ಶ್ರೀನಿವಾಸ ರಾಮಾನುಜನ್
ಶ್ರೀನಿವಾಸ ರಾಮಾನುಜನ್ | |
---|---|
ಜನನ | ಈರೋಡ್, ಮದ್ರಾಸ್ ಪ್ರೆಸಿಡೆನ್ಸಿ | ೨೨ ಡಿಸೆಂಬರ್ ೧೮೮೭
ಮರಣ | 26 April 1920 ಚೆಟ್‌ಪುಟ್, ಮದ್ರಾಸ್, ಮದ್ರಾಸ್ ಪ್ರೆಸಿಡೆನ್ಸಿ | (aged 32)
ವಾಸಸ್ಥಳ | ಕುಂಬಕೋಣಂ |
ರಾಷ್ಟ್ರೀಯತೆ | ಭಾರತೀಯ |
ಕಾರ್ಯಕ್ಷೇತ್ರ | ಗಣಿತಶಾಸ್ತ್ರ |
ಅಭ್ಯಸಿಸಿದ ವಿದ್ಯಾಪೀಠ | Government Arts College en:Pachaiyappa's College |
ಶೈಕ್ಷಣಿಕ ಸಲಹೆಗಾರರು | en:G. H. Hardy J. E. Littlewood |
ಪ್ರಸಿದ್ಧಿಗೆ ಕಾರಣ | en:Landau–Ramanujan constant en:Mock theta functions en:Ramanujan conjecture en:Ramanujan prime en:Ramanujan–Soldner constant en:Ramanujan theta function en:Ramanujan's sum en:Rogers–Ramanujan identities en:Ramanujan's master theorem |
ಪ್ರಭಾವಗಳು | ಜಿ. ಎಚ್. ಹಾರ್ಡಿ |
ಹಸ್ತಾಕ್ಷರ |
ಶ್ರೀನಿವಾಸ ರಾಮಾನುಜನ್ (ಪೂರ್ಣ ಹೆಸರು - ಶ್ರೀನಿವಾಸ ರಾಮಾನುಜನ್ ಅಯ್ಯಂಗಾರ್)[೧][೨][೩] (ಡಿಸೆಂಬರ್ ೨೨, ೧೮೮೭ - ಏಪ್ರಿಲ್ ೨೬, ೧೯೨೦) ವಿಶ್ವದಲ್ಲಿ ಶ್ರೇಷ್ಠ ಭಾರತೀಯ ಗಣಿತಜ್ಞರೆಂದು ಪ್ರಖ್ಯಾತರಾಗಿದ್ದಾರೆ. “ಪ್ರತಿ ಧನಪೂರ್ಣಾಂಶವೂ ರಾಮಾನುಜನ್ನರ ವೈಯಕ್ತಿಕ ಮಿತ್ರರುಗಳಲ್ಲೊಂದು” ಎಂಬುದು ಲೋಕದಲ್ಲಿ ವಿಖ್ಯಾತ ನುಡಿ. ಅವರಿಗೆ “ಸಂಖ್ಯೆಗಳ ವೈಲಕ್ಷಣಗಳನ್ನು ನಂಬಲಸಾಧ್ಯವಾದಂಥ ರೀತಿಯಲ್ಲಿ ನೆನಪಿಡುವ’ ಅಪೂರ್ವ ಸಾಮರ್ಥ್ಯವಿತ್ತು.
ಜೇಮ್ಸ್ ಆರ್. ನ್ಯೂಮನವರ "ದ ವರ್ಲ್ಡ್ ಆಫ್ ಮ್ಯಾಥಮೆಟಿಕ್ಸ್" ಎಂಬ ನಾಲ್ಕು ಸಂಪುಟಗಳ ಚಿರಸ್ಥಾಯಿ ಉದ್ಗ್ರಂಥದಲ್ಲಿ ರಾಮಾನುಜನ್ನರ ಕುರಿತು ಈ ಉಲ್ಲೇಖವಿದೆ. ಶುದ್ಧ ಗಣಿತದ ಬತ್ತಳಿಕೆಯಲ್ಲಿ ವಿಶ್ಲೇಷಣಾ ಆಯುಧಗಳ ಭಾರೀ ಸಂಗ್ರಹವಿದೆ ಮತ್ತು ಎಲ್ಲ ಸರಳತೆ ಗತಕಾಲದ ವಿಚಾರವೆಂದು ತಿಳಿಯುತ್ತಿದ್ದ ಆ ದಿನಗಳಲ್ಲಿ “ಈ ಎಲ್ಲ ಪರಿಕರಗಳ ನೆರವಿಲ್ಲದೆಯೇ ಹೊಸ ವಿಚಾರಗಳನ್ನು ಮಂಡಿಸಬಲ್ಲ ಒಬ್ಬ ಜೀನಿಯಸ್ ಉದಯಿಸಿದರು”. ನ್ಯೂಮನರು ಮುಂದುವರಿಸಿ, “ಶ್ರೀನಿವಾಸ ರಾಮಾನುಜನ್ನರ ಜೀವನ ಒಂದು ಯುಗಾರಂಭವನ್ನು ಸೂಚಿಸುತ್ತದೆ. ಭಾರತದಲ್ಲಿ ವಿವಿಧ ಕಾಲ ಘಟ್ಟಗಳಲ್ಲಿ ಉನ್ನತ ಪ್ರತಿಭೆಯ ಗಣಿತಜ್ಞರಿದ್ದರು. ಕಾಲಾನುಕ್ರಮದಲ್ಲಿ ಅಂಥವರನ್ನು ಕೊನೆಯ ಗ್ರೀಕ್ ಕಾಲದವರೆಗೆ ಗುರುತಿಸಬಹುದು. ಆದರೆ ಉತ್ತುಂಗತೆಯ ನಿರಪೇಕ್ಷಮಾನದಿಂದ ಅಳೆದಾಗ ಪೌರ್ವಾತ್ಯ ಗಣಿತಜ್ಞರಲ್ಲೆಲ್ಲಾ, ರಾಮಾನುಜನ್ನರ ಮೇಧಾವಿ ಅತ್ಯುಚ್ಛವೆಂದೆನಿಸುತ್ತದೆ” ಎಂದು ಹೇಳಿದ್ದಾರೆ.
ಶ್ರೀನಿವಾಸ ರಾಮಾನುಜನ್ನರ ಬಗ್ಗೆ ಬರೆಯುತ್ತ ಜವಾಹರಲಾಲ್ ನೆಹರೂರವರು ತಮ್ಮ "ದ ಡಿಸ್ಕವರಿ ಆಫ್ ಇಂಡಿಯಾ"ದಲ್ಲಿ ಹೀಗೆ ನುಡಿಯುತ್ತಾರೆ: “ಭಾರತದಲ್ಲಿ ಗಣಿತದ ವಿಚಾರದಲ್ಲಿ, ಇತ್ತೀಚಿಗಿನ ಒಬ್ಬರು ಅಸಾಧಾರಣ ವ್ಯಕ್ತಿಯನ್ನು ಕುರಿತು ಯೋಚಿಸುವುದು ಅನಿವಾರ್ಯವಾಗುವಂತೆ ಮಾಡುತ್ತದೆ. ಅವರೇ ಶ್ರೀನಿವಾಸ ರಾಮಾನುಜನ್. ದಕ್ಷಿಣ ಭಾರತದ ಒಂದು ಬಡ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿ ಸೂಕ್ತ ವಿದ್ಯಾಭ್ಯಾಸಕ್ಕೆ ಅವಕಾಶಗಳಿಲ್ಲದೆ ಅವರು ಮದ್ರಾಸ್ ಪೋರ್ಟ್ ಟ್ರಸ್ಟ್‌ನಲ್ಲಿ ಒಬ್ಬ ಕಾರಕೂನರಾದರು. ಆದರೆ ಅವರು ಸಹಜ ಪ್ರತಿಭೆಯ ಯಾವುದೋ ತಡೆಯಲಾಗದ ಲಕ್ಷಣಗಳಿಂದ ಬುದ್ಬುದಿಸುತ್ತಿದ್ದರು; ಸಂಖ್ಯೆ ಹಾಗೂ ಸಮೀಕರಣಗಳೊಂದಿಗೆ ಅವರು ಬಿಡುವಿನ ಸಮಯದಲ್ಲಿ ಆಟವಾಡುತ್ತಿದ್ದರು. ಮುಂದೆ ಅವರು ಕೇಂಬ್ರಿಜ್‍ಗೆ ತೆರಳಿ ಅಲ್ಲಿ ಬಹಳ ಅಲ್ಪಾವಧಿಯಲ್ಲೇ ಮೂಲಭೂತ ಮೌಲ್ಯದ ಹಾಗೂ ವಿಸ್ಮಯಕರ ಸ್ವಂತಿಕೆಯ ಕಾರ್ಯವೆಸಗಿದರು. ಇಂಗ್ಲೆಂಡಿನ ರಾಯಲ್ ಸೊಸೈಟಿ ತನ್ನ ನಿಯಮಗಳನ್ನು ಭಾಗಶಃ ಸಡಿಲಿಸಿ ಅವರನ್ನು ಜೊತೆಗಾರನಾಗಿ ಆಯ್ಕೆ ಮಾಡಿತು. ಪ್ರೊಫೆಸರ್ ಜೂಲಿಯನ್ ಹಕ್ಸ್‌ಲಿಯವರು, ನಾನು ತಿಳಿದಿರುವಂತೆ ಎಲ್ಲೋ ಒಂದೆಡೆ ರಾಮಾನುಜರನ್ನು ಈ ಶತಮಾನದ ಶ್ರೇಷ್ಠತಮ ಗಣಿತಜ್ಞ" ಎಂದಿದ್ದಾರೆ.
ಬಾಲ್ಯ, ವಿದ್ಯಾಭ್ಯಾಸ
[ಬದಲಾಯಿಸಿ]ಈ ಮಹಾನ್ ಮೇಧಾವಿ ಶ್ರೀನಿವಾಸ ಅಯ್ಯಂಗಾರ್ ರಾಮಾನುಜನ್ ಅಯ್ಯಂಗಾರ್ ಅಥವಾ ಜನಪ್ರಿಯವಾಗಿ ಶ್ರೀನಿವಾಸ ರಾಮಾನುಜನ್ ಎಂದು ಹೆಸರುವಾಸಿಯಾದ ಇವರು ೧೮೮೭ರ ಡಿಸೆಂಬರ್ ೨೨ರಂದು ತಮಿಳುನಾಡಿನ ಈರೋಡಿನಲ್ಲಿದ್ದ ತಮ್ಮ ತಾತನ ಮನೆಯಲ್ಲಿ ಜನ್ಮ ತಳೆದರು.[೪] ರಾಮಾನುಜನ್ನರ ತಂದೆ ಶ್ರೀನಿವಾಸ ಅಯ್ಯಂಗಾರ್, ತಂಜಾವೂರು ಜಿಲ್ಲೆಯ ಕುಂಭಕೋಣಮ್ಮಿನಲ್ಲಿಯ ಒಂದು ಬಟ್ಟೆ ಅಂಗಡಿಯಲ್ಲಿ ಒಬ್ಬ ಗುಮಾಸ್ತರಾಗಿದ್ದರು.[೫] ತಾಯಿ ಕೋಮಲತ್ತಮ್ಮಾಳ್ ಅಪಾರ ದೈವ ಶ್ರದ್ಧಾಭಕ್ತಿಗಳಿದ್ದ ಮಹಿಳೆ. ಈರೋಡ್ ಈಕೆಯ ತವರೂರು. ಈಕೆಯ ತಂದೆ ಈರೋಡಿನ ಮುನ್ಸೀಫ್ ಕೋರ್ಟಿನಲ್ಲಿ ಅಮೀನರಾಗಿದ್ದವರು. ಈಕೆಯ ತಾಯಿ ರಂಗಮ್ಮಾಳ್, ನಾಯಕ್ಕಲ್ ಕ್ಷೇತ್ರದ ನಾಮಗಿರಿದೇವಿಯ ಪರಮಭಕ್ತೆ. ರಾಮಾನುಜನ್ನರ ತಂದೆ-ತಾಯಂದಿರಿಗೆ ಬಹಳ ಕಾಲದ ತನಕವೂ ಮಕ್ಕಳಾಗದಿದ್ದದ್ದರಿಂದ ನಾಮಗಿರಿ ದೇವಿಯನ್ನು ಆರಾಧಿಸಿ ಪುತ್ರನನ್ನು ಪಡೆದುಕೊಂಡರು. ಬಡತನ, ದೈವಭಕ್ತಿ ಮತ್ತು ಕಟ್ಟುನಿಟ್ಟಾದ ಸಂಪ್ರದಾಯಗಳೆಲ್ಲ ಈ ಶ್ರೀವೈಷ್ಣವ ಮನೆತನದಲ್ಲಿ ಬೆಸೆದುಕೊಂಡಿದ್ದವು.
ಬಾಲ್ಯದಲ್ಲಿ ರಾಮಾನುಜನ್ನರು ಶಾಂತ ಮತ್ತು ಆಲೋಚನಾಸಕ್ತ ಸ್ವಭಾವದವರಾಗಿದ್ದರು. ತನ್ನ ತಾಯಿಯಿಂದ ದೇವರನಾಮ ಮತ್ತು ಭಕ್ತಿಗೀತೆಗಳನ್ನೂ ಕಲಿತ ಅವರು ಅಧ್ಯಾತ್ಮಿಕ ವಿಚಾರಗಳಲ್ಲಿ ಆಸಕ್ತಿ ತಳೆದರು. ಅವರು ಬೆಳೆದಂತೆ ಧಾರ್ಮಿಕ ಉದ್ಗ್ರಂಥಗಳನ್ನು ಮತ್ತು ಭಕ್ತಿಸಾಹಿತ್ಯವನ್ನು ಓದಿ ಅದರಲ್ಲಿ ಹೆಚ್ಚಿನದನ್ನು ಕಂಠಪಾಠ ಮಾಡಿದ್ದರು. ಅವರು ವೇದ, ಉಪನಿಷತ್ತು, ತಿರುಕ್ಕುರಳ್ ಮುಂತಾದ ಶಾಸ್ತ್ರಗ್ರಂಥಗಳಿಂದ ಋಕ್ಕು ಮತ್ತು ಶ್ಲೋಕಗಳನ್ನೂ, ಹಾಗೆಯೇ ಸಂತರ ಮತ್ತು ಜ್ಞಾನಿಗಳ ನುಡಿಗಳನ್ನು ತಮಿಳು ಕೃತಿಗಳಿಂದ ನಿರರ್ಗಳವಾಗಿ ಹೇಳಬಲ್ಲವರಾಗಿದ್ದರು.
ಐದನೆಯ ವಯಸ್ಸಿಗೆ ಕುಂಭಕೋಣಮ್ಮಿನ ಪ್ರಾಥಮಿಕ ಶಾಲೆಗೆ ಸೇರಿದ (1892) ಅವರಿಗೆ ಪ್ರತಿಯೊಂದರಲ್ಲೂ ಕಲಿಕೆಯ ಕುತೂಹಲವಿತ್ತು.[೬] ಪ್ರಾಥಮಿಕ ಶಾಲೆಯಲ್ಲಿದ್ದಾಗಲೇ ಈತ ಬಲು ಚೂಟಿಯಾಗಿದ್ದು ತನ್ನ ವಿಶೇಷ ಪ್ರತಿಭೆಯನ್ನು ಪ್ರದರ್ಶಿಸಿದ್ದ. ಇಡೀ ತಂಜಾವೂರು ಜಿಲ್ಲೆಯಲ್ಲೇ ಪ್ರಥಮಸ್ಥಾನ ಗಳಿಸಿ ಉತ್ತೀರ್ಣನಾದ (1897).[೭] ಮುಂದೆ ಎರಡನೆಯ ಫಾರಮ್, ಮೂರನೆಯ ಫಾರಮ್ ತರಗತಿಗಳಲ್ಲಿ ವ್ಯಾಸಂಗ ಮಾಡುವಾಗಲೂ ಅಂಕಗಣಿತದಲ್ಲಿ ವಿಶೇಷ ಆಸಕ್ತಿ ವಹಿಸಿ ಎಷ್ಟೋ ವೇಳೆ ಅಲ್ಲಿಯ ಲೆಕ್ಕದ ಉಪಾಧ್ಯಾಯರಿಗೂ ಸವಾಲೆಸಗುವಂಥ ಪ್ರಶ್ನೆಗಳನ್ನು ಹಾಕಿ ಅವರನ್ನು ಚಕಿತಗೊಳಿಸುತ್ತಿದ್ದ. ಮುಂದೆ ಕುಂಭಕೋಣಮ್ಮಿನ ಶಾಲೆಯೊಂದರ ಮೂರನೆಯ ಫಾರಮ್ಮಿಗೆ ಈತನನ್ನು ಸೇರಿಸಲಾಯಿತು (1900). ವಯಸ್ಸಿಗೂ ತರಗತಿಗೂ ಮೀರಿದ ಇವನ ಅಮಿತ ಗಣಿತಾಸಕ್ತಿ ತ್ರಿಕೋನಮಿತಿ, ಬೀಜಗಣಿತ, ಜ್ಯಾಮಿತಿ ಮುಂತಾದ ಗಣಿತಶಾಖೆಗಳನ್ನು ಅಭ್ಯಸಿಸಲು ಎಡೆಮಾಡಿಕೊಟ್ಟಿತು.
1903ರಲ್ಲಿ ಈತ ಜಿ. ಎಸ್. ಕಾರ್ ಎಂಬ ಗಣಿತ ವಿದ್ವಾಂಸ ರಚಿಸಿದ್ದ ಸಿನೋಪ್‌ಸಿಸ್ ಆಫ್ ಪ್ಯೂರ್ ಮಾಥಮ್ಯಾಟಿಕ್ಸ್ ಎಂಬ ಪಠ್ಯಪುಸ್ತಕವನ್ನು ಎರವಲು ಪಡೆದುಕೊಂಡು ಅಭ್ಯಾಸ ಮಾಡಿದ್ದ.[೮][೯] ತಾನು ಅಧ್ಯಯನ ಮಾಡಿದ್ದ ವಿಷಯಗಳನ್ನು ಕುರಿತು ಟಿಪ್ಪಣಿಮಾಡಿಕೊಂಡಿದ್ದ ತನ್ನ ಪುಸ್ತಕವನ್ನು ಆಸಕ್ತರಿಗೂ ತೋರಿಸುತ್ತಿದ್ದ. ಈ ಪುಸ್ತಕದಲ್ಲಿ ನಿರೂಪಿತವಾಗಿದ್ದ ವಿಷಯಗಳು ರಾಮಾನುಜನ್ನನ ಆಸಕ್ತಿಯನ್ನು ಕೆರಳಿಸಿ, ಉದ್ಭವಿಸುತ್ತಿದ್ದ ಸಮಸ್ಯೆಗಳನ್ನು ಕುರಿತು ಚಿಂತಿಸುತ್ತಿದ್ದಾಗ ಈತನ ಆರಾಧ್ಯದೈವ ನಾಮಗಿರಿದೇವಿ ಕನಸಿನಲ್ಲಿ ಕಾಣಿಸಿಕೊಂಡು ಗಣಿತ ಸಮಸ್ಯೆಗಳಿಗೆ ಪರಿಹಾರ ಸೂಚಿಸುತ್ತಿದ್ದಳೆಂದು ಹೇಳಲಾಗಿದೆ.
ಯೋಚನಾಪರನೂ ಮಿತಭಾಷಿಯೂ ಆಗಿದ್ದ ರಾಮಾನುಜನ್ ತನ್ನ ಸಹಪಾಠಿಗಳೊಂದಿಗೆ ಹೆಚ್ಚಾಗಿ ಕಲೆಯುತ್ತಿರಲಿಲ್ಲ. ನಕ್ಷತ್ರಗಳ ದೂರವೆಷ್ಟು, ಗಣಿತದ ಅಂತಸತ್ತ್ವ ಯಾವುದು ಎಂದು ಮುಂತಾಗಿ ಪ್ರಶ್ನೆಗಳನ್ನು ಒಡನಾಡಿಗಳನ್ನು ಕೇಳುತ್ತಿದ್ದನಂತೆ. ಸೊನ್ನೆಯನ್ನು ಸೊನ್ನೆಯಿಂದ ಭಾಗಿಸಿದರೆ ಏನಾಗುತ್ತದೆ ಎಂಬಿತ್ಯಾದಿ ಮೂಲಭೂತ ಪ್ರಶ್ನೆಗಳನ್ನು ಉಪಾಧ್ಯಾಯರಿಗೆ ಹಾಕುತ್ತಲಿದ್ದನಂತೆ. 1903ರಲ್ಲಿ ಈತ ಆಗಿನ ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣನಾಗಿ 1904ರಲ್ಲಿ ಕುಂಭಕೋಣಮ್ಮಿನ ಸರ್ಕಾರಿ ಕಾಲೇಜಿಗೆ ಸೇರಿದ.[೧೦][೧೧]
ಗಣಿತ ಬಿಟ್ಟು ಬೇರೇನೂ ಬೇಡವಾಯ್ತು
[ಬದಲಾಯಿಸಿ]ರಾಮಾನುಜನ್ ಅವರು ಎಫ್. ಎ ತರಗತಿಗಳಿಗೆ ಸೇರಿದಾಗ ಅವರಿಗೆ ಗಣಿತದ ಹೊರತಾಗಿ ಇನ್ನ್ಯಾವುದೇ ವಿಷಯಗಳ ಕುರಿತಾಗಿ ಕಿಂಚಿತ್ತೂ ಆಸಕ್ತಿ ಹುಟ್ಟಲಿಲ್ಲ. ಹೀಗಾಗಿ ಎಫ್. ಎ. ಪ್ರಥಮ ವರ್ಷದ ಪರೀಕ್ಷೆಯಲ್ಲಿ ಉತ್ತೀರ್ಣನಾಗಲಿಲ್ಲ. ಈತನಿಗೆ ಲಭಿಸುತ್ತಿದ್ದ ವಿದ್ಯಾರ್ಥಿವೇತನವೂ ರದ್ದಾಯಿತು.[೧೨] ಈ ನಿರಾಸಕ್ತಿ ಮತ್ತು ನಿರಂತರ ಅವರ ಜೊತೆಗೂಡಿದ್ದ ಅನಾರೋಗ್ಯಗಳು ಅವರ ಓದನ್ನು ಅಲ್ಲಿಗೇ ಮೊಟಕುಗೊಳಿಸಿಬಿಟ್ಟವು. ಇದೇ ನೆಪವಾಗಿ ಅವರು ಯಾವಾಗಲೂ ಗಣಿತದಲ್ಲೇ ಮುಳುಗಿಬಿಟ್ಟರು. ಒಂದೆಡೆ ಅನುತ್ತೀರ್ಣನಾದ ಮಾನಸಿಕ ಚಿಂತೆ, ಮತ್ತೊಂದೆಡೆ ಕಾಡುತ್ತಿದ್ದ ಬಡತನ. ಇವೆಲ್ಲ ಇವನ ಮನಸ್ಸಿಗೆ ಖೇದವನ್ನು ತಂದುಕೊಟ್ಟಿತ್ತಾದರೂ ರಾಮಾನುಜನ್ ತನ್ನ ಧೃತಿಯನ್ನು ಎಂದೂ ಕಳೆದುಕೊಂಡಿರಲಿಲ್ಲ. ಇದು ಮನೆಯವರಿಗೆ ಇಷ್ಟವಾಗಲಿಲ್ಲ.
ತನ್ನ ಸ್ನೇಹಿತರ ಒತ್ತಾಯದ ಮೇರೆಗೆ ರಾಮಾನುಜನ್ ಮದರಾಸು ನಗರಕ್ಕೆ ಬಂದರು (1906). ವಿದ್ಯಾಭ್ಯಾಸ ಮುಂದುವರಿಸಲು ಅಲ್ಲಿನ ಪಚ್ಚಯಪ್ಪ ಕಾಲೇಜಿಗೆ ಸೇರಿದರಾದರೂ ಎಫ್. ಎ. ಅಂತಿಮ ಪರೀಕ್ಷೆಯಲ್ಲಿ ಮಾತ್ರ ತೇರ್ಗಡೆಯಾಗುವುದು ಸಾಧ್ಯವಾಗಲಿಲ್ಲ. ಗಣಿತದ ವಿಷಯವೊಂದನ್ನು ಬಿಟ್ಟು ಮತ್ತೆಲ್ಲ ವಿಷಯಗಳೂ ಇವರಿಗೆ ಕೈಕೊಟ್ಟಿದ್ದುವು. ಹೀಗಾಗಿ ಪರೀಕ್ಷೆಗಳ ಯೋಚನೆಯನ್ನೂ ರಾಮಾನುಜನ್ ಕೈಬಿಟ್ಟಿದ್ದರು. ಕುಂಭಕೋಣ ಮತ್ತು ಮದರಾಸಿನ ಕಾಲೇಜುಗಳ ವಿದ್ವಾಂಸರಿಗೆ ಅರಳುತ್ತಿದ್ದ ರಾಮಾನುಜನ್ನರ ಪ್ರತಿಭೆ ಅರ್ಥವಾಗಿರಲಿಲ್ಲ. ಶುದ್ಧ ಗಣಿತದ ವಿವಿಧ ಶಾಖೆಗಳಲ್ಲಿಯ ಸಮಸ್ಯೆಗಳ ಫಲಿತಾಂಶಗಳನ್ನು ತಮ್ಮ ಟಿಪ್ಪಣಿ ಪುಸ್ತಕದಲ್ಲಿ ವ್ಯವಸ್ಥಿತವಾಗಿ ಗುರುತುಮಾಡಿಟ್ಟುಕೊಳ್ಳುತ್ತಿದ್ದರು.
ಜೀವನದ ದಾರಿ ಬದಲಾಗಲಿ ಎಂದು ಮನೆಯವರು 1909ರಲ್ಲಿ ವಿವಾಹ ಏರ್ಪಡಿಸಿದರು.[೧೩] ರಾಮಾನುಜನ್ ಜಾನಕಿ ಎಂಬವರನ್ನು ವಿವಾಹವಾದರು.
ಹೊಟ್ಟೆಪಾಡಿಗಾಗಿ ಅಲೆದಾಟ
[ಬದಲಾಯಿಸಿ]ಆರ್ಥಿಕ ಭದ್ರತೆಯಾಗಲಿ, ಉದ್ಯೋಗಾವಕಾಶವಾಗಲಿ, ಅಗತ್ಯ ವಿದ್ಯಾರ್ಹತೆಯಾಗಲಿ ಇಲ್ಲದ ರಾಮಾನುಜನ್ ಅವರಿಗೆ ಸಂಸಾರದ ನಿರ್ವಹಣೆ ಮಾಡುವುದು ದುಸ್ಸಹವಾಯಿತು. ಈ ದಂಪತಿಗಳಿಗೆ ಮಕ್ಕಳಿರಲಿಲ್ಲವಾದರೂ ಗೃಹಸ್ಥರಾಗಿ ಬಾಳುವುದೇ ಬಲು ಕಷ್ಟವಾಯಿತು. ದೊರಕಿದ ತಾತ್ಕಾಲಿಕ ಹುದ್ದೆಗಳಿಂದ ಕೊಂಚಮಟ್ಟಿಗೆ ಸಾಂಸಾರಿಕ ಸಮಸ್ಯೆಗಳು ತಾತ್ಕಾಲಿಕವಾಗಿ ಪರಿಹಾರಗೊಂಡರೂ ಪೂರ್ಣ ಪರಿಹಾರ ಒದಗಲಿಲ್ಲ.
ಮದುವೆ ಒಂದು ಬದಲಾವಣೆಯನ್ನು ತಂದಿತು. ಇನ್ನು ಮುಂದೆ ತಾನು ಹೆತ್ತವರಿಗೆ ಹೊರೆಯಾಗಬಾರದೆಂದು ರಾಮಾನುಜನ್ನರು ನಿರ್ಧರಿಸಿದರು. ಇವರ ಮೇಧಾವಿತನದ ಕುರಿತಾದ ಅಭಿಮಾನವುಳ್ಳ ಹಿರಿಯರ ಶಿಫಾರಸ್ಸಿನಿಂದ ಮದ್ರಾಸಿನಲ್ಲಿ ಅಕೌಂಟೆಂಟ್ ಜನರಲ್ ಕಚೇರಿಯಲ್ಲಿ ಅವರಿಗೆ ಕೆಲಸ ದೊರೆಯಿತಾದರೂ ಅದು ಕೇವಲ ಎರಡು ತಿಂಗಳಮಟ್ಟಿಗೆ ಮಾತ್ರ ಇತ್ತು. ಪುನಃ ಹಸಿದ ಹೊಟ್ಟೆಯ ಬಡತನ, ಅನಾರೋಗ್ಯ ಅವರಿಗೆದುರಾಯಿತು. ಸ್ವಲ್ಪ ದಿನ ಮನೆಯ ಪಾಠಮಾಡಿದರು. ಈ ನಡುವೆ ತಮ್ಮ ಗಣಿತದ ಕುರಿತಾದ ಆಲೋಚನೆಗಳನ್ನು ದಾಖಲಿಸುವ ಕೆಲಸವನ್ನು ಮಾತ್ರ ನಿಲ್ಲಿಸಲಿಲ್ಲ. ೧೯೧೦ರಲ್ಲಿ ಅವರು ದಿವಾನ್ ಬಹದ್ದೂರರನ್ನು ಕಂಡಾಗ ಬಹದ್ದೂರರು ತಮಗೇನು ಬೇಕೆಂದು ಕೇಳಿದಾಗ “ಸಂಶೋಧನೆ ಮುದುವರಿಸಿಕೊಂದು ಹೋಗುವಷ್ಟರ ಮಟ್ಟಿಗೆ ಬದುಕಿರಲು ಸಾಕಾಗುವಷ್ಟು ಅನ್ನ” ಎಂದರು ರಾಮಾನುಜನ್. ಬಹದ್ದೂರರು ತಾವೇ ಸ್ವತಃ ಇಪ್ಪತ್ತೈದು ರೂಪಾಯಿಗಳ ಮಾಸಿಕ ಧನಸಹಾಯ ಮಾಡಲಾರಂಭಿಸಿದರು. ಆದರೆ ರಾಮಾನುಜನ್‍ರಿಗೆ ಹೀಗೆ ಹಣ ಪಡೆಯುವ ಮನಸ್ಸಿರಲಿಲ್ಲ. ಮತ್ತೆ ಅವರ ಅಭಿಮಾನವುಳ್ಳ ಹಿರಿಯರ ಶಿಫಾರಸ್ಸಿನಿಂದ ಅವರು ಮದ್ರಾಸಿನ ಪೋರ್ಟ್ ಟ್ರಸ್ಟ್ ಕಚೇರಿಯಲ್ಲಿ ಗುಮಾಸ್ತರಾಗಿ ಕೆಲಸ ಮಾಡಲು ಆರಂಭಿಸಿದರು.
ಇವರ ಪ್ರತಿಭೆ ಮತ್ತು ಬಡತನಗಳನ್ನು ಅರಿತಿದ್ದ ಇವರ ಸ್ನೇಹಿತನೊಬ್ಬನ ಸಲಹೆಯಂತೆ (1910) ಇಂಡಿಯನ್ ಮ್ಯಾಥಮ್ಯಾಟಿಕಲ್ ಸೊಸೈಟಿ ಅಧ್ಯಕ್ಷರೂ ನೆಲ್ಲೂರು ಜಿಲ್ಲೆಯ ಕಲೆಕ್ಟರ್ ಆಗಿಯೂ ಇದ್ದಂಥ ಆರ್. ರಾಮಚಂದ್ರರಾವ್ ಎಂಬವರನ್ನು ರಾಮಾನುಜನ್ ಭೇಟಿಯಾದರು.[೧೪][೧೫][೧೬] ರಾಮಾನುಜನ್ ಅವರ ಪ್ರತಿಭೆಯನ್ನೂ ಬಡತನವನ್ನೂ ಗುರುತಿಸಿದ ರಾಮಚಂದ್ರರಾಯರು ತಾವು ಪ್ರತಿಯೊಂದು ತಿಂಗಳೂ ಒಂದಷ್ಟು ಭತ್ಯೆ ಕೊಡುವುದಾಗಿ ಹೇಳಿ ಅದರಿಂದ ಸಂಶೋಧನೆಯನ್ನು ಮದ್ರಾಸಿನಲ್ಲೇ ಮುಂದುವರಿಸಬೇಕೆಂದು ತಿಳಿಸಿದರು. ಹೀಗಾಗಿ ರಾಮಾನುಜನ್ ಕೆಲವು ಕಾಲ (1911-12) ಮದರಾಸಿನಲ್ಲೇ ಉಳಿದುಕೊಂಡು ಸಂಶೋಧನೆ ಮುಂದುವರಿಸಿದರಾದರೂ ಬಹಳಷ್ಟು ಕಾಲದ ತನಕ ಪರಾವಲಂಬಿಗಳಾಗಿರಲು ಇಷ್ಟಪಡಲಿಲ್ಲ.
ಬಳಿಕ ರಾಮಾನುಜನ್ ತಿರುಕೋಟ್ಟಿಯೂರಿನ ಡೆಪ್ಯುಟಿ ಕಲೆಕ್ಟರ್ ಆಗಿ ಸೇವೆ ಸಲ್ಲಿಸಿದ್ದ ವಿ. ರಾಮಸ್ವಾಮಿ ಅಯ್ಯರ್ ಎಂಬವರನ್ನು ಭೇಟಿಯಾಗಿ ತಮಗೆ ಯಾವುದಾದರೂ ಕಿರಿಯ ಗುಮಾಸ್ತ ಕೆಲಸ ಕೊಡಿಸಬೇಕೆಂದು ಪ್ರಾರ್ಥಿಸಿದರು. ರಾಮಸ್ವಾಮಿ ಅಯ್ಯರ್ ಅವರ ಶಿಫಾರಸ್ಸಿನ ಮೇಲೆ, ಕುಂಭಕೋಣಮ್ಮಿನಲ್ಲಿ ರಾಮಾನುಜನ್ನರ ಗುರುವೂ, ಗಣಿತಪ್ರಾಧ್ಯಾಪಕರೂ ಆಗಿದ್ದ ವಿ. ವಿ. ಶೇಷು ಅಯ್ಯರ್ ಎಂಬವರನ್ನು ಭೇಟಿಯಾಗಿ ಅವರಲ್ಲಿ ತಮ್ಮ ಅಳಲನ್ನು ತೋಡಿಕೊಂಡರು. ರಾಮಾನುಜನ್ನರ ಗಣಿತಾಸಕ್ತಿಯನ್ನೂ ಪ್ರತಿಭೆಯನ್ನೂ ಗುರುತಿಸಿದ ಅಯ್ಯರ್ ಇವರಿಗೆ ಮದರಾಸು ವಿಶ್ವವಿದ್ಯಾಲಯದ ಸಂಶೋಧನ ವಿದ್ಯಾರ್ಥಿವೇತನ ದೊರಕಿಸಿಕೊಡಲು ಪ್ರಯತ್ನಿಸಿದರು. ಆದರೆ ಅವರು ಸಫಲರಾಗಲಿಲ್ಲ. ರಾಮಾನುಜನ್ನರ ಹಿರಿಮೆಯನ್ನು ಮನಗಂಡ ಮದ್ರಾಸ್ ಪೋರ್ಟ್ ಟ್ರಸ್ಟಿನ ಅಧ್ಯಕ್ಷ ಸರ್ ಫ್ರಾನ್ಸಿಸ್ ಸ್ಪ್ರಿಂಗ್ ಎಂಬವರು ಗಣಿತಾಧ್ಯಯನವನ್ನು ಮುಂದುವರಿಸಲು ಎಲ್ಲ ಬಗೆಯ ಪ್ರೋತ್ಸಾಹ ನೀಡಿದರು.[೧೭] ಸ್ಪ್ರಿಂಗ್ ರಾಮಾನುಜನ್ ಅವರಲ್ಲಿ ಆಸಕ್ತಿ ತಳೆದು ಅವರ ಪ್ರಗತಿಯನ್ನು ವೀಕ್ಷಿಸುತ್ತಿದ್ದರು. ಒಂದು ದಿನ ಅವರ ಸಹಿಗಾಗಿ ಒಂದು ಕಡತ ಬಂತು. ಅದನ್ನು ಪರಾಂಬರಿಸುತ್ತಿದ್ದಾಗ ದೀರ್ಘವೃತ್ತದ ಅನುಕಲನಾಂಕಗಳಿಗೆ ಸಂಬಂಧಿಸಿದ ಕೆಲವು ಫಲಿತಗಳನ್ನೊಳಗೊಂಡ ಬಿಳಿ ಹಾಳೆಗಳನ್ನು ಕಂಡರು. ಸ್ವಯಂ ಗಣಿತದಲ್ಲಿ ಆಸಕ್ತರಾಗಿದ್ದ ಅವರಿಗೆ ಅದು ರಾಮಾನುಜನ್ ಅವರ ಕೆಲಸವೆಂದು ತಿಳಿದು ಸಂತೋಷವಾಯಿತು.
ಸಂಶೋಧನೆಗಳ ಪ್ರಕಟಣೆ
[ಬದಲಾಯಿಸಿ]ರಾಮಾನುಜನ್ ತಮ್ಮ ಕಛೇರಿ ಕೆಲಸದ ಮಧ್ಯೆಯೂ ಗಣಿತಾಧ್ಯಯನವನ್ನು ಮುಂದುವರಿಸಿಕೊಂಡು ಬಂದರು. ಏತನ್ಮಧ್ಯೆ ಶ್ರೀನಿವಾಸ ರಾಮಾನುಜನ್ ಅವರ ಬೆಂಗಾವಲಾಗಿದ್ದ ಪ್ರೊ. ಪಿ. ವಿ. ಶೇಷು ಅಯ್ಯರ್ ಅವರಿಂದ ಕಳುಹಿಸಲ್ಪಟ್ಟ ಪ್ರಶ್ನೋತ್ತರಗಳ ರೂಪದಲ್ಲಿ ಇಂಡಿಯನ್ ಮ್ಯಾಥಮೆಟಿಕಲ್ ಸೊಸೈಟಿಯ ನಿಯತಕಾಲಿಕ ೧೯೧೧ರಲ್ಲಿ ಪ್ರಕಟವಾಯಿತು.[೧೮] ಈ ಸಂಪುಟದ ಒಂದು ಸಂಚಿಕೆಯಲ್ಲಿ ರಾಮಾನುಜನ್ನರ ‘ಬರ್ನೌಲಿ ಸಂಖ್ಯೆಗಳ ಕೆಲವು ಲಕ್ಷಣಗಳು” ಪ್ರಕಟಗೊಂಡಿತು.[೧೯] ಇದರಿಂದಾಗಿ ರಾಮಾನುಜನ್ನರ ಖ್ಯಾತಿ ಹೆಚ್ಚಿತು. ೧೯೧೨ ರಲ್ಲಿ ಇನ್ನೆರಡು ಪ್ರಬಂಧಗಳು ಬಂದವು.
ಟ್ರಸ್ಟಿನ ಅಧ್ಯಕ್ಷರು ರಾಮಾನುಜನ್ನರಿಗೆ ಮದರಾಸ್ ವಿಶ್ವವಿದ್ಯಾಲಯದ ಸಂಶೋಧನ ವಿದ್ಯಾರ್ಥಿವೇತನ ದೊರಕಿಸಿಕೊಡಲು ಪ್ರಯತ್ನಿಸಿದರು. ಇದರ ಜೊತೆಗೆ ಸ್ಪ್ರಿಂಗರ ಸ್ನೇಹಿತರಾದ ಜಿ. ಟಿ. ವಾಕರ್ ಎಂಬವರೂ ರಾಮಾನುಜನ್ನರ ಪ್ರತಿಭೆ ಮತ್ತು ಸಿದ್ಧಿಗಳನ್ನು ಗುರುತಿಸಿ ವಿದ್ಯಾರ್ಥಿವೇತನದ ವಿಚಾರದಲ್ಲಿ ಮದ್ರಾಸ್ ವಿಶ್ವವಿದ್ಯಾಲಯದ ಕುಲಸಚಿವರಿಗೆ ಶಿಫಾರಸ್ಸು ಪತ್ರ ಬರೆದರು. ಇದಕ್ಕೆ ಮೊದಲು ತೀರಾ ಅಲ್ಪವರಮಾನದಿಂದ ಸಂಶೋಧನೆಯನ್ನೂ ಜೀವನವನ್ನೂ ಸಾಗಿಸುತ್ತಿದ್ದರು ರಾಮಾನುಜನ್ನರು.
ಅದಮ್ಯ ಸಹನೆ
[ಬದಲಾಯಿಸಿ]ಪೋರ್ಟ್ ಟ್ರಸ್ಟಿನಲ್ಲಿನ ಕೆಲಸ ಶ್ರೀನಿವಾಸ ರಾಮಾನುಜನ್ ಮತ್ತು ಅವರ ಕುಟುಂಬಕ್ಕೆ ಅರೆಹೊಟ್ಟೆಯನ್ನು ತುಂಬಿಸುವಷ್ಟು ಮಾತ್ರದ್ದಾಗಿತ್ತು. ಕಡುಬಡತನ ಮತ್ತು ಎಲ್ಲ ತರಹದ ಸಂಕಷ್ಟವಿದ್ದರೂ ರಾಮಾನುಜನ್ ಎಂದೂ ತಾಳ್ಮೆಗೆಡುತ್ತಿರಲಿಲ್ಲ. ಅವರು ಮದ್ರಾಸಿನಲ್ಲಿ ಟ್ರಿಪ್ಲಿಕೇನಿನ ಸಮೀಪದಲ್ಲಿ ವಾಸಿಸುತ್ತಿದ್ದಾಗ ಒಂದು ರಾತ್ರಿ ಖಗೋಳ ಪ್ರಪಂಚದ ವಿಸ್ಮಯಗಳ ಕುರಿತು ಗೆಳೆಯನೊಡನೆ ಮಾತನಾಡುತ್ತಿದ್ದರು. ಅದನ್ನು ತಡೆಯಲು ಯಾರೋ ಹಠಾತ್ತಾಗಿ ರಾಮಾನುಜನ್ನರ ತಲೆಯ ಮೇಲೆ ಗಡಿಗೆ ತುಂಬಾ ನೀರು ಸುರಿದರು. ಕೋಪಾವೇಶದಲ್ಲಿ ಸಿಡಿಯುವ ಬದಲು, ರಾಮಾನುಜನ್ ನಗುತ್ತ ಅಂದರು: “ದೇವರ ದಯೆ, ನನಗೆ ಗಂಗಾಸ್ನಾನವಾಯಿತು. ಇನ್ನೂ ಜಾಸ್ತಿ ಇದ್ದಾರೆ ಸಂತೋಷ”. ಶಾಂತ ಮತ್ತು ಏಕಾಗ್ರಚಿತ್ತದಿಂದ ರಾಮಾನುಜನ್ ತಮ್ಮ ಕೆಲಸ ಮುಂದುವರಿಸಿದರು.
ಕೆಂಬ್ರಿಡ್ಜ್ ಹಾದಿಯಲ್ಲಿ
[ಬದಲಾಯಿಸಿ]ಪ್ರೊ. ಪಿ. ವಿ. ಶೇಷು ಅಯ್ಯರ್ ಅಂತಹ ಹಿರಿಯರು ಮತ್ತು ಹಿತಚಿಂತಕರು ಟ್ರಿನಿಟಿ ಕಾಲೇಜಿನ ಫೆಲೋ ಆಗಿದ್ದ ಪ್ರೊ. ಜಿ. ಹೆಚ್ ಹಾರ್ಡಿ ಮತ್ತು ಕೇಂಬ್ರಿಜ್ ಗಣಿತ ಉಪನ್ಯಾಸಕರಾಗಿದ್ದ ಕ್ಯಾಲೆ ಅವರಿಗೆ ರಾಮಾನುಜನ್ ತಮ್ಮ ಗಣಿತೀಯ ಶೋಧನೆಗಳನ್ನು ತಿಳಿಸಬೇಕೆಂದು ಒತ್ತಾಯಿಸಿದರು. ಇದನ್ನು ಮಾಡಲು ಮೊದಲು ಅವರಿಗೆ ಮನಸ್ಸಿರಲಿಲ್ಲ. ಆದರೆ ಒತ್ತಾಯ ಜಾಸ್ತಿಯಾದಾಗ ಅವರು ಪ್ರೊ. ಹಾರ್ಡಿಯವರಿಗೆ ಬರೆಯಲು ನಿರ್ಧರಿಸಿದರು. ಹೀಗೆ ಕ್ರಮೇಣ ಅವರ ಜೀವನವನ್ನೇ ಬದಲಿಸಿದ ಮತ್ತು ಭಾರತವನ್ನು ಪ್ರಪಂಚದ ಗಣಿತೀಯ ನಕ್ಷೆಯಲ್ಲಿ ಸೇರಿಸಿದ ಪತ್ರ ವ್ಯವಹಾರ ಪ್ರಾರಂಭಗೊಂಡಿತು.[೨೦] ಹಾರ್ಡಿಯವರಿಗೆ ಮದ್ರಾಸ್ ವಿಶ್ವವಿದ್ಯಾಲಯದಿಂದ ವಿದ್ಯಾರ್ಥಿವೇತನ ದೊರಕಿಸಿಕೊಡುವಂತೆ ಶಿಫಾರಸ್ಸು ಪತ್ರ ಬರೆಯಬೇಕೆಂದೂ ಕೇಳಿಕೊಂಡಿದ್ದರು. ತಮ್ಮ ಮೊದಲ ಪತ್ರದಲ್ಲೇ ರಾಮಾನುಜನ್ ನೂರಕ್ಕೂ ಹೆಚ್ಚು ಪ್ರಮೇಯಗಳನ್ನು ವಿವರಿಸಿದ್ದರು. ಈ ಚಿಂತನೆಗಳು ಕೇಂಬ್ರಿಜ್‍ನಲ್ಲಿ ಹೊಸ ಸಂಚಲನವನ್ನೇ ಉಂಟುಮಾಡಿತು.
ಹಾರ್ಡಿಯವರ ಸಹೋದ್ಯೋಗಿ ಇ. ಎಚ್. ನೆವಿಲ್ ಎಂಬವರು ಸಂದರ್ಶನ ಪ್ರಾಧ್ಯಾಪಕರಾಗಿ ಮದರಾಸಿಗೆ ಹೋಗುವವರಿದ್ದು ರಾಮಾನುಜರನ್ನು ಕೇಂಬ್ರಿಜ್‌ಗೆ ಬರುವಂತೆ ಮಾಡಲು ನೆವಿಲ್ ಅವರಿಗೆ ಹಾರ್ಡಿ ಸೂಚಿಸಿದ್ದರು.[೨೧] ನೆವಿಲ್ ಮದರಾಸಿಗೆ ಬಂದು ರಾಮಾನುಜರನ್ನು ಭೇಟಿ ಮಾಡಿ ಕೇಂಬ್ರಿಜ್ಜಿಗೆ ಹೋಗಲು ಒಪ್ಪಿಸಿದ್ದರು. ರಾಮಾನುಜನ್ನರ ತಾಯಿಯ ಕನಸಿನಲ್ಲಿ ಅವರ ಆರಾಧ್ಯದೈವ ನಾಮಗಿರಿದೇವಿ ಕಾಣಿಸಿಕೊಂಡು ಮಗನನ್ನು ವಿದೇಶಕ್ಕೆ ಕಳುಹಿಸಿಕೊಡಲು ಆದೇಶ ನೀಡಿದ್ದಳಂತೆ.[೨೨] ಇದರಿಂದಾಗಿ ರಾಮಾನುಜನ್ನರಿಗೆ ತಾಯಿಯಿಂದ ಅನುಮತಿಯೂ ದೊರೆಯಿತು.
ಆದರೆ ವಿದೇಶಯಾತ್ರೆಯ ಸಲುವಾಗಿ ರಾಮಾನುಜರಿಗಿದ್ದ ಆರ್ಥಿಕ ತೊಂದರೆಯ ಬಗ್ಗೆ ನೆವಿಲ್ ಮದರಾಸ್ ವಿಶ್ವವಿದ್ಯಾಲಯ ಕುಲಸಚಿವರಿಗೆ ಪತ್ರ ಬರೆದು ರಾಮಾನುಜನ್ನರ ಅಸಾಧಾರಣ ಸಾಮರ್ಥ್ಯ, ಪ್ರತಿಭೆಗಳ ಬಗ್ಗೆ ಪ್ರಶಂಸಿಸಿ ಪ್ರಪಂಚವಿಖ್ಯಾತ ಗಣಿತವಿದರೊಡನೆ ರಾಮಾನುಜನ್ ಸಂಪರ್ಕ ಹೊಂದುವುದರ ಅಗತ್ಯವನ್ನು ಒತ್ತಿ ಹೇಳಿದ್ದರು. ಮದರಾಸು ವಿಶ್ವವಿದ್ಯಾನಿಲಯ ಈ ಎಲ್ಲ ಅಂಶಗಳನ್ನೂ ಮನಗಂಡು ತನ್ನ ಸಂಶೋಧನಾ ವಿದ್ಯಾರ್ಥಿವೇತನವನ್ನು ರಾಮಾನುಜನ್ನರಿಗೆ ಒದಗಿಸಿಕೊಟ್ಟಿತು (1913). ರಾಮಾನುಜನ್ ಅವರಿಗೆ ವರ್ಷಕ್ಕೆ 250 ಪೌಂಡುಗಳಂತೆ ಎರಡು ವರ್ಷಗಳ ತನಕ ವೇತನವೂ ಪ್ರಯಾಣಕ್ಕೆ ತಗಲುವ ವೆಚ್ಚವೂ ಲಭಿಸಿದುವು. ತನಗೆ ಒದಗುವ ವೇತನದಿಂದ ರೂ. 60 ನ್ನು ತನ್ನ ತಾಯಿಗೆ ನೀಡುವಂತೆ ರಾಮಾನುಜನ್ ವ್ಯವಸ್ಥೆ ಮಾಡಿದ್ದರು. ರಾಮಾನುಜನ್ 1914 ಮಾರ್ಚ್ 17ರಂದು ಕೇಂಬ್ರಿಜ್‌ಗೆ ಪ್ರಯಾಣ ಬೆಳೆಸಿದರು.[೨೩][೨೪] ಅದೇ ವರ್ಷದ ಏಪ್ರಿಲ್ 14 ರಂದು ಇಂಗ್ಲೆಂಡ್ ತಲುಪಿದರು. ಹೀಗೆ ಶ್ರೀನಿವಾಸನ್ ಕೆಂಬ್ರಿಡ್ಜ್‌ಗೆ ಬಂದಿಳಿದರು.[೨೫] ಆಗ ಅವರ ಪ್ರಾಯ ಕೇವಲ 26 ವರ್ಷಗಳಾಗಿತ್ತು.
ಹಾರ್ಡಿಯವರ ಶಿಫಾರಸ್ಸು ಪತ್ರ, ನೆವಿಲ್ ಅವರ ರಾಯಭಾರಿತ್ವ, ವಿಶ್ವವಿದ್ಯಾಲಯಕ್ಕೆ ಉಂಟಾದ ಅರಿವು, ದೈವಾದೇಶ ಹಾಗೂ ತಾಯಿಯ ಅನುಮತಿಗಳೆಲ್ಲ ರಾಮಾನುಜ ಎಂಬ ಗಣಿತಪ್ರತಿಭೆ ಸ್ವದೇಶದಲ್ಲಿ ಮಾತ್ರವಲ್ಲದೆ ವಿದೇಶದಲ್ಲೂ ಬೆಳಗುವುದಕ್ಕೆ ಅವಕಾಶಮಾಡಿಕೊಟ್ಟವು. ರಾಮಾನುಜನ್ ಅವರು ಕೇಂಬ್ರಿಜ್‌ಗೆ ಬಂದು ಟ್ರಿನಿಟಿ ಕಾಲೇಜನ್ನು ಸೇರಿದ್ದು ಒಂದು ವಿಧದಲ್ಲಿ ಹಾರ್ಡಿಯವರಿಗೆ ಬಲು ಸಂತಸವನ್ನೇ ಉಂಟುಮಾಡಿತ್ತು. ಏಕೆಂದರೆ ತಮಗೆ ರಾಮಾನುಜನ್ ಬರೆದಿದ್ದ ಕಾಗದದೊಂದಿಗೆ ಲಗತ್ತಿಸಿದ್ದ ಗಣಿತ ಫಲಿತಾಂಶಗಳಲ್ಲಿ ಅಡಗಿದ್ದ ಸ್ವಂತಿಕೆ, ಸೃಜನಾತ್ಮಕತೆ, ಗಣಿತೀಯ ಸೌಂದರ್ಯ ಹಾಗೂ ಪ್ರತಿಪಾದನೆಗಳನ್ನು ಹಾರ್ಡಿ ಮನಸಾರ ಮೆಚ್ಚಿಕೊಂಡಿದ್ದರು. ಗಣಿತ ಕ್ಷೇತ್ರದಲ್ಲಿ ಕಾಣಬರುವ ಅವಿಭಾಜ್ಯ ಸಂಖ್ಯೆಗಳು, ಅಪಸರಣ ಶ್ರೇಣಿಗಳು, ವಿಭಾಗೀಕರಣ ವಿಚಾರಗಳು ಮುಂತಾದ ವಿಚಾರಗಳಲ್ಲಿ ರಾಮಾನುಜನ್ನರ ತಾರ್ಕಿಕ ಸಾಮರ್ಥ್ಯ, ಗಣಿತೀಯ ವಿಶ್ಲೇಷಣೆಗಳನ್ನು ಹಾರ್ಡಿ ಸ್ವತಃ ಅನುಭವಿಸಿ ಆನಂದಿಸಿದ್ದರು. 1914-16ರ ಅವಧಿಯಲ್ಲಿ ರಾಮಾನುಜನ್ ಇಂಗ್ಲೆಂಡಿನ ವಿವಿಧ ಸಂಶೋಧನ ನಿಯತಕಾಲಿಕೆಗಳಲ್ಲಿ 12 ಫಲಿತಾಂಶಗಳನ್ನು ಪ್ರಕಟಿಸಿದ್ದರು. ಕೇಂಬ್ರಿಜ್‌ನ ಗಣಿತ ವಿಭಾಗದಲ್ಲಿನ ವಿದ್ವಜ್ಜನರ ಮೆಚ್ಚುಗೆಗೆ ಪಾತ್ರರಾಗಿದ್ದರು ಎಂದೇ ಕೇಂಬ್ರಿಜ್ ವಿಶ್ವವಿದ್ಯಾಲಯ ರಾಮಾನುಜನ್ನರಿಗೆ 1916ರಲ್ಲಿ ತನ್ನ ಗೌರವ ಬಿ. ಎ. ಪದವಿಯನ್ನು ನೀಡಿ ಗೌರವಿಸಿತು.[೨೬][೨೭]
ಸಂಶೋಧನೆಯಲ್ಲಿ ಶ್ರೇಷ್ಠತೆ
[ಬದಲಾಯಿಸಿ]ರಾಮಾನುಜನ್ನರ ಕಾರ್ಯವಿಧಾನ ಸ್ವಂತಿಕೆಯಿಂದ ಕೂಡಿದ್ದು ಅವರ ಸಲಕರಣೆಗಳು ಸಂಪೂರ್ಣವಾಗಿ ಅವರದ್ದೇ ಆಗಿದ್ದುವು. ಇಂಗ್ಲೆಂಡಿನಲ್ಲಿ ಅವರಿದ್ದ ಐದು ವರ್ಷಗಳಲ್ಲಿ ಅವರ ಇಪ್ಪತ್ತೊಂದು ಪ್ರಬಂಧಗಳು ಯೂರೋಪಿನ ವಿವಿಧ ನಿಯತಕಾಲಿಕಗಳಲ್ಲಿ ಪ್ರಕಟವಾದವುಗಳಲ್ಲಿ ಐದು ಪ್ರೊ. ಹಾರ್ಡಿಯವರೊಂದಿಗೆ ಬರೆದುವು. ಪ್ರೊ. ಹಾರ್ಡಿ ಅವರಲ್ಲದೆ ಆ ಕಾಲದ ಶ್ರೇಷ್ಠ ವಿದ್ವಾಂಸರಾದ ಪ್ರೊ. ಜೆ. ಇ. ಲಿಟ್ಲ್‌ವುಡ್, ಪ್ರೊ. ಎಲ್. ಜೆ. ಮೊರ್ಡಲ್, ಪ್ರೊ. ಜಿ. ಎನ್. ವಾಟ್ಸನ್ ಮುಂತಾದ ಸಕಲರೂ ಶ್ರೀನಿವಾಸ ರಾಮಾನುಜನ್ ಅವರ ಶ್ರೇಷ್ಠತೆಯನ್ನು ಕೊಂಡಾಡಿದರು.
ರಾಯಲ್ ಸೊಸೈಟಿಯ ಫೆಲೋ ಆಗಿ ಗೌರವ
[ಬದಲಾಯಿಸಿ]ರಾಮಾನುಜನ್ನರ ಸಂಶೋಧನೆ ಅವರಿಗೆ ಉನ್ನತ ಪ್ರಶಂಸೆ ಮತ್ತು ಪ್ರತಿಷ್ಠೆಗಳನ್ನು ತಂದುಕೊಟ್ಟವು. ಬ್ರಿಟನ್ ಮತ್ತು ಅಂದಿನ ಬ್ರಿಟಿಷ್ ಸಾಮ್ರಾಜ್ಯದ ವಿಜ್ಞಾನ ಪ್ರಪಂಚದಲ್ಲಿ ಅತ್ಯುನ್ನತ ಗೌರವವಾದ ರಾಯಲ್ ಸೊಸೈಟಿಯ ಫೆಲೋ ಆಗಿ ಫೆಬ್ರುವರಿ ೨೮, ೧೯೧೮ ರಲ್ಲಿ ಶ್ರೀನಿವಾಸ ರಾಮಾನುಜನ್ ಚುನಾಯಿತರಾದರು.[೨೮] ೧೮೪೧ ರಲ್ಲಿ ಸರ್ ಆರ್‌ದೇಸೀರ್ ಕರ್‌ಸೇಟ್ಜಿ ಅವರು ರಾಯಲ್ ಸೊಸೈಟಿಗೆ ಚುನಾಯಿತರಾಗಿದ್ದನ್ನು ಬಿಟ್ಟರೆ ಈ ಗೌರವ ಪಡೆದ ಪ್ರಥಮರು ರಾಮಾನುಜನ್ ಅವರೇ. ರಾಮಾನುಜನ್ನರ ಆಯ್ಕೆ ಮುಂದೆ ಭಾರತೀಯ ವಿಜ್ಞಾನಿಗಳನ್ನು ಉತ್ತೇಜನಗೊಳಿಸಿ ಒಂದೇ ದಶಕದೊಳಗೆ ಇನ್ನೂ ಮೂವರು ಚುನಾಯಿತರಾದರು. ಅವರೇ ಜಗದೀಶ್ ಚಂದ್ರ ಬೋಸ್, ಸಿ ವಿ ರಾಮನ್ ಮತ್ತು ಮೇಘನಾದ ಸಹಾ. ಹೀಗೆ ರಾಮಾನುಜನ್ನರ ಸಿದ್ಧಿ ಭಾರತೀಯ ವಿಜ್ಞಾನ ಮತ್ತು ಗಣಿತದಲ್ಲಿ ಹೊಸ ಯುಗವನ್ನು ಆರಂಭಿಸಿತು.
ಸಂದ ಈ ಗೌರವಗಳ ಸಲುವಾಗಿ ಇವರಿಗೆ ಟ್ರಿನಿಟಿ ಕಾಲೇಜಿನಿಂದ ವರ್ಷಕ್ಕೆ 250 ಪೌಂಡುಗಳ, ಆರು ವರ್ಷಗಳ ಪರ್ಯಂತ ಬಹುಮಾನಧನವೂ ಒದಗಿತು. ಇದನ್ನು ಮನಗಂಡ ಮದರಾಸ್ ವಿಶ್ವವಿದ್ಯಾಲಯ ತಾನೂ ಅದೇ ಮೊತ್ತದ ಬಹುಮಾನ ಮೊಬಲಗನ್ನು ಐದು ವರ್ಷ ಪರ್ಯಂತ ನೀಡುವುದಾಗಿ ಹೇಳಿ ತನ್ನ ಔದಾರ್ಯ ಪ್ರದರ್ಶಿಸಿತು. ಇದರ ಜೊತೆಗೆ ವಿಶ್ವವಿದ್ಯಾಲಯದ ಗಣಿತ ಪ್ರಾಧ್ಯಾಪಕಪೀಠಕ್ಕೆ ಆಹ್ವಾನಿಸುವುದಾಗಿಯೂ ತಿಳಿಸಿತು. ಇದನ್ನು ಅರಿತ ರಾಮಾನುಜನ್ ಮದರಾಸ್ ವಿಶ್ವವಿದ್ಯಾಲಯಕ್ಕೆ ತನ್ನ ಹೃತ್ಪೂರ್ವಕ ಕೃತಜ್ಞತೆ ಅರ್ಪಿಸಿದರು (1919).
ರಾಮಾನುಜನ್ ತಮ್ಮ ತನುಮನಗಳನ್ನು ಗಣಿತಾಧ್ಯಯನಕ್ಕೆ ಅರ್ಪಿಸಿಕೊಂಡು ಅದರ ಆನಂದಾನುಭವವನ್ನು ಪಡೆದ ಪ್ರತಿಭಾವಂತ. ಇದರ ಬಗ್ಗೆ ಹಾರ್ಡಿ ಅವರೇ ಪ್ರತಿಕ್ರಿಯಿಸಿದ್ದರು. ರಾಮಾನುಜನ್ ಅವರ ಜ್ಞಾನದ ಸೀಮಿತಗಳು ಅದರ ಗಂಭೀರತೆಯಷ್ಟೇ ಚಕಿತಗೊಳಿಸುವಂತಿವೆ. ಮಾಡ್ಯುಲರ್ ಸಮೀಕರಣಗಳನ್ನೂ, ಮಿಶ್ರಗುಣಾಕಾರದ ಪ್ರಮೇಯಗಳನ್ನೂ, ವರ್ಗಗಳನ್ನೂ ನಿಭಾಯಿಸುತ್ತಿದ್ದ ಅವರ ಪರಿಯನ್ನೂ ಹಾರ್ಡಿಯವರು ಮೆಚ್ಚಿಕೊಂಡಿದ್ದರು. ಸಂತತ ಭಿನ್ನರಾಶಿಗಳ ಬಗ್ಗೆ ರಾಮಾನುಜನ್ನರ ಅಪ್ರತಿಮ ಪ್ರಭುತ್ವವನ್ನು ಮನಸಾರ ಶ್ಲಾಘಿಸಿದ್ದರು. ಜೀಟಾ ಉತ್ಪನ್ನದ ಉತ್ಪನ್ನಾತ್ಮಕ ಸಮೀಕರಣವನ್ನೂ, ಸಂಖ್ಯೆಗಳ ವಿಶ್ಲೇಷಣಾ ಸಿದ್ಧಾಂತದ ಅತ್ಯಂತ ಪ್ರಸಿದ್ಧ ಸಮಸ್ಯೆಗಳಲ್ಲಿಯ ಪ್ರಧಾನಪದಗಳನ್ನೂ ರಾಮಾನುಜನ್ ಸ್ವತಃ ಸಂಶೋಧಿಸಿದ್ದರು. ಆದರೆ ದ್ವಿನಿಯತಕಾಲಿಕವನ್ನಾಗಲಿ ಕೌಶಿ ಎಂಬವನ ಪ್ರಮೇಯವನ್ನಾಗಲಿ ರಾಮಾನುಜನ್ ಕೇಳಿಯೇ ಇರಲಿಲ್ಲ. ಮಿಶ್ರಚರ ಉತ್ಪನ್ನಗಳ ಬಗ್ಗೆ ಅವರ ಕಲ್ಪನೆ ತೀರಾ ಅಸ್ಪಷ್ಟ. ಅವರು ಎಲ್ಲ ಫಲಿತಾಂಶಗಳನ್ನೂ ಅಂತರ್ಬೋಧೆ ಮತ್ತು ಅನುಗಮನ ಬೆರೆತ ಸಮ್ಮಿಶ್ರ ಪ್ರಕ್ರಿಯೆಯೊಂದರ ಮೂಲಕ ಪಡೆದಿದ್ದರು ಎಂದು ಮುಂತಾದ ಅಭಿಪ್ರಾಯಗಳನ್ನು ಹಾರ್ಡಿ ತಳೆದಿದ್ದರು. ಹಾರ್ಡಿ ಮತ್ತು ಅವರ ಸಹೋದ್ಯೋಗಿ ಲಿಟಲ್‌ವುಡ್ ಎಂಬವರು ರಾಮಾನುಜನ್ನರ ಶಿಕ್ಷಣದ ಹೊಣೆ ಹೊತ್ತುಕೊಂಡಿದ್ದರು. 1914-18ರ ಅವಧಿಯಲ್ಲಿ ರಾಮಾನುಜನ್ ಸುಮಾರು 24 ಸಂಶೋಧನ ಪ್ರಬಂಧಗಳನ್ನು ಪ್ರಕಟಿಸಿದ್ದರು. ಟ್ರಿನಿಟಿ ಕಾಲೇಜಿನ ಮತ್ತೊಬ್ಬ ಫೆಲೋ ಆಗಿದ್ದ ಇ. ಡಬ್ಲ್ಯು. ಬಾರ್ನೆಸ್ ಎಂಬವರೂ ರಾಮಾನುಜನ್ನರ ಪ್ರಗತಿ, ಪ್ರತಿಭೆಗಳನ್ನು ಕುರಿತು ಮದರಾಸ್ ವಿಶ್ವವಿದ್ಯಾಲಯಕ್ಕೆ ವರದಿ ಕಳುಹಿಸಿದ್ದರು.
ಆಹಾರದ ಸಮಸ್ಯೆ ಮತ್ತು ಆರೋಗ್ಯ ಹದಗೆಡುವಿಕೆ
[ಬದಲಾಯಿಸಿ]ಇಂಗ್ಲೆಂಡಿನ ಕೇಂಬ್ರಿಜ್ ಕಾಲೇಜಿನಲ್ಲಿ ತಮ್ಮ ಅಧ್ಯಯನ ಸಂಶೋಧನೆಗಳನ್ನು ನಡೆಸುತ್ತಿದ್ದ ರಾಮಾನುಜನ್ ಅವರಿಗೆ ತಲೆದೋರಿದ ಸಮಸ್ಯೆ ಎಂದರೆ ಆಹಾರ ಸಮಸ್ಯೆಯೇ. ಅಲ್ಲಿ ಇದ್ದ ಪರ್ಯಂತವೂ ತಾವೇ ಅಡುಗೆ ಮಾಡಿಕೊಂಡು ಊಟ ಮಾಡುತ್ತಿದ್ದರು. ಕಾಲೇಜಿನಲ್ಲಿ ಒಳ್ಳೆಯ ಶಾಕಾಹಾರ ದೊರೆಯುತ್ತಿಲ್ಲ. ಹೊರಗೆ ಹೋಗಿ ತರುವುದು ನನಗೆ ಅಸಾಧ್ಯ ಎಂಬೆಲ್ಲ ಮಾತುಗಳನ್ನು ರಾಮಾನುಜನ್ ಭಾರತದಲ್ಲಿದ್ದ ತಮ್ಮ ಮಿತ್ರರೊಬ್ಬರಿಗೆ ಬರೆದುಕೊಂಡಿದ್ದರಂತೆ. ತಮ್ಮ ಆಹಾರದ ಅಗತ್ಯ ವಸ್ತುಗಳನ್ನು ಭಾಂಗಿ ಮೂಲಕ ಕಳುಹಿಸಿಕೊಡುವಂತೆಯೂ ಕೇಳಿಕೊಂಡಿದ್ದರಂತೆ. ಒಂದೆಡೆ ಗಣಿತಪ್ರಪಂಚದ ಸಮಸ್ಯಾವ್ಯೂಹವನ್ನು ಭೇದಿಸುವ ಮಾನಸಿಕ ಆಲೋಚನೆ, ಮತ್ತೊಂದೆಡೆ ಆಹಾರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಚಿಂತನೆ. ಇವೆರಡೂ ವಿಷಯಗಳ ಬಗ್ಗೆ ಚಿಂತಿಸುತ್ತಿದ್ದ ರಾಮಾನುಜನ್ನರ ಆರೋಗ್ಯ ದಿನೇ ದಿನೇ ಕ್ಷೀಣಿಸತೊಡಗಿತು. ಇಂಗ್ಲೆಂಡಿನ ಹವೆ ಕೂಡ ಇವರ ಆರೋಗ್ಯಕ್ಕೆ ಪ್ರತಿಕೂಲವೆನಿಸಿತ್ತು. ಇವರ ಆರೋಗ್ಯ ಹದಗೆಡುತ್ತಿರುವ ಬಗ್ಗೆ ಹಾರ್ಡಿ ಮದರಾಸ್ ವಿಶ್ವವಿದ್ಯಾಲಯಕ್ಕೆ ತಿಳಿಸಿದ್ದರು. ಅಂದಿನ ದಿವಸಗಳಲ್ಲಿ ಪ್ರಪಂಚದ ಯುದ್ಧಗಳು ತಾಂಡವವಾಡುತ್ತಿದ್ದು ಭಾರತದಲ್ಲಿ ಕೂಡ ಅದರ ಪರಿಣಾಮ ಗೋಚರವಾಗುತ್ತಿತ್ತು. ಅಲ್ಲದೆ ಅಂದಿನ ದಿವಸಗಳಲ್ಲಿ ಭಾರತದಲ್ಲಿ ಸಮರ್ಥ ವೈದ್ಯಕೀಯ ಸೇವೆ ಲಭಿಸುವುದು ಕೂಡ ಕಷ್ಟವೆನಿಸುತ್ತಿತ್ತು. ಇಂಥ ಪರಿಸ್ಥಿತಿಯಲ್ಲಿ ರಾಮಾನುಜನ್ನರನ್ನು ಭಾರತಕ್ಕೆ ಮರಳಿ ಕಳುಹಿಸುವ ಯೋಜನೆಯನ್ನು ಮಾಡಿದ್ದರಾದರೂ ಅದನ್ನು ಕೈಬಿಟ್ಟು ಅವರನ್ನು ಲಂಡನ್ನಿನ ವಿಶ್ರಾಂತಿಧಾಮವೊಂದಕ್ಕೆ ಸೇರಿಸಿದರು. ಮೇಲಿಂದ ಮೇಲೆ ಆರೋಗ್ಯ ತಪಾಸಣೆಗಳು ನಡೆದು ರಾಮಾನುಜನ್ನರು ಕ್ಷಯರೋಗಕ್ಕೆ ಈಡಾಗಿದ್ದಾರೆಂಬುದು ಖಚಿತಪಟ್ಟಿತು. ಯಾವುದೇ ಬಗೆಯ ಔಷಧಗಳಾದರೂ, ಆಹಾರವಾದರೂ ರಾಮಾನುಜನ್ನರ ದೇಹಪ್ರಕೃತಿಗೆ ಒಗ್ಗುವಂತಿರಲಿಲ್ಲ. ಹೀಗಾಗಿ 1917-18ರ ಅವಧಿಯಲ್ಲಿ ಇವರನ್ನು ಒಂದು ವಿಶ್ರಾಂತಿಧಾಮದಿಂದ ಇನ್ನೊಂದು ವಿಶ್ರಾಂತಿಧಾಮಕ್ಕೆ ಅಲ್ಲಿಂದ ಮಗದೊಂದು ವಿಶ್ರಾಂತಿಧಾಮಕ್ಕೆ ವರ್ಗಾವಣೆ ಮಾಡುವುದೇ ಆಯಿತು.
ರಾಮಾನುಜನ್ನರ ಆರೋಗ್ಯ ತಕ್ಕಮಟ್ಟಿಗೆ ಸುಧಾರಿಸಿದೆ ಎಂದು ಕಂಡುಬಂದಾಗ ಹಾರ್ಡಿಯವರು ಮದರಾಸ್ ವಿಶ್ವವಿದ್ಯಾಲಯಕ್ಕೆ ಕಾಗದ ಬರೆದು ರಾಮಾನುಜನ್ನರ ಸುದೀರ್ಘ ವ್ಯಾಧಿ ಹಾಗೂ ಅವರ ಏಕಾಂತಜೀವನ ಅವರ ಮೇಲೆ ದುಷ್ಪರಿಣಾಮ ಉಂಟುಮಾಡಿವೆ ಎಂಬುದನ್ನು ತಿಳಿಸಿದ್ದರು. ರಾಮಾನುಜನ್ನರನ್ನು ವಾಪಸ್ಸು ಕರೆಸಿಕೊಂಡು ಅವರ ಆರೋಗ್ಯ ಸುಧಾರಿಸಲು ತಾವೂ ಸಹಕಾರ ನೀಡಬೇಕೆಂಬುದಾಗಿ ಕೇಳಿರುವ ಒಕ್ಕಣೆಯೂ ಆ ಪತ್ರದಲ್ಲಿತ್ತು. ಇದನ್ನು ಮದರಾಸ್ ವಿಶ್ವವಿದ್ಯಾಲಯ ಅಂಗೀಕರಿಸಿತು.
ಚಿಕ್ಕ ವಯಸ್ಸಿನಲ್ಲಿ ಕಳೆದುಹೋದ ಪ್ರತಿಭೆ
[ಬದಲಾಯಿಸಿ]ರಾಮಾನುಜನ್ 1919 ಫೆಬ್ರವರಿ 27ರಂದು ಲಂಡನ್ನನ್ನು ಬಿಟ್ಟು ಅದೇ ಮಾರ್ಚ್ 27ರಂದು ಮುಂಬೈ ತಲುಪಿ ಬಳಿಕ ಏಪ್ರಿಲ್ 2 ರಂದು ಮದರಾಸಿಗೆ ಬಂದರು. ಭಾರತಕ್ಕೆ ಮರಳಿಬಂದ ರಾಮಾನುಜನ್ನರನ್ನು ಹಾರ್ಡಿ ಅವರು `ಭಾರತದ ಭಾಗ್ಯ' ಎಂದು ಶ್ಲಾಘಿಸಿದ್ದರು. ತೀವ್ರಸ್ವರೂಪದ ದೈಹಿಕಯಾತನೆಯಿಂದ ನರಳುತ್ತಿದ್ದಾಗ ರಾಮಾನುಜನ್ನರು ಅದನ್ನು ಮರೆಯಲು ಗಣಿತಚಿಂತನೆಯನ್ನೇ ತಮ್ಮ ರಾಮಮಂತ್ರವನ್ನಾಗಿ ಮಾಡಿಕೊಂಡಿದ್ದರು.
ಕೇಂಬ್ರಿಡ್ಜ್‌ನಲ್ಲಿ ಅಪ್ರತಿಮ ಪ್ರತಿಭಾವಂತರಾಗಿ ತಮ್ಮ ಸಂಶೋಧನೆಗಳನ್ನು ನಿರೂಪಿಸಿದ ರಾಮಾನುಜನ್ ಐದು ವರ್ಷಗಳ ನಂತರ ಭಾರತಕ್ಕೆ ಹಿಂದಿರುಗಿ ವಿದ್ವಾಂಸರಿಂದ ಅಭೂತಪೂರ್ವ ಮೆಚ್ಚುಗೆ ಮತ್ತು ಸ್ವಾಗತಗಳನ್ನು ಪಡೆದರು. ಆದರೆ ದುರದೃಷ್ಟವಶಾತ್ ಅವರ ಆರೋಗ್ಯ ಕ್ಷೀಣಿಸುತ್ತಿತ್ತು. ಪತಿಯ ಎಲ್ಲ ಶುಶ್ರೂಷೆಯನ್ನೂ ನೋಡಿಕೊಳ್ಳುತ್ತಿದ್ದ ಪತ್ನಿ ಜಾನಕಿ ಬಳಿಯೇ ಇದ್ದು ರಾಮಾನುಜನ್ನರಿಗೆ ಅಗತ್ಯವಿದ್ದ ಎಲ್ಲ ಲೇಖನಸಾಮಗ್ರಿಗಳನ್ನೂ ಒದಗಿಸುತ್ತಿದ್ದರು. ಅವರು ಟಿಪ್ಪಣಿ ಮಾಡಿಕೊಳ್ಳುತ್ತಿದ್ದ ಕಾಗದದ ಹಾಳೆಗಳನ್ನೆಲ್ಲ ಜೋಪಾನವಾಗಿರಿಸುತ್ತಿದ್ದರು. ಆ ಟಿಪ್ಪಣಿ ಕಾಗದಗಳೇ ಇಂದು ಗಣಿತಕ್ಷೇತ್ರಕ್ಕೆ ಅಮೂಲ್ಯ ಕೊಡುಗೆಗಳೆನಿಸಿವೆ.
ಮದರಾಸ್ ವಿಶ್ವವಿದ್ಯಾಲಯದಲ್ಲಿ ಪ್ರತಿಷ್ಠಿತ ಗಣಿತ ಪ್ರೊಫೆಸರ್ ಸ್ಥಾನಕ್ಕೆ ಇವರನ್ನು ನೇಮಕ ಮಾಡುವ ಯೋಚನೆ ಒಂದೆಡೆಯಾದರೆ ಇವರ ಆರೋಗ್ಯ ಸುಧಾರಿಸುವಂತೆ ಮಾಡುವ ಪ್ರಯತ್ನ ಇನ್ನೊಂದೆಡೆ ನಡೆದಿತ್ತು. ಉತ್ತಮ ವೈದ್ಯಕೀಯ ಸೌಲಭ್ಯ ಹಾಗೂ ಬಹು ನಾಜೂಕಾದ ಉಪಚಾರ ಮತ್ತು ಮೇಲ್ವಿಚಾರಣೆ ಇದ್ದರೂ ಅವರು ಏಪ್ರಿಲ್ ೨೬, ೧೯೨೦, ಸೋಮವಾರದಂದು ೩೨ ವರ್ಷ, ೪ ತಿಂಗಳು, ೪ ದಿವಸಗಳ ತರುಣ ವಯಸ್ಸಿನಲ್ಲೇ ತೀರಿಕೊಂಡರು. ಭರತಖಂಡ ಹಾಗೂ ಜಗತ್ತು ಮತ್ತೆ ಅಂದಿನವರೆಗೆ ಕಂಡಿಲ್ಲದಂಥ ಮಹಾನ್ ಗಣಿತ ಪ್ರತಿಭೆಯನ್ನು ಕಳೆದುಕೊಂಡಿತು.
ರಾಮಾನುಜನ್ನರ ಸಾವಿನ ಬಗ್ಗೆ ಶೋಕ ವ್ಯಕ್ತಪಡಿಸುತ್ತ ಹಾರ್ಡಿಯವರು ಬರೆದು ಇವರ ಪಾಂಡಿತ್ಯವನ್ನು ಪ್ರತಿಭೆಯನ್ನೂ ಮನಃಪೂರ್ತಿಯಾಗಿ ಶ್ಲಾಘಿಸಿದ್ದರು. ಇವರ ಮರಣ ಗಣಿತಪ್ರಪಂಚಕ್ಕೆ ತುಂಬಲಾರದ ನಷ್ಟವೆನ್ನುವ ಮಾತನ್ನು ಹಲವು ಪರಿಗಳಲ್ಲಿ ವ್ಯಕ್ತಪಡಿಸಿದ್ದರು.
ಅಸಾಮಾನ್ಯ ಪ್ರತಿಭೆ
[ಬದಲಾಯಿಸಿ]ಪ್ರೊ. ಹಾರ್ಡಿ ಹೇಳುತ್ತಾರೆ: “ರಾಮಾನುಜನ್ ಅವರಲ್ಲಿ ಪರಮಾದ್ಭುತವಾದುದೆಂದರೆ ಬೀಜಗಣಿತದ ಸೂತ್ರಗಳು, ಅನಂತ ಶ್ರೇಣಿಗಳ ಪರಿವರ್ತನೆ ಮುಂತಾದವುಗಳಲ್ಲಿದ್ದ ಅವರ ಅಂತರ್ದೃಷ್ಟಿ. ಈ ವಿಷಯಗಳಲ್ಲಿ ಅವರಿಗೆ ಸಮನಾದವರನ್ನು ಖಂಡಿತವಾಗಿಯೂ ನಾನು ಕಂಡಿಲ್ಲ. ಅವರನ್ನು ಆಯ್ಲರ್ ಅಥವಾ ಜಾಕೊಬಿಯಂತಹ ಸಾರ್ವಕಾಲಿಕ ಶ್ರೇಷ್ಠರೊಂದಿಗೆ ಮಾತ್ರ ಹೋಲಿಸಲು ಸಾಧ್ಯ. ರಾಮಾನುಜನ್ ಅವರ ಸ್ಮರಣ ಶಕ್ತಿ, ಸಹನೆ, ಗಣಿಸುವ ಸಾಮರ್ಥ್ಯಗಳೊಂದಿಗೆ ಸಾರ್ವತ್ರೀಕರಣ ಶಕ್ತಿ, ಸ್ವರೂಪ ಜ್ಞಾನ, ಆಧಾರ ಭಾವನೆಗಳನ್ನು ಕ್ಷಿಪ್ರವಾಗಿ ಬದಲಾಯಿಸುವ ಚಾಕಚಕ್ಯತೆ ಇವು ಅನೇಕ ವೇಳೆ ದಂಗುಬಡಿಸುತ್ತಿದ್ದವು. ರಾಮಾನುಜನ್ ಅವರದೇ ಆದ ಈ ಕ್ಷೇತ್ರದಲ್ಲಿ ಆ ಕಾಲದಲ್ಲಿ ಅವರಿಗೆ ಸರಿಸಾಟಿಗಳಿಲ್ಲದಂತೆ ಮಾಡಿದವು”
ಸಂಶೋಧನಾ ಕ್ಷೇತ್ರಗಳು
[ಬದಲಾಯಿಸಿ]ರಾಮಾನುಜನ್ ಅವರ ಸಂಶೋಧನೆಗಳಲ್ಲಿ ಮುಖ್ಯವಾಗಿ ಈ ಕ್ಷೇತ್ರಗಳನ್ನು ಹೆಸರಿಸಬಹುದು:
- ಅವಿಭಾಜ್ಯ ಸಂಖ್ಯೆಗಳ ಬಗ್ಗೆ ಸಂಶೋಧನೆ
- ಪಾರ್ಟಿಷನ್ ಸಂಖ್ಯೆಗಳ ಬಗ್ಗೆ ಸಂಶೋಧನೆ
- ರಾಮಾನುಜನ್ ಊಹೆ
- ರಾಮಾನುಜನ್-ಪೀಟರ್ಸನ್ ಊಹೆ
ರಾಮಾನುಜನ್ನರಿಗೆ ಗಣಿತದಲ್ಲಿ ಇದ್ದ ಆಸಕ್ತಿ ಅಪಾರ. ಸಂಖ್ಯೆಗಳೊಂದಿಗೆ ಸೆಣಸಾಟವಾಡುವುದೆಂದರೆ ಅವರಿಗೆ ಬಲು ಪ್ರಿಯ, ಸ್ವಿಸ್ ಗಣಿತದಿಂದ ಲಿಯೋನಾರ್ಡ್ ಆಯ್ಲರ್ (1707-83) ಎಂಬವನಿಗೆ ಮಾಯಾಚೌಕಗಳ ಬಗ್ಗೆ ಇದ್ದ ಆಸಕ್ತಿಯಂತೆಯೇ ರಾಮಾನುಜನ್ ಕೂಡ ಮಾಯಾಚೌಕಗಳ ವಿಚಾರವಾಗಿ ಮನಸೋತಿದ್ದರು. ಇಂಚುಪಟ್ಟಿ ಮತ್ತು ಕೈವಾರಗಳನ್ನು ಮಾತ್ರ ಉಪಯೋಗಿಸಿ ಯಾವುದೇ ವೃತ್ತದ ಸಲೆಗೆ ಸಮನಿರುವ ಚೌಕವನ್ನು ರಚಿಸುವುದರ ಬಗ್ಗೆ ವಿಶೇಷ ಆಸಕ್ತಿ ತಳೆದಿದ್ದರು. ಸಂಖ್ಯೆಗಳನ್ನು ಬೇರೆ ಬೇರೆ ರೀತಿಗಳಲ್ಲಿ ಅನಂತವರ್ಗ, ಮೂಲಾಂತರ್ಗತ ವರ್ಗಮೂಲಗಳಾಗಿ ನಿರೂಪಿಸಿವುದು, ಸೊನ್ನೆಯನ್ನು ಸೊನ್ನೆಯಿಂದಲೇ ಭಾಗಸಿದಾಗ ಏನಾಗುತ್ತದೆ ಎಂಬುದು, ಅವಿಭಾಜ್ಯ ಸಂಖ್ಯೆಗಳು, ಘನಮೂಲಗಳು, ಅಪಸರಣಶ್ರೇಣಿಗಳು, ಗಣಿತದಲ್ಲಿನ ಅಸಾಂಗತ್ಯಗಳು, ಆಯ್ಲೇರಿನ್ ಅನುಕಲನಗಳು, ಅನಂತಶ್ರೇಣಿಗಳು, ಸಂಖ್ಯೆಗಳ ವಿಭಾಗೀಕರಣ ಹಾಗೂ ಗುಣಗಳು-ಹೀಗೆ ಹಲವು ಗಣಿತವಿಭಾಗಗಳಲ್ಲಿ ರಾಮಾನುಜನ್ ಶ್ರದ್ಧೆಯಿಂದಲೂ ನಿಜಾಸಕ್ತಿಯಿಂದಲೂ ಶ್ರಮಿಸಿ ಮಹೋನ್ನತ ಸಾಧನೆ ಮಾಡಿದ್ದರು. ಪ್ರೊ. ಹಾರ್ಡಿಯವರ ನೇತೃತ್ವದಲ್ಲಿ ರಾಮಾನುಜನ್ ಐದು ವರ್ಷಗಳ ಕಾಲ ಕೆಲಸಮಾಡಿ ಅನೇಕ ಲೇಖನಗಳನ್ನು ಪ್ರಕಟಿಸಿದರು. ಅವುಗಳ ಪೈಕಿ ಏಳು ಲೇಖನಗಳಿಗೆ ಹಾರ್ಡಿ ಬಲು ಪ್ರಾಶಸ್ತ್ಯ ಕೊಟ್ಟಿದ್ದರು. ಮಾಡ್ಯುಲರ್ ಸಮೀಕರಣಗಳು ಮತ್ತು ಪೈ (π) ಸನ್ನಿಹಿತ ಬೆಲೆಗಳು, ಅತಿಮಿಶ್ರ ಸಂಖ್ಯೆಗಳು, ಕೆಲವು ಪಾಟೀ ಅನುಸ್ಥಾಪನಗಳು, ತ್ರಿಕೋನಮಿತಿಯ ಮೊತ್ತಗಳು ಮತ್ತು ಸಂಖ್ಯಾವಿಚಾರಕ್ಕೆ ಅವುಗಳ ಪ್ರಯೋಗಗಳು, n ನ ವಿಭಾಗ ಸಂಖ್ಯೆಯಾದ P(n) ನ ಕೆಲವು ಗುಣಗಳು, ಯೋಗವಿಶ್ಲೇಷಣೆಯಲ್ಲಿ ಕೆಲವು ಸರ್ವಸಮತ್ವಗಳ ಸಾಧನೆ, ವಿಭಾಗಗಳ ಏಕತಾ ಗುಣಗಳು. ರಾಮಾನುಜನ್ನರ ಪ್ರತಿಭೆ ಎದ್ದು ಕಾಣುತ್ತಿದ್ದುದು ಅವರ ಸಂಖ್ಯೆಗಳ ವಿಭಾಗಸಿದ್ಧಾಂತ ಮತ್ತು ಅದಕ್ಕೆ ಸಂಬಂಧಿಸಿದ ದೀರ್ಘವೃತ್ತೀಯ ಉತ್ಪನ್ನಗಳಲ್ಲಿ ಹಾಗೂ ಅನಂತ ಭಿನ್ನರಾಶಿಗಳಲ್ಲಿ ಎಂದು ಹಾರ್ಡಿ ಅಭಿಪ್ರಾಯಪಟ್ಟಿದ್ದರು.
ರಾಮಾನುಜನ್ ರ ಬಗ್ಗೆ ಪುಸ್ತಕಗಳು
[ಬದಲಾಯಿಸಿ]- "ರಾಮಾನುಜನ್ ಬಾಳಿದರಿಲ್ಲಿ", ಜಿ.ಟಿ.ನಾರಾಯಣ ರಾವ್
- Collected Papers of Srinivasa Ramanujan ISBN 0-8218-2076-1
- The Man Who Knew Infinity: A Life of the Genius Ramanujan by Robert Kanigel ISBN 0-671-75061-5
- ಶ್ರೀನಿವಾಸ ರಾಮಾನುಜನ್, ಲೇಖಕರು ಸುರೇಶ್ ರಾಮ್, ನ್ಯಾಷನಲ್ ಬುಕ್ ಟ್ರಸ್ಟಿನ ರಾಷ್ಟ್ರೀಯ ಜೀವನಚರಿತ್ರ ಮಾಲೆ.
ಉಲ್ಲೇಖಗಳು
[ಬದಲಾಯಿಸಿ]- ↑ Olausson, Lena; Sangster, Catherine (2006). Oxford BBC Guide to Pronunciation. Oxford University Press. p. 322. ISBN 978-0-19-280710-6.
- ↑ {{cite encyclopedia |encyclopedia=Oxford Dictionary of National Biography |edition=online |publisher=Oxford University Press |ref=harv |last =Kanigel |last1 = |author = |author1 = |authors = |first =Robert |first1 = |authorlink = |author-link = |HIDE_PARAMETER10= |authorlink1 = |last2 = |author2 = |first2 = |authorlink2 = |HIDE_PARAMETER16= |last3 = |author3 = |first3 = |authorlink3 = |HIDE_PARAMETER21= |title =Ramanujan, Srinivasa |title = |url = |doi = |origyear = |year =2004 |date = |month = |HIDE_PARAMETER30= |HIDE_PARAMETER31= |separator = |mode = |doi=10.1093/ref:odnb/51582 }} (Subscription or UK public library membership required.)
- ↑ "Ramanujan Aiyangar, Srinivasa (1887–1920)". trove.nla.gov.au.
- ↑ Kanigel 1991, p. 11
- ↑ Kanigel 1991, pp. 17–18
- ↑ Kanigel 1991, p. 13
- ↑ Kanigel 1991, p. 25
- ↑ Kanigel 1991, p. 39
- ↑ McElroy, Tucker (2005). A to Z of mathematicians. Facts on File. p. 221. ISBN 0-8160-5338-3-
- ↑ Kanigel 1991, p. 28
- ↑ Kanigel 1991, p. 45
- ↑ Kanigel 1991, pp. 47–48
- ↑ "The seamstress and the mathematician". Live mint. 20 April 2018.
- ↑ Srinivasan (1968), Vol. 1, p. 86.
- ↑ Neville, Eric Harold (January 1921). "The Late Srinivasa Ramanujan". Nature. 106 (2673): 661–662. Bibcode:1921Natur.106..661N. doi:10.1038/106661b0. S2CID 4185656.
- ↑ Ranganathan 1967, p. 24
- ↑ Berndt & Rankin (2001), p. 97.
- ↑ Kanigel 1991, p. 86
- ↑ Kanigel 1991, p. 91
- ↑ "The letter that revealed Ramanujan's genius". YouTube.
- ↑ Kanigel 1991, p. 184
- ↑ Neville, Eric Harold (1942). "Srinivasa Ramanujan". Nature. 149 (3776): 292–293. Bibcode:1942Natur.149..292N. doi:10.1038/149292a0.
- ↑ Kanigel 1991, p. 196
- ↑ Lloyd's Register of Shipping 1930 (PDF). 1930. Retrieved 1 September 2020.
Nevasa 1913
- ↑ "A (very) Brief History of Srinivasa Ramanujan". YouTube. Archived from the original on 2021-12-11.
- ↑ The Cambridge University Reporter, of 18 March 1916, reports: Bachelors designate in Arts, Srinivasa Ramanujan (Research Student), Trin. A clear photographic image of said document can be viewed on the following YouTube video at the specified timestamp: https://www.youtube.com/watch?v=uhNGCn_3hmc&t=1636
- ↑ "The Maths PhD in the UK: Notes on its History". www.economics.soton.ac.uk. Retrieved 2020-08-09.
- ↑ Embleton, Ellen (2 October 2018). "Revisiting Ramanujan". The Royal Society. Archived from the original on 16 February 2020. Retrieved 16 February 2020.
ಗ್ರಂಥಸೂಚಿ
[ಬದಲಾಯಿಸಿ]- Bruce C. Berndt; Robert A. Rankin (2000). "The Books Studied by Ramanujan in India". American Mathematical Monthly. 107 (7): 595–601. doi:10.2307/2589114. JSTOR 2589114. MR 1786233.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- ಶ್ರೀನಿವಾಸ ರಾಮಾನುಜನ್
- ರಾಮಾನುಜನ್ ಜರ್ನಲ್ Archived 2002-01-26 ವೇಬ್ಯಾಕ್ ಮೆಷಿನ್ ನಲ್ಲಿ.
- ರಾಮಾನುಜನ್ ಜೀವನದ ಕುರಿತಾದ ಇಂಗ್ಲೀಷ್ ಚಲನಚಿತ್ರ ದ ಮ್ಯಾನ್ ಹೂ ನ್ಯೂ ಇನ್ಫಿನಿಟಿ
- Pages using the JsonConfig extension
- Wikipedia articles incorporating a citation from the ODNB
- Harv and Sfn no-target errors
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- ಭಾರತದ ಪ್ರಸಿದ್ಧ ವ್ಯಕ್ತಿಗಳು
- ಭಾರತದ ಗಣಿತಜ್ಞರು
- ಗಣಿತ
- ಭಾರತೀಯ ಗಣಿತಜ್ಞರು
- ೧೮೮೭ ಜನನ
- ೧೯೨೦ ನಿಧನ
- ತಮಿಳುನಾಡು ಪ್ರಸಿದ್ಧ ವ್ಯಕ್ತಿಗಳು
- ಮಾನವ ಕಂಪ್ಯೂಟರ್
- ಶ್ರೀನಿವಾಸ ರಾಮಾನುಜನ್
- Pages using ISBN magic links