ಖ್ವಾಜಾ ಇ ಜಹಾನ್
ಖ್ವಾಜಾ ಇ ಜಹಾನ್ ಎಂಬುದು ಮಧ್ಯಯುಗೀನ ಭಾರತದಲ್ಲಿ ಆಳಿದ ಮುಸ್ಲಿಂ ಅರಸರು ತಮ್ಮ ಪ್ರಧಾನಿಗಳಿಗೆ (ವಜೀ಼ರ್) ಸಾಮಾನ್ಯವಾಗಿ ಕೊಡುತ್ತಿದ್ದ ಒಂದು ಬಿರುದು. ಆದರೆ ಈ ಬಿರುದಿನಿಂದಲೇ ಪ್ರಸಿದ್ಧರಾದ ಹಲವು ವ್ಯಕ್ತಿಗಳು ಇತಿಹಾಸದಲ್ಲಿ ಕಾಣಸಿಗುತ್ತಾರೆ. ಅವರಲ್ಲಿ ಪ್ರಮುಖರನ್ನು ಕುರಿತ ವಿವರಗಳನ್ನು ಕೊಡಲಾಗಿದೆ.
ಅಹ್ಮದ್ ಅಯಾಜ಼್
[ಬದಲಾಯಿಸಿ]ತೊಗಲಕ್ ಮುಹಮ್ಮದ್ ದೆಹಲಿಯ ಸುಲ್ತಾನನಾಗಿ ಅಧಿಕಾರಕ್ಕೆ ಬಂದಾಗ ಮಲ್ಲಿಕ್ (ಅಹ್ಮದ್) ಅಯಾಜ಼್‍ನನ್ನು ಖ್ವಾಜಾ-ಇ-ಜಹಾನ್ ಎಂದು ನೇಮಿಸಿದ. ಈತನನ್ನು ಕುರಿತಾದ ಕೆಲವು ವಿವರಗಳು ಇಬ್ನ್ ಬತೂತನ ಬರಹಗಳಿಂದ ತಿಳಿದಿವೆ. ಸುಮಾರು 1328ರಲ್ಲಿ ಸಿಂಧ್ ಪ್ರಾಂತ್ಯದ ಕಮಲಪುರದಲ್ಲಿ ಅಲ್ಲಿಯ ಕಾಜಿ಼ ಮತ್ತು ಖತೀಬರ ನೇತೃತ್ವದಲ್ಲಿ ದಂಗೆಯುಂಟಾದಾಗ ಅದನ್ನು ಅಡಗಿಸಲು ಖ್ವಾಜಾ ಜಹಾನನನ್ನು ಸುಲ್ತಾನ ಅಲ್ಲಿಗೆ ಕಳುಹಿಸಿದ. ಆ ಸಮಯದಲ್ಲಿ ಆ ಆಧಿಕಾರಿ ದಂಗೆಕೋರರನ್ನು ಸೆರೆಹಿಡಿದು ಅವರ ಚರ್ಮ ಸುಲಿದು ಕೊಲ್ಲಬೇಕೆಂದು ಆಜ್ಞಾಪಿಸಿದ. ಚರ್ಮ ಸುಲಿಯುವ ಚಿತ್ರಹಿಂಸೆಗೊಳಪಡಿಸದೆ ಬೇರಾವ ವಿಧಾನದಲ್ಲಿಯಾದರೂ ಅವರನ್ನು ಕೊಲ್ಲಬೇಕೆಂದು ಆ ದಂಗೆಕೋರ ನಾಯಕರು ಖ್ವಾಜಾ ಜಹಾನನನ್ನು ಪ್ರಾರ್ಥಿಸಿದಾಗ, ಆತ ಅದಕ್ಕೆ ಒಪ್ಪದೆ ತಾನು ಸುಲ್ತಾನನ ಅಪ್ಪಣೆಯಂತೆಯೇ ನಡೆಯುವುದಾಗಿ ತಿಳಿಸಿದ.
1351ರಲ್ಲಿ ಮುಹಮ್ಮದ್ ಸಿಂಧೂ ನದಿ ತೀರದ ತಟ್ಟಾ ಎಂಬ ಸೇನಾಠಾಣ್ಯದಲ್ಲಿ ಮರಣ ಹೊಂದಿದ. ನಾಲ್ಕು ದಿನಗಳ ಅನಂತರ, ಮಾರ್ಚ್ 24ರಂದು, ಫಿರೋಜ಼್‍ನನ್ನು ಮುಹಮ್ಮದನ ಉತ್ತರಾಧಿಕಾರಿಯಾಗಿ ಆರಿಸಲಾಯಿತು. ಸುಲ್ತಾನನ ಸೈನ್ಯದ ನಾಯಕತ್ವವನ್ನು ಮತ್ತು ರಾಜ್ಯದ ಸೂತ್ರಗಳನ್ನು ವಹಿಸುವ ನೂತನ ಹೊಣೆಯೊಂದಿಗೆ ಫಿರೋಜ಼್ ದೆಹಲಿಗೆ ಹಿಂದಿರುಗಿದ. ಆದರೆ ದೆಹಲಿಯಲ್ಲಿದ್ದ, ಈ ಬೆಳವಣಿಗೆಯನ್ನರಿಯದ ವಜೀ಼ರ ಅಯಾಜ಼್ ಮುಹಮ್ಮದನ ಮಗನೆಂದು ಹೇಳಲಾದ 6 ವರ್ಷ ವಯಸ್ಸಿನ ಹುಡುಗನೊಬ್ಬನನ್ನು ದೆಹಲಿಯ ಸಿಂಹಾಸನದ ಮೇಲೆ ಕುಳ್ಳಿರಿಸಿ ಅವನಿಗೆ ಘಿಯಾಸುದೀನ್ ಮಹಮ್ಮದ್ ಎಂದು ನಾಮಕರಣ ಮಾಡಿ ಅವನು ಮುಹಮ್ಮದನ ಉತ್ತರಾಧಿಕಾರಿಯೆಂದು ಘೋಷಿಸಿದ.[೧] ಫಿರೋಜ಼್‍ನ ವಿರುದ್ಧವಾಗಿ ಈತ ದಂಗೆ ಎದ್ದನೆಂಬ ಭಾವನೆಗೆ ಇದು ಕಾರಣವಾಯಿತು. ವಾಸ್ತವಾಗಿ ಅಯಾಜ಼್ ಸುದ್ದಿ ಸಂಗ್ರಹಿಸಲು ಕಳುಹಿಸಿದ್ದ. ಆಪ್ತ ಗುಲಾಮ ಮಾಲಿ ತುತುನ್ ವಿವರಗಳನ್ನು ಸರಿಯಾಗಿ ತಿಳಿಯದೆ, ಮುಹಮ್ಮದ್ ಮರಣಿಸಿದನೆಂದೂ, ಮಂಗೋಲರು ತಟ್ಟಾವನ್ನು ಆಕ್ರಮಿಸಿರುವರೆಂದೂ ಫಿರೋಜ಼್‍ನ ಬಗ್ಗೆ ತನಗೆ ಏನೂ ತಿಳಿಯದೆಂದೂ ವರದಿ ಮಾಡಿದ್ದ. ಅಯಾಜ಼್ ಕೈಗೊಂಡ ಮುಂದಿನ ಕ್ರಮಗಳಿಗೆ ಈ ವರದಿಯೇ ಆಧಾರವಾಗಿತ್ತು. ಒಮ್ಮೆ ತಪ್ಪು ಹೆಜ್ಚೆಯನ್ನಿಟ್ಟ ಇವನು ಅದನ್ನು ತಿದ್ದಿಕೊಳ್ಳಲಿಲ್ಲ. ಫಿರೋಜ಼್ ಸುಲ್ತಾನನಾಗಿ ಆಯ್ಕೆಯಾದನೆಂಬುದು ತಿಳಿದಾಗ ಅವನಿಗೆ ವಿಧೇಯತೆಯನ್ನು ಸೂಚಿಸದೆ ಇವನು ತನ್ನ ವಿರುದ್ಧ ಏರಿರಬಹುದೆಂದು ಊಹಿಸಿ ಯುದ್ಧ ಸಿದ್ಧತೆಗಳನ್ನು ಮಾಡಿದ. ಇವನ ಈ ನಡವಳಿಕೆಗಳಿಗೆ ದೆಹಲಿಯ ಹಲವು ಮುಖಂಡರು ಬೆಂಬಲ ನೀಡಿದ್ದರು. ಆದರೆ ಫಿರೋಜ಼್ ದೆಹಲಿಯನ್ನು ಸಮೀಪಿಸಿದಾಗ ಇವನ ಬೆಂಬಲಿಗರು ಫಿರೋಜ಼್‍ನ ಪಕ್ಷ ವಹಿಸಿದರು. ಕೊನೆಗೆ ಅಯಾಜ಼್ ಫಿರೋಜ಼್‍ನಿಗೆ ಶರಣಾದ. ಈ ವೇಳೆಗೆ ಅಯಾಜ಼್‍ನಿಗೆ ಸುಮಾರು 84 ವರ್ಷ ವಯಸ್ಸಾಗಿತ್ತು. ಫಿರೋಜ಼ನಿಗೆ ಈತನನ್ನು ಕ್ಷಮಿಸಬೇಕೆಂಬ ಆಸೆ ಬಹಳವಾಗಿತ್ತು. ಆದರೆ ಫಿರೋಜ಼್‍ನ ಅನುಯಾಯಿಗಳು ಇದಕ್ಕೆ ಸಮ್ಮತಿಸಲಿಲ್ಲ. ಅಯಾಜ಼್‍ನನ್ನು 'ಸಮಾನ್' ಪ್ರಾಂತ್ಯಾಧಿಕಾರಿಯಾಗಿ ನೇಮಿಸಲಾಗಿದೆಯೆಂದು ಸುಳ್ಳು ಹೇಳಿ, ಅವನು ಅಲ್ಲಿಗೆ ಹೊರಟಾಗ ಅವನ ಹಿಂದೆ ಷೇರ್ ಖಾನ್ ಎಂಬವನನ್ನು ಕಳಿಸಿದರು. ವಸ್ತುಸ್ಥಿತಿಯನ್ನು ಅರಿತ ಅಯಾಜ಼್ ದೇವರಿಗೆ ಪ್ರಾರ್ಥನೆ ಸಲ್ಲಿಸಿ ಶಿರಸ್ಸನ್ನು ನೆಲಕ್ಕೆ ಬಾಗಿಸಿದಾಗ ಅವನ ಕೋರಿಕೆಯ ಪ್ರಕಾರ ಅವನ ಮಿತ್ರನೊಬ್ಬ ಅವನ ಶಿರಚ್ಛೇದ ಮಾಡಿದನೆಂದು ಹೇಳಲಾಗಿದೆ.[೨]
ನೂರುದ್ದೀನ್
[ಬದಲಾಯಿಸಿ]ಮಹಮ್ಮದ್ ತೊಗಲಕನ ಕಾಲದಲ್ಲಿ ತಾತ್ಕಾಲಿಕವಾಗಿ ದಖನಿನ ಸುಲ್ತಾನನಾಗಿದ್ದ ಇಸ್ಮಾಯಿಲ್ ಮುಖ್‌ನಿಂದ ಖ್ವಾಜಾ ಇ ಜಹಾನ್ ಬಿರುದು ಪಡೆದಿದ್ದಾತ. ಮಹಮ್ಮದ್ ತೊಗಲಕ್ ತನ್ನ ರಾಜ್ಯದ ದಖನ್ ವಿಭಾಗಕ್ಕೆ ಅಧಿಕಾರಿಯಾಗಿ ನೇಮಿಸಿದ್ದ ಖ್ಮತ್ಲುಗ್ ಖಾನನ ವಿರುದ್ಧವಾಗಿ ಅಲ್ಲಿಯ ರಾಜಕೀಯ ಪಕ್ಷ ಸುಲ್ತಾನನಲ್ಲಿ ದೂರಿಕೊಂಡಾಗ (1345) ಸುಲ್ತಾನ ಖ್ಮತ್ಲುಗನನ್ನು ಹಿಂದಕ್ಕೆ ಕರೆಸಿಕೊಂಡು ಅವನ ಸ್ಥಳದಲ್ಲಿ ಅವನ ತಮ್ಮನಾದ ಅಲೀಮುಲ್ ಮುಲ್ಕನನ್ನು ತಾತ್ಕಾಲಿಕವಾಗಿ ನೇಮಿಸಿದ್ದ. ಖ್ಮತ್ಲುಗ್ ದೆಹಲಿಗೆ ಹಿಂದಿರುಗಿದ ಮೇಲೆ ಇಮದುಲ್ ಮುಲ್ಕ್ ಸರ್ತೇಜ ದಖನಿನ ವೈಸ್‌ರಾಯ್ ಆಗಿ ನೇಮಕಗೊಂಡ. ಆದರೆ ಇವನೂ ಇವನೊಡನೆ ನೇಮಕಗೊಂಡ. ಇತರ ಅಧಿಕಾರಿಗಳೂ ಸದರ್ ಅಮೀರರಿಗೆ ಒಪ್ಪಿಗೆಯಾಗಲಿಲ್ಲ. ಅವರು ದಂಗೆಯೆದ್ದರು. ಇದನ್ನು ಅಡಗಿಸಲು ಸುಲ್ತಾನನೇ ಗುಜರಾತಿಗೆ ಬಂದ. ದೌಲತಾಬಾದಿನಲ್ಲಿ ದಂಗೆಯೆದ್ದಿದ್ದ ಸದರ್ ಅಮೀರರನ್ನು ವಿಚಾರಣೆಗೆ ಗುರಿಪಡಿಸಲು ಬ್ರೋಚ್‌ಗೆ ಕಳುಹಿಸಬೇಕೆಂದು ಅಜ್ಞಾಪಿಸಿದ. ಮಲಿಕ್ ಅಹ್ಮದ್ ಲಾಚಿನ್ ಮತ್ತು ಖಲ್ತಷ್ ಎಂಬ ಇಬ್ಬರು ಅಧಿಕಾರಿಗಳು ಇವರನ್ನು ಕರೆದೊಯ್ಯುತ್ತಿದ್ದಾಗ ಮಾರ್ಗದಲ್ಲಿ ಇವರು ಆ ಅಧಿಕಾರಿಗಳನ್ನು ಕೊಂದು ದೌಲತಾಬಾದಿಗೆ ಹಿಂದಿರುಗಿ, ಅಲ್ಲಿ ಪ್ರಾಂತ್ಯಾಧಿಕಾರಿಯಾಗಿದ್ದ ಅಲಿಮುಲ್ ಮುಲ್ಕನನ್ನು ಬದಿಗಿರಿಸಿ, ತಮ್ಮಲ್ಲಿ ಒಬ್ಬನಾದ ಇಸ್ಮಾಯಿಲ್ ಮುಖ್‌ನನ್ನು ತಾತ್ಕಾಲಿಕವಾಗಿ ದಖನಿನ ಸುಲ್ತಾನನೆಂದು ಆರಿಸಿದರು. ಈತ ನೂರುದ್ದೀನನನ್ನು ಖ್ವಾಜಾ ಇ ಜಹಾನನೆಂದು ನೇಮಿಸಿಕೊಂಡ. ಸುಲ್ತಾನನ ಉಳಿದ ಸೈನ್ಯವನ್ನು ಓಡಿಸಲು ಖ್ವಾಜಾ ಜಹಾನ್ ಗುಲ್ಬರ್ಗಕ್ಕೂ, ಜಫರ್ ಖಾನ್ ಎಂಬ ಬಿರುದು ಪಡೆದಿದ್ದ ಹಸನ್ ಗಂಗು ಎಂಬವನು ಸಾಗರಕ್ಕೂ ಹೋಗಿ ಅಲ್ಲಿಯ ವಿರೋಧವನ್ನು ಅಡಗಿಸಿ ಹಿಂದಿರುಗಿದರು. ಆದರೆ ಈ ವೇಳೆಗೆ ಮಹಮ್ಮದ್ ಸ್ವತಃ ದೌಲತಾಬಾದಿಗೆ ಬಂದಿದ್ದ. ಮುಹಮ್ಮದ್‍ನ ವಿರುದ್ಧವಾಗಿ ನೂರುದ್ದೀನ್ ಮತ್ತು ಜಫರ್ ಖಾನರು ಒಟ್ಟಿಗೆ ಕಾದಾಡಿದರು. ಯುದ್ಧದಲ್ಲಿ ನೂರುದ್ದೀನ್ ಖ್ವಾಜಾ ಜಹಾನನಿಗೆ ಬಾಣವೊಂದು ತಗುಲಿ ಆತ ಸತ್ತ. ಇದರ ಪರಿಣಾಮವಾಗಿ ಇಸ್ಮಾಯಿಲನ ಸೈನ್ಯ ಸೋಲನ್ನನುಭವಿಸಿತು.[೩][೪]
ಮಲಿಕ್ ಸರ್ವಾರ್
[ಬದಲಾಯಿಸಿ]- ಮುಖ್ಯ ಲೇಖನ - ಮಲಿಕ್ ಸರ್ವಾರ್
ಖ್ವಾಜಾ ಇ ಜಹಾನ್ ತುರ್ಕ್
[ಬದಲಾಯಿಸಿ]ಇವನು ಬಹಮನಿ ರಾಜ್ಯದ ಸುಲ್ತಾನನಾಗಿದ್ದ ಹುಮಾಯೂನ್ ಷಹನ (1458-61) ಪ್ರಧಾನಿಯಾಗಿದ್ದ ಮಹಮ್ಮದ್ ಗವಾನನ ಸಹೋದ್ಯೋಗಿ. ಸುಲ್ತಾನನ ಪ್ರತಿಸ್ಪರ್ಧಿಯಾಗಿದ್ದ ಸಿಕಂದರನನ್ನು ಕದನದಲ್ಲಿ ಸೋಲಿಸುವುದರಲ್ಲಿ ಇವರಿಬ್ಬರೂ ಸುಲ್ತಾನನಿಗೆ ನೆರವಾದರು. ಸಿಕಂದರ್ ಪ್ರಾಣ ಕಳೆದುಕೊಂಡ.[೫]: 259–260 ಸಿಕಂದರನಿಗೆ ವೆಲಮವಂಶದ ಲಿಂಗ ಸಹಾಯ ಮಾಡಿದನೆಂಬ ಕಾರಣದಿಂದ ಇವರು ಆತನ ಮೇಲೆ ದಂಡೆತ್ತಿ ಹೋಗಿ ದೇವರಕೊಂಡ ಕೋಟೆಯನ್ನು ಮುತ್ತಿದರು. ಲಿಂಗನ ಸಹಾಯಕ್ಕೆ ಗಜಪತಿ ವಂಶದ ಹಮ್ಮೀರ ಧಾವಿಸಿ ಸುಲ್ತಾನನ ಸೈನ್ಯವನ್ನು ಸೋಲಿಸಿದ.
ಹುಮಾಯೂನ್ 1461ರಲ್ಲಿ ಮಡಿದ. ಆತನ ಅನಂತರ ಆತನ ಎಂಟು ವರ್ಷದ ಮಗನಾದ ಅಹ್ಮದ್ ಖಾನ್ (3ನೆಯ ನಿಜಾಮುದ್ದೀನ್ ಅಹ್ಮದ್) ಪಟ್ಟಕ್ಕೆ ಬಂದ.[೬] ಈತ ಪ್ರಾಪ್ತವಯಸ್ಕನಾಗುವವರೆಗೂ ರಾಜ್ಯದ ಆಡಳಿತವನ್ನು ನಡೆಸಲು ವಿಧವೆಯಾದ ರಾಣಿ ಮಕ್ದುಮಾ-ಇ-ಜಹಾನ್ ನರ್ಗಿಸ್ ಬೇಗಂ ಒಂದು ಅಧಿಕಾರ ಮಂಡಳಿಯನ್ನು ನೇಮಿಸಿದಳು. ಆಕೆಯೂ, ಖ್ವಾಜಾ ಜಹಾನ್ ತುರ್ಕ್, ಮಹಮ್ಮದ್ ಗವಾನ್ ಇವರೂ ಆ ಮಂಡಳಿಯಲ್ಲಿದ್ದರು.[೭] ಆ ವೇಳೆಗೆ ಬಹಮನಿಯಲ್ಲಿ ಹೊಸದಾಗಿ ಹೊರಗಿನಿಂದ ಬಂದ ಮಹಮ್ಮದೀಯರ ಒಂದು ಪಂಗಡವಾದ ಅಫಕಿಗೂ, ಅಲ್ಲಿಯೇ ಇದ್ದ, ಹೆಚ್ಚಾಗಿ ಮತಾಂತರಗೊಂಡ, ಮಹಮ್ಮದೀಯರ ಇನ್ನೊಂದು ಪಂಗಡವಾದ ದಖನಿಗೂ ನಡುವೆ ಭಿನ್ನಾಪ್ರಾಯಗಳು ತಲೆದೋರಿದುವು. ಗವಾನ್ ಹೊರಗಿನಿಂದ ಬಂದವನೆಂದು ಪರಿಗಣಿತನಾಗಿದ್ದ ಕಾರಣ, ಆತ ರಾಜ್ಯದ ನೀತಿಯನ್ನು ಬಹಳ ಜಾಗರೂಕತೆಯಿಂದ ರೂಪಿಸಬೇಕಾಗುತ್ತಿತ್ತು. ಈ ನಾಯಕತ್ರಯರ ಆಡಳಿತ ದಕ್ಷ ರೀತಿಯಲ್ಲಿ ನಡೆಯುತ್ತಿತ್ತು. ಆಡಳಿತದ ಮೊದಲ ಹೆಜ್ಜೆಯಾಗಿ ಎಲ್ಲ ರಾಜಕೀಯ ಕೈದಿಗಳಿಗೂ ಕ್ಷಮಾದಾನವಿತ್ತು ಅದುವರೆಗೆ ಸರ್ಕಾರಿ ಸೇವೆಯಲ್ಲಿಲ್ಲದಿದ್ದ ಪಂಡಿತರಿಗೂ ದಕ್ಷರಿಗೂ ಸೇವಾಸೌಕರ್ಯಗಳನ್ನು ಏರ್ಪಡಿಸಿದರು. ಇಷ್ಟಾದರೂ ಎರಡೂ ಪಂಗಡಗಳ ನಡುವೆ ದ್ವೇಷಭಾವನೆಗಳು ಹೊಗೆಯಾಡುತ್ತಲೇ ಇದ್ದವು.
ಹುಡುಗನೊಬ್ಬ ಸಿಂಹಾಸನಾರೂಢನಾದುದನ್ನು ತಿಳಿದ ನೆರೆಯ ಅರಸರು ಬಹಮನಿ ರಾಜ್ಯದ ಮೇಲೆ ದಂಡೆತ್ತಿ ಬಂದರು. ಹಾಗೆ ಬಂದವರಲ್ಲಿ ಮೊದಲಿಗ ಒರಿಸ್ಸದ ಗಜಪತಿ ವಂಶದ ಕಪಿಲೇಶ್ವರ. ಆದರೆ ಈತ ರಾಜಧಾನಿಯವರೆಗೂ ನಿರಾಯಾಸವಾಗಿ ಬಂದರೂ, ಅಲ್ಲಿ ಸೋಲನ್ನನುಭವಿಸಿ ಓಡಿಹೋದ.[೮] ಖಾಂದೇಶದ ಸುಲ್ತಾನ ಹಾಗೂ ಕಪಿಲೇಶ್ವರರೊಡಗೂಡಿ ಮಾಲವದ ಮಹಮೂದ್ ಖಲ್ಜಿ ಈ ರಾಜ್ಯದ ಮೇಲೆ ದಂಡೆತ್ತಿ ಬಂದಾಗ ಖ್ವಾಜಾ ಇ ಜಹಾನ್ ಇತರರೊಡಗೂಡಿ ರೋಷಾವೇಶದಿಂದ ಹೋರಾಡಿದ. ಹುಡುಗನಾಗಿದ್ದ ಸುಲ್ತಾನನೂ ಇದರಲ್ಲಿ ಸ್ವತಃ ಪಾಲ್ಗೊಂಡಿದ್ದ. ಆದರೆ ಸೈನ್ಯದಲ್ಲಿದ್ದ ಒಂದು ಆನೆ ಒಮ್ಮೆ ರೊಚ್ಚಿಗೆದ್ದಾಗ ಸುಲ್ತಾನ ಕುಳಿತಿದ್ದ ಕುದುರೆ ಸಹ ದಿಕ್ಕೆಟ್ಟು ಓಡಿತು. ಆಗ ಸಿಕಂದರ್ ಖಾನ್ ಸುಲ್ತಾನನನ್ನು ಕಷ್ಟದಿಂದ ರಕ್ಷಿಸಿದ. ಖ್ವಾಜಾ ಇ ಜಹಾನ್, ಗವಾನ್ ಮತ್ತು ಇತರರು ದಿಗ್ಭ್ರಾಂತರಾಗಿ ಬಿದರೆಗೆ ಹಿಂದಿರುಗಿ ಸುಲ್ತಾನನ ಪ್ರಾಣವನ್ನು ಉಳಿಸಲು ಅಲ್ಲಿಂದ ಗುಲ್ಬರ್ಗದ ಸಮೀಪವಿರುವ ಫಿರೋಜಾಬಾದಿಗೆ ಓಡಿದರು. ಅಲ್ಲಿಂದ ಗುಜರಾತಿನ ಸುಲ್ತಾನನ ಸಹಾಯ ಪಡೆದು ಖಲ್ಜಿಯನ್ನು ಕೊನೆಗೂ ಹಿಮ್ಮೆಟ್ಟಿಸಿದರು. ಮಹಮೂದ್ ಖಲ್ಜಿಯನ್ನು ಖ್ವಾಜಾ ಇ ಜಹಾನ್ ಅಟ್ಟಿಸಿಕೊಂಡುಹೋದ (1462).
ಆದರೆ 1463ರಲ್ಲಿ ಸುಲ್ತಾನ್ ಅಹಮ್ಮದ್ ತನ್ನ ಮದುವೆಯ ರಾತ್ರಿ ಅಕಸ್ಮಾತ್ ಮರಣಹೊಂದಿದ. ಅವನ ಅನಂತರ ಆತನ ತಮ್ಮ ಮಹಮ್ಮದ್ ಖಾನ್ 3ನೆಯ ಷಂಸುದ್ದೀನ್ ಮಹಮ್ಮದ್ ಎಂಬ ಬಿರುದಿನಿಂದ ಸಿಂಹಾಸನಾರೂಢನಾದ. ಇದಾದ ಕೆಲವೇ ದಿನಗಳಲ್ಲಿ ಖ್ವಾಜಾ ಇ ಜಹಾನ್ ತುಂಬಿದ ರಾಜಸಭೆಯಲ್ಲಿ ಕೊಲೆಗೆ ಈಡಾದ. ದುರಾದೃಷ್ಟವಶಾತ್ ಆ ವೇಳೆಗೆ ಈತ ತನ್ನ ದುಡುಕಿನ ಪ್ರವೃತ್ತಿಯಿಂದಾಗಿ ರಾಣಿಯ ವಿಶ್ವಾಸ ಕಳೆದುಕೊಂಡಿದ್ದ. ಹಿಂದಿನ ಸುಲ್ತಾನನನ್ನು ರಣರಂಗದಲ್ಲಿ ಕಾಪಾಡಿದ ಸಿಕಂದರನನ್ನು ಈತ ಸೆರೆಮನೆಗೆ ಕಳುಹಿಸಿದುದೂ ಒಂದು ಕಾರಣ. ಜೊತೆಗೆ, ಅಧಿಕಾರ ಮದದಿಂದ ಪ್ರಜಾಪೀಡಕನಾಗಿ ಜನತೆಯ ವಿಶ್ವಾಸವನ್ನೂ ಕಳೆದುಕೊಂಡಿದ್ದ.[೯] ಈ ಎಲ್ಲ ಕಾರಣಗಳಿಂದ ಇವನ ಸಾವು ಯಾರಿಗೂ ಖೇದವನ್ನುಂಟುಮಾಡಲಿಲ್ಲ.
ಖ್ವಾಜಾ ಇ ಜಹಾನ್ ತುರ್ಕನ ಮರಣದೊಂದಿಗೆ ನಾಯಕತ್ರಯರ ಆಡಳಿತ ಕೊನೆಗೊಂಡಿತು. ರಾಣಿ ರಾಜಕೀಯದಿಂದ ಹಿಂದೆ ಸರಿದಳು. ಮಹಮ್ಮದ್ ಗವಾನ್ ಪ್ರಧಾನಿಯಾಗಿ ನೇಮಕಗೊಂಡು ಸುಲ್ತಾನನಿಂದ ಖ್ವಾಜ ಇ ಜಹಾನನೆಂಬ ಬಿರುದನ್ನು ಪಡೆದ. ಆದರೆ ಇತಿಹಾಸದಲ್ಲಿ ಈತ ಹೆಚ್ಚಾಗಿ ಗವಾನನೆಂದೇ ಪ್ರಸಿದ್ಧನಾಗಿದ್ದಾನೆ.
ಖ್ವಾಜಾ ಸುರೂರ್
[ಬದಲಾಯಿಸಿ]ದಕ್ಷಿಣ ಭಾರತದ ಮಧುರೆಯಲ್ಲಿ 1344-45ರಿಂದ ಆಳತೊಡಗಿದ ಸುಲ್ತಾನ್ ನಸೀರುದ್ದೀನನ ವಜ಼ೀರನಾಗಿದ್ದ ಬದ್ರುದ್ದೀನ್ ಮರಣ ಹೊಂದಿದಾಗ ಆತನ ಸ್ಥಾನಕ್ಕೆ ನೇಮಕಗೊಂಡಿದ್ದ ಖ್ವಾಜಾ ಸುರೂರನಿಗೆ (ನೌಕಾದಳದ ಅಧಿಪತಿ) ಖ್ವಾಜಾ ಇ ಜಹಾನ್ ಎಂಬ ಬಿರುದು ಕೊಡಲಾಗಿತ್ತು. ಯಾರೇ ಆಗಲಿ ತನ್ನನ್ನು ಬೇರಾವ ರೀತಿ ಸಂಬೋಧಿಸಿದರೂ ಅವರು ನಿಗದಿಯಾದ ದಿನಾರಗಳನ್ನು ದಂಡವಾಗಿ ಕೊಡಬೇಕೆಂದು ಆತ ವಿಧಿಸಿದ್ದ. ದೆಹಲಿಯ ಸುಲ್ತಾನನ ಪದ್ಧತಿಯನ್ನು ಅನುಸರಿಸಿದ್ದು ಇವನ ಇಂಥ ಪ್ರತಿಷ್ಠೆಗೆ ಕಾರಣವಾಗಿತ್ತು.
ಉಲ್ಲೇಖಗಳು
[ಬದಲಾಯಿಸಿ]- ↑ Banerjee, Anil Chandra (1983). A New History Of Medieval India (in ಇಂಗ್ಲಿಷ್). Delhi: S Chand & Company. pp. 61–62.
- ↑ https://www.notesonindianhistory.com/2018/12/did-muhammad-tughlaq-have-son.html
- ↑ Haig 1907, p. 29-30.
- ↑ https://www.facebook.com/story.php/?story_fbid=2421909794783021&id=2020728214901183
- ↑ Sherwani, Haroon Khan (1946). The Bahmanis of the Deccan. Hyderabad.
{{cite book}}
: CS1 maint: location missing publisher (link) - ↑ Habib, Mohammad; Nizami, Khaliq Ahmad (1993). A Comprehensive History of India Volume 5, Part 2, The Delhi Sultanat, A.D. 1206-1526. New Delhi: People's Publishing House. p. 993.
- ↑ Sherwani 1946, p. 276.
- ↑ Sherwani 1946, p. 279.
- ↑ Sherwani 1946, pp. 291–292.
ಗ್ರಂಥಸೂಚಿ
[ಬದಲಾಯಿಸಿ]- Haig, Wolseley (1907). Historic landmarks of the Deccan. Pioneer Press.