ವಿಷಯಕ್ಕೆ ಹೋಗು

ಜಯಲಕ್ಷ್ಮಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜಯಲಕ್ಷ್ಮಿ
Born
ಮಂಗಳೂರು, ಮೈಸೂರು ರಾಜ್ಯ, ಬ್ರಿಟಿಷ್ ಇಂಡಿಯಾ
Occupationನಟಿ
Years active೧೯೭೩-೧೯೮೦, ೨೦೦೧-ಪ್ರಸ್ತುತ


ಜಯಲಕ್ಷ್ಮಿ ಕನ್ನಡದ ಹೆಸರಾಂತ ಚಲನಚಿತ್ರ ಮತ್ತು ಕಿರುತೆರೆ ನಟಿ. ನಾಯಕಿಯಾಗಿ, ಪೋಷಕ ನಟಿಯಾಗಿ ಸುಮಾರು ೧೦೦ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಅಭಿನಯಿಸಿರುವ ಇವರ ಗಮನಾರ್ಹ ಚಿತ್ರಗಳೆಂದರೆ ಸೀತೆಯಲ್ಲ ಸಾವಿತ್ರಿ(೧೯೭೩), ಬೆಸುಗೆ(೧೯೭೬), ದೇವರ ಕಣ್ಣು(೧೯೭೬). ನೀತಿ ಚಕ್ರ, ಕನ್ಯಾದಾನ ಮತ್ತು ಕುಂಕುಮಭಾಗ್ಯ ಜಯಲಕ್ಷ್ಮಿ ಅಭಿನಯದ ಪ್ರಮುಖ ಕಿರುತೆರೆ ಧಾರಾವಾಹಿಗಳು[][].

ಆರಂಭಿಕ ಜೀವನ

[ಬದಲಾಯಿಸಿ]

ಜಯಲಕ್ಷ್ಮಿಯವರು ಮೂಲತಃ ಕರಾವಳಿಯ ಚೆಲುವೆ. ಇವರ ತಂದೆ ಮಂಗಳೂರಿನವರು. ತಾಯಿಯ ಮಾತೃಭಾಷೆ ಮಲಯಾಳಂ. ಕನ್ನಡ ಮತ್ತು ಮಲಯಾಳಂ ಭಾಷೆಗಳನ್ನು ಸುಲಲಿತವಾಗಿ ಮಾತನಾಡಬಲ್ಲ ಜಯಲಕ್ಷ್ಮಿ ಬೆಳೆದಿದ್ದು ಬೆಂಗಳೂರಿನಲ್ಲಿ. ಚಿಕ್ಕಂದಿನಲ್ಲೇ ನೃತ್ಯ ಮತ್ತು ಗಾಯನದೆಡೆಗೆ ಅಪಾರ ಆಸಕ್ತಿ ಹೊಂದಿದ್ದ ಜಯಲಕ್ಷ್ಮಿ ತಮ್ಮ ತಂದೆಯ ಪ್ರೋತ್ಸಾಹದಿಂದ ಪುಣೆಯ ಚಲನಚಿತ್ರ ತರಬೇತಿ ಸಂಸ್ಥೆಯಿಂದ ತರಬೇತಿ ಪಡೆದು ನಂತರ ಚಿತ್ರರಂಗ ಪ್ರವೇಶಿಸಿದರು[].

ವೃತ್ತಿ ಜೀವನ

[ಬದಲಾಯಿಸಿ]

ಬೆಳ್ಳಿ ತೆರೆ

[ಬದಲಾಯಿಸಿ]

ಅಭಿನಯದಲ್ಲಿ ತರಬೇತಿ ಪಡೆದ ಜಯಲಕ್ಷ್ಮಿ ತಮ್ಮ ೧೬ನೇ ವಯಸ್ಸಿನಲ್ಲಿ ನಾಯಕಿಯಾಗಿ ಮಲಯಾಳಂ ಚಿತ್ರರಂಗ ಪ್ರವೇಶಿಸಿದರು[]. ಒಂದೆರಡು ಮಲಯಾಳಂ ಚಿತ್ರಗಳಲ್ಲಿ ಅಭಿನಯಿಸಿದ ಜಯಲಕ್ಷ್ಮಿ ೧೯೭೩ರಲ್ಲಿ ತೆರೆಗೆ ಬಂದ ಬೀಸಿದ ಬಲೆ ಎಂಬ ಹೊಸ ಅಲೆಯ ಚಿತ್ರದ ಮೂಲಕ ನಾಯಕಿಯಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದರು. ವಿಷ್ಣುವರ್ಧನ್ ನಾಯಕರಾಗಿ ಅಭಿನಯಿಸಿದ್ದ ಮಹಿಳಾ ಪ್ರಧಾನ ಚಿತ್ರ ಸೀತೆಯಲ್ಲ ಸಾವಿತ್ರಿ(೧೯೭೩)ಯಲ್ಲಿ ಆಸ್ತಿಯ ಆಸೆಯಿಂದ ತನ್ನ ಪತಿಯನ್ನು ಮರಳು ಮಾಡಿದ ನರ್ತಕಿಯ ಹಿಡಿತದಿಂದ ಆತನನ್ನು ಬಿಡಿಸಿ ದಾರಿ ತಪ್ಪಿದ ಪತಿಯನ್ನು ಸರಿ ದಾರಿಗೆ ತರುವ ದಿಟ್ಟ ಗೃಹಿಣಿಯಾಗಿ ಶಕ್ತ ಅಭಿನಯ ನೀಡಿ ಚಿತ್ರರಸಿಕರ ಗಮನ ಸೆಳೆದ ಜಯಲಕ್ಷ್ಮಿಯವರಿಗೆ ನಾಯಕಿಯಾಗಿ ಅನೇಕ ಅವಕಾಶಗಳು ಅರಸಿಕೊಂಡು ಬಂದವು.

ಕಳ್ಳ ಕುಳ್ಳ(೧೯೭೫) ಮತ್ತು ದೇವರ ಕಣ್ಣು(೧೯೭೫) ಚಿತ್ರಗಳಲ್ಲಿನ ವಿಭಿನ್ನ ಪಾತ್ರಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಕಳ್ಳ ಕುಳ್ಳ ಚಿತ್ರದಲ್ಲಿ ದ್ವಾರಕೀಶ್ ಅವರೊಂದಿಗಿನ ಹಾಸ್ಯ ಪಾತ್ರದಲ್ಲಿ ಮಿಂಚಿದ ಜಯಲಕ್ಷ್ಮಿ ದೇವರ ಕಣ್ಣು ಚಿತ್ರದಲ್ಲಿ ಅತ್ಯಾಚಾರಕ್ಕೊಳಗಾಗಿ ಆಘಾತದಿಂದ ತನ್ನ ಹಳೆಯ ನೆನಪುಗಳನ್ನು ಕಳೆದುಕೊಂಡ ಹುಡುಗಿಯಾಗಿ ಸ್ಮರಣೀಯ ಅಭಿನಯ ನೀಡಿದ್ದಾರೆ. ಈ ಚಿತ್ರದಲ್ಲಿ ಗಾಯಕಿ ಪಿ.ಸುಶೀಲಾ ಅವರ ಕಂಠಸಿರಿಯಲ್ಲಿ ಮೂಡಿಬಂದ ಜಯಲಕ್ಷ್ಮಿ ಅವರ ಮೇಲೆ ಚಿತ್ರಿತವಾದ ನಿನ್ನ ನೀನು ಮರೆತರೇನು ಸೊಗಸಿದೆ?.... ಗೀತೆ ಕನ್ನಡದ ಜನಪ್ರಿಯ ಗೀತೆಗಳಲ್ಲೊಂದಾಗಿದೆ.

ಗೀತಪ್ರಿಯ ಅವರ ನಿರ್ದೇಶನದಲ್ಲಿ ತೆರೆಗೆ ಬಂದ ಬೆಸುಗೆ(೧೯೭೬) ಕನ್ನಡದ ಅಪೂರ್ವ ಚಿತ್ರಗಳಲ್ಲೊಂದು ಎಂದು ಗುರಿತಿಸಲ್ಪಡುತ್ತದೆ. ತ್ರಿಕೋನ ಪ್ರೇಮಕಥೆಯನ್ನು ಹೊಂದಿದ್ದ ಈ ಚಿತ್ರದಲ್ಲಿ ಆಧುನಿಕ ಬೆಡಗಿಯಾಗಿ ಜಯಲಕ್ಷ್ಮಿ ಹದವರಿತ ಅಭಿನಯ ನೀಡಿದ್ದಾರೆ. ಗಲ್ಲಾಪೆಟ್ಟಿಗೆಯಲ್ಲಿ ಅಭೂತಪೂರ್ವ ಯಶಸ್ಸು ಗಳಿಸಿದ ಈ ಚಿತ್ರ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದ ಶ್ರೀನಾಥ್ ಮತ್ತು ಮಂಜುಳಾ ಅವರ ತಾರಾಮೌಲ್ಯವನ್ನು ಗಣನೀಯವಾಗಿ ಹೆಚ್ಚಿಸಿತ್ತು. ಇನ್ನೊಂದು ಪ್ರಮುಖ ಪಾತ್ರದಲ್ಲಿ ಉತ್ತಮ ಅಭಿನಯ ನೀಡಿದ ಜಯಲಕ್ಷ್ಮಿ ಅವರ ವೃತ್ತಿ ಜೀವನ ನಿರೀಕ್ಷಿತ ಪ್ರಗತಿ ಕಾಣಲಿಲ್ಲ. ಕಲ್ಪನಾ ವೃತ್ತಿ ಬದುಕಿನ ಮಹೋನ್ನತ ಚಿತ್ರ ಬಯಲು ದಾರಿ(೧೯೭೬)ಯಲ್ಲಿ ನಾಯಕಿಯ ಗೆಳತಿಯಾಗಿ ನೀಡಿದ ಉತ್ತಮ ಅಭಿನಯಕ್ಕೆ ಕರ್ನಾಟಕ ರಾಜ್ಯ ಸರ್ಕಾರದ ಅತ್ತ್ಯುತ್ತಮ ಪೋಷಕ ನಟಿ ಪ್ರಶಸ್ತಿಗೆ ಪಾತ್ರರಾದರು[]. ಜಯಲಕ್ಷ್ಮಿ ಶ್ರೀಮಂತನ ಮಗಳು(೧೯೭೭) ಮತ್ತು ಗೆದ್ದವಳು ನಾನೆ(೧೯೭೭) ಚಿತ್ರಗಳಲ್ಲಿ ಎರಡನೇ ನಾಯಕಿಯಾಗಿ ಉತ್ತಮ ಅಭಿನಯ ನೀಡಿದ್ದಾರೆ.

೭೦ರ ದಶಕದ ಕೊನೆಯಲ್ಲಿ ಜಯಲಕ್ಷ್ಮಿ ನಾಯಕಿಯಾಗಿ ನಟಿಸಿದ ಫೀನಿಕ್ಸ್(೧೯೭೮) ಮತ್ತು ಸದಾನಂದ(೧೯೭೯) ಚಿತ್ರಗಳು ನಿರೀಕ್ಷಿತ ಯಶಸ್ಸು ಗಳಿಸಲಿಲ್ಲ. ತಮ್ಮ ವೈಯಕ್ತಿಕ ಜೀವನದತ್ತ ಗಮನ ಹರಿಸಿದ ಜಯಲಕ್ಷ್ಮಿ ಸುಮಾರು ಎರಡು ದಶಕಗಳ ಕಾಲ ಚಿತ್ರರಂಗದಿಂದ ದೂರ ಉಳಿದಿದ್ದರು. ಶಾಪ(೨೦೦೧), ಶುಕ್ರದೆಸೆ(೨೦೦೧), ಸತ್ಯಮೇವ ಜಯತೆ(೨೦೦೧) ಚಿತ್ರಗಳ ಮೂಲಕ ಚಿತ್ರರಂಗಕ್ಕೆ ವಾಪಾಸಾಗಿರುವ ಜಯಲಕ್ಷ್ಮಿ ಕುಟುಂಬ(೨೦೦೩), ಒಲವೇ ಮಂದಾರ(೨೦೧೧) ಮತ್ತು ಬಚ್ಚನ್(೨೦೧೩)ಗಳಂತಹ ಯಶಸ್ವಿ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ[].

ಕನ್ನಡ ಚಿತ್ರರಂಗದ ಜನಪ್ರಿಯ ನಟರಾದ ವಿಷ್ಣುವರ್ಧನ್, ಅನಂತ್ ನಾಗ್, ಶ್ರೀನಾಥ್, ದ್ವಾರಕೀಶ್ ಮತ್ತು ಅಶೋಕ್ ಅವರೊಂದಿಗೆ ನಾಯಕಿಯಾಗಿ ಅಭಿನಯಿಸಿದ ಕೀರ್ತಿ ಜಯಲಕ್ಷ್ಮಿ ಅವರಿಗಿದೆ[].

ಕಿರುತೆರೆ

[ಬದಲಾಯಿಸಿ]

ಮದುವೆಯ ನಂತರ ಅಭಿನಯದಿಂದ ದೂರವಾಗಿದ್ದ ಜಯಲಕ್ಷ್ಮಿ ೧೯೯೯ರಲ್ಲಿ ಪ್ರಸಾರವಾದ ನೀತಿ ಚಕ್ರ ಎಂಬ ಧಾರಾವಾಹಿಯ ಮೂಲಕ ಕಿರುತೆರೆ ಪ್ರವೇಶಿಸದರು. ಆನಂತರದಲ್ಲಿ ಕನ್ಯಾದಾನ, ದುರ್ಗ, ಕುಂಕುಮ ಭಾಗ್ಯ, ರಾಘವೇಂದ್ರ ವೈಭವ ಮತ್ತು ಕೃಷ್ಣ ರುಕ್ಮಿಣಿ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ.

ವೈಯಕ್ತಿಕ ಜೀವನ

[ಬದಲಾಯಿಸಿ]

೧೯೮೦ರ ದಶಕದ ಆರಂಭದಲ್ಲಿ ವಿವಾಹವಾದ ಜಯಲಕ್ಷ್ಮಿ ತಮ್ಮ ಪತಿಯೊಂದಿಗೆ ಸೌದಿ ಅರೇಬಿಯಾದಲ್ಲಿ ನೆಲೆಸಿದ್ದರು. ಇವರಿಗೆ ಎರಡು ಗಂಡು ಮಕ್ಕಳಿದ್ದಾರೆ. ಒಬ್ಬ ಮಗ ಇಂಜಿನಿಯರ್ ಆಗಿದ್ದರೆ ಇನ್ನೊಬ್ಬ ಮಗ ನ್ಯಾಷನಲ್ ಜಿಯೋಗ್ರಾಫಿಕ್ ಚಾನೆಲ್ಲಿನಲ್ಲಿ ಉದ್ಯೋಗದಲ್ಲಿದಾರೆ. ತಮ್ಮ ಮಕ್ಕಳೊಂದಿಗೆ ಸಂತೃಪ್ತ ಜೀವನ ನಡೆಸುತ್ತಿರುವ ಜಯಲಕ್ಷ್ಮಿ ಆತ್ಮ ಸಂತೋಷಕ್ಕಾಗಿ ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಿಯುತ್ತಿದ್ದಾರೆ. ಮನಸ್ಸಿಗೆ ಒಪ್ಪುವ ಪಾತ್ರಗಳನ್ನು ಒಪ್ಪಿಕೊಂಡು ತಮ್ಮ ಅಭಿನಯ ಯಾತ್ರೆಯನ್ನು ಮುಂದುವರೆಸಿದ್ದಾರೆ[].

ಪ್ರಶಸ್ತಿ/ಪುರಸ್ಕಾರ

[ಬದಲಾಯಿಸಿ]

ಜಯಲಕ್ಷ್ಮಿ ಅಭಿನಯದ ಚಿತ್ರಗಳು

[ಬದಲಾಯಿಸಿ]
ವರ್ಷ ಚಿತ್ರ ಭಾಷೆ ಪಾತ್ರ ನಿರ್ದೇಶನ ಭೂಮಿಕೆ
೧೯೭೩ ಬೀಸಿದ ಬಲೆ ಕನ್ನಡ ಬಿ.ಎ.ಅರಸು ಕುಮಾರ್ ರಾಮ್ ಗೋಪಾಲ್
೧೯೭೩ ಸೀತೆಯಲ್ಲ ಸಾವಿತ್ರಿ ಕನ್ನಡ ವಾದಿರಾಜ್ ವಿಷ್ಣುವರ್ಧನ್, ಉದಯಚಂದ್ರಿಕಾ
೧೯೭೪ ಮಹಾತ್ಯಾಗ ಕನ್ನಡ ಮಾರುತಿ ಶಿವರಾಂ ಆರತಿ, ನಂದ ಕಿಶೋರ್
೧೯೭೫ ಕಳ್ಳ ಕುಳ್ಳ ಕನ್ನಡ ಕೆ.ಎಸ್.ಆರ್.ದಾಸ್ ವಿಷ್ಣುವರ್ಧನ್, ದ್ವಾರಕೀಶ್, ಭವಾನಿ
೧೯೭೫ ಜಾಗೃತಿ ಕನ್ನಡ ಬಿ.ಶ್ರೀಧರ್ ಉದಯಕುಮಾರ್, ವಿಜಯಕಲಾ, ಶೈಲಶ್ರೀ
೧೯೭೫ ದೇವರ ಕಣ್ಣು ಕನ್ನಡ ವೈ.ಆರ್.ಸ್ವಾಮಿ ಲೋಕೇಶ್, ಅನಂತ್ ನಾಗ್, ಅರತಿ
೧೯೭೬ ಬಯಲು ದಾರಿ ಕನ್ನಡ ದೊರೈ-ಭಗವಾನ್ ಕಲ್ಪನಾ, ಅನಂತ್ ನಾಗ್, ಅಶೋಕ್
೧೯೭೬ ಬೆಸುಗೆ ಕನ್ನಡ ಗೀತಪ್ರಿಯ ಶ್ರೀನಾಥ್, ಮಂಜುಳಾ
೧೯೭೬ ಸೂತ್ರದ ಗೊಂಬೆ ಕನ್ನಡ ಪೇಕೆಟಿ ಶಿವರಾಮ್ ಶ್ರೀನಾಥ್, ಮಂಜುಳಾ, ಚಂದ್ರಶೇಖರ್
೧೯೭೭ ಗೆದ್ದವಳು ನಾನೆ ಕನ್ನಡ ಆರೂರು ಪಟ್ಟಾಭಿ ಅಶೋಕ್, ಶ್ರೀವಿದ್ಯಾ
೧೯೭೭ ಶ್ರೀಮಂತನ ಮಗಳು ಕನ್ನಡ ಎ.ವಿ.ಶೇಷಗಿರಿ ರಾವ್ ವಿಷ್ಣುವರ್ಧನ್, ಜಯಂತಿ
೧೯೭೮ ಫೀನಿಕ್ಸ್ ಕನ್ನಡ ಉಗ್ರ ನರಸಿಂಹ ಇಂದ್ರಜಿತ್
೧೯೭೯ ಅಳಿಯ ದೇವರು ಕನ್ನಡ ಸಿ.ವಿ.ರಾಜೇಂದ್ರನ್ ಶ್ರೀನಾಥ್, ಮಂಜುಳಾ, ದ್ವಾರಕೀಶ್, ಕೆ.ವಿಜಯಾ, ಚಂದ್ರಶೇಖರ್
೧೯೭೯ ಸದಾನಂದ ಕನ್ನಡ ಅನಂತ್ ಹಿರೇಗೌಡರ್ ರಾಮಕೃಷ್ಣ

[]

ಉಲ್ಲೇಖಗಳು

[ಬದಲಾಯಿಸಿ]
  1. ೧.೦ ೧.೧ ೧.೨ ೧.೩ "ಬೀಸಿದ ಬಲೆಯಿಂದ ಹೊಸ ಅಲೆಗೆ..." ಪ್ರಜಾವಾಣಿ.
  2. "ಜಯಲಕ್ಷ್ಮಿ". ಚಿಲೋಕ.ಕಾಮ್.
  3. ೩.೦ ೩.೧ ೩.೨ "Jayalakshmi - Heroine for Heroes Mother to Their Sons!". ಸೂಪರ್ ಗುಡ್ ಮೂವಿಸ್. Archived from the original on 2012-11-27. Retrieved 2016-07-19.
  4. "ಜಯಲಕ್ಷ್ಮಿ ಅಭಿನಯದ ಕನ್ನಡ ಚಲನಚಿತ್ರಗಳ ಪಟ್ಟಿ". ಚಿಲೋಕ.ಕಾಮ್.