ತಿರುಮಲೈ ಕೃಷ್ಣಮಚಾರ್ಯ
ತಿರುಮಲೈ ಕೃಷ್ಣಮಾಚಾರ್ಯ | |
---|---|
Born | ೧೮ ನವೆಂಬರ್ ೧೮೮೮ |
Died | ೨೮ ಫೆಬ್ರವರಿ ೧೯೮೯ |
Nationality | ಭಾರತೀಯ |
Occupation | ಯೋಗ ಗುರು |
Known for | "Yoga Makaranda", The Essance of Yoga, Part-1
|
Spouse | ನಾಮಗಿರಿಯಮ್ಮ |
Children | ಆರು ಜನ ಮಕ್ಕಳು. ೧. ಟಿ.ಕೆ ಶ್ರೀನಿವಾಸನ್ ೨. ಶ್ರೀಮತಿ. ಪುಂಡರೀಕವಲ್ಲಿ ೩. ಶ್ರೀಮತಿ.ಅಲಮೇಲು ಶೇಶಾದ್ರಿ ೪. ಟಿ.ಕೆ.ವಿ.ದೇಶಿಕಾಚಾರ್ (೧೯೩೮-೨೦೧೬) ೫.ಟಿ.ಕೆ.ಶ್ರೀಭಾಷ್ಯಮ್ (೧೯೪೦-೨೦೧೭) ೬. ಶ್ರೀಮತಿ. ಶುಭ ಮೋಹನ್ ಕುಮಾರ್. |
Website | [೧],'ಯೋಗ ಮಕರಂದ' |
ತಿರುಮಲೈ ಕೃಷ್ಣಮಾಚಾರ್ಯ [೧] (೧೮ ನವೆಂಬರ್ ೧೮೮೮,-೨೮ ಫೆಬ್ರವರಿ ೧೯೮೯) ಭಾರತೀಯ ಯೋಗ ಶಿಕ್ಷಕರು, ಆಯುರ್ವೇದ ವೈದ್ಯರು, ಮತ್ತು ವಿದ್ವಾಂಸರಾಗಿದ್ದರು. ಕೃಷ್ಣಮಾಚಾರ್ಯರು '೨೦ನೇ ಶತಮಾನದ ಹೆಚ್ಚು ವರ್ಚಸ್ಸುಳ್ಳ ಯೋಗ ಶಿಕ್ಷಕರು' ಎನಿಸಿಕೊಂಡಿದ್ದಾರೆ ಮತ್ತು 'ಯೋಗದ ಹಟವಾದಿ' ಎಂದು ಪುನರ್ಜೀವಿಸಿದ್ದಾರೆ. "ಆಧುನಿಕ ಯೋಗದ ಪಿತಾಮಹ" ಎಂದು ಪ್ರಸಿದ್ದಿಯಾಗಿದ್ದಾರೆ. ತಿರುಮಲೈ ಕೃಷ್ಣಮಾಚಾರ್ಯರು [೨] ಆರು ವೈದಿಕ ದರ್ಶನಗಳಲ್ಲಿ ಮತ್ತು ಭಾರತೀಯ ತತ್ವಗಳಲ್ಲಿ ಪದವಿ ಪಡೆದಿದ್ದಾರೆ. ಅವರು ಯೋಗವನ್ನು ಆಧಾರವಾಗಿಟ್ಟುಕೊಂಡು ನಾಲ್ಕು ಪುಸ್ತಕಗಳನ್ನು ರಚಿಸಿದ್ದಾರೆ :
- ೧೯೩೪ ರಲ್ಲಿ "ಯೋಗ ಮಕರಂದ",
- ೧೯೪೧ ರಲ್ಲಿ "ಯೋಗಾಸನಗಳು",
- ೧೯೮೮ ರಲ್ಲಿ "ಯೋಗ ರಹಸ್ಯ" ಮತ್ತು "ಯೋಗವಲ್ಲಿ",
- ಇದನ್ನು ಹೊರತುಪಡಿಸಿ ಹಲವಾರು ಪ್ರಬಂಧಗಳನ್ನು ಮತ್ತು ಕಾವ್ಯ ರಚನೆಗಳನ್ನು ರಚಿಸಿದ್ದಾರೆ.
ಶಿಷ್ಯರು
[ಬದಲಾಯಿಸಿ]ಸಂಸ್ಕೃತ ಪಾಠಶಾಲೆ/ಯೋಗಶಾಲೆಗಳಲ್ಲಿ ಬಹಳಜನ ವಿದ್ಯಾರ್ಥಿಗಳು ಬರುತ್ತಿದ್ದರೂ, ಆ ಶಾಲೆಗಳನ್ನು ಮುಚ್ಚುವ ಪರಿಸ್ಥಿತಿ ಬಂದಾಗ ಕೃಷ್ಣಮಾಚಾರ್ಯರ ನೆರವಿಗೆ ಬಂದ ಹಿರಿಯ ವಿದ್ಯಾರ್ಥಿಗಳು ನಾಲ್ವರು. ಇವರೆಲ್ಲಾ ಗುರುಗಳ ನಿಷ್ಠಾವಂತ ಶಿಷ್ಯರು, ಹಾಗೂ ಅವರ ಆಜ್ಞಾರಾಧಕರು:
- ಸಿ.ಎಂ.ಜೋಯಿಸ್/ಸಿ.ಎಮ್.ಭಟ್
- ಪಟ್ಟಾಭಿ ಜೋಯಿಸ್
- ಕೇಶವಮೂರ್ತಿ,
- ಬಿ. ಕೆ. ಎಸ್. ಐಯ್ಯಂಗಾರ್,
ಎರಡನೆಯ ವರ್ಗ
[ಬದಲಾಯಿಸಿ]ಟಿ.ಕೃಷ್ಣಮಾಚಾರ್ಯರ ಮಗ, ಸೊಸೆ, ಮತ್ತು ಮೊಮ್ಮಕ್ಕಳು. ತಮ್ಮ ವಂಶದ ಕೆಲಸವೆಂದು ಹೆಮ್ಮೆಯಿಂದ ಹಿರಿಯರ ಕಾರ್ಯವನ್ನು ನಿಷ್ಠಾಭಕ್ತಿಗಳಿಂದ ಮುಂದುವರಿಸಿಕೊಂಡು ಹೋಗುತ್ತಿರುವವರು
ಸಿ.ಎಂ.ಜೋಯಿಸ್/ಸಿ.ಎಂ.ಭಟ್
[ಬದಲಾಯಿಸಿ]ಚಿತ್ರದುರ್ಗ ಮಹದೇವ ಜೋಯಿಸ್ ಚಿತ್ರದುರ್ಗದ, ಖ್ಯಾತ ಜ್ಯೋತಿಷಿ, ಹಾಗೂ ಪೌರೋಹಿತ್ಯವನ್ನು ಆಧರಿದ್ದ ಸಂಸ್ಕೃತ ಪಂಡಿತ, ಗುಂಡಾಜೋಯಿಸರ ಮಗ. ಬಾಲ್ಯದಿಂದ ಪ್ರತಿಭಾವಂತನಾಗಿದ್ದ ಬಾಲಕ, ಸಂಸ್ಕೃತ ಕಲಿಕೆ ಹಾಗೂ ಯೋಗವಿದ್ಯೆಯಲ್ಲಿ ಅಪಾರ ಆಸಕ್ತಿತೋರಿಸುತ್ತಿದ್ದ. ಹಾಗಾಗಿ ತಂದೆಯವರು ಅವನ ೧೨ ನೇ ವಯಸ್ಸಿಗೇ ಮೈಸೂರಿನ ಸಂಸ್ಕೃತ ಶಾಲೆಗೆ ಸಂಸ್ಕೃತ ಅಧ್ಯಯನ ಮಾಡಲು ಸೇರಿಸಿದರು. ಜೋಯಿಸ್ ಅಧ್ಯಯನ ಮುಗಿಸಿದಮೇಲೆ ಮೈಸೂರಿನ ಕಾಲೇಜುಗಳಲ್ಲಿ ಪ್ರಾಧ್ಯಾಪಕನಾಗಿ ಹೆಸರುವಾಸಿಯಾಗಿದ್ದನು. ಟಿ.ಕೃಷ್ಣಮಾಚಾರ್ಯರು 'ಯೋಗ ಶಿಕ್ಷಣ ಶಾಲೆ'ಯನ್ನು ಆರಂಭಿಸಿದಮೇಲೆ ಅವರ ಮಾರ್ಗದರ್ಶನದಲ್ಲಿ ಯೋಗದಲ್ಲಿ ಪಾಂಡಿತ್ಯ ಗಳಿಸಿದರು ಗುರುಗಳು ಬೋಧಿಸಿದ, ೩೦೦ ಯೋಗಾಸನಗಳನ್ನು ಕ್ರಮಬದ್ಧವಾಗಿ ವಿವರಣೆಗಳೊಂದಿಗೆ ಪ್ರಸ್ತುತ ಪಡಿಸುತ್ತಿದ್ದ ಪರಿಯನ್ನು ಕಂಡು ಗುರುಗಳು ವಿಸ್ಮಯಪಡುತ್ತಿದ್ದರು. ಮಹಾರಾಜಾ ಕೃಷ್ಣರಾಜ ಒಡೆಯರು ಉತ್ತರಭಾರತದಲ್ಲಿ ಯೋಗವಿದ್ಯೆಯನ್ನು ಪ್ರಸಾರಮಾಡಲು ಕೃಷ್ಣಮಾಚಾರ್ಯರನ್ನು ಕಳಿಸಿಕೊಟ್ಟಾಗ, ಗುರುಗಳ ಪರಮಾಪ್ತ ಶಿಷ್ಯ, ಮಹದೇವಜೋಯಿಸ್ ಹೆಸರನ್ನು ಸ್ವತಃ ಅರಸರೇ ಸೂಚಿಸಿದರು. ಹೀಗೆ, ಬೊಂಬಾಯಿನಿಂದ ಆರಂಭವಾದ "ಯೋಗಶಿಕ್ಷಣ ಅಭಿಯಾನ" ಬಹಳ ಯಶಸ್ವಿಯಾಗಿ ಮಹಾರಾಜರ ಆಶಯದಂತೆ ಕೊನೆಗೊಂಡಾಗ, ಗುರುಗಳು ಮಹಾದೇವಜೋಯಿಸನ ಕಾರ್ಯ ತತ್ಪರತೆ, ಗುರುಗಳಲ್ಲಿ ಭಕ್ತಿ-ಗೌರವ ಹಾಗೂ ಅಪಾರ ಸಂಯಮ, ಮತ್ತು ಆತ್ಮವಿಶ್ವಾಸಗಳನ್ನು ಗುರುತಿಸಿ, "ಭಟ"ನೆಂದು ಬಿರುದು ಕೊಟ್ಟರು. ಅಂದಿನಿಂದ ಮಹಾದೇವ ಜೋಯಿಸ್, ಮಹಾದೇವ ಭಟ್ಟನೆಂದು ಅವನ ಶಾಲೆಯಲ್ಲಿ ಪ್ರಸಿದ್ಧನಾದನು.
ಮುಂಬಯಿನಲ್ಲಿ ಸಿ.ಎಮ್.ಭಟ್ಟರು ಅಪಾರ ಯಶಸ್ಸು ಗಳಿಸಿದರು
[ಬದಲಾಯಿಸಿ]ಮೈಸೂರಿನ ಸಂಸ್ಕೃತ ಶಾಲೆ, ಹಾಗೂ ಯೋಗಶಾಲೆಗಳನ್ನು ಮುಚ್ಚಿದಮೇಲೆ ಮಹಾದೇವ ಭಟ್ ಮುಂಬಯಿಗೆ ತಮ್ಮ ವೃತ್ತಿಜೀವನ ಪ್ರಾರಂಭಿಸಲು ತೆರಳಿದರು. ಪಟ್ಟಾಭಿ ಜೋಯಿಸ್ ಮೈಸೂರಿನಲ್ಲೇ ಒಂದು ಖಾಸಗಿ ಯೋಗಶಾಲೆಯನ್ನು ಆರಂಭಿಸಿದರು. ಕೇಶವಮೂರ್ತಿಗಳೂ ಮೈಸೂರಿನಲ್ಲಿ ತಮ್ಮ ಶಾಲೆ ತೆರೆದರು. ಬಿ. ಕೆ. ಎಸ್ ಅಯ್ಯಂಗಾರ್ ಪುಣೆಯಲ್ಲಿ ತಮ್ಮ ಯೋಗಶಾಲೆಯನ್ನು ಪ್ರಾರಂಭಿಸಿದರು.
ಆಚಾರ್ಯರ ಮಕ್ಕಳು, ಬಂಧುಗಳು ಹಾಗೂ, ವಿದೇಶಿ ಶಿಷ್ಯೆ
[ಬದಲಾಯಿಸಿ]- ಟಿ. ಕೆ. ವಿ. ದೇಶಿಕಾಚಾರ್ [೩] (ಮಗ)[೪]
- ಇಂದ್ರದೇವಿ. (ವಿದೇಷಿ ಶಿಷ್ಯೆ)
- ಎ.ಜಿ ಮೋಹನ್ (ಸಂಬಂಧಿ) ಪ್ರಮುಖ ಪಾತ್ರ ವಹಿಸುತ್ತಾರೆ. [೫]
ಆರಂಭಿಕ ಜೀವನ, ಹಾಗೂ ಮನೆಯ ಪರಿಸರ
[ಬದಲಾಯಿಸಿ]ಕೃಷ್ಣಮಾಚಾರ್ಯರು ಸಂಪ್ರದಾಯಸ್ಥ ಅಯ್ಯಂಗಾರ್ ಕುಟುಂಬಕ್ಕೆ ಸೇರಿದವರು. ಇವರು ಮೂಲತಃ ಕರ್ನಾಟಕದ ಚಿತ್ರದುರ್ಗ ಜಿಲ್ಲೆಯ, ಮುಚುಕುಂದಪುರದವರು. ೧೮ ನವೆಂಬರ್ ೧೮೮೮ ರಂದು ಜನಿಸಿದರು. ಇವರ ತಂದೆ ಶ್ರೀ ತಿರುಮಲೈ ಶ್ರೀನಿವಾಸ ತಾತಾಚಾರ್ಯ, ವೇದಗಳ ಪ್ರಸಿದ್ಧ ಶಿಕ್ಷಕ, ತಾಯಿ ಶ್ರೀಮತಿ ರಂಗನಾಯಕಿ ಅಮ್ಮ. ಈ ದಂಪತಿಗಳಿಗೆ ಆರು ಜನ ಮಕ್ಕಳು ಅದರಲ್ಲಿ ಕೃಷ್ಣಮಾಚಾರ್ಯರು ಹಿರಿಯರು. ಅವರಿಗೆ ಇಬ್ಬರು ಸಹೋದರರು ಹಾಗೂ ಮೂರು ಸಹೋದರಿಯರು ಇದ್ದರು. ಅವರಿಗೆ ಆರು ವಯಸ್ಸಿನಲ್ಲಿಯೇ ಉಪನಯನ ಕಾರ್ಯವನ್ನು ಮಾಡಲಾಯಿತು. ಉಪನಯನದ ನಂತರ "ಅಮರಕೋಶ" ಎಂಬ ಪುಸ್ತಕದ ಮೂಲಕ ಮತ್ತು ತಂದೆಯ ಕಟ್ಟುನಿಟ್ಟಾದ ಮಾರ್ಗದರ್ಶನದಡಿಯಲ್ಲಿ ಸಂಸ್ಕೃತವನ್ನು ಮಾತನಾಡಲು ಮತ್ತು ಬರೆಯಲು ಕಲಿತುಕೊಂಡರು ಹಾಗೂ ವೇದ ಪಠಣವನ್ನು ಹೇಳಲು ಆರಂಭಿಸಿದರು. ತಂದೆಯಿಂದ ಪ್ರಾಣಾಯಾಮ ಹಾಗೂ ಆಸನಗಳನ್ನು ಕಲಿತುಕೊಂಡರು. ಆದರೆ ಅವ್ರ ಹತ್ತನೆಯ ವಯಸ್ಸಿನಲ್ಲಿ ತಂದೆಯವರು ಮರಣಹೊಂದಿದರು. ಈ ಕಾರಣದಿಂದಾಗಿ ಕುಟುಂಬ ಸಮೇತರಾಗಿ ಮೈಸೂರಿಗೆ ತೆರಳುತ್ತಾರೆ. ಅಲ್ಲಿ ತಮ್ಮ ಮುತ್ತಾತ ಶ್ರೀನಿವಾಸ ಬ್ರಹ್ಮತಂತ್ರ ಪರಕಲ ಸ್ವಾಮಿ, ಪರಕಲ ಮಠದ ಮುಖ್ಯಸ್ಥರಾಗಿದ್ದರು. ಮೈಸೂರಿನಲ್ಲಿ ಕೃಷ್ಣಮಾಚಾರ್ಯರು ಚಾಮರಾಜ ಸಂಸ್ಕೃತ ಕಾಲೇಜಿನಲ್ಲಿ ಸಂಸ್ಕೃತ ಮತ್ತು ಗಣಿತ ವಿಷಯಗಳಲ್ಲಿ ಶಾಲಾ ಶಿಕ್ಷಣ ಪ್ರಾರಂಭಿಸಿದರು. ಇವರು ಶಾಸ್ತ್ರಗಳು ಎಂಬ ವಿಷಯವನ್ನು ಇಟ್ಟುಕೊಂಡು ತಮ್ಮ ಅಧ್ಯಾಪಕರ ಬಳಿ ಹಾಗೂ ಪಂಡಿತರ ಬಳಿ ಚರ್ಚೆಯನ್ನು ಮಾಡುವುದನ್ನು ರೂಡಿಸಿಕೊಂಡಿದ್ದರು. ವ್ಯಾಕರಣ, ವೇದಾಂತ, ಮತ್ತು ತರ್ಕ ಅಧ್ಯಯನ ಮಾಡಿದ ಇವರು ತಮ್ಮ ವಿದ್ವಾನ್ ಪರೀಕ್ಷೆಯಲ್ಲಿ ಉತ್ತೀರ್ಣರಾದರು.
ಶ್ರೀ ನಾಥಮುನಿಗಳ ಆದೇಶ
[ಬದಲಾಯಿಸಿ]ತಮ್ಮ ಹದಿನಾರನೇ ವಯಸ್ಸಿನಲ್ಲಿ, ಕೃಷ್ಣಮಾಚಾರ್ಯರಿಗೆ ಅವರ ಪೂರ್ವಜ ಪೌರಾಣಿಕ ಯೋಗಿ ಮತ್ತು ಶ್ರೀ ವೈಷ್ಣವ ಸಂತ ನಾಥಮುನಿಯು ಕನಸ್ಸಿನಲ್ಲಿ ಬಂದು ನೆರೆ ರಾಜ್ಯದ ತಮಿಳುನಾಡಿನ, ಆಳ್ವಾರ್ ತಿರುನಗರಿ ಪಟ್ಟಣಕ್ಕೆ ಹೋಗಲು ಹೇಳಿದರು. ಕೃಷ್ಣಮಾಚಾರ್ಯರು ಆ ಕನಸನ್ನು ಪಾಲಿಸಿ ಅವರು ಹೇಳಿದ ಜಾಗಕ್ಕೆ ಪ್ರಯಾಣ ಬೆಳೆಸಿ ಅವರು ಹೇಳಿದ ಜಾಗಕ್ಕೆ ಬಂದಾಗ, ಅಲ್ಲಿ ಮೂರು ಋಷಿಗಳ ಉಪಸ್ಥಿತಿಯನ್ನು ಕಂಡು ಭಾವಾತಿರೇಕಕ್ಕೊಳಗಾಗುತ್ತಾರೆ. ಆ ಮೂರು ಋಷಿಗಳಲ್ಲಿ ಒಬ್ಬರನ್ನು ಅವರು ನಾಥಮುನಿಯ ಯೋಗ ರಹಸ್ಯವನ್ನು ಹೇಳಿಕೊಡುವಂತೆ ವಿನಂತಿಸಿಕೊಂಡರು. ನಾಮಾಮುನಿಯೇ ಸ್ವತಃ ಆ ಪಠ್ಯ ವಾಚನ ಆರಂಭಿಸಿದರು, ಆದರೆ ಈ ವಿಷಯ ಕೃಷ್ಣಮಚಾರ್ಯರಿಗೆ ತಿಳಿದಿರಲ್ಲಿಲ್ಲ. ವಾಚಕರು ನಾಥಮುನಿ ಎಂದು ತಿಳಿದಾಗ ಸಹಜ ಸ್ಥಿತಿಗೆ ಬಂದರು.
ವಿದ್ವತ್ಪೂರ್ಣ ಶಿಕ್ಷಣ
[ಬದಲಾಯಿಸಿ]ಕೃಷ್ಣಮಚಾರ್ಯರು ತಮ್ಮ ಬಹುತೇಕ ಯವ್ವನವನ್ನು, ಆರು ದರ್ಶನ ಅಥವಾ ಭಾರತೀಯ ತತ್ವಗಳನ್ನು ಅಧ್ಯಯನ ಮಾಡುವುದರಲ್ಲಿ ಕಳೆದರು. ಆ ಆರು ದರ್ಶನಗಳು ಹೀಗಿವೆ: ವೈಶೇಶಿಕ, ನ್ಯಾಯ, ಸಾಂಖ್ಯ, ಯೋಗ, ಮೀಮಾಂಸ ಮತ್ತು ವೇದಾಂತ. [೬]ಕೃಷ್ಣಮಚಾರ್ಯರು೧೯೦೬ ರಲ್ಲಿ, ತಮ್ಮ ಹದಿನೆಂಟನೆ ವಯಸ್ಸಿನಲ್ಲಿ, ಮೈಸೂರು ಬಿಟ್ಟು ಬನಾರಸ್ ವಿಶ್ವವಿದ್ಯಾನಿಲಯದಲ್ಲಿ ವ್ಯಾಸಂಗ ಮಾಡಲು ಬರುತ್ತಾರೆ, ಅದನ್ನು ವಾರಣಾಸಿ ಎಂದು ಕರೆಯುತ್ತಾರೆ. ಅದು ನೂರಾರು ದೇವಾಲಯಗಳ ನಗರ ಮತ್ತು ಉತ್ತರ ಭಾರತದ ಸಾಂಪ್ರದಾಯಿಕ ಕಲಿಕೆಯ ಕೇಂದ್ರವಾಗಿದೆ. ವಿಶ್ವವಿದ್ಯಾನಿಲಯದಲ್ಲಿ ಅವರು ಬ್ರಹ್ಮಶ್ರೀ ಶಿವಕುಮಾರ್ ಶಾಸ್ತ್ರೀಗಳ ಜೊತೆಗೊಡಿ ತರ್ಕ ಮತ್ತು ಸಂಸ್ಕೃತ ಅಧ್ಯಯನಗಳಲ್ಲಿ ತೊಡಗಿದರು, ಆ ಶಾಸ್ತ್ರಿಗಳು ಚಿಕ್ಕ ವಯಸ್ಸಿಗೆ "ಮಹಾನ್ ವ್ಯಾಕರಣ ತಜ್ಞರು" ಎಂದು ಹೆಸರು ಪಡೆದಿದ್ದರು. ಅವರು ಬ್ರಹ್ಮಶ್ರೀ ತ್ರಿಲಿಂಗರಾಮ ಶಾಸ್ತ್ರಿ ಅವರಿಂದ ಮೀಮಾಂಸ ಕಲಿತರು. ಕೃಷ್ಣಮಚಾರ್ಯರು ವಮಚರಣ ಭಟ್ಟಾಚಾರ್ಯರಿಂದ ತರ್ಕ ಕಲಿತರು. ಅವರು ಕಾಶಿ ಸಂಸ್ಕೃತ ವಿದ್ಯಾ ಪೀಠದ ಮುಖ್ಯಸ್ಥ ಮಹಮಹೋಪಾಧ್ಯಾಯ ಗಂಗನಾಥ ಝಾ ಜೊತೆ ಬಲವಾದ ಸ್ನೇಹವನ್ನು ಬೆಳಸಿಕೊಂಡರು.
ಮೈಸೂರಿಗೆ
[ಬದಲಾಯಿಸಿ]೧೯೦೯ ರಲ್ಲಿ, ಕೃಷ್ಣಮಾಚಾರ್ಯರು ಬನಾರಸ್ ಬಿಟ್ಟು ಮೈಸೂರಿಗೆ ಹಿಂದಿರುಗುತ್ತಾರೆ. ನಂತರ ಪರಕಾಲ ಮಠದ, ಎಚ್ ಎಚ್ ಶ್ರೀ ಕೃಷ್ಣ ಬ್ರಹ್ಮತಂತ್ರ ಮಠಾಧೀಶ ಜೊತೆ ವೇದಾಂತ ಅಧ್ಯಯನ ಮಾಡಿದರು. ಈ ಅವಧಿಯಲ್ಲಿ ಕೃಷ್ಣಮಚಾರ್ಯರು ಭಾರತದ ಅತ್ಯಂತ ಪ್ರಾಚೀನ ತಂತಿ ವಾದ್ಯಗಳಲ್ಲಿ ಒಂದಾದ ವೀಣೆಯನ್ನು ನುಡಿಸಲು ಕಲಿತು ಮಠದ ಜೊತೆಗೆ, ಕೃಷ್ಣಮಚಾರ್ಯರು ಮೈಸೂರು ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡುತ್ತಿದ್ದರು.
ಬನಾರಸ್ಸಿಗೆ
[ಬದಲಾಯಿಸಿ]೧೯೧೪ ರಲ್ಲಿ, ಕೃಷ್ಣಮಾಚಾರ್ಯರು ಮತ್ತೊಮ್ಮೆ ಬನಾರಸ್‌ಗೆ ಹೋಗುತ್ತಾರೆ. ಅಲ್ಲಿ 'Qeen's College' ನಲ್ಲಿ ಯೋಗ ತರಗತಿಗಳಲ್ಲಿ ಭಾಗವಹಿಸುತ್ತಾರೆ. ಅಲ್ಲಿ ಹಲವಾರು ಪ್ರಮಾಣಪತ್ರಗಳನ್ನು ತಮ್ಮದ್ದಾಗಿಸಿಕೊಳುತ್ತಾರೆ. ಪ್ರಾರಂಭದಲ್ಲಿ ಅವರಿಗೆ ತಮ್ಮ ಮನೆಯಿಂದ ಯಾವುದೇ ರೀತಿಯ ಆರ್ಥಿಕ ಸಹಾಯ ದೊರಕುತ್ತಿರಲ್ಲಿಲ್ಲ. ಕೃಷ್ಣಮಾಚಾರ್ಯರು ಅಂತಿಮವಾಗಿ 'Qeen's College' ಬಿಟ್ಟು, ಬಿಹಾರದ ಪಟ್ನಾ ವಿಶ್ವವಿದ್ಯಾಲಯದಲ್ಲಿ, 'ವೈದಿಕ ತತ್ವಶಾಸ್ತ್ರದ ಶಡ್ಡ್ ದರ್ಶನ' (ಆರು ದರ್ಶನಗಳು) ಅಧ್ಯಯನ ಮಾಡುತ್ತಾರೆ. ಅವರು ಬಂಗಾಳದ ವೈದ್ಯ, ಕೃಷ್ಣಕುಮಾರ್ ಮಾರ್ಗದರ್ಶನದಲ್ಲಿ ಆಯುರ್ವೇದ ಅಧ್ಯಯನವನ್ನು ಮಾಡುವಾಗ ವಿದ್ಯಾರ್ಥಿ ವೇತನವೂ ದೊರಕುತ್ತಿತ್ತು.
ಯೋಗ ಶಿಕ್ಷಣ
[ಬದಲಾಯಿಸಿ]- ಈ ಸಮಯದಲ್ಲಿ ಕೃಷ್ಣಮಾಚಾರ್ಯರು, ತನ್ನ ತಂದೆ ತನಗೆ ಚಿಕ್ಕ ವಯಸ್ಸಿನಲ್ಲಿ ಹೇಳಿಕೊಟ್ಟಿದ್ದ ಯೋಗದ ಅಭ್ಯಾಸವನ್ನು ಮುಂದುವರಿಸಿದರು. ಅವರು ಪಟ್ಟಣದಲ್ಲಿ ಯೋಗ ಗುರುಗಳಾದ ಶ್ರೀ ಬಾಬು ಭಗವಾನ್ ದಾಸ್ ರವರ ಬಳಿ ಯೋಗಾಧ್ಯಯನ ಮಾಡಿ ಸಾಂಖ್ಯಯೋಗ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಕೃಷ್ಣಮಾಚಾರ್ಯರ ಬೋಧಕರು ಅವರ ಸಾಮರ್ಥ್ಯವನ್ನು ಗುರುತಿಸಿ ಕೊಂಡಾಡಿ ತಮ್ಮ ಪ್ರಗತಿಯನ್ನು ಬೆಂಬಲಿಸಿದರು. ಕೆಲವರು ತಮ್ಮ ಮಕ್ಕಳಿಗೆ ಯೋಗ ಕಲಿಸಿ ಎಂದು ಕೇಳಿಕೊಂಡರು.
- ಸುಮಾರು ಮೂರು ತಿಂಗಳ ಕಾಲದ ರಜೆಯಲ್ಲಿ, ಕೃಷ್ಣಮಾಚಾರ್ಯರು ಹಿಮಾಲಯ ಯಾತ್ರೆ ಮಾಡಿದರು, ಗಂಗನಾಥ ಝಾರವರ ಸಲಹೆಯ ಮೇರೆಗೆ ಅವರು ತಮ್ಮ ಮುಂದಿನ ಯೋಗಾಧ್ಯಯನಗಳನ್ನು ಯೋಗೇಶ್ವರ ರಾಮಮೋಹನ್ ಬ್ರಹ್ಮಚಾರಿ ಗುರುಗಳ ಬಳಿ ಕಲಿಯಲು ಹೋಗುತ್ತಾರೆ. ನೇಪಾಳದ ಪರ್ವತಗಳಲ್ಲಿ ವಾಸಿಸುತ್ತಿದ್ದ ಅವರ ಹತ್ತಿರ ಹೋಗಬೇಕಾದರೆ ಶಿಮ್ಲಾದ ವೈಸರಾಯ್ ಲಾರ್ಡ್ ಇರ್ವಿನ್ ಅನುಮತಿ ಪಡೆಯಬೇಕಾಗಿತ್ತು. ಈ ಕಾರಣದಿಂದಾಗಿ ಅವರನ್ನು ಕಾಣುವ ಸಲುವಾಗಿ ಶಿಮ್ಲಾಗೆ ತೆರಳಿದರು. ವೈಸರಾಯ್ ಲಾರ್ಡ್ ಇರ್ವಿನ್ರವರು ಮಧುಮೇಹದಿಂದ ಬಳಲುತ್ತಿದ್ದರು. ವೈಸ್ರಾಯ್ ಅವರ ಅನುಮತಿಯ ಮೇರೆಗೆ ಕೃಷ್ಣಮಾಚಾರ್ಯರು ತಾನು ಹೋಗಬೇಕಾದ ಜಾಗಕ್ಕೆ ಹೋದರು. ವೈಸರಾಯ್ ಲಾರ್ಡ್ ಇರ್ವಿನ್ರವರ ಆರೋಗ್ಯವೂ ಚೇತರಿಸಿಕೊಂಡಿತು, ಹಾಗಾಗಿ ಕೃಷ್ಣಮಾಚಾರ್ಯರ ಮೇಲೆ ಗೌರವ ಮತ್ತು ಪ್ರೀತಿ ಅಭಿವೃದ್ಧಿಯಾಯಿತು. ಕೃಷ್ಣಮಾಚಾರ್ಯರು ಆರು ತಿಂಗಳ ಕಾಲ ಅಲ್ಲಿ ಯೋಗದ ಅಭ್ಯಾಸ ಮಾಡಿದರು. ವೈಸ್ರಾಯ್ ೧೯೧೯ ರಲ್ಲಿ, ಎಲ್ಲಾ ವೆಚ್ಚಗಳನ್ನು ಅವರೇ ಹಾಕಿಕೊಂಡು ಕೃಷ್ಣಮಾಚಾರ್ಯರನ್ನು ಟಿಬೆಟ್ ಪ್ರವಾಸಕ್ಕೆ ವ್ಯವಸ್ಥೆ ಮಾಡಿದರು.
- ಎರಡೂವರೆ ತಿಂಗಳ ಪ್ರವಾಸದ ನಂತರ, ಕೃಷ್ಣಮಾಚಾರ್ಯರು ಶ್ರೀ ಬ್ರಹ್ಮಚಾರಿ ಶಾಲೆ ದೂರದ ಗುಹೆಗೆ ಆಗಮಿಸಿದರು. ಅಲ್ಲಿ ತಮ್ಮ ಗುರುಗಳು, ಪತ್ನಿ ಮತ್ತು ಮೂರು ಮಕ್ಕಳೊಂದಿಗೆ ಮೌಂಟ್ ಕೈಲಾಶ್ ಪರ್ವತದಲ್ಲಿ ವಾಸಿಸುತ್ತಿದ್ದರು. ಬ್ರಹ್ಮಚಾರಿಯವರ ಮಾರ್ಗದರ್ಶನ ಅಡಿಯಲ್ಲಿ, ಕೃಷ್ಣಮಾಚಾರ್ಯರು ಪತಾಂಜಲಿ ಯೋಗದ ಸೂತ್ರಗಳು, ಆಸನಗಳು, ಪ್ರಾಣಾಯಾಮ ಮತ್ತು "ಯೋಗ ಚಿಕಿತ್ಸಕ ಅಂಶಗಳನ್ನು" ಏಳೂವರೆ ವರ್ಷಗಳ ಕಾಲ ಅಲ್ಲೇ ಇದ್ದು ಕಲಿತರು. ಅವರು ಗೂರ್ಖಾ ಭಾಷೆಯಲ್ಲಿ ಇಡೀ ಯೋಗ ಕುರುನ್ ಮಂತ್ರಗಳನ್ನು ನೆನಪಿಟ್ಟುಕೊಂಡಿದ್ದರು. ಸಾಂಪ್ರದಾಯಿಕವಾಗಿ ತನ್ನ ಅಧ್ಯಯನವು ಕೊನೆಗೊಂಡಮೇಲೆ ಅವರು ತಮ್ಮ ಗುರುವನ್ನು ಕುರಿತು ಗುರುದಕ್ಷಿಣೆಯಾಗಿ ಏನು ನೀಡಬೇಕು ಎಂದು ಕೇಳಿದಾಗ, ತನ್ನ ಗುರು ಹೀಗೆ ಪ್ರತಿಕ್ರಿಯಿಸಿದರು, ತಾನು ದಾಂಪತ್ಯ ಜೀವನಕ್ಕೆ ಕಾಲಿಟ್ಟು, ಮಕ್ಕಳಿಗೆ ವಿದ್ಯಾಭ್ಯಾಸ ನೀಡಿ ಯೋಗ ಗುರುವಾಗಿರಬೇಕು ಎಂದು ಹೇಳಿದರು.
- ಕೃಷ್ಣಮಾಚಾರ್ಯರು ನಂತರ ವಾರಣಾಸಿ ಹಿಂತಿರುಗುತ್ತಾರೆ. ಜೈಪುರ ಮಹಾರಾಜರು ಜೈಪುರ ವಿದ್ಯಾ ಶಾಲೆಯಲ್ಲಿ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಲು ಹೇಳುತ್ತಾರೆ. ಅವರು ಅದಕ್ಕೆ ಒಪ್ಪುವುದಿಲ್ಲ. ಕಾರಣವನ್ನು ಜನರಿಗೆ ಹೇಳಲು ಇಷ್ಟವಿರಲಿಲ್ಲ. ಏಕೆಂದರೆ, ತನ್ನ ಗುರುವಿನ ಇಚ್ಚೆಯ ಪ್ರಕಾರ ಅವರು ಮದುವೆಯಾಗಬೇಕಿತ್ತು. ಹಾಗಾಗಿ ಅವರು ವಾರಣಾಸಿಗೆ ಮರಳಿದರು. ಕೃಷ್ಣಮಾಚಾರ್ಯರು ೧೯೨೫ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತರೆ .ಅವರು ನಾಮಗಿರಿಯಮ್ಮ ಎಂಬುವವರನ್ನು ಜೀವನ ಸಂಗಾತಿಯಾಗಿ ಸ್ವೀಕರಿಸುತ್ತಾರೆ. ತನ್ನ ಮದುವೆಯ ನಂತರ ಹಾಸನ ಜಿಲ್ಲೆಯ ಕಾಫಿ ತೋಟದಲ್ಲಿ ಇಷ್ಟವಿಲ್ಲದಿದ್ದರೂ ಬಲವಂತವಾಗಿ ಕೆಲಸ ಮಾಡುವ ಪರಿಸ್ಥಿತಿ ಬರುತ್ತದೆ. ೧೯೩೧ರಲ್ಲಿ ಮೈಸೂರು ಪುರಭವನದಲ್ಲಿ ತಮ್ಮ ಉಪನಿಷತ್ತುಗಳ ಪ್ರವಚನ ನೀಡಿ ಎಲ್ಲರ ಮನಗೆದ್ದರು. ಇದು ಅವರಿಗೆ ಅರಮನೆಯಲ್ಲಿ ಉದ್ಯೋಗವನ್ನು ಗಿಟ್ಟಿಸಿಕೊಳ್ಳಲು ಕಾರಣವಾಯಿತು. ಅಲ್ಲದೆ ಯೋಗದಲ್ಲಿ ಪಾಂಡಿತ್ಯ ಪಡೆದ, ಯೋಗ ಗುರುಗಳಾದ ಗಂಗಾನಾಥ ಝಾರವರ ಪುತ್ರ ಅಮರನಾಥ ಝಾ ಪ್ರಭಾವಿತನಾಗಿ, ನಾನಾ ದೇಶದ ದೊರೆಗಳಿಗೆ ಇವನನ್ನು ಪರಿಚಯಿಸಿದನು. ಎಲ್ಲಾ ಅರಸರಿಂದ ಇವರಿಗೆ ಹೊಗಳಿಕೆಯ ಮಹಾಪೂರವೇ ಬಂತು.
ಮೈಸೂರು ವರ್ಷಗಳು
[ಬದಲಾಯಿಸಿ]- ೧೯೨೬ ರಲ್ಲಿ, ಮೈಸೂರು ಮಹಾರಾಜ ಕೃಷ್ಣ ರಾಜವೊಡೆಯರು ತಮ್ಮತಾಯಿಯ ೬೦ನೇ ಜನ್ಮದಿನ ಆಚರಿಸಲು ವಾರಣಾಸಿಗೆ ಬಂದಿದ್ದರು. ಅಲ್ಲಿ ಕೃಷ್ಣಮಾಚಾರ್ಯರ ಬಗ್ಗೆ ಕೇಳಿ ಅವರನ್ನು ಭೇಟಿಯಾದರು. ಯೋಗ ಕಲಿಕೆಯ, ಕೌಶಲ್ಯ ಬಗ್ಗೆ ತಿಳಿದುಕೊಂಡು ಅವರನ್ನು ತಮ್ಮ ಆಸ್ಥಾನಕ್ಕೆ ಆಹ್ವಾನಿಸಿದರು. ಯುವಕನೊಬ್ಬನ ವರ್ತನೆ, ಅಧಿಕಾರ, ಗೌರವ ನೋಡಿ ಸಂತಸಪಟ್ಟರು. ಮಹಾರಾಜರ ನಂಬಿಕಸ್ತ ಸಲಹೆಗಾರರಾದರು. ಅವರಿಗೆ "ಆಸ್ಥಾನ ವಿದ್ವಾನ್" ಎಂಬ ಬಿರುದು ನೀಡಲಾಯಿತು.
- ೧೯೨೦ರಲ್ಲಿ, ಕೃಷ್ಣಮಾಚಾರ್ಯರು ಯೋಗವನ್ನು ಜನಪ್ರಿಯತೆ ಮಾಡಲು ಮತ್ತು ಆಸನಗಳನ್ನು ಉತ್ತೇಜಿಸಲು ಅನೇಕ ಪ್ರದರ್ಶನಗಳನ್ನು ನೀಡಿದರು. ಇದು ಕಠಿಣ ಆಸನಗಳ ಪ್ರದರ್ಶನವಾಗಿತ್ತು. ತನ್ನ ಹಲ್ಲುಗಳಲ್ಲಿ ಭಾರವಾದ ವಸ್ತುಗಳನ್ನು ಎತ್ತುವುದು ಈ ಪ್ರದರ್ಶನದಲ್ಲಿ ಒಳಗೊಂಡಿತ್ತು. ಇದನ್ನು ನೋಡಿದ ರಾಜ ಅರಮನೆಯ ದಾಖಲೆಗಳನ್ನು ಹೆಚ್ಚಿಸಲು ಕೃಷ್ಣಮಾಚಾರ್ಯರನ್ನು ಯೋಗದ ಬಗ್ಗೆ ಪ್ರಚಾರ ಮಾಡಲು ಮತ್ತು ಉಪನ್ಯಾಸಗಳ ಪ್ರದರ್ಶನವನ್ನು ನೀಡಲು ದೇಶಾದಾದ್ಯಂತ ಕಳುಹಿಸಿದರು.
- ೧೯೩೧ ರಂದು ಕೃಷ್ಣಮಾಚಾರ್ಯರಿಗೆ ಮೈಸೂರು ಸಂಸ್ಕೃತ ಕಾಲೇಜಿನಲ್ಲಿ ಯೋಗವನ್ನು ಕಲಿಸಲು ಆಹ್ವಾನಿಸಲಾಯಿತು. ಯೋಗವು ಅನೇಕ ಕಾಯಿಲೆಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ ಎಂದು ಮಹರಾಜರು ಭಾವಿಸಿದರು. ರಾಜನ ಆಶ್ರಯದಲ್ಲಿ ಯೋಗ ಶಾಲೆಯನ್ನು ಪ್ರಾರಂಭಿಸಲು ಕೃಷ್ಣಮಾಚಾರ್ಯರಿಗೆ ಹೇಳಿದರು. ನಂತರ 'ಯೋಗಶಾಲೆ'ಯನ್ನು ಆರಂಭಿಸಲು ಹತ್ತಿರದ ಅರಮನೆಯ, ಜಗನ್ ಮೋಹನ್ ಅರಮನೆಯಲ್ಲಿ ಜಾಗ ನೀಡಲಾಯಿತು. ಸ್ವತಂತ್ರ ಯೋಗ ಸಂಸ್ಥೆ, ೧೧ ಆಗಸ್ಟ್ ೧೯೩೩ ರಂದು ಆರಂಭವಾಯಿತು.
- ೧೯೩೪ರಲ್ಲಿ, ಕೃಷ್ಣಮಾಚಾರ್ಯರು ಯೋಗ ಮಕರಂದ ಎಂಬ ಪುಸ್ತಕವನ್ನು ಬರೆಯುತ್ತಾರೆ, ಆ ಪುಸ್ತಕವನ್ನು ಮೈಸೂರು ವಿಶ್ವವಿದ್ಯಾಲಯ ಪ್ರಕಟಿಸಿತು. [೭]
- ೧೯೪೦ ರಲ್ಲಿ, ಕೃಷ್ಣರಾಜ ಒಡೆಯರ್ ಇಹಲೋಕ ತ್ಯಜಿಸುತ್ತಾರೆ. ಇವರ ಉತ್ತರಾಧಿಕಾರಿಯಾಗಿ ತಮ್ಮ ಸೋದರಳಿಯ ಜಯಚಾಮರಾಜೇಂದ್ರ ಒಡೆಯರ್ ಅಧಿಕಾರಕ್ಕೆ ಬಂದರು. ಅವರಿಗೆ ಯೋಗದ ಬಗ್ಗೆ ಯಾವುದೇ ರೀತಿಯ ಆಸಕ್ತಿ ಇರಲ್ಲಿಲ್ಲ; ಹಾಗೂ ಗ್ರಂಥಗಳನ್ನು ಪ್ರಕಟಿಸುವುದಕ್ಕೆ ಅನುಮತಿ ನೀಡಲಿಲ್ಲ. ಅಷ್ಟೇ ಅಲ್ಲದೆ ಸುತ್ತಮುತ್ತಲಿನ ಸ್ಥಳಕ್ಕೆ ಯೋಗ ಶಿಕ್ಷಕರನ್ನು ಕಳಿಸಲಿಲ್ಲ. ಈ ರೀತಿಯಾದಂತಹ ರಾಜಕೀಯ ಬದಲಾವಣೆಯಿಂದ ಅವರಿಗೆ ಯಾವುದೇ ರೀತಿಯ ಬೆಂಬಲ ಸಿಗಲಿಲ್ಲ.
- ೧೯೪೭ರಂದು ಭಾರತಕ್ಕೆ ಸ್ವಾತಂತ್ರ್ಯ ಬಂದಿತು. ಮಹಾರಾಜರ ಅಧಿಕಾರವು ಮೊಟಕುಗೊಳಿಸಲಾಯಿತು, ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಿತು. ಯೋಗ ಶಾಲೆಯ ಸಹಾಯನಿಧಿಯನ್ನು ಕಡಿತಗೊಳಿಸಲಾಗಿತ್ತು ಮತ್ತು ಕೃಷ್ಣಮಾಚಾರ್ಯರು ಶಾಲೆಯನ್ನು ನಿರ್ವಹಿಸಲು ಬಹಳ ಹೋರಾಡಿದರು. ಅಂದಿನ ಮುಖ್ಯಮಂತ್ರಿ ಕೆ.ಸಿ.ರಡ್ದಿ ಯೋಗಶಾಲೆಯನ್ನು ಮುಚ್ಚಬೇಕು, ಎಂದು ಆದೇಶಿಸಲಾಯಿತು. ಅಂತಿಮವಾಗಿ ಶಾಲೆಯನ್ನು ೧೯೫೦ ರಲ್ಲಿ ಮುಚ್ಚಲಾಯಿತು.
ಮದ್ರಾಸ್ ವರ್ಷಗಳು
[ಬದಲಾಯಿಸಿ]- ಮೈಸೂರು ಬಿಟ್ಟ ನಂತರ, ಕೃಷ್ಣಮಾಚಾರ್ಯರು ಕೆಲವು ವರ್ಷಗಳ ಕಾಲ ಬೆಂಗಳೂರಿನಲ್ಲಿ ವಾಸವಾಗಿದ್ದರು. ನಂತರ ಅವರು ಮದ್ರಾಸಿಗೆ ತೆರಳುತ್ತಾರೆ, ಇವರು ಅರವತ್ತರ ವಯಸಿನಲ್ಲಿಯೇ ಬಹಳ ಕಟ್ಟುನಿಟ್ಟಿನ ಗುರುಗಳಾಗಿದ್ದರು.
- ಮದ್ರಾಸಿನಲ್ಲಿ, ವಿವೇಕಾನಂದ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡಿದರು. ಪ್ರತಿ ವಿದ್ಯಾರ್ಥಿಗೆ ಬೇಕಾದ ವಿಭಿನ್ನ ಹಿನ್ನೆಲೆಗಳಿಂದ ಮತ್ತು ವಿವಿಧ ದೈಹಿಕ ಸ್ಥಿತಿಯ ಯೋಗವನ್ನು ಗಳಿಸುವುದು ಹೇಗೆ ಎಂದು ಹೇಳಿಕೊಡಲು ಆರಂಭಿಸಿದರು. ಅಷ್ಟರಲ್ಲಿ ಅವರಿಗೆ ಅರವತ್ತು ವಯಸ್ಸಾಗಿತ್ತು.
- ತನ್ನ ಜೀವನದ ಬಹುಭಾಗವನ್ನು ವಿದ್ಯಾರ್ಥಿಗಳಿಗೆ ವಿನಿಯೋಗಿಸಿದರು. ಯೋಗ ಪಂಡಿತರಾದರೂ ತಾವು ಸದಾ ವಿದ್ಯಾರ್ಥಿಯಾಗಿರಲು ಬಯಸುತ್ತಿದ್ದರು. ಏಕೆಂದರೆ, ಅವರು ಸದಾ ಯೋಗ ಅಭ್ಯಾಸದಲ್ಲಿ "ಪರಿಶೋಧನೆ ಮತ್ತು ಪ್ರಯೋಗ ಅಧ್ಯಯನ" ಮಾಡುತ್ತಿದ್ದರು.
- ಅವರಿಗೆ ಯಾವುದೇ ರೀತಿಯ ಗೌರವ, ಸನ್ಮಾನಗಳು ಬೇಡವಾಗಿತ್ತು. ಎಲ್ಲ ಗೌರವ, ಸನ್ಮಾನಗಳು ತಮ್ಮ ಗುರು ಮತ್ತು ಪ್ರಾಚೀನ ಗ್ರಂಥಗಳಿಗೆ ಸಲ್ಲಿಸಭೇಕು ಎಂದು ಹೇಳಿದರು.
ನಿಧನ
[ಬದಲಾಯಿಸಿ]ತಮ್ಮ ೯೬ ನೇ ವಯಸ್ಸಿನಲ್ಲಿ ಕೃಷ್ಣಮಾಚಾರ್ಯರಿಗೆ ಸೊಂಟಕ್ಕೆ ಪೆಟ್ಟು ಬಿದ್ದು ನಿಷ್ಕ್ರಿಯರಾಗುತ್ತಾರೆ. ಆದರೆ, ಶಸ್ತ್ರಚಿಕಿತ್ಸೆಯನ್ನು ನಿರಾಕರಿಸುತ್ತಾರೆ. ಅವರು ಹಾಸಿಗೆಯಲ್ಲಿ ಮಾಡಬಹುದಾದ ಆಸನವನ್ನು ಸ್ವತಃ ಅವರೇ ಕಂಡುಹಿಡಿಯುತ್ತಾರೆ. ಕೊನೆಯುಸಿರಿರುವವರೆಗೂ ವಿದ್ಯಾರ್ಥಿಗಳಿಗೆ ಯೋಗಾಭ್ಯಾಸವನ್ನು ಹೇಳಿಕೊಡುವುದನ್ನು ನಿಲ್ಲಿಸುವುದಿಲ್ಲ. ಅವರ ಜ್ಞಾನ ಮತ್ತು ಬೋಧನೆ ವಿಶ್ವದಾದ್ಯಂತ ಪ್ರಭಾವ ಬೀರಿತು. ಇವರು ಭಾರತವನ್ನು ಬಿಟ್ಟು ಎಲ್ಲಿಗೊ ಹೋಗಲಿಲ್ಲ. ಈ ರೀತಿಯ ಬೆಳವಣಿಗೆ ಹಾಗೂ ಸಾಧನೆಗಳಿಂದ ಕೃಷ್ಣಮಾಚಾರ್ಯ ವಿಶ್ವಾದ್ಯಂತ ಹೆಸರುವಾಸಿಯಾಗುತ್ತಾರೆ.
ಚಿಕಿತ್ಸಾ ವಿಧಾನದ ವೈಶಿಷ್ಠ್ಯತೆ
[ಬದಲಾಯಿಸಿ]- ಕೃಷ್ಣಮಾಚಾರ್ಯರು ಕೇವಲ ಯೋಗ ಶಿಕ್ಷಕರಲ್ಲದೆ ಆಯುರ್ವೇದದ ಬಗ್ಗೆಯೊ ತಿಳಿದ್ದಿದರು. ಅವರು ಮೂಲಿಕ ಔಷಧಿ ತೈಲಗಳ ಮತ್ತು ಇತರ ಔಷಧಿಗಳಿಗೆ ಪರಿಹಾರವನ್ನು ನೀಡುತ್ತಿದ್ದರು.
- ಅವರು ರೋಗಿಯನ್ನು ಪರೀಕ್ಷೆ ಮಾಡಬೇಕಾದರೆ ಎಲ್ಲಾ ರೀತಿಯ ಪರೀಕ್ಷೆ ಮಾಡಿದ ನಂತರ ಚಿಕಿತ್ಸೆನೀಡುತ್ತಿದ್ದರು.
- ಅವರು ರೋಗಿಯ ನಾಡಿಯನ್ನು ಪರೀಕ್ಷೆಮಾಡಬೇಕಾದರೆ ಚರ್ಮದ ಬಣ್ಣ ನೋಡುತ್ತಿದ್ದರು. ದೇಹದ ಯಾವುದೋ ಒಂದು ಭಾಗಕ್ಕೆ ಸಮಸ್ಯೆ ಇದ್ದರೂ ಅದು ದೈಹಿಕ ಹಾಗೂ ಮಾನಸಿಕವಾಗಿ ಆರೋಗ್ಯದ ಮೇಲೆ ಪ್ರಭಾವ ಬೀರುತ್ತಿತ್ತು.
- ರೋಗಿಯನ್ನು ಪರೀಕ್ಷೆ ಮಾಡುವಮುನ್ನ ಕೃಷ್ಣಮಾಚಾರ್ಯರು ಅವರು ನೀಡುವ ಸಲಹೆ ಸರಿಹೋಗುತ್ತದೆಯೋ ಇಲ್ಲವೋ ಎಂದು ರೋಗಿಗಳನ್ನೇ ಕೇಳುತ್ತಾರೆ; ಏಕೆಂದರೆ ಮುಂದೆ ಅವರು ನಿರಾಕರಿಸಿದರೆ ರೋಗ ವಾಸಿಯಾಗದೆ ಇರಬಹುದೆಂದು.
ಯೋಗ ಅನುಸಂಧಾನ
[ಬದಲಾಯಿಸಿ]- ಕೃಷ್ಣಮಾಚಾರ್ಯರ ಯೋಗ ಭಾರತಕ್ಕೆ ಕೂಟ್ಟ ಮಹಾನ್ ಕೊಡುಗೆಯಾಗಿದೆ.
- ಅವರು ಯೋಗ ಸೂಚನಾ ಮತ್ತು ಆಧ್ಯಾತ್ಮಿಕ ಅಭ್ಯಾಸ ದೈಹಿಕ ಚಿಕಿತ್ಸೆಯ ಒಂದು ಮಾರ್ಗ ಎಂದು ನಂಬಿದ್ದರು.
- ಕೃಷ್ಣಮಾಚಾರ್ಯರ ಯೋಗ ಬೋಧನೆಗಳು, ಯೋಗ ಸೂತ್ರಗಳು, ಪತಂಜಲಿ ಹಾಗೂ ಯೋಗ ಯಾಜ್ಞವಲ್ಕ್ಯವನ್ನು ಒಳಗೊಂಡಿದೆ.
- ಕೃಷ್ಣಮಾಚಾರ್ಯರು ವೈಷ್ಣವ ದರ್ಮವನ್ನು ಆಳವಾಗಿ ನಂಬಿದ್ದರು. ಆದರೆ, ತಮ್ಮ ವಿದ್ಯಾರ್ಥಿಗಳ ವಿವಿಧ ಧಾರ್ಮಿಕ ನಂಬಿಕೆಗಳನ್ನೂ ಗೌರವಿಸುತ್ತಿದ್ದರು.
ಸಾಧನೆಗಳು
[ಬದಲಾಯಿಸಿ]- ಕೃಷ್ಣಮಾಚಾರ್ಯರನ್ನು ಪ್ರಕಾಂಡ ಪಂಡಿತ, ವಿದ್ವಾಂಸರೆಂದು ಪರಿಗಣಿಸಲಾಗಿತ್ತು.
- ಅವರು ತತ್ವಶಾಸ್ತ್ರ, ತರ್ಕ, ದೈವತ್ವ, ಭಾಷಾಶಾಸ್ತ್ರ, ಮತ್ತು ಸಂಗೀತದಲ್ಲಿ ಪದವೀದಾರರಾಗಿದ್ದರು.
- ಅವರು ಶ್ರೀವೈಷ್ಣವ ಸಂಪ್ರದಾಯ ಆಚಾರ್ಯರೆಂದು ಎರಡು ಬಾರಿ ಹೇಳಲಾಗಿತ್ತು,
- ತಮ್ಮಗುರುವಿನ ಮಾತಿನಂತೆ ಅವರು ತನ್ನ ಕುಟುಂಬದೊಂದಿಗೆ ಉಳಿಯಬೇಕಾಗಿತ್ತು,
- ಹಾಗಾಗಿ ಅವರು ಆ ಸ್ಥಾನವನ್ನು ನಿರಾಕರಿಸಿದರು. ಸಂಪ್ರದಾಯಬದ್ಧ ಆಚರಣೆಗಳ, ಸಂಯೋಜನೆಗಳ ಅರಿವು ಅವರಿಗೆ ಇತ್ತು. ಭಾರತೀಯ ಸಾಂಪ್ರದಾಯಿಕ ತತ್ವಶಾಸ್ತ್ರದ ವಿವಿಧ ದರ್ಶನಗಳಲ್ಲಿ ಇವರು ಪಾಂಡಿತ್ಯ ಪಡೆದಿದ್ದರು.
ಬಿರುದುಗಳು/ಪ್ರಶಸ್ತಿಗಳು
[ಬದಲಾಯಿಸಿ]- ಸಾಂಖ್ಯ-ಯೋಗ-ಶಿಖಾಮಣಿ,
- ಮೀಮಾಂಸ-ರತ್ನ,
- ಮೀಮಾಂಸ-ತೀರ್ಥಗಳು,
- ನ್ಯಾಯಾಚಾರ್ಯ,
- ವೇದಾಂತವಾಗೀಶ,
- ವೇದ-ಕೇಸರಿ,
- ಯೋಗಾಚಾರ್ಯ,
ಕೃತಿಗಳು
[ಬದಲಾಯಿಸಿ]ಯೋಗ ಪುಸ್ತಕಗಳು
[ಬದಲಾಯಿಸಿ]- ಯೋಗ ಮಕರಂದ
- ಯೋಗಾಸನಗಳು
- ಯೋಗ ರಹಸ್ಯ
- ಯೋಗವಲ್ಲಿ
ಇತರ ಕೃತಿಗಳು (ಪ್ರಬಂಧಗಳು ಮತ್ತು ಕಾವ್ಯ ರಚನೆ)
[ಬದಲಾಯಿಸಿ]- "ಯೋಗಾಂಜಲೀಸಾರಂ"
- "ಯೋಗ ಶಾಖೆಗಳು"
- "ಯೋಗ ಆಚರಣೆ ಪರಿಣಾಮ"
ಉಲ್ಲೇಖಗಳು
[ಬದಲಾಯಿಸಿ]- ↑ Śrī T Krishnamacharya – The Source (1888 to 1989)
- ↑ Yoga journal : Krishnamacharya's legacy : Modern Yoga's Inventor, August, 28, 2007,FERDINAND PAGES RUIZ
- ↑ Śrī TKV Desikachar–The Link (1938-2016)yogastudies.org/art-personal-sadhana-overview/tkv-desikachar
- ↑ to the Viniyoga of Yoga Practice & Theory Programme Overview
- ↑ "Krishnamacharya:_His_Life_and_Teachings".
- ↑ "ಆರು ದಾರ್ಶನಳು". Archived from the original on 2007-07-31. Retrieved 2015-11-05.
- ↑ "ಯೋಗ ಮಕರಂದ".
ಹೊರಗಿನ ಕೊಂಡಿಗಳು
[ಬದಲಾಯಿಸಿ]- ಯೋಗ ಮಕರಂದ (ಭಾಗ ೨) Archived 2016-03-11 ವೇಬ್ಯಾಕ್ ಮೆಷಿನ್ ನಲ್ಲಿ.
- http://www.kym.org/ourteacher.html Archived 2016-01-12 ವೇಬ್ಯಾಕ್ ಮೆಷಿನ್ ನಲ್ಲಿ.
- http://www.yogajournal.com/article/philosophy/krishnamacharya-s-legacy/
- http://www.ashtangayoga.info/ashtangayoga/tradition/krishnamacharya/ Archived 2015-10-07 ವೇಬ್ಯಾಕ್ ಮೆಷಿನ್ ನಲ್ಲಿ.