ವಿಷಯಕ್ಕೆ ಹೋಗು

ಶ್ರೀಗಂಧ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಶ್ರೀಗಂಧ
'ಶ್ರೀಗಂಧ' by Köhler
Santalum album
Conservation status
Scientific classification
ಸಾಮ್ರಾಜ್ಯ:
plantae
Division:
ವರ್ಗ:
ಗಣ:
ಕುಟುಂಬ:
ಕುಲ:
ಪ್ರಜಾತಿ:
S. album
Binomial name
ಸಂಟಲಮ್ ಅಲ್ಬಮ್
ಹವಾಯ್ ದ್ವೀಪದಲ್ಲಿನ ಒಂದು ಗಂಧದ ಮರ

ಶ್ರೀಗಂಧವು ಒಂದು ಸುವಾಸಿತ ಮರ. ಸಸ್ಯಶಾಸ್ತ್ರದ ಪ್ರಕಾರ ಶ್ರೀಗಂಧವು ಸಾಂಟಲಮ್ ವಂಶಕ್ಕೆ ಸೇರಿದ ಒಂದು ಮರ. ಇದರ ತಳಿಗಳು ನೇಪಾಳ, ದಕ್ಷಿಣ ಭಾರತ, ಶ್ರೀಲಂಕಾ, ಹವಾಯ್, ದಕ್ಷಿಣ ಶಾಂತಸಾಗರದ ದ್ವೀಪಗಳು ಮತ್ತು ಆಸ್ಟ್ರೇಲಿಯಗಳಲ್ಲಿ ಕಂಡುಬರುತ್ತವೆ. ಶ್ರೀಗಂಧವನ್ನು ಸುವಾಸನಾ ದ್ರವ್ಯ, ಊದಿನಕಡ್ಡಿಗಳಲ್ಲಿ ಮತ್ತು ಕೆತ್ತನೆಯ ಕೆಲಸಗಳಲ್ಲಿ ಉಪಯೋಗಿಸುವರು. ಭಾರತದ ಕೆಲ ದೇವಾಲಯಗಳು ಶ್ರೀಗಂಧದ ಮರದಿಂದಲೇ ನಿರ್ಮಿತವಾಗಿದ್ದು ಹಲವು ಶತಮಾನಗಳವರೆಗೆ ಇವು ತಮ್ಮ ಸುವಾಸನೆಯನ್ನು ಉಳಿಸಿಕೊಳ್ಳುವುವು. ಏಷ್ಯಾದಲ್ಲಿ ಅದರಲ್ಲೂ ವಿಶೇಷವಾಗಿ ಭಾರತದಲ್ಲಿ ಶ್ರೀಗಂಧದ ಮರದಿಂದ ನಗಗಳ ಪೆಟ್ಟಿಗೆ ಮತ್ತು ಸೂಕ್ಷ್ಮ ಕುಸುರಿ ಕೆತ್ತನೆಯುಳ್ಳ ಅಲಂಕಾರಿಕ ವಸ್ತುಗಳನ್ನು ನಿರ್ಮಿಸಲಾಗುತ್ತದೆ. ಸಾಮಾನ್ಯವಾಗಿ ಶ್ರೀಗಂಧದ ಮರವು ಕೆಂಪು ಮತ್ತು ಬಿಳಿ ಬಣ್ಣದ ಕಾಂಡಗಳನ್ನು ಹೊಂದಿರುತ್ತದೆ.

ಪ್ರಭೇಧಗಳು

[ಬದಲಾಯಿಸಿ]
  • ನೇಪಾಳದ ಶ್ರೀಗಂಧದ ಮರ ( ಸಾಂಟಲಮ್ ಆಲ್ಬಮ್ ) - ಇದು ಪ್ರಸ್ತುತ ಅಳಿವಿನಂಚಿನಲ್ಲಿರುವ ಪ್ರಭೇಧ ಮತ್ತು ಬಲು ದುಬಾರಿ. ನೇಪಾಳದಲ್ಲಿರುವ ಎಲ್ಲಾ ಶ್ರೀಗಂಧದ ಮರಗಳು ರಾಷ್ಟ್ರೀಯ ಸೊತ್ತಾಗಿದ್ದು ಅವುಗಳನ್ನು ಕೊಯ್ಯುವಲ್ಲಿ ಸರಕಾರದ ಕಟ್ಟುನಿಟ್ಟಾದ ನಿಬಂಧನೆಗಳಿದ್ದರೂ ಸಹ ಕಾನೂನುಬಾಹಿರವಾಗಿ ಮರಗಳನ್ನು ಕಡಿಯುವುದು ಮತ್ತು ಹೊರದೇಶಗಳಿಗೆ ಕಳ್ಳಸಾಗಣೆ ಮಾಡುವ ಚಟುವಟಿಕೆಗಳು ವ್ಯಾಪಕವಾಗಿವೆ.

ದಕ್ಷಿಣಭಾರತದ ಶ್ರೀಗಂಧದ ಮರಗಳು ಸಹ ಈ ಪ್ರಭೇಧಕ್ಕೆ ಸೇರಿದವಾಗಿವೆ. ಮೈಸೂರು ಪ್ರದೇಶದಲ್ಲಿ ದೊರೆಯುವ ಶ್ರೀಗಂಧವು ವಿಶ್ವದಲ್ಲಿಯೇ ಅತ್ಯುತ್ತಮ ದರ್ಜೆಯದೆಂದು ಮಾನ್ಯ ಮಾಡಲಾಗಿದೆ. ಶ್ರೀಗಂಧದ ಉದ್ಯಮದ ಆರ್ಥಿಕ ಲಾಭ ಪಡೆದುಕೊಳ್ಳುವ ದಿಸೆಯಲ್ಲಿ ತಮಿಳುನಾಡಿನಲ್ಲಿ ಈಚೆಗೆ ಹಲವು ಕಡೆ ಹೊಸ ಶ್ರೀಗಂಧದ ತೋಪುಗಳನ್ನು ನೆಡಲಾಗಿದೆ.

  • ಹವಾಯ್ ಶ್ರೀಗಂಧದ ಮರ ( ಸಾಂಟಲಮ್ ಎಲ್ಲಿಪ್ಟಿಕಮ್) - ಈ ತಳಿಯು ಸಹ ಉತ್ತಮ ದರ್ಜೆಯದೆಂದು ಪರಿಗಣಿಸಲ್ಪಟ್ಟಿದೆ.
  • ಆಸ್ಟ್ರೇಲಿಯಾದ ಶ್ರೀಗಂಧದ ಮರ (ಸಾಂಟಲಮ್ ಸ್ಪಿಕಾಟಮ್) - ಇದನ್ನು ಸುವಾಸನಾ ದ್ರವ್ಯಗಳಲ್ಲಿ ಮತ್ತು ಪ್ರಕೃತಿಚಿಕಿತ್ಸೆಯಲ್ಲಿ ಬಳಸುವರು. ಈ ಮರದ ತೈಲದಲ್ಲಿರುವ ರಾಸಾಯನಿಕ ವಸ್ತುಗಳ ಸಂಯೋಜನೆಯು ಇತರ ಮರಗಳಿಗಿಂತ ಬಲು ಭಿನ್ನವಾಗಿರುವುದರಿಂದ ಇದರ ವಾಸನೆಯು ಸಹ ಸಂಪೂರ್ಣ ಬೇರೆಯದಾಗಿರುವುದು.


ಉಪಯೋಗಗಳು

[ಬದಲಾಯಿಸಿ]

ಇದರ ದಾರುವು ಮೆದುವಾಗಿ, ದಂತದ ಬಣ್ಣದಲ್ಲಿರುವುದರಿಂದ ಕರಕುಶಲ ವಸ್ತುಗಳ ತಯಾರಿಕೆಯಲ್ಲಿ ಶ್ರೇಷ್ಠ ಮರವೆಂದು ಪರಿಗಣಿಸಲ್ಪಟ್ಟಿದೆ.ಇದರ ಎಣ್ಣೆ ಅತ್ಯಂತ ಬೆಲೆಬಾಳುತ್ತದೆ.

ಸುವಾಸನೆ

[ಬದಲಾಯಿಸಿ]

ಶ್ರೀಗಂಧದ ಮರದ ತಿರುಳಿನ ತೈಲವು ಬಲು ಸುವಾಸನೆಯುಳ್ಳ ದ್ರವ್ಯವಾಗಿದೆ. ಅತ್ತರುಗಳಲ್ಲಿ ಸಣ್ಣಪ್ರಮಾಣದ ಶ್ರೀಗಂಧದದ ತೈಲವನ್ನು ಬೆರೆಸುವುದರಿಂದ ಅತ್ತರಿನಲ್ಲಿ ಬಳಸಲಾಗುವ ಉಳಿದ ಸುವಾಸನಾ ದ್ರವ್ಯಗಳ ಗುಣವು ವೃದ್ಧಿಸುತ್ತದೆ.

ಧಾರ್ಮಿಕ ಆಚರಣೆಗಳಲ್ಲಿ

[ಬದಲಾಯಿಸಿ]

ಹಿಂದೂ ಧಾರ್ಮಿಕ ಆಚರಣೆಗಳಲ್ಲಿ ಶ್ರೀಗಂಧವನ್ನು ವ್ಯಾಪಕವಾಗಿ ಹಲವು ರೂಪದಲ್ಲಿ ಬಳಸಲಾಗುತ್ತದೆ. ತೇಯ್ದು ಚಂದನವಾಗಿ, ಊದುಕಡ್ಡಿಗಳಲ್ಲಿ, ಚಂದನ ಮಿಶ್ರಿತ ಜಲವಾಗಿ, ನೊಸಲಿಗೆ ತಿಲಕವಾಗಿ ಪೂಜೆ ಪುನಸ್ಕಾರಗಳಲ್ಲಿ ಬಳಸಲ್ಪಡುತ್ತದೆ. ದೇವರ ಮೂರ್ತಿಗಳಿಗೆ, ಶಿವಲಿಂಗಕ್ಕೆ ಅಭಿಷೇಕದ ತರುವಾಯ ಚಂದನದ ಲೇಪವನ್ನು ಅರ್ಪಿಸುವುದು ಸಂಪ್ರದಾಯ.

ಬೌದ್ಧಧರ್ಮದಲ್ಲಿ ಶ್ರೀಗಂಧವು ಪದ್ಮ ಗುಂಪಿಗೆ ಸೇರಿದುದಾಗಿದ್ದು ಬೋಧಿಸತ್ತ್ವ ಅಮಿತಾಭನನ್ನು ಸೂಚಿಸುತ್ತದೆ. ಶ್ರೀಗಂಧದ ಸುವಾಸನೆಯು ಮಾನವನ ಆಸೆ ಆಕಾಂಕ್ಷೆಗಳನ್ನು ಮಾರ್ಪಡಿಸಿ ಧ್ಯಾನನಿರತನಾಗಿರುವಾಗ ಬುದ್ಧಿಯನ್ನು ಚುರುಕಾಗಿರಿಸುವುದೆಂದು ನಂಬಲಾಗಿದೆ. ಬುದ್ಧನಿಗೆ ಸಮರ್ಪಿಸುವ ಗಂಧದ ಕಡ್ಡಿಗಳಲ್ಲಿ ಶ್ರೀಗಂಧದ ಪಾತ್ರ ಪ್ರಮುಖ.

ಧಾರ್ಮಿಕ ಮತ್ತು ಇತರ ಸಮಾರಂಭಗಳಲ್ಲಿ ಶ್ರೀಗಂಧ ಮತ್ತು ಅಗರ್ ಮರಗಳಿಂದ ತಯಾರಾದ ಸುವಾಸನೆಯ ಮತ್ತು ಧೂಪದ ವಸ್ತುಗಳ ಬಳಕೆ ಜಪಾನ್ ಮತ್ತು ಚೀನಾಗಳಲ್ಲಿ ಬಲು ಜನಪ್ರಿಯವಾಗಿದೆ.

ಪಾರ್ಸಿ ಧರ್ಮದಲ್ಲಿ ಅಗ್ನಿಯನ್ನು ಕಾಯ್ದುಕೊಳ್ಳುವುದು ಒಂದು ಮುಖ್ಯ ಕಾಯಕ. ಶತಮಾನಗಳಿಂದ ಅಗ್ನಿಯನ್ನು ಕಾಯ್ದುಕೊಳ್ಳುವ ಪೂಜಾರಿಗಳು ಭಕ್ತರಿಂದ ಶ್ರೀಗಂಧದ ಕೊರಡು ಅಥವಾ ಒಣಗಿದ ರೆಂಬೆಗಳನ್ನು ಕಾಣಿಕೆಯಾಗಿ ಸ್ವೀಕರಿಸುತ್ತಾರೆ. ಅಗ್ನಿಯನ್ನು ಜ್ವಲಂತವಾಗಿರಿಸುವಲ್ಲಿ ಇವುಗಳ ಬಳಕೆಯಾಗುತ್ತದೆ.


ಔಷಧಿಗಳಲ್ಲಿ ಬಳಕೆ

[ಬದಲಾಯಿಸಿ]

ಅತ್ಯಂತ ಶುದ್ಧರೂಪದಲ್ಲಿರುವ ಶ್ರೀಗಂಧದ ತೈಲವನ್ನು ಆಯುರ್ವೇದದ ಚಿಕಿತ್ಸೆಗಳಲ್ಲಿ ಉದ್ವೇಗ ಶಮನ ಮಾಡಲು ಉಪಯೋಗಿಸುವರು. ಶ್ರೀಗಂಧದ ತೈಲವು ಶರೀರದ ಒಳಗೆ ಮತ್ತು ಹೊರಭಾಗದಲ್ಲಿ ನಂಜು ನಿರೋಧಕವಾಗಿ ಬಳಸಲ್ಪಡುತ್ತದೆ. ಶ್ರೀಗಂಧದ ತೈಲದ ಮುಖ್ಯ ಅಂಗವಾದ ಬೀಟಾ-ಸನಟಾಲ್ ನಂಜನ್ನುಂಟುಮಾಡುವ ಸೂಕ್ಷ್ಮಜೀವಿಗಳನ್ನು ನಿರೋಧಿಸುವ ಗುಣವನ್ನು ಹೊಂದಿದೆ. ವಾಸನಾಚಿಕಿತ್ಸೆ ಮತ್ತು ಸುಗಂಧ ಸಾಬೂನುಗಳ ತಯಾರಿಕೆಯಲ್ಲಿ ಸಹ ಶ್ರೀಗಂಧವನ್ನು ಉಪಯೋಗಿಸುವರು. ಶ್ರೀಗಂಧದ ತೈಲವು ಚರ್ಮದ ಸೌಂದರ್ಯವನ್ನು ಹೆಚ್ಚಿಸುವ ಗುಣವನ್ನು ಸಹ ಹೊಂದಿದೆ.

ಬಾಹ್ಯ ಸಂಪರ್ಕಕೊಂಡಿಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. Asian Regional Workshop (1998). Santalum album. 2006. IUCN Red List of Threatened Species. IUCN 2006. www.iucnredlist.org. Retrieved on 2007-02-08.
"https://kn.wikipedia.org/w/index.php?title=ಶ್ರೀಗಂಧ&oldid=1252849" ಇಂದ ಪಡೆಯಲ್ಪಟ್ಟಿದೆ