ಸದಸ್ಯ:Nimitha s 13
ಕರ್ನಾಟಕ ಕರಾವಳಿಯ ಕೃಷಿ ರಾಜ್ಯದ ಇತರ ಭಾಗಗಳ ಕೃಷಿಗಿಂತ ಭಿನ್ನ. ಈ ಭಿನ್ನತೆ ಮುಖ್ಯವಾಗಿ ಭೌಗೋಳಿಕ ಕಾರಣಗಳಿಂದಾಗಿ ಆಹಾರ ಬೆಳೆಗಳಿಗಿಂತ ವಾಣಿಜ್ಯ ಬೆಳೆಗಳಿಗೆ ಇಲ್ಲಿ ಪ್ರಾಶಸ್ತ್ಯ. ಹಾಗೆಂದು ಇಲ್ಲಿ ಆಹಾರ ಬೆಳೆಗಳನ್ನು ಬೆಳೆಸಲೇ ಇಲ್ಲವೆಂದಲ್ಲ. ನನ್ನ ತಾತಂದಿರ ಕಾಲದಲ್ಲಿ ಗಣನೀಯ ಪ್ರಮಾಣದಲ್ಲಿ ಇಲ್ಲಿ ಭತ್ತವನ್ನು ಬೆಳೆಸುತ್ತಿದ್ದರು. ಜೊತೆಜೊತೆಗೆ ಹಣಕಾಸು ಬೆಲೆಯಾದ ಅಡಿಕೆಯನ್ನು ಮುಖ್ಯ ಬೆಳೆಯಾಗಿ ಕರಾವಳಿಯುದ್ದಕ್ಕೂ ಬೆಳೆಸುತ್ತಿದ್ದರು. ಕಾಲಕ್ರಮೇಣ ಅಡಿಕೆ ಲಾಭದ ರುಚಿ ಹೆಚ್ಚಾಗಿ ಭತ್ತದ ಗದ್ದೆಗಳೆಲ್ಲಾ ಅಡಿಕೆ ತೋಟಗಳಾದವು. ಸಾಂಪ್ರದಾಯಿಕವಾಗಿ, ಉಪಬೆಳೆಗಳಾಗಿ ಬಾಳೆ, ಕಾಳುಮೆಣಸು, ತೆಂಗು ಇತ್ಯಾದಿಗಳನ್ನು ಬೆಳೆಯುತ್ತಿದ್ದರು. ಕರಾವಳಿ ತೀರದಲ್ಲಿ ಮುಖ್ಯ ಬೆಳೆಯಾಗಿ ಕೆಲಭಾಗದಲ್ಲಿ ಬೆಳೆಯುತ್ತಿದ್ದರು.
ವಾಣಿಜ್ಯ ಬೆಳೆಗಳ ಆಕರ್ಷಣೆಗೆ ಭೂಸುಧಾರಣಾ ಕಾಯಿದೆಯೂ ವೇಗವರ್ಧಕವಗಿ ಕೆಲಸ ಮಾಡಿತು.ಈ ಕಾಯಿದೆಯು ಇತರೆಡೆಗಳಿಗಿಂತ ಹೆಚ್ಚಾಗಿ ಕರಾವಳಿಯಲ್ಲಿ ತುಂಡುಭೂಮಿಗಳ ಸೃಷ್ಟಿಗೆ ಕಾರಣವಾಯಿತು. ಇದು ನಿರ್ವಹಣೆಗೆ ಸರಳವಾದ ವಾಣಿಜ್ಯ ಬೆಳೆಗಳತ್ತ ಜನರನ್ನು ಆಕರ್ಷಿಸಿತು. ಇದರೊಂದಿಗೆ ಬೆಟ್ಟ ಗುಡ್ಡ ಪ್ರದೇಶದಲ್ಲಿ ಗೇರು ಕೃಷಿಗೆ ಸರ್ಕಾರದ ಮೂಲಕ ಉತ್ತೇಜನ ಆರಂಭವಾಯಿತು. ಗೇರು ಕೃಷಿ ನಿರ್ವಹಣೆಯಲ್ಲಿ ಅತ್ಯಂತ ಕನಿಷ್ಠ ತ್ರಾಸದಾಯಕ ಬೆಳೆ. ಹಾಗೆಂದು ಲಾಭದ ದೃಷ್ಟಿಯಿಂದಲೂ ಅಷ್ಟೇನೂ ಆಕರ್ಷಕವಲ್ಲ. ಈ ಕಾರಣದಿಂದ ಖಾಸಗಿ ಹಿಡುವಳಿದಾರರು ಅಷ್ಟಾಗಿ ಗೇರುಕೃಷಿಯ ಬಗ್ಗೆ ಉತ್ಸಾಹ ತೋರಲಿಲ್ಲ. ಆದರೆ ಕರ್ನಾಟಕದ ಗೇರು ಅಭಿವೃದ್ಧಿ ಮಂಡಳಿ ಕರಾವಳಿ ಜಿಲ್ಲೆಗಳಲ್ಲಿ ಮುಖ್ಯವಾಗಿ ಉಡುಪಿ ಮತ್ತು ದಕ್ಷಿಣ ಕನ್ನಡಗಳಲ್ಲಿ ಸರಕಾರಿ ಭೂ ಪ್ರದೇಶದಲ್ಲಿ ಗಣನೀಯ ಪ್ರಮಾಣದಲ್ಲಿ ಗೇರು ಅಭಿವೃದ್ಧಿ ಕೈಗೆತ್ತಿಕೊಂಡಿತು.
ನಂತರದ ದಿನಗಳಲ್ಲಿ ಅಂದರೆ ೭೦ ರ ದಶಕದಲ್ಲಿ ಗೇರು ಕೃಷಿಗೆ ಪರ್ಯಾಯವಾಗಿ ರಬ್ಬರ್ ದಕ್ಷಿಣ ಕರಾವಳಿಗೆ ಪದಾರ್ಪಣೆ ಮಾಡಿತು. ರಬ್ಬರ್ ಬೆಳೆಯನ್ನೂ ಸಹ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ, ಸರ್ಕಾರಿ ಭೂಮಿಯಲ್ಲಿ ಪ್ರಾಯೋಗಿಕವಾಗಿ ಪ್ರಾರಂಭಿಸಿತು. ತದನಂತರ, ರಬ್ಬರ್ ಗೇರುಕೃಷಿಯನ್ನು ಕ್ರಮೇಣ ರಿಪ್ಲೇಸ್ ಮಾಡತೊಡಗಿತು.