ವಿಷಯಕ್ಕೆ ಹೋಗು

ಘಿಯಾಸ್-ಉದ್-ದೀನ್ ಮಹಮ್ಮದ್ ಘೋರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ದುಶಾನ್ಬೆಯಲ್ಲಿ ಘಿಯಾಸ್-ಉದ್-ದೀನ್ ಮಹಮ್ಮದ್ ಘೋರಿಯ ಪ್ರತಿಮೆ

ಘಿಯಾಸ್-ಉದ್-ದೀನ್ ಮಹಮ್ಮದ್ ಘೋರಿ (1163-1202) ಆಫ್ಘಾನಿಸ್ತಾನದ ಘೋರಿ ಮನೆತನದ ಒಬ್ಬ ಪ್ರಸಿದ್ಧ ಸುಲ್ತಾನ. 12ನೆಯ ಶತಮಾನದಲ್ಲಿ ಭಾರತದ ಮೇಲೆ ದಂಡಯಾತ್ರೆಗಳನ್ನು ನಡೆಸಿ[][] ದೆಹಲಿಯ ಸುಲ್ತಾನರ ಆಳ್ವಿಕೆಗೆ ಅಸ್ತಿಭಾರ ಹಾಕಿದ ಮಹಮ್ಮದ್ ಘೋರಿಯ ಅಣ್ಣ ಸೈಫ್-ಉದ್-ದೀನನ ಮರಣಾನಂತರ (1163) ಪಟ್ಟಕ್ಕೆ ಬಂದ.[] ಹಿಂದಿನಿಂದಲೂ ನಡೆಯುತ್ತಿದ್ದ ಘೋರಿ ಮತ್ತು ಘಜ಼್ನಿ ಮನೆತನಗಳ ನಡುವಣ ಹೋರಾಟ ಇವನ ಕಾಲದಲ್ಲಿ ಅಂತ್ಯವಾಯಿತು. ಕೈಬಿಟ್ಟು ಹೋಗಿದ್ದ ಘಜ಼್ನಿ ಪ್ರಾಂತ್ಯವನ್ನು ಘಿಯಾಸ್-ಉದ್-ದೀನ್ ಮತ್ತೆ ಹೋರಾಡಿ ಆಕ್ರಮಿಸಿಕೊಂಡು, ತಮ್ಮನಾದ ಮಹಮದ್ ಘೋರಿಯನ್ನು ಆ ಪ್ರಾಂತ್ಯದ ಅಧಿಕಾರಿಯಾಗಿ ನೇಮಿಸಿದ. ಘಜ಼್ನಿಯಲ್ಲಿ ಘೋರಿ ಮಹಮ್ಮದ್ ಹೆಚ್ಚು ಕಡಿಮೆ ಸ್ವತಂತ್ರ ಸುಲ್ತಾನನಂತೆ ಅಧಿಕಾರ ನಡೆಸುತ್ತಿದ್ದರೂ ತನ್ನ ನಾಣ್ಯಗಳ ಮೇಲೆ ತನ್ನ ಅಣ್ಣ ಘಿಯಾಸ್-ಉದ್-ದೀನನ ಹೆಸರನ್ನು ಕೆತ್ತಿಸಿದ. ಘಿಯಾಸ್-ಉದ್-ದೀನನ ಸಾರ್ವಭೌಮಾಧಿಕಾರಕ್ಕೆ ಮನ್ನಣೆ ನೀಡಿದ್ದ. ಅವನು ಭಾರತದ ದಂಡಯಾತ್ರೆ ಕೈಗೊಂಡಾಗಲೂ ಅಣ್ಣನ ಅಧಿಕಾರಿಯಾಗಿಯೇ ಇದ್ದ. ಈ ಸಹೋದರರಲ್ಲಿ ಅಪರೂಪವಾದ ಅನ್ಯೋನ್ಯತೆ ಸಾಮರಸ್ಯಗಳಿದ್ದುವು. ಘಿಯಾಸ್-ಉದ್-ದೀನ್ ಕೊರಾಸಾನ್ ಪ್ರಾಂತ್ಯವನ್ನು ಗೆದ್ದು ತನ್ನ ರಾಜ್ಯಕ್ಕೆ ಸೇರಿಸಿಕೊಂಡ. ಹೀರತ್ ನಗರದಲ್ಲಿ ಒಂದು ಭವ್ಯವಾದ ಮಸೀದಿಯನ್ನು ಕಟ್ಟಿಸಿದ. ಘಿಯಾಸ್-ಉದ್-ದೀನ್ ತೀರಿಕೊಂಡದ್ದು 1202ರಲ್ಲಿ.

ಉಲ್ಲೇಖಗಳು

[ಬದಲಾಯಿಸಿ]
  1. C. E. Bosworth 1968, p. 165.
  2. Mohammad Habib 1981, p. 110.
  3. The Iranian World, C.E. Bosworth, The Cambridge History of Iran, Vol. 5, ed. J. A. Boyle, John Andrew Boyle, (Cambridge University Press, 1968), 161-170.


ಗ್ರಂಥಸೂಚಿ

[ಬದಲಾಯಿಸಿ]
  • C. E. Bosworth (1968). THE POLITICAL AND DYNASTIC HISTORY OF THE IRANIAN WORLD (A.D. 1000–1217). Cambridge University Press. ISBN 978-0-521-06936-6.
  • Mohammad Habib (1981). K. A. Nizami (ed.). Politics and Society During the Early Medieval Period: Collected Works of Professor Mohammad Habib (in ಇಂಗ್ಲಿಷ್). People's Publishing House.