ಶ್ಯಾಮಸುಂದರ ಭಟ್ ಬಡೆಕ್ಕಿಲ
ಶ್ರೀ ಶ್ಯಾಮಸುಂದರ ಭಟ್ ಬಡೆಕ್ಕಿಲ ಇವರೊಬ್ಬ ಕಲಾಕಾರರು. ವರ್ಣಚಿತ್ರ, ಕಾಷ್ಟಶಿಲ್ಪ, ಪ್ಲಾಸ್ಟರ್ ಆಫ್ ಪ್ಯಾರಿಸ್ ನಲ್ಲಿ ಶಿಲ್ಪ ಮಾಡಿರುವರಾದರೂ ಮುಂದುವರೆದದ್ದು ಕಲ್ಲಿನಲ್ಲಿ ಶಿಲ್ಪವನ್ನು ಕೆತ್ತುವ ಮೂಲಕ.
ಜನನ
[ಬದಲಾಯಿಸಿ]ಶ್ಯಾಮಸುಂದರ ಭಟ್ ರವರು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ ೧೯೬೩ ರ ನವಂಬರ ೧೯ ರಂದು ಜನಿಸಿದರು.ತಂದೆ ಡಾ.ಬಡೆಕ್ಕಿಲ ಕೃಷ್ಣ ಭಟ್ಟ-ತಾಯಿ ಸರಸ್ವತಿಯವರ ಐದು ಮಕ್ಕಳಲ್ಲಿ ಇವರು ಕಿರಿಯರು.
ಬಾಲ್ಯ
[ಬದಲಾಯಿಸಿ]ಎರಡು ವರ್ಷದ ಹುಡುಗನಾಗಿದ್ದಾಗ ಬಂದೆರಗಿದ ಪೋಲಿಯೋದಿಂದಾಗಿ ಎಲ್ಲರಂತೆ ನಡೆದಾಡಲು ಅಶಕ್ತರಾದರು.ಆದುದರಿಂದ ಶಾಲೆಯಲ್ಲಿ ವಿದ್ಯಾಭ್ಯಾಸವನ್ನು ಮಾಡಲಾಗದೆ ಮನೆಯಲ್ಲಿಯೇ ಅಕ್ಷರಾಭ್ಯಾಸವನ್ನು ಮಾಡಿದರು. ತಾಯಿಯೇ ಗುರುವಾದರು. ಹೀಗೆ ಕಲಿಯಲು ತೊಡಗಿದಾಗ ಮನೆಯಲ್ಲಿದ್ದ ಪುಸ್ತಕಗಳ ಚಿತ್ರಗಳತ್ತ ಗಮನ ಹರಿಯತೊಡಗಿತು. ಬಳಪದಲ್ಲಿ ಅದನ್ನು ಮೂಡಿಸುವ ಪ್ರಯತ್ನವನ್ನೂ ಮಾಡಿದರು. [೧]
ಆಸಕ್ತಿ
[ಬದಲಾಯಿಸಿ]ಏಳನೆಯ ವಯಸ್ಸಿನಲ್ಲಿಯೇ ಕರಕುಶಲ ಕಲೆಗಳಲ್ಲಿ ಆಸಕ್ತಿ ಬೆಳೆಯತೊಡಗಿತು. ಸ್ವಂತ ಪರಿಕಲ್ಪನೆಯಿಂದ ಆಕೃತಿಗಳನ್ನು ತಯಾರಿಸಲಾರಂಭಿಸಿದರು. ( ಅಜ್ಜನಮನೆ ಸೇಡಿಯಾಪಿನ ಪೂರ್ವಿಕರಿಂದ ಬಂದ ಬಳುವಳಿಯಿದೆಂದು ಅವರ ಅನಿಸಿಕೆ). ಕೆರೆಯ ಮಣ್ಣಿನಿಂದ ಸುಂದರ ರಚನೆ ಮಾಡಲಾರಂಭಿಸಿದರು. ಎಂಟು ವರ್ಷದವನಾಗಿದ್ದಾಗಲೇ ಮೂರ್ತಿಗಳನ್ನು ಮಾಡುವತ್ತ ಆಸಕ್ತಿ ಬೆಳೆಯಿತು. ( ಬಿದಿರಿನಿಂದ ಕೊಳಲನ್ನೂ ಮಾಡುತ್ತಿದ್ದರು)
ತರಬೇತಿ
[ಬದಲಾಯಿಸಿ]ಹನ್ನೆರಡು ವರ್ಷದ ಬಾಲಕನಾಗಿದ್ದಾಗ ಕುಟುಂಬ ಬೆಂಗಳೂರಿಗೆ ವರ್ಗಾವಣೆಗೊಂಡಿತು. ಮೊತ್ತಮೊದಲಾಗಿ ೧೯೭೬-೭೭ ರಲ್ಲಿ ಬೆಂಗಳೂರಿನ ಕೆನ್ ಸ್ಕೂಲ್ ಆಫ್ ಆರ್ಟ್ಸ್ ನಲ್ಲಿಗುರುಗಳಾದ ಆರ್.ಎಂ ಹಡಪದ ನವರ ಮಾರ್ಗದರ್ಶನದಲ್ಲಿ ರೇಖಾಚಿತ್ರ, ವರ್ಣಚಿತ್ರ, ಮಣ್ಣಿನ ಆಕೃತಿಗಳು ಹಾಗೂ ಭಾವಶಿಲ್ಪಗಳ ತರಬೇತಿಯನ್ನು ಪಡೆದರು. ನಂತರ ೧೯೭೭-೮೦ ರ ಅವಧಿಯಲ್ಲಿ ಶ್ರೀ ಚಾಮರಾಜೇಂದ್ರ ಕಲೆ ಮತ್ತು ತಾಂತ್ರಿಕ ಶಿಕ್ಷಣ ಸಂಸ್ಥೆ ಮೈಸೂರಿನಲ್ಲಿ ಮಣ್ಣು, ಪ್ಲಾಸ್ಟರ್ ಆಫ್ ಪ್ಯಾರಿಸ್ ನಲ್ಲಿ ಆಕೃತಿಗಳು, ಭಾವಶಿಲ್ಪಗಳ ರಚನಾ ತರಬೇತಿಯನ್ನು ಪಡೆದರು. ( ಈ ಸಂಸ್ಥೆಯಲ್ಲಿ ಸೇರಲು ಕನಿಷ್ಠ ಹತ್ತನೆಯ ತರಗತಿ ಪಾಸಾಗಬೇಕಿತ್ತು. ಆದರೆ ಸಾಂಪ್ರದಾಯಿಕ ಶಾಲಾ ಶಿಕ್ಷಣವಿಲ್ಲದಿದ್ದ ಇವರಲ್ಲಿ ಆವೆಮಣ್ಣಿನಲ್ಲಿ ಸ್ವಾಮಿ ವಿವೇಕಾನಂದರನ್ನು ರಚಿಸಿ ತೋರಿಸಲು ಹೇಳಿದರು. ಕೇವಲ ಹದಿನೈದು ನಿಮಿಷಗಳಲ್ಲಿ ಇವರು ಮಾಡಿದರು. ತಕ್ಷಣವೇ ಆಯ್ಕೆ ಮಾಡಿದರು.) ಆ ನಂತರ ಶ್ರೀ ದಿ. ವಾದಿರಾಜರ ಮಾರ್ಗದರ್ಶನದಲ್ಲಿ ಕಲ್ಲು ಮತ್ತು ಮರದಲ್ಲಿ ಸಾಂಪ್ರದಾಯಿಕ ಶಿಲ್ಪಗಳ ರಚನಾ ತರಬೇತಿಯನ್ನು ಪಡೆದರು. ಪುರಾತನ ದೇವಾಲಯಗಳ ಶ್ರೇಷ್ಠಶಿಲ್ಪಗಳ ಅವಲೋಕನ ಮಾಡುತ್ತಾ ಜ್ಞಾನವನ್ನು ವೃದ್ಧಿಸಿಕೊಂಡರು. ತದನಂತರ ವಿದ್ಯಾಲಂಕಾರ, ಶಾಸ್ತ್ರಚಿಂತಾಮಣಿ, ಪ್ರೊ. ಸಾ.ಕೃ.ರಾಮಚಂದ್ರರಾಯರವರಿಂದ ಶಿಲ್ಪಶಾಸ್ತ್ರದ ಮಾನ, ಉನ್ಮಾನ, ಪ್ರಮಾಣ, ಪರಿಮಾಣ, ಮುದ್ರೆ, ಶೈಲಿ ಮತ್ತಿತರ ಪ್ರತಿಮಾ ಲಕ್ಷಣಗಳ ಕುರಿತು ಮಾರ್ಗದರ್ಶನವನ್ನು ಪಡೆದರು ಹಾಗೂ ಅದಕ್ಕೆ ಇತರ ಪುರಾತನ ಶಿಲ್ಪ, ಶಾಸ್ತ್ರಗ್ರಂಥಗಳ ಅಧ್ಯಯನವನ್ನು ಮಾಡಿದರು.
ಶಿಲ್ಪಿಯಾಗಿ
[ಬದಲಾಯಿಸಿ]ಎರಡೂವರೆ ಇಂಚು ಎತ್ತರದ ಗಣಪತಿ ಶಿಲ್ಪದ ಕೆತ್ತನೆಯೊಂದಿಗೆ ಶಿಲ್ಪಿಯಾಗುವತ್ತ ಮುಖ ಮಾಡಿದರು.ಪ್ಲಾಸ್ಟರ್ ಆಫ್ ಪ್ಯಾರಿಸ್,ಮರದ ಕೆತ್ತನೆಗಳಿಂದಲೂ ಬಹುಮುಖ ಪ್ರತಿಭೆಯನ್ನು ಮೆರೆದಿದ್ದಾರೆ.ಆದರೆ ಆರೋಗ್ಯದ ಕಾರಣಕ್ಕಾಗಿ ಪ್ಲಾಸ್ಟರ್ ಆಫ್ ಪ್ಯಾರಿಸ್ ನ ಕೆತ್ತನೆಯನ್ನು ಕೈ ಬಿಡಬೇಕಾಯಿತು. ಬಿ.ಎಂ.ಶ್ರೀ ಯವರ ಶತಮಾನೋತ್ಸವದ ಅಂಗವಾಗಿ ಶುಭಾಶಯ ಕಾರ್ಡುಗಳನ್ನು ಹೊರತರಲಾಗಿತ್ತು. ಅದರಲ್ಲಿನಬಿ.ಎಂ.ಶ್ರೀ ಯವರ ಚಿತ್ರ ರಚಿಸಿದವರು ಶ್ಯಾಮಸುಂದರರು. ಶಿಲ್ಪದಲ್ಲಿ ಪಾಲ, ಪಲ್ಲವ, ಚೋಳ, ಹೊಯ್ಸಳ, ಚಾಲುಕ್ಯ, ಚೇರ, ಗಂಗ, ಗುಪ್ತ, ಕದಂಬ, ವಿಜಯನಗರ ಎಲ್ಲ ಶೈಲಿಗಳ ಪರಿಚಯ ಇವರಿಗಿದೆ. ಒಂದೊಂದು ಶೈಲಿಯ ವಿಶಿಷ್ಟ ಗುಣಗಳನ್ನು ಕುರಿತು ವಿಶೇಷವಾಗಿ ಅಧ್ಯಯನವನ್ನು ನಡೆಸಿದ್ದಾರೆ. ಆಯಾ ಕ್ಷೇತ್ರಗಳಲ್ಲಿ ಅಲೆದಾಡಿ ನೇರವಾದ ಅನುಭವವನ್ನು ಪಡೆದುಕೊಂಡಿದ್ದಾರೆ. ಕಲಾಸಂಸ್ಥೆಗಳು ನಡೆಸುವ ಶಿಬಿರಗಳಲ್ಲಿ ಪಾಲ್ಗೊಂಡು ಕಲಿತಿದ್ದಾರೆ- ಕಲಿಸಿದ್ದಾರೆ. ಸಾಂಪ್ರದಾಯಿಕ ಶಾಸ್ತ್ರೀಯಕಲೆ,ಶಿಲ್ಪಸಂಪತ್ತು ಇರುವೆಡೆ ತೆರಳಿ ಖುದ್ದಾಗಿ ಅಧ್ಯಯನ ನಡೆಸಿದ್ದಾರೆ. ಬೇಲೂರು, ಹಳೇಬೀಡು, ಸೋಮನಾಥಪುರ, ಮಹಾಬಲಿಪುರಂ, ಕೊನಾರ್ಕ್, ಭುವನೇಶ್ವರ ಮುಂತಾದ ಕಡೆಗಳಿಗೂ, ವಿವಿಧ ಶೈಲಿಯ ದೇಗುಲಗಳಿಗೂ, ಮ್ಯೂಸಿಯಂಗಳಿಗೂ ಭೇಟಿ ನೀಡಿದ್ದಾರೆ.
ವಿವಿಧ ಶಿಲ್ಪಗಳಲ್ಲಿ ಕೆತ್ತಿರುವ ಶಿಲಾ ವಿಗ್ರಹಗಳು ಮಠ-ಮಂದಿರಗಳಲ್ಲಿ, ಮನೆ-ಮ್ಯೂಸಿಯಂಗಳಲ್ಲಿವೆ. ಶ್ರೀನಿವಾಸ, ಅಂಡಾಳ್, ಚಾಮುಂಡೇಶ್ವರಿ, ಸುಬ್ರಹ್ಮಣ್ಯ, ಆಂಜನೇಯ, ಗರುಡ, ಜನಾರ್ದನ, ಚನ್ನಕೇಶವ, ಅಷ್ಟಲಕ್ಷ್ಮಿಯರು, ನವಗ್ರಹಗಳು, ವನದುರ್ಗೆ, ಜಲದುರ್ಗೆ, ಗೋಪಾಲಕೃಷ್ಣ, ಶಿಲಾಬಾಲಿಕೆಯರ ಪ್ರತಿಕೃತಿಗಳು ಖ್ಯಾತಿ ತಂದುಕೊಟ್ಟಿವೆ. ಗೋಕರ್ಣದ ಗಣಪತಿಯಂತಿರುವ ಅವರ ಗಣೇಶನ ೮೦ ವಿಗ್ರಹಗಳು ಮಾರಾಟದ ದಾಖಲೆ ಮಾಡಿವೆ. ಪುರಾತನ ದೇಗುಲಗಳ ಮೂರ್ತಿಗಳನ್ನು ಅದು ಯಾವುದೇ ಶೈಲಿಯಲ್ಲಿರಲಿ, ಮೂಲಕ್ಕೆ ಧಕ್ಕೆ ಬಾರದಂತೆ ಪುನರ್ನವೀಕರಣ ಮಾಡಬಲ್ಲರು. ಮೈಸೂರು, ಬೆಂಗಳೂರು, ಮಹಾಬಲಿಪುರಂ, ಒರಿಸ್ಸಾ ಮತ್ತು ಹಂಪೆಯ ವಿಶ್ವವಿದ್ಯಾಲಯಗಳಲ್ಲಿ ಇವರ ಶಿಲ್ಪಕಲಾ ಪ್ರಾತ್ಯಕ್ಷಿಕೆಗಳು ಏರ್ಪಾಟಾಗಿವೆ. ಅವರ ಕರಕುಶಲ ವಸ್ತುಗಳ ಪ್ರದರ್ಶನ- ಶಿಲ್ಪ ಮಾರಾಟಗಳು ಬೆಂಗಳೂರು, ಮೈಸೂರು, ಹಳೇಬೀಡು, ಒರಿಸ್ಸಾ, ಪಾಟ್ನಾಗಳಲ್ಲಿ ನಡೆದಿವೆ. [೨]
ಆಸ್ಟ್ರೇಲಿಯಾದ ಕ್ಯಾನ್ಬೆರಾದಲ್ಲಿರುವ ಶ್ರೀ ಜಗದೀಶ್ ಎಂಬವರಿಗೆ ವಿವಿಧ ಶೈಲಿಯ, ವಿವಿಧ ಗಾತ್ರದ ೨೮ ಶಿಲಾವಿಗ್ರಗಳು, ಗೋಕರ್ಣ ಗಣೇಶನ ಕಾಷ್ಟಶಿಲ್ಪಗಳನ್ನು ಮಾಡಿಕೊಟ್ಟಿರುತ್ತಾರೆ.ಅಮೆರಿಕಾದ ಶ್ರೀ ಜಯದೇವ ತೆಲ್ಲಿಕಾಚಾರ್ಯರಿಗೆ ಹೊಯ್ಸಳ ಶೈಲಿಯ ೨೪ ಇಂಚಿನ ನಾಟ್ಯಸರಸ್ವತಿ, ಚಾಲುಕ್ಯಶೈಲಿಯ ೧೮ ಇಂಚಿನ ಗಣೇಶ ಶಿಲಾವಿಗ್ರಹಗಳನ್ನು ಮಾಡಿಕೊಟ್ಟಿರುತ್ತಾರೆ. ಜರ್ಮನಿಯ ಶ್ರೀ ಡೀತ್ ಎಂಬವರಿಗೆ ಅಮೃತಶಿಲೆಯಲ್ಲಿ "ಸ್ವಂತಸಂಯೋಜಿತ" ಶೈಲಿಯಲ್ಲಿ ೧೪ ಇಂಚಿನ ಸೂರ್ಯ, ಗುಪ್ತರಶೈಲಿಯ ೯ ಇಂಚಿನ ಮದನಿಕೆ ಶಿಲಾವಿಗ್ರಹಗಳನ್ನು ಮಾಡಿಕೊಟ್ಟಿರುತ್ತಾರೆ. ಇವಲ್ಲದೆ ಇಂಗ್ಲಂಡ್, ದುಬೈಗಳಿಗೂ ಕಲಾಕೃತಿಗಳು ಮಾರಾಟವಾಗಿವೆ.[೩]
ವಿಗ್ರಹಗಳು
[ಬದಲಾಯಿಸಿ]ಹಲವಾರು ಶಿಲ್ಪಗಳನ್ನು (ಸುಮಾರು ೭೦೦ ಕ್ಕೂ ಮಿಕ್ಕಿ) ವಿವಿಧ ಶೈಲಿಯಲ್ಲಿ ಮಾಡಿರುವರು. ಇಲ್ಲಿ ಕೆಲವು ಅವುಗಳ ಶೈಲಿಯೊಂದಿಗೆ ಅವುಗಳಿರುವ ಊರಿನ ಹೆಸರುಗಳೊಂದಿಗಿವೆ
ಹೊಯ್ಸಳ ಶೈಲಿಯಲ್ಲಿ
ಮೂಷಿಕವಾಹನ ಅಮೃತ ಗಣಪತಿ (ಚನ್ನರಾಯಪಟ್ಟಣ ದ ಅಮೃತ ಗಣಪತಿ ದೇವಸ್ಥಾನಕ್ಕೆ), ವೈನತೇಯ ಮತ್ತು ಅಂಡಾಳಮ್ಮನ ಶಿಲಾ ವಿಗ್ರಹ (ತಿಪಟೂರು,ನೊಣವಿನಕೆರೆಯ ಹೊಯ್ಸಳರ ಕಾಲದ ಶ್ರೀ ಗೋಪಾಲಕೃಷ್ಣ ದೇವಸ್ಥಾನಕ್ಕೆ), ಬಲಮುರಿ ಗಣಪತಿ (ಚನ್ನಪಟ್ಟಣ,ನಾಗಾವರದ ಜೂನಿಯರ್ ಕಾಲೇಜಿಗೆ), ಪರಿವಾರ ಸಹಿತ ಶ್ರೀ ರಾಮಚಂದ್ರ (ಎಡತೊರೆ ಮಠ), ವೀಣಾಪಾಣಿ ಶಾರದೆಯ ವಿಗ್ರಹ (ಮೈಸೂರಿನ ಸದ್ವಿದ್ಯಾ ಪಾಠಶಾಲೆ), ಯೋಗನರಸಿಂಹ ಹಾಗೂ ಸ್ಠೂಣ ನರಸಿಂಹ (ಶ್ರೀರಂಗಪಟ್ಟಣ,ಶ್ರೀ ನರಸಿಂಹ ಚೈತನ್ಯ ಮಠಕ್ಕೆ), ಮಹಾಲಿಂಗೇಶ್ವರ (ಮೈಸೂರು), ನಾಟ್ಯಸರಸ್ವತಿ (ಅಮೇರಿಕಾಕ್ಕೆ), ಧನ್ವಂತರಿ (ಧನ್ವಂತರಿ ವನ,ಬೆಂಗಳೂರು), ಪಾರ್ವತಿ (ಹಾಸನ ಶ್ರೀ ಕಾಡುಮಲ್ಲೇಶ್ವರ ದೇವಸ್ಥಾನಕ್ಕೆ). ಗೋಪಾಲಕೃಷ್ಣ ಮತ್ತು ಗಣಪತಿ ( ಮಂಗಳೂರಿನ ಗೋಪಾಲಕೃಷ್ಣ ದೇವಸ್ಥಾನಕ್ಕೆ). ಪಟ್ಟಾಭಿಷೇಕ ಸೀತಾರಾಮ, ಲಕ್ಷ್ಮಣ, ಭರತ, ಶತ್ರುಘ್ನ, ಆಂಜನೇಯ ಸಮೂಹ ಹಾಗೂ ಸೂರ್ಯದೇವ, ಗಣಪತಿ ಶಿಲಾ ವಿಗ್ರಹ ( ಮೈಸೂರು ಚಾಮುಂಡಿಬೆಟ್ಟದ ಶ್ರೀ ಸೀತಾರಾಮ ಮಂದಿರಕ್ಕೆ).
ಗಂಗರ ಶೈಲಿಯಲ್ಲಿ
ಭಕ್ತಾಂಜನೇಯ, ಜಯವಿಜಯ, ವೈನತೇಯ, ರಾಮಾನುಜಾಚಾರ್ಯ (ಮೈಸೂರಿನ ಟಿ. ನರಸೀಪುರದ ಶ್ರೀ ಶ್ರೀನಿವಾಸ ಶ್ರೀ ಲಕ್ಷ್ಮೀ ಹಯಗ್ರೀವ ಶ್ರೀ ಲಕ್ಷ್ಮೀ ವರಾಹ ದೇವಸ್ಥಾನಕ್ಕೆ), ಗಣಪತಿ, ನಾಗಸುಬ್ರಹ್ಮಣ್ಯ (ಶ್ರೀ ವಿನಾಯಕ ದೇವಸ್ಥಾನ ನಂಜನಗೂಡು)
ಕರಾವಳಿ ಶೈಲಿಯಲ್ಲಿ
ಸುಬ್ರಹ್ಮಣ್ಯ (ಕೊಡಗು -ಶ್ರೀ ಭಗವತಿ ಅಯ್ಯಪ್ಪ ದೇವಸ್ಥಾನಕ್ಕೆ), ಷಡಾಧಾರ ಗೋಪಾಲಕೃಷ್ಣ, ಜಲದುರ್ಗೆ (ದಕ್ಷಿಣ ಕನ್ನಡ-ಕನ್ಯಾನದ ೧೨ನೆಯ ಶತಮಾನದ ಶ್ರೀ ಬನಾರಿ ಗೋಪಾಲಕೃಷ್ಣ ದೇವಸ್ಥಾನಕ್ಕೆ ಪುನರ್ನಿಮಾಣ ಸಂದರ್ಭದಲ್ಲಿ), ವನದುರ್ಗೆ (ದಕ್ಷಿಣ ಕನ್ನಡ-ದೇಂತಡ್ಕ ಶ್ರೀ ವನದುರ್ಗಾ ದೇವಸ್ಥಾನಕ್ಕೆ), ಉಮಾಮಹೇಶ್ವರೀ, ದಶಭುಜ ಪತ್ನೀಸಮೇತ ಬಲಮುರಿ ಮಹಾಗಣಪತಿ, ನಂದಿ, ನಾಗರಕಲ್ಲು ಶಿಲಾ ವಿಗ್ರಹಗಳು, (ಬಲ್ಯ ಶ್ರೀ ಉಮಾಮಹೇಶ್ವರೀ ದೇವಸ್ಥಾನಕ್ಕೆ) ಯೋಗಗಣಪತಿ ಹಾಗೂ ಮಯೂರವಾಹನ ಶಿಲ್ಪಗಳು (ದಕ್ಷಿಣ ಕನ್ನಡ-ವಗೆನಾಡು ಶ್ರೀ ಸುಬ್ರಾಯ ದೇವಸ್ಥಾನಕ್ಕೆ), ಗೋಮಾತೆ (ದಕ್ಷಿಣ ಕನ್ನಡ-ವೇಣೂರಿನ ಗೋಶಾಲೆ), ಮಹಾವಿಷ್ಣು (ಕೆಮ್ಮಿಂಜೆ), ಜಲದುರ್ಗೆ, ಚಾಮುಂಡೇಶ್ವರಿ (ಕೇರಳ-ಕಣ್ಣೂರು)
ಪೂರ್ವಪಲ್ಲವ ಶೈಲಿಯಲ್ಲಿ
ಶ್ರೀನಿವಾಸ ಶಿಲ್ಪ (ಮೈಸೂರು ಶ್ರೀ ವಾಸವಿ- ಕನ್ನಿಕಾಪರಮೆಶ್ವರೀ ದೇವಸ್ಥಾನಕ್ಕೆ), ವೈನತೇಯ (ಟಿ.ನರಸೀಪುರ).
ಚಾಲುಕ್ಯ ಶೈಲಿಯಲ್ಲಿ
ಯಂತ್ರಗಣಪತಿ, ಮುಖಲಿಂಗೇಶ್ವರ, ನಂದಿ ಶಿಲಾವಿಗ್ರಹಗಳು (ಚನ್ನಪಟ್ಟಣಶ್ರೀ ಪಟ್ಟಾಭಿರಾಮರ ಆಶ್ರಮದ ಸಾಧನ ಸಂಗಮಕ್ಕೆ), ಅನ್ನಪೂರ್ಣೇಶ್ವರಿ (ಮೈಸೂರು), ಗಣಪತಿ(ಭೋಗಾದಿ), ಶ್ರೀ ದತ್ತಾತ್ರೇಯ, ಶ್ರೀ ರಾಮಕೃಷ್ಣ ಪರಮಹಂಸ, ಶ್ರೀ ಶಾರದಾಮಣಿ ದೇವಿ, ವಿವೇಕಾನಂದರ ವಿಗ್ರಹಗಳು(ದಕ್ಷಿಣ ಕನ್ನಡ-ಮೂಡಬಿದ್ರೆಯ ಧ್ಯಾನಮಂದಿರಕ್ಕೆ), ಶ್ರೀ ಸತ್ಯನಾರಾಯಣ, ಗಣಪತಿ (ಎಲೆಕ್ಟಾನಿಕ್ ಸಿಟಿ-ಪೊಲಿಮಾಟ್ರಿಕ್ಸ್ ಸಂಸ್ಠೆ-ಬೆಂಗಳೂರು), ಸಪ್ತರ್ಷಿಗಳು (ಕರ್ನಾಟಕ ಸರಕಾರದ ಅರಣ್ಯ ಇಲಾಖೆಯವರು ಶ್ರೀರಂಗಪಟ್ಟಣದ ಬಳಿ ಸ್ಥಾಪಿಸಿದ ಸಪ್ತರ್ಷಿ ವನಕ್ಕೆ ), ಶನಿದೇವರು,ವಾಹನ (ಬಿಡದಿ ಯ ನೂತನ ದೇವಸ್ಥಾನಕ್ಕೆ), ಮಹಾಕಾಳಿ (ಧಾರವಾಡ), ಲಕ್ಷ್ಮೀ ನರಸಿಂಹ (ಜರ್ಮನಿ). ಗಣಪತಿ (ಮೈಸೂರಿನ ಕಣ್ವ ಇಂಡಸ್ಟ್ರೀಸ್ ಗೆ)
ಚೋಳ ಶೈಲಿಯಲ್ಲಿ
ಅಗಸ್ತ್ಯ ಋಷಿ (ಆಂಧ್ರದ ಕುಪ್ಪಂನ ಅಗಸ್ತ್ಯ ಇಂಟರ್ ನ್ಯಾಶನಲ್ ಫೌಂಡೇಶನ್ ), ನಟರಾಜ ಶಿಲಾ ವಿಗ್ರಹ (ಕೆನಡಾ) ಸಿಧ್ಧಿ-ಬುಧ್ಧಿ (ಮೈಸೂರು ಶ್ರೀ ಸಿಧ್ಧಿ- ಬುಧ್ಧಿ ವಿನಾಯಕ ದೇವಸ್ಥಾನಕ್ಕೆ).
ಗುಪ್ತ ಶೈಲಿಯಲ್ಲಿ
ನೃತ್ಯ ಗಣಪತಿ, ಬುಧ್ಧಶಿರಸ್ಸು (ಅಮೇರಿಕ).
ಕದಂಬ ಶೈಲಿಯಲ್ಲಿ
ಭಕ್ತಾಂಜನೇಯನ ವಿಗ್ರಹ (ಸಿರ್ಸಿ-ಸಿಧ್ಧಾಪುರ ಸಮೀಪದ ಅಗ್ಗರೆಯ ದೇವಸ್ಥಾನಕ್ಕೆ).
ವಿಜಯನಗರ ಶೈಲಿಯಲ್ಲಿ
ದುರ್ಗಾದೇವಿ, ಗಣಪತಿ, ಸುಬ್ರಹ್ಮಣ್ಯ, ಗೋಕರ್ಣ ಗಣಪತಿ (ಬೆಂಗಳೂರಿನ ರಾವುಗೋಡ್ಲು ದುರ್ಗಾ ದೇವಸ್ಥಾನಕ್ಕೆ), ವೀರಾಂಜನೇಯ (ಮೈಸೂರು,ರೂಪಾನಗರದ ದ್ವಾರಮಂಟಪಕ್ಕೆ),ಷಟ್ಕೋನ ಯಂತ್ರಸ್ಠದಲ್ಲಿ ಧ್ಯಾನಸ್ಠ ಆಂಜನೇಯನ ಕಾಷ್ಟ ಶಿಲ್ಪ (ಎಲೆಕ್ಟಾನಿಕ್ ಸಿಟಿ-ಬೆಂಗಳೂರು ಪೊಲಿಮ್ಯಾಟ್ರಿಕ್ಸ್ ಸಂಸ್ಥೆಗೆ).
ನಾಯಕರ ಶೈಲಿ
ಸಪ್ತಮಾತೃಕೆಯರ ವಿಗ್ರಹ, ವೀರಭದ್ರ ಹಾಗೂ ಸುಬ್ರಹ್ಮಣ್ಯ (ಬಿಡದಿಯ ಶ್ರೀ ರಾಮಲಿಂಗೇಶ್ವರ ದೇವಸ್ಥಾನಕ್ಕೆ).
ಆಂಧ್ರ-ಕರ್ನಾಟಕ-ತಮಿಳ್ನಾಡಿನ ಗಡಿಪ್ರದೇಶದ ಕೊಪ್ಪಂನಲ್ಲಿ ಅಗಸ್ತ್ಯ ಇಂಟರ್ ನ್ಯಾಶನಲ್ ಫೌಂಡೇಶನ್ ನ ದ್ರಾವಿಡ ಯೂನಿವೆರ್ಸಿಟಿಗೆ ತಯಾರಿಸಿದ ಏಳು ಅಡಿಗಳ ಅಗಸ್ತ್ಯ ಮುನಿಗಳ ವಿಗ್ರಹವು ಅವರು ತಯಾರಿಸಿದ ಅತಿ ಎತ್ತರದ ವಿಗ್ರಹ. ಆರೂವರೆ ಅಡಿ ಎತ್ತರದ ಹೊಯ್ಸಳ ಶೈಲಿಯ ಯೋಗ ನರಸಿಂಹನ ವಿಗ್ರಹ ಅತಿ ಹೆಚ್ಚು ಕುಸುರಿ ಕೆಲಸ ಹೊಂದಿರುವ ವಿಗ್ರಹ. ೨೧ ಇಂಚಿನ ಅಂಬೇಡ್ಕರ್ ರವರ ಭಾವಶಿಲ್ಪ ಬೆಂಗಳೂರು- ತುಮಕೂರು ರಸ್ತೆಯ ರಾಮಾಜೋಯಿಸ್ ನಗರದ ಉದ್ಯಾವನಕ್ಕೆ ಮಾಡಿಕೊಟ್ಟಿರುತ್ತಾರೆ. ಮೈಸೂರಿನ ಇಟ್ಟಿಗೆಗೂಡು ಶ್ರೀ ಶಿರಡಿ ಬಾಬಾ ಭಜನಾ ಮಂದಿರಕ್ಕೆ ಶ್ರೀ ಶಿರಡಿ ಸಾಯಿ ಬಾಬಾ ರವರ ಶಿಲಾ ವಿಗ್ರಹ ಮಾಡಿರುತ್ತಾರೆ. ಮೈಸೂರಿನ ವೀಣೆ ಶೇಷಣ್ಣ ಭವನಕ್ಕೆ ತಯಾರಿಸಿಕೊಟ್ಟ ಯಥಾ ಅಳತೆಯ ಕಲ್ಲಿನ ವೀಣೆ (ಸೂಕ್ಷ್ಮವಾಗಿ ಆಲಿಸಿದರೆ ಈ ವೀಣೆಯಲ್ಲಿ ಸಪ್ತಸ್ವರಗಳನ್ನು ಕೇಳಬಹುದು.)ಯನ್ನು ನೋಡಿ ಡಾ.ವಿ.ದೊರೆಸ್ವಾಮಿ ಅಯ್ಯಂಗಾರರು ಮರದಿಂದ ಮಾಡಿದ್ದೆಂದೇ ತಿಳಿದಿದ್ದರಂತೆ. ಆಶ್ಚರ್ಯಚಕಿತರಾಗಿ ಕೇಳಿಯೂಬಿಟ್ಟರಂತೆ...."ಇದನ್ನು ನೀವು ಹೇಗೆ ಸಂರಕ್ಷಿಸಿಡುತ್ತೀರಿ" ಎಂದು. ಆಗ ಹತ್ತಿರದಲ್ಲಿದ್ದ ಎಮ್.ಎಸ್.ರಾಜಗೋಪಾಲರು (ಭವನದ ವಾಸ್ತುಶಿಲ್ಪಿ) ಇದು ಶ್ಯಾಮಸುಂದರರು ಕಲ್ಲಿನಿಂದ ಮಾಡಿದ ಶಿಲ್ಪ ಎಂದು ಇವರನ್ನು ಪರಿಚಯಿಸಿದರಂತೆ.
ಧಾರ್ಮಿಕ ಕ್ಷೇತ್ರಗಳಿಗೆ ನೀಡಲು ದೇವರ ವಿಗ್ರಹಗಳ ರಚನೆಯಲ್ಲಿ ತೊಡಗಿದ್ದಾಗ ಸಂಭವಿಸಿದ ಒಂದೆರಡು ಘಟನೆಗಳು
ಮಂಗಳೂರು ಸಮೀಪದ ಆದ್ಯಪಾಡಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಹೊಯ್ಸಳ ಶೈಲಿಯ ೫೨ ಇಂಚಿನ ಶ್ರೀ ದುರ್ಗಾಪರಮೇಶ್ವರಿಯ ವಿಗ್ರಹ ತಯಾರಿಸಿ ನೀಡಿದ್ದರು. ನೇತ್ರೋನ್ಮಿಲನ ( ನೇತ್ರ ಬಿಡಿಸುವುದು) ಕಾರ್ಯವನ್ನು ದೇವಸ್ಥಾನದಲ್ಲಿ ಸೂರ್ಯೋದಯಕ್ಕೆ ಮುನ್ನ ಬ್ರಾಹ್ಮೀ ಮುಹೂರ್ತದಲ್ಲಿ ನಡೆಸಲಾಗುತ್ತದೆ. ಅದಕ್ಕಾಗಿ ದೇವಾಲಯದ ಆಗ್ನೇಯ ಮೂಲೆಯಲ್ಲಿ ಅಗ್ನಿ ಪ್ರತಿಷ್ಠಾಪನೆ ಮಾಡಲಾಗುತ್ತದೆ. ಅಂದು ದುರ್ಗೆಯ ವಿಗ್ರಹಕ್ಕೆ ನೇತ್ರ ಬಿಡಿಸುತ್ತಿರಬೇಕಾದರೆ ಸಣ್ಣದಾಗಿ ಉರಿಯುತ್ತಿದ್ದ ಬೆಂಕಿಯು ಒಮ್ಮೆಲೆ ದೊಡ್ಡ ಶಬ್ದದೊಂದಿಗೆ ೧೦ ಅಡಿಗಳಷ್ಟು ಎತ್ತರಕ್ಕೆ ತನ್ನ ಜ್ವಾಲೆಯನ್ನು ಚಾಚಿತ್ತು. ಇನ್ನೊಂದೆಡೆ ದಕ್ಷಿಣ ಕನ್ನಡದ ಪುತ್ತೂರು ಸಮೀಪದ ಕೆಮ್ಮಿಂಜೆ ದೇವಸ್ಥಾನಕ್ಕಾಗಿ ಮಹಾವಿಷ್ಣುವಿನ ವಿಗ್ರಹದ ಕೆತ್ತನೆಯ ಕಾರ್ಯದಲ್ಲಿ ತೊಡಗಿದ್ದಾಗ, ಕೆಲಸ ಸುಮಾರು ಮುಕ್ಕಾಲು ಭಾಗ ಮುಗಿದಿತ್ತು. ಅದೊಂದು ದಿನ ಕೆಲಸದಿಂದೆದ್ದು ಮನೆಯ ಬಾಲ್ಕನಿಗೆ ಬಂದಾಗ ಗರುಡವೊಂದು ತನ್ನ ತಲೆಯ ಸನಿಹದಲ್ಲಿಯೇ ಹಾರಿಹೋಯಿತಂತೆ. ಮತ್ತೆ ವಿಗ್ರಹದ ಕೆತ್ತನೆಯಲ್ಲಿ ತೊಡಗಿದಾಗ ವಿಗ್ರಹಕ್ಕೆ ಒಂದು ಸುತ್ತು ಬಂದು ಕಾಣದಾಯಿತಂತೆ. ಉಪ್ಪಿನಂಗಡಿಯ ಪಡಾಳದ ಸುಬ್ರಹ್ಮಣ್ಯನ ಪ್ರತಿಷ್ಠಾಕಾಲದಲ್ಲಿ ಸ್ವತಃ ಕಾಳಿಂಗ ಸರ್ಪವೇ ಕಾಣಿಸಿಕೊಂಡಿತ್ತಂತೆ.
ಕಲಾ ಶಿಕ್ಷಕರಾಗಿ
[ಬದಲಾಯಿಸಿ]- ೧೯೯೧ ರಿಂದ ೧೯೯೩ ರವರೆಗೆ ಬಿಡದಿಯ ಶಿಲ್ಪಕಲಾ ಕರಕುಶಲ ತರಬೇತಿ ಕೇಂದ್ರದಲ್ಲಿ ಕಲಾಶಿಕ್ಷಕರಾಗಿ ದುಡಿಮೆ
- ೧೯೯೪ ರಲ್ಲಿ ಕೆಂಗಲ್ಲಿನ ಗಂಗರಸ ಶಿಲ್ಪಕಲಾ ತರಬೇತಿ ಕೇಂದ್ರದಲ್ಲಿ ಕಲಾಶಿಕ್ಷಕರಾಗಿ ದುಡಿಮೆ.
- ೧೯೯೭ ರಲ್ಲಿ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಇವರ ಸಹಯೋಗದಲ್ಲಿ ೭ ದಿನಗಳ ಕಾಲ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಸಿದ ಗಿರಿಜನ ಯುವಕರಿಗಾಗಿ ಸಾಂಪ್ರದಾಯಿಕ ಶಿಲ್ಪಕಲಾ ಕಾರ್ಯಾಗಾರದಲ್ಲಿ ನಿರ್ದೇಶಕರಾಗಿ ದುಡಿಮೆ.
- ೨೦೧೩ ರಲ್ಲಿ ತಿರುವನಂತಪುರ ನಲ್ಲಿನ ಅಮೃತ ವಿಶ್ವವಿದ್ಯಾಪೀಠಂ-ಅಮೃತ ಶಿಲ್ಪಕಲಾಕ್ಷೇತ್ರದಲ್ಲಿ ಗೌರವ ಶಿಕ್ಷಕರಾಗಿ ಕಾರ್ಯ ನಿರ್ವಹಣೆ.
ಭಾಗವಹಿಸುವಿಕೆ
[ಬದಲಾಯಿಸಿ]- ೧೯೯೩ ರಲ್ಲಿ ಹಳೇಬೀಡಿನ ಪುಷ್ಪಗಿರಿಯಲ್ಲಿ ಹೊಯ್ಸಳ ಮಹೋತ್ಸವದಲ್ಲಿ ಶಿಲ್ಪಕಲಾ ಪ್ರಾತ್ಯಕ್ಷಿಕೆ ಮತ್ತು ಪ್ರದರ್ಶನ.
- ೧೯೯೩-೯೪ ರಲ್ಲಿ ನವದೆಹಲಿಯ ಮಾಡರ್ನ್ ಸ್ಕೂಲ್ ನಲ್ಲಿ ಪ್ರಾತ್ಯಕ್ಷಿಕೆ- ಪ್ರದರ್ಶನ.
- ೧೯೯೫ ರಲ್ಲಿ ಭುವನೇಶ್ವರದಲ್ಲಿ ಏರ್ಪಡಿಸಲಾದ ಶಿಲ್ಪಕಲಾ ಪ್ರಾತ್ಯಕ್ಷಿಕೆ- ಪ್ರದರ್ಶನ.
- ೧೯೯೬ ರಲ್ಲಿ ದಕ್ಷಿಣವಲಯ ಸಾಂಸ್ಕೃತಿಕ ಕೇಂದ್ರ, ತಂಜಾವೂರು ಮತ್ತು ಕರ್ನಾಟಕ ಶಿಲ್ಪಕಲಾ ಅಕಾಡೆಮಿ, ಬೆಂಗಳೂರು ಇವರ ವತಿಯಿಂದ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಶಿಲ್ಪಕಲಾ ಪ್ರದರ್ಶನ, ಅದೇ ವರ್ಷ ಕರ್ನಾಟಕದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಅಂಗವಿಕಲ ದಿನಾಚರಣೆ ಸಲುವಾಗಿ ವೆಂಕಟಪ್ಪ ಆರ್ಟ್ಸ್ ಗ್ಯಾಲರಿಯಲ್ಲಿ ನಡೆದ ಶಿಲ್ಪಕಲಾ ಪ್ರದರ್ಶನ.
- ೧೯೯೮ ರಲ್ಲಿ ಮೈಸೂರಿನಲ್ಲಿ ನಡೆದ "ಮಾರ್ಕೆಟ್ ಮೀಟ್" ನಲ್ಲಿ ಶಿಲ್ಪಗಳ ಪ್ರದರ್ಶನ.
- ೧೯೯೯ ರಲ್ಲಿ ಮೈಸೂರು ಜಿಲ್ಲಾ ಪರಿಷತ್ತಿನವರು " ಇನ್ಸಿಟ್ಯೂಟ್ ಆಫ್ ಇಂಜಿನಿಯರ್ಸ್" ನಲ್ಲ ನಡೆಸಿದ ಕೈಗಾರಿಕೋತ್ಸವದಲ್ಲಿ ಶಿಲ್ಪಕಲಾಕೃತಿಗಳ ಪ್ರದರ್ಶನ.
- ೨೦೦೯ ರಲ್ಲಿ ೮ ದಿವಸಗಳ ದಸರಾ ಕಾವಾ ಮೇಳದಲ್ಲಿ ಪ್ರಾತ್ಯಕ್ಷಿಕೆ.
ಇವುಗಳಲ್ಲದೆ ಶಿಬಿರಗಳಲ್ಲಿ ಪ್ರಾತ್ಯಕ್ಷಿಕೆ- ಪ್ರದರ್ಶನಗಳೂ ಜರುಗಿವೆ.
- ೧೯೯೦ ರಲ್ಲಿ ಬೆಂಗಳೂರಿನ ಶಿಲ್ಪಕಲಾ ಪ್ರತಿಷ್ಠಾನ- ಬಸವನಗುಡಿಯವರು ನಡೆಸಿದ ೧೫ ದಿವಸಗಳ ಹೊಯ್ಸಳ ಶಿಬಿರ; ಮೈಸೂರು ಆಡಳಿತ ತರಬೇತಿ ಸಂಸ್ಠೆಯಲ್ಲಿ ನಡೆದ ೧೫ ದಿವಸಗಳ ಚಾಲುಕ್ಯ ಶಿಬಿರ ; ತಮಿಳುನಾಡಿನ ಮಹಾಬಲಿಪುರಂನಲ್ಲಿ ದಕ್ಷಿಣ ವಲಯ ಸಾಂಸ್ಜೃತಿಕ ಕೇಂದ್ರ- ತಂಜಾವೂರು ಇವರು ನಡೆಸಿದ ೧೫ ದಿವಸಗಳ ಅಖಿಲ ಭಾರತ ಶಿಲ್ಪಕಲಾ ಶಿಬಿರ ; ಮೈಸೂರಿನ ಜಿಲ್ಲಾ ಪರಿಷತ್ ನಡೆಸಿದ ಸತತ ೪೫ ದಿವಸಗಳ ಮೈಸೂರು ದಸರಾ ವಸ್ತು ಪ್ರದರ್ಶನದಲ್ಲಿ ಶಿಲಾವಿಗ್ರಹಗಳ ಕೆತ್ತನೆ ಪ್ರಾತ್ಯಕ್ಷಿಕೆ ಮತ್ತು ಪ್ರದರ್ಶನದಲ್ಲಿ ಪಾಲ್ಗೊಳ್ಳುವಿಕೆ.
- ೧೯೯೧ ರಲ್ಲಿ ಬಿಹಾರದ ಪಾಟ್ನಾದಲ್ಲಿ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಠೆಯು ಏರ್ಪಡಿಸಿದ ಕಲಾಮೇಳದಲ್ಲಿ ಭಾಗವಹಿಸಿ, ವಿಗ್ರಹಗಳ ರಚನಾ ಪ್ರಾತ್ಯಕ್ಷಿಕೆ. *. ೧೯೯೬ ರಲ್ಲಿ ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಮತ್ತು ದಕ್ಷಿಣವಲಯ ಸಾಂಸ್ಕೃತಿಕ ಕೇಂದ್ರ ತಂಜಾವೂರು ಇವರ ಸಂಯುಕ್ತ ಆಶ್ರಯದಲ್ಲಿ ಶಿವಾರ ಪಟ್ಟಣದಲ್ಲಿ ೭ ದಿನಗಳ ಕಾಲ ಆಯೋಜಿಸಿದ ಸಾಂಪ್ರದಾಯಿಕ ಶಿಲ್ಪಕಲಾ ಶಿಬಿರದಲ್ಲಿ ಪಾಲ್ಗೊಳ್ಳುವಿಕೆ
- ೧೯೯೭ ರಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯ ನಡೆಸಿದ ೧೧ ದಿನಗಳ ಸಾಂಪ್ರದಾಯಿಕ ಶಿಲ್ಪಕಲಾ ಶಿಬಿರದಲ್ಲಿ ಪಾಲ್ಗೊಳ್ಳುವಿಕೆ.
- ೨೦೦೦ ದಲ್ಲಿ ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಬೆಂಗಳೂರು, ಇವರು ಬೆಂಗಳೂರಿನ ಕನ್ನಡ ಭವನಕ್ಕೆ ಹೊಯ್ಸಳ ಶಿಲ್ಪಗಳ ಕೊಡುಗೆಗಾಗಿ ನಡೆಸಿದ ಶಿಲ್ಪ ಶಿಬಿರದಲ್ಲಿ ಪಾಲ್ಗೊಳ್ಳುವಿಕೆ.
- ೨೦೦೭ ರಲ್ಲಿ ಸುವರ್ಣ ಕರ್ನಾಟಕ ವರ್ಷಾಚರಣೆ ಅಂಗವಾಗಿ ಚಾಮರಾಜನಗರದಲ್ಲಿ ಏರ್ಪಡಿಸಿದ ೧೨ ದಿನಗಳ ಶಿಬಿರದಲ್ಲಿ ಪಾಲ್ಗೊಳ್ಳುವಿಕೆ.* ೨೦೧೪ ರಲ್ಲಿ ಬಳ್ಳಾರಿಯಲ್ಲಿ ಹಿರಿಯ ಶಿಲ್ಪಿಯಾಗಿ ಭಾಗವಹಿಸುವಿಕೆ.
ಪ್ರಶಸ್ತಿಗಳು
[ಬದಲಾಯಿಸಿ]- ಸತತವಾಗಿ ೧೯೯೦ ರಿಂದ ೧೯೯೩ ರವರೆಗೆ ನಾಲ್ಕು ವರ್ಷಗಳ ಕಾಲ ಮೈಸೂರು ದಸರಾ ಮಹೋತ್ಸವದಲ್ಲಿ ಪ್ರಶಸ್ತಿ ಮತ್ತು ಬಹುಮಾನಗಳು.
- ೧೯೯೧ ರಲ್ಲಿ ಮೈಸೂರಿನ ಅರಮನೆ ಪ್ರಾಂಗಣದಲ್ಲಿ ನಡೆದ ೬೦ ನೆಯ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರಶಸ್ತಿ.
- ೧೯೯೧ ರಲ್ಲಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಕೇಂದ್ರ, ಮೈಸೂರು ಇವರು ಏರ್ಪಡಿಸಿದ ಅಖಿಲ ಭಾರತದ ಕರಕುಶಲ ಸಪ್ತಾಹದ ಪ್ರಶಸ್ತಿ.
- ೧೯೯೯ ರಲ್ಲಿ ರೋಟರಿ ಮತ್ತು ರಾಮ್ ಸನ್ ಕಲಾಪ್ರತಿಷ್ಠಾನದವರಿಂದ ಶಿಲ್ಪಕಲಾ ನೈಪುಣ್ಯತೆ ಮತ್ತು ಪರಿಣತಿಗಾಗಿ ಪ್ರಶಸ್ತಿ.
- ೧೯೯೯-೨೦೦೦ ದಲ್ಲಿ ರಾಮ್ ಸನ್ ಕಲಾಪ್ರತಿಷ್ಠಾನದವರ ಶಿಲ್ಪಶ್ರೀ ಕಲಾಪ್ರಶಸ್ತಿ. ( ಹೊಯ್ಸಳ ಶೈಲಿಯ ೧೮ ಇಂಚಿನ ಸ್ಠೂಣನರಸಿಂಹ ವಿಗ್ರಹದ ಮೆಚ್ಚುಗೆಗೆ)
- ೨೦೦೩ ರಲ್ಲಿ ದಕ್ಷಿಣ ಕನ್ನಡದ ಬೆಳ್ತಂಗಡಿಯಲ್ಲಿ "ಉಂಡೆಮನೆ ಪ್ರಶಸ್ತಿ". ( ಶಿಲ್ಪಕಲಾ ನೈಪುಣ್ಯತೆ ಮತ್ತು ಕೌಶಲ್ಯತೆಗಾಗಿ)
- ೨೦೧೦ ರಲ್ಲಿ ಮೈಸೂರಿನ ಹೊಯ್ಸಳ ಕನ್ನಡಸಂಘ ಮತ್ತು ಸವಿಗನ್ನಡ ಪತ್ರಿಕಾಬಳಗ ( ಸರಕಾರೇತರ ಸಂಸ್ಠೆ) ಮೈಸೂರು ಪರವಾಗಿ ಶಿಲ್ಪಕಲೆಯಲ್ಲಿ ನಿರಂತರ ದುಡಿಮೆಗಾಗಿ ರಾಜ್ಯಮಟ್ಟದ ಹೊಯ್ಸಳ ಪ್ರಶಸ್ತಿ.
- ೨೦೧೧ ರಲ್ಲಿ ಬೆಂಗಳೂರಿನ ಕನ್ನಡ ಅಭಿವೃದ್ಧಿ ಸಮಿತಿಯ ( ಸರಕಾರೇತರ ಸಂಸ್ಠೆ) ಕನ್ನಡ ರಾಜ್ಯೋತ್ಸವ ಪ್ರಶಸ್ತಿ.
- ೨೦೧೧ ರಲ್ಲಿ ಮೈಸೂರಿನ ಶಾಸ್ತ್ರಿ ಫೌಂಡೇಶನ್ ವತಿಯಿಂದ ಶಿಲ್ಪಕಲೆಯಲ್ಲಿ ನಿರಂತರ ಸಾಧನೆಗಾಗಿ ಗೌರವ ಮತ್ತು ಪ್ರಶಸ್ತಿ.
- ೨೦೧೪ ರ ಹತ್ತನೆಯ ವಾರ್ಷಿಕ ಶಿಲ್ಪಕಲಾ ಪ್ರದರ್ಶನದಲ್ಲಿ ಕರ್ನಾಟಕ ಶಿಲ್ಪಕಲಾ ಅಕಾಡೆಮಿ ವತಿಯಿಂದ ಸಾಂಪ್ರದಾಯಿಕ ಶಿಲ್ಪಕಲೆಯಡಿಯಲ್ಲಿ, ಕಲ್ಲಿನಲ್ಲಿ ಕೆತ್ತಿದ ವೀಣಾಪಾಣಿ ಶಾರದೆಗೆ ( ೧೯ ಇಂಚು) ಪ್ರಶಸ್ತಿ ಮತ್ತು ಪುರಸ್ಕಾರ.
- ೨೦೧೭ ರಲ್ಲಿ ಶಿಲ್ಪಕಲಾ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ಕರ್ನಾಟಕ ಶಿಲ್ಪಕಲಾ ಅಕಾಡೆಮಿಯಿಂದ ಗೌರವ ಪ್ರಶಸ್ತಿ ಪುರಸ್ಕಾರ.
ಪತ್ರಿಕಾ ಮಾಧ್ಯಮ ವರದಿಗಳು
[ಬದಲಾಯಿಸಿ]- ನಾಡಿನ ಪತ್ರಿಕೆಗಳಾದ ಉದಯವಾಣಿ, ವಿಜಯವಾಣಿ, ಸಂಯುಕ್ತ ಕರ್ನಾಟಕ, ಹೊಸ ದಿಗಂತ, ಉತ್ತರದೇಶ( ಕಾಸರಗೋಡು)ಮೈಸೂರುಮಿತ್ರ, ಆಂದೋಲನ, ಡೆಕ್ಕನ್ ಹೆರಾಲ್ಡ್, ದಿ ಹಿಂದೂ, ಸ್ಟಾರ್ ಆಫ್ ಮೈಸೂರು, ಟೈಮ್ಸ್ ಆಫ್ ಇಂಡಿಯ ( ಪಾಟ್ನಾ) ಇತ್ಯಾದಿ ದಿನಪತ್ರಿಕೆಗಳಲ್ಲಲ್ಲದೆ, ತರಂಗ, ಸುಧಾ, ಕರ್ಮವೀರ, ಈ ನಾಡು ( ಆಂಧ್ರಪತ್ರಿಕೆ), ನೂತನ ವಾರಪತ್ರಿಕೆಗಳಲ್ಲಿ ಶಿಲ್ಪಗಳ ಛಾಯಾಚಿತ್ರಗಳೊಂದಿಗೆ ವರದಿಗಳು ಪ್ರಕಟಗೊಂಡಿವೆ.
- ಶ್ರೀ ಸಾ. ಕೃ. ರಾಮಚಂದ್ರರಾಯರ "ದಿ ಹಿಲ್ ಶ್ರೈನ್ ಆಫ್ ವೆಂಗಡಮ್" ಮತ್ತು "ನವಗ್ರಹಕೋಶ-೨" ಎಂಬ ಎರಡು ಉದ್ಗ್ರಂಥಗಳಲ್ಲಿ ಶಿಲ್ಪಗಳ ಛಾಯಾಚಿತ್ರಗಳ ಪ್ರಕಟಣೆಯಿದೆ.
- ಕನ್ನಡ ’ಈ ಟಿವಿ’ ಚಾನೆಲ್ ನಲ್ಲಿ ವಿಶೇಷ ವರದಿ ಮತ್ತು ಸಂದರ್ಶನ.
- ಬೆಂಗಳೂರು ದೂರದರ್ಶನದ 'ಅವಲೋಕನ' ಕಾರ್ಯಕ್ರಮದಲ್ಲಿ (೨೮೪ನೆಯ ಸಂಚಿಕೆ) ವಿಶೇಷ ಸಂದರ್ಶನ -ವರದಿ.
- ಮೈಸೂರು ಆಕಾಶವಾಣಿಯ 'ಬಿಂಬ' ಕಾರ್ಯಕ್ರಮದಲ್ಲಿ (೩೧-೦೭-೨೦೧೧) ಸಂದರ್ಶನ.
- ಬೆಂಗಳೂರು ದೂರದರ್ಶನದ 'ಸಾಧಕರೊಂದಿಗೆ ಸಂವಾದ' (೩೦-೦೮-೨೦೧೨) ಕಾರ್ಯಕ್ರಮದಲ್ಲಿ ಭಾಗವಹಿಸುವಿಕೆ.
- ಬೆಂಗಳೂರು ದೂರದರ್ಶನದ ಬೆಳಗು ಕಾರ್ಯಕ್ರಮದಲ್ಲಿ (೧೨-೦೨-೨೦೧೬) ಸಂದರ್ಶನ.
ಶಿಲ್ಪಕಲೆಗೆ ಅದರಲ್ಲೂ ಕಲ್ಲಿನಲ್ಲಿ ಕೆತ್ತುವ ಕೆಲಸಕ್ಕೆ ಶರೀರದ ಬಲ ಹೆಚ್ಚಾಗಿಯೇ ಬೇಕಾಗುತ್ತದೆ. ಅವರಿಗೆ ಈ ಅನುಕೂಲ ಸ್ವಲ್ಪ ಕಮ್ಮಿ.ಆರೋಗ್ಯವೂ ಅಷ್ಟಕ್ಕಷ್ಟೆ. ಆದರೆ ಶ್ಯಾಮಸುಂದರರು ದೇಹಬಲವನ್ನು ಹೊರತುಪಡಿಸಿ, ಕೇವಲ ಮನೋಬಲದಿಂದ, ಸಂಕಲ್ಪಶಕ್ತಿಯಿಂದ ದೇಹದ ದೌರ್ಬಲ್ಯವನ್ನು ಸವಾಲಾಗಿ ಸ್ವೀಕರಿಸಿ ಕೆಲಸ ಮಾಡಿದವರು. ಒಂದು ಕಲೆಯು ಉತ್ತಮವಾಗಿರಬೇಕಾದರೆ ಕಲೆಗಾರನ ವ್ಯಕ್ತಿತ್ವದಲ್ಲೂ ಔನ್ನತ್ಯವಿರಬೇಕು. ಶಿಲೆಯಲ್ಲಿ ಕೆತ್ತುವ ಮೂರ್ತಿಯು ಸೌಂದರ್ಯ, ಜೀವಕಳೆ ಹೊಂದಬೇಕಾದರೆ ಶಿಲ್ಪಿಯಲ್ಲಿ ನಿಯಮ, ನಿಷ್ಠೆ, ಏಕಾಗ್ರತೆ, ಪ್ರಾಮಾಣಿಕತನ ಅತೀ ಮುಖ್ಯ. ವಿಗ್ರಹಗಳಲ್ಲಿ ಸೌಂದರ್ಯ ಬರಬೇಕಾದರೆ ಆಯಾ ದೇವತೆಗಳ ವಿವರಗಳಿರುವ ಧ್ಯಾನ ಶ್ಲೋಕ, ಲಕ್ಷಣದ ಅಧ್ಯಯನ, ಪ್ರಾಚೀನ ಶಿಲ್ಪಗಳ ಅನುಭವ, ಪ್ರಮಾಣಬಧ್ಧ ಅಳತೆ, ಶರೀರಶಾಸ್ತ್ರ, ಸೌಂದರ್ಯದ ಪೂರ್ಣಕಲ್ಪನೆಯನ್ನು ಸಾದರಪಡಿಸುವಿಕೆ ಮುಖ್ಯವಾಗಿರುತ್ತದೆ. ಒಂದುಕಡೆ ಸಂದರ್ಶನದಲ್ಲಿ ಅವರು ಈ ರೀತಿ ಹೇಳಿರುತ್ತಾರೆ....’ ಶಿಲ್ಪಿ ಆಗಬೇಕಿದ್ದರೆ ಪ್ರಾಥಮಿಕವಾಗಿ ಚಿತ್ರಕಲೆಯ ಅರಿವಿರಬೇಕು, ಚಿತ್ರ ಬರೆಯುವ ಸಾಮರ್ಥ್ಯವಷ್ಟೇ ಅಲ್ಲ, ಜೀವಶಾಸ್ತ್ರದ ( ಅನಾಟಮಿ) ಅರಿವಿರಬೇಕು. ದೇಹಾಂಗ ರಚನೆಗೆ ( ಭಂಗಿ, ಹಸ್ತ, ವಿನ್ಯಾಸ..ಇತ್ಯಾದಿಯ ರಚನೆಗೆ) ಜೀವಶಾಸ್ತ್ರದ ಅರಿವಷ್ಟೇ ಸಾಲದು, ಭರತನಾಟ್ಯದ ಅರಿವಿರಬೇಕು. ಭಂಗಿಯೊಂದಿಗೆ ಭಾವ- ನವರಸ ಬರಬೇಕಿದ್ದರೆ ಸಂಗೀತದ ಅರಿವಿರಬೇಕು. ಹೀಗೆ ಶಿಲ್ಪ ರಚನೆಗೆ ವಿಶಾಲ ತಳಹದಿಯಿದ್ದರೆ ಉತ್ತಮ’ ಎಂಬುದು ಅವರ ಅಭಿಪ್ರಾಯ.
ಶಿಲ್ಪಗಳನ್ನು ಬೇಡಿಬಂದವರಿಗೆ ಸರಿಯಾದ ವಿವರಗಳು ತಿಳಿದಿರದಿದ್ದರೆ, ತಾವೇ ತಿಳಿದುಕೊಳ್ಳಲು ಪ್ರಯತ್ನಿಸುತ್ತಾರೆ. ಸಪ್ತಮಾತೃಕೆಯರ, ಶಕ್ತಿದೇವತೆಯರ ಮೂರ್ತಿಗಳು ಬೇಕೆಂದುಬಂದವರಿಗೆ ನಾಯಕ ಶೈಲಿ, ಮದನಿಕೆಗೆ ಹೊಯ್ಸಳ ಶೈಲಿ, ನಟರಾಜನಿಗೆ ಚಾಲುಕ್ಯ ಶೈಲಿ, ರಾಮ ಪರಿವಾರಕ್ಕೆ ಚೋಳ ಶೈಲಿ, ಗಣಪತಿಗೆ ಮೈಸೂರು ಶೈಲಿ ಮತ್ತು ಮಾರಮ್ಮನಿಗೆ ಜಾನಪದ ಶೈಲಿ ಎಂದು ಸಲಹೆಮಾಡುತ್ತಾರೆ.
ಕೆತ್ತನೆಗೆ ಕೃಷ್ಣಶಿಲೆ, ಸ್ಯಾಂಡ್ ಸ್ಟೋನ್, ಕೆಂಪು, ಬಿಳಿ ಕಲ್ಲುಗಳು ಉತ್ತಮವಂತೆ. ಹೆಚ್.ಡಿ.ಕೋಟೆ, ಬಾಗಲಕೋಟೆ, ಕಾರ್ಕಳಗಳಿಂದೆಲ್ಲ ಕಲ್ಲುಗಳನ್ನು ಆರಿಸಿ ತರುತ್ತಿದ್ದರು. ಕಲ್ಲು ಟೊಳ್ಳೋ,ಗಟ್ಟಿಯೋ ಎಂದು ಬಡಿದುನೋಡಿ ತಿಳಿಯುತ್ತಾರೆ. ಕೆತ್ತಬೇಕಾದ ಕಲ್ಲಿನ ಪೂರ್ಣ ಮಾಹಿತಿ ಇವರಿಗಿದೆ. ಯಾವ ಕಲ್ಲು ಯಾವ ಕಾರ್ಯಕ್ಕೆ ಸೂಕ್ತ ಎಂಬುದನ್ನು ಕಲ್ಲನ್ನು ಪರಿಶೀಲಿಸಿ ತಿಳಿಯುತ್ತಾರೆ. ಶಿಲೆಗಳಲ್ಲಿ ಪುರುಷ ಶಿಲೆ, ಸ್ತ್ರೀ ಶಿಲೆ, ನಪುಂಸಕ ಶಿಲೆಯೆಂದು ಮೂರು ವಿಧಗಳಂತೆ.
- ಪುರುಷ ಶಿಲೆ :: ಬಡಿದಾಗ ದೀರ್ಘಸ್ವರ ಅಥವಾ ಕಂಚಿನ ಘಂಟೆಯ ಕಂಪನದ ಸ್ವರ ಹೊಮ್ಮಿಸುವ ಶಿಲೆ-- ಇವುಗಳು ದೇವತಾ ವಿಗ್ರಹಗಳಿಗೆ ಸೂಕ್ತ.
- ಸ್ತ್ರೀ ಶಿಲೆ:: ಬಡಿದಾಗ ಸ್ವರ ಒಳಕ್ಕೆ ಸೇರಿದಂತೆ ಅಥವಾ ಯಾವುದೇ ದೀರ್ಘ ಕಂಪನವಿಲ್ಲದಿರುವುದು-- ಇವು ಪಾಣಿಪೀಠಗಳಿಗೆ ಸೂಕ್ತ.
- ನಪುಂಸಕ ಶಿಲೆ:: ಬಡಿದಾಗ ಟೊಳ್ಳು ವಸ್ತುವು ಉಂಟುಮಾಡುವ ಸ್ವರ ಹೊಮ್ಮಿಸುವುದು--ಇಂತಹ ಶಿಲೆಗಳು ಯೋಗನಾಳ, ಅಂದರೆ ಪಾಣಿಪೀಠದ ಅಡಿಯಲ್ಲಿರುವ ಕಲ್ಲಿಗೆ ಸೂಕ್ತ. ಪ್ರತಿಷ್ಠಾಪನಾ ಸಂದರ್ಭಗಳಲ್ಲಿ ಇದರಲ್ಲಿ ನವರತ್ನಗಳನ್ನಿಡುತ್ತಾರೆ.
ಇವರ ಮೂರ್ತಿಗಳಲ್ಲಿ ಕಾಣಬರುವ ಭಾವಕೌಶಲ, ಸಾಂಪ್ರದಾಯಿಕ ಸೊಗಸು ಅನನ್ಯ. ಪ್ರತಿಯೊಂದು ಶಿಲ್ಪದಲ್ಲಿಯೂ ಕಲಿಯಲು ಬೇಕಾದಷ್ಟಿದೆ, ಒಂದೊಂದೊ ಹೊಸ ಕೃತಿಗಳನ್ನು ಮಾಡುವಗಲೂ ತನ್ನಲ್ಲಿರುವ ಸಾಮರ್ಥ್ಯ ವೃಧ್ಧಿಯಾಗುತ್ತಿರುವ ಅನುಭವ, ಕಲಿಯಲು ಇನ್ನೂ ಇದೆ ಎಂದು ಅನಿಸುತ್ತದೆ ಎಂಬ ವಿನೀತ ಭಾವದಿಂದ ನುಡಿಯುತ್ತಾರೆ.
ಸಂಸಾರ
[ಬದಲಾಯಿಸಿ]ದಕ್ಷಿಣ ಕನ್ನಡದ ಕೆದಿಲ ಗ್ರಾಮದ ಬಡೆಕ್ಕಿಲ ಇವರ ಮನೆತನ. ವಿಟ್ಲ ಹುಟ್ಟೂರು. ಸುಮಾರು ತಲೆಮಾರುಗಳ ಹಿಂದೆ ಇವರ ಪೂರ್ವಜರು ಲೋಹದ ದೇವತಾಮೂರ್ತಿಗಳನ್ನು ಪೂಜೆಗೆಂದು ತಾವೇ ತಯಾರಿಸಿಕೊಳ್ಳುತ್ತಿದ್ದರಂತೆ. ಸೇಡಿಯಾಪು ಕೃಷ್ಣಭಟ್ಟರು ಇವರ ಅಜ್ಜ.( ತಾಯಿಯ ತಂದೆ)ಚಕ್ರಕೋಡಿ ನಾರಾಯಣ ಶಾಸ್ತ್ರಿಗಳು ಅಜ್ಜಿಯ ಸಹೋದರ.ತಂದೆ ಕೃಷ್ಣ ಭಟ್ಟರು ವೃತ್ತಿಯಲ್ಲಿ ವೈದ್ಯರಾದರೂ ಪ್ರವೃತ್ತಿಯಲ್ಲಿ ವಿದ್ವಾಂಸರು. ತಾಯಿ ಸರಸ್ವತಿಯವರು ಸಾಹಿತಿ- ಸಾಹಿತ್ಯ ಪ್ರಿಯೆ. ಇಂಗ್ಲಿಷ್ ನಿಂದ ಕನ್ನಡಕ್ಕೆ ಹಾಗೂ ಕನ್ನಡದಿಂದ ಇಂಗ್ಲಿಷ್ ಗೆ ಕೃತಿಗಳ ಭಾಷಾಂತರ ಮಾಡುತ್ತಿದ್ದರು. ಪತ್ರಿಕೆ, ಕಸ್ತೂರಿ, ನಿಯತಕಾಲಿಕಗಳಿಗೆ ಲೇಖನಗಳನ್ನು ನೀಡುತ್ತಿದ್ದರು. ಪತ್ನಿ ಪೂರ್ಣಿಮಾ ಧೈರ್ಯವಂತೆ. ಸದಾ ಪತಿಗೆ ಶಿಲ್ಪಕಲೆಯಲ್ಲಿ ಸಹಾಯ ನೀಡುತ್ತಿರುತ್ತಾರೆ. ಬಿಡುವಿನ ವೇಳೆಯಲ್ಲಿ ಪತಿಯೊಂದಿಗೆ ಕಠಿಣ ಕಲ್ಲನ್ನು ತಾನೂ ಚಾಣ, ಉಳಿಗಳಿಂದ ಕೆತ್ತಿ, ಕರಡು ಕೆತ್ತನೆಯಲ್ಲಿ ಹಾಗೂ ಕೊನೆಯ ಪಾಲಿಶಿಂಗ್ ಕೆಲಸಗಳಲ್ಲಿ ಸಹಕಾರ ನೀಡುತ್ತಾರೆ. ಶ್ಯಾಮಸುಂದರರು ೨೦೧೯ ಸಪ್ಟೆಂಬರ್ ವರೆಗೆ ಶಿಲ್ಪಗಳನ್ನು ಮಾಡುತ್ತಿದ್ದರು. ನಂತರ ಮಾಡುವುದು ಅಸಾಧ್ಯವಾಯ್ತು. ೯೦ ರ ವಯಸ್ಸಿನ ವೃಧ್ಧರಾದ,ಅಶಕ್ತರಾದ ತಮ್ಮ ತಾಯಿಯ ಸೇವೆಯಲ್ಲೀಗ ನಿರತರಾಗಿದ್ದಾರೆ. ತಿರುವನಂತಪುರದ ಅಮೃತ ವಿಶ್ವವಿದ್ಯಾ ಪೀಠಂ ನಲ್ಲಿ ಗೌರವ ಶಿಕ್ಷಕರಾಗಿ ೨೦೧೩ ರಲ್ಲಿ ದುಡಿದಿದ್ದಾಗ ಅಲ್ಲಿಯೇ ಮುಂದುವರೆಸುವ ಆಮಂತ್ರಣವನ್ನು ಅವರು ನೀಡಿದರೂ ತನ್ನ ತಾಯಿಯ ಆರೋಗ್ಯದ ದೃಷ್ಟಿಯಿಂದ ಅದನ್ನು ಕೈಬಿಡಬೇಕಾಗಿ ಬಂದಿತ್ತು. ಈಗ ಮೈಸೂರಿನ ಬೋಗಾದಿಯಲ್ಲಿ ತಾಯಿ, ಪತ್ನಿಯೊಂದಿಗೆ ವಾಸಿಸುತ್ತಿದ್ದಾರೆ. (ಶಿಲೆಯನ್ನು ಹದಮಾಡುವಾಗ ಹೊಮ್ಮುವ ಶಬ್ದ ಅಕ್ಕಪಕ್ಕದವರಿಗೆ ಕಿರಿಕಿರಿಯುಂಟುಮಾಡುತ್ತಿದ್ದುದರಿಂದ ಆಗಾಗ ಮನೆಗಳ ಬದಲಾವಣೆಯೂ ಆಗಿದೆ.) ತನ್ನ ಆರೋಗ್ಯದ ಕಾರಣದಿಂದಾಗಿಯೂ ಕಠಿಣ ಕಲ್ಲಿನ ಕೆತ್ತನೆ- ಶಿಲ್ಪ ರಚನೆ ಈಗ ಕಷ್ಟ ಸಾಧ್ಯವಾಗಿದೆ.
ಸಂಕಲ್ಪಶಕ್ತಿಯೊಂದಿದ್ದರೆ ಯಾವುದನ್ನೂ ಸಿಧ್ಧಿಸಿಕೊಳ್ಳಬಹುದೆಂಬುದನ್ನು ಸ್ವಪ್ರಯತ್ನದಿಂದ ಮೇಲೇರಿದ, ಅಂಗವೈಕಲ್ಯವೆಂಬ ಶಾಪವನ್ನು ವರವಾಗಿಸಿಕೊಂಡ ದಿಟ್ಟ ಮನುಷ್ಯ ಬಡೆಕ್ಕಿಲ ಶ್ಯಾಮಸುಂದರ ಭಟ್ ರವರು. ಇವರ ಗುರುಗಳಾಗಿದ್ದ ದಿ.ಸಾ.ಕೃ.ರಾಮಚಂದ್ರರಾಯರು ಲೇಖಕರಾಗಿದ್ದು, ಶಿಷ್ಯನ ಕುರಿತು ಲೇಖನವೊಂದರಲ್ಲಿ ಹೀಗೆ ಬರೆದಿದ್ದಾರೆ......’" ಕಲಾಚೇತನವೆಂಬುದೊಂದು ನದಿ. ಪ್ರತಿಭೆ ಎಂಬ ಪರ್ವತದಲ್ಲಿ ಹುಟ್ಟಿ, ಸಂಸ್ಕಾರವೆಂಬ ಪಾತ್ರದಲ್ಲಿ ಹರಿದು ಸುತ್ತುಮುತ್ತಲಿನ ನೆಲವನ್ನೆಲ್ಲಾ ಫಲವತ್ತಾಗಿ ಮಾಡುತ್ತದೆ. ಸದ್ದುಗದ್ದಲವಿಲ್ಲದೆ ಚೆಲುವಾದ ಪುತ್ಥಳಿಗಳನ್ನು ನಾಡಿನ ಜನಕ್ಕೆ ನೀಡುತ್ತಿರುವ ಶ್ಯಾಮಸುಂದರ ಭಟ್ ರವರು ಇಂಥದ್ದೊಂದು ನದಿ’". ಇದು ಇವರ ಕಲಾಪ್ರೌಢಿಮೆಗೆ ಗುರುಗಳು ನೀಡಿದ ಪ್ರಮಾಣಪತ್ರ.
ಬಾಹ್ಯಸಂಪರ್ಕಗಳು
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]