ವಿಷಯಕ್ಕೆ ಹೋಗು

ಘೆಂಟ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಗ್ರ್ಯಾವೆನ್‍ಸ್ಟೀನ್

ಘೆಂಟ್ ಬೆಲ್ಜಿಯಮ್‌ನ ಈಸ್ಟ್ ಫ್ಲಾಂಡರ್ಸ್ ಪ್ರಾಂತ್ಯದ ರಾಜಧಾನಿ;[] ಐತಿಹಾಸಿಕ ನಗರ. ಲೀಸ್ ಮತ್ತು ಸ್ಕೆಲ್ಟ್ ನದಿಗಳ ಸಂಗಮ ಸ್ಥಳದಲ್ಲಿದೆ. ಲೀಡ್‍ಬರ್ಗ್, ಗೆಂಟ್‍ಬ್ರಗ್ ಮತ್ತು ಸೇಂಟ್ ಆಮಾಂಡ್ಸ್‌ಬರ್ಗ್- ಈ ಮೂರು ಮುಖ್ಯ ಉಪನಗರಗಳೂ ಸೇರಿ ಇದರ ಒಟ್ಟು ವಿಸ್ತೀರ್ಣ 60.92 ಚ.ಮೈ.; ಜನಸಂಖ್ಯೆ 2,65,086 (2022).

ನಗರದ ವಿಶೇಷತೆಗಳು

[ಬದಲಾಯಿಸಿ]

ಘೆಂಟ್ ನಗರವನ್ನು ಕ್ರಿ.ಶ. 7ನೆಯ ಶತಮಾನದಲ್ಲಿ ಕಟ್ಟಲಾಯಿತು. ಮಧ್ಯಯುಗದಲ್ಲಿ ಈ ನಗರದ ಉಣ್ಣೆ ಬಟ್ಟೆ ಜಗತ್ಪ್ರಸಿದ್ಧವಾಗಿತ್ತು. ಬೆಲ್ಜಿಯಮ್ ದೇಶದಲ್ಲಿ ಇಂದಿಗೂ ಹತ್ತಿ ಮತ್ತು ಉಣ್ಣೆ ಬಟ್ಟೆ ತಯಾರಿಕೆಯಲ್ಲಿ ಈ ನಗರ ಪ್ರಮುಖ ಸ್ಥಾನ ಪಡೆದಿದೆ. ದೇಶದಲ್ಲಿ ತಯಾರಾಗುವ ಲಿನನ್ ಬಟ್ಟೆಯಲ್ಲಿ 2/3 ರಷ್ಟು ಘೆಂಟ್ ನಗರದಲ್ಲೇ ತಯಾರಾಗುತ್ತದೆ. ಇದು ರಸ್ತೆ ಮತ್ತು ರೈಲ್ವೆ ಸಂಧಿಸ್ಥಳ. ಈ ನಗರದಿಂದ ಉತ್ತರ ಸಮುದ್ರಕ್ಕೆ ಸಂಪರ್ಕವಿದೆ. ನಗರದ ಸುತ್ತಮುತ್ತ ತೋಟಗಳೂ, ಉದ್ಯಾನಗಳೂ ಇವೆ. ಯಂತ್ರದ ಹಾಗೂ ಕಾಗದದ ಕಾರ್ಖಾನೆಗಳಿವೆ. ಇದು ಒಂದು ವಾಣಿಜ್ಯ ಕೇಂದ್ರ. ಸುಪ್ರಸಿದ್ಧ ಕವಿ, ಕತೆಗಾರ ಮಾರಿಸ್ ಮೇಟರ್‌ಲಿಂಕ್ (1862-1949),[] ಖಗೋಳವಿಜ್ಞಾನಿ, ಪವನಶಾಸ್ತ್ರಜ್ಞ, ಸಂಖ್ಯಾಕಲನಶಾಸ್ತ್ರಜ್ಞ ಲ್ಯಾಂಬರ್ಟ್ ಕ್ವೇಟ್‌ಲೆ (1796-1874)[] ಮುಂತಾದವರ ಜನ್ಮಸ್ಥಳವಿದು. ಇಲ್ಲಿ ಅನೇಕ ಸುಂದರವಾದ ಭವನಗಳೂ, ಭವ್ಯವಾದ ಚೌಕಗಳೂ ಇವೆ. ಕಲಾವಸ್ತು ಪ್ರಾಚ್ಯವಸ್ತು ಸಂಗ್ರಹಾಲಯಗಳೂ ಈ ನಗರದ ವೈಶಿಷ್ಟ್ಯಗಳು. ಹಾಲೆಂಡಿನ 1ನೆಯ ವಿಲಿಯಮ್ ದೊರೆ 1816ರಲ್ಲಿ ಘೆಂಟ್ ನಗರದಲ್ಲಿ ಒಂದು ವಿಶ್ವವಿದ್ಯಾಲಯವನ್ನು ಸ್ಥಾಪಿಸಿದ.[] ಇಲ್ಲಿ ಈಗ 1,200 ವಿದ್ಯಾರ್ಥಿಗಳು (ವಿದೇಶೀಯರೂ ಸೇರಿದಂತೆ) ಅಭ್ಯಾಸ ಮಾಡುತ್ತಿದ್ದಾರೆ. 280` ಎತ್ತರವಿರುವ ಹಾಗೂ 52 ಗಂಟೆಗಳನ್ನು ಉಳ್ಳ ಗೋಪುರ ಈ ನಗರದ ಪ್ರಮುಖ ಆಕರ್ಷಣೆಗಳಲ್ಲೊಂದು. ಈ ಗೋಪುರದ ಒಂದೊಂದು ಗಂಟೆಯೂ 6 ಟನ್ ತೂಗುತ್ತದೆ. ಘೆಂಟ್ ನಗರದಲ್ಲಿರುವ ಪ್ರಾಚೀನ ಕಟ್ಟಡಗಳು ಗಾತಿಕ್ ಮತ್ತು ಪುನರುಜ್ಜೀವನ ಕಾಲದ ವಾಸ್ತುಶಿಲ್ಪ ಮಾದರಿಯಲ್ಲಿ ರಚಿತವಾಗಿವೆ.

ಇತಿಹಾಸ

[ಬದಲಾಯಿಸಿ]

ಬಹಳ ಹಿಂದಿನಿಂದಲೂ ಘೆಂಟ್ ನಗರ ಫ್ಲಾಂಡರ್ಸ್ ಪ್ರಾಂತ್ಯದ ಪ್ರಮುಖ ಪಟ್ಟಣವಾಗಿತ್ತು. 10ನೆಯ ಶತಮಾನದಲ್ಲಿ ಫ್ಲಾಂಡರ್ಸ್ ಪ್ರಾಂತ್ಯ ಗಳಿಸಿದ ಪ್ರಗತಿಯ ಹಿನ್ನೆಲೆಯಲ್ಲಿ ಈ ನಗರ ಪ್ರಾಮುಖ್ಯ ಪಡೆಯಿತು. ಮೊದಲು ನಗರವನ್ನು ಲೀಸ್ ನದಿಯ ದಂಡೆಯ ಮೇಲೆ ಕಟ್ಟಲಾಯಿತು. ಫ್ಲಾಂಡರ್ಸ್ ಪ್ರಾಂತ್ಯದ ಪಾಳೆಯಗಾರರು ಇಲ್ಲೊಂದು ಕೋಟೆ ಕಟ್ಟಿದರು. 12ನೆಯ ಶತಮಾನದಲ್ಲಿ ಘೆಂಟ್ ಶೀಘ್ರವಾಗಿ ಬೆಳೆಯಿತು. 13ನೆಯ ಶತಮಾನದ ವೇಳೆಗೆ ಇಡೀ ಉತ್ತರ ಯೂರೋಪಿನಲ್ಲೇ ಒಂದು ಪ್ರಮುಖ ಪಟ್ಟಣವಾಯಿತು. ಬಟ್ಟೆ ಕೈಗಾರಿಕೆಯೇ ಈ ನಗರದ ಅಭಿವೃದ್ಧಿಗೆ ಪ್ರಮುಖ ಕಾರಣ. ಇಂಗ್ಲೆಂಡಿನ ಉಣ್ಣೆಯಿಂದ ತಯಾರಾಗುತ್ತಿದ್ದ ಇಲ್ಲಿಯ ಬಟ್ಟೆಗಳು ಪ್ರಸಿದ್ಧಿ ಪಡೆದುವು. ನಗರದ ಶ್ರೀಮಂತಿಕೆಯಿಂದ ಅದಕ್ಕೆ ರಾಜಕೀಯ ಅಂತಸ್ತು, ಅಧಿಕಾರ ಬಂದವು. ಅವನ್ನು ಇಲ್ಲಿಯ ಜನ ಶ್ರದ್ಧೆಯಿಂದ ಕಾಪಾಡಿಕೊಂಡು ಬಂದರು. ಅನೇಕ ವೇಳೆ ಯೂರೂಪಿಯನ್ ರಾಜಕೀಯ ಚದುರಂಗದಲ್ಲಿ ಘೆಂಟ್ ನಗರವೊಂದು ಕಾಯಿ ಆಗಿದ್ದುದೂ ಉಂಟು. ಜಾಕಬ್ ಫ಼ಾನ್ ಆರ್ಟೆವೆಲ್ಡೆಯ (1290-1345)[] ನಾಯಕತ್ವದಲ್ಲಿ ಘೆಂಟ್ ನಗರದ ಜನ ಇಂಗ್ಲೆಂಡಿನ ಮಿತ್ರರಾಗಿ ಫ್ರೆಂಚರ ವಿರುದ್ಧ ಹೋರಾಡಿದರು. 1382ರಲ್ಲಿ ಫ್ರಾನ್ಸ್ ದೇಶದ ರಾಜನ ವಿರುದ್ಧ, 15ನೆ ಶತಮಾನದಲ್ಲಿ ನಡೆದ ದಂಗೆಯೂ ಫಲಿಸಲಿಲ್ಲ. ಚಕ್ರವರ್ತಿ 5ನೆಯ ಚಾರ್ಲ್ಸ್ ಘೆಂಟ್ ನಗರದಲ್ಲಿ ಹುಟ್ಟಿದ್ದರೂ[] ಈ ನಗರದ ಜನ ಅವನ ವಿರುದ್ಧ ಬಂಡಾಯವೆದ್ದರು. ಚಾರ್ಲ್ಸ್ ಅದನ್ನು ದಮಿಸಿದ. 19ನೆಯ ಶತಮಾನದಲ್ಲಿ ನಡೆದ ಕೈಗಾರಿಕಾ ಕ್ರಾಂತಿಯ ಫಲವಾಗಿ ಇಲ್ಲಿ ಜವಳಿ ಕೈಗಾರಿಕೆ ಮತ್ತೆ ಬೆಳೆಯಿತು. ಘೆಂಟ್ ನಗರ ಮತ್ತೆ ಚೇತರಿಸಿಕೊಂಡಿತು. ಎರಡು ಮಹಾಯುದ್ಧಗಳ ಕಾಲದಲ್ಲಿ ಘೆಂಟ್ ನಗರ ಜರ್ಮನರ ಆಕ್ರಮಣಕ್ಕೊಳಗಾಗಿತ್ತು.

ಉಲ್ಲೇಖಗಳು

[ಬದಲಾಯಿಸಿ]
  1. "Medieval and magical, vibrant and edgy – the Belgian city is a sensory overload". The Guardian. 23 February 2020. Retrieved 14 March 2020.
  2.  Gosse, Edmund William (1911). "Maeterlinck, Maurice" . Encyclopædia Britannica. Vol. 17 (11th ed.). pp. 298–299. {{cite encyclopedia}}: Cite has empty unknown parameters: |HIDE_PARAMETER= and |separator= (help)
  3.  "Quetelet, Lambert Adolphe Jacques" . Encyclopædia Britannica. Vol. 22 (11th ed.). 1911. p. 744. {{cite encyclopedia}}: Cite has empty unknown parameters: |separator= and |HIDE_PARAMETER= (help)
  4. Ghent over the centuries: Concise history of a stubborn city
  5.  "Artevelde, Jacob van" . Encyclopædia Britannica. Vol. 2 (11th ed.). 1911. p. 669. {{cite encyclopedia}}: Cite has empty unknown parameters: |separator= and |HIDE_PARAMETER= (help)
  6.  Armstrong, Edward (1911). "Charles V. (Roman Emperor)" . Encyclopædia Britannica. Vol. 5 (11th ed.). pp. 899–905. {{cite encyclopedia}}: Cite has empty unknown parameters: |HIDE_PARAMETER= and |separator= (help)


ಹೊರಗಿನ ಕೊಂಡಿಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಘೆಂಟ್&oldid=1282784" ಇಂದ ಪಡೆಯಲ್ಪಟ್ಟಿದೆ