ಮತ್ತು ಬೇಸಾಯಕ್ಕೆ ಹೇರುಕುದುರೆಗಳ ಅವಶ್ಯಕತೆ ಕಡಿಮೆಯಾಗಿ ಅವುಗಳ ಸಂತತಿ ಕ್ಷೀಣಿಸಿದೆ. ಜನರಲ್ಲಿ ಜೂಜಿನಲ್ಲಿನ ಆಸಕ್ತಿ ಒಂದೇ ರೀತಿ ಇರುವುದರಿಂದ ಜೂಜಿನ ಶುದ್ಧತಳಿ ಕುದುರೆಗಳ ಅಭಿವೃದ್ಧಿ ಯಥೇಚ್ಛವಾಗಿ ಸಾಗಿದೆ. ಈ ಕುದುರೆಗಳ ವೇಗ ಮತ್ತು ಜೂಜಾಂಗಣದಲ್ಲಿ ಇವುಗಳ ಶ್ರಮಸಹಿಷ್ಣುತೆ ಇವುಗಳ ಏಳ್ಗೆಗೆ ಪ್ರಯತ್ನ ನಡೆಯುತ್ತಲೇ ಇದೆ. ಆದರೂ ಕುದುರೆಗಳ ಮೇಲಿನ ಶ್ರದ್ಧೆ ಪ್ರಪಂಚದ ಎಲ್ಲ ದೇಶಗಳಲ್ಲೂ ಇಲ್ಲ. ರಷ್ಯ, ಚೀನ, ಸಿಂಹಳ ಮುಂತಾದ ದೇಶಗಳಲ್ಲಿ ಕುದುರೆ ಜೂಜು ನಿಷಿದ್ಧ. ಇದರಿಂದ ಕುದುರೆ ತಳಿ ಅಭಿವೃದ್ಧಿ ಆ ದೇಶಗಳಲ್ಲಿ ಹಿಂದು.[೨]
ಭಾರತದ ಪ್ರಾಚೀನಕಾಲ
[ಬದಲಾಯಿಸಿ]ಭಾರತ ಪ್ರಾಚೀನಕಾಲದಿಂದಲೂ ಉತ್ತಮಜಾತಿಯ ಅಶ್ವಗಳಿಗೆ ಹೆಸರಾಗಿದೆ. ಕಾಥೇವಾರಿ, ಮಾರವಾರಿ ಮತ್ತು ಮಣಿಪುರಿ ಜಾತಿಗಳು ಅವುಗಳಲ್ಲಿ ಮುಖ್ಯವಾದವು. ಇವಲ್ಲದೆ ಭುಟಿಯೂ, ಹಿರ್ಜಾಯಿ, ಸ್ಪಿತಿ, ಉಸ್ಮಾಯಿ ಮುಂತಾದವೂ ಇರುವುದು ಕಂಡುಬರುತ್ತದೆ. ಬ್ರಿಟಿಷರ ಕಾಲದಲ್ಲಿ ಅಶ್ವಸೈನ್ಯಕ್ಕೆ ಬೇಕಾದ ಕುದುರೆಗಳನ್ನು ಆಸ್ಟ್ರೇಲಿಯದಿಂದಲೂ, ಜೂಜಿಗೆ ಅಗತ್ಯವಾದ ಬೀಜದ ಕುದುರೆ ಮತ್ತು ಹೆಣ್ಣು ಕುದುರೆಗಳನ್ನು ಇಂಗ್ಲೆಂಡಿನಿಂದಲೂ ತರಿಸಿಕೊಂಡರು. ಮೊಗಲರು ಮತ್ತು ಮರಾಠರು ಸ್ಥಳೀಯ ಕುದುರೆಗಳನ್ನು ಅವರ ಯುದ್ಧದ ಅಗತ್ಯಗಳಿಗೋಸ್ಕರ ಅಭಿವೃದ್ಧಿಪಡಿಸಿಕೊಂಡರು. ಭಾರತದಲ್ಲಿ ಅಶ್ವಗಳ ಅಭಿವೃದ್ಧಿಕಾರ್ಯ ಬಹುವಾಗಿ ಬ್ರಿಟಿಷರಿಂದಲೇ ಆದದ್ದು. ದೇಶಾದ್ಯಂತ ಅನೇಕ ಅಶ್ವಾಭಿವೃದ್ಧಿಶಾಲೆಗಳನ್ನು ತೆರೆದು ಭಾರತದ ಶುದ್ಧತಳಿ ಕುದುರೆಗಳನ್ನು ಅಸ್ತಿತ್ವಕ್ಕೆ ತಂದರು.ಭಾರತದಲ್ಲಿ ಕುದುರೆ ಜಾತಿಗಳ ವಿವಿಧ ತಳಿಗಳನ್ನು ಪರಿಶೀಲಿಸುವುದಕ್ಕೆ ಮುಂಚೆ ಅವುಗಳ ಸ್ಪಷ್ಟ ಅರ್ಥ ವಿವರಣೆ ತಿಳಿದುಕೊಳ್ಳುವುದು ಆವಶ್ಯಕ.
ಶುದ್ಧತಳಿ ಅಶ್ವ (ಥರೋಬ್ರೆಡ್ ಹಾರ್ಸ್)
[ಬದಲಾಯಿಸಿ]ಇಂಗ್ಲಿಷ್ ಕುದುರೆಯ ಸಂತತಿ ಪುಸ್ತಕದಲ್ಲಿ ದಾಖಲಾದ ಶುದ್ಧ ಇಂಗ್ಲಿಷ್ ಜಾತಿ ಇಲ್ಲವೇ ಅರಬ್ಬಿ ಮತ್ತು ಪರ್ಷಿಯ ಜಾತಿಯ, ತಂದೆ ತಾಯಿಗಳ ಹಲವಾರು ತಲೆಮಾರುಗಳ ಸಂತತಿಯನ್ನು ಪತ್ತೆಹಚ್ಚಲು ಸಾಧ್ಯವಿರುವ ಕುದುರೆಗೆ ಶುದ್ಧತಳಿ ಎಂಬ ಹೆಸರು ರೂಢಿಯಲ್ಲಿದೆ.
ವೇಲರ್
[ಬದಲಾಯಿಸಿ]ಇದೊಂದು ಆಸ್ಟ್ರೇಲಿಯದಿಂದ ಬಂದ ಕುದುರೆ. ಇಂಗ್ಲಿಷ್ ಶುದ್ಧತಳಿ ಮತ್ತು ಕೇಪ್ ತಳಿಗಳ ಮಿಶ್ರಣದಿಂದ ಹೊರಬಂದ ಜಾತಿ. ಭಾರತದ ಸೈನ್ಯದಲ್ಲಿ ಮೊದಲು ಇವು ಹೇರಳವಾಗಿ ಬಳಕೆಯಲ್ಲಿದ್ದುವು.ಕುದುರೆತಟ್ಟು ಅಥವಾ ಟಾಕಣ ಅಥವಾ ಪೋನಿ ಕುದುರೆ: ಇದು ಒಂದು ಗಿಡ್ಡ ಜಾತಿಯ ಕುದುರೆ. ಇದರ ಎತ್ತರ 14-2 ಹ್ಯಾಂಡ್ಸ್ ಇಲ್ಲವೇ 58". ಮುಂದಿನ ಕಾಲಿನ ಗೊರಸಿನ ಕೆಳತುದಿಯಿಂದ ಭುಜದ ಉಬ್ಬು ಏಣಿನ ವರೆಗಿನ ಎತ್ತರ 58" ಕ್ಕಿಂತ ಕಡಿಮೆ.ರೀಮೌಂಟ್: ತರಬೇತಿ ಇಲ್ಲದ ಕುದುರೆ. ಸಾಮಾನ್ಯವಾಗಿ ಅಶ್ವದಳದಲ್ಲಿ ಈ ಜಾತಿಯನ್ನು ಉಪಯೋಗಿಸುತ್ತಾರೆ.ಪ್ಯಾಕ್ ಪೋನಿ ಅಥವಾ ಹೇರುಕುದುರೆ: ಇದು ಒಂದು ಗಿಡ್ಡ ದಪ್ಪನೆಯ ಆಕಾರದ ಕಷ್ಟಸಹಿಷ್ಣುವಾದ ಕುದುರೆ. ಇದನ್ನು ಪದಾತಿ ದಳದಲ್ಲಿ ಹೇರು ಸಾಗಾಣಿಕೆಗೆ ಬಳಸುತ್ತಾರೆ.ಕುದುರೆಯ ವರ್ಣಗಳು: ಕಪಿಲವರ್ಣ(ಬೇ), ದಟ್ಟಕೆಂಗಂದು (ಚೆಸ್ಟ್‍ನಟ್), ಕಂದು, ಬೂದು, ಕಪ್ಪು, ಕರಿಬೂದು ಬಣ್ಣ, ಕಪ್ಪುಬಿಳುಪು ಮಿಶ್ರ ಬಣ್ಣದ ಕುದುರೆಗಳು ಸಾಮಾನ್ಯ.ಭಾರತದಲ್ಲಿನ ಕುದುರೆ ತಳಿಗಳು: ಭಾರತದಲ್ಲಿರುವ ಕುದುರೆಗಳು ಶುದ್ಧ ಜಾತಿಗೆ ಸೇರಿಲ್ಲ. ಹೆಚ್ಚುಪಾಲು ಅರಬ್ಬಿ ರಕ್ತದವು.
ಭುಟಿಯಾ
[ಬದಲಾಯಿಸಿ]ಹಿಮಾಲಯ ಪ್ರದೇಶದಲ್ಲಿ ಕಾಣಬರುವ ಬೂದು ಇಲ್ಲವೇ ದಟ್ಟ ಕೆಂಗಂದು ಬಣ್ಣದ ಕುದುರೆ. ಈ ಜಾತಿಯ ಸಾಮಾನ್ಯ ಲಕ್ಷಣ ಅಚ್ಚುಕಟ್ಟಾದ ಮೈಕಟ್ಟು, ವಿಶಾಲವಾದ ಎದೆಯುಳ್ಳ ದೇಹ, ಮಾಂಸವತ್ತಾದ ಚಪ್ಪೆಗಳು, ಒರಟುಕೂದಲಿನಿಂದ ಆವೃತವಾದ ಕಾಲುಗಳು. ಕತ್ತಿನ ಮೇಲೂ ಬಾಲದಲ್ಲೂ ಉದ್ದವಾದ ಕೂದಲು. ಸಾಮಾನ್ಯವಾಗಿ ಅಗಲವಾದ ಹಿಮ್ಮಡಿಗಳುಳ್ಳ ಪಾದಗಳು. ಸವಾರಿಗೆ ಮತ್ತು ಸಾಮಾನು ಸಾಗಾಣಿಕೆಗೆ ಈ ಜಾತಿಯ ಕುದುರೆಗಳ ಬಳಕೆ ಸಾಮಾನ್ಯ.
ಹಿರ್‍ಜಾಯ್
[ಬದಲಾಯಿಸಿ]ಇದೊಂದು ಅರಬ್ಬಿ ಮಿತ್ರಜಾತಿಯ ಕುದುರೆ. ಬಣ್ಣ ಬಿಳಿ ಇಲ್ಲವೆ ಬೂದು. ಅಡಕವಾದ ಮೈ, ಮೋಟಾದ ಬೆನ್ನು, ಮಾಂಸದಿಂದ ತುಂಬಿಕೊಂಡ ಸೊಂಟ, ಚಪ್ಪಟೆಯಾದ ಪೃಷ್ಠ, ಸುಂದರವಾದ ತಲೆ, ಅಗಲವಾದ ಹಣೆ, ತುಂಬಿದ, ಕುಳ್ಳೂ ಅಲ್ಲ ಉದ್ದವೂ ಅಲ್ಲದ ಬಲವಾದ ಕತ್ತು, ದೃಢವಾದ ಇಳಿಜಾರುಳ್ಳ ಭುಜ, ಬಲವಾದ ಮುಂಗಾಲು, ಮೂಳೆ ಎದ್ದುಕಾಣದ ಮೊಣಕಾಲು-ಇವೇ ಈ ಜಾತಿಯ ಲಕ್ಷಣಗಳು. ಕುದುರೆಯ ಎತ್ತರ 15 ಹ್ಯಾಂಡ್ಸ್ ಅಥವಾ 60', ತೂಕ 800-900 ಪೌಂಡ್. ವೇಗಗತಿಯ ಕಷ್ಟತರ ಕೆಲಸಕ್ಕೆ ಸಾಮಾನ್ಯವಾಗಿ ಇದರ ಬಳಕೆ.
ಕಾಥೇವಾರಿ
[ಬದಲಾಯಿಸಿ]ರಾಜಸ್ಥಾನ ಮತ್ತು ಗುಜರಾತ್ ರಾಜ್ಯಗಳು ಈ ತಳಿಗಳ ತವರೂರು. ಕಾಥೇವಾರಿ ಮತ್ತು ಮಾರಮಾರಿ ಇವುಗಳ ಅನೇಕ ಲಕ್ಷಣಗಳು ಒಂದೇ ತರಹವಿರುವುದರಿಂದ ಈ ಎರಡು ಜಾತಿಗಳೂ ಒಂದೇ ಮೂಲದಿಂದ ಬಂದವೆಂದು ಹೇಳಬಹುದು. ಈ ತಳಿಯ ವಿಶೇಷ ಲಕ್ಷಣ ಹಿಂಗಾಲಿನಲ್ಲಿ ಮಂಡಿ ಮತ್ತು ಚುಂಚುಕಾಲಿನ ಮಧ್ಯೆ ಕುಡುಗೋಲಿನಾಕಾರದ ಕೀಲು ಮತ್ತು ತುದಿಗಳೆರಡೂ ಸೇರಿರುವಂತೆ ಬಾಗಿರುವ ಕಿವಿ. ಸವಾರಿಗೆ ಬಳಸುವ ಈ ಕುದುರೆ ಹಿಂದೆ ಪಂದ್ಯಕ್ಕೆ ಹೆಸರುವಾಸಿಯಾಗಿತ್ತು.
ಮಾರವಾರಿ
[ಬದಲಾಯಿಸಿ]ಇದು ರಾಜಸ್ಥಾನದಲ್ಲಿರುವ ಭಾರತದ ಮೂಲ ತಳಿ. ಈ ಜಾತಿಯ ಕುದುರೆ ದಟ್ಟ ಕೆಂಗಂದು, ಬೂದು, ಕಂದು ಕಪಿಲವರ್ಣ, ಕರಿಬೂದು ಮುಂತಾದ ಅನೇಕ ಬಣ್ಣದ್ದಾಗಿರುತ್ತದೆ. ಸುಮಾರು 50% ಭಾಗದಷ್ಟು ತಳಿ ತಿಳಿಕೆನೆ ಬಣ್ಣ. ಈ ಜಾತಿ ಕುದುರೆ ಠೀವಿ, ಗೌರವ ಮತ್ತು ಸೌಂದರ್ಯಕ್ಕೆ ಹೆಸರಾದದ್ದು. ಇದರ ನಡಿಗೆ ಬಲುಗಂಭೀರ. ವೇಗ ಮತ್ತು ಕಷ್ಟ ಸಹಿಷ್ಣುತೆ ಇದರ ವೈಶಿಷ್ಟ್ಯ.
ಮಣಿಪುರಿ
[ಬದಲಾಯಿಸಿ]ಇದು ಕೂಡ ಭಾರತದ ಅಶ್ವತಳಿಗಳಲ್ಲಿ ಪುರಾತನವಾದದ್ದು. ಅಸ್ಸಾಮಿನಲ್ಲಿ ಹೆಚ್ಚು ಪ್ರಚಲಿತ. ನಯ, ವೇಗ, ಕಷ್ಟಸಹಿಷ್ಣುತೆ ಈ ಗುಣಗಳಿಗೆ ಈ ಜಾತಿಯ ಕುದುರೆ ಪ್ರಸಿದ್ಧಿ. ಸಣ್ಣ ಹುಟ್ಟು, ಮಾಟವಾದ ದೇಹ, ದೃಢವಾದ ನಡಿಗೆ, ಉದ್ದನೆಯ ಮುಖ, ಅಗಲವಾದ ಮುಖ, ಅರಳಿದ ಹೊಳ್ಳೆ, ವಿಶಾಲವಾದ ಎದೆಗೂಡು, ದೇಹದ ಪ್ರಮಾಣಕ್ಕೆ ಅನುಗುಣವಾದ ಕಾಲು, ದೃಢವಾದ ಮಂಡಿ ಮತ್ತು ಕಾಲು, ಕೀಲು ನಯವಾಗಿ ಬಾಗಿದ ಚುಂಚು ಕಾಲು-ಇವೇ ಈ ತಳಿಯ ಲಕ್ಷಣಗಳು. ಇದರ ಎತ್ತರ 11 ರಿಂದ 13 ಹ್ಯಾಂಡ್‍ಗಳು (44"-52"); ತೂಕ 650 ಪೌಂಡ್. ಈ ಕುದುರೆಗಳನ್ನು ಪೋಲೋ ಪಂದ್ಯ, ಹೇರು, ಸಾಗಾಣಿಕೆ, ಸೈನ್ಯ ಸಾಮಾನು ಸರಂಜಾಮುಗಳ ಸಾಗಾಣಿಕೆ ಮುಂತಾದವುಗಳಿಗೆ ಬಳಸುತ್ತಾರೆ.
ಸ್ಪಿತಿ
[ಬದಲಾಯಿಸಿ]ಕಂಗಾ ಜಿಲ್ಲೆಯಲ್ಲಿ ಈ ತಳಿ ಪ್ರಚಲಿತವಾಗಿದೆ. ಬಹುವಾಗಿ ಈ ತಳಿಯ ವೃದ್ಧಿ ರೈತರಿಂದಲೇ ಆದದ್ದು. ಈ ಜಾತಿಯ ಲಕ್ಷಣಗಳಲ್ಲಿ ಮುಖ್ಯವಾದದ್ದು ಕಷ್ಟ ಸಹಿಷ್ಣುತೆ. ದೃಢವಾದ ನಡೆ. ಗಟ್ಟಿಯಾದ ಮೂಳೆ, ಅಡಕವಾದ ಮೈ. ಎತ್ತರ 12 ಹ್ಯಾಂಡ್‍ಗಳು (48"). ಬೆಟ್ಟಗಾಡಿಗೆ ಬಹಳ ಅನುಕೂಲವಾದ ಜಾತಿ. ನೀಳವಾದ ಒರಟಾದ ಕೂದುಲುಗಳುಳ್ಳ ಮಾಟವಾದ ತಲೆ, ಮೊನಚಾದ ಕಿವಿ, ಅಗಲವಾದ ಭುಜ, ದೃಢವಾದ ಬೆನ್ನು, ಗಿಡ್ಡನೆ ಕಾಲು, ಬಲವಾದ ಗೊರಸು, ಸಣ್ಣ ಕತ್ತು-ಇವೇ ಇದರ ಲಕ್ಷಣಗಳು. ಸವಾರಿಗೆ ಮತ್ತು ಹೇರುತಟ್ಟಾಗಿ ಈ ಜಾತಿ ಕುದುರೆಗಳನ್ನು ಬಳಸುತ್ತಾರೆ.
ಅರಬ್ಬೀ ಜಾತಿಯ ಕುದುರೆ
[ಬದಲಾಯಿಸಿ]ಒಂದೆರಡು ದಶಕಗಳ ಹಿಂದೆ ಅರಬ್ಬೀ ಕುದುರೆಗಳು ಭಾರತದಲ್ಲಿ ಹೆಚ್ಚಾಗಿದ್ದುವು. ಜೂಜಿನಲ್ಲಿ ಇವುಗಳ ಬಳಕೆ ತಪ್ಪಿದ್ದರಿಂದ ಒಳ್ಳೇ ಅರಬ್ಬೀ ಕುದುರೆ ಈಗ ವಿರಳ. ಅಶ್ವಗಳಲ್ಲಿ ರಾಜಸಂತತಿ ಎಂದು ಪ್ರಮುಖವಾಗಿವೆ. ಎತ್ತರ 14-15 ಹ್ಯಾಂಡ್‍ಗಳು (56"-60"). ಗಾತ್ರದಲ್ಲಿ ದೊಡ್ಡದಾಗಿರುವ ತಲೆಯಲ್ಲಿ ಕಿವಿಯಿಂದ ಕಣ್ಣಿನ ವರೆಗಿನ ಮೇಲ್ಭಾಗದ ಉದ್ದ ಹೆಚ್ಚು, ಅಗಲವಾದ ಉಬ್ಬಿದ ಹಣೆ, ಉದ್ದವಾದ ಮೊನಚಾದ ಕಿವಿ, ಅಗಲವಲ್ಲದ ಕಣ್ಣು. ಮೃದುವಾದ ನೋಟ, ಬೆದರಿದಾಗ ಉದ್ವಿಗ್ನದೃಷ್ಟಿ--ಇವು ಇನ್ನಿತರ ಲಕ್ಷಣಗಳು. ತಲೆ ಮುಂಭಾಗ ಮತ್ತು ಮೂತಿಯ ಹತ್ತಿರ ಚೂಪಾಗಿ ಕೆಂಪಾಗಿ ಕೆಳತುಟಿ ಸ್ವಲ್ಪ ಮುಂದಿದ್ದು ಸುಂದರವಾಗಿ ಕಾಣಿಸುತ್ತದೆ. ಚೆನ್ನಾಗಿ ಬೆಳೆದ ಗಂಟಲು, ಶಕ್ತಿಯುತವಾದ ಮತ್ತು ಬಿಲ್ಲಿನಾಕಾರವುಳ್ಳ ಕತ್ತು, ಸ್ವಲ್ಪ ಸಣ್ಣದಾದರೂ ಮುಂಗಾಲಿನ ಹಿಂದೆ ಉಬ್ಬಿ ಕಾಣುವ ಪಕ್ಕೆಲುಬುಳ್ಳ ಎದೆ, ಇದರಿಂದ ಒಟ್ಟಿನಲ್ಲಿ ತುಂಬಿಕಾಣುವ ಮೈ, ಅಡಕವಾದ ಬೆನ್ನು, ಬಲಿಷ್ಠವಾದ ಟೊಂಕ ಮತ್ತು ರೊಂಡಿ, ಮಂಡಿಯವರೆಗು ನೀಳವಾಗಿದ್ದು ಅನಂತರ ಚಿಕ್ಕದಾಗುವ ಮುಂಗಾಲು, ನೀಳವಾದ ಜಿಗಿಯುವ ಕಾಲ್ಗೆಣ್ಣಿನ ಭಾಗ, ದೃಢವಾದ ಅಗಲವಾದ ಪಾದ, ದೊಡ್ಡ ತೊಡೆ, ದೃಢವಾಗಿ ರೂಪಗೊಂಡ ಅಸ್ಥಿಸಂಧಿಗಳು, ಮೃದುವಾದ ಹೊಳಪಾದ ಮೈಚರ್ಮ, ಎತ್ತಿಬೀಸಿದ ಬಾಲ-ಇವೇ ಈ ಜಾತಿಯ ಉಳಿದ ಲಕ್ಷಣಗಳು.ಈ ಕುದುರೆಗಳ ಬಣ್ಣ ವಿವಿದ; ಕುರಿಬೂದು, ದಟ್ಟ ಕೆಂಗಂದು, ಬೂದಿಕಪ್ಪು ಕಂದು ಮುಂತಾದವು. ಈ ಅನೇಕ ಬಣ್ಣಗಳು ಅಷ್ಟು ಪ್ರಿಯವಲ್ಲ.
ಮೈಸೂರು ರಾಜ್ಯದಲ್ಲಿ ಕುದುರೆ ತಳಿ ಅಭಿವೃದ್ಧಿ
[ಬದಲಾಯಿಸಿ]ಮೈಸೂರಿನ ಒಡೆಯರ್ ರಾಜಮನೆತನದವರು ಕುಣಿಗಲ್ಲಿನಲ್ಲಿ ಈಗ್ಗೆ 150 ವರ್ಷಗಳಿಗೂ ಹಿಂದೆಯೇ ಸೈನ್ಯದ ಕುದುರೆ ತಳಿ ಅಭಿವೃದ್ಧಿ ಕೇಂದ್ರವನ್ನು ಸ್ಥಾಪಿಸಿದರು. 1850ನೆಯ ವರ್ಷದಲ್ಲಿ, ಈ ಕೇಂದ್ರಕ್ಕೆ ಆಫ್ರಿಕ ತಳಿಗಳನ್ನು ತರಿಸಿದರು. ಆ ಕಾಲದಲ್ಲಿ ಉಪಯೋಗಿಸಿದ ಬೀಜದ ಕುದುರೆಗಳು ಮುಖ್ಯವಾಗಿ ಶುದ್ಧತಳಿ ಅಂದುಕೊಂಡಿದ್ದ ಅರಬ್ಬೀ ಮತ್ತು ವೇಲರ್ ಜಾತಿಯವು. 1936ರಲ್ಲಿ ಜೆ.ಜೆ. ಮಲ್ಲಿಕ್ ಎಂಬ ಬ್ರಿಟಿಷ್ ಅಧಿಕಾರಿ ಈ ಕೇಂದ್ರವನ್ನು ಉತ್ತಮಗೊಳಿಸಲು ನಿಯಮಿತನಾದ ಆತ ಸ್ಥಳೀಯ ಹೆಣ್ಣು ಕುದುರೆಗಳನ್ನೆಲ್ಲ ವಿಸರ್ಜಿಸಿ ಈ ಕೇಂದ್ರವನ್ನು ಜೂಜುಕುದುರೆ ಅಭಿವೃದ್ಧಿಕಾರ್ಯಕ್ಕೆ ಮಾತ್ರ ಉಳಿಸಿಕೊಂಡ. 1940ರಿಂದ ಅಭಿವೃದ್ಧಿ ಗತಿ ಚೆನ್ನಾಗಿದ್ದು ಇಲ್ಲಿಂದ ಹೊರಬಂದ ಕುದುರೆಗಳು ಅನೇಕ ಜೂಜಿನಲ್ಲಿ ಪ್ರಸಿದ್ಧಿಗೆ ಬಂದಿವೆ. ಸರ್ಕಾರದವರು ಈಚಿನ ದಿನಗಳಲ್ಲಿ ಈ ಕೇಂದ್ರದ ಅಭಿವೃದ್ಧಿಯಲ್ಲಿ ವಿಶೇಷ ಆಸಕ್ತಿವಹಿಸಿ ಹೊರದೇಶದಿಂದ ಶುದ್ಧ ತಳಿಗಳನ್ನು ತರಿಸಿದ್ದಾರೆ. ಈ ಕೇಂದ್ರದಿಂದ ಹೊರಬಂದ ಜಾತಿಗಳಿಗೆ ಪ್ರಪಂಚದ ಅಶ್ವತಳಿಗಳಲ್ಲಿ ಮುಖ್ಯಸ್ಥಾನವಿದೆ.
ತಳಿ ಅಭಿವೃದ್ಧಿ
[ಬದಲಾಯಿಸಿ]ಎಲ್ಲ ಪ್ರಾಣಿ ತಳಿ ಅಭಿವೃದ್ಧಿ ಕಾರ್ಯದಲ್ಲಿ ಇರುವಂತೆಯೇ ಕುದುರೆ ತಳಿ ಅಭಿವೃದ್ಧಿಯಲ್ಲೂ ಒಂದು ಜೀವಿಯಿಂದ ಹೊರಬರುವ ಶಿಶು ಅದರ ತಂದೆ ತಾಯಿಯರ ಲಕ್ಷಣವನ್ನೇ ಇಲ್ಲವೇ ಅದರ ಪೂರ್ವಜರ ಲಕ್ಷಣವನ್ನೇ ಹೊಂದಿರುತ್ತದೆ ಎಂಬ ಸ್ಥಿತಿಯನ್ನು ಗುರುತಿಸುವುದು ಅಗತ್ಯ. ಅಂದರೆ ತಳಿಶುದ್ಧತೆ ನಿಜವಾಗಿಯೂ ಅತಿಮುಖ್ಯ. ಈ ಕಾರಣದಿಂದ ತಳಿ ಅಭಿವೃದ್ಧಿ ಕೆಲಸದಲ್ಲಿ ತೊಡಗಿರುವ ಜನರ ಮೊದಲ ಯೋಚನೆ ಕುದುರೆಗಳ ವಂಶವೃಕ್ಷದ ಕೂಲಂಕಷ ಅರಿವು. ಜೂಜು ಕುದುರೆಯ ತಳಿ ಅಭಿವೃದ್ಧಿಕಾರ್ಯಕ್ಕೆ ತೊಡಗಲು ಪ್ರಯತ್ನಿಸುವವರು ತಳಿಯ ಶುದ್ಧತೆಯಲ್ಲಿ ಲವಲೇಶದಷ್ಟು ಸಂದೇಹ ಬಂದರೂ ಅಂಥ ಕುದುರೆಗಳನ್ನು ಖಂಡಿತ ಬಳಸರು.
ಕುದುರೆ ಆಯ್ಕೆ
[ಬದಲಾಯಿಸಿ]ತಳಿವೃದ್ಧಿಗೆ ಬೇಕಾದ ಗಂಡು ಕುದುರೆಯ ವಯಸ್ಸು 4ರಿಂದ 6 ವರ್ಷ ಇರಬೇಕು. ಗಟ್ಟಿಯಾದ ಕೈಕಾಲುಗಳು, ದೃಢಕಾಯ ಮತ್ತು ಸ್ಥಿಮಿತ ಸ್ವಭಾವ ಇರುವುದು ಅತ್ಯಾವಶ್ಯಕ. ತಾಯಿ ತಂದೆ ಎರಡು ಕಡೆಗಳಿಂದಲೂ ಉತ್ತಮ ವಂಶ ಅಗತ್ಯ. ತಳಿಗುಣಗಳು ವಂಶಪರಂಪರೆಯಿಂದ ಬರುವುದರಿಂದ ಒಳ್ಳೆಯ ಬೀಜದ ಕುದುರೆ ಆವಶ್ಯಕ ಮಾತ್ರವಲ್ಲ ಆ ಕುದುರೆಯ ಪೀಳಿಗೆಯೂ ಯಾವ ಸಂದೇಹಕ್ಕೂ ಎಡೆ ಇಲ್ಲದೆ ನಿಷ್ಕಳಂಕವಾಗಿರಬೇಕು. ಥರೋಬ್ರೆಡ್ ಜಾತಿ ಬೀಜದ ಕುದುರೆ ಎತ್ತರ 15-3ರಿಂದ 16-1 ಹ್ಯಾಂಡ್ಸ್ ಇರಬೇಕು. ಮೊಣಕಾಲು ಅಗಲವಿದ್ದು ಕಾಲು ಮತ್ತು ಪಾದಗಳ ಮೇಲಿನ ದೃಢನಿಲವು ಆದ್ಯ. ಮಂಡಿಯ ಕೆಳಗೆ ಮೊಣಕಾಲಿನ ಭಾಗ ಗಡುಸಾದ ಮೂಳೆಯಿಂದಾಗಿರುತ್ತದೆ. ಮೊಣಕಾಲಿನ ಹಿಂದಿನ ಮೂಳೆ ಚಾಚಿದ್ದು ದೊಡ್ಡದಾಗಿರುವುದು ಆವಶ್ಯಕ. ಮಂಡಿ ಮತ್ತು ಚುಂಚುಕಾಲಿನ ಮಧ್ಯದ ಭಾಗ ದೃಢವಾಗಿ ಮತ್ತು ರೋಗ ವಿಮುಕ್ತವಾಗಿರಬೇಕು. ಗೊರಸು ದೊಡ್ಡದೂ ಅಲ್ಲದೆ ಚಿಕ್ಕದೂ ಅಲ್ಲದೆ ಕುದುರೆಯ ಗಾತ್ರಕ್ಕನುಗುಣವಾಗಿ ಮಾಟವಾಗಿರಬೇಕು. ಗೊರಸಿನ ತುದಿ ಅಥವಾ ಕೊಂಬು ಗಡುಸಾಗಿ ಗಟ್ಟಿಯಾಗಿರುವುದು ಅಗತ್ಯ. ಚುಂಚುಕಾಲು ಮತ್ತು ಗೊರಸಿನ ಮಧ್ಯದ ಭಾಗ ಗೊರಸಿನ ಮೇಲ್ಭಾಗದ ಕೀಲಿನ ಮೇಲೆ ಬಾಗಿ ಕೂತಿರುವುದಲ್ಲದೆ ಹ್ರಸ್ವವಾಗಿದ್ದರೆ ಒಳ್ಳೆಯದು. ಶಕ್ತಿಯುತವಾದ ದಪ್ಪ ಮೇಲ್ಭುಜ; ಅದು ಬಾಗಿರಬಾರದು, ಆದರೆ ಕಡಿದಾಗಿಯೂ ಇರಬಾರದು. ಮೊಣಕೈತುದಿ ದೊಡ್ಡದಾಗಿ ಎದ್ದುಕಾಣುತ್ತಿರುವುದು ಲಕ್ಷಣ. ಮೈ ಸುತ್ತು ಅಗಲವಾಗಿದ್ದು, ಎದೆಯ ಸುತ್ತ ಗುಂಡಾಗಿರುವುದು ಸೊಗಸು. ಹ್ರಸ್ವಬೆನ್ನು, ಶಕ್ತಿಯುತವಾದ ಮಾಂಸದಿಂದ ತುಂಬಿದ ಟೊಂಕ, ಶಕ್ತಿಯುತವಾದ ಹಿಂಬದಿ ಮತ್ತು ದಷ್ಟಪುಷ್ಟವಾದ ತೊಡೆ-ಇವು ಕೆಲವು ಸಲ್ಲಕ್ಷಣಗಳು. ಪಿರ್ರೆಯಿಂದ ಚುಂಚುಕಾಲಿನ ವರೆಗಿನ ಭಾಗ ನೀಳವಾಗಿದ್ದರೆ ಲಕ್ಷಣ. ಉದ್ದ ಮತ್ತು ಅಗಲವಾದ ಕತ್ತು; ತೆಳ್ಳಗೆ ಉದ್ದವಾದ ಮತ್ತು ಅಗಲವಾದ ತಲೆ, ಕಣ್ಣುಗಳ ಮಧ್ಯೆ ಸಾಕಷ್ಟು ಜಾಗ ಇದ್ದು ಉಬ್ಬಿದ ಹಣೆ, ಹೆಚ್ಚು ಮೊನಚಲ್ಲದ ಮೂತಿ, ಸಣ್ಣದಾಗಿ ಕಂಡರೂ ಬೇಕಾದಾಗ ಅರಳಬಲ್ಲ ಮೂಗಿನ ಹೊಳ್ಳೆ, ತೆಳುವಾದ ಅಗಲವಾದ ಕೆಳದವಡೆ, ಕತ್ತು ಮತ್ತು ತಲೆ ಸೇರುವೆಡೆ ತೆಳುವಾಗಿ ಅಗಲವಾಗಿದ್ದರೂ ಗಾಳಿ ಸುಲಭವಾಗಿ ತೂರುವುದಕ್ಕೆ ಅನುಕೂಲವಾಗುವಂತೆ ಸಾಕಷ್ಟು ವ್ಯಾಸಹೊಂದಿ ಸ್ಫುಟವಾದ ಉಸಿರುನಾಳ-ಇವು ಬೀಜದ ಕುದುರೆಯ ಇನ್ನೂ ಕೆಲವು ಲಕ್ಷಣಗಳು. ಬಣ್ಣ ಅಷ್ಟೇನೂ ಪ್ರಾಮುಖ್ಯವಲ್ಲದಿದ್ದರೂ ಜನ ಸಾಮಾನ್ಯವಾಗಿ ಯಾವುದೇ ಮಸಕು ಬಣ್ಣಗಳನ್ನು ಇಷ್ಟಪಡುವುದಿಲ್ಲ. ದಟ್ಟವಾದ ಸ್ಪಷ್ಟವಾದ ಬಣ್ಣದ ಕುದುರೆಗಳಿಗೆ ಗಿರಾಕಿ ಹೆಚ್ಚು.
ಹೆಣ್ಣುಕುದುರೆ ಆಯ್ಕೆ
[ಬದಲಾಯಿಸಿ]ಬೀಜದ ಕುದುರೆಯ ಆಯ್ಕೆಯ ಆಧಾರಗಳೇ ಹೆಣ್ಣು ಕುದುರೆಯ ಆಯ್ಕೆಗೂ ಅನ್ವಯಿಸುತ್ತವೆ. ಸುಮಾರು 4 ವರ್ಷ ವಯಸ್ಸಿನಲ್ಲಿ ಇದು ಗರ್ಭಧಾರಣೆ ಮಾಡುತ್ತದೆ. ಇದರ ಎತ್ತರ 15-2ರಿಂದ 15-3 ಹ್ಯಾಂಡುಗಳು. ಹೆಣ್ಣು ಅಥವಾ ಗಂಡುಕುದುರೆಗಳ ಜೀವಮಾನ 25ರಿಂದ 30 ವರ್ಷಗಳು.
ಕೂಡಿಸುವಿಕೆ
[ಬದಲಾಯಿಸಿ]ಸ್ಥಳೀಯ ಜಾತಿಯ ಹೆಣ್ಣು ಕುದುರೆಗಳು ಗರ್ಭಧಾರಣೆಗೆ ವರ್ಷದ ಎಲ್ಲ ಕಾಲದಲ್ಲೂ ಹದವಾಗಿರುತ್ತವೆ. ಶುದ್ಧ ತಳಿಗಳು ಜನವರಿಯಿಂದ ಫೆಬ್ರವರಿ ತಿಂಗಳ ಕಾಲದಲ್ಲಿ ಮಾತ್ರ ಗರ್ಭತಾಳಬಲ್ಲವು. ಸುಮಾರು 3 ರಿಂದ ಒಂದು ವಾರ ಇಲ್ಲವೇ 9 ದಿವಸಗಳ ಕಾಲ ಇರುವ ಗರ್ಭಕಾಲದ ಸೂಚನೆಗಳು : ಒಂದು ತರಹ ಮಂಕು, ಕಿರಿಕಿರಿ, ಮನೋವಿಕಾರ, ಹಸಿವು ಕಾಣಿಸದೆ ಇರುವಿಕೆ, ಇತರ ಕುದುರೆಗಳ ಅದರಲ್ಲೂ ಗಂಡುಗಳ ಸಹವಾಸ ಬಯಸುವಿಕೆ, ಆಗಾಗ ಮೂತ್ರ ವಿಸರ್ಜನೆ, ಯೋನಿಮುಖದ ಚಲನೆ ಮತ್ತು ಬಿಟ್ಟುಬಿಟ್ಟು ಹೊರಸೂಸುವ ಬಿಳಿದ್ರವ-ಈ ಸ್ಥಿತಿಯಲ್ಲಿ ಬಹುಹೆಣ್ಣುಗಳು ಗಂಡುಕುದುರೆ ಸಂಭೋಗಕ್ಕೆ ಹಸನಾಗಿರುತ್ತವೆ. ಸಂಭೋಗದ ಅನಂತರ ಗರ್ಭಧಾರಣೆ ಆಗುವುದು ಖಚಿತ. ಆದರೆ ಕೆಲವು ಕುದುರೆಗಳಲ್ಲಿ ಈ ಪರಿಸ್ಥಿತಿ ಹಾಗೆಯೇ ಮುಂದುವರಿದು ಸಂಭೋಗದಿಂದ ಗರ್ಭಧಾರಣೆ ಆಗುವುದಿಲ್ಲ. ಗರ್ಭಕೋಶ ಇಲ್ಲವೆ ಅಂಡಾಶಯದ ಅವ್ಯವಸ್ಥೆ ಅಥವಾ ಸೋಂಕು ಇದಕ್ಕೆ ಕಾರಣ. ಆಗ ಪಶುವೈದ್ಯರಿಂದ ಚಿಕಿತ್ಸೆ ಅಗತ್ಯ. ತಳಿ ಅಭಿವೃದ್ಧಿಯಲ್ಲಿ ಕುದುರೆಗಳ ನೈರ್ಮಲ್ಯಕ್ಕೆ ಗಮನ ಬಹಳ ಅಗತ್ಯ. ಗಂಡು ಕುದುರೆಯ ಶಿಶ್ನ ಸ್ವಚ್ಛವಾಗಿದ್ದು ಕಪ್ಪು ಕೊಳೆ ಶೇಖರವಾಗದಂತಿರಬೇಕು. ಹೆಣ್ಣಿನ ಹಿಂಭಾಗವನ್ನು ಮತ್ತು ಯೋನಿಮುಖದಿಂದ ಸ್ರಾವವಾಗಿರುವ ವಸ್ತುಗಳನ್ನೂ ಚೆನ್ನಾಗಿ ತೊಳೆಯಬೇಕು. ಇದಕ್ಕೆ ಗಮನ ಕೊಡದಿದ್ದರೆ ಗರ್ಭಸ್ರಾವ ಅಥವಾ ಪೂರ್ಣ ಬೆಳೆವಣಿಗೆಯಾಗದ ಮರಿಗಳ ಜನನ ಅಥವಾ ಗರ್ಭಕೋಶದ ಸೋಂಕು ಆಗಿ ತೊಂದರೆ ಉಂಟಾಗುತ್ತದೆ.
ಗರ್ಭಿಣಿ ಕುದುರೆಗಳ ಆರೈಕೆ
[ಬದಲಾಯಿಸಿ]ಗರ್ಭಧಾರಣೆಯಾದ ಕೂಡಲೆ ಹೆಣ್ಣು ಕುದುರೆಯಲ್ಲಿ ಕಾಮೋದ್ರೇಕ ಇಳಿದು ಅದು ಮುಂದೆ ಪ್ರಸವವಾಗುವವರೆಗೂ ಕಂಡು ಬರುವುದಿಲ್ಲ. ಗರ್ಭಧಾರಣೆ ಕಾಲ ಭಾರತ ದೇಶದ ಹವಾಪರಿಸ್ಥಿತಿಯಲ್ಲಿ ಸುಮಾರು 340 ದಿವಸಗಳು. ಗರ್ಭಿಣಿ ಕುದುರೆಗೆ ಮೊದಲ ಕೆಲವು ತಿಂಗಳುಗಳಲ್ಲಿ ಲಾಯದ ಸೂಕ್ತ ಮೇಲ್ವಿಚಾರಣೆ ವಿನಾ ಅಂಥ ಹೆಚ್ಚು ಗಮನ ಬೇಕಾಗುವುದಿಲ್ಲ. 6ನೆಯ ತಿಂಗಳಿನಿಂದ ಎಚ್ಚರಿಕೆ ಅಗತ್ಯ. ಹೆಚ್ಚು ಆಹಾರ ಕೊಟ್ಟು ಮೈ ಕೊಬ್ಬಿಸಬಾರದು. ಒಳ್ಳೆ ಒಣಗಿಸಿದ ಹಸಿ ಮೇವು ಮತ್ತು ಓಟ್ಸ್ ಧಾನ್ಯ ಇವುಗಳಿಗಿಂತ ಹೆಚ್ಚೇನೂ ಅಗತ್ಯವಿಲ್ಲ. ಹೆರಿಗೆ ಹತ್ತಿರ ಬಂದ ವೇಳೆಯಲ್ಲಿ ನಾರಗಸೆಯ ಬೀಜದ ಗಂಜಿಗೆ ಗೋದಿಹೊಟ್ಟು ಮತ್ತು ಉಪ್ಪು ಸೇರಿಸಿ ಕೊಡುವುದು ಒಳ್ಳೆಯದು. ನೆಕ್ಕುವುದಕ್ಕೆ ಕಲ್ಲುಪ್ಪು ಇಡುವುದು ಅಗತ್ಯ. ಕುಡಿಯಲು ಸಿಹಿನೀರು ಸದಾ ಸಿಗುವಂತೆ ಇರಬೇಕು. ಹೆರಿಗೆ ಸಮಯದಲ್ಲಿ ಸೂಕ್ತ ಎಚ್ಚರಿಕೆ ಅಗತ್ಯ. ಉತ್ತಮ ತಳಿಕುದುರೆಗಳಿಗೆ ದೇಶೀ ಕುದುರೆಗಳಿಗಿಂತ ಹೆರಿಗೆ ಕಾಲದಲ್ಲಿ ಅಪಾಯ ಸಂಭವ ಹೆಚ್ಚು. ಮೊಲೆತುದಿಯಲ್ಲಿ ಅಂಟು ಕಾಣಿಸಿ ಅನಂತರ ಹಾಲು ಬರುವುದು ಹೆರಿಗೆ ಇನ್ನೇನು ಕೆಲವೇ ಗಂಟೆಗಳಲ್ಲೇ ಆಗುತ್ತದೆ ಎನ್ನುವುದಕ್ಕೆ ಸೂಚನೆ. ಕೆಲವು ಕುದುರೆಗಳಲ್ಲಿ ಇದು ಹೆರಿಗೆಗೆ ಒಂದೆರಡು ದಿವಸಗಳ ಮುಂದೆ ಆಗಬಹುದು. ಸೂಚನೆ ಕಂಡ ಕೂಡಲೆ ಗರ್ಭಿಣಿ ಕುದುರೆಯನ್ನು ಹಿತವಾದ ತಂಪಾದ ಗಾಳಿ ಸಂಚಾರ ಸಮರ್ಪಕವಾಗಿರುವ ಕೊಠಡಿಗೆ ಸಾಗಿಸಬೇಕು ಉದ್ರೇಕಕ್ಕೆ ಎಡೆ ಇಲ್ಲದ ನಿಶ್ಯಬ್ದ ವಾತಾವರಣವನ್ನು ಅಳವಡಿಸುವುದು ಆವಶ್ಯಕ. ಅಪರಿಚಿತ ಜನರನ್ನು ಸೇರಿಸಬಾರದು. ಸಾಧಾರಣವಾಗಿ ಕುದುರೆಗೆ ಅದು ಮಲಗಿದಾಗ ಹೆರಿಗೆಯಾಗುತ್ತದೆ. ವ್ಯತ್ಯಾಸಸ್ಥಿತಿ ಕಂಡುಬಂದರೆ ಪಶುವೈದ್ಯರಿಗೆ ಕರೆಕಳಿಸುವುದು ಉತ್ತಮ. ಮರಿ ಹೊರಬಂದ ತತ್‍ಕ್ಷಣ ಹೊಕ್ಕಳು ಬಳ್ಳಿಯನ್ನು ಒಂದೆರಡು ಅಂಗುಲ ಉದ್ದದಷ್ಟು ಬಿಟ್ಟು ಶುಭ್ರವಾದ ಟ್ವೈನ್ ದಾರದಿಂದ ಕಟ್ಟಬೇಕು. ಕ್ರಮೇಣ ಬಳ್ಳಿ ಅದಾಗಿ ಅದೇ ಬಿದ್ದು ಹೋಗುತ್ತದೆ. ಹೆರಿಗೆ ಕಸ ಹೊರಬಂದ ಮೇಲೆ ಕುದುರೆಗೆ ತಿಳಿಯಾದ ಹೊಟ್ಟುಗಂಜಿ ಕುಡಿಸಬೇಕು. ಕೆಚ್ಚಲು ಸ್ವಚ್ಛವಾಗಿ ತೊಳೆಯುವುದು ಬಹಳ ಅಗತ್ಯ. ಇವೆಲ್ಲ ಆದಮೇಲೆ ಮರಿಯನ್ನು ತಾಯಿ ಬಳಿ ಇರಿಸಬೇಕು. ಅದು ಸ್ವಲ್ಪ ಹೊತ್ತಿನಲ್ಲಿಯೇ ಎದ್ದುನಿಂತು ಮೊಲೆ ಉಣ್ಣುವುದಕ್ಕೆ ಪ್ರಾರಂಭಿಸುತ್ತದೆ. ಮೊಲೆಯುಣ್ಣಲು ಅದಕ್ಕೆ ಆಗದಿದ್ದಾಗ ಸಹಾಯ ಮಾಡುವುದು ಆವಶ್ಯಕ. ಮರಿ ಕುದುರೆಗೆ ಮಲಬದ್ಧತೆ ಆಗಿದೆ ಎಂದು ಕಂಡುಬಂದಾಗ ಹರಳೆಣ್ಣೆ ಎನಿಮಾ ಅಗತ್ಯವಾಗಬಹುದು. ಕಾಲಪ್ರವೃತ್ತಿಯಾದ ಅನಂತರ ಮರಿಗೆ ಏನೂ ಹೆಚ್ಚಿನ ಗಮನ ಬೇಕಾಗುವುದಿಲ್ಲ. ಗಂಡು ಕುದುರೆಮರಿಯನ್ನು ಕೋಲ್ಟ್ ಫೋಲ್ ಎಂದೂ ಹೆಣ್ಣು ಕುದುರೆ ಮರಿಯನ್ನು ಫಿಲ್ಲಿ ಎಂದೂ ಕರೆಯುತ್ತಾರೆ. 6 ತಿಂಗಳಾದ ಮೇಲೆ ತಾಯಿ ಹಾಲು ನಿಲ್ಲಿಸುತ್ತಾರೆ. ಒಂದು ವರ್ಷವಾದ ಅನಂತರ ಹೆಣ್ಣು ಗಂಡುಗಳನ್ನು ಬೇರ್ಪಡಿಸಿ ಹುಲ್ಲುಗಾವಲು-ಲಾಯ ಅಲಾಯಿದೆ ಏರ್ಪಾಡುಮಾಡುತ್ತಾರೆ.
ಕುದುರೆ ವಯಸ್ಸು ನಿರ್ಣಯಿಸುವುದು
[ಬದಲಾಯಿಸಿ]ಹಲ್ಲುಗಳ ಎಣಿಕೆಯ ಆಧಾರದ ಮೇಲೆ ಕುದುರೆಯ ವಯಸ್ಸನ್ನು ನಿರ್ಧರಿಸಬಹುದು. ಈ ಲೆಕ್ಕಾಚಾರ 9 ವರ್ಷದ ಒಳಗಿನ ಕುದುರೆಗಳಿಗೆ ನಿಖರವಾಗಿ ಅನ್ವಯಿಸುತ್ತದೆ. ಅದಕ್ಕೂ ಹೆಚ್ಚಿನ ವಯಸ್ಸಿನ ಕುದುರೆಗಳ ವಯೋಮಿತಿ ನಿರ್ಧಾರಕ್ಕೆ ಅನುಭವಬೇಕು. ಕುದುರೆ ಹುಟ್ಟಿದಾಗ ಮಧ್ಯದ ಎರಡು ಬಾಚಿ ಹಲ್ಲುಗಳಿರುತ್ತವೆ. 9 ತಿಂಗಳ ಹೊತ್ತಿಗೆ ಉಳಿದೆರಡು ಮುಂದಿನ ಹಲ್ಲುಗಳು ಒಂದು ಬಾಚಿ ಹಲ್ಲೆಲ್ಲ ಅಸ್ತಿತ್ವಕ್ಕೆ ಬಂದಹಾಗಾಗುತ್ತದೆ. 2 1/2 ವರ್ಷ ಸುಮಾರಿನಲ್ಲಿ, ಈ ಹಲ್ಲುಗಳು ಬಿದ್ದು ಸ್ಥಿರವಾದ ಹಲ್ಲುಗಳು ಹುಟ್ಟುಲು ಪ್ರಾರಂಭವಾಗುತ್ತವೆ. 3 ವರ್ಷಕ್ಕೆ ಮಧ್ಯದ ಹಲ್ಲುಗಳೆಲ್ಲ ಬಿದ್ದು ಹೊಸಹಲ್ಲು ಹುಟ್ಟಿರುತ್ತದೆ. 4 ನೆಯ ವರ್ಷಕ್ಕೆ 4 ಸ್ಥಿರಹಲ್ಲುಗಳೂ 5ನೆಯ ವರ್ಷಕ್ಕೆ ಎಲ್ಲ ಬಾಚಿ ಹಲ್ಲುಗಳೂ ಕಳೆದು ಸ್ಥಿರಹಲ್ಲುಗಳು ಬಂದಿರುತ್ತವೆ. ಇಂಥ ಕುದುರೆಗೆ ಪೂರ್ಣಬಾಯಿಯ ಕುದುರೆ ಎನ್ನುತ್ತಾರೆ. 6ನೆಯ ವರ್ಷದಿಂದ ಬಾಚಿಹಲ್ಲುಗಳ ಮೇಲಿನ ಭಾಗ ಸವೆಯುವುದಕ್ಕೆ ಪ್ರಾರಂಭವಾಗಿ 9 ವರ್ಷದ ವೇಳೆಗೆ ಅವುಗಳಲ್ಲಿ ಗುಣಿಗಳು ಏನೂ ಇರುವುದಿಲ್ಲ. ಇಂಥ ಕುದುರೆಯನ್ನು ವಯಸ್ಸಾದ ಕುದುರೆ ಎಂದು ಪರಿಗಣಿಸುತ್ತಾರೆ. ಇದಾದ ಮೇಲೆ ಹಲ್ಲುಗಳಿಂದ ವಯೋಮಿತಿ ಗೊತ್ತಾಗುವುದಿಲ್ಲ. ಬೀಜ ಒಡೆಯುವುದಕ್ಕೆ ವಯಸ್ಸು ಮತ್ತು ಕಾಲ ಬೇರೆ ಬೇರೆ ತಳಿಗಳಿಗೆ ವ್ಯತ್ಯಾಸ. ಈ ಶಸ್ತ್ರಚಿಕಿತ್ಸೆಗೆ ಸೂಕ್ತ ವಯಸ್ಸು ಮತ್ತು ಸಮಯಗಳ ವಿಷಯದಲ್ಲಿ ಭಿನ್ನಾಭಿಪ್ರಾಯವುಂಟು. 6 ತಿಂಗಳಿಗೂ ಕಡಿಮೆ ವಯಸ್ಸುಳ್ಳ ಗಂಡು ಮರಿಗಳ ಬೀಜ ಒಡೆಯುವುದು ಅಸಮಂಜಸ. ಒಂದು ವರ್ಷ ಸೂಕ್ತ ಕಾಲ. ಇದು ಒಂದು ಸುಲಭ ಮತ್ತು ಶೀಘ್ರವಾದ ಶಸ್ತ್ರಚಿಕಿತ್ಸೆ. ಗಾಯ, ತೊಂದರೆ ಇಲ್ಲದೆ ಮಾಯುತ್ತದೆ. ನೊಣಗಳ ಕಾಟವಿಲ್ಲದೆ ತಂಪಾಗಿರುವ ವಸಂತಕಾಲ ಇದಕ್ಕೆ ಅತ್ಯುತ್ತಮ. ಚಳಿಗಾಲದಲ್ಲಿ ಮಾಯುವುದಕ್ಕೆ ತೊಂದರೆ.
ಬಾಣಂತಿ ಕುದುರೆ ಮತ್ತು ಮರಿಗಳ ಪೋಷಣೆ
[ಬದಲಾಯಿಸಿ]ಮರಿ ಉಳ್ಳ ಕುದುರೆಗೆ ಒಳ್ಳೆ ಹಸಿರುಹುಲ್ಲು, ರುಬ್ಬಿದ ಓಟ್‍ಧಾನ್ಯ, ಕುದುರೆ ಮಸಾಲೆಸೊಪ್ಪು, ಕೆಂಪು ಮೂಲಂಗಿ ಇವೆಲ್ಲ ಅಗತ್ಯವಾಗಿ ಕೊಡಬೇಕಾದ ಆಹಾರ. ಹಸಿಮೇವು ಯಥೇಚ್ಛವಾಗಿದ್ದಲ್ಲಿ, ಓಟ್ ದಿವಸಕ್ಕೆ ಎರಡು ಬಾರಿ ಸಾಕು. ಮರಿಗೆ 2-3 ವಾರಗಳಾಗಿ ಅದು ಮೇವು ತಿನ್ನಲು ಪ್ರಾರಂಭಿಸಿದಾಗ ಸ್ವಲ್ಪ ಆಹಾರವನ್ನು ನೇರವಾಗಿ 2-3 ಬಾರಿ ಅದಕ್ಕೆ ಕೊಡಬಹುದು. ಮರಿ ಚೆನ್ನಾಗಿ ಬೆಳೆಯಬೇಕಾದರೆ ಪುಷ್ಟಿಯಾದ ಆಹಾರ ಆವಶ್ಯಕ.
ಮರಿಗಳ ನಿರ್ವಹಣೆ
[ಬದಲಾಯಿಸಿ]ಮರಿ ಸಣ್ಣದಾಗಿದ್ದಾಗಿನಿಂದ ಅದರ ಮೈ ಕೈಯನ್ನು ಕೈಯಿಂದ ಚೆನ್ನಾಗಿ ನೇವರಿಸಿ ಅದಕ್ಕೆ ಒಂದು ಮಮತೆಯ ವಾತಾವರಣವನ್ನು ಉಂಟುಮಾಡುವುದು ಒಳ್ಳೆಯದು. ಸಾಧಾರಣವಾಗಿ 6 ತಿಂಗಳ ಮರಿಗೆ ಮೊಲೆಯುಣ್ಣುವುದನ್ನು ಬಿಡಿಸುತ್ತಾರೆ. ತಾಯಿ ಗಬ್ಬವಾಗಿಲ್ಲದಿದ್ದರೆ ಮರಿಗೆ 9 ತಿಂಗಳಿನವರೆಗೂ ಹಾಲು ಕುಡಿಯಲು ಬಿಡಬೇಕು. ಮರಿಗೆ ಹಾಲು ಬಿಡಿಸಿದಾಗ ಕುದುರೆ ಕೆಚ್ಚಲು ಊದಿ ನೋವಾದಲ್ಲಿ ಹಾಲು ಹಿಂಡುವುದು ಉತ್ತಮ. ಕೆಚ್ಚಲು ತೊಳೆದು ಕೊಬ್ಬರಿ ಎಣ್ಣೆ ಹಚ್ಚಿದರೆ ಕೆಚ್ಚಲು ಮತ್ತು ಮೊಲೆ ಬಿಗಿಯುವುದಿಲ್ಲ. ತಾಯಿ ಹಾಲು ಕಡಿಮೆಯಾದಲ್ಲಿ ಮರಿಗೆ ಸ್ವಲ್ಪ ಬಿಸಿಮಾಡಿದ ಬೆಣ್ಣೆತೆಗೆದ ಹಸುವಿನ ಹಾಲು ಕೊಡಬಹುದು. ತಾಯಿ ಹಾಲಿದ್ದಲ್ಲಿ ಬೇರೆ ಹಾಲು ಅನಗತ್ಯ. ತಾಯಿ ಹಾಲು ಬಿಡಿಸಿದ ಮೇಲೆ ಎಮ್ಮೆ ಅಥವಾ ಹಸುವಿನ ಹಾಲು ಕೊಟ್ಟಲ್ಲಿ ಮರಿ ಚೆನ್ನಾಗಿ ಬೆಳೆಯುತ್ತದೆ.
ಉಲ್ಲೇಖಗಳು
[ಬದಲಾಯಿಸಿ]