ವಿಷಯಕ್ಕೆ ಹೋಗು

ತಲಕಾಡಿನ ಗಂಗರ ಮೂರ್ತಿಶಿಲ್ಪ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ತಲಕಾಡಿನ ಗಂಗರ ಮೂರ್ತಿಶಿಲ್ಪವು ವಾಸ್ತುಶಿಲ್ಪದಂತೆ ಪಲ್ಲವ ಶಿಲ್ಪದಿಂದಲೇ ಸ್ಫೂರ್ತಿ ಪಡೆದು ಬೆಳೆದಿದ್ದರೂ ತನ್ನದೇ ಆದ ಹಲವು ವಿಶಿಷ್ಟ ಗುಣಗಳನ್ನು ಪಡೆದಿದೆ. ಗಟ್ಟಿಕಲ್ಲಿನ ಮೇಲೆ ತೆಳುವಾಗಿ ಮೂರ್ತಿಗಳನ್ನು ಬಿಡಿಸಿ ಕೇವಲ ಕೆಲವು ರೇಖೆಗಳಿಂದಲೇ ಮೂರ್ತಿಯ ಭಾವವನ್ನು ಅಭಿವ್ಯಕ್ತಗೊಳಿಸುವ ಬೌದ್ಧ ಶಿಲ್ಪದ ರೀತಿಯಿಂದ ಹಿಡಿದು ಗುಂಡಾಗಿ ಪೂರ್ಣ ರೂಪದಲ್ಲಿ ಬಿಡಿಸಿದ ಮೂರ್ತಿಗಳವರೆಗೂ ಗಂಗ ರೂವಾರಿಗಳು ಕಲೆಯನ್ನು ರೂಢಿಸಿಕೊಂಡಿದ್ದರು. ತೆಳುವುಬ್ಬು ಶಿಲ್ಪವೇ ಆಗಲಿ, ಪೂರ್ಣ ಗುಂಡು ರೂಪವೇ ಆಗಲಿ, ಅವು ತಾಲ ಲಯಬದ್ಧವಾಗಿದ್ದು, ಸರಳವಾಗಿ, ಭಾವಪೂರ್ಣವಾಗಿ, ನೈಜತೆಯನ್ನು ಪ್ರತಿಬಿಂಬಿಸುವಂತೆ ಕಂಡರಿಸುವ ರೀತಿ ಅವರಿಗೆ ಸಿದ್ಧಿಸಿತ್ತು. ಆದ್ದರಿಂದಲೇ ಅವರ ಕಾಲದ ಮೂರ್ತಿಶಿಲ್ಪಗಳು ಹೇರಳವಾಗಿಲ್ಲದಿದ್ದರೂ ಇರುವ ಕೆಲವೇ ಆದರೂ ಪ್ರಭಾವಯುಕ್ತವಾಗಿವೆ. ಇದರೊಂದಿಗೆ ಸ್ಥಳೀಯವಾಗಿ ಬೆಳಸಿಕೊಂಡಿದ್ದ ಶಿಲ್ಪ ಶೈಲಿಯಲ್ಲಿ ಅಲ್ಲಲ್ಲಿಯ ರೂವಾರಿಗಳು ಕಂಡರಿಸಿರುವ ಮೂರ್ತಿಶಿಲ್ಪ ಕೆಲಮಟ್ಟಿಗೆ ಒರಟುತನವನ್ನು ಪ್ರದರ್ಶಿಸಿದರೂ ಅದರಲ್ಲಿ ನೈಜತೆಯನ್ನು ಗುರುತಿಸಬಹುದು. ವೀರಗಲ್ಲುಗಳಲ್ಲಿ ಹೆಚ್ಚಾಗಿ ಇಂಥ ಶಿಲ್ಪವನ್ನು ಕಾಣಬಹುದು.

ದೇವಾಲಯಗಳು

[ಬದಲಾಯಿಸಿ]

ಗರ್ಜಿಯ ಕಲ್ಲೇಶ್ವರ ದೇವಾಲಯದ ನವರಂಗದ ಕಂಬಗಳ ಬುಡದಲ್ಲಿ ಚೌಕನೆಯ ಮುಖಗಳ ಮೇಲೆ ಇರುವ ತೆಳುವುಬ್ಬು ಶಿಲ್ಪದಲ್ಲಿ ಕಂಡರಿಸಿರುವ ಹಲವು ಮೂರ್ತಿಗಳಲ್ಲಿ ಒಂದು ಬಗೆಯ ರೂಕ್ಷತೆಯಿದೆ. ಆದರೂ ಅದರಲ್ಲಿ ಕ್ರಿಯೆಯಿದೆ, ನೈಜತೆಯಿದೆ, ಮೂರ್ತಿಯ ಮನೋಭಾವವನ್ನು ಹೊರಬಿಂಬಿಸುವಲ್ಲಿ ರೂವಾರಿ ಯಶಸ್ವಿಯಾಗಿದ್ದಾನೆ. ತೀಕ್ಷ್ಣವಾಗಿ ನರ್ತಿಸುತ್ತಿರುವ ಅಂಧಾರಿ, ಅವನ ಸುತ್ತಲೂ ನೆರೆದಿರುವ ವಾದ್ಯಕಾರರು, ಗಜಾಸುರನನ್ನು ಸೀಳಿ ಲೀಲಾನರ್ತನದಲ್ಲಿ ತೊಡಗಿರುವ ಅಷ್ಟಭುಜಮೂರ್ತಿ ಗಜಾರಿ, ಭೈರವ, ಅರ್ಧನಾರೀಶ್ವರ ಅಥವಾ ಹರಿಹರ, ಒಂದೊಂದು ಭಾವಪೂರ್ಣವಾಗಿ ಸತ್ತ್ವಯುತವಾಗಿವೆ. ಇದೇ ರೀತಿ ಆ ನಂದಿಯ ವೀರಭದ್ರ ದೇವಾಲಯದ ಮೆಟ್ಟಿಲುಗಳ ಎರಡು ಪಕ್ಕಗಳಲ್ಲಿಯೂ ನಿಲ್ಲಿಸಿರುವ ಪುರಾತನ ಗಂಗ ದೇವಾಲಯವೊಂದರ ಕಟಾಂಜನಗಳ ಮೇಲೆ ಬಿಡಿಸಿರುವ ನಟರಾಜ ತ್ರಿವಿಕ್ರಮ ಮೂರ್ತಿಗಳೂ ಭಾವ, ಭಂಗಿ, ಚಲನೆಗಳಲ್ಲಿ ಬಾದಾಮಿ ಚಾಲುಕ್ಯರ ಶಿಲ್ಪವನ್ನು ನೆನಪಿಗೆ ತರುತ್ತವೆ.[]

ಇವುಗಳಿಗಿಂತಲೂ ತೆಳುವಾಗಿ ರೇಖಾಕೃತಿಯಂತೆಯೇ ಕಾಣುವ ರಾಮಾಯಣದ ಕಥೆಯನ್ನು ಬಿಡಿಸಿರುವ ವಿಶಿಷ್ಟವಾದ ಶಿಲ್ಪವನ್ನು ವರುಣದ ಮಹಲಿಂಗೇಶ್ವರ ದೇವಾಲಯದ ಗೋಡೆಯ ಮೇಲೆ ನೋಡಬಹುದು. ಲೋವೆಯ ಕೆಳಗೆ ದೇವಾಲಯದ ಸುತ್ತಲೂ ಚಿತ್ರಿಸಿರುವ ಒಂದು ಸಾಲು ಪಟ್ಟಿಕೆಯಲ್ಲಿ ಆಯಾ ಸನ್ನಿವೇಶಗಳು ಅರ್ಥವತ್ತಾಗಿ ಪ್ರತಿಬಿಂಬಿಸಿವೆ; ಕಿರಿದರಲ್ಲೆ ಹಿರಿಯ ಭಾವವನ್ನು ಸೆರೆ ಹಿಡಿದಿರುವ ಜಾಣ್ಮೆ ವ್ಯಕ್ತವಾಗಿದೆ.

ವೀರಗಲ್ಲುಗಳು

[ಬದಲಾಯಿಸಿ]

ತೆಳುವುಬ್ಬು ಶಿಲ್ಪದಲ್ಲಿ ಬಿಡಿಸಿರುವ ನೂರಾರು, ವೀರಗಲ್ಲುಗಳ ಶಿಲ್ಪದ ರೀತಿ ಗಂಗರ ಕಾಲಕ್ಕೆ ವಿಶಿಷ್ಟವಾದ್ದು. ಇವುಗಳಿಗೆ ಮಾದರಿಯಾಗಿ ಹಿರೇಗುಂಡುಗಲ್ಲಿನ ವೀರಗಲ್ಲುಗಳಲ್ಲಿ ದ್ವಂದ್ವಯುದ್ಧದಲ್ಲಿ ನಿರತರಾಗಿರುವ ವೀರರನ್ನು ಶಿಲ್ಪಿಸಿರುವ ರೀತಿಯನ್ನು ನೋಡಬಹುದು. ಕೆಚ್ಚಿನಿಂದ ಮುಂದೆ ನುಗ್ಗಿ ಒಬ್ಬರನೊಬ್ಬರು ಎದುರಿಸುತ್ತಿರುವ ವೀರರ ಮುಖದಲ್ಲಿ ತೋರುವ ದೃಢತೆ, ಸಾಹಸ ಧೈರ್ಯಗಳನ್ನು, ದೇಹಸೌಷ್ಠವಗಳನ್ನು ಆಳವಿಲ್ಲದೆ ಸರಳವಾದ ಶಿಲ್ಪದಲ್ಲಿಯೇ ರೂವಾರಿ ಹೊಮ್ಮಿಸಿದ್ದಾನೆ. ಒಂದು ಯುದ್ಧದ ವಿಸ್ತಾರವಾದ ಚಿತ್ರಣವನ್ನೇ ಬಿಡಿಸಿರುವ ಬೇಗೂರಿನ ವೀರಗಲ್ಲು ಗಂಗರ ಕಾಲದ ಸ್ಥಳೀಯ ಶಿಲ್ಪರೀತಿಗೆ, ಸರಳತೆಗೆ, ನೈಜತೆಗೆ ಹೆಸರಾಗಿದೆ. ರಣರಂಗದ ತುಂಬ ಏಳುತ್ತಿರುವ, ಬೀಳುತ್ತಿರುವ, ಕತ್ತಿ ಬಿಲ್ಲು ಬಾಣಗಳನ್ನು ಹಿಡಿದು ಹೋಗುತ್ತಿರುವ ಹಲವು ಭಂಗಿಯ ಕಾಲಾಳುಗಳು, ಏಟು ತಿಂದು ಸತ್ತವರ ಹೆಣದ ರಾಶಿ, ಅವುಗಳ ನಡುವೆ ಕುದುರೆಯ ಮೇಲೆ ಕುಳಿತ ನಾಗತ್ತರ ವೀರಾವೇಶದಿಂದ ಹಿಮ್ಮೆಟ್ಟಿಸುತ್ತಿರುವ ಶತ್ರವಿನ ಆನೆ, ಮೂಲೆಯೊಂದರಲ್ಲಿ ಹೆಣವನ್ನೆತ್ತಿ ಒಯ್ಯುತ್ತಿರುವ ಮರುಳು, ಮೇಲೆ ಸ್ವರ್ಗದಲ್ಲಿ ಕುಳಿತ ವೀರನ ಮುಂದೆ ನಡೆಯುತ್ತಿರುವ ನರ್ತನ ಎಲ್ಲವನ್ನೂ ಸಹಜವಾಗಿ ರಸವತ್ತಾಗಿ ಚಿತ್ರಿಸಿದ್ದು ಬೇರೆಡೆ ಕಾಣಲಾಗದ ವಿವರಗಳು ಇಲ್ಲಿ ಬಂದಿವೆ.

ಇತರ ದೇವಾಲಯಗಳು ಮತ್ತು ಮೂರ್ತಿಗಳು

[ಬದಲಾಯಿಸಿ]

ಗಂಗರ ಕಾಲದ ಮತ್ತು ಜೈನ ಮೂರ್ತಿಗಳ ಹಲವು ಪ್ರಕಾರಗಳಿವೆ. ವೈಷ್ಣವಮೂರ್ತಿಗಳೂ ಕೆಲವಿವೆ. ಶೈವ ಮೂರ್ತಿಗಳಲ್ಲಿ ಮುಖ್ಯವಾಗಿ ಶಿವಲೀಲೆಗಳು, ಸಪ್ತ ಮಾತೃಕೆಯರು, ಮಹಿಷಾಸುರ ಮರ್ದಿನಿ, ಪಂಚಾಯತನ ಮೂರ್ತಿಗಳು ಮತ್ತು ನವರಂಗದ ಚಾವಣಿಯಲ್ಲಿ ನಟರಾಜನ ಅಷ್ಟದಿಕ್ಪಾಲಕ ಮೂರ್ತಿಗಳು ಹೆಚ್ಚು ಕಂಡು ಬರುತ್ತವೆ.

ಕುಣಿಗಲ್ಲಿನಲ್ಲಿ ಈಚಿನ ದೇವಾಲಯವೊಂದರಲ್ಲಿ ಪುರಾತನವಾದ ಮಹಿಷಾಸುರ ಮರ್ದಿನಿಯ ಮೂರ್ತಿ ಎಂಟು ಅಥವಾ ಒಂಬತ್ತನೆಯ ಶತಮಾನದ ಗಂಗರ ಶಿಲ್ಪವೈಶಿಷ್ಟ್ಯವನ್ನು ಎತ್ತಿ ಹಿಡಿಯುತ್ತದೆ. ನಂದಿಯಲ್ಲಿರುವ ಮಹಿಷಾಸುರ ಮರ್ದಿನಿಯಂತಿರುವ ಈ ಮೂರ್ತಿ ತೆಳುವುಬ್ಬು ಶಿಲ್ಪದಲ್ಲಿದ್ದು ಸ್ಥೂಲರೂಪರೇಖೆಗಳನ್ನು ಬಿಡಿಸಿದ್ದರೂ ಆಕರ್ಷಕವಾಗಿದೆ. ನಾಲಗೆಯನ್ನು ಹೊರಚಾಚಿರುವ ಕೋಣನ ತಲೆಯ ಮೇಲೆ ಎಡಗಾಲು ಮೆಟ್ಟಿ ಬಲಗಾಲನ್ನು ಅಡ್ಡಗಾಲು ಹಾಕಿ ತ್ರಿಭಂಗಿಯಲ್ಲಿ ಲೀಲಾವಿನೋದದಿಂದ ನಿಂತಿರುವ ಚತರ್ಭುಜ ಮೂರ್ತಿಯ ಒಂದು ಕಡೆ ಸಿಂಹ, ಇನ್ನೊಂದು ಕಡೆ ಜಿಂಕೆಯಿದ್ದು ವಿಶಿಷ್ಟವಾಗಿದೆ. ಪಲ್ಲವರ, ಚೋಳರ ದೇವಾಲಯಗಳಲ್ಲಿರುವಂತೆ ಗಂಗರ ದೇವಾಲಯಗಳಲ್ಲಿರುವ ಸಪ್ತಮಾತೃಕೆಯ ಮೂರ್ತಿಗಳು ಬೇರೆ ಬೇರೆಯಾಗಿ ಒಂದು ಸಾಲಿನಲ್ಲಿ ಇರುತ್ತದೆ.

ನೊಣವಿನಕೆರೆಯ ಗಂಗೇಶ್ವರ ನೊಣಂಬೇಶ್ವರ ದೇವಾಲಯಗಳು ಬಳಿ ಇದ್ದ ಇಂಥ ಮೂರ್ತಿಗಳು ತೆಳುವಾಗಿ ಬಿಡಿಸಿದ್ದರೂ ಸತ್ವಯುಕ್ತವಾಗಿವೆ.

ರಾಮೇಶ್ವರ ದೇವಾಲಯ, ನರಸಮಂಗಲ

ನರಸಮಂಗಲದ ರಾಮೇಶ್ವರ ದೇವಾಲಯದ ಗೋಡೆ ಗೋಪುರಗಳ ಮೇಲಿರುವ ಗಚ್ಚಿನ ಮೂರ್ತಿಗಳೂ, ದೇವಾಲಯದ ಒಳಗೂ ಹೊರಗೂ ಇರುವ ಸಪ್ತಮಾತೃಕಾ, ಪಂಚಾಯತನ ಮೂರ್ತಿಗಳೂ ಪೂರ್ಣ ರೂಪದಲ್ಲಿ ಬಿಡಿಸಿದ್ದು ವೈಶಿಷ್ಟ್ಯ ಪೂರ್ಣವಾಗಿ ಕಲೆಯ ಉತ್ತಮ ಗುಣಗಳನ್ನು ಪ್ರದರ್ಶಿಸುತ್ತವೆ. ವಿಶಾಲ ವಕ್ಷಸ್ಥಳ, ತೆಳುನಡು, ನೀಳವಾದ ಕೈಕಾಲುಗಳು, ಕೆಲವೇ ಆಭರಣಗಳು, ಮಂದಹಾಸಯುಕ್ತವಾದ ಗಂಭೀರ ಮುಖ ಮುದ್ರೆ, ದಪ್ಪ ಕೆಳದುಟಿಗಳು ಇರುವ, ನೈಜವಾಗಿ ಅತ್ಯಂತ ಆಕರ್ಷಕವಾಗಿರುವ ಈ ಮೂರ್ತಿಗಳಿಗೆ ಸಾಟಿಯನ್ನು ಎಲ್ಲೋರ ಮಹಾಬಲಿಪುರಗಳಲ್ಲಿ ಮಾತ್ರ ಕಾಣಬಹುದು. ಈ ದೇವಾಲಯದ ನವರಂಗದ ಒಳಚಾವಣಿಯಲ್ಲಿಯೂ, ಇದರಂತೆ ನಂದಿಯ ಭೋಗನಂದೀಶ್ವರ ದೇವಾಲಯ, ಮದ್ದೂರಿನ ದೇಶೇಶ್ವರ ದೇವಾಲಯ, ಆಲೂರಿನ ಅರ್ಕೇಶ್ವರ ದೇವಾಲಯ, ಅರಳಗುಪ್ಪೆಯ ಕಲ್ಲೇಶ್ವರ ದೇವಾಲಯ ಮೊದಲಾದ, ಗಂಗರ ಕಾಲದ ಹಲವಾರು ದೇವಾಲಯಗಳ ನವರಂಗದ ಚಾವಣಿಗಳಲ್ಲಿಯೂ ನಡುವೆ ನಟರಾಜನನ್ನು ಸುತ್ತಲೂ ಅಷ್ಟದಿಕ್ಪಾಲಕರನ್ನೂ ಸುಂದರವಾಗಿ ಬಿಡಿಸಿದೆ.

ಕಲ್ಲೇಶ್ವರ ದೇವಾಲಯ

[ಬದಲಾಯಿಸಿ]
ಕಲ್ಲೇಶ್ವರ ದೇವಾಲಯ

ಇವುಗಳಲ್ಲೆಲ್ಲ ಅತ್ಯಂತ ಆಕರ್ಷಕವೂ ಭವ್ಯವೂ ಆದ್ದೆಂದರೆ ಅರಳಗುಪ್ಪೆಯ ಕಲ್ಲೇಶ್ವರ ದೇವಾಲಯದ ಶಿಲ್ಪ. ನಡುವೆ ತೆಳುವಾಗಿ ನೀಳವಾಗಿ ಅಪಸ್ಮಾರನನ್ನು ತುಳಿದು ನೃತ್ಯಮಗ್ನನಾಗಿರುವ ಸಂಧ್ಯಾತಾಂಡವ ಶಿವನ ಆ ನಾಟ್ಯಭಂಗಿ ಅಪೂರ್ವವಾದ್ದು. ಜಟಾಮಕುಟ, ಸರ್ಪಕುಂಡಲ, ಕೇವಲ ಕೆಲವೇ ಆಭರಣ ಧರಿಸಿ ಮೇಲಿನ ಎರಡು ಕೈಗಳಲ್ಲೂ ತ್ರಿಶೂಲಗಳನ್ನು ಹಿಡಿದು ಲಂಬಹಸ್ತನಾಗಿ ತನ್ನ ಸುತ್ತಲೂ ತ್ರಿಘಟೆ, ತಾಳಕೊಳಲುಗಳನ್ನು ಬಾರಿಸುತ್ತಿರುವವರನ್ನು ತಲ್ಲೀನಗೊಳಿಸಿ ನರ್ತಿಸುತ್ತಿರುವ ನಟರಾಜನ ಮುಖದ ಪ್ರಸನ್ನತೆ ಅನುಪಮವಾದ್ದು. ಎಂಟು ಮೂಲೆಗಳಲ್ಲೂ ಈ ಮೂರ್ತಿಯಷ್ಟೇ ಸುಂದರವಾಗಿರುವ ಅಷ್ಟದಿಕ್ಪಾಲಕರು ಸತೀಸಮೇತರಾಗಿ ತಮ್ಮತಮ್ಮ ವಾಹನಗಳನ್ನೇರಿ ಮೋಡಗಳ ನಡುವೆ ತೇಲಿಹೋಗುತ್ತಿರುವುದು, ನಡುವಿನ ನಾಲ್ಕು ಮೂಲೆಗಳಲ್ಲೂ ಗಂಧರ್ವರು ಹೂವಿನ ದಂಡೆಯನ್ನು ಹಿಡಿದು ಆಕಾಶದಲ್ಲಿ ಚಿಮ್ಮುತ್ತಿರುವುದು ಆ ಸನ್ನೀವೇಶಕ್ಕೆ ಅತ್ಯಂತ ಸೂಕ್ತವಾಗಿ ಹೊಂದಿಕೊಂಡು, ಕ್ರೀಯಾಶೀಲವಾಗಿ, ಭಾವಪೂರ್ಣವಾಗಿ, ನೋಡುವವರನ್ನು ಮುಗ್ಧಗೊಳಿಸುತ್ತದೆ.

ಜೈನ ಬಸದಿಗಳು, ಗೊಮ್ಮಟೇಶ್ವರ

[ಬದಲಾಯಿಸಿ]

ಗಂಗರಾಜರು ಜೈನಮತಕ್ಕೆ ಹೆಚ್ಚು ಪ್ರೋತ್ಸಾಹ ಕೊಟ್ಟಿದ್ದರು, ಅದರಿಂದ ಗಂಗವಾಡಿಯ ಅನೇಕ ಕಡೆ ಜೈನಬಸದಿಗಳು ನಿರ್ಮಾಣವಾಗಿದ್ದವು. ಬಸದಿಗಳು ಸಾಮಾನ್ಯವಾಗಿ ನಿರಾಡಂಬರವಾಗಿದ್ದರೂ ಅವುಗಳಲ್ಲಿಯ ಜಿನರ ಮೂರ್ತಿಗಳು, ಯಕ್ಷಯಕ್ಷಿಯರು ಚಾವಣಿಯಲ್ಲಿಯ ಅಷ್ಟದಿಕ್ಪಾಲಕಾದಿಗಳನೇಕ ಉಳಿದುಬಂದಿವೆ. ಕಂಬದಹಳ್ಳಿಯ ಆದಿನಾಥನ ಮೂರ್ತಿ, ಶ್ರವಣಬೆಳಗೊಳದ ಶಾಂತಿನಾಥ, ಚಂದ್ರಪ್ರಭ, ಸುಪಾರ್ಶ್ವನಾಥರ ಮೂರ್ತಿಗಳು ಶಿಲ್ಪಗಳು ನಿರಾಭರಣವಾಗಿದ್ದರೂ ತಪೋನಿರತರಾಗಿರುವ ಅವರ ಮುಖದಲ್ಲಿ ಶಾಂತತೆ, ತೇಜಸ್ಸು ಹೊಮ್ಮುವಂತೆ ಕಂಡರಿಸುವ ಶಿಲ್ಪ ಶ್ರೇಷ್ಠವಾದ್ದು. ಯಕ್ಷಯಕ್ಷಿಯರನ್ನಂತೂ ಭಾವಯುಕ್ತವಾಗಿ ಸುಂದರವಾಗಿ ಕಡೆದಿದ್ದಾರೆ. ಚಂದ್ರಗುಪ್ತ ಬಸದಿಯಲ್ಲಿರುವ ನಿಂತಿರುವ ಯಕ್ಷನ ಮೂರ್ತಿ ಈ ರೀತಿಯ ಶಿಲ್ಪಕ್ಕೆ ಉತ್ತಮವಾದ ಉದಾಹರಣೆ.

ಗೊಮ್ಮಟೇಶ್ವರ

[ಬದಲಾಯಿಸಿ]

ಗಂಗರ ಮೂರ್ತಿಶಿಲ್ಪದ ಪರಾಕಾಷ್ಠೆಯನ್ನು ಶ್ರವಣಬೆಳಗೊಳದ ದೊಡ್ಡಬೆಟ್ಟದ ಮೇಲಿರುವ ಗೊಮ್ಮಟೇಶ್ವರನಲ್ಲಿ ನೋಡಬಹುದು. ಕ್ರಿ.ಶ.ಸು. 983ರಲ್ಲಿ ಚಾವುಂಡರಾಯ ನಿರ್ಮಿಸಿದ ಈ ಮೂರ್ತಿ ಸನ್ನಿವೇಶ, ಗಾತ್ರ, ರಚನೆ, ರೀತಿ ಎಲ್ಲದರಲ್ಲಿಯೂ ಅದ್ವಿತೀಯವೆನ್ನಿಸಿಕೊಂಡಿದೆ. ಬೆಟ್ಟದ ತುತ್ತತುದಿಯಲ್ಲಿ ಬಟ್ಟಬಯಲಿನಲ್ಲಿ 58 ಅಡಿ ಎತ್ತರವಾಗಿ ದಿಗಂಬರನಾಗಿ ಈ ಮೂರ್ತಿಯ ಭವ್ಯತೆ ಪ್ರಪಂಚದಲ್ಲಿಯೆ ಅದ್ಭುತವಾದ್ದು. ಬಾಹುಬಲಿಯ ಚರಿತ್ರೆಯ ಹಿನ್ನಲೆಯಲ್ಲಿ ಈ ಮೂರ್ತಿಯನ್ನು ನೋಡಿದಾಗ ಶಿಲ್ಪಿ ಅದೆಷ್ಟು ಸಂಪೂರ್ಣವಾಗಿ ಯಶಸ್ವಿಯಾಗಿದ್ದಾನೆಂಬುದು ತಿಳಿಯದಿರದು. ಬಾಹುಬಲಿಯ ಪರಿಪೂರ್ಣತ್ಯಾಗ, ಆತ್ಮಸಂಯಮಗಳು, ಪ್ರಪಂಚದ ಕಷ್ಟಕಾರ್ಪಣ್ಯಗಳೆಡೆ ಮರುಕಬೆರತ ಕಿರುನಗೆಯ ನೋಟ, ಹುತ್ತ ಬಳ್ಳಿಗಳು ಬೆಳೆದರೂ ಅಲುಗದ ನಿಶ್ಚಲತೆ ಎಲ್ಲವೂ ಆ ಮೂರ್ತಿಯಲ್ಲಿ ಎದ್ದು ತೋರುತ್ತವೆ. ವಿಸ್ತಾರವಾದ ಆ ಎದೆ, ನೇರವಾದ ಆ ನಿಲುವು, ಯಾವುದಕ್ಕೂ ಹೆದರದ, ಚಕ್ರವರ್ತಿಯನ್ನೇ ಸೋಲಿಸಿದ ಒಂದು ಕೆಚ್ಚು ಆತ್ಮಾಭಿಮಾನವನ್ನೂ ಸೂಚಿಸುತ್ತವೆ. ಈಜಿಪ್ಟನ್ನು ಬಿಟ್ಟರೆ ಬೇರೆಲ್ಲಿಯೂ ಇಂಥ ಅದ್ಭುತವಾದ, ಇಷ್ಟು ಪ್ರಭಾಯುತವಾದ ಶಿಲ್ಪ ಇಲ್ಲ ಎಂದು ಫರ್ಗೂಸನ್ ಹೇಳಿದರೆ, ಇಷ್ಟು ಉನ್ನತವಾದ ಮೂರ್ತಿಯಲ್ಲಿ ಇಂಥ ಸೌಂದರ್ಯವೂ ಇಂಥ ಅತಿಶಯವೂ ಇರುವುದು ಬೇರಡೆಯಲ್ಲಿ ಅಸಾಧ್ಯ, ಕ್ಷಿತಿಸಂಪೂಜ್ಯವಾದ ಈ ಗೊಮ್ಮಟೇಶ್ವರ ಜಿನ ಶ್ರೀರೂಪ ಆತ್ಮೋಪಮವಾದ್ದೆಂದು ಹೇಳಿರುವ ಪ್ರಾಚೀನ ಕವಿ ವಾಣಿಯಲ್ಲಿ ಅತಿಶಯೋಕ್ತಿಯಿಲ್ಲ.

ಮಾನವ ಅಥವಾ ದೇವತೆಗಳ ರೂಪವನ್ನು ಕಂಡರಿಸುವುದರಲ್ಲಷ್ಟೆ ಅಲ್ಲ. ಪ್ರಾಣಿಗಳನ್ನು ಕಂಡರಿಸುವುದರಲ್ಲೂ ಅವುಗಳ ರೂಪ ಗುಣ ಸ್ವಭಾವಗಳನ್ನು ಚೆನ್ನಾಗಿ ಸೆರೆ ಹಿಡಿದಿದ್ದಾರೆ ಗಂಗರ ರೂವಾರಿಗಳು, ಕಲ್ಲಿನ ಶಾಸನಗಳ ಮೇಲಿನ ಮತ್ತು ತಾಮ್ರ ಶಾಸನಗಳ ಮುದ್ರೆಗಳ ಮೇಲಿನ ಆನೆಗಳು, ಅಷ್ಟದಿಕ್ಪಾಲಕರ ವಾಹನಗಳು ಮುಂತಾದುವುಗಳಲ್ಲಿ ಇದನ್ನು ನೋಡಬಹುದು.

ಇವರ ಕಾಲದ ಲೋಹಮೂರ್ತಿಗಳು ಹೆಚ್ಚು ಉಳಿದುಬಂದಿಲ್ಲ. ಈಗ ಶ್ರವಣಬೆಳಗೊಳದ ಜೈನಮಠದಲ್ಲಿರುವ ಗಂಗ ನೊಳಂಬ ಕುಲಾಂತಕ ಮಾರಸಿಂಹನ ಅಕ್ಕ ಕುಂದಣಸೋಮಿದೇವಿ ಮಾಡಿಸಿದ ಜಿನಮೂರ್ತಿ ಇಂಥ ಮೂರ್ತಿಗಳಲ್ಲೊಂದು.

ಉಲ್ಲೇಖಗಳು

[ಬದಲಾಯಿಸಿ]
  1. Reddy, Sharma and Krishna Rao in Kamath (2001), pp 50–52


ಗ್ರಂಥಸೂಚಿ

[ಬದಲಾಯಿಸಿ]
  • Kamath, Suryanath U. (2001) [1980]. A concise history of Karnataka : from pre-historic times to the present. Bangalore: Jupiter books. LCCN 80905179. OCLC 7796041.