ವಿಷಯಕ್ಕೆ ಹೋಗು

ಘಿಯಾಸ್-ಉದ್-ದೀನ್ ಬಲ್ಬನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಘಿಯಾಸ್-ಉದ್-ದೀನ್ ಬಲ್ಬನ್ ದೆಹಲಿಯ ಸುಲ್ತಾನರಲ್ಲೊಬ್ಬ. ಇವನ ಆಳ್ವಿಕೆಯ ಕಾಲ 1266-1287.

ಸುಲ್ತಾನನಾಗುವುದಕ್ಕೆ ಮೊದಲು

[ಬದಲಾಯಿಸಿ]

ಇಲ್ತಮಿಷನ ವಂಶದ ನಾಸಿರ್-ಉದ್-ದೀನ್ ತೀರಿಕೊಂಡಾಗ ಪಟ್ಟಕ್ಕೆ ಬಂದ. ಇವನಿಗೆ ಹಿಂದೆ ದೆಹಲಿಯನ್ನಾಳಿದ ಸುಲ್ತಾನರಂತೆ ಇವನು ತುರ್ಕಿಸ್ತಾನದ ಇಲ್ಬರೀ ಪಂಗಡದವನು. ಇವನು ತರುಣನಾಗಿದ್ದಾಗ ಮಂಗೋಲರು ದಂಡಯಾತ್ರೆ ನಡೆಸಿ ಇವನನ್ನು ಹಿಡಿದು ಬಾಗ್ದಾದಿಗೆ ಕೊಂಡೊಯ್ದಿದ್ದರು. ಬಸೋರದ ಖ್ವಾಜಾ ಜಮಾಲ್-ಉದ್-ದೀನ್ ಇವನನ್ನು ಕೊಂಡು, ತನ್ನ ಇತರ ಗುಲಾಮರೊಂದಿಗೆ ದೆಹಲಿಗೆ ಕರೆತಂದ (1232). ಸುಲ್ತಾನ್ ಇಲ್ತಮಿಷ್ ಇವನನ್ನು ಕೊಂಡ;[] ಇವನನ್ನು ತನ್ನ ಖಾಸ್‍ದಾರನಾಗಿ ನೇಮಿಸಿಕೊಂಡ. ಬಹಾಉದ್ದೀನ್ ಬಲ್ಬನ್ ಎಂಬುದು ಇವನ ಮೊದಲ ಹೆಸರು. ಸ್ವಸಾಮರ್ಥ್ಯದಿಂದ ಇವನು ಸುಲ್ತಾನನ ಪ್ರೀತಿಗಳಿಸಿ ಕ್ರಮಕ್ರಮವಾಗಿ ಮೇಲೇರಿದ. ಕೊನೆಗೆ ನಾಸಿರ್-ಉದ್-ದೀನನ ಪ್ರತಿನಿಧಿಯಾದ. 1249ರಲ್ಲಿ ಇವನ ಮಗಳನ್ನು ಸುಲ್ತಾನನಿಗೆ ಕೊಟ್ಟು ಮದುವೆಯಾಯಿತು.[]

ಸುಲ್ತಾನನಾಗಿ ಆಳ್ವಿಕೆ

[ಬದಲಾಯಿಸಿ]

ನಾಸಿರ್-ಉದ್-ದೀನ್ ಗಂಡು ಸಂತಾನವಿಲ್ಲದೆ ತೀರಿಕೊಂಡಾಗ ಇವನು ಆಸ್ಥಾನಿಕರ ಮತ್ತು ಅಧಿಕಾರಿಗಳ ಸಮ್ಮತಿಯೊಡನೆ ಸಿಂಹಾಸನವೇರಿದ. ಆಗ ಈತ ತಳೆದ ಹೆಸರು ಘಿಯಾಸ್-ಉದ್-ದೀನ್. ನಾಸಿರ್-ಉದ್-ದೀನ್ ಇವನನ್ನೇ ತನ್ನ ಉತ್ತರಾಧಿಕಾರಿಯಾಗಿ ನೇಮಿಸಿದ್ದನೆಂದು ತಿಳಿದುಬರುತ್ತದೆ.

ಇಲ್ತಮಿಷನ ಮರಣಾನಂತರ ದೆಹಲಿಯ ಆಡಳಿತ ಹದಗೆಟ್ಟಿತ್ತು. ಖಜಾನೆ ಬರಿದಾಗಿತ್ತು. ದೆಹಲಿಯ ಸುಲ್ತಾನನ ಅಧಿಕಾರ ಮತ್ತು ಗೌರವವನ್ನು ಪುನಃ ಸ್ಥಾಪಿಸುವುದೇ ಬಲ್ಬನ್ ಕೈಗೊಂಡ ಮೊಲನೆಯ ಕ್ರಮ. ದೆಹಲಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮತ್ತು ದೋಆಬ್‌ನಲ್ಲಿ ಶಾಂತಿ ಸ್ಥಾಪನೆ ಜರೂರಾಗಿತ್ತು. ವ್ಯಾಪಾರ ಮಾರ್ಗಗಳಲ್ಲಿ ಭದ್ರತೆ ಏರ್ಪಡಿಸಬೇಕಾಗಿತ್ತು. ಈ ವಿಚಾರಗಳಿಗಲ್ಲದೆ, ಪದೇಪದೇ ಸಂಭವಿಸುತ್ತಿದ್ದ ಮಂಗೋಲರ ದಾಳಿಗಳನ್ನು ಎದುರಿಸಿ ದಂಗೆಕೋರರನ್ನು ಅಡಗಿಸುವುದರ ಕಡೆಗೂ ಬಲ್ಬನ್ ಲಕ್ಷ್ಯ ನೀಡಿದ. ಈತ ರಾಜ್ಯದಲ್ಲಿ ಶಾಂತಿಸ್ಥಾಪನೆ ಮಾಡಲು ಕೈಗೊಂಡ ಕ್ರಮಗಳನ್ನು ಬರನೀ ಎಂಬ ಇತಿಹಾಸಕಾರ ವಿವರಿಸಿದ್ದಾನೆ.

ಬಲ್ಬನ್ ಸಿಂಹಾಸನವನ್ನೇರಿದ ಕೂಡಲೇ ಸೈನ್ಯವನ್ನು ಸುವ್ಯವಸ್ಥಿತಗೊಳಿಸಿದ. ದೆಹಲಿಯ ನೆರೆಯ ಕಾಡುಗಳಲ್ಲಿದ್ದ ಮೆವಾಟಿಗಳನ್ನು ಓಡಿಸಿದ, ಹಲವರನ್ನು ಕೊಂದ. ದೆಹಲಿಯ ಸುತ್ತಮುತ್ತಲಿನ ಅಡವಿಗಳನ್ನು ನಿರ್ನಾಮ ಮಾಡಿದ. ಮುಂದೆ ದಂಗೆಯಾಗದಂತೆ ತಡೆಗಟ್ಟಲು ಗೋಪಾಲ್‌ಗಿರ್‌ನಲ್ಲಿ ಒಂದು ಕೋಟೆಯನ್ನು ಕಟ್ಟಿಸಿದನಲ್ಲದೆ, ದೆಹಲಿಯ ಬಳಿ ಅನೇಕ ಠಾಣೆಗಳನ್ನು ಸ್ಥಾಪಿಸಿ ಅವಕ್ಕೆ ಆಪ್ಘನರನ್ನು ನೇಮಿಸಿದ. ದೋಆಬಿಂದ ದಂಗೆಕೋರರನ್ನು ಅಡಗಿಸಿ, ಪ್ರಯಾಣ ಸುರಕ್ಷಿತವಾಗುವ ಹಾಗೆ ಮಾಡಿದ. ಕಟೆಹರ್‌ನಲ್ಲಿ ದಂಗೆಯನ್ನಡಗಿಸಿದ. ಜೂದ್ ಪರ್ವತಪ್ರದೇಶವಾಸಿಗಳನ್ನೂ ಮಣಿಸಲಾಯಿತು. ದೋಆಬ್‌ನಲ್ಲಿ ಭೂಹಿಡುವಳಿಯನ್ನು ಸುಧಾರಿಸಲು ಯತ್ನಿಸಿದನಾದರೂ ಹಿಂದಿನಿಂದ ಬಂದಿದ್ದ ದುಷ್ಟಪದ್ಧತಿಗಳನ್ನು ಸರಿಪಡಿಸಲಾಗಲಿಲ್ಲ.

ದೇಶದಲ್ಲಿ ಭದ್ರತೆ, ನೆಮ್ಮದಿಗಳು ನೆಲಸುವ ಹಾಗೆ ಮಾಡಿದ ಮೇಲೆ ಬಲ್ಬನನ ಗಮನ ವಾಯುವ್ಯ ಗಡಿ ಪ್ರದೇಶದ ಕಡೆಗೆ ಹರಿಯಿತು. ಮಂಗೋಲರು ಘಜ್ನಿ ಮತ್ತ್ರು ಟ್ರಾನ್ಸಾಕ್ಸಿಯಾನದಲ್ಲಿ ನೆಲೆಯೂರಿ, ಬಾಗ್ದಾದನ್ನು ಹಿಡಿದುಕೊಂಡು. ಪಂಜಾಬ್ ಮತ್ತು ಸಿಂಧ್ ಪ್ರದೇಶಕ್ಕೆ ನುಗ್ಗಿದ್ದರು. ಬಲ್ಬನ್ 1271ರಲ್ಲಿ ಲಾಹೋರಿಗೆ ಸೇನೆಯೊಂದಿಗೆ ಹೋಗಿ ಅಲ್ಲಿಯ ಕೋಟೆಯನ್ನು ಸರಿಪಡಿಸಿದ. ಭಾಟಿಂಡ, ಭಟ್ನೇರ್, ಸಾಮಾನ ಮತ್ತು ಸುನಾಮ್‌ಗಳನ್ನಾಳುತ್ತ ಮಂಗೋಲರನ್ನು ಬಲವಾಗಿ ಎದುರಿಸುತ್ತಿದ್ದ ಷೇರ್ ಖಾನ್ ಅನಿರೀಕ್ಷಿತವಾಗಿ ತೀರಿಕೊಂಡ. ಅವನು ಬಲ್ಬನನ ದಾಯಾದಿ. ಸಂಶಯದಿಂದ ಬಲ್ಬನನೇ ಅವನನ್ನು ಕೊಲ್ಲಿಸಿದನೆಂದು ಬರನೀ ಹೇಳುತ್ತಾನೆ. ಷೇರ್ ಖಾನನ ಮರಣದಿಂದ ಮಂಗೋಲರು ತಮಗಿದ್ದ ಆತಂಕ ತಪ್ಪಿತೆಂದು ಭಾವಿಸಿ ಗಡಿ ಪ್ರದೇಶದ ಮೇಲೆ ದಾಳಿ ಮಾಡತೊಡಗಿದರು. ಇವರನ್ನೆದುರಿಸಲು ಬಲ್ಬನ್ ತನ್ನ ಹಿರಿಯ ಮಗ ಮುಹಮ್ಮದನನ್ನು ಮುಲ್ತಾನಿನ ರಾಜ್ಯಪಾಲನನ್ನಾಗಿ ನೇಮಿಸಿದ. ಸಾಮಾನ ಮತ್ತು ಸುನಾಮ್‌ಗಳ ರಕ್ಷಣೆಯ ಹೊಣೆ ಎರಡನೆಯ ಮಗನಾದ ಬುಘ್ರಾ ಖಾನನದಾಯಿತು. 1279 ರಲ್ಲಿ ಮಂಗೋಲರು ಬಹಳ ಮುಂದುವರಿದು ಸಟ್ಲೆಜ್ ನದಿಯನ್ನು ದಾಟಿದರು. ಮಹಮ್ಮದ್ ಮತ್ತು ಬುಘ್ರಾ ಖಾನರ ಸೇನೆಗಳೂ, ದೆಹಲಿಯಿಂದ ಬಂದ ಸೇನೆಯೂ ಕೂಡಿ ಹೋರಾಡಿ ಮಂಗೋಲರನ್ನು ಪೂರ್ಣವಾಗಿ ಸೋಲಿಸಿದುವು. ಅವರ ಹಾವಳಿ ನಿಂತಿತು.

ಆ ವೇಳೆಗೆ ಬಂಗಾಳ ಪ್ರಾಂತ್ಯದ ಅಧಿಪತಿಯಾಗಿದ್ದ ತುಘ್ರಿಲ್ ಖಾನ್ ದಂಗೆಯೆದ್ದ; ಅಲ್ಪ್ತ್‌ಗೀನನ ನಾಯಕತ್ವದಲ್ಲಿ ಬಲ್ಬನ್ ಕಳಿಸಿದ ಸೇನೆ ಪರಾಜಯ ಹೊಂದಿತು. ಕುಪಿತನಾದ ಸುಲ್ತಾನ ಅಲ್ಪ್ತ್‌ಗೀನನನ್ನು ದೆಹಲಿಯ ಕೋಟೆಯ ಬಾಗಿಲಿಗೆ ನೇಣುಹಾಕಿಸಿ ಕೊಲ್ಲಿಸಿದ. 1280 ರಲ್ಲಿ ತುಘ್ರಿಲ್ ಖಾನನನ್ನು ಹತ್ತಿಕ್ಕಲು ಇನ್ನೊಂದು ಸೇನೆ ಹೋಯಿತು. ಅದಕ್ಕೂ ಸೋಲು ಕಾದಿತ್ತು. ಕೊನೆಗೆ ಸುಲ್ತಾನನೇ ಮಗನಾದ ಬುಘ್ರಾ ಖಾನನೊಂದಿಗೆ ಲಖ್‌ನಾವತಿಗೆ ದಂಡೆತ್ತಿ ಹೋದ. ಪಲಾಯನ ಮಾಡಿದ ತುಘ್ರಿಲ್ ಖಾನನನ್ನು ಸುಲ್ತಾನ ಅಟ್ಟಿಸಿಕೊಂಡು ಹೋಗಿ ಅವನನ್ನು ಕೊಂದು ಅವನ ಬಂಧುಗಳನ್ನೂ, ಅನುಯಾಯಿಗಳನ್ನೂ ಘೋರವಾಗಿ ಶಿಕ್ಷಿಸಿ, ಬುಘ್ರಾ ಖಾನನನ್ನು ಪ್ರಾಂತ್ಯಾಧಿಪತಿಯಾಗಿ ನೇಮಿಸಿದ.[]

ಮುಂದೆ ಸುಲ್ತಾನನಿಗೆ ಮಹಾ ಆಘಾತವೊಂದು ಒದಗಿತು. ಮಂಗೋಲರು ಪಂಜಾಬಿನ ಮೇಲೆ ಮತ್ತೆ ಎರಗಿದರು (1285). ಸುಲ್ತಾನನ ಹಿರಿಯ ಮಗ ಮುಹಮ್ಮದ್ ಅವರನ್ನೆದುರಿಸುತ್ತಿದ್ದಾಗ ಶತ್ರುಗಳು ಮರೆಯಿಂದ ಅವನನ್ನು ಕೊಂದರು.[][][][] ಆಗ ಬಲ್ಬನನಿಗೆ ಎಂಬತ್ತು ವರ್ಷ ವಯಸ್ಸಾಗಿತ್ತು. ಪುತ್ರಶೋಕದಿಂದ ಕೊರಗಿ ಅವನು ತೀರಿಕೊಂಡ (1287). ಬುಘ್ರಾ ಖಾನ್ ಉತ್ತಾರಾಧಿಕಾರಿಯಾಗಬೇಕೆಂಬುದು ಸುಲ್ತಾನನ ಇಚ್ಛೆಯಾಗಿತ್ತು. ಅವನು ಆ ಹೊಣೆ ಹೊರಲು ಇಷ್ಟಪಡಲಿಲ್ಲವಾದ್ದರಿಂದ ಮೊಮ್ಮಗ ಖುಸ್ರಾವ್ ತನ್ನ ಅನಂತರ ಸಿಂಹಾಸನವನ್ನೇರತಕ್ಕದೆಂದು ಸುಲ್ತಾನ ನಿಯೋಜಿಸಿದ.

ರಾಜ್ಯತ್ವ ದೈವದತ್ತವೆಂದು ಬಲ್ಬನ್ ಪರಿಗಣಿಸಿದ್ದ. ತಾನು ಪಟ್ಟಕ್ಕೆ ಬಂದಿದ್ದು ದೈವೇಚ್ಛೆ ಎಂದು ಪ್ರಚಾರ ಮಾಡಿದ. ರಾಜ ದೇವರ ಮರ್ತ್ಯ ಪ್ರತಿನಿಧಿಯೆಂಬುದೂ, ಘನತೆಯಲ್ಲಿ ಪ್ರವಾದಿಗೆ ಎರಡನೆಯದೆಂಬುದೂ ಅವನ ಭಾವನೆಯಾಗಿತ್ತು. ರಾಜತ್ವಕ್ಕೆ ಬಾಹ್ಯ ಘನತೆಯೂ ಅವಶ್ಯಕವೆಂದು ನಂಬಿದ್ದ ಈತ ಸಾಮಾನ್ಯ ಜನರೊಂದಿಗೆ ಸಂಪರ್ಕ ಬೆಳೆಸಲು ನಿರಾಕರಿಸುತ್ತಿದ್ದ. ಇವನು ಆಸ್ಥಾನದಲ್ಲಿ ಪರ್ಶಿಯನ್ ಪದ್ಧತಿಯನ್ನು ಜಾರಿಗೆ ತಂದ. ಪ್ರಜೆಗಳಿಗೆ ನಿಷ್ಪಕ್ಷಪಾತದಿಂದ ನ್ಯಾಯ ವಿತರಣೆ ಮಾಡುತ್ತಿದ್ದನೆಂದು ತಿಳಿದುಬರುತ್ತದೆ. ಆದರೆ ಪ್ರಜೆಗಳ ಮತ್ತು ಸರ್ಕಾರದ ನಡುವಿನ ವ್ಯಾಜ್ಯ ಕುರಿತ ವಿಷಯಗಳಲ್ಲಿ ಹಾಗಿರಲಿಲ್ಲ.

ಬಲ್ಬನ್ ತುರ್ಕಿ ಶ್ರೀಮಂತರನ್ನು ಕಠಿಣವಾಗಿ ಕಾಣುತ್ತಿದ್ದ. ಅವರಲ್ಲಿ ಬಲಿಷ್ಠ ಶ್ರೀಮಂತರನ್ನು ಕೊಲ್ಲಿಸಿದ. ನಲ್ವತ್ತು ಜನರ ಪ್ರಭಾವಿ ಗುಂಪು ನಿರ್ನಾಮವಾಯಿತು. ಸೈನ್ಯ ವ್ಯವಸ್ಥಿತವಾಯಿತು. ಸೈನ್ಯ ಕಾರ್ಯಚರಣೆಯಲ್ಲಿ ಬಡವರಿಗೆ ಮತ್ತು ಆಸಹಾಯಕರಿಗೆ ಯಾವ ಅಪಾಯವು ಆಗದಂತೆ ಬಲ್ಬನ್ ನೋಡಿಕೊಳ್ಳುತ್ತಿದ್ದ. ಸೈನ್ಯದ ಮೇಲ್ವಿಚಾರಣೆಗೆ ಪ್ರಾಮಾಣಿಕರನ್ನು ಮತ್ತು ನಿಷ್ಠೆಯುಳ್ಳವರನ್ನು ನೇಮಿಸಿದ. ಅಧಿಕಾರ ಕೇಂದ್ರೀಕೃತವಾಯಿತು. ಮುಖ್ಯ ನೇಮಕಗಳನ್ನು ಅವನೇ ನೇರವಾಗಿ ಮಾಡುತ್ತಿದ್ದ ಅಥವಾ ಅವಕ್ಕೆ ಅವನ ಒಪ್ಪಿಗೆ ಅವಶ್ಯವಾಗಿತ್ತು. ದಕ್ಷತೆ ನಿಷ್ಠೆಗಳೇ ನೇಮಕದಲ್ಲಿ ಪರಿಗಣಿಸಲಾಗುತ್ತಿದ್ದ ನಿಯಮಗಳು. ಪ್ರಾಂತ್ಯಾಧಿಕಾರಿಗಳು ಆಗಾಗ್ಗೆ ವರದಿಗಳನ್ನು ಸಲ್ಲಿಸಬೇಕಾಗಿತ್ತು. ಗೂಢಚಾರ ಇಲಾಖೆ ತುಂಬ ಸಮರ್ಥವಾಗಿ ಕೆಲಸ ಮಾಡುತ್ತಿತ್ತು.

ಉಲ್ಲೇಖಗಳು

[ಬದಲಾಯಿಸಿ]
  1. Ali, K. (1978) [First published 1950]. A New History of Indo-Pakistan. Vol. Part II (4th ed.). Lahore: Aziz Publisher. p. 57. OCLC 59726645.
  2. Sen, Sailendra (2013). A Textbook of Medieval Indian History. Primus Books. pp. 76–79. ISBN 978-9-38060-734-4.
  3. Ali, Muhammad Ansar (2012). "Bughra Khan". In Islam, Sirajul; Jamal, Ahmed A. (eds.). Banglapedia: National Encyclopedia of Bangladesh (Second ed.). Asiatic Society of Bangladesh.
  4. Satish Chandra (2004). Medieval India: From Sultanat to the Mughals-Delhi Sultanat (1206-1526) - Part One. Har-Anand Publications. pp. 66–. ISBN 978-81-241-1064-5.
  5. Kausar Ali (1978). A new history of Indo-Pakistan: from Dravidians to Sultanates. Aziz Publishers.
  6. John McLeod (2015). The History of India. ABC-CLIO. pp. 42–. ISBN 978-1-61069-766-8.
  7. Jaswant Lal Mehta (1979). Advanced Study in the History of Medieval India. Sterling Publishers Pvt. Ltd. pp. 131–. ISBN 978-81-207-0617-0.