ವಿಷಯಕ್ಕೆ ಹೋಗು

ಕೊರಗತನಿಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕೊರಗಜ್ಜ
ಕೋಲದಲ್ಲಿ ಕೊರಗಜ್ಜ

ತುಳುನಾಡಿನಲ್ಲಿ ಕೊರಗತನಿಯ ಎಂಬ ದೈವದ ಆರಾಧನೆ ನಡೆಯುತ್ತದೆ. ತುಳುನಾಡಿನ ಮಂಗಳೂರು, ಕಂಕನಾಡಿ, ಮರವೂರು, ಬಜಪೆ, ಬೈಕಂಪಾಡಿ, ಹಳೆಯಂಗಡಿ, ಉಡುಪಿ, ಕುಂದಾಪುರ ಪ್ರದೇಶಗಳಲ್ಲಿ ವಾಸಿಸುವ ಬುಡಕಟ್ಟು ಜನಾಂಗದವರಲ್ಲಿ ಹೆಚ್ಚಿನವರು ಕೊರಗ ಜಾತಿಯವರಾಗಿದ್ದಾರೆ. ಇವರೆಲ್ಲರ ಆರಾಧ್ಯ ದೈವವೇ ಕೊರಗತನಿಯ. ಕೊರಗರು ಕೊರಗತನಿಯನನ್ನು 'ನೀಚ' ಎಂದು ಕರೆಯುತ್ತಾರೆ.[] ಕೊರಗತನಿಯನು ದಲಿತ ಸಮುದಾಯದ ಕುಲದೈವವೆಂದೇ ಪರಿಗಣಿಸಲ್ಪಟ್ಟಿದ್ದಾನೆ. ಕೊರಗಜ್ಜನನ್ನು ದಕ್ಷಿಣದ ರಾಜ್ಯಗಳಲ್ಲಿ ಕೊರಗಜ್ಜ ಎನ್ನುವ ಹೆಸರಿನಲ್ಲಿ ಮತ್ತು ಉತ್ತರದ ರಾಜ್ಯಗಳಲ್ಲಿ ನೀಚ ಎನ್ನುವ ಹೆಸರಿನಲ್ಲಿ ಪೂಜಿಸಲಾಗುತ್ತದೆ.

ಇತಿಹಾಸ

[ಬದಲಾಯಿಸಿ]

ಈ ದೈವವನ್ನು ಹೆಚ್ಚಾಗಿ ಕೊರಗಜ್ಜ ಎಂದೇ ಕರೆಯಲಾಗುತ್ತದೆ. ಹಸುಗೂಸುಗಳು ಹಾಗೂ ದನಗಳೊಂದಿಗೆ ಈ ದೈವವು ನಿಕಟ ಸಂಬಂಧವನ್ನು ಹೊಂದಿದೆ. ಅಗತ್ಯ ವಸ್ತುಗಳು ಕಳೆದುಹೋದಾಗ ಕೊರಗಜ್ಜನಿಗೆ ಹರಕೆ ಹೇಳಿಕೊಳ್ಳುವುದು ಜನರ ನಂಬಿಕೆ.[] ಕೊರಗಜ್ಜನಿಗೆ ಬೀಡ (ಎಲೆ, ಅಡಿಕೆ, ಸುಣ್ಣ, ತಂಬಾಕು), ಮದ್ಯ, ಬಸಳೆ (ಕುಡು ಬಸಳೆ), ಮೀನು, ಉಪ್ಪಿನಕಾಯಿ ಇತ್ಯಾದಿಗಳನ್ನು ನೈವೇದ್ಯವಾಗಿ ಬಡಿಸಲಾಗುತ್ತದೆ.[] ಕೊರಗಜ್ಜನ ಕೋಲ ಕತ್ತಲಿನಲ್ಲಿ ನಡೆಯುತ್ತದೆ. ಕೋಲ ನಡೆಯುವಾಗ ಎಲ್ಲೂ ಕೃತಕ ಬೆಳಕು ಹರಿಸಲು ಅವಕಾಶವಿರುವುದಿಲ್ಲ. ಕೊರಗಜ್ಜ ವೇಷಧಾರಿಯು ಅಣಿ ಕಟ್ಟುವುದಿಲ್ಲ. ಕೊರಗಜ್ಜನ ವೇಷ ತಲೆಗೆ ಮುಟ್ಟಾಲೆ, ಮುಖದಲ್ಲಿ ಗಡ್ದ, ಸೊಂಟಕ್ಕೆ ಗೆಜ್ಜೆಯ ಪಟ್ಟಿ, ಕೈಯಲ್ಲಿ ಬೆತ್ತದ ಕೋಲನ್ನು ಒಳಗೊಂಡಿರುತ್ತದೆ. ಕುತ್ತಾರ್, ದೇರ್ಲಕಟ್ಟೆಯ ಸುತ್ತಮುತ್ತ ಈ ದೈವದ ಆರಾಧನೆ ಪಡೆಯುತ್ತದೆ.[]

ಪಾಡ್ದನದ ಕಥೆ

[ಬದಲಾಯಿಸಿ]

ಪಣಂಬೂರಿನಲ್ಲಿ ಓಡಿ ಮತ್ತು ಅಚ್ಚುಮೈರೆದಿ ಎಂಬ ದಂಪತಿಗಳಿಗೆ ಒಂದು ಮಗು ಹುಟ್ಟುತ್ತದೆ. ಅದಕ್ಕೆ ತನಿಯ ಎಂದು ಹೆಸರಿಡುತ್ತಾರೆ. ತನಿಯ ಹುಟ್ಟಿ ೩೦ ದಿನದ ನಂತರ ಅವನ ತಂದೆ, ತಾಯಿ ತೀರಿಕೊಳ್ಳುತ್ತಾರೆ. ಅನಾಥ ತನಿಯನು ಒಂದು ಸಲ ಬೈದೆರ್ ಎಂಬ ಜಾತಿಗೆ ಸೇರಿದ ಮೈರಕ್ಕ ಬೈದೆದಿ ಮತ್ತು ಅವಳ ಮಗ ಚೆನ್ನಯ್ಯನನ್ನು ನೋಡುತ್ತಾನೆ. ಅವರ ಬಳಿ "ಅಮ್ಮ ನನಗೆ ಒಂದು ಬಟ್ಟೆ ಕೊಡಿ" ಎಂದು ಕೇಳುತ್ತಾನೆ. ಆಗ ಮೈರಕ್ಕ ಬೈದೆದಿಯು ಕೂದಲಿಗೆ ಕಟ್ಟಿದ್ದ ಬಟ್ಟೆಯನ್ನೆ ತೆಗೆದು ಮಗುವಿಗೆ ಕೊಟ್ಟು, ಅವನನ್ನು ಅವರೊಂದಿಗೆ ಕರೆದುಕೊಂಡು ಹೋಗುತ್ತಾಳೆ. ಮೈರಕ್ಕನ ಕಸುಬು ಕಳ್ಳು ಮಾರುವುದು. ಅವಳು ಒಂದು ದಿನ ತನಿಯನಿಗೆ ಕಳ್ಳನ್ನು ತುಂಬಿಸಲು ಹೇಳುತ್ತಾಳೆ. ತನಿಯ ತುಂಬಿಸುತ್ತಾನೆ. ಆದರೆ ತನಿಯ ತುಂಬಿದ ಕಳ್ಳು ಏಳು ರಾತ್ರಿ, ಏಳು ಹಗಲು ಕಳೆದರೂ ಖಾಲಿ ಆಗುವುದಿಲ್ಲ. ಇದರಿಂದ ಬೇಸರಗೊಂಡ ಮೈರಕ್ಕ ಕಳ್ಳು ಮಾರಾಟವಾದರೆ ಕದ್ರಿಯ ಮಂಜುನಾಥ ದೇವರಿಗೆ ಕಂಚಿನ ಮಡಕೆಯನ್ನು ಕೊಡುವುದಾಗಿ ಹರಕೆ ಹೊರುತ್ತಾಳೆ. ಆಗ ಕಳ್ಳು ಎಲ್ಲಾ ಖಾಲಿಯಾಗುತ್ತದೆ. ಕಳ್ಳು ಖಾಲಿಯಾದ ಖುಷಿಯಲ್ಲಿ ಮೈರಕ್ಕ ತನಿಯನಿಗೆ ತಲೆಯ ಮೇಲೆ ಹಾಕಿಕೊಳ್ಳುವ ಪಾಲೆಯ ಕೊರಂಬನ್ನು ಮಾಡಿ ಕೊಡುತ್ತಾಳೆ.

ಜೋಡು ಕೊರಗಜ್ಜ
ಜೋಡು ಕೊರಗಜ್ಜ

ತನಿಯ ಯೌವನಾಸ್ಥೆಗೆ ಬಂದ ನಂತರ ಮೈರಕ್ಕ ಕದ್ರಿ ಮಂಜುನಾಥನಿಗೆ ಕಂಚಿನ ಮಡಕೆ ಮಾಡಿಸುತ್ತಾಳೆ, ಅದನ್ನು ಹೊರಲು ಏಳು ಜನ ಬೇಕಾಗಿತ್ತು. ತನಿಯನು ಏಳು ಜನರ ಊಟ, ಎಲೆ ಅಡಿಕೆ, ಕಳ್ಳನ್ನು ಒಬ್ಬನೇ ಕುಡಿದು, ಏಳು ಜನ ಹೊರುವ ಮಡಕೆಯನ್ನು ಒಬ್ಬನೇ ಹೊರುತ್ತಾನೆ. ಕದ್ರಿ ದೇವಸ್ಥಾನಕ್ಕೆ ಅದನ್ನು ತೆಗೆದುಕೊಂಡು ಹೋಗಿ ಒಳಗೆ ಎಸೆಯುತ್ತಾನೆ. ಇದನ್ನು ಕಂಡು ಎಲ್ಲರಿಗೂ ತನಿಯ ಒಂದು ಅಸಾಮಾನ್ಯ ಶಕ್ತಿ ಎಂಬುದು ತಿಳಿಯುತ್ತದೆ. ದೇವಸ್ಥಾನದ ಹೊರಗೆ ಮಾಪಳ ಬಾಳೆಹಣ್ಣು ಇರುತ್ತದೆ, ಅದನ್ನು ತನ್ನ ಮಡದಿಗೆ ನೀಡಲೆಂದು ಕೊಯ್ಯುವಾಗ ಮಾಯವಾಗಿ, ಮಾಯಕದ ಕಲ್ಲಾಗಿ, ಅಲ್ಲೇ ನೆಲೆಯಾಗಿ ತುಳುನಾಡಿನ ಶಕ್ತಿಯಾಗಿ ಮೆರೆಯುತ್ತಾ ಇದ್ದಾನೆ ಎಂದು ಕೆಲವು ಪಾಡ್ದನ ಹೇಳುತ್ತದೆ. ಇನ್ನೊಂದು ಪಾಡ್ದನದ ಪ್ರಕಾರ ಮಾಪಳ ಬಾಳೆಹಣ್ಣನ್ನು ಕೊಯ್ಯುವಾಗ ಅದನ್ನು ಕಂಡ ಬ್ರಾಹ್ಮಣರು ಅವನನ್ನು ಕೊಲ್ಲುತ್ತಾರೆ, ನಂತರ ಅವರಿಗೆ ದೋಷ ಕಂಡು ಬಂದು ಕೊರಗಜ್ಜ ಎಂಬ ಹೆಸರನ್ನು ನಂಬುತ್ತಾರೆ. ಮೊದಮೊದಲು ಕೊರಗರಿಂದ ಆರಾಧಿಸಲ್ಪಡುತ್ತಿದ್ದ ಕೊರಗಜ್ಜ ನಂತರ ಜಾತಿ ಭೇದವಿಲ್ಲದೆ ಎಲ್ಲರಿಂದಲೂ ಆರಾಧಿಸಲ್ಪಡುತ್ತಾನೆ.[]

ಕೊರಗತನಿಯನ ಆರಾಧನೆಯ ಸಮಯ

[ಬದಲಾಯಿಸಿ]

ಪ್ರತಿ ವರ್ಷ ಕೊರಗ ಕುಟುಂಬದ ಹಿರಿಯರ ಮನೆಯಲ್ಲಿ ಕೊರಗತನಿಯನ ಪೂಜೆ ಕೋಲದ ರೂಪದಲ್ಲಿ ನಡೆಯುತ್ತದೆ.[] ಬೆಳದಿಂಗಳಲ್ಲಿ ನಡೆಯುವ ಈ ಕೋಲಕ್ಕೆ ದೀಪದ ಬೆಳಕಿನ ಅವಶ್ಯಕತೆ ಇರುವುದಿಲ್ಲ. ಹೆಂಗಸರು ಹೆಚ್ಚಾಗಿ ಈ ಕೋಲದಲ್ಲಿ ಭಾಗವಹಿಸುವುದಿಲ್ಲ.

ನರ್ತನ ಸೇವೆ

[ಬದಲಾಯಿಸಿ]

ಮಂಗಳೂರು, ಕಂಕನಾಡಿ, ಮರವೂರು, ಬಜ್ಪೆ, ಬೈಕಂಪಾಡಿ, ಹಳೆಯಂಗಡಿ, ಸುಳ್ಯ, ಪುತ್ತೂರು, ಬೊಳ್ತರ್ (ಬೆಳ್ತಂಗಡಿ) ತಾಲೂಕುಗಳು ಮತ್ತು ಉಡುಪಿ ಜಿಲ್ಲೆಯಲ್ಲಿ ನಲಿಕೆ/ಪಾಣರ ಸಮಾಜದ ದಾಸರು ದೇವರ ನರ್ತನ ಸೇವೆಯನ್ನು ಮಾಡುತ್ತಾರೆ.

  • ಒಬ್ಬರಿಂದ ನೃತ್ಯ
  • ಒಬ್ಬರು ಹಾಡು ಹೇಳಿ ತಂಬೂರಿ ಬಡಿಯುತ್ತಾರೆ.
  • ಒಬ್ಬರು ಪಾಡ್ದನ ಹಾಡುತ್ತಾರೆ

ಉಲ್ಲೇಖಗಳು

[ಬದಲಾಯಿಸಿ]
  1. https://www.seameo.org/languagemdgconference2010/doc/presentations/day1/V.Jayarajan-ppt.pdf
  2. https://daijiworld.com/news/newsDisplay?newsID=1199470
  3. https://www.news18.com/india/udupi-devotee-offers-1002-liquor-bottles-to-koragajja-temple-8700814.html
  4. https://vijaykarnataka.com/religion/hinduism/know-the-miracles-story-and-life-history-of-tulunadu-daiva-swami-koragajja/articleshow/95499924.cms
  5. https://vijaykarnataka.com/news/mysuru/mysuru-district-administration-demolish-famous-koragajja-swamy-temple-of-kergalli/articleshow/112839563.cms
  6. https://vijaykarnataka.com/news/udupi/koraga-taniya-is-not-the-goddess-or-god-but-he-is-the-leader-of-the-koraga-community-says-shridhar-nada/articleshow/88896268.cms