ವಿಷಯಕ್ಕೆ ಹೋಗು

ರಸಗೊಬ್ಬರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮಣ್ಣಿನ ಫಲವತ್ತತೆಯನ್ನು ಸುಧಾರಿಸಲು ಒಬ್ಬಳು ರೈತ ಮಹಿಳೆ ಗೊಬ್ಬರವನ್ನು ಹರಡುತ್ತಿದ್ದಾಳೆ

ರಸಗೊಬ್ಬರ ಎಂದರೆ ಕೃಷಿಕನಿಂದ ತನ್ನ ಹಿಡುವಳಿಯಲ್ಲಿ ಉತ್ಪಾದನೆ ಮಾಡಲು ಸಾಧ್ಯವಲ್ಲದ ಹಾಗೂ ಕಾರ್ಖಾನೆಗಳಲ್ಲಿ ಕೆಲವು ರಾಸಾಯನಿಕ ವಸ್ತುಗಳ ಬಳಕೆಯಿಂದ ತಯಾರುಮಾಡುವ ಗೊಬ್ಬರ.[] ಇವನ್ನು ಕೃತಕ ಗೊಬ್ಬರಗಳು ಅಥವಾ ರಾಸಾಯನಿಕ ಗೊಬ್ಬರಗಳು ಅಥವಾ ಸೀಮೆಗೊಬ್ಬರಗಳೆಂದೂ ಕರೆಯುವುದುಂಟು. ಬೆಳೆಗಳ ಬೆಳೆವಣಿಗೆಗೆ ಮತ್ತು ಪೋಷಣೆಗೆ ದೊಡ್ಡ ಪರಿಮಾಣದಲ್ಲಿ ಅತಿ ಅಗತ್ಯವೆನಿಸಿದ ಸಾರಜನಕ, ರಂಜಕ ಮತ್ತು ಪೊಟಾಷ್ ಎಂಬ ಪೋಷಕಗಳನ್ನು ರಸಗೊಬ್ಬರಗಳ ಬಳಕೆಯಿಂದ ಅವುಗಳಿಗೆ ಒದಗಿಸಬಹುದು.[] ಕೃತಕ ಗೊಬ್ಬರಗಳನ್ನು ಅವುಗಳಿಂದ ದೊರೆಯುವ ಮುಖ್ಯ ಪೋಷಕವನ್ನು ಅವಲಂಬಿಸಿ ಸಾರಜನಕ, ರಂಜಕ ಮತ್ತು ಪೊಟಾಷ್ ಗೊಬ್ಬರಗಳೆಂದು ವಿಂಗಡಿಸುತ್ತಾರೆ. ಸಾಮಾನ್ಯವಾಗಿ ಉಪಯೋಗದಲ್ಲಿರುವ ಕೃತಕ ಗೊಬ್ಬರಗಳು ಮತ್ತು ಅವುಗಳಿಂದ ಸಿಗುವ ಸಸ್ಯ ಪೋಷಕಗಳ ಸೇಕಡಾ ಪರಿಮಾಣಗಳನ್ನು ಕೆಳಗಿನ ಪಟ್ಟಿಯಲ್ಲಿ ಕೊಡಲಾಗಿದೆ.

ಕೃತಕ ಗೊಬ್ಬರಗಳು ಸಿಗುವ ಸೇಕಡಾ
ಸಾರಜನಕ ರಂಜಕ ಪೊಟಾಷ್
ಸಾರಜನಕ ಗೊಬ್ಬರಗಳು
1. ಅಮೋನಿಯಂ ಸಲ್ಫೇಟ್ 20.5 - -
2. ಯೂರಿಯಾ[] 44-46 - -
3. ಅಮೋನಿಯಂ ಸಲ್ಫೇಟ್ ನೈಟ್ರೇಟ್ 26 - -
4. ಕ್ಯಾಲ್ಸಿಯಂ ಅಮೋನಿಯಂ ನೈಟ್ರೇಟ್[] 20.05 - -
5. ಸೋಡಿಯಂ ನೈಟ್ರೇಟ್ 16 - -
ರಂಜಕ ಗೊಬ್ಬರಗಳು
1. ಸೂಪರ್‌ಫಾಸ್ಫೇಟ್ - 16 -
2. ಟ್ರಿಪಲ್ ಸೂಪರ್‌ಫಾಸ್ಫೇಟ್ - 48 -
3. (ಎ) ನೈಟ್ರೋಫಾಸ್ಫೇಟ್ 16 20 -
(ಬಿ) ನೈಟ್ರೋಫಾಸ್ಫೇಟ್ 20 20 -
4. ಬೇಸಿಕ್ ಸ್ಲ್ಯಾಗ್ - 16 -
5. ಡೈಅಮೋನಿಯಂ ಫಾಸ್ಫೇಟ್[] 18 46 -
6. ಅಮೋನಿಯಂ ಫಾಸ್ಫೇಟ್ 20 20
ಪೊಟಾಷ್ ಗೊಬ್ಬರಗಳು
1. ಪೊಟಾಸಿಯಂ ಕ್ಲೋರೈಡ್

(ಮ್ಯುರಿಯೇಟ್ ಆಫ್ ಪೊಟಾಷ್)[][][][]

- - 60
2. ಸಲ್ಫೇಟ್ ಆಫ್ ಪೊಟಾಷ್ - - 48

ಮಿಶ್ರಣ ಗೊಬ್ಬರ: ಸಾರಜನಕ, ರಂಜಕ ಮತ್ತು ಪೊಟಾಷ್ - ಈ ಪೋಷಕಗಳು ಗೊತ್ತುಮಾಡಿದ ಪ್ರಮಾಣದಲ್ಲಿರುವಂತೆ ಕೃತಕ ಗೊಬ್ಬರಗಳನ್ನು ಮತ್ತು ಸಾವಯವ ಗೊಬ್ಬರಗಳನ್ನು ಮಿಶ್ರಮಾಡಿ ತಯಾರಿಸಿದಂಥ ಗೊಬ್ಬರ (mixed fertilizer).

ಸಂಯುಕ್ತ ಗೊಬ್ಬರ: ಹರಳು ಹರಳುಗಳಾಗಿ ತಯಾರು ಮಾಡಿದ ಮಿಶ್ರಣಗೊಬ್ಬರ (complex fertilizer).

ರಸಗೊಬ್ಬರಗಳ ಪರಿಣಾಮಗಳು

[ಬದಲಾಯಿಸಿ]

ಸಾರಜನಕ ಗೊಬ್ಬರದ ಪರಿಣಾಮಗಳು ಮತ್ತು ತೊಂದರೆಗಳು[೧೦]

[ಬದಲಾಯಿಸಿ]
  1. ಬೆಳೆಗಳನ್ನು ಹಚ್ಚನೆ ಹಸಿರಾಗಿ ಬೆಳೆಯುವಂತೆ ಮಾಡುತ್ತವೆ.
  2. ಎಲೆಗಳು ಹೆಚ್ಚು ವಿಶಾಲವಾಗಿಯೂ, ದಂಟು ಅಥವಾ ಕಾಂಡ ಹೆಚ್ಚು ಉದ್ದವಾಗಿಯೂ ದಪ್ಪವಾಗಿಯೂ ಬೆಳೆಯುವುದಕ್ಕೆ ಉತ್ತೇಜಕವಾಗಿದೆ.
  3. ಬತ್ತ, ಗೋಧಿ, ರಾಗಿ ಮೊದಲಾದ ಬೆಳೆಗಳಲ್ಲಿ ಅಧಿಕ ಕವಲುಗಳು (ತೆಂಡೆಗಳು, ಪಿಳ್ಳೆಗಳು) ಬರುತ್ತವೆ.
  4. ತೆನೆಗಳ ಸಂಖ್ಯೆ ಜಾಸ್ತಿಯಾಗುವುದಕ್ಕೂ, ಅವುಗಳ ಗಾತ್ರ ದೊಡ್ಡದಾಗುವುದಕ್ಕೂ ಪ್ರಯೋಜನಕಾರಿ.
  5. ಕೆಲವು ಸಸ್ಯಗಳ ಫಸಲಿನಲ್ಲಿ ಸಸಾರಜನಕದ ಅಂಶವನ್ನು ಅಧಿಕಗೊಳಿಸುವ ಸಾಧ್ಯತೆ ಇದೆಯೆಂದು ತಿಳಿದುಬಂದಿದೆ.

ಅವಶ್ಯಕ್ಕಿಂತ ಅಧಿಕವಾದಲ್ಲಿ ಸಂಭವಿಸಬಹುದಾದ ತೊಂದರೆಗಳು:

  1. ಬತ್ತ, ರಾಗಿ, ಗೋದಿ ಮೊದಲಾದ ಬೆಳೆಗಳಲ್ಲಿ ಕಾಂಡಗಳು ಅತಿಶಯ ಎತ್ತರಕ್ಕೆ ಬೆಳೆದು ಹೊಲದಲ್ಲಿ ನೆಟ್ಟಗೆ ನಿಲ್ಲಲು ಅಶಕ್ತವಾಗಿ ಬಗ್ಗಿ ಬೀಳುತ್ತವೆ. ಬೇರುಗಳ ಬೆಳೆವಣಿಗೆ ಚೆನ್ನಾಗಿರುವುದಿಲ್ಲ.
  2. ಹೂ ಮತ್ತು ತೆನೆಗಳ ಉತ್ಪಾದನೆ ತಡವಾಗಿ, ಬೆಳೆ ಸಕಾಲದಲ್ಲಿ ಕೊಯ್ಲಿಗೆ ಬರುವುದಿಲ್ಲ.
  3. ಸಸ್ಯಗಳು ಹೆಚ್ಚು ಕೋಮಲವಾಗಿ ಬೆಳೆದು, ಕ್ರಿಮಿಕೀಟ, ರೋಗಗಳಿಗೆ ಅವಕಾಶ ನೀಡುತ್ತವೆ.
  4. ಅವುಗಳಲ್ಲಿ ಶುಷ್ಕತೆಯನ್ನು ಸಹಿಸುವ ಸಾಮರ್ಥ್ಯ ಕಡಿಮೆಯಾಗುವುದು ಕೂಡ ಗಮನಾರ್ಹವಾದ ವಿಷಯ.

ಹೀಗೆ ಉತ್ತಮ ಬೆಳೆ ಪಡೆಯುವುದಕ್ಕೆ ತೊಡಕು ಉಂಟಾಗುತ್ತದೆ.

ರಂಜಕ ಗೊಬ್ಬರದ ಪರಿಣಾಮಗಳು

[ಬದಲಾಯಿಸಿ]
  1. ಬೇರುಗಳ ಬೆಳೆವಣಿಗೆ ಹೆಚ್ಚುತ್ತದೆ.
  2. ಫಸಲು ಬೇಗನೆ ಕಟಾವಿಗೆ ಸಿದ್ಧವಾಗುವಂತೆ ಪರಿಣಾಮಕಾರಿ.
  3. ದ್ವಿದಳ ಧಾನ್ಯಗಳ ಬೆಳೆಗಳಿಗೆ (ತೊಗರಿ, ಹೆಸರು, ಉದ್ದು, ಕಡ್ಲೆ, ನೆಲಗಡಲೆ, ಅವರೆ, ಅಲಸಂದೆ, ಹುರುಳಿ, ಸೋಯಾಬೀನ್ಸ್, ಬಟಾಣಿ ಮೊದಲಾದವು) ವಿಶೇಷವಾಗಿ ಉಪಯುಕ್ತವಾದ ಪೋಷಕ.
  4. ಮೇವಿನ ಬೆಳೆಗಳಲ್ಲಿ ಸಸಾರಜನಕದ ಅಂಶ ಮತ್ತು ಲವಣಗಳ ಪರಿಮಾಣ ಹೆಚ್ಚುವಂತೆ ಉಪಯುಕ್ತವಾಗಿದೆ.
  5. ಸಾರಜನಕ ಅಧಿಕವಾದುದರಿಂದ ಉಂಟಾಗಬಹುದಾದ ದುಷ್ಪರಿಣಾಮಗಳನ್ನು ಕಡಿಮೆಮಾಡಲು ರಂಜಕ ಪ್ರಯೋಜನಕಾರಿಯಾಗಬಹುದು.
  6. ಹೂ, ಬೀಜ ಮತ್ತು ಫಲಗಳ ಉತ್ಪಾದನೆಗೆ ಅನುಕೂಲ.
  7. ಒಣಹವೆಯನ್ನು ಸಹಿಸುವ ಸಾಮರ್ಥ್ಯ ಬೆಳೆಗಳಿಗೆ ಬರುತ್ತದೆ.
  8. ವಿಶೇಷ ಚಳಿ ಬಾಧಕವಾಗದಂತೆ ಸಹಾಯಕ.

ರಂಜಕ ಜಾಸ್ತಿಯಾದಲ್ಲಿ ಬೆಳೆ ಬಹಳ ಬೇಗನೆ ಕೊಯ್ಲಿಗೆ ತಯಾರಾಗಿ ಫಸಲು ಕಡಿಮೆಯಾಗುವ ಸಂಭವವಿದೆ.

ಪೊಟಾಷ್ ಗೊಬ್ಬರದ ಪರಿಣಾಮಗಳು

[ಬದಲಾಯಿಸಿ]
  1. ಬೆಳೆಗಳು ಹೆಚ್ಚು ಬಿರುಸಾಗಿ ಬೆಳೆಯುತ್ತವೆ. ಅಂದರೆ ಅನನುಕೂಲ ವಾತಾವರಣವನ್ನು ಎದುರಿಸಿ ಬೆಳೆಯುವುದಕ್ಕೆ ಸಮರ್ಥವಾಗುತ್ತವೆ.
  2. ಕೆಲವು ರೋಗಗಳನ್ನು ನಿರೋಧಿಸುವುದಕ್ಕೆ ಉಪಯುಕ್ತ.
  3. ಆಹಾರಾಂಶಗಳು ಎಲೆಗಳಿಂದ ಬೇರುಗಳವರೆಗೆ ಚಲಿಸುವುದಕ್ಕೆ ಸಹಾಯಕ.
  4. ದಂಟು ಅಥವಾ ಕಾಂಡ ಹೆಚ್ಚು ಸಾಮರ್ಥ್ಯಯುತವಾಗಿ ಬೆಳೆಯುತ್ತದೆ.
  5. ಒಣ ಹವೆಯಲ್ಲಿ ಬೆಳೆದು ಸಸ್ಯಗಳು ಅಷ್ಟೊಂದು ಕಂಗಾಲಾಗದಂತೆ ನೋಡಿಕೊಳ್ಳುವುದಕ್ಕೆ ಪ್ರಯೋಜನಕಾರಿ.
  6. ತರಕಾರಿ ಮತ್ತು ಹಣ್ಣುಗಳು ಬೇಗನೆ ಹಾಳಾಗಿ ಹೋಗದ ಹಾಗೆ ದಾಸ್ತಾನು ಮಾಡುವುದಕ್ಕೆ ಇದರಿಂದ ಉಪಯೋಗವಿದೆ.

ಪೊಟಾಷ್ ಅತಿಶಯವಾದಲ್ಲಿ ಇತರ ಪೋಷಕಗಳನ್ನು ಬೆಳೆ ಹೀರುವುದಕ್ಕೆ ಆತಂಕ ಉಂಟಾಗಿ ಒಳ್ಳೆ ಇಳುವರಿ ಸಿಗಲು ಅನನುಕೂಲವಾಗಬಹುದು. ಸಾರಜನಕ, ರಂಜಕ, ಪೊಟಾಷ್ ಇವುಗಳಲ್ಲಿ ಯಾವುದಾದರೊಂದು ಕಡಿಮೆಯಾದಲ್ಲಿ ಬೆಳೆಯ ಬೆಳೆವಣಿಗೆ ಕುಂಠಿತವಾಗುತ್ತದೆ. ಪರಿಣಾಮವಾಗಿ ಫಸಲು ಕಡಿಮೆಯಾಗುತ್ತದೆ. ಸಾರಜನಕ ಸಾಕಷ್ಟು ಇಲ್ಲದಿದ್ದರೆ ಎಲೆಗಳ ಸ್ವಾಭಾವಿಕವಾದ ಹಸಿರು ಬಣ್ಣ ಬದಲಾಗುವುದು. ಅವು ನಸು ಹಸಿರು ಇಲ್ಲವೇ ಹಳದಿ ಬಣ್ಣಕ್ಕೆ ತಿರುಗುತ್ತವೆ. ರಂಜಕದ ಅಭಾವದ ಪರಿಣಾಮವಾಗಿ ಬೇರುಗಳ ಬೆಳೆವಣಿಗೆ ಕುಗ್ಗುತ್ತದೆ. ಪೊಟಾಷಿನ ಕೊರತೆಯಿಂದ ಎಲೆಗಳ ತುದಿ ಮತ್ತು ಅಂಚು ಒಣಗುತ್ತದೆ.

ಕೃತಕ ಗೊಬ್ಬರಗಳಿಂದ ಅಧಿಕ ಇಳುವರಿ ಗಳಿಸುವ ಸಲುವಾಗಿ ಗಣನೆಗೆ ತೆಗೆದುಕೊಳ್ಳಬೇಕಾದ ಮುಖ್ಯ ವಿಚಾರಗಳು

[ಬದಲಾಯಿಸಿ]
  1. ನೀರಾವರಿ - ಕೃತಕ ಗೊಬ್ಬರಗಳನ್ನು ನೀರಾವರಿ ಬೆಳೆಗೆ (irrigated crop) ಹಾಕಿದಲ್ಲಿ ಸಿಕ್ಕುವಷ್ಟು ಹೆಚ್ಚಿಗೆ ಫಸಲು ಖುಷ್ಕಿ ಬೆಳೆಗಳಿಗೆ (dryland crop) ಇವನ್ನು ಹಾಕಿದರೆ ಸಿಕ್ಕಲಾರದು. ರಾಸಾಯನಿಕ ಗೊಬ್ಬರಗಳಿಂದ ಹೆಚ್ಚು ಫಸಲು ಪಡೆಯುವುದಕ್ಕೆ ನೀರಾವರಿ ಅನುಕೂಲ. ಮಳೆ ಆಶ್ರಯದಿಂದ ಬೆಳೆಯುವ ಬೆಳೆಗಳಿಗೆ ಹೊಲದಲ್ಲಿ ಸಾಕಷ್ಟು ತೇವವಿರುವಾಗ ಮಾತ್ರ ಕೃತಕ ಗೊಬ್ಬರಗಳನ್ನು ಬಳಸಬೇಕು. ರಾಸಾಯನಿಕ ಗೊಬ್ಬರಗಳನ್ನು ಉಪಯೋಗಿಸಿದಲ್ಲಿ ಹುಳ ಹುಪ್ಪಟೆ  ಹಾಗೂ ರೋಗಗಳ ಹಾವಳಿ ಹೆಚ್ಚುವ ಸಂಭವವಿದೆ. ಆದ್ದರಿಂದ ಇವುಗಳ ನಿವಾರಣೆಗೆ ತಕ್ಕ ಬೆಳೆ ಸಂರಕ್ಷಣೆಯ ಕ್ರಮಗಳನ್ನು ಅನುಸರಿಸುವುದು ಅಗತ್ಯ.
  2. ನೀರಿನ ಉಸ್ತುವಾರಿ ಕೂಡ ಚೆನ್ನಾಗಿರಬೇಕು. ಜಾಸ್ತಿಯಾದ ನೀರು ಹರಿದು ಹೋಗುವಂತೆ ಯೋಗ್ಯ ಬಸಿ ಕಾಲುವೆಗಳಿರಬೇಕು. ನೀರಿನ ವಿತರಣೆ ಸಮಾನವಾಗಿರುವಂತೆ ಮತ್ತು ಮಣ್ಣಿನ ಸವಕಳಿಯಾಗದಂತೆ ವ್ಯವಸ್ಥೆ ಅಗತ್ಯ.
  3. ಬೆಳೆಯುವಂಥ ಬೆಳೆಯನ್ನು ಹೊಂದಿಕೊಂಡು ಕೃತಕ ಗೊಬ್ಬರಗಳ ಪರಿಮಾಣವನ್ನು ಹೆಚ್ಚುಕಡಿಮೆ ಮಾಡಬೇಕಾಗುತ್ತದೆ. ಬೆಳೆ ಮಾತ್ರವಲ್ಲದೆ ಬೆಳೆಯ ತಳಿ ಕೂಡ ಗಮನಿಸಬೇಕಾದ ಅಂಶ. ಐ.ಆರ್.8, ಜಯಾ ಮೊದಲಾದ ಅಧಿಕೋತ್ಪಾದನೆಯ ತಳಿಗಳಿಗೆ ಸ್ಥಳೀಯ ತಳಿಗಳಿಗಿಂತ ದೊಡ್ಡ ಪರಿಮಾಣದಲ್ಲಿ ಸಾರಜನಕದ ಅವಶ್ಯಕತೆ ಇದೆ.
  4. ಗೊಬ್ಬರದ ಜಾತಿ: ಆಯಾ ಗೊಬ್ಬರದಲ್ಲಿರುವ ಮುಖ್ಯ ಪೋಷಕದ ಸೇಕಡಾ ಅಂಶವನ್ನು ಅವಲಂಬಿಸಿ ಬೆಳೆಗೆ ಕೊಡಬೇಕಾದ ಗೊಬ್ಬರದ ಪರಿಮಾಣವನ್ನು ನಿಶ್ಚಯಿಸಬೇಕು. ಉದಾಹರಣೆಗೆ ಬತ್ತದ ಬೆಳೆ ತೆಗೆದುಕೊಳ್ಳೋಣ. ಎಕರೆಗೆ 20 ಕೆ.ಜಿ ಸಾರಜನಕ ಕೊಡಬೇಕಾದಲ್ಲಿ ಅಮೋನಿಯಂ ಸಲ್ಫೇಟ್ ಗೊಬ್ಬರವನ್ನು ಒಂದು ಕ್ವಿಂಟಾಲ್ ಹಾಕಬೇಕು. ಯೂರಿಯ ಗೊಬ್ಬರವಾದರೆ 44 ಕೆ.ಜಿ ಉಪಯೋಗಿಸಿದರೆ ಸಾಕು.
  5. ಮಣ್ಣಿನ ಸ್ವಭಾವ: ಒಂದು ಸ್ಥಳದ ಮಣ್ಣು ಇನ್ನೊಂದು ಸ್ಥಳದ ಮಣ್ಣಿನಂತೆ ಇರುವುದಿಲ್ಲ. ಹೊಲದಿಂದ ಹೊಲಕ್ಕೆ ಮಣ್ಣಿನಲ್ಲಿ ವ್ಯತ್ಯಾಸವಿರಬಹುದು. ಮಣ್ಣಿನ ರಾಸಾಯನಿಕ ಪ್ರತಿಕ್ರಿಯೆ, ಫಲವಂತಿಕೆ ಮುಂತಾದ ವಿವರಗಳನ್ನು ತಿಳಿದು ರಸಗೊಬ್ಬರಗಳನ್ನು ಮಣ್ಣಿನ ವೈಶಿಷ್ಟ್ಯಕ್ಕೆ ಅನುಗುಣವಾಗಿ ಬಳಸುವುದು ಉತ್ತಮ. ಇದರ ಸಲುವಾಗಿ ಪ್ರತಿ 4 ವರ್ಷಕ್ಕೊಂದು ಸರ್ತಿ ಮಣ್ಣಿನ ಮಾದರಿಯನ್ನು ಕ್ರಮಬದ್ಧವಾಗಿ ಪರೀಕ್ಷಾಲಯದಲ್ಲಿ ಪರೀಕ್ಷೆ ಮಾಡಿಸಿ ತಿಳಿವಳಿಕೆ ಪಡೆಯುವುದು ಲಾಭಕರ.
  6. ಕೃತಕ ಗೊಬ್ಬರಗಳನ್ನು ಬೆಳೆಗಳಿಗೆ ನೀಡುವ ವಿಧಾನಗಳು ಹಲವಾರು ಇವೆ. ಸಮವಾಗಿ ವಿತರಣೆಯಾಗುವ ಹಾಗೆ ಚೆಲ್ಲುವುದು, ಕೂರಿಗೆಯಿಂದ ಹಾಕುವುದು, ನೇಗಿಲಿನ ಸಾಲಿನಲ್ಲಿ ಬೀಳಿಸುತ್ತ ಹೋಗುವುದು, ಕೃತಕ ಗೊಬ್ಬರಗಳನ್ನು ಸೇರಿಸಿದ ಸಗಣಿಗೊಬ್ಬರದ ದ್ರಾವಣ ತಯಾರಿಸಿ ಬೇರುಗಳನ್ನು ಅದ್ದುವುದು, ಉಂಡೆಗಳನ್ನು ತಯಾರಿಸಿ ಉಪಯೋಗಿಸುವುದು, ಸಾಲುಗಳ ಮಗ್ಗುಲಲ್ಲಿ ಪಟ್ಟೆಯ ರೂಪದಲ್ಲಿ ಹಾಕುವುದು, ತೆಳುವಾದ ದ್ರಾವಣ ತಯಾರಿಸಿ ಸಿಂಪಡಣೆ ಮಾಡುವುದು, ಗಿಡಗಳ ಸುತ್ತಲೂ ವೃತ್ತಾಕಾರದಲ್ಲಿ ಹಾಕುವುದು, ಇತ್ಯಾದಿ ಉತ್ತಮ ಕ್ರಮದಲ್ಲಿ ಗೊಬ್ಬರವನ್ನು ಉಪಯೋಗಿಸುವುದು ಅಗತ್ಯ.
  7. ಬೆಳೆಯ ಯೋಗ್ಯ ಹಂತದಲ್ಲಿ ಕೃತಕ ಗೊಬ್ಬರವನ್ನು ಕೊಡುವುದು ಬಹಳ ಮುಖ್ಯ. ತಕ್ಕ ಸಮಯದಲ್ಲಿ ಕೊಡುವ ಬದಲು ಇತರ ವೇಳೆಯಲ್ಲಿ ಗೊಬ್ಬರ ಬಳಸಿದರೆ ಅಷ್ಟು ಉತ್ತಮ ಪ್ರತಿಫಲ ಸಿಗಲಾರದು.
  8. ರಾಸಾಯನಿಕ ಗೊಬ್ಬರಗಳ ಜೋಡಣೆ: ಯಾವುದೇ ಒಂದು ಬೆಳೆಗೆ ನಿಗದಿಮಾಡಿರುವ ರಾಸಾಯನಿಕ ಗೊಬ್ಬರಗಳನ್ನು ಪ್ರತ್ಯೇಕ ಪ್ರತ್ಯೇಕವಾಗಿ ಬೇರೆ ಬೇರೆ ಹೊಲಕ್ಕೆ ಹಾಕಿದಲ್ಲಿ ದೊರೆಯುವ ಇಳುವರಿ ಅವನ್ನು ಒಟ್ಟಾಗಿ ಜೋಡಣೆ ಮಾಡಿ ನೀಡಿದಾಗ ಸಿಗುವ ಉತ್ಪಾದನೆಗಿಂತ ಭಿನ್ನವಾಗುವುದುಂಟು. ಕೆಲವು ವೇಳೆ ಜೋಡಣೆ ಹೆಚ್ಚು ಲಾಭಕರ. ಇನ್ನು ಕೆಲವು ಸಂದರ್ಭದಲ್ಲಿ ನಷ್ಟದಾಯಕವಾಗುವ ಸಂಭವವಿದೆ. ಲಾಭವೂ ಇಲ್ಲ ನಷ್ಟವೂ ಇಲ್ಲದ ಪ್ರಸಂಗ ಕೂಡ ಉದ್ಭವಿಸಬಹುದು.
  9. ಇತರ ಅಂಶಗಳು: ಹವೆ, ಬೀಜದ ಪ್ರಮಾಣ, ಸಾಲಿಂದ ಸಾಲಿಗೆ ಮತ್ತು ಬೀಜದಿಂದ ಬೀಜಕ್ಕೆ ಇರುವ ಅಂತರ ಕಳೆಗಳ ನಿವಾರಣೆ, ಬೆಳೆ ಪರಿವರ್ತನೆ (crop conversion) ಮತ್ತು ಇತರ ವ್ಯವಸಾಯ ಕ್ರಮಗಳು ಕೂಡ ಕೃತಕ ಗೊಬ್ಬರಗಳಿಂದ ಸಿಗುವ ಪ್ರತಿಫಲದ ಪರಿಮಾಣವನ್ನು ನಿಶ್ಚಯಿಸುತ್ತವೆ.

ಕೃತಕ ಗೊಬ್ಬರ ಕೈಗಾರಿಕೆ

[ಬದಲಾಯಿಸಿ]

ಕೃತಕ ಗೊಬ್ಬರಗಳ ರಸಾಯನ ವೃತ್ತಾಂತವನ್ನು (ಕೆಮಿಸ್ಟ್ರಿ) ಇಲ್ಲಿ ಚರ್ಚಿಸಿದೆ. ಗಿಡ, ಪೈರುಗಳಿಗೆ ಅಗತ್ಯವಾದ ಮೂಲಧಾತುಗಳಲ್ಲಿ ಸಾರಜನಕ, ಪೊಟಾಸಿಯಂ, ರಂಜಕ ಮತ್ತು ಕ್ಯಾಲ್ಸಿಯಂಗಳು ಮುಖ್ಯವಾದವು. ಸಾರಜನಕವನ್ನು ಅಮೋನಿಯಂ ಸಲ್ಫೇಟ್, ಯೂರಿಯ, ಸೋಡಿಯಂ ನೈಟ್ರೇಟ್, ಪೊಟಾಸಿಯಂ ನೈಟ್ರೇಟ್, ಅಮೋನಿಯಂ ಫಾಸ್ಫೇಟ್ ಮೊದಲಾದ ಲವಣಗಳಿಂದ ಪೂರೈಸಬಹುದು. ರಂಜಕವನ್ನು ಪೂರೈಸಲು ಸೂಪರ್‌ಫಾಸ್ಫೇಟ್‌ಗಳು ಮತ್ತು ಅಮೋನಿಯಂ ಫಾಸ್ಫೇಟ್ ಲವಣಗಳನ್ನು ಉಪಯೋಗಿಸುತ್ತಾರೆ. ಪೊಟ್ಯಾಶಿಯಮ್‍ನ್ನು ಪೂರೈಸಲು ಪೊಟಾಸಿಯಂ ಸಲ್ಫೇಟನ್ನು ಉಪಯೋಗಿಸಬಹುದು. ಕ್ಯಾಲ್ಸಿಯಂ ಪೂರೈಕೆಯನ್ನು ಸುಣ್ಣದಿಂದ ಪಡೆಯಬಹುದು. ಆದರೆ ಕ್ಯಾಲ್ಸಿಯಂ ಫಾಸ್ಫೇಟ್ ಅದಕ್ಕಿಂತ ಉತ್ತಮ. ಸೂಪರ್‌ಫಾಸ್ಫೇಟ್‌ಗಳಲ್ಲೂ ಸಾಕಷ್ಟು ಕ್ಯಾಲ್ಸಿಯಂ ಇರುತ್ತದೆ. ಮೇಲೆ ಹೇಳಿದ ಧಾತುಗಳಲ್ಲದೆ ಇತರ ಅಲ್ಪ ಪರಿಮಾಣದಲ್ಲಿ ಬೇಕಾಗಿರುವ ಮೆಗ್ನೀಸಿಯಮ್, ತಾಮ್ರ, ಸತು, ಮ್ಯಾಂಗನೀಸ್, ಕಬ್ಬಿಣ, ಬೋರಾನ್, ಮಾಲೆಬ್ಡಿನಂ, ಸೋಡಿಯಂ, ಸಿಲಿಕಾನ್, ಅಲ್ಯೂಮಿನಿಯಂಗಳನ್ನೂ ಭೂಮಿಯಲ್ಲಿ ಸಾಕಷ್ಟು ಇಲ್ಲದಿದ್ದರೆ ನೀರಿನಲ್ಲಿ ಕರಗಬಲ್ಲ ಇವುಗಳ ಲವಣಗಳನ್ನೂ ಅಲ್ಪ ಪರಿಮಾಣದಲ್ಲಿ ಇತರ ಮುಖ್ಯ ಗೊಬ್ಬರಗಳ ಲವಣಗಳೊಡನೆ ಬೆರೆಸಲಾಗುತ್ತದೆ. ಅಲ್ಪ ಅಂಶದಲ್ಲಿ ಬೇಕಾಗಿರುವ ಲವಣಗಳ ತಯಾರಿಕೆಗಳನ್ನು ಕೃತಕ ಗೊಬ್ಬರ ಉದ್ಯಮವೆಂದು ಪರಿಗಣಿಸಲಾಗುವುದಿಲ್ಲವಾದ್ದರಿಂದ ಅವನ್ನು ಇಲ್ಲಿ ಪರಿಶೀಲಿಸಿಲ್ಲ. ಸಾರಜನಕ, ರಂಜಕ, ಪೊಟಾಸಿಯಂಗಳನ್ನು ಪೂರೈಸುವ ಮುಖ್ಯ ಲವಣಗಳ ಕೈಗಾರಿಕೆಗಳನ್ನು ಇಲ್ಲಿ ವಿವರಿಸಲಾಗಿದೆ.

ಸಾರಜನಕ ಗೊಬ್ಬರಗಳಾದ ಯೂರಿಯ, ಅಮೋನಿಯಂ ನೈಟ್ರೇಟ್, ಅಮೋನಿಯಂ ಸಲ್ಫೇಟ್ ಮತ್ತು ಅಮೋನಿಯಂ ಫಾಸ್ಫೇಟ್‌ಗಳೆಲ್ಲದರ ತಯಾರಿಕೆಗೂ ಅಗತ್ಯವಾದದ್ದು ಅಮೋನಿಯಂ ಸಲ್ಫೇಟ್ ಮತ್ತು ಪೊಟಾಸಿಯಂ ಸಲ್ಫೇಟ್‌ಗಳ ತಯಾರಿಕೆಗೆ ಸಲ್ಫ್ಯೂರಿಕ್ ಆಮ್ಲ ಅಗತ್ಯ. ಹಾಗೆಯೇ ಫಾಸ್ಫಾರಿಕ್ ಆಮ್ಲವೂ ಒಂದು ಅವಶ್ಯಕ ರಾಸಾಯನಿಕ.

ಸಾರಜನಕ ಗೊಬ್ಬರಗಳು

[ಬದಲಾಯಿಸಿ]

ಅಮೋನಿಯಂ ಸಲ್ಫೇಟ್ [(NH4)2SO4]: ಕಲ್ಲಿದ್ದಲಿನ ಬಟ್ಟಿಯಿಳಿಸುವಿಕೆಯ ಉದ್ಯಮದಲ್ಲಿ ಸಹೋತ್ಪನ್ನವಾದ ಅಮೋನಿಯವನ್ನು ಇತರ ಅನಿಲಗಳಿಂದ ಬೇರ್ಪಡಿಸಲು ಅನಿಲ ಮಿಶ್ರಣವನ್ನು ಸಲ್ಫ್ಯೂರಿಕ್ ಆಮ್ಲದ 10% ದ್ರಾವಣದಲ್ಲಿ ಹಾಯಿಸಲಾಗುತ್ತದೆ. ಆಗ ಅಮೋನಿಯಂ ಸಲ್ಫೇಟ್ ಲವಣದ ಉತ್ಪನ್ನ ಇಲ್ಲಿ ತೋರಿಸಿರುವ ಸಮೀಕರಣಕ್ಕೆ ಅನುಗುಣವಾಗಿ ಆಗುತ್ತದೆ.

2NH3 + H2SO4 → (NH4)2SO4

ಹರಳುಗಳಾಗಿ ಬೇರ್ಪಡುವ ಲವಣವನ್ನು ಅನಂತರ ದ್ರಾವಣದಿಂದ ಬೇರ್ಪಡಿಸಲಾಗುತ್ತದೆ. ಮತ್ತೊಂದು ಹೆಚ್ಚು ಬಳಕೆಯಲ್ಲಿರುವ ವಿಧಾನದಲ್ಲಿ ಕಲ್ಲಿದ್ದಲಿನ ಉದ್ಯಮದಿಂದ ಪಡೆದ ಅಮೋನಿಯಂ ಕಾರ್ಬೊನೇಟ್ ಲವಣದ ದ್ರಾವಣವನ್ನು ಜಿಪ್ಸಂ (ಕ್ಯಾಲ್ಸಿಯಂ ಸಲ್ಫೇಟ್) ಅದುರಿನೊಡನೆ ವರ್ತಿಸುವಂತೆ ಮಾಡಿದಾಗ ಅಮೋನಿಯಂ ಸಲ್ಫೇಟ್ ದೊರೆಯುತ್ತದೆ.

(NH4)2CO3 + CaSO4.2H2O → (NH4)2SO4 + CaCO3 + 2H2O

ಸಿಂದ್ರಿಯಲ್ಲಿರುವ ರಾಸಾಯನಿಕ ಗೊಬ್ಬರ ಕಾರ್ಖಾನೆಯಲ್ಲಿ ಈ ವಿಧಾನವನ್ನು ಬಳಸಲಾಗುತ್ತಿತ್ತು.

ಅಮೋನಿಯಂ ನೈಟ್ರೇಟ್ (NH4NO3): ನೈಟ್ರಿಕ್ ಆಮ್ಲದೊಡನೆ ಅಮೋನಿಯ ವರ್ತಿಸಿದಾಗ ಕೆಳಗೆ ತೋರಿಸಿರುವಂತೆ ನೈಟ್ರೇಟ್ ದೊರೆಯುತ್ತದೆ.[೧೧]

HNO3 + NH3 → NH4NO3

ಉಷ್ಣ ಹೀರುವ ಈ ಕ್ರಿಯೆಗೆ ಉಷ್ಣದ ಪೂರೈಕೆ ಅಗತ್ಯ. ಬಹು ಬಳಕೆಯಲ್ಲಿರುವ ಸ್ಟೆಂಗೆಲ್ ವಿಧಾನದಲ್ಲಿ ಬಿಸಿ ಅಮೋನಿಯ ಮತ್ತು ಬಿಸಿ ನೈಟ್ರಿಕ್ ಆಮ್ಲಗಳೆರಡೂ ಕ್ರಿಯಾಪಾತ್ರೆಯೊಂದಲ್ಲಿ ಬೆರೆತಾಗ ಉತ್ಪತ್ತಿಯಾಗುವ ನೀರು ಆವಿಯಾಗಿ ಹೊರ ಹೋಗುತ್ತದೆ. ಉಷ್ಣದಿಂದ ಕರಗಿ ದ್ರವರೂಪದಲ್ಲಿರುವ ಅಮೋನಿಯಂ ನೈಟ್ರೇಟ್ ಮತ್ತೊಂದು ಕೊಳವೆಯಾಕಾರದ ಪಾತ್ರೆಯೊಳಕ್ಕೆ ಮೇಲಿನಿಂದ ಬೀಳುವಾಗ ಕೆಳಗಿನಿಂದ ತಂಗಾಳಿಯನ್ನು ಹಾಯಿಸುವುದರಿಂದ ಅಮೋನಿಯಂ ನೈಟ್ರೇಟ್ ಘನೀಕರಿಸಿ ಹರಳು ಹರಳುಗಳಾಗಿ ಕೆಳಕ್ಕೆ ಬೀಳುತ್ತದೆ. ಈ ಹರಳುಗಳನ್ನು ಜರಡಿ ಹಿಡಿದು ಸಮಗಾತ್ರದವುಗಳನ್ನು ಬೇರ್ಪಡಿಸಿ ಅವು ಆರ್ದ್ರತೆಯನ್ನು ಆಕರ್ಷಿಸದಂತೆ ಆರ್ದ್ರತಾವಿಕರ್ಷಕವೊಂದರ ಹೊದಿಕೆಯನ್ನು ನೀಡಲಾಗುತ್ತದೆ. ದೊಡ್ಡ ಹರಳುಗಳನ್ನು ಪುನಃ ಸಂಸ್ಕರಿಸಲಾಗುತ್ತದೆ.

ಯೂರಿಯ (CO(NH2)2): ಪ್ರತಿವರ್ಷವೂ ಭಾರತದಲ್ಲಿ ಸುಮಾರು ಇಪ್ಪತ್ತು ಲಕ್ಷ ಟನ್ ಪರಿಮಾಣದಲ್ಲಿ ಬಳಸಲಾಗುತ್ತಿರುವ ಈ ಗೊಬ್ಬರವು ಸಾರಜನಕ ಗೊಬ್ಬರಗಳಲ್ಲಿ ಬಹು ಮುಖ್ಯವಾದದ್ದು. ಅಮೋನಿಯ ಮತ್ತು ಇಂಗಾಲದ ಡೈ ಆಕ್ಸೈಡ್‌ಗಳಿಂದ ತಯಾರಾಗುವ ರಾಸಾಯನಿಕದ ಉತ್ಪಾದನೆಯಲ್ಲಿ ನಡೆಯುವ ಕ್ರಿಯೆಗಳನ್ನು ಮುಂದಿನ ಸಮೀಕರಣಗಳಲ್ಲಿ ತೋರಿಸಲಾಗಿದೆ.[೧೨]

CO2 + 2NH3 ↔ NH4COONH2
           ಅಮೋನಿಯಂ ಕಾರ್ಬಮೇಟ್
NH4COONH2 ↔ NH2CONH2 + H2O

ಮೊದಲ ಕ್ರಿಯೆಯನ್ನು ಸಂಪೂರ್ಣವಾಗಿ ಸಾಧಿಸಬಹುದಾದರೂ ಎರಡನೆಯ ಕ್ರಿಯೆಯಲ್ಲಿ 40%-60% ಅಮೋನಿಯಂ ಕಾರ್ಬಮೇಟ್ ಮಾತ್ರ ಯೂರಿಯವಾಗಿ ಪರಿವರ್ತನೆಯಾಗುತ್ತದೆ. ಪರಿವರ್ತನೆಗೊಳ್ಳದೆ ಉಳಿದ ಕಾರ್ಬಮೇಟನ್ನು ಪುನಃ ವಿಭಜಿಸಿ ವಿಭಜನೆಗೆ ಒಳಗು ಮಾಡಬೇಕಾಗುತ್ತದೆ.

ದ್ರವರೂಪದಲ್ಲಿರುವ ಅಮೋನಿಯ (3.5 ಅಣುಪ್ರಮಾಣ-ಮೋಲಾರ್ ರೇಷಿಯೋ) ಮತ್ತು ಇಂಗಾಲದ ಡೈಆಕ್ಸೈಡ್‌ಗಳ (1.0 ಅಣುಪ್ರಮಾಣ) ಮಿಶ್ರಣವನ್ನು ಸುಮಾರು 2000ಸೆಂ. ಉಷ್ಣತೆಯಲ್ಲಿ ಮತ್ತು 3200 ಪೌಂ./ಚ. ಇಂಚ್‌ನಲ್ಲಿ (ಪಿ.ಎಸ್.ಐ ಒತ್ತಡದಲ್ಲಿ) ಸ್ಟೇನ್‌ಲೆಸ್ ಸ್ಟೀಲ್ ಒತ್ತಡ ಕ್ರಿಯಾಪಾತ್ರೆಯೊಂದಕ್ಕೆ ತುಂಬಲಾಗುತ್ತದೆ. ಕ್ರಿಯೆಗೆ ಸ್ವಲ್ಪವಾದರೂ ನೀರಿನ ಅವಶ್ಯಕತೆ ಇರುವುದರಿಂದ ಅಪರಿವರ್ತಿತ ಕಾರ್ಬಮೇಟ್ ದ್ರಾವಣವನ್ನೂ ಸೇರಿಸಿ ಒಟ್ಟು ಮಿಶ್ರಣವನ್ನು ಕ್ರಿಯೆಗೆ ಒಳಗು ಮಾಡಲಾಗುತ್ತದೆ. ಈ ಮೊದಲ ಮಟ್ಟದಲ್ಲಿ ಇಂಗಾಲದ ಡೈ ಆಕ್ಸೈಡ್ 60% ರಷ್ಟು ಯೂರಿಯವಾಗಿ ಪರಿವರ್ತಿತವಾಗುತ್ತದೆ.  ದ್ರವರೂಪದಲ್ಲಿರುವ ಮಿಶ್ರಣವನ್ನು ಕ್ರಿಯಾಪಾತ್ರೆಯಿಂದ ಮೊದಲನೆಯ ವಿಭಾಜಕಕ್ಕೆ (ಡೀಕಂಪೋಸರ್) ಸಾಗಿಸಲಾಗುತ್ತದೆ. ಇಲ್ಲಿ 300 ಪಿ.ಎಸ್.ಐ ಒತ್ತಡದಲ್ಲಿ ಆವಿಯ ಬಿಸಿಯಿಂದ ಕಾರ್ಬಮೇಟ್ ಬಹುಮಟ್ಟಿಗೆ ಯೂರಿಯವಾಗಿ ಪರಿವರ್ತಿತವಾಗುತ್ತದೆ. ಪರಿವರ್ತನೆಗೊಳ್ಳದೆ ಉಳಿದುದರಲ್ಲಿ ಬಹುಪಾಲು ಇಂಗಾಲದ ಡೈ ಆಕ್ಸೈಡ್ ಮತ್ತು ಅಮೋನಿಯವಾಗಿ ವಿಭಜನೆಗೊಳ್ಳುತ್ತದೆ. ಈ ಅನಿಲಗಳನ್ನು ಹೊರತೆಗೆದು ಪುನಃ ಉಪಯೋಗಿಸಲಾಗುತ್ತದೆ. ಮೊದಲ ವಿಭಾಜಕದಿಂದ ಯೂರಿಯ ದ್ರಾವಣವು ಎರಡನೆಯ ವಿಭಾಜಕಕ್ಕೆ ಹರಿಯುತ್ತದೆ. ಇಲ್ಲಿ ದ್ರಾವಣದಲ್ಲಿ ಕರಗಿ ಉಳಿದಿರುವ ಅಮೋನಿಯ ಮತ್ತು ಇಂಗಾಲದ ಡೈಆಕ್ಸೈಡ್‌ಗಳು ಹೊರಬೀಳುತ್ತವೆ. ದ್ರಾವಣದಿಂದ ಅನಿಲಗಳನ್ನು ಬೇರ್ಪಡಿಸಲು ಬಿಸಿ ಆವಿಯನ್ನು ದ್ರಾವಣದ ಮೂಲಕ ಹಾಯಿಸಲಾಗುತ್ತದೆ. ಹೊರಬಂದ ಅನಿಲಗಳನ್ನು ಬೇರ್ಪಡಿಸಿ ಪುನಃ ಅಮೋನಿಯ ಕಾರ್ಬಮೇಟ್ ಆಗಿ ಪರಿವರ್ತಿಸಿ ಉಪಯೋಗಿಸಲಾಗುತ್ತದೆ. ಕೊನೆಯ ಹಂತದಲ್ಲಿ ಯೂರಿಯ ದ್ರಾವಣದಿಂದ ಯೂರಿಯ ಹರಳುಗಳನ್ನು ಹೊರತೆಗೆದು ಸೂಕ್ತ ರೀತಿಯಲ್ಲಿ ದಾಸ್ತಾನಿಗೆ ಕೊಂಡೊಯ್ಯಲಾಗುತ್ತದೆ.

ಸೋಡಿಯಂ ನೈಟ್ರೇಟ್ (NaNO3): ಸೋಡಿಯಂ ಕಾರ್ಬೊನೇಟ್ ಅಥವಾ ಸೋಡಿಯಂ ಕ್ಲೋರೈಡ್ ಅನ್ನು ನೈಟ್ರಿಕ್ ಆಮ್ಲದೊಡನೆ ವರ್ತಿಸುವಂತೆ ಮಾಡಿದಾಗ ಸೋಡಿಯಂ ನೈಟ್ರೇಟ್ ದೊರೆಯುತ್ತದೆ.

NaCl  + HNO3 → NaNO3  + HCl

Na2CO3 + 2HNO3  → 2NaNO3  + H2O  + CO2

ಚಿಲಿಯಲ್ಲಿ ಸೋಡಿಯಂ ನೈಟ್ರೇಟ್ ಅಧಿಕ ಪರಿಮಾಣದಲ್ಲಿ ಖನಿಜವಾಗಿ ದೊರೆಯುತ್ತದೆ.[೧೩][೧೪]

ಪೊಟಾಷಿಯಂ ನೈಟ್ರೇಟ್ (KNO3): ಸೋಡಿಯಂ ನೈಟ್ರೇಟ್ ಮತ್ತು ಪೊಟಾಷಿಯಂ ಕ್ಲೋರೈಡುಗಳ ಪರಸ್ಪರ ವರ್ತನೆಯಿಂದ ಪೊಟಾಷಿಯಂ ನೈಟ್ರೇಟ್ ದೊರೆಯುತ್ತದೆ.

NaNO3 + KCl → NaCl + KNO3

ತಯಾರಿಕೆಯ ವಿಧಾನದಲ್ಲಿ ಬಿಸಿ ಸೋಡಿಯಂ ನೈಟ್ರೇಟಿನ ಬಲಯುಕ್ತ ದ್ರಾವಣಕ್ಕೆ ಪೊಟಾಷಿಯಂ ಕ್ಲೋರೈಡನ್ನು ಸೇರಿಸಲಾಗುತ್ತದೆ. ಕ್ರಿಯಾಪಾತ್ರೆಯಲ್ಲಿ ಈ ಮಿಶ್ರಣವನ್ನು ಕಾಯಿಸಿದಾಗ ಸೋಡಿಯಂ ಕ್ಲೋರೈಡ್ ಹರಳುಗಳು ಬೇರ್ಪಟ್ಟು ಪೊಟಾಷಿಯಂ ನೈಟ್ರೇಟ್ ದ್ರಾವಣದಲ್ಲಿ ಉಳಿಯುತ್ತದೆ. ಸೋಡಿಯಂ ಕ್ಲೋರೈಡ್ ಹರಳುಗಳನ್ನು ಬೇರ್ಪಡಿಸಿದ ಬಳಿಕ ದ್ರಾವಣವನ್ನು ಶೈತ್ಯಕ್ಕೆ ಒಳಗುಮಾಡಿದಾಗ ಪೊಟಾಷಿಯಂ ನೈಟ್ರೇಟ್ ಹರಳುಗಳು ಹೊರಬೀಳುತ್ತವೆ. ಎರಡನೆಯ ವಿಧಾನದಲ್ಲಿ ಪೊಟಾಸಿಯಂ ಕ್ಲೋರೈಡನ್ನು ನೈಟ್ರಿಕ್ ಆಮ್ಲದೊಡನೆ ವರ್ತಿಸುವಂತೆ ಮಾಡಿದಾಗ ಮುಂದೆ ತೋರಿಸಿದ ಕ್ರಿಯೆಗಳಿಗನುಗುಣವಾಗಿ ಪೊಟಾಸಿಯಂ ನೈಟ್ರೇಟ್ ದೊರೆಯುತ್ತದೆ. ಈ ವಿಧಾನದಲ್ಲಿ ಕ್ಲೋರಿನ್ ಒಂದು ಮುಖ್ಯ ಸಹೋತ್ಪನ್ನ.

3KCl + 4HNO3 → 3KNO3 + NOCl + Cl2 + 2H2O

NOCl + 2HNO3 → 3NO2 + ½Cl2 + H2O

2NO2 + H2O + ½O2 → 2HNO3

ಭಾರತದ ಅನೇಕ ಕಡೆಗಳಲ್ಲಿ ಪೊಟಾಸಿಯಂ ನೈಟ್ರೇಟ್ ಸಹಜರೂಪದಲ್ಲಿ ಖನಿಜವಾಗಿ ದೊರೆಯುತ್ತದೆ. ಅದನ್ನು ಶುದ್ಧೀಕರಿಸಿ ಅಥವಾ ನೇರವಾಗಿ ಉಪಯೋಗಿಸಲಾಗುತ್ತದೆ.

ಪೊಟಾಸಿಯಂ ಗೊಬ್ಬರಗಳು

[ಬದಲಾಯಿಸಿ]

ಕ್ಲೋರೈಡ್ ಅಂಶ ಹೆಚ್ಚಿರುವ ಉಪ್ಪು ಭೂಮಿ ಅಥವಾ ಚೌಳು ಭೂಮಿಗಳಲ್ಲಿ ಪೊಟಾಸಿಯಂ ಕ್ಲೋರೈಡನ್ನು ಉಪಯೋಗಿಸುವುದು ಸೂಕ್ತವಲ್ಲ. ಆ ಬಗೆಯ ಭೂಮಿಯಲ್ಲಿ ಪೊಟಾಸಿಯಂ ಸಲ್ಫೇಟ್ ಅಥವಾ ಪೊಟಾಸಿಯಂ ನೈಟ್ರೇಟನ್ನು ಬಳಸಲಾಗುತ್ತದೆ. ಪೊಟಾಸಿಯಂ ಲವಣಗಳಿಗೆ ಮುಖ್ಯ ಆಕರಗಳು ಸಿಲ್ವಿನೈಟ್[೧೫][೧೬] ಮತ್ತು ಲಾಂಗ್‍ಬೆನೈಟ್ ಎಂಬ ಅದುರುಗಳು. ಸೋಡಿಯಂ ಮತ್ತು ಪೊಟಾಸಿಯಂ ಕ್ಲೋರೈಡುಗಳ ಮಿಶ್ರಣವಾದ ಸಿಲ್ವಿನೈಟ್‌ನಿಂದ ಶುದ್ಧ ಪೊಟಾಸಿಯಂ ಕ್ಲೋರೈಡನ್ನು ಬೇರ್ಪಡಿಸಲಾಗುತ್ತದೆ. ಲಾಂಗ್‍ಬೆನೈಟ್‍ನಿಂದ ಪೊಟಾಸಿಯಂ ಸಲ್ಫೇಟ್ ದೊರೆಯುತ್ತದೆ.

ಪೊಟಾಸಿಯಂ ಕ್ಲೋರೈಡ್ (KCl): ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿರುವ ಟ್ರೋನಾ, ಯೂಟಾ ಪ್ರಾಂತ್ಯದಲ್ಲಿರುವ ಸಾಲ್ದುರೋ ಮೊದಲಾದ ಸರೋವರಗಳಲ್ಲಿ ಸಾಕಷ್ಟು ಪೊಟಾಸಿಯಂ ಅಂಶವಿದೆ.[೧೭] 100ಕ್ಕೆ 3 ರಿಂದ 5 ಅಂಶ ಪೊಟಾಸಿಯಂ ಕ್ಲೋರೈಡ್ ಇರುವ ಈ ಸರಸ್ಸುಗಳ ನೀರಿನಿಂದ ಈ ಲವಣಗಳನ್ನು ವಿವಿಧ ಹಂತಗಳಲ್ಲಿ ಆಂಶಿಕ ಸ್ಫಟಿಕೀಕರಣಕ್ಕೆ (ಫ್ರಾಕ್ಷನಲ್ ಕ್ರಿಸ್ಟಲೈಸೇಷನ್) ಒಳಗು ಮಾಡಿದಾಗ ಪೊಟಾಸಿಯಂ ಕ್ಲೋರೈಡ್ ಮಾತ್ರವಲ್ಲದೆ ಸೋಡಿಯಂ ಕ್ಲೋರೈಡ್, ಸೋಡಿಯಂ ಕಾರ್ಬೊನೇಟ್, ಸೋಡಿಯಂ ಸಲ್ಫೇಟ್, ಬೊರಾಕ್ಸ್, ಸೋಡಿಯಂ ಬ್ರೋಮೈಡ್, ಸೋಡಿಯಂ ಫಾಸ್ಫೇಟ್ ಮತ್ತು ಲಿಥಿಯಂ ಲವಣಗಳು ದೊರೆಯುತ್ತವೆ. ಸಿಲ್ವಿನೈಟ್ ಅದುರಿನಿಂದ ಪೊಟಾಸಿಯಂ ಕ್ಲೋರೈಡನ್ನು ಪಡೆಯಲು ಬಹುಮಟ್ಟಿಗೆ ಆಂಶಿಕ ಸ್ಫಟಿಕೀಕರಣ ವಿಧಾನವನ್ನು ಉಪಯೋಗಿಸಲಾಗುತ್ತದೆ. ಹಲವು ವಿಧಾನಗಳಲ್ಲಿ ಪೊಟಾಸಿಯಂ ಕ್ಲೋರೈಡ್, ಮತ್ತು ಸೋಡಿಯಂ ಕ್ಲೋರೈಡ್‍ಗಳ ಸಾಂದ್ರತೆಗಳಲ್ಲಿ ಇರುವ ವ್ಯತ್ಯಾಸವನ್ನು ಉಪಯೋಗಿಸಲಾಗುತ್ತದೆ. ಸಾಗರದ ನೀರಿನಿಂದ ಉಪ್ಪನ್ನು ಸ್ಫಟಿಕೀಕರಿಸಿ ತೆಗೆದ ಮೇಲೆ ಉಳಿಯುವ ಕಟುನೀರಿನಲ್ಲಿ ಪೊಟಾಸಿಯಂ ಕ್ಲೋರೈಡ್ ಅಂಶ ಸಾಕಷ್ಟಿರುತ್ತದೆ. ಒಂದು ಲಕ್ಷ ಟನ್ನಿಗೂ ಹೆಚ್ಚು ಪೊಟಾಸಿಯಂ ಕ್ಲೋರೈಡ್‌ನ್ನು ಈ ವಿಧಾನದಿಂದ ಭಾರತದಲ್ಲಿ ಧ್ರಂಗಾಧ್ರ, ಖಾರಾಘೋಡ ಮತ್ತು ಸಾಂಭಾರ್ ಗಳಲ್ಲಿರುವ ಉಪ್ಪಿನ ಕಾರ್ಖಾನೆಗಳಲ್ಲಿ ತಯಾರಿಸಲಾಗುತ್ತಿದೆ. ಕಟು ನೀರಿನಿಂದ ಪೊಟಾಸಿಯಂ ಕ್ಲೋರೈಡ್ ಉತ್ಪಾದನೆಯಲ್ಲಿ ಬ್ರೋಮಿನ್ ಮತ್ತು ಮೆಗ್ನೀಷಿಯಂ ಸಲ್ಫೇಟುಗಳು ಸಹೋತ್ಪನ್ನಗಳಾಗಿ ದೊರೆಯುತ್ತವೆ.

ಪೊಟಾಷಿಯಂ ಸಲ್ಫೇಟ್ (K2SO4): ಲಾಂಗ್‍ಬೆನೈಟ್ ಅದುರಿನ ಶುದ್ಧೀಕರಣದಿಂದ ಉತ್ತಮ ಪೊಟಾಸಿಯಂ ಸಲ್ಫೇಟನ್ನು ತಯಾರಿಸಬಹುದು. ಆದರೆ ಈ ಅದುರು ಹೇರಳವಾಗಿ ದೊರೆಯುವುದಿಲ್ಲ; ಮತ್ತು ಗೊಬ್ಬರವಾಗಿ ಉಪಯೋಗಿಸಲು ಶುದ್ಧೀಕರಣದ ಅಗತ್ಯವಿಲ್ಲವಾದ್ದರಿಂದ ಸಾಕಷ್ಟು ಅದುರನ್ನು ಹಾಗೆಯೇ ಉಪಯೋಗಿಸಲಾಗುತ್ತಿದೆ. ಎರಡನೆಯ ವಿಧಾನದಲ್ಲಿ ಸೋಡಿಯಂ ಕಾರ್ಬೊನೇಟ್, ಸೋಡಿಯಂ ಸಲ್ಫೇಟ್‍ಗಳನ್ನುಳ್ಳ ಬರ್ಕೈಟ್ ಎಂಬ ಅದುರನ್ನು ಪೊಟಾಸಿಯಂ ಕ್ಲೋರೈಡಿನೊಡನೆ  ವರ್ತಿಸುವಂತೆ ಮಾಡಿದಾಗ ಪೊಟಾಸಿಯಂ ಸಲ್ಫೇಟ್ ದೊರೆಯುತ್ತದೆ.

2Na2SO4.Na2CO3 + 4KCl →  2K2SO4 + 4NaCl + Na2CO3

ಮೂರನೆಯ ಮತ್ತು ಅತಿ ಮುಖ್ಯ ವಿಧಾನದಲ್ಲಿ ಪೊಟಾಸಿಯಂ ಕ್ಲೋರೈಡ್‍ನ ಮೇಲೂ ಸಲ್ಫ್ಯೂರಿಕ್ ಆಮ್ಲದ ವರ್ತನೆಯಿಂದ ಪೊಟಾಸಿಯಂ ಸಲ್ಫೇಟ್ ಉತ್ಪಾದನೆಯಾಗುತ್ತದೆ.[೧೮] ಇದನ್ನು ಸಾಲ್ಟ್ ಲೇಕ್ ವಿಧಾನವೆಂದು ಕರೆಯಲಾಗುತ್ತದೆ.

2KCl + H2SO4 → K2SO4 + 2HCl

ರಂಜಕ ಗೊಬ್ಬರಗಳು

[ಬದಲಾಯಿಸಿ]

ರಂಜಕ ಮತ್ತು ಅದರ ಸಂಯುಕ್ತಗಳಿಗೆ ಮುಖ್ಯ ಆಕರ ಫಾಸ್ಫೇಟ್ ಬಂಡೆ ಎಂಬ ಅದುರು. ಎರಡನೆಯ ಆಕರ ಪ್ರಾಣಿಗಳ ಮೂಳೆಗಳು. ಹಲವು ಎಡೆಗಳಲ್ಲಿ ಫಾಸ್ಫೇಟ್ ಬಂಡೆ ಅಥವಾ ಮೂಳೆಗಳ ಪುಡಿಗಳನ್ನು ನೇರವಾಗಿ ಗೊಬ್ಬರವಾಗಿ ಉಪಯೋಗಿಸಿದರೂ ಬಹುಮಟ್ಟಿಗೆ ಅವನ್ನು ವಿವಿಧ ದರ್ಜೆಯ ಸೂಪರ್‌ಫಾಸ್ಫೇಟುಗಳಾಗಿ ಅಥವಾ ಅಮೋನಿಯಂ ಫಾಸ್ಫೇಟುಗಳಾಗಿ ಪರಿವರ್ತಿಸಿ ಉಪಯೋಗಿಸಲಾಗುತ್ತದೆ.

ಸೂಪರ್‌ಫಾಸ್ಫೇಟುಗಳು: ಫಾಸ್ಫೇಟ್ ಬಂಡೆ ಅದುರನ್ನು ಸಲ್ಫ್ಯೂರಿಕ್ ಅಥವಾ ಇತರ ಸೂಕ್ತ ಆಮ್ಲಗಳೊಡನೆ ವರ್ತಿಸುವಂತೆ ಮಾಡಿದಾಗ ಹಲವಾರು ಪರಿವರ್ತನೆಗಳು ನಡೆದು ನೀರಿನಲ್ಲಿ ಕರಗಬಲ್ಲ ಫಾಸ್ಫೇಟ್ ಲವಣಗಳು ಉತ್ಪತ್ತಿಯಾಗುತ್ತವೆ-ಬಂಡೆಯಲ್ಲಿರುವ ಕ್ಯಾಲ್ಸಿಯಂ ಫ್ಲೋರೈಡ್, ಅಲ್ಯೂಮಿನಾ ಮತ್ತು ಕಬ್ಬಿಣದ ಆಕ್ಸೈಡುಗಳು ಬೇರ್ಪಡುತ್ತವೆ ಮತ್ತು ಕ್ಯಾಲ್ಸಿಯಂ ಫಾಸ್ಫೇಟ್, ಮಾನೋಕ್ಯಾಲ್ಸಿಯಂ ಫಾಸ್ಫೇಟ್ ಆಗಿ ಮಾರ್ಪಾಡಾಗುತ್ತವೆ. ಪ್ರಕೃತಿಯಲ್ಲಿ ದೊರೆಯುವ ಫಾಸ್ಫೇಟ್ ಬಂಡೆಗಳು ಎಲ್ಲಾ ಕಡೆಗಳಲ್ಲೂ ಒಂದೇ ದರ್ಜೆಯವಲ್ಲ. ಆದ್ದರಿಂದ ಅವುಗಳ ಪರಿಷ್ಕರಣ ವಿಧಾನಗಳಲ್ಲಿ ಸ್ವಲ್ಪ ವ್ಯತ್ಯಾಸಗಳಿರುವುದು ಅನಿವಾರ್ಯ. ಮೊದಲು ಅದುರುಗಳನ್ನು ಕಲ್ಮಶಪ್ಲವನ ವಿಧಾನದಿಂದ ಉತ್ತಮಗೊಳಿಸಲಾಗುತ್ತದೆ. ನಾರ್ಮಲ್ ಸೂಪರ್‌ಫಾಸ್ಫೇಟ್‌ನ ತಯಾರಿಕೆಯಲ್ಲಿ ಉತ್ತಮಗೊಳಿಸಿದ ಅದುರನ್ನು ಮೊದಲು ಪುಡಿ ಮಾಡಿ ನಿಗದಿಗೊಳಿಸಿ ಅಳತೆಮಾಡಿದ ಸಲ್ಫ್ಯೂರಿಕ್ ಆಮ್ಲದೊಡನೆ  ಬೆರೆಸಲಾಗುತ್ತದೆ. ತರುವಾಯ ಅವಶ್ಯಕವಿದ್ದಷ್ಟು ನೀರನ್ನು ಬೆರೆಸಿದಾಗ ಉಷ್ಣೋತ್ಪತ್ತಿಯಾಗಿ ಉಷ್ಣತೆ ಹೆಚ್ಚುತ್ತದೆ. ಸೇರಿಸುವ ನೀರಿನ ಪರಿಮಾಣ ಮತ್ತು ಸೇರ್ಪಡೆಯ ವೇಗಗಳನ್ನು ನಿಯಂತ್ರಿಸುವುದರಿಂದ ಬೇಕಾದ ಉಷ್ಣತೆಯನ್ನು ಪಡೆಯಬಹುದು. ಈ ಬಿಸಿ ಮಿಶ್ರಣವನ್ನು ಮಿಶ್ರಕವೊಂದರಲ್ಲಿ ಸಮವಾಗಿ ಬೆರೆಸಿದ ಅನಂತರ ಹದವಾಗಿ ಕಲಸುವ ಪಗ್‌ಮಿಲ್ ಎಂಬ ಉಪಕರಣವೊಂದರಲ್ಲಿ ಹಲವು ಸಮಯ ಇಟ್ಟಿದ್ದು ಅನಂತರ ಮುದ್ದೆಮುದ್ದೆಯಾಗಿರುವ ಕ್ರಿಯಾ ಮಿಶ್ರಣವನ್ನು ನಿಧಾನವಾಗಿ ಚಲಿಸುವ ಸಾಗುಪಟ್ಟಿ (ಕನ್ವೇಯರ್) ಒಂದರ ಮೇಲೆ ಡೆನ್ ಎಂಬ ದಾಸ್ತಾನು ವಿಭಾಗಕ್ಕೆ ಕೊಂಡೊಯ್ಯಲಾಗುತ್ತದೆ.

ರಾಸಾಯನಿಕ ಕ್ರಿಯೆ ಪೂರ್ಣಗೊಂಡು P2O5 (ಫಾಸ್ಫರಸ್ ಪೆಂಟಾಕ್ಸೈಡ್) ಅಂಶ ಅವಶ್ಯಕ ಮಟ್ಟವನ್ನು (10%-20%) ತಲಪಲು ಬೇಕಾಗುವ ಸುಮಾರು ಹದಿನೈದು ದಿವಸಗಳ ಕಾಲ ದಾಸ್ತಾನಿನಲ್ಲಿಟ್ಟ ಬಳಿಕ ಸೂಪರ್‌ಫಾಸ್ಫೇಟನ್ನು ಪುಡಿಮಾಡಿ ಚೀಲಗಳಿಗೆ ತುಂಬಲಾಗುತ್ತದೆ. ಸೂಪರ್‌ಫಾಸ್ಫೇಟಿನ ಮೇಲೆ ಅಮೋನಿಯ ಅಥವಾ ಯೂರಿಯದ ದ್ರಾವಣವನ್ನು ಸೂಕ್ತ ಪರಿಮಾಣದಲ್ಲಿ ಸಿಂಪಡಿಸಿ ಒಣಗಿಸಿ ತರುವಾಯ ಉಂಡೆ ಅಥವಾ ಪುಡಿಮಾಡಿದರೆ ಸಾರಜನಕ, ರಂಜಕಗಳೆರಡೂ ಇರುವ ಉತ್ತಮ ಗೊಬ್ಬರ ದೊರೆಯುತ್ತದೆ.

ಸಲ್ಫ್ಯೂರಿಕ್ ಆಮ್ಲಕ್ಕೆ ಬದಲಾಗಿ ನೈಟ್ರಿಕ್ ಆಮ್ಲ ಅಥವಾ ನೈಟ್ರಿಕ್-ಸಲ್ಫ್ಯೂರಿಕ್ ಆಮ್ಲಗಳ ಮಿಶ್ರಣವನ್ನಾಗಲೀ ನೈಟ್ರಿಕ್-ಫಾಸ್ಫಾರಿಕ್ ಆಮ್ಲಗಳ ಮಿಶ್ರಣವನ್ನಾಗಲಿ ಉಪಯೋಗಿಸಬಹುದು. ಈ ಬಗೆಯ ತಯಾರಿಕೆಯ ಉತ್ಪನ್ನವು ಸಾರಜನಕ ಇರುವ ಲವಣಗಳನ್ನೂ ಉಳ್ಳದ್ದರಿಂದ ಮೊದಲ ವಿಧಾನದ ಉತ್ಪನ್ನಕ್ಕಿಂತ ಶ್ರೇಷ್ಠ ತರಗತಿಯದು. ಕ್ಯಾಲ್ಸಿಯಂ ನೈಟ್ರೇಟ್ ಆರ್ದ್ರತಾಕರ್ಷಕ (ಹೈಗ್ರೊಸ್ಕೋಪಿಕ್) ವಸ್ತುವಾದದ್ದರಿಂದ ಅದನ್ನು ವಾತಾವರಣದ ಜಲಾಂಶದಿಂದ ರಕ್ಷಿಸಲು ಅಮೋನಿಯ ಅನಿಲವನ್ನು ಹಾಯಿಸಲಾಗುತ್ತದೆ. ಹೆಚ್ಚಿನ ನೈಟ್ರಿಕ್ ಆಮ್ಲವು ಅಮೋನಿಯಂ ನೈಟ್ರೇಟ್ ಆಗಿ ಕ್ಯಾಲ್ಸಿಯಂ ನೈಟ್ರೇಟ್‌ಗೆ ರಕ್ಷೆ ನೀಡುತ್ತದೆ. ಹೀಗೆ ದೊರೆತ ನೈಟ್ರೋಫಾಸ್ಫೇಟನ್ನು ಗುಂಡು ಹರಳುಗಳಾಗಿ ಮಾರ್ಪಡಿಸಿ ಆರ್ದ್ರತಾ ವಿಕರ್ಷಕ ಕವಚವೊಂದನ್ನು ನೀಡಲಾಗುತ್ತದೆ. ಕಡೆಯ ಹಂತದಲ್ಲಿ ಹರಳುಗಳಾಗಿ ಮಾಡುವ ಮೊದಲು ಪೊಟಾಸಿಯಂ ಲವಣವನ್ನೂ ಸೇರಿಸಬಹುದು. ಆಗ ದೊರೆಯುವ ಉತ್ಪನ್ನ ಸಾರಜನಕ, ರಂಜಕ ಮತ್ತು ಪೊಟಾಸಿಯಂ ಮೂರನ್ನೂ ಉಳ್ಳ ಸಂಕೀರ್ಣ ಗೊಬ್ಬರವಾಗುತ್ತದೆ.

ಮೂಳೆಗಳಲ್ಲಿಯೂ ಬಂಡೆಗಳಲ್ಲಿದ್ದಂತೆಯೇ ಕ್ಯಾಲ್ಸಿಯಂ ಫಾಸ್ಫೇಟ್ ಇರುವುದರಿಂದ ಮೂಳೆಗಳ ಪುಡಿಯನ್ನೂ ಆಮ್ಲಗಳ ವರ್ತನೆಯಿಂದ ಸೂಪರ್‌ಫಾಸ್ಫೇಟ್ ಆಗಿ ಪರಿವರ್ತಿಸಬಹುದು. P2O5 ಅಂಶ 44%-51% ಇರುವ ಟ್ರಿಪ್ಲ್ ಸೂಪರ್‌ಫಾಸ್ಪೇಟ್ ಸಾಮಾನ್ಯ ಸೂಪರ್ ಫಾಸ್ಫೇಟಿನ ಮೂರರಷ್ಟು ರಂಜಕವನ್ನುಳ್ಳದ್ದರಿಂದ ಅದನ್ನು ಅಲ್ಪ ಪರಿಮಾಣದಲ್ಲಿ ಉಪಯೋಗಿಸಬಹುದು.[೧೯] ಈ ಗೊಬ್ಬರವನ್ನು ತಯಾರಿಸಲು ಫಾಸ್ಫೇಟ್ ಬಂಡೆಯ ಪುಡಿಯನ್ನು ಬಿಸಿಮಾಡಿದ 62% ಫಾಸ್ಫಾರಿಕ್ ಆಮ್ಲದೊಡನೆ ಕ್ರಿಯಾಪಾತ್ರೆಯಲ್ಲಿ ಚೆನ್ನಾಗಿ ಬೆರೆಸಲಾಗುತ್ತದೆ. ಕ್ರಿಯಾ ಸಮಯದಲ್ಲಿಯೇ ಕ್ರಿಯಾಮಿಶ್ರಣ ಹರಳುಗಳಾಗುತ್ತದೆ. ಕ್ರಿಯಾಪಾತ್ರೆಯಿಂದ ಹೊರತೆಗೆದ ಹರಳುಗಳನ್ನು ವಾಯು ಪ್ರವಾಹದಲ್ಲಿ ತಂಪುಮಾಡಿ ಹರಳುಗಳಾಗದೆ ಉಳಿದ ಹುಡಿಯನ್ನು ಜರಡಿಗಳಿಂದ ಬೇರ್ಪಡಿಸಿ ಪುನಃ ಕ್ರಿಯಾಪಾತ್ರೆಗೆ ಕಳುಹಿಸಲಾಗುತ್ತದೆ. ಅತಿ ದಪ್ಪವಾದ ಹರಳುಗಳನ್ನು ಒಡೆದು ಸಣ್ಣ ಹರಳುಗಳನ್ನಾಗಿ ಮಾಡಲಾಗುತ್ತದೆ. ತರುವಾಯ ರಾಸಾಯನಿಕ ಕ್ರಿಯೆ ಸಂಪೂರ್ಣವಾಗಲು ಸುಮಾರು ಎರಡು ವಾರ ದಾಸ್ತಾನಿನಲ್ಲಿಟ್ಟು ಬಳಿಕ ಚೀಲಗಳಿಗೆ ತುಂಬಲಾಗುತ್ತದೆ. ಒಂದು ಟನ್ ಸಾಮಾನ್ಯ ಸೂಪರ್‌ಫಾಸ್ಫೇಟ್ ತಯಾರಿಸಲು 550 ಕೆ.ಜಿ.ಪರಿಷ್ಕೃತ ಫಾಸ್ಫೇಟ್ ಬಂಡೆ ಮತ್ತು 500 ಕೆ.ಜಿ ಸಲ್ಫ್ಯೂರಿಕ್ ಆಮ್ಲ ಬೇಕು. ಒಂದು ಟಿನ್ ಟ್ರಿಪ್ಲ್ ಸೂಪರ್‌ಫಾಸ್ಫೇಟ್ ತಯಾರಿಕೆಗೆ 400 ಕೆ. ಜಿ. ಫಾಸ್ಫೇಟ್ ಬಂಡೆ ಮತ್ತು 550 ಕೆ. ಜಿ. ಫಾಸ್ಫಾರಿಕ್ ಆಮ್ಲ ಅವಶ್ಯಕ. ಟ್ರಿಪ್ಲ್ ಸೂಪರ್‌ಫಾಸ್ಫೇಟಿನ ಬೆಲೆ ಸಾಮಾನ್ಯ ಸೂಪರ್‌ಫಾಸ್ಫೇಟಿನದಕ್ಕಿಂತಲೂ ಹೆಚ್ಚಾಗಿದ್ದರೂ ರಂಜಕದ ಅಂಶ ಹೆಚ್ಚಾಗಿರುವುದರಿಂದ ಟ್ರಿಪಲ್ ಸೂಪರ್‌ಫಾಸ್ಫೇಟ್‌ನ ಬಳಕೆಯೆ ಮಿತವ್ಯಯದ ಹಾದಿ. ಅಮೆರಿಕ ಸಂಯುಕ್ತ ಸಂಸ್ಥಾನ ಮತ್ತು ಯೂರೋಪಿನ ಅನೇಕ ಪ್ರದೇಶಗಳಲ್ಲಿ ಸಾಮಾನ್ಯ ಸೂಪರ್‌ಫಾಸ್ಫೇಟ್‌ನ ಬಳಕೆ ಪೂರ್ಣವಾಗಿ ನಿಂತುಹೋಗಿದೆ.

ಅಮೋನಿಯಂ ಫಾಸ್ಫೇಟುಗಳು: ಮಾನೋಅಮೋನಿಯಂ ಫಾಸ್ಫೇಟ್ [(NH4)(H2PO4)] ಮತ್ತು ಡೈಅಮೋನಿಯಂ ಫಾಸ್ಫೇಟುಗಳನ್ನು [(NH4)2(HPO4)] ಅಮೋನಿಯ ಮತ್ತು ಫಾಸ್ಫಾರಿಕ್ ಆಮ್ಲಗಳ ಪರಸ್ಪರ ವರ್ತನೆಯಿಂದ ತಯಾರಿಸಬಹುದು.[೨೦] ಇವು ಸಾರಜನಕ ಮತ್ತು ರಂಜಕ ಎರಡನ್ನೂ ಒದಗಿಸಬಲ್ಲ ಗೊಬ್ಬರಗಳು. ಇವುಗಳ ತಯಾರಿಕೆಗೆ ಬೇಕಾಗುವ ಅಮೋನಿಯ ಮತ್ತು ಫಾಸ್ಫಾರಿಕ್ ಆಮ್ಲಗಳೆರಡು ಶುದ್ಧ ರಾಸಾಯನಿಕಗಳಾದ್ದರಿಂದ ಅಮೋನಿಯಂ ಫಾಸ್ಫೇಟುಗಳ ಬೆಲೆ ಹೆಚ್ಚು.. ಆದ್ದರಿಂದ ಇವುಗಳ ಬಳಕೆ ಅಷ್ಟೇನು ಹೆಚ್ಚಿಲ್ಲ.

NH3 + H3PO4 →  (NH­4)H2PO4

2NH3 + H3PO4 → (NH­4)2HPO4

ಮಿಶ್ರ ಗೊಬ್ಬರಗಳು

[ಬದಲಾಯಿಸಿ]

ಸಸ್ಯ ವರ್ಗಕ್ಕೆ ಅತ್ಯವಶ್ಯವಾಗಿರುವ ಧಾತುಗಳಾದ ಸಾರಜನಕ, ರಂಜಕ ಮತ್ತು ಪೊಟಾಸಿಯಂ ಮೂರನ್ನು ಉಳ್ಳ ಮಿಶ್ರಣಗಳು ಮಾರುಕಟ್ಟೆಯಲ್ಲಿ ದೊರೆಯುತ್ತವೆ. NPK ಮಿಶ್ರಣಗಳೆಂದು ಪರಿಚಿತವಾಗಿರುವ ಈ ಮಿಶ್ರಣಗಳಲ್ಲಿ  ಹಲವಾರು ಬಗೆಗಳಿವೆ. 3-12-2, 2-12-6, 5-10-5 ಮೊದಲಾದ ಹೆಸರುಗಳನ್ನುಳ್ಳ ಈ ಮಿಶ್ರಣಗಳಲ್ಲಿ ಮೊದಲ ಅಂಕಿ ಸಾರಜನಕದ (N) ಪ್ರಮಾಣವನ್ನು (ಶತಾಂಶದಲ್ಲಿ), ಎರಡನೆಯ ಅಂಕಿ  P2O5 ಪ್ರಮಾಣವನ್ನು, ಮೂರನೆಯ ಅಂಕಿ ನೀರಿನಲ್ಲಿ ಕರಗಬಲ್ಲ K2O ಪ್ರಮಾಣವನ್ನು ತಿಳಿಸುತ್ತವೆ.[೨೧][೨೨] ವಿವಿಧ ಪ್ರದೇಶಗಳಲ್ಲಿನ ಲವಣ ಸಂಪತ್ತಿನ ಕೊರತೆಯನ್ನು ಅನುಸರಿಸಿ ಮತ್ತು ಬೆಳೆಯ ಅವಶ್ಯಕತೆಯನ್ನು ಗಮನಿಸಿ ಸೂಕ್ತ ಮಿಶ್ರಣವನ್ನು ಉಪಯೋಗಿಸಲಾಗುತ್ತದೆ. ಈಗ ಹಲವು ವರ್ಷಗಳಿಂದ ಈ ಬಗೆಯ ಮಿಶ್ರಣಗಳನ್ನು ಪುಡಿಯಾಗಿ ಮಾರುವ ಬದಲು ಹರಳು ಅಥವಾ ವಿವಿಧ ಆಕಾರದ ಉಂಡೆಗಳನ್ನಾಗಿ ಮಾಡಿ ಮಾರಲಾಗುತ್ತದೆ. ಹರಳು ಅಥವಾ ಉಂಡೆಗಳಲ್ಲಿ ಮಿಶ್ರಣ ಏಕರೀತಿಯಾಗಿದ್ದು, ಪುಡಿಗಳಲ್ಲಿ ಇರಬಹುದಾದ ಮಿಶ್ರಣ ಪ್ರಮಾಣದ ಅನಿಶ್ಚಿತತೆಯನ್ನು ಈ ವಿಧಾನ ನಿವಾರಿಸುತ್ತದೆ. ಅಲ್ಲದೆ ಹರಳು, ಉಂಡೆಗಳಿಗೆ ಆರ್ದ್ರತಾವಿಕರ್ಷಕವೊಂದರ ಹೊದಿಕೆ ನೀಡುವುದು ಸಾಧ್ಯವಿರುವುದರಿಂದ ಇವುಗಳ ದಾಸ್ತಾನಿನಲ್ಲಿ ಹವೆಯ ಏರಿಳಿತಗಳಿಂದಾಗುವ ನಷ್ಟ ಕಡಿಮೆ. ಮಿಶ್ರಣಗಳ ಹರಳು ಅಥವಾ ಉಂಡೆಗಳನ್ನು ತಯಾರಿಸುವಾಗ ಅಲ್ಪಾಂಶದಲ್ಲಿ ಬೆಳವಣಿಗೆಗೆ ಅವಶ್ಯಕವಿರುವ ಇತರ ಲವಣಗಳನ್ನು ಸೂಕ್ತ ಪ್ರಮಾಣದಲ್ಲಿ ಬೆರೆಸುವುದು ಸಾಧ್ಯವಿದೆ. ಇತ್ತೀಚೆಗೆ ಮಿಶ್ರಗೊಬ್ಬರಗಳು ದ್ರವರೂಪದಲ್ಲಿಯೂ ತಯಾರಾಗುತ್ತಿವೆ. 10% ಸಾರಜನಕ, 34% P2O5 ಅಂಶವನ್ನುಳ್ಳ ದ್ರವಗೊಬ್ಬರ ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿ ಬಳಕೆಯಲ್ಲಿದೆ.

ಭಾರತದ ಕೃತಕ ಗೊಬ್ಬರ ಉದ್ಯಮ

[ಬದಲಾಯಿಸಿ]

ಭಾರತದಲ್ಲಿ ಪ್ರತಿವರ್ಷವೂ ಕೃತಕ ಗೊಬ್ಬರಗಳ ಬಳಕೆ ಹೆಚ್ಚುತ್ತಲೇ ಇದ್ದು ಸ್ವಾತಂತ್ರ್ಯ ನಂತರ ಬಳಕೆ ಮತ್ತು ಉದ್ಯಮಗಳು ಹಲವಾರು ಪಟ್ಟು ಹೆಚ್ಚಿವೆ. 1950ರಲ್ಲಿ ಭಾರತದಲ್ಲಿದ್ದುದು ಕೇವಲ ಮೂರೇ ಮೂರು ಮುಖ್ಯ ಕಾರ್ಖಾನೆಗಳು-ಫರ್ಟಿಲೈಸರ್ಸ್ ಅಂಡ್ ಕೆಮಿಕಲ್ಸ್ ಲಿಮಿಟೆಡ್, ಆಲ್ವೇ; ಸಿಂಧ್ರಿ ಕೆಮಿಕಲ್ಸ್ ಅಂಡ್ ಫರ್ಟಿಲೈಸರ್ಸ್, ಸಿಂಧ್ರಿ; ಮೈಸೂರು ಕೆಮಿಕಲ್ಸ್ ಅಂಡ್ ಫರ್ಟಿಲೈಸರ್ಸ್, ಬೆಳುಗೊಳ. ಈ ಮೂರು ಮುಖ್ಯ ಕಾರ್ಖಾನೆಗಳಲ್ಲದೆ ಸಣ್ಣ ಸಣ್ಣ ಕಾರ್ಖಾನೆಗಳೂ ಅನೇಕವಿದ್ದುವು. ಕಳೆದ 20 ವರ್ಷಗಳಲ್ಲಿ ಕೃತಕ ಗೊಬ್ಬರಗಳ ಬಳಕೆ ಅನೇಕಪಟ್ಟು ಹೆಚ್ಚಿದೆ. ಗೊಬ್ಬರ ತಯಾರಿಕೆಯ ಉದ್ಯಮ ಇದೇ ವೇಳೆ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳ ಆಶ್ರಯದಲ್ಲೂ ಬೆಳೆದು ಬೃಹತ್ ಗಾತ್ರವನ್ನು ತಳೆದು ಆಯಾತವನ್ನು ನಿಯಂತ್ರಣದಲ್ಲಿಡಲು ಸಹಾಯಕವಾಗಿದೆ. ರಂಜಕ, ಪೊಟಾಸಿಯಂ, ಸಾರಜನಕ ಗೊಬ್ಬರಗಳ ಒಟ್ಟು ಉತ್ಪಾದನೆ ಸುಮಾರು ಒಂದೂವರೆ ಲಕ್ಷ ಟನ್ನಿನಷ್ಟಿತ್ತು. 1970-71ರಲ್ಲಿ ಈ ಉತ್ಪಾದನೆ ಸುಮಾರು 30 ಲಕ್ಷ ಟನ್‌ಗಳಷ್ಟಾಗಿತ್ತು. ರಾಸಾಯನಿಕ ಗೊಬ್ಬರಗಳನ್ನು ತಯಾರಿಸಲು ಹಳೆಯ ಅನೇಕ ಸಣ್ಣ ಕಾರ್ಖಾನೆಗಳು ದೊಡ್ಡವಾಗಿವೆ. ಮತ್ತು ಅನೇಕ ಹೊಸ ಕಾರ್ಖಾನೆಗಳು ಭಾರತದ ಅನೇಕ ಕಡೆಗಳಲ್ಲಿ ಆರಂಭವಾಗಿದೆ. ಸರ್ಕಾರಿ ಆಶ್ರಯದ ಫರ್ಟಿಲೈಸರ್ ಕಾರ್ಪೋರೇಷನ್ ಆಫ್ ಇಂಡಿಯಾ ಮತ್ತು ಫರ್ಟಿಲೈಸರ್ಸ್ ಅಂಡ್ ಕೆಮಿಕಲ್ಸ್, ಟ್ರಾವಂಕೂರ್ ಸಂಸ್ಥೆಗಳು ಭಾರಿ ಗಾತ್ರದಲ್ಲಿ ಗೊಬ್ಬರಗಳನ್ನು ತಯಾರಿಸುವುದೇ ಅಲ್ಲದೆ ಹೊಸ ಕಾರ್ಖಾನೆಗಳನ್ನು ಸ್ಥಾಪಿಸಲು ಅಗತ್ಯವಾದ ತಾಂತ್ರಿಕ ಜ್ಞಾನ ಮತ್ತು ನೆರವನ್ನು ಸಹ ನೀಡುತ್ತವೆ. ಈ ಎರಡೂ ದೊಡ್ಡ ಸಂಸ್ಥೆಗಳಲ್ಲದೆ ಕಳೆದ 5 ವರ್ಷಗಳಲ್ಲಿ ಸುಮಾರು 10 ದೊಡ್ಡ ಕಾರ್ಖಾನೆಗಳು ಖಾಸಗಿ ರಂಗದಲ್ಲಿ ಆರಂಭವಾಗಿವೆ. ಆದರೆ ಈ ಸಮಯದಲ್ಲಿ ಕರ್ನಾಟಕ ರಾಜ್ಯದಲ್ಲಿರುವ ಬೆಳುಗೊಳದ ಕಾರ್ಖಾನೆ ಅಷ್ಟಾಗಿ ವಿಸ್ತರಿಸಲೂ ಇಲ್ಲ ಮತ್ತು ರಾಜ್ಯದಲ್ಲಿ ಯಾವ ದೊಡ್ಡ ಗೊಬ್ಬರದ ಕಾರ್ಖಾನೆ ಹೊಸದಾಗಿ ಆರಂಭವಾಗಲೂ ಇಲ್ಲ. ಮಂಗಳೂರಿನ ಕಾರ್ಖಾನೆ ದೊಡ್ಡದಾಗುವ ನಿರೀಕ್ಷೆ ಉಂಟು.

ಉಲ್ಲೇಖಗಳು

[ಬದಲಾಯಿಸಿ]
  1. J. Benton Jones, Jr. "Inorganic Chemical Fertilisers and Their Properties" in Plant Nutrition and Soil Fertility Manual, Second Edition. CRC Press, 2012. ISBN 978-1-4398-1609-7. eBook ISBN 978-1-4398-1610-3.
  2. "Macronutrients and Micronutrients". soilsfacstaff.cals.wisc.edu. Retrieved 2022-07-15.
  3. Meessen, Jozef H. (2012). "Urea". Ullmann's Encyclopedia of Industrial Chemistry. Weinheim: Wiley-VCH. doi:10.1002/14356007.a27_333.pub2. {{cite encyclopedia}}: Cite has empty unknown parameter: |authors= (help)
  4. Smil, Vaclav (2004). Enriching the Earth. Massachusetts Institute of Technology. p. 135. ISBN 9780262693134.
  5. IPNI. "Diammonium Phosphate" (PDF). www.ipni.net. International Plant Nutrition Institute. Archived (PDF) from the original on 24 September 2015. Retrieved 21 July 2014.
  6. Havlin, John L.; Tisdale, Samuel L.; Nelson, Werner L.; Beaton, James D. (2016). Soil Fertility and Fertilizers: An Introduction to Nutrient Management. Pearson. ISBN 978-93-325-7034-4.
  7. Nutrient Source Specifics: Potassium Chloride. Ref. No. 17 #13075 (PDF). International Plant Nutrition Institute (IPNI). Archived (PDF) from the original on 2024-04-14. Retrieved 2024-11-24.
  8. Havlin, John L.; Tisdale, Samuel L.; Nelson, Werner L.; Beaton, James D. (2014). "Potassium". Soil Fertility and Fertilizers (8th ed.). Pearson Education. pp. 186–188. ISBN 978-0-13-503373-9.
  9. Manning, David A. C. (2010). "Mineral sources of potassium for plant nutrition. A review". Agronomy for Sustainable Development. 30 (2): 281–294. Bibcode:2010AgSD...30..281M. doi:10.1051/agro/2009023. Archived from the original on 2024-02-28. Retrieved 2024-11-24.
  10. "Negative and positive effects of N fertilizer on crops". Agrozist.
  11. US 4927617, Villard, Alexandre & Cotonea, Yves, "Process of producing concentrated solutions of ammonium nitrate", published 1990-05-22, assigned to Societe Chimique des Charbonnages S.A. 
  12. Brouwer, Mark. "Thermodynamics of the Urea Process" (PDF). ureaknowhow.com. Retrieved 26 February 2023.
  13. "The Nitrate Towns of Chile". Atlas Obscura (in ಇಂಗ್ಲಿಷ್). Retrieved 27 May 2019.
  14. Mutic, Anja (26 October 2012). "The ghost towns of northern Chile". Washington Post (in ಇಂಗ್ಲಿಷ್). Retrieved 27 May 2019.
  15. Weiss N.L., SME Mineral Processing Handbook 1985, Page 22-2
  16. "Potash". Mineral Planning Factsheet. British Geological Survey. 2011. Retrieved 8 February 2017.
  17. Van Cott, John W. (1990). Utah Place Names: A Comprehensive Guide to the Origins of Geographic Names: A Compilation. Salt Lake City: University of Utah Press. pp. 325–26. ISBN 978-0-87480-345-7. OCLC 797284427. Retrieved 7 Mar 2018.
  18. Schultz, H.; Bauer, G.; Schachl, E.; Hagedorn, F.; Schmittinger, P. (2005). "Potassium Compounds". Ullmann's Encyclopedia of Industrial Chemistry. Weinheim: Wiley-VCH. doi:10.1002/14356007.a22_039. ISBN 3527306730.
  19. Kongshaug, Gunnar; Brentnall, Bernard A.; Chaney, Keith; Gregersen, Jan-Helge; Stokka, Per; Persson, Bjørn; Kolmeijer, Nick W.; Conradsen, Arne; Legard (2014). "Phosphate Fertilizers". Ullmann's Encyclopedia of Industrial Chemistry. Weinheim: Wiley-VCH. pp. 1–49. doi:10.1002/14356007.a19_421.pub2. {{cite encyclopedia}}: Cite has empty unknown parameter: |authors= (help)
  20. Martin Bäckman, Martin Gunnarsson, Linnea Kollberg, Martin Müller, and Simon Tallvod (2016): "Production of Monoammonium Phosphate at Yara AB Archived 18 November 2017 ವೇಬ್ಯಾಕ್ ಮೆಷಿನ್ ನಲ್ಲಿ.". Technical Report, Lund University.
  21. "Summary of State Fertilizer Laws" (PDF). EPA. Archived (PDF) from the original on 2022-10-09. Retrieved 14 March 2013.
  22. "Label Requirements of specialty and other bagged fertilizers". Michigan Department of Agriculture and Rural Development. Retrieved 14 March 2013.


ಹೊರಗಿನ ಕೊಂಡಿಗಳು

[ಬದಲಾಯಿಸಿ]




ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: